November 30, 2007

ಚಿಕ್ಕಪ್ಪ ತಾನೂ ಇಕ್ಕ … (ಉತ್ತರ ಕನ್ನಡದ ಗಾದೆ – 90)

ಚಿಕ್ಕಪ್ಪ ತಾನೂ ಇಕ್ಕ, ಬೇಡುವುದಕ್ಕೂ ಬಿಡ.

ಇಕ್ಕುವುದು ಎಂದರೆ ಊಟವನ್ನು ಬಡಿಸುವುದು (ನೀಡುವುದು) ಎಂದು ಅರ್ಥ. ಚಿಕ್ಕಪ್ಪ ತಾನೂ ಊಟವನ್ನು ನೀಡುವುದಿಲ್ಲ, ಬೇಡಿಕೊಂಡು ಬದುಕುತ್ತೇನೆ ಎಂದರೆ ಅದಕ್ಕೂ ಬಿಡುವುದಿಲ್ಲ.

ಯಾವುದೋ ಕೆಲಸವನ್ನು ಯಾರಾದರೂ ನಮಗೆ ಮಾಡಿಕೊಳ್ಳಲೂ ಬಿಡುವುದಿಲ್ಲ ಹಾಗೆಂದು ತಾವು ಮಾಡಿಯೂ ಕೊಡುವುದಿಲ್ಲ ಎಂಬ ಸನ್ನಿವೇಶದಲ್ಲಿ ಈ ಮಾತನ್ನು ಉಪಯೋಗಿಸಿಕೊಳ್ಳಿ.

November 29, 2007

ನಾಯಿ ತೆಗೆದುಕೊಂಡು ಹೋಗಿ … (ಉತ್ತರ ಕನ್ನಡದ ಗಾದೆ – 87, 88 ಮತ್ತು 89)

ನಾಯಿ ತೆಗೆದುಕೊಂಡು ಹೋಗಿ ದಂಡಿಗೆ ಹತ್ತಿಸಿದರೆ ಹೊಲಸು ಕಂಡಲ್ಲಿ ಜಿಗಿದು ಹಾರಿತ್ತು.

ದಂಡಿಗೆ ಎಂದರೆ ಸಿಂಹಾಸನ. ನಾಯಿಯನ್ನು ಸಿಂಹಾಸಾನದ ಮೇಲೆ ಕೂರಿಸಿದರೂ ಅದಕ್ಕೆ ಸಿಂಹಾಸಾನದ ಬೆಲೆ ಗೊತ್ತಗುವುದಿಲ್ಲ. ಹೊಲಸು ಕಂಡ ತಕ್ಷಣ ಅದು ಜಿಗಿದು ಹಾರಿ ಬಿಡುತ್ತದೆ.

ಯೋಗ್ಯತೆ ಇಲ್ಲದವರಿಗೆ ಅಧಿಕಾರ ಅಥವಾ ವಸ್ತುಗಳನ್ನು ಕೊಟ್ಟರೆ ಅವರಿಗೆ ಅದರ ಬೆಲೆ ಗೊತ್ತಾಗುವುದಿಲ್ಲ. ಅವರು ಪುನಃ ತಮ್ಮ ಹಳೆಯ ಗುಣಗಳನ್ನೇ ಅನುಸರಿಸುತ್ತಾರೆ ಎಂಬ ಅರ್ಥ.

ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೆರಡು ಗಾದೆಗಳೆಂದರೆ- ಕಾಗೆಯ ಕೈಯ್ಯಲ್ಲಿ ಕಾರುಬಾರು ಕೊಟ್ಟರೆ ಕಛೇರಿಯೆಲ್ಲ ಗಲೀಜು ಮಾಡಿತ್ತು ಮತ್ತು ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಮೂಸಿ ನೋಡಿ ಏಳು ಸಮುದ್ರದ ಆಚೆ ಎಸೆದಿತ್ತು.

November 28, 2007

ಊರಿನೆತ್ತು … (ಉತ್ತರ ಕನ್ನಡದ ಗಾದೆ – 85 ಮತ್ತು 86)

ಊರಿನೆತ್ತು ಕುಣಿಯಿತೆಂದು ಉಪ್ಪಿನೆತ್ತು ಕುಣಿದಿತ್ತು.

ಉಪ್ಪಿನೆತ್ತು ಎಂದರೆ ಎತ್ತಿನ ಗೊಂಬೆ ಎಂದು ಕೇಳಿದ್ದೇನೆ. ನನಗೂ ಇದರ ಅರ್ಥ ಇನ್ನೂ ಸರಿಯಾಗಿ ಆಗಿಲ್ಲ. ಜೀವಂತ ಎತ್ತು ಕುಣಿಯಿತೆಂದು ಗೊಂಬೆಯೂ ಕುಣಿದಿತ್ತು.

ಯೋಗ್ಯತೆ ಇದ್ದವರು ಮಾಡುವ ಕೆಲಸವನ್ನು ನೋಡಿ ಯೋಗ್ಯತೆ ಇಲ್ಲದವರೂ ಮಾಡಲು ಹೋದಾಗ ಈ ಮಾತನ್ನು ಹೇಳುವುದುಂಟು. ಎಲ್ಲರೂ ಬಳಸುವ ಇನ್ನೊಂದು ಗಾದೆ ಎಂದರೆ ನವಿಲು ಕುಣಿಯಿತೆಂದು ಕೆಂಬೂತವೂ ಕುಣಿದಿತ್ತು.

November 27, 2007

ದಾನಕ್ಕೆ ಬಂದ … (ಉತ್ತರ ಕನ್ನಡದ ಗಾದೆ – 84)

ದಾನಕ್ಕೆ ಬಂದ ಎಮ್ಮೆಯನ್ನು ಹಲ್ಲು ಹಿಡಿದು ನೋಡಿದ್ದನು.

ಆಕಳು, ಎಮ್ಮೆಗಳಿಗೆ ವಯಸ್ಸಾದಂತೆ ಹಲ್ಲುಗಳು ಮೂಡುತ್ತಿರುತ್ತವೆ. ಹಾಗಾಗಿ ಅವುಗಳನ್ನು ಕೊಂಡು ತರುವಾಗ ಎಷ್ಟು ಹಲ್ಲುಗಳು ಮೂಡಿವೆ ಎಂದು ನೋಡಿ ಅವುಗಳ ವಯಸ್ಸನ್ನು ಅಳೆದು ತರುವುದು ರೂಢಿ. ದಾನಕ್ಕೆ ಬಂದ ಎಮ್ಮೆಗೆ ಎಷ್ಟು ಹಲ್ಲುಗಳು ಮೂಡಿವೆ ಎಂದು ನೋಡಿ ಎಮ್ಮೆ ಮುದಿಯಾಗಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದನಂತೆ.

ಉಡುಗೊರೆಯಾಗಿ ಬಂದ ವಸ್ತುವಿನ ಬಗ್ಗೆ ಅಸಮಾಧಾನ ತೋರುವವರು ಅಥವಾ ಅದರ ಮೌಲ್ಯವನ್ನು ಅಳೆಯುವವರ ಬಗ್ಗೆ ಇರುವ ಮಾತು ಇದು.

November 26, 2007

ದಾನ ಕೊಟ್ಟಿದ್ದನ್ನು … (ಉತ್ತರ ಕನ್ನಡದ ಗಾದೆ – 83)

ದಾನ ಕೊಟ್ಟಿದ್ದನ್ನು ಮರೆಯಬೇಕು; ಸಾಲ ಕೊಟ್ಟಿದ್ದನ್ನು ಬರೆಯಬೇಕು.

ದಾನ ಎಂದು ಕೊಟ್ಟ ಮೇಲೆ ಅದನ್ನು ಮರಳಿ ನಿರೀಕ್ಷಿಸಬಾರದು. ಕೊಟ್ಟ ತಕ್ಷಣವೇ ಮರೆತುಬಿಡಬೇಕು. ಸಾಲ ಎಂದು ಕೊಟ್ಟಾಗ ಬರೆದು ಇಡಬೇಕು. ಇದರಿಂದ ಮುಂದೆ ಬರಲು ಸಾಧ್ಯವಿರುವ ತಪ್ಪು ತಿಳುವಳಿಕೆಗಳನ್ನು ನಿವಾರಿಸಿಕೊಳ್ಳಬಹುದು.

November 24, 2007

ಕುನ್ನಿಗೆ ಕೆಲಸವಿಲ್ಲ … (ಉತ್ತರ ಕನ್ನಡದ ಗಾದೆ – 82)

ಕುನ್ನಿಗೆ ಕೆಲಸವಿಲ್ಲ ಕುಳಿತುಕೊಳ್ಳಲು ಪುರಸೊತ್ತಿಲ್ಲ.

ನಾಯಿಯ ಇರುವಿಕೆಯನ್ನು ಗಮನಿಸಿದರೆ ಗೊತ್ತಾಗುತ್ತದೆ, ಅದಕ್ಕೆ ಒಂದು ಕಡೆ ಕುಳಿತಿರಲು ಸಮಾಧಾನ ಇರುವುದಿಲ್ಲ. ಏನೂ ಕೆಲಸವಿಲ್ಲದಿದ್ದರೂ ಆಚೆಯಿಂದ ಈಚೆ, ಈಚೆಯಿಂದ ಆಚೆ ತಿರುಗಾಡುತ್ತಾ ಇರುತ್ತದೆ. ಅದಕ್ಕೆ ಕೆಲಸ ಇಲ್ಲದಿದ್ದರೂ ಕುಳಿತುಕೊಳ್ಳಲು ಪುರಸೊತ್ತು ಇದ್ದಂತೆ ಕಾಣಿಸುವುದಿಲ್ಲ.

ಕಣ್ಣಿಗೆ ಕಾಣುವಂತ ದೊಡ್ಡ ಕೆಲಸವೇನೂ ಇಲ್ಲದಿದ್ದರೂ, ಸಣ್ಣ ಪುಟ್ಟ ಕೆಲಸಗಳಿಂದಲೇ ಬಿಡುವು ಸಿಗದಂತಾಗಿ, ಕೆಲಸದಿಂದಾದ ಉತ್ಪಾದನೆ ಸೊನ್ನೆ ಎಂದು ಅನಿಸಿದಾಗ ಹೇಳಿಕೊಳ್ಳಬಹುದಾದಂತ ಮಾತು ಇದು.

