December 31, 2007

ಶಿಕ್ಷೆಯಲ್ಲಿ ಅರ್ಧ ತಾಯಿಗೆ

ಮೊನ್ನೆ ಅಕ್ಕನ ಜೊತೆ ಮಾತಾಡ್ತಾ ಇದ್ದೆ, gtalk ನಲ್ಲಿ. ಅಕ್ಕ ಅಂದರೆ ನನ್ನ ದೊಡ್ಡಮ್ಮನ ಮಗಳು. ಆದರೆ ಅವಳು ನನ್ನ ಸ್ವಂತ ಅಕ್ಕನಂತೆಯೇ. ಅಕ್ಕ ತಂಗಿಯರು ಮಾತಾಡಲು ತೊಡಗಿದರೆ ಪ್ರಪಂಚದ ಅರಿವೇ ಇರುವುದಿಲ್ಲ ಅನ್ನುವುದಂತೂ ಸತ್ಯ; ಅವರ ಸುದ್ದಿಗೆ ಕೊನೆ ಎನ್ನುವುದೇ ಇಲ್ಲ. ಹೀಗೆಯೇ ಕಷ್ಟ ಸುಖ ಮಾತನಾಡುತ್ತಿರುವಾಗ ಅವಳ ಮಗಳು ಬಂದು 'ಅಮ್ಮಾ, ಕುಡಿಯಲ್ಲೇ ಕೊಡೇ' ಎಂದು ಹೇಳಿದ್ದು ನನಗೆ ಇಲ್ಲಿಯವರೆಗೆ ಕೇಳಿಸಿತ್ತು. 'ಒಂದೆರಡು ನಿಮಿಷಗಳಲ್ಲಿ ಬರುತ್ತೇನೆ ತಾಳು' ಎಂದು ಹೇಳಿ ಎದ್ದು ಹೋದಳು ಅಕ್ಕ. Horlicks ಕೊಟ್ಟಿರಬೇಕು ಬಹುಶಃ. ತಿರುಗಿ ಬರುವಾಗ 'ದಿಶಾ, ನೀನು ಕುಡಿದ ಲೋಟ ತೊಳೆದು ಇಡು, ನಿನ್ನ ಬಟ್ಟೆ ತೊಳೆದು ಹಾಕಿದ್ದೇನೆ ಒಣಗಿದೆಯಾ ನೋಡಿ ಮಡಿಸಿ ಇಡು ಮತ್ತು ನಿನ್ನ ರೂಮ್ ಕ್ಲೀನ್ ಮಾಡಿ ಆಡಲು ಹೋಗು' ಎಂದು ಹೇಳುತ್ತಾ ಬಂದಿದ್ದು ಕೇಳಿಸಿತು.