November 22, 2007

ಕಣ್ಣಿ ಇದೆ … (ಉತ್ತರ ಕನ್ನಡದ ಗಾದೆ – 80 ಮತ್ತು 81)

ಕಣ್ಣಿ ಇದೆ ಎಂದು ಎಮ್ಮೆ ಕೊಂಡಿದ್ದನು.

ಎಮ್ಮೆಯನ್ನು ಕಟ್ಟುವ ಹಗ್ಗ ಇದೆಯೆಂದು ಹೊಸದಾಗಿ ಎಮ್ಮೆಯನ್ನು ಕೊಂಡುಕೊಳ್ಳುತ್ತಾನೆಯೇ ಹೊರತು ಅದರ ಅವಶ್ಯಕತೆಯಿದೆ ಎಂದಲ್ಲ.

ಯಾರಾದರೂ ಅವಶ್ಯಕತೆ ಇಲ್ಲದಿದ್ಡೂ ಯಾವುದೋ ಒಂದು ಸಣ್ಣ ವಸ್ತು ಇದೆಯೆಂದು ಅದಕ್ಕೆ ಹೊಂದುವಂಥ ದೊಡ್ಡ ವಸ್ತುವನ್ನು ಕೊಂಡಾಗ ಈ ಮಾತನ್ನು ಹೇಳಿ.

ಇನ್ನೂ ಕೆಲವು ಕಡೆ ವಿಶೇಷವಾಗಿ ಉತ್ತರ ಕರ್ನಾಟಕದ ಕಡೆ ಲಾಳ ಇದೆಯೆಂದು ಕುದುರೆಯನ್ನು ಕೊಂಡಿದ್ದನು ಎಂದು ಹೇಳುವುದನ್ನು ಕೇಳಿದ್ದೇನೆ. ಇತ್ತೀಚೆಗೆ ನಮ್ಮ ಕಡೆಯ ಗಂಡಸರು ಇದನ್ನು ನವೀಕರಿಸಿ ಹೆಂಗಸರ ಮೇಲೆ ಪ್ರಯೋಗಿಸುತ್ತಿದ್ದಾರೆ - Blouse piece ಇದೆಯೆಂದು ಸೀರೆ ಕೊಂಡಿದ್ದಳು!

November 21, 2007

ಅರಸ ಬರುವ ತನಕ … (ಉತ್ತರ ಕನ್ನಡದ ಗಾದೆ – 79)

ಅರಸ ಬರುವ ತನಕ ಹಲಸು ತಡೆಯುವುದಿಲ್ಲ.

ಹಲಸಿನ ಕಾಯಿ ಹಣ್ಣಾಗುವುದು ಮತ್ತು ಹಣ್ಣು ಕೊಳೆತು ಹೋಗುವುದು ಅದರ ಸ್ವತಂತ್ರ ಮತ್ತು ನೈಸರ್ಗಿಕ ಕ್ರಿಯೆ.
ಬರುವವನು ಅರಸನೇ ಆಗಿದ್ದರೂ ಆ ಹಲಸಿನ ಹಣ್ಣಾಗುವಿಕೆ, ಕೊಳೆಯುವಿಕೆಯಲ್ಲಿ ಬದಲಾವಣೆ ಇರುವುದಿಲ್ಲ.

ನಡೆಯುವಂಥ ಕೆಲಸಗಳು ತಮ್ಮ ಪಾಡಿಗೆ ತಾವು ನಡೆಯುತ್ತಲೇ ಇರುತ್ತವೆ, ಅವು ಯಾರಿಗಾಗಿಯೂ ಕಾಯುವುದಿಲ್ಲ ಎಂದು ಹೇಳುವಾಗ ಈ ಗಾದೆ ಬಳಸಲ್ಪಡುತ್ತದೆ.

November 20, 2007

ಇದ್ದವರಿಗೇ ಹೊಟ್ಟೆಗಿಲ್ಲ … (ಉತ್ತರ ಕನ್ನಡದ ಗಾದೆ – 78)

ಇದ್ದವರಿಗೇ ಹೊಟ್ಟೆಗಿಲ್ಲ ಇನ್ನೊಂದು ಕೊಡೋ ಪರಮೇಶ್ವರ.

ಈಗಾಗಲೇ ಇರುವ ಮಕ್ಕಳಿಗೆ ಹೊಟ್ಟೆಗೆ ಹಾಕುವುದೇ ಕಷ್ಟವಾಗಿರುವಾಗ ದೇವರಲ್ಲಿ ಇನ್ನೊಂದು ಮಗುವನ್ನು ಬೇಡಿದ್ದನಂತೆ.

ಮೈತುಂಬಾ ಕೆಲಸವಿದ್ದು, ಅವನ್ನು ಮಾಡಿ ಮುಗಿಸುವುದೇ ಕಷ್ಟವಾಗಿರುವಾಗ ಇನ್ನೊಂದು ಹೊಸ ಕೆಲಸವನ್ನು ಮೈಮೇಲೆ ಹಾಕಿಕೊಳ್ಳಲು ಉತ್ಸುಕರಾಗಿರುವವರನ್ನು ಕಂಡಾಗ ಈ ಗಾದೆಯನ್ನು ಪ್ರಯೋಗಿಸಬಹುದು.

ಓದೂಗರೊಬ್ಬರು ‘ಹೌದು, ಗಾದೆಗಳದ್ದೇ ಒಂದು blog ಯಾಕೆ ಮಾಡಬಾರದು ನೀವು?’ ಎಂಬ ಸಲಹೆಯನ್ನಿತ್ತಾಗ ನನಗೆ ಈ ಗಾದೆ ನೆನೆಪಾಗಿತ್ತು.
ಶುರು ಮಾಡಿಕೊಂಡಿರುವ ಒಂದು blogಅನ್ನೇ ತುದಿ ಮುಟ್ಟಿಸುತ್ತೇನೆ ಎಂಬ ಧೈರ್ಯ ಇಲ್ಲದ ನಾನು ಇನ್ನೊಂದು blog ಶುರು ಮಾಡಿಕೊಂಡರೆ ಈ ಗಾದೆ ಎಲ್ಲರಿಗಿಂತ ಮೊದುಲು ನನಗೇ ಅನ್ವಯವಾಗುತ್ತದೆ!

November 19, 2007

ಅವರಿರುವುದೇ ಹೀಗೆ

ಊರಿನಲ್ಲಿದ್ದಾಗ ನಡೆಯುತ್ತಿದ್ದ ಕೆಲ ಘಟನೆಗಳನ್ನು ನೆನಪಿಸಿಕೊಳ್ಳುವುದೇ ಒಂದು ಮಜ.
ನಮ್ಮೂರಿನ ಜನರು….. ಅವರೆಲ್ಲಾ ನಿಜವಾಗಿ ಮುಗ್ಧರು.
ತಾವೇನು ಮಾತನಾಡುತ್ತಿದ್ದೇವೆ ಎಂಬ ಅರಿವಿಲ್ಲದೆಯೇ ಮಾತನಾಡುತ್ತಿರುತ್ತಾರೆ.
ಅವುಗಳಲ್ಲಿ ಕೆಲವನ್ನು ನಿಮ್ಮೆದುರಿಗೆ ಇಡುತ್ತಿದ್ದೇನೆ ಓದಿ...

ಗಣಪ ಹಸ್ಲರ್ ಸುಮಾರು 80 ವರ್ಷಗಳ, ಬೆನ್ನು ಬಾಗಿ ಹೋಗಿರುವ ಮುದುಕ. ಆತ ತನ್ನಮಗಳು ಪಾರ್ವತಿಯನ್ನು register ಮದುವೆ ಮಾಡಿಸಬೇಕೆಂದು ಮನಸ್ಸುಮಾಡಿ ಯಾರ ಹತ್ತಿರವೋ marriage registration form ಕೂಡ ತರಿಸಿಕೊಂಡಿದ್ದ.
ಅದನ್ನು ತುಂಬಿಸಿಕೊಳ್ಳಲು ಬಂದಿದ್ದ. ಅದರಲ್ಲಿ ಹುಡುಗಿಯ ವಯಸ್ಸು ಎಂಬುದನ್ನು ತುಂಬುವಾಗ ಅಮ್ಮ ಕೇಳಿದರು, 'ಗಣಪ, ಪಾರ್ವತಿಗೆ ಎಷ್ಟು ವರ್ಷ ಆಯ್ತಾ’ . ಆಗ ಆತ ಹೇಳಿದ, ‘ಅದ್ಕೇ... ಒಂದ್ ಹತ್ತ್ ವರ್ಸ.'
ಅಮ್ಮ ಗಲಿಬಿಲಿಯಾಗಿ ಕೇಳಿದರು, 'ಹಂಗಾರೆ ನಿಂಗೆ ಎಷ್ಟು ವರ್ಷವಾ?' ಅದಕ್ಕವನು ಹೇಳಿದ್ದು, 'ನಂಗೇ… ಒಂದಿಪ್ಪತ್ ವರ್ಸ'!
ಅಮ್ಮನ ಬಾಯಿ ಸುಮಾರು ನಾಲ್ಕೈದು ಸೆಕೆಂಡುಗಳಷ್ಟು ಕಾಲ ತೆರೆದೇ ಇತ್ತು!

ವಿಟ್ಠಲ ಪೂಜಾರಿ- ಕುಂದಾಪುರದಿಂದ ಬಂದು ನಮ್ಮ ಊರಿನಲ್ಲಿ ಒಂದಷ್ಟು ವರ್ಷಗಳ ಕಾಲ ನೆಲಸಿದ್ದವ. ನಂತರ ಅವನು ತನ್ನ ಊರಿಗೇ ತಿರುಗಿ ಹೋಗಿಬಿಟ್ಟಿದ್ದ. ಇತ್ತೀಚೆಗೆ ತೀರಿಹೋದ ಎಂದೂ ಕೂಡ ತಿಳಿಯಿತು.ಅವನಿಗೆ ವಿಪರೀತ ಕುಡಿಯುವ ಚಟ. ಅಂಗಿಯ ಎರಡು ಗುಂಡಿಗಳು ಯಾವಾಗಲೂ ತೆರೆದುಕೊಂಡೇ ಇರುತ್ತಿದ್ದವು.ಅವನು ಒಮ್ಮೆ ಯಾರದೋ ಬಗ್ಗೆ ದೂರನ್ನು ಹೇಳಲು ಅಪ್ಪನಲ್ಲಿಗೆ ಬಂದಿದ್ದ, ಮತ್ತು ಹೇಳುತ್ತಿದ್ದ,'ಆ ಮನ್ ಷಾ ಉಪ್ಯೋಗಿಲ್ಲ ಹೆಗಡೆರೇ. ನಾ ನಿಮ್ ಹತ್ರೆ ಹೇಳೂದ್ ಎಂತದೂ ಅಂದ್ರೆ… ಅವ ಬಿಸ್ಲ್ ಕೊಪ್ಪದ ಕತ್ರಿಲೆಲ್ಲಾ ಅಂಗಿ ಗುಬ್ಬಿ (ಗುಂಡಿ) ತೆಗ್ದು ಬಚ್ಚಿಕಂಡು ತಿರಗ್ತಾ.'
ಅಪ್ಪ ತಕ್ಷಣ ಕೇಳಿದ್ದರು,'ಮತ್ತೆ ನೀ ಮಾಡದು ಯಂತದಾ?' ಅವ ಅದಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದ,'ನಾನಾರೆ ಎರಡೇ ಗುಬ್ಬಿ ತೆಕ್ಕತ್ತೆ, ಅವ ಅಷ್ಟೂ ಗುಬ್ಬಿ ತೆಕ್ಕತ್ನಲೆ.' ಎಂದು!

ಶಂಕರ ಹಸ್ಲರ ಒಮ್ಮೆ ಯಾವುದೋ ಕಾರಣಕ್ಕೆ ನಮ್ಮ ಮನೆಗೆ ಬಂದಿದ್ದ. ಅವನನ್ನು ಎಲ್ಲರೂ ಕರೆಯುವುದು ಗಿಡ್ಡ ಶಂಕರ ಎಂದು, ಏಕೆಂದರೆ ಅವನು ಸ್ವಲ್ಪ ಕುಳ್ಳಗಿದ್ದಾನೆ. ಆಗಿನ್ನೂ ಕೇಬಲ್ ಟಿವಿ ಗಳೆಲ್ಲಾ ಇರದಿದ್ದ ಕಾಲ. ನಾವೆಲ್ಲ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಏನೋ ಒಂದು ಕಾರ್ಯಕ್ರಮ ನೋಡುತ್ತಿದ್ದೆವು. ಏನು ಎಂಬುದು ಸರಿಯಾಗಿ ನೆನಪಿಲ್ಲ. ಅಂತೂ ಬೇರೆ ಬೇರೆ ರೀತಿಯ ಪ್ರಾಣಿಗಳನ್ನೆಲ್ಲಾ ತೋರಿಸುತ್ತಿದ್ದರು. ಗಿಡ್ಡ ಶಂಕರನೂ ಕುಳಿತು ಪೂರ್ತಿ ಕಾರ್ಯಕ್ರಮ ಮುಗಿಯುವವರೆಗೂ ಕುಳಿತು ನೋಡಿದ.
ನಂತರ ಹೊರಡುವಾಗ ಹೇಳುತ್ತಾ ಹೋದ, 'ಪರ್ ಪಂಚಾದಾಗೇ (ಪ್ರಪಂಚದಲ್ಲಿ) ಯಾವ್ ಯಾವ್ ನಮ್ನೀ ಪಕ್ಸಿ (ಪಕ್ಷಿ) ಎಲ್ಲಾ ಐದಾವೋ ಏನೋ' ಎಂದು. ಅದರಲ್ಲೇನು ಮಜ ಅಂತೀರಾ? ಆ ಕಾರ್ಯಕ್ರಮದಲ್ಲಿ ಪ್ರಾಣಿಗಳ ಹೊರತಾಗಿ ಒಂದೇ ಒಂದು ಪಕ್ಷಿಯನ್ನೂ ತೋರಿಸಿರಲಿಲ್ಲ!

ಶಂಕರ ಗೌಡ, ಮಲಕ್ಯಾ ಗೌಡ ಅಣ್ಣ-ತಮ್ಮಂದಿರು.
ಯಾವಾಗ ನೋಡಿದರೂ ಇಬ್ಬರ ಜಗಳ ಇದ್ದದ್ದೇ. ಒಮ್ಮೆ ಇಬ್ಬರೂ ಜಗಳವಾಡಿಕೊಂಡು ಅಪ್ಪನ ಹತ್ತಿರ ದೂರು ತಂದಿದ್ದರು.
ಮಾತಿಗೆ ಮಾತು ಬೆಳೆದು ಅಲ್ಲಿಯೇ ಪುನಃ ಜಗಳಕ್ಕಿಳಿದರು.
ಮಲಕ್ಯಾನಿಗೆ ಸಿಟ್ಟು ನೆತ್ತಿಗೇರಿ ಕೂಗಿದ, '@#$!^ ಮಗನೇ, ನಿನ್ನ ಕಾಲ್ದಾಗೇ ಮನೆ ಹಾಳಾಗಿದ್ದು.'
ಶಂಕರನಿಗೆ ತಡೆಯಲಾಗಲಿಲ್ಲ. ಕೇಳಿಯೇ ಬಿಟ್ಟ,'ಹೆಗಡೆರ ಮನೆ ಅಂಗಳದಾಗೇ
@#$!@ ಮಗನೆ ಅಂತೀಯಾ &%#$@ ಮಗನೆ'.
ಅಪ್ಪ ಕೇಳಿದ್ದರು, 'ಮತ್ತೆ ಈಗ ನೀ ಹೇಳ್ತಾ ಇರದು ಯಂತದಾ ಶಂಕ್ರಾ?'
ಶಂಕರ ಗೌಡ ಮುಸಿ ಮುಸಿ ನಗುತ್ತಾ ತಲೆ ಕೆರೆದುಕೊಂಡ ಚಿತ್ರ ಇನ್ನೂ ಕಣ್ಣೆದುರಿಗಿದೆ.

ಕೋಲು ಎಂದು … (ಉತ್ತರ ಕನ್ನಡದ ಗಾದೆ – 77)

ಕೋಲು ಎಂದು ಕೊಟ್ಟರೆ ಕುದುರೆ ಎಂದು ಕುಣಿದಿದ್ದ.

ಅವನ ಕೈಗೆ ಕೋಲನ್ನು ಕೊಟ್ಟರೆ ಅದನ್ನೇ ಕುದುರೆ ಎಂದು ತಿಳಿದು ಕುಣಿಯತೊಡಗಿದ್ದ.

ಕೈಗೆ ಸಿಕ್ಕ ಸಣ್ಣ ಅಧಿಕಾರವನ್ನೇ ದೊಡ್ಡದೆಂದು ಭಾವಿಸುವವರನ್ನು ಕುರಿತು ಇರುವ ಮಾತು ಇದು.ನಮ್ಮ ಊರಿನ ಗ್ರಾಮ ಪಂಚಾಯತಿಯ ಸದಸ್ಯರು ತಮ್ಮನ್ನು ತಾವೇ ಪ್ರಧಾನಮಂತ್ರಿಯೆಂದು ತಿಳಿದು ಮಾತನಾಡುವ ಪರಿಯನ್ನು ನೋಡಿದಾಗ ನನಗೆ ಈ ಮಾತು ತಪ್ಪದೇ ನೆನೆಪಾಗುತ್ತದೆ!

November 17, 2007

ಸಿರಿ ಬಂದು … (ಉತ್ತರ ಕನ್ನಡದ ಗಾದೆ – 76)

ಸಿರಿ ಬಂದು ಹೊಕ್ಕುತ್ತಿರುವಾಗ ಓತಿಕ್ಯಾತವೆಂದು ತೆಗೆದು ಎಸೆದ.

ಐಶ್ವರ್ಯ ಬಂದು ಮನೆಯೊಳಗೆ ಹೊಕ್ಕುತ್ತಿದ್ದರೆ ಅದನ್ನು ಓತಿಕ್ಯಾತವೆಂದು ತಿಳಿದು ಓಡಿಸಿಬಿಟ್ಟಿದ್ದನು.

ಅದೃಷ್ಟ ಬಂದು ಬಾಗಿಲು ಬಡಿಯುತ್ತಿರುವಾಗ ಅಲಕ್ಶ್ಯ ತೋರುವವರ ಬಗ್ಗೆ ಇರುವ ಮಾತು ಇದು. English ನಲ್ಲಿ ಹೇಳುತ್ತಾರಲ್ಲ, ‘when fortune knocks the door, fool will complain of noise’ ಎಂದು. ಹಾಗೆಯೇ ಇದು.

November 16, 2007

ಮಾತನಾಡುವ ಪರಿ- 4

ನಮ್ಮೂರಿನ ಇನ್ನೂ ಕೆಲವರ English ಓದಿ ನೋಡಿ...
ಅವರ ಮುಗ್ಧತೆಯ ಹಿಂದಿರುವ funny part ಮಾತ್ರ ನೋಡುವ ಪ್ರಯತ್ನ ಮಾಡುತ್ತಿದ್ದೇನೆಯೇ ವಿನಹ ಅವರನ್ನು ಗೇಲಿ ಮಾಡುವ ಉದ್ದೇಶ ನನ್ನದಲ್ಲ.

ಪಿ. ಬಿ. ಗೌಡ ನಮ್ಮೂರಿನ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಲ್ಲಿ ಒಬ್ಬ.
ಆಗಷ್ಟೇ ಬಿಜೆಪಿ ಪಕ್ಷದಿಂದ ಶ್ರೀ ಅನಂತಕುಮಾರ ಹೆಗಡೆ ಲೋಕಸಭೆಗೆ ಚುನಾವಣಾ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
ಅಪ್ಪನ ಜೊತೆ ನಾನು ಬರುತ್ತಿರುವಾಗ ದಾರಿಯಲ್ಲಿ ಸಿಕ್ಕಿದ ಮತ್ತು ಹೇಳಿದ, 'ನಮ್ಮ ಪಕ್ಷದ candidate (ಸರಿಯಾಗೇ ಬಳಸಿದ್ದಾನೆ ನೋಡಿ) ಸರಿ ಇಲ್ರಾ ಈ ಸಲ. ಅವ ಆರಿಸಿ ಬರದು ಖಾತ್ರಿ ಇಲ್ಲ ಬಿಡಿ. ಅವನ ಮೇಲೆ 13 tribunal ಕೇಸು ಐತಿ ಅಂತ ಹೇಳ್ತಾರೇ...'
Tribunal ನ ಅರ್ಥ criminal!

ನಮ್ಮೂರಿನ ಕೊನೆಗೌಡ ಸಣ್ಣತಮ್ಮ. ಅವನು ಸಣ್ಣವನೂ ಅಲ್ಲ, ತಮ್ಮನೂ ಅಲ್ಲ. ಅವನ ಹೆಸರೇ ಸಣ್ಣತಮ್ಮ. ನಮ್ಮನೆಗೆ ತೆಂಗಿನಕಾಯಿ ಕೊಯ್ಯಲು ಬಂದಾಗ ಒಮ್ಮೆ ಹೇಳುತ್ತಿದ್ದ,
'ಆ ಮರ ನಾ ಹತ್ತದಿಲ್ರಾ ಹೆಗಡೆರೇ... ಅದರಾಗೇ ರಿಕ್ಸ್ ಅದೇ...'
ಅಪ್ಪ ಹೇಳಿದ್ರು...'ಇಲ್ಲಾ ಅದರಲ್ಲಿ ಸವ್ಳಿ*, ಗಿವ್ಳಿ ಇಲ್ಲ'.
ಅವ ಮತ್ತೆ ಹೇಳಿದ, 'ಇಲ್ರಾ... ಸವ್ಳಿ ಇದ್ರೆ ಅಡ್ಡಿಲ್ಲಾಗಿತ್ತು, ಮರ ಎತ್ರಕ್ಕೆ ಹೋಗಿದ್ದಕ್ಕೆ ರಿಕ್ಸು, ಸುಮ್ನೇ ಬ್ಯಾಡಾ ಹೇಳಿ.'
ಆಗ ಗೊತ್ತಾಯಿತು. ರಿಕ್ಸು ಅಂದರೆ Risk ಎಂದು!

*ಸವ್ಳಿ ಎಂದರೆ ದೊಡ್ಡ ಜಾತಿಯ ಕೆಂಪು ಇರುವೆ, ಕಚ್ಚಿದರೆ ಉರಿಯಾಗುವಂತದು.

ಎಲ್ಲಾ ಬಿಟ್ಟ … (ಉತ್ತರ ಕನ್ನಡದ ಗಾದೆ – 75)

ಎಲ್ಲಾ ಬಿಟ್ಟ ಭಂಗಿ ನೆಟ್ಟ ಗೊಂಡೆ ಹಕ್ಕಲ ಸುಬ್ರಾಯ ಭಟ್ಟ.

ಭಂಗಿಯನ್ನು ಬೆಳೆಯುವುದು ಕಾನೂನು ಬಾಹಿರ.
ಅದರ ಗಿಡ ನೋಡಲು ಹೆಚ್ಚು ಕಡಿಮೆ ಗೊಂಡೆಯ ಗಿಡದಂತೆಯೇ ಕಾಣುತ್ತದೆ.
ಇಷ್ಟು ದಿನ ಗೊಂಡೆಯ ಗಿಡವನ್ನು ನೆಡುತ್ತಿದ್ದ ಸುಬ್ರಾಯ ಭಟ್ಟ ಈಗ ಹೊಸದಾಗಿ ಭಂಗಿ ಗಿಡವನ್ನು ಬೆಳೆಸಲು ಶುರುಮಾಡಿದ್ದಾನೆ.

ಸರಿಯಾಗಿ ನಡೆಯುತ್ತಿದ್ದ ಕೆಲಸವನ್ನು ಬಿಟ್ಟು ಇನ್ಯಾವುದೋ ಅನಗತ್ಯ ಎನಿಸುವಂತಹ ಕೆಲಸಕ್ಕೆ ಕೈ ಹಾಕುವವರ ಬಗ್ಗೆ ಈ ಮಾತನ್ನು ಹೇಳುತ್ತಾರೆ.

November 15, 2007

Changing world

Vishakha, the little girl of four years who stays in Bangalore had come to my village for vacation with her parents. She was playing alone with some colourful cards. I was curious and went near her to see what she is playing with. She had 26 cards, each card with an alphabet, a word beginning with that alphabet and an appropriate picture for that word.

I just took a look at those cards. Alphabet ‘A’ had and Apple and ‘B’ had a Bat. For ‘C’ I expected a Cat but to all my surprise, it showed a Car! I still remember my school days... when we studied, 'C' showed a Cat because cats were more and cars were rare. But in these days, when cats are rare and cars are everywhere, what else can we expect? If she had a card with Cat in it, her mother would have struggled to show her a cat in Bangalore and now she can easily show a car!

I told to myself, ‘stupid lady, where are you? The world is moving very fast and in a different direction than what you think.’ I wish there will not come a day with cards A for Alcohol, B for Beer, C for Cheese, … P for Pizza,… W for Wine…

ಇದಿಯನ್ನು… (ಉತ್ತರ ಕನ್ನಡದ ಗಾದೆ – 74)

ಇದಿಯನ್ನು ಕಟ್ಟಿಕೊಂಡು ಸಮಾಧಿಗೆ ಹೋಗಿದ್ದನಂತೆ.

ಇದಿ ಎಂದರೆ ಕಾಡುವಂತಹದ್ದು ಎಂದು ಕೇಳಿದ್ದೇನೆ.
ಅದರ ಜೊತೆ ಸಮಾಧಿಗೆ ಹೋದರೂ ಅದು ಕಾಡುವುದನ್ನು ನಿಲ್ಲಿಸುವುದಿಲ್ಲ. ಅಂದರೆ ಸತ್ತಮೇಲೂ ಕಾಡುತ್ತದೆ ಎಂದು ಅರ್ಥ.

ನಾವು ಎಲ್ಲಿಗಾದರೂ ಹೊರಟಾಗ ನಮಗೆ ಇಷ್ಟವಿಲ್ಲದವರು, ಕಿರಿಕಿರಿಯ ವ್ಯಕ್ತಿ ತಗಲುಹಾಕಿಕೊಂಡಾಗ ಈ ಮಾತು ನೆನೆಪಾಗುತ್ತದೆ.

November 14, 2007

ಅತ್ತೇರೆ, ಅತ್ತೇರೆ … (ಉತ್ತರ ಕನ್ನಡದ ಗಾದೆ – 72 ಮತ್ತು 73)

ಅತ್ತೇರೆ, ಅತ್ತೇರೆ ಅರಳಿ ಕಟ್ಟೆಗೆ ದಿಬ್ಬಣ ಬಂತು ಹಾಡು ಹೇಳಿಕೊಡಿ.

ಮನೆಯ ಮುಂದಿರುವ ಅರಳಿ ಮರದ ಕಟ್ಟೆಯ ತನಕ ಮದುವೆ ದಿಬ್ಬಣ ಬರುವವರೆಗೂ ಸೊಸೆ ಹಾಡನ್ನು ಕಲಿತಿಲ್ಲ. ದಿಬ್ಬಣ ಬಂದ ಮೇಲೆ ಅತ್ತೆಯ ಬಳಿ ಬಂದು ಹಾಡು ಹೇಳಿಕೊಡಿ ಎನ್ನುತ್ತಾಳೆ.

ಪೂರ್ವ ಸಿದ್ಧತೆ ಇಲ್ಲದೇ ಕೊನೇ ಘಳಿಗೆಯಲ್ಲಿ ಚಡಪಡಿಸುವವರನ್ನು ಕುರಿತು ಇರುವ ಮಾತು ಇದು.

ಇದೇ ತರಹದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ- ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ್ದನು. ನೀರಿಗಾಗಿ ಪೂರ್ವ ಸಿದ್ಧತೆ ಇಲ್ಲದೇ ಗಡ್ಡ ಹೊತ್ತಿಕೊಂಡು ಉರಿಯತೊಡಗಿದಾಗ ಬಾವಿ ತೋಡಲು ಮುಂದಾಗಿದ್ದನು.

November 13, 2007

ಮಾತನಾಡುವ ಪರಿ- 3

ನಮ್ಮ ಊರಿನ ಜನ ಅಪ್ಪನ ಹತ್ತಿರ ಮಾತನಾಡಲು ಬಂದರೆ ಏನಾದರೂ ಒಂದು ನಗು ತರಿಸುವಂಥ ಮಾತನ್ನು ಆಡಿಯೇ ತೀರುತ್ತಾರೆ.
ಕೆಲವರಂತೂ ತಮ್ಮನ್ನು ತಾವೇ ರಾಜಕೀಯ ಪುಢಾರಿಗಳು ಎಂದು ತಿಳಿದುಕೊಂಡವರಿದ್ದಾರೆ.
ಅವರಿಗಂತೂ English ಶಬ್ದಗಳನ್ನು ಬಳಸಿ ಮಾತನಾಡುವುದೆಂದರೆ ಎಲ್ಲಿಲ್ಲದ ಪ್ರೀತಿ.
ಅಂತಹ ಕೆಲವು ಸಂದರ್ಭಗಳನ್ನು ಇಲ್ಲಿ ಹೇಳುತ್ತಿದ್ದೇನೆ.

ಶಂಕರ ಗೌಡ - ಊರಿನ ಮುಖಂಡ, ಅಂದು ಅಪ್ಪನ ಹತ್ತಿರ ಹೇಳುತ್ತಿದ್ದ, 'ಹೆಗಡೆರೇ ಆ ದಾಕ್ತಾರ ತವ ಹೋಗಿದ್ದೆ. ಔಷಧಿ ಕೊಟ್ಯಾರು. ಆದ್ರೂ ಯಾಕೋ ಜರ Continuous ಆಗಾಕೆ ವಲ್ದು.'
ಅದರ ಅರ್ಥ Doctor ಬಳಿ ಹೋಗಿದ್ದೆ, ಔಷಧಿ ಕೊಟ್ಟಿದ್ದಾರೆ. ಆದರೂ ಏಕೋ ಜ್ವರ ಕಡಿಮೆ ಆಗ್ತಾನೇ ಇಲ್ಲ. Continuous ಎನ್ನುವ ಶಬ್ದವನ್ನು ಕಡಿಮೆ ಎನ್ನುವ ಅರ್ಥದಲ್ಲಿ ಬಳಸಿಬಿಟ್ಟಿದ್ದಾನೆ ಶಂಕರ ಗೌಡ!

ಗಣಪತಿ- ಅದೇ ಊರಿನ ಒಕ್ಕಲಿಗ. ಅವನಿಗೆ ಆಗಾಗ ಮತಿಭ್ರಮಣೆಯಾಗುತ್ತಿತ್ತು. ಹಾಗಾದಾಗಲೆಲ್ಲ ಅವನು ಹೆಂಡತಿ, ಮಕ್ಕಳಿಗೆಲ್ಲ ಹೊಡೆದು ರಾದ್ಧಾಂತ ಮಾಡುತ್ತಿದ್ದ. ಆಗ ಅವನನ್ನು ಅಪ್ಪನ ಹತ್ತಿರ ಪಂಚಾಯಾತಿಗೆಂದು ಕರೆದುಕೊಂಡು ಬರುತ್ತಿದ್ದರು, ಏಕೆಂದರೆ ಅಪ್ಪ ಹೇಳಿದ ಮಾತನ್ನು ಅವನು ಎಂದೂ ಮೀರುತ್ತಿರಲಿಲ್ಲ. ಒಮ್ಮೆ ಹಾಗೆಯೇ ಅವನನ್ನು ಕರೆದುಕೊಂಡು ಬಂದಿದ್ದಾಗ, ಆ ಊರಿನ ಈಗಿನ ಗೌಡ (ಶಂಕರ ಗೌಡ ತೀರಿಕೊಂಡ ಬಳಿಕ) ಬಂಗಾರ್ಯ ಗೌಡ ಗಣಪತಿಗೆ ಬುದ್ಧಿ ಹೇಳಿದ್ದು, 'ನೀ ಹಿಂಗೆಲ್ಲ ಗದ್ಲಾ ಮಾಡ್ಕೀನಾದು ಚೊಲೊ ಅಲ್ಲ ನೋಡು ಗಣಪತಿ. ಇನ್ನೊಂದು ನಾಕ್ ವರ್ಷ ಆದ್ರೆ ನಿನ್ನ ಮಕ್ಕಳು ಕೈಗೆ ಬರ್ತಾವು. ಕೆಲ್ಸಾ ಅವೇ ಮಾಡ್ಕಿ0ದು ಹೋಕಾವು. ನೀ ಅಷ್ಟ್ರಾಗ ಹಿಂಗೆಲ್ಲಾ temporary ಮಾಡ್ಕಿ0ತಿ.
Temporary ಅನ್ನುವ ಶಬ್ದವನ್ನು ಅನಾಹುತ ಎನ್ನುವ ಅರ್ಥದಲ್ಲಿ ಬಳಸಲಾಗಿದೆ!

ಕೃಷ್ಣ ಪೂಜಾರಿ- ಕುಂದಾಪುರದಿಂದ ಕೆಲಸಕ್ಕೆಂದು ಬಂದು ನಮ್ಮೊರಿನಲ್ಲೇ settle ಆಗಿ ತುಂಬಾ ವರ್ಷಗಳೇ ಕಳೆದಿವೆ.
ಆತ ಒಮ್ಮೆ ನನ್ನನ್ನು ಕೇಳಿದ್ದು, 'ಅಲ್ರಾ… ಅಮ್ಮಾ ನಿಮ್ಮ ಆಸ್ಟ್ರೇಲಿಯಾದಾಗೆಲ್ಲಾ ಮೀನಾ ಗೀನಾ ಬೇಯ್ಸಾದಿಲ್ಲೇನ್ರಾ?'
ನನಗೆ ಅರ್ಥವೇ ಆಗಲಿಲ್ಲ. ಎಲ್ಲಿಯ ಆಸ್ಟ್ರೇಲಿಯಾ, ಎಲ್ಲಿಯ ಮೀನು ಎಂದು. ಕಣ್ಣು ಕಣ್ಣು ಬಿಡುತ್ತಾ ನಾನು ನಿಂತಿದ್ದನ್ನು ನೋಡಿ ಮತ್ತೆ ಹೇಳಿದ, 'ಅದೇ ಧಾರವಾಡದಾಗೇ, ನಿಮ್ಮ ಆಸ್ಟ್ರೇಲಿಯಾದಾಗೇ.....'
ನನಗೆ ಆಗ ಅರ್ಥ ಆಯಿತು. ಆತ ಕೇಳುತ್ತಿದ್ದುದು ಧಾರವಾಡದ ನನ್ನhostel ಬಗ್ಗೆ ಎಂದು!

ಇನ್ನೂ ಉಮೇಶನಂತೂ SSLC ವರೆಗೆ ಓದಿದ್ದಾನೆ. ಅವನ English ಅಂತೂ ಇನ್ನೊ ಮಜಾವಾಗಿರುತ್ತದೆ.
ಒಮ್ಮೆ ಏನೋ ಒಂದು ವಿಷಯ ಕೇಳಲು ಅಪ್ಪನ ಹತ್ತಿರ ಬಂದಿದ್ದಾನೆ. ಆಗ ಹೇಳುತ್ತಿದ್ದ, 'ನಮಗೆ ಗೊತ್ತಾಗದಿಲ್ಲ ಹೆಗಡೆರೇ ನೀವೇ ಹೇಳ್ರಿ. ನಾವೆಲ್ಲಾ ನೋಸೆಂಟು.'
ನೋಸೆಂಟು ಅಂದರೆ Innocent! ಅದರ ನಂತರ ನಾವು ಅವನನ್ನು ಕರೆಯುತ್ತಿದ್ದುದೇ ನೋಸೆಂಟು ಎಂದು!
ಇಬ್ಬನಿ ಬಿದ್ದಾಗ ಅವನು ಅದಕ್ಕೆ ಇಬ್ಬನಿ ಎಂದು ಅವನು ಎಂದೂ ಹೇಳುವುದಿಲ್ಲ. ಮಿಷ್ಟು (Mist) ಎಂದೇ ಹೇಳುತ್ತಾನೆ.

ಅರಸನ ಮಗಳಿಗೆ … (ಉತ್ತರ ಕನ್ನಡದ ಗಾದೆ – 71)

ಅರಸನ ಮಗಳಿಗೆ ಭತ್ತದ ಸುಂಗು ಚುಚ್ಚಿಕೊಂಡಿತ್ತಂತೆ.

ಅರಸನ ಮಗಳು ಮುದ್ದಿನಿಂದ ಬೆಳೆದವಳು.
ಭತ್ತದ ಸುಂಗು ಅಂದರೆ ಒಂದು ಅತಿ ಚಿಕ್ಕ ಮುಳ್ಳಿನಂತಹ ವಸ್ತು.
ಅವಳಿಗೆ ಆ ಸುಂಗೂ ಕೂಡ ನೋವನ್ನುಂಟು ಮಾಡುತ್ತದೆ.

ಯಾರಾದರೂ ತೀರಾ ಚಿಕ್ಕ ನೂವಿಗೆ ಅತಿಯಾದ ಯಾತನೆ ಪಟ್ಟರೆ (ಅಥವಾ ಯಾತನೆಯನ್ನು ನಟಿಸಿದರೆ) ಈ ಮಾತನ್ನು ಪ್ರಯೋಗಿಸಬಹುದು.

November 12, 2007

ಅಪ್ಪನಿಗೇ ಅಪ್ಪ … (ಉತ್ತರ ಕನ್ನಡದ ಗಾದೆ – 70)

ಅಪ್ಪನಿಗೇ ಅಪ್ಪ ಎನ್ನುವುದಿಲ್ಲ ಚಿಕ್ಕಪ್ಪನಿಗೆ ಅಪ್ಪ ಎನ್ನುತ್ತಾನಾ?

ಅವನು ತನ್ನ ಅಪ್ಪನನ್ನೇ ಅಪ್ಪ ಎಂದು ಕರೆಯುವುದಿಲ್ಲ ಇನ್ನು ಚಿಕ್ಕಪ್ಪನಿಗೆ ಅಪ್ಪ ಎಂದು ಕರೆಯುವುದು ಸಾಧ್ಯವೇ ಇಲ್ಲ.

ಯಾರಾದರೂ ತಮ್ಮ ಕರ್ತವ್ಯವನ್ನೇ ಮಾಡುವುದಿಲ್ಲ ಇನ್ನು ಉಳಿದ ಕೆಲಸವನ್ನಂತೂ ಮಾಡುವುದಂತೂ ಸಾಧ್ಯವೇ ಇಲ್ಲ ಎಂಬುದನ್ನು ಸೂಚಿಸಲು ಈ ಗಾದೆಯನ್ನು ಉಪಯೋಗಿಸಬಹುದು.

November 8, 2007

ಗುತ್ಯಾ ಮತ್ತು ಅವನ ಕಿರೀಟ

ಇದು ನಾನು ನೋಡಿದ ಘಟನೆಯಲ್ಲ. ಅಮ್ಮನಿಂದ ಕೇಳಿದ್ದು, ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಯಸಿದ್ದು. ಅಮ್ಮ ಸುಮಾರು 22 ಅಥವಾ 23 ವರ್ಷದವಳಿದ್ದಾಗಿನ ಕಥೆ. ಅವಳ ಊರು ಅಂದರೆ ನನ್ನ ಅಜ್ಜನ ಮನೆ ಶಿರಸಿ ತಾಲೂಕಿನ ದೊಡ್ನಳ್ಳಿಯಲ್ಲಿ ಆಗಿನ ಕಾಲದಲ್ಲಿ ನಾಟಕಗಳ ಗೀಳು ಎಲ್ಲರಿಗೂ ಸ್ವಲ್ಪ ಜಾಸ್ತಿಯೇ ಇತ್ತು ಎಂದು ಕೇಳಿದ್ದೇನೆ.