ಅವಳೂ ಕೆಲಸಕ್ಕೆ ಹೋಗಿ ಬರುವುದರಿಂದ ಸುಸ್ತಾಗಿರಬೇಕು ಅದಕ್ಕೆ ಮಗಳಿಗೆ ಕೆಲಸ ಹೇಳುತ್ತಿದ್ದಾಳೆ ಎಂದು ಅನಿಸಿದರೂ ಮತ್ತೆ ಮಾತಿಗೆ ತೊಡಗಿದ ತಕ್ಷಣ ನಾನು ಕೇಳಿದೆ, 'ಯಾಕೆ ಅನ್ನಕ್ಕಾ (ಅನುಪಮಾ ಅವಳ ಹೆಸರು) ದಿಶಾನ ಕೈಲಿ ಕೆಲಸ ಮಾಡಿಸುತ್ತಿದ್ದೀಯಾ, ನೀನೆ ಮಾಡಿದರೆ ಆಗದೇ? ಪಾಪ ಅವಳು'. ಅದಕ್ಕವಳು, 'ಅವಳೀಗೀಗ ಹನ್ನೆರಡು ವರ್ಷ. ನಿನಗೆ ಹನ್ನೆರಡು ವರ್ಷವಾಗಿದ್ದಾಗ ನಿನಗೆ ಅಡುಗೆಯನ್ನೂ ಮಾಡಲು ಬರುತ್ತಿತ್ತು ನೆನಪಿದೆಯಾ' ಎಂದಳು ಮತ್ತು ಮುಂದುವರಿಸಿದಳು 'ನೋಡು ನಿನ್ನ ಅಮ್ಮ ನಿನಗೆ ಎಲ್ಲ ಕೆಲಸಗಳನ್ನೂ ಕಲಿಸಿದ್ದಕ್ಕೆ ನಿನಗಿವತ್ತು ಜೀವನ ಸುಲಭ. ಅಮ್ಮಂದಿರು ಮಕ್ಕಳನ್ನು ಕೇವಲ ಮುದ್ದು ಮಾಡಿದರೆ ಸಾಲದು, ಮುಂದೆ ಅದರಿಂದ ಅವರಿಗೇ ಕಷ್ಟ. ಈಗ ನಾನು ಕಲಿಸಿದಷ್ಟೂ ಮುಂದೆ ಅವಳಿಗೇ ಲಾಭ. ಮುಂದೆಲ್ಲಾ ಜೀವನ ಯುದ್ಧದಂತೆಯೇ, the more you sweat in peace, the less you bleed in war… ಅದಕ್ಕಾಗಿ ಹೀಗೆ.’

ಹಾಗೆಯೇ short ಆಗಿ sweet ಆಗಿ ಒಂದು ನೀತಿ ಕಥೆಯನ್ನೂ ಹೇಳಿದಳು. ಹಾಗೆಯೇ ಸ್ವಲ್ಪ ಓದಿ ಬಿಡಿ.
ಒಬ್ಬ ಕಳ್ಳನನ್ನು ನ್ಯಾಯಾಲಯಕ್ಕೆ ತಂದು ಕಟಕಟೆಯಲ್ಲಿ ನಿಲ್ಲಿಸಿದ್ದರು,ಯಾವುದೋ ಒಂದು ದೊಡ್ಡ ಕಳ್ಳತನದ ಆಪಾದನೆಯಲ್ಲಿ. ವಿಚಾರಣೆಯ ನಂತರ ಅವನಿಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. Judge ಅವನ ಬಳಿ, 'ನೀನೇನಾದರೂ ಹೇಳುವುದಿದೆಯಾ?' ಎಂದು ಕೇಳಿದರು. ಆಗ ಆ ಕಳ್ಳ, 'ಮಾಹಾಸ್ವಾಮಿ, ನನಗೆ ಕೊಟ್ಟ ಎಂಟು ವರ್ಷಗಳ ಜೈಲು ಶಿಕ್ಷೆಯಲ್ಲಿ ನಾಲ್ಕು ವರ್ಷಗಳ ಶಿಕ್ಷೆಯನ್ನು ನನ್ನ ತಾಯಿಗೆ ಕೊಡಿ' ಎಂದನು. ಇಡೀ ನ್ಯಾಯಾಲಯ ಒಮ್ಮೆ ಸ್ತಬ್ಧವಾಯಿತು. Judge ಕೂಡ ಆಶ್ಚರ್ಯದಿಂದ ಕೇಳಿದರು, 'ಹೀಗೇಕೆ?' ಅದಕ್ಕವನು,'ಬಾಲ್ಯದಲ್ಲಿ ನನ್ನ ತಾಯಿ ನನ್ನನ್ನು ಸರಿಯಾಗಿ ಬೆಳೆಸಲಿಲ್ಲ. ನಾನು ಮೂರನೇ ತರಗತಿಯಲ್ಲಿದ್ದಾಗ ಪೆನ್ಸಿಲ್ ಕದ್ದೆ. ಅಪ್ಪ ಬೈದರೂ ಅಮ್ಮ ನನ್ನ ಪರವಹಿಸಿದಳು. ಒಂಭತ್ತನೇ ತರಗತಿಯಲ್ಲಿದ್ದಾಗ ಸೈಕಲ್ ಕದ್ದೆ. ಅಪ್ಪ ಶಿಕ್ಷೆ ಕೊಡಲು ಮುಂದಾದರೂ ಅಮ್ಮ ನನ್ನ ಪರವಾಗಿ ಮಾತನಾಡಿದಳು. ನಾನು ಅದರ ಲಾಭ ಪಡೆಯುತ್ತಾ ಹೋದೆ. ಅಂದು ಅಪ್ಪನಂತೆಯೇ ಅಮ್ಮನೂ ನನ್ನನ್ನು ಶಿಕ್ಷಿಸಲು ಮುಂದಾಗಿದ್ದರೆ ಇಂದು ನಾನು ಹೀಗಾಗುತ್ತಿರಲಿಲ್ಲ. ಆದ್ದರಿಂದ ನನ್ನ ಶಿಕ್ಷೆಯಲ್ಲಿ ಅರ್ಧ ಅವಳಿಗೇ ಸಲ್ಲಬೇಕು' ಅಂದನಂತೆ.