ಒಂದು ನಾಟಕವನ್ನು ತಯಾರಿ ಮಾಡಿಕೊಂಡಿದ್ದರು. ಅದರ ಕಥೆಯ ಸಾರಾಂಶವೆಂದರೆ ಒಬ್ಬ ಅರಸನಿದ್ದವನು ಏನೋ ಕಾರಣದಿಂದ ಬಡವನಾಗಿ ಭಿಕ್ಷೆ ಬೇಡುವ ಪರಿಸ್ಥಿತಿಯನ್ನು ತಲುಪುತ್ತಾನೆ. ತೀರಾ unrealistic ಅಂತೀರಾ? ಅದು ನನಗೂ ಗೊತ್ತು, ಅಮ್ಮನಿಗೂ ಗೊತ್ತು. ಆದರೆ ಅದು ನಾಟಕ ತಾನೇ, ಏನು ಬೇಕಾದರೂ ಆಗಬಹುದು. ಅದೇ ಊರಿನ ಎಮ್ಮೆ ಕಾಯುವ ಗುತ್ಯಾ ತನಗೆ ಅರಸನ ಪಾತ್ರವೇ ಬೇಕು ಎಂದು ಹಟಮಾಡಿ ಕೊನೆಗೂ ಆ ಪಾತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ. ಸಾಕಷ್ಟು ಮೊದಲಿನಿಂದಲೇ ತಾಲೀಮು ನಡೆಸಿದ್ದರು. ಎಲ್ಲವೂ ಸರಿಯಾಗಿಯೇ ನಡೆದಿತ್ತು.

ನಾಟಕ ಪ್ರದರ್ಶಿಸುವ ರಾತ್ರಿ ಬಂತು. ಎಲ್ಲರೂ ತಮ್ಮ ತಮ್ಮ ಉಡುಗೆಗಳೊಂದಿಗೆ ರಂಗಮಂಚಕ್ಕೆ ಬರಲು ಸಿದ್ಧರಾದರು. ಗುತ್ಯಾನಿಗೆ ಅರಸನ ವೇಷ ಕಟ್ಟಿದರು. ಬಣ್ಣ ಬಣ್ಣದ ಅಂಗಿ, ಬಂಗಾರ ಮತ್ತು ಮುತ್ತಿನ ಸರಗಳು, ಕೈಯ್ಯಲ್ಲಿ ಹೊಳೆಯುವ ಖಡ್ಗ, ತಲೆಯಮೇಲೆ ರತ್ನಖಚಿತ ಕಿರೀಟ...
ಗುತ್ಯಾನಿಂಗಂತೂ ಖುಷಿಯೋ ಖುಷಿ. ಹೆಚ್ಚು ಕಡಿಮೆ ಅವನು ನೆಲದ ಮೇಲೆಯೇ ಇಲ್ಲ ಆ ರಾತ್ರಿ. ನಾಟಕ ನಡೆಯುತ್ತಿರುವಾಗ ಗುತ್ಯಾನ ಪ್ರವೇಶದ ದೃಶ್ಯ ಬಂತು. ರಾಜ ಗಂಭೀಯದಿಂದಲೇ ಹೋಗಿ ತಾನು ಹೇಳಬೇಕಾಗಿದ್ದನ್ನೆಲ್ಲಾ, ಮಾಡಬೆಕ್ಕಾಗಿದ್ದನ್ನೆಲ್ಲಾ ಸರಿಯಾಗಿಯೇ ಮುಗಿಸಿ ಒಳಗೆ ಬಂದ. ನಿರ್ದೇಶಕರು ಒಮ್ಮೆ ನಿಟ್ಟುಸಿರು ಬಿಟ್ಟರು.

ಕಥೆ ಮುಂದುವರಿಯಿತು. ಅರಸ ದಿವಾಳಿಯಾಗುವ ದೃಶ್ಯ ಹತ್ತಿರ ಬಂತು. ಒಳಗಡೆ ಗುತ್ಯಾನಿಗೆ ಹರುಕು ಅಂಗಿ ತೋಡಿಸಿದರು, ತಲೆಕೊದಲನ್ನು ಕೆದರಿದರು, ಕೈಯ್ಯಲ್ಲಿ ಮುರುಕು ಪಾತ್ರೆಯನ್ನು ಹಿಡಿಸಿದರು. ಗುತ್ಯಾನಿಗೆ ಈ ವೇಷ ಏನು ಮಾಡಿದರೂ ಮನಸ್ಸಿಗೆ ಬರಲೊಲ್ಲದು. ನೋಡಲು ಕುಳಿತಿರುವ ನೂರಾರು ಜನರ ಮುಂದೆ ಹೀಗೆ ಹೋಗಬೇಕಾಯಿತಲ್ಲಾ ಎಂಬ ಕೊರಗು. ಏಕೆಂದರೆ ತಾಲೀಮಿನ ಸಮಯದಲ್ಲಿ ಅವನಿಗೆ ಇದ್ಯಾವುದರ ಕಲ್ಪನೆಯೂ ಇರಲಿಲ್ಲ.
ಗುತ್ಯಾನಿಗೆ ಭಿಕ್ಷುಕನ ವೇಷ ತೊಡಿಸಿದ ನಂತರ ವೇಷವನ್ನು ತೊಡಿಸುವವನು ಇನ್ನೊಬ್ಬನಿಗೆ ವೇಷ ತೊಡಿಸುವುದರಲ್ಲಿ ಮಗ್ನನಾಗಿದ್ದ. ಕೆಲ ಕ್ಷಣಗಳ ಬಳಿಕ ತಿರುಗಿ ನೋಡಿದರೆ ಗುತ್ಯಾ ಮತ್ತೆ ಕಿರೀಟ ತೊಟ್ಟು ಕುಳಿತಿದ್ದಾನೆ! ಗುತ್ಯಾನಿಗೆ ಕಿರೀಟವನ್ನಂತೂ ತೆಗೆಯುವುದು ಸುತಾರಾಂ ಇಷ್ಟವಿರಲಿಲ್ಲ. ಅರಸನ ಅಂಗಿಯಂತೂ ಇಲ್ಲ, ಕಿರೀಟವಾದರೂ ಇರಲಿ ಎಂಬ ಆಸೆ ಅವನಿಗೆ. ಅಂತೂ ಇಂತೂ ಅವನಿಗೆ ಬುದ್ಧಿ ಹೇಳಿ, 'ನೋಡು ಈಗ ನೀನು ರಾಜನಲ್ಲ, ಭಿಕ್ಷುಕ' ಎಂದು ಮನವರಿಕೆ ಮಾಡಿಕೊಟ್ಟರು. ಅವನು ಗೊತ್ತಾಯಿತು ಎನ್ನುವಂತೆ ತಲೆಯಾಡಿಸಿದ. ಸರಿ, ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾದರು.

ಗುತ್ಯಾ ಭಿಕ್ಷೆ ಬೇಡುವ ದೃಶ್ಯ ಬಂತು. ತಕ್ಷಣ ಗುತ್ಯಾ stage ಮೇಲೆ ಬಂದ. ನೋಡಿದರೆ ಕಿರೀಟ ತಲೆಯ ಮೇಲೇ ಇದೆ! ಇನ್ನೇನು ಬರಬೇಕು ಎನ್ನುವಾಗ ಒಳಗಡೆ ಇದ್ದವರ ಕಣ್ಣು ತಪ್ಪಿಸಿ ಕಿರೀಟವನ್ನು ಹಾಕಿಕೊಂಡು ಬಂದುಬಿಟ್ಟಿದ್ದ!! ಹರುಕು ಅಂಗಿ, ತಲೆಯ ಮೇಲೆ ಕಿರೀಟವನ್ನು ಹಾಕಿಕೊಂಡ ಗುತ್ಯಾ ಭಿಕ್ಷುಕ ಕೈಯ್ಯಲ್ಲಿ ಮುರುಕು ಪಾತ್ರೆ ಹಿಡಿದುಕೊಂಡು 'ಹಸಿವಾಗಿ ಪ್ರಾಣವ ಬಿಡುತಿಹೆನಾ, ತಾಯೇ ಕೊಡವ್ವಾ ನಂಗೆ ನೀರವನ (ನೀರನ್ನು-ಗುತ್ಯಾನ ಬಾಯಲ್ಲಿ ಅದು ನೀರವನ ಆಗಿತ್ತು) ಎಂದು ಪ್ರಾಸಬದ್ಧವಾಗಿ ಹಾಡುತ್ತಿದ್ದರೆ, ಪ್ರೇಕ್ಷಕರು ಹೊಟ್ಟೆ ಹಿಡಿದುಕೊಂಡು ಬಿದ್ದು ಬಿದ್ದು ನಗುತ್ತಿದ್ದರಂತೆ!

ಆರು ಮೂರಾಗಲಿ … (ಉತ್ತರ ಕನ್ನಡದ ಗಾದೆ – 68 ಮತ್ತು 69)

ಆರು ಮೂರಾಗಲಿ, ಮೂರು ಆರಾಗಲಿ, ಹೆಂಡತಿಯ ತಂಗಿ ಮಾರಾಟವಾಗಿ ಹೋಗಲಿ...

ಯಾವುದೋ ಒಂದು ಕೆಲಸಕ್ಕೆ ಏನೇ ಅಡ್ಡ ಬಂದರೂ ಮಾಡಿಯೇ ತೀರುತ್ತೇನೆ ಎಂದು ಹೇಳುವಾಗ ಈ ಮಾತನ್ನು ಹೇಳುತ್ತಾರೆ.
ಇದೆ ರೀತಿಯಲ್ಲಿ ಹೇಳುವ ಇನ್ನೊಂದು ಮಾತೆಂದರೆ ಹೊಳೆ ಮೇಲೆ ಹೊಳೆ ಹೋಗಲಿ.....

ಆರು ಮೂರಾದರೂ, ಮೂರು ಆರಾದರೂ, ಹೆಂಡತಿಯ ತಂಗಿ ಮಾರಾಟವಾಗಿ ಹೋದರೂ ಅಥವಾ ಹೊಳೆಯ ಮೇಲೆ ಹೊಳೆ ಹೋದರೂ ಮಾಡಬೇಕೆಂದುಕೊಂಡಿರುವ ಕೆಲಸವನ್ನು ಮಾಡಿಯೇ ತೀರುತ್ತೇನೆ ಎಂಬ ಅರ್ಥ.
English ನಲ್ಲಿ ಹೇಳುವುದಾದರೆ, at any cost ಅಥವಾ come what may ಎಂದು ಬಳಸುತ್ತೇವಲ್ಲಾ, ಹಾಗೆ.

ಇದು ಗಾದೆ ಮಾತಿನ ಸಾಲಿಗೆ ಸೇರದಿದ್ದರೂ, ಓದಲು ತಮಾಷೆ ಎನಿಸುವಂಥದ್ದಾಗಿರುವುದರಿಂದ ಗಾದೆಗಳ ಜೊತೆಯಲ್ಲಿಯೇ ಸೇರಿಸಿ ಹಾಕಿದ್ದೇನೆ.

November 7, 2007

ದೇಶದ ರಕ್ಷಕರು, ಭಕ್ಷಕರು

ಮೊನ್ನೆ ರಾತ್ರಿ ಇಲ್ಲಿ 10 ಘಂಟೆಯ ಸಮಯ. ಅಂದರೆ ನಮ್ಮ ದೇಶದಲ್ಲಿ ಸುಮಾರು ಸಂಜೆ 6:30. Gmail ನಿಂದ ಇನ್ನೇನು logout ಆಗಬೇಕೆನಿಸಿದರೂ ಯಾಕೋ ಒಂದು ಕ್ಷಣ ತಡೆದೆ. ತಕ್ಷಣ ನನ್ನ ತಮ್ಮ online ಕಾಣಿಸಿದ. ನಿಧಿ ಸಿಕ್ಕಿದ್ದಕ್ಕಿಂತ ಜಾಸ್ತಿ ಸಂತೋಷವಾಯಿತು. ನಾನೂ, ಅವನೂ ಭೇಟಿಯಾಗಿ ಹೆಚ್ಚು ಕಡಿಮೆ ಒಂದು ವರ್ಷವೇ ಕಳೆಯುತ್ತಾ ಬಂತು. ಈಗ ಮೂರು ತಿಂಗಳುಗಳ ಹಿಂದೆ ಅವನು ರಜೆಗೆಂದು ಊರಿಗೆ ಬರುವಷ್ಟರಲ್ಲಿ ನಾನು ನನ್ನದಲ್ಲದ ದೇಶಕ್ಕೆ ಬಂದು ತಲುಪಿದ್ದೆ. ಅವನು ಊರಿನಲ್ಲಿದ್ದಾಗ ಫೋನಿನಲ್ಲಿ ಮಾತಾಡಲು ಸಿಗುತ್ತಿದ್ದ. ಅವನು ರಜೆ ಮುಗಿಸಿ ಮನೆಯಿಂದ ತಿರುಗಿ ಹೊರಡುವ ದಿನ ಮಾತಾಡಿದ್ದು ಅಷ್ಟೇ. ನಂತರ ಎರಡು ತಿಂಗಳಿನಿಂದ ಅವನು phone, mail ಯಾವುದಕ್ಕೂ ಸಿಕ್ಕಿರಲಿಲ್ಲ. ಏಕೆಂದರೆ ಅವನಿರುವುದು ಮಣಿಪುರದ ಯಾವುದೋ ಒಂದು ಕಾಡಿನಲ್ಲೋ, ಕೊಳ್ಳದಲ್ಲೋ, ಗುಡ್ಡದಲ್ಲೋ...ಅವನು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್.

ಯಾಕೋ ಇತ್ತೀಚೆಗೆ ತುಂಬಾ ನೆನಪಾಗುತ್ತಿದ್ದ. ಅಕ್ಕ-ತಮ್ಮರಾದರೂ ನಾವಿರುವುದು ಸ್ನೇಹಿತರಂತೆ. ಸಣ್ಣ ವಿಷಯವನ್ನೂ ಬಿಡದೆ ಹಂಚಿಕೊಳ್ಳುವುದು ಚಿಕ್ಕವರಿಂದಾಗಿನಿಂದ ಬೆಳೆದು ಬಂದ ರೂಢಿ. ಒಮ್ಮೆ ಹೇಳುತ್ತಿದ್ದ, 'ಯಾಕೋ ಮನಸ್ಸಿಗೆ depression ಬಂದಿದೆ. ಓದಿದ್ದೆಲ್ಲಾ waste ಆಗ್ತಾ ಇದೆ. ಇಲ್ಲಿ ಮಾವೋ, ನಾಗಾ, ಉಲ್ಫಾ, ಬೋಡೋಗಳ ನಡುವೆ ಇರುವುದರ ಬದಲು ನನಗಿಷ್ಟವಾದ physics field ನಲ್ಲಿಯೇ ಮುಂದುವರಿದಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತಿದೆ' ಎಂದು. ಆಗ ಏನೇನೋ ಹೇಳಿ ಅವನನ್ನು ಸಮಾಧಾನಿಸಿದ್ದೆ.

ಎರಡು ತಿಂಗಳುಗಳ ನಂತರ ಸಿಕ್ಕಿದ್ದು ಅವನಿಗೂ ನನಗಾದಷ್ಟೇ ಖುಷಿ ಆಗಿರಬೇಕು. ಅವನು ಗಡಿಬಿಡಿಯಲ್ಲಿದ್ದರೂ ಕೂಡ chat ಮಾಡತೊಡಗಿದೆವು. ಮಣಿಪುರದಿಂದ ಮಿಜ಼ೋರಮ್ ಗೆ ಹೊರಟಾಗ ದಾರಿಯಲ್ಲಿ ಸಿಕ್ಕ ಯಾವುದೋ internet browsing centre ನಲ್ಲಿ ಇದ್ದೇನೆ ಎಂದು ಹೇಳಿದ. ಅರ್ಧ ಘಂಟೆ chat ಮಾಡಿದ ಮೇಲೆ ಹೇಳಿದ, 'ನಾನು ಹೊರಡುತ್ತೇನೆ, ಈ city ಸರಿ ಇಲ್ಲ'. ನಾನು ಕೇಳಿದೆ, 'ಸರಿ ಇಲ್ಲ ಎಂದರೆ... terrorists?' ಅದಕ್ಕವನು ಅವನು ಹೇಳಿದ, 'not exactly. ಈ ರಾತ್ರಿ ನಾಲ್ಕು ಜನ ತಿರುಗಾಡ್ತಾರೆ ಅಂತ ಊಹೆ ಇದೆ. ನಮ್ಮನ್ನೂ ಕೂಡ target ಮಾಡಿರಬಹುದು'. ನಾನು ಕುಳಿತಲ್ಲೇ ಬೆವತು ಹೋದೆ. ತಕ್ಷಣ ಕೇಳಿದೆ, 'ನಿನ್ನ ಜೊತೆ ಎಷ್ಟು ಜನರಿದ್ದಾರೆ?' 'ನಾನು ಮತ್ತು ನನ್ನ unit ನ ಇನ್ನೊಬ್ಬ officer Captain Apte' ಎಂದ. 'Gun ಇದೆಯಾ?' ಎಂದು ಕೇಳಿದ್ದಕ್ಕೆ 'pistol ಇದೆ ಹುಷಾರ್‍ರ್‍ರ್‍ರ್ ' ಎಂದು ತಮಾಷೆ ಮಾಡಿದ ಮತ್ತು 'ನಾಳೆ ಮಿಜ಼ೋರಮ್ ನಲ್ಲಿ internet ಸಿಗಬಹುದು ಅಲ್ಲಿಂದ ಮತ್ತೆ ಸಿಗುತ್ತೇನೆ, ನಾನು ಆದಷ್ಟು ಬೇಗ ಇಲ್ಲಿಂದ ಹೊರಡುತ್ತೇನೆ, bye' ಎಂದು ಹೇಳಿ ಹೊರಟ.

Logout ಆದ ನಂತರ ಆ ರಾತ್ರಿ ಮುಗಿಯಲಾರದೇನೋ ಎನ್ನುವಷ್ಟು ದೀರ್ಘವಾಗಿತ್ತು. ಕಣ್ಮುಚ್ಚಿಕೊಂಡರೂ ಹೆಸರಿಗೆ ಮಾತ್ರವೂ ನಿದ್ದೆ ಬರಲಿಲ್ಲ. ನಿನ್ನೆ ಇಡೀ ದಿನ ಕಾಯುತ್ತಲೇ ಇದ್ದೆ. ಇಂದೂ ಕೂಡ ಕಾಯುತ್ತಿದ್ದೇನೆ. 'ನೀನೇಕೆ ಕೆಟ್ಟದ್ದನ್ನೇ ಆಲೋಚನೆ ಮಾಡುತ್ತೀಯಾ ಬಹುಶಃ ಅವನಿಗೆ internet ಸಿಕ್ಕಿರಲಿಕ್ಕಿಲ್ಲ' ಎಂದು ನನ್ನ ಗಂಡ ಕೊಟ್ಟ ಭರವಸೆಯನ್ನು ನಂಬಿದ್ದೇನೆ.

ನನಗೆ ಯಾವಾಗಲೂ ಅನಿಸುವುದುಂಟು, ಒಂದು ಕಡೆ ನನ್ನ ತಮ್ಮನೊಬ್ಬನೇ ಅಲ್ಲ, ಅವನಂತೆಯೇ ಸಾವಿರ... ಸಾವಿರ ಸೈನಿಕರು ತಮ್ಮ ಜೀವವನ್ನೂ ಲೆಕ್ಕಿಸದೇ ದೇಶದ ರಕ್ಷಣೆಯಲ್ಲಿ ತೊಡಗಿದ್ದಾರೆ. ಅವರಿಗಾಗಿ ಅವರ ತಂದೆ ತಾಯಂದಿರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಇನ್ನೊಂದು ಕಡೆ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ದೇಶವನ್ನು ಕಿತ್ತು ತಿನ್ನುತ್ತಿದ್ದಾರೆ. ಅಯ್ಯೋ ದೇವರೇ, ನಮ್ಮ ದೇಶದಲ್ಲಿ ಪ್ರಾಮಾಣಿಕತೆ ಏಕೆ ಸತ್ತು ಹೋಗುತ್ತಿದೆ?

ನನಗೆ ಹಿಂದಿ ಭಾಷೆ ಅರ್ಥವಾಗಲು ತೊಡಗಿದಾಗಿನಿಂದ ಲತಾ ಮಂಗೇಶ್ಕರ್ ಅವರು ಹಾಡಿರುವ ए मेरे वतन के लोगों ಹಾಡನ್ನು ಕೇಳಿದಾಗಲೆಲ್ಲಾ ಅಳುತ್ತೇನೆ, ಜನವರಿ 26, ಆಗಷ್ಟ್ 15 ರಂದು ದೂರದರ್ಶನ ತೋರಿಸುವ ಪಥಸಂಚಲನ ನೋಡಿಯೂ ಅಳುತ್ತೇನೆ. ನನಗೆ ಗೊತ್ತು ಮುಂದೂ ಕೂಡ ಅಳುತ್ತೇನೆ.

ನಾವೆಲ್ಲಾ ಸುಖವಾಗಿರುವಂತೆ ನೋಡಿಕೊಳ್ಳುವ ಆ ಅಸಂಖ್ಯಾತ ಸೈನಿಕರನ್ನು ದೇವರು ರಕ್ಷಿಸಲಿ. ದೇಶದ ಹೊರಗಿರುವ ಭಯೋತ್ಪಾದಕರಿಗೆ ಮತ್ತು ದೇಶದ ಒಳಗಡೆ ನಮ್ಮ ನಡುವೆಯೇ ಇದ್ದು ದೇಶವನ್ನು ಕಿತ್ತು ತಿನ್ನುತ್ತಿರುವ ಇರುವ ಭಯೋತ್ಪಾದಕರಿಗೆ ದೇವರು ಸದ್ಬುದ್ಧಿಯನ್ನು ದಯಪಾಲಿಸಲಿ.

ಊರು ಉಪಕಾರ … (ಉತ್ತರ ಕನ್ನಡದ ಗಾದೆ – 67)

ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು.

ಇಲ್ಲಿ ಊರು ಎಂಬುದನ್ನು ಜನರು ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗಿದೆ. ಹೆಣಕ್ಕೆ ಹೇಗೆ ಎಷ್ಟು ಶೃಂಗಾರ ಮಾಡಿದರೂ ಪರಿವೆಯೇ ಇರುವುದಿಲ್ಲವೋ ಹಾಗೆಯೇ ಜನರಿಗೆ ಎಷ್ಟು ಉಪಕಾರ ಮಾಡಿದರೂ ಅವರಿಗೆ ಅದರ ಪರಿವೆಯೇ ಇರುವುದಿಲ್ಲ. ನಮ್ಮಿಂದ ಉಪಕಾರ ಮಾಡಿಸಿಕೊಂಡವರು ನಮಗೆ ಕೃತಘ್ನರಾದಾಗ ಅಥವಾ ಅವರಿಗೆ ನಮ್ಮ ಉಪಕಾರದ ನೆನಪೂ ಕೂಡ ಇಲ್ಲದಂತಾದಾಗ ಈ ಮಾತನ್ನು ಹೇಳಬಹುದು.

November 6, 2007

ಉಂತೇ ಸಾಯುವ … (ಉತ್ತರ ಕನ್ನಡದ ಗಾದೆ – 66)

ಉಂತೇ ಸಾಯುವ ಮುದುಕಿಯನ್ನು ಒನಕೆಯಲ್ಲಿ ಹೊಡೆದು ಕೊಂದಂತೆ.

ಆ ಮುದುಕಿಯನ್ನು ಸುಮ್ಮನೇ ಬಿಟ್ಟಿದ್ದರೂ ಸಧ್ಯದಲ್ಲಿಯೇ ಸತ್ತು ಹೋಗುತ್ತಿದ್ದಳು.
ಆದರೆ ಅವಳನ್ನು ಒನಕೆಯಲ್ಲಿ ಹೊಡೆದು ಕೊಂದು ಹಾಕಿಬಿಟ್ಟರು.

ಯಾವುದಾದರೂ ವಸ್ತು ಹಾಗೇಯೇ ಬಿಟ್ಟಿದ್ದರೂ ಹಾಳಾಗುವುದರಲ್ಲಿತ್ತು.
ಆದರೆ ಅದರ ಮೇಲೆ ಇನ್ನೇನೋ ಪ್ರಯೋಗ ಮಾಡಲು ಹೋಗಿ ಅದು ಬೇಗ ಹಾಳಾದಾಗ ಈ ಗಾದೆಯನ್ನು ಹೇಳುತ್ತಾರೆ.

ನೆಟ್ಟ ಹೂವಿನ ಗಿಡ ಇನ್ನೇನು ಸಾಯುವುದರಲ್ಲಿದೆ ಎಂದಾಗ ನಾನು ಅದರ ಬುಡದಲ್ಲಿ ಗುದ್ದಲಿಯಿಂದ ಕೊಚ್ಚಿ ಗೊಬ್ಬರ ಹಾಕಲು ಹೋಗಿ ಅದು ಇನ್ನೂ ಬೇಗ ಸತ್ತು ಹೋದಾಗ ಅಮ್ಮನ ಹತ್ತಿರ ಹೇಳಿಸಿಕೊಳ್ಳುತ್ತಿದ್ದ ಮಾತು ಇದು!

November 5, 2007

ತಿಥಿ ಮನೆಯಲ್ಲಿ … (ಉತ್ತರ ಕನ್ನಡದ ಗಾದೆ – 65)

ತಿಥಿ ಮನೆಯಲ್ಲಿ ಉಂಡ ಭಟ್ಟ ಹುಲ್ಲು ಗೊಣಬೆಗೆ ಬೆಂಕಿ ಹಾಕಿದ್ದನಂತೆ.

ಗೊಣಬೆ ಅಂದರೆ ಹುಲ್ಲಿನ ಬಣವೆ ಎಂದು ಅರ್ಥ.
ತಿಥಿ ಮನೆಯಲ್ಲಿ ಚೆನ್ನಾಗಿ ಊಟ ಮಾಡಿದ ಭಟ್ಟ ತನಗೆ ಇನ್ನು ಯಾವತ್ತೂ ಊಟ ಬೇಡ, ಎಂದೂ ಹಸಿವಾಗುವುದೇ ಇಲ್ಲ ಎಂದು ತನ್ನ ಮನೆಯ ಹುಲ್ಲಿನ ಬಣವೆಗೆ ಬೆಂಕಿ ಹಾಕಿ ಭತ್ತವನ್ನೆಲ್ಲ ಸುಟ್ಟು ಹಾಕಿದ್ದನಂತೆ.
ಅಂದು ಸಂಜೆ ಹಸಿವಾಗದಿದ್ದರೂ ಮಾರನೆಯ ದಿನ ಎಂದಿನಂತೆ ಹಸಿವಾಯಿತು!

ಯಾರಾದರೂ ಚೆನ್ನಾಗಿ ಊಟ ಮಾಡಿದ ನಂತರ ತನಗೆ ಇನ್ನೆರಡು ಹೊತ್ತು ಊಟ ಬೇಡ ಎಂದು ಅಭಿಪ್ರಾಯಪಟ್ಟಾಗ ಈ ಮಾತನ್ನು ಹೇಳುತ್ತಾರೆ.

November 3, 2007

ತೆರೆ ಕಳೆದು … (ಉತ್ತರ ಕನ್ನಡದ ಗಾದೆ – 64)

ತೆರೆ ಕಳೆದು ಸಮುದ್ರ ಮುಳುಗಿದಂತೆ.

ಆತ ಸಮುದ್ರದಲ್ಲಿ ಮುಳುಗಲೆಂದು ಹೋಗಿದ್ದ.
ತೆರೆ ಬರುತ್ತಿರುವುದನ್ನು ನೋಡಿ, ಇದೊಂದು ತೆರೆ ಕಳೆದು ಮುಳುಗಿದರಾಯಿತು ಎಂದುಕೊಂಡ.
ಆದರೆ ಅಷ್ಟರಲ್ಲಿ ಇನ್ನೊಂದು ತೆರೆ ಬಂದಿತ್ತು.

ಯಾವುದಾದರೂ ದೊಡ್ಡ ಕೆಲಸವನ್ನುಮಾದುವ ತಯಾರಿಯಲ್ಲಿದ್ದಾಗ, ಸಣ್ಣ ಕೆಲಸಗಳು ಒಂದಾದ ನಂತರ ಒಂದರಂತೆ ಅಡ್ಡ ಬಂದು ದೊಡ್ಡ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದಾಗ, ಸಣ್ಣ ಕೆಲಸಗಳಲ್ಲೇ ತೊಡಗಿಕೊಂಡಿರುವಂತಾದಾಗ ಈ ಮಾತನ್ನು ಉಪಯೋಗಿಸುತ್ತಾರೆ.

November 2, 2007

ಕದ ತಿನ್ನುವವನಿಗೆ … (ಉತ್ತರ ಕನ್ನಡದ ಗಾದೆ – 63)

ಕದ ತಿನ್ನುವವನಿಗೆ ಹಪ್ಪಳ ಈಡಾ?

ಅವನು ಬಾಗಿಲನ್ನೇ ತಿಂದು ಮುಗಿಸುತ್ತಾನೆ. ಇನ್ನೂ ಹಪ್ಪಳವಂತೂ ಯಾವ ಲೆಕ್ಕವೂ ಅಲ್ಲ.

ದೊಡ್ಡ ದೊಡ್ಡ ಮೋಸವನ್ನೇ ಮಾಡುತ್ತಿರುವವನಿಗೆ ಸಣ್ಣದು ಯಾವ ಲೆಕ್ಕವೂ ಅಲ್ಲ ಎಂದು ಹೇಳುವ ಮಾತು ಇದು.

November 1, 2007

ಖರ್ಜೂರದ ಹಣ್ಣಾದಾಗ … (ಉತ್ತರ ಕನ್ನಡದ ಗಾದೆ – 61 ಮತ್ತು 62)

ಖರ್ಜೂರದ ಹಣ್ಣಾದಾಗ ಕಾಗೆಯ