ಅಕ್ಕ ಹೇಳುತ್ತಿದ್ದ ಕಥೆ ಮುಗಿಯಿತು. ಮುಂದೆ ಏನೇನೋ ಮಾತನಾಡಿದೆವು. ಆದರೆ ಅಕ್ಕ ಹೇಳಿದ ಕಥೆ ಏಕೋ ಮನಸ್ಸಿಗೆ ನಾಟಿತ್ತು. ಆಗೆಯೇ ನನ್ನನ್ನು ಸ್ವಾವಲಾಂಬಿಯಾಗಿ ಬೆಳೆಸಿದ ಅಪ್ಪ, ಅಮ್ಮನ ನೆನಪೂ ಆಗದೇ ಇರಲಿಲ್ಲ. ನಾನು ಹಾಗೆಯೇ ಯೋಚಿಸುತ್ತಾ ಒಮ್ಮೆ ಭೂತ ಕಾಲಕ್ಕೆ ಹೋಗಿ ಬಂದೆ. ನಮ್ಮ ಪ್ರತಿಯೊಂದು ಕೆಲಸವನ್ನೂ ನಾವೇ ಮಾಡಿಕೊಳ್ಳಬೇಕು ಎನ್ನುತ್ತಿದ್ದರು ಅಪ್ಪ, ಅಮ್ಮ. ನನ್ನ ಮತ್ತು ನನ್ನ ತಮ್ಮನ college admission ಕೂಡ ನಾವೇ ಮಾಡಿಕೊಂಡ ನೆನಪು. ಆಗೆಲ್ಲಾ ಅಪ್ಪ, ಅಮ್ಮನ ಮೇಲೆ ಸಿಟ್ಟು ಬರುತ್ತಿದ್ದುದು ನಿಜ. ಆದರೆ ನಂತರದ ದಿನಗಳಲ್ಲಿ ಅವರೇಕೆ ಹಾಗೆ ಮಾಡಿದರು ಎಂಬುದು ಅರ್ಥವಾಗುತ್ತಾ ಹೋಯಿತು. ನಮಗೆ ಈಗಿರುವ ಸ್ವಾಭಿಮಾನ, ಆತ್ಮವಿಶ್ವಾಸಕ್ಕೆಲ್ಲಾ ಕಾರಣ ಅಪ್ಪ, ಅಮ್ಮ ನಮ್ಮನ್ನು ಬೆಳೆಸಿದ ರೀತಿ. ಅಕ್ಕನಿಗೆ ನನಗಿಂತ ಮೊದಲೇ ಈ ವಿಷಯಗಳೆಲ್ಲಾ ಅರ್ಥವಾಗಿದ್ದಿರಬೇಕು, ಅದಕ್ಕೇ ಈಗ ತನ್ನ ಜೀವನದಲ್ಲೂ ಆಚರಣೆಗೆ ತಂದಿದ್ದಾಳೆ, ತನ್ನ ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳೆಸುತ್ತಿದ್ದಾಳೆ.

No comments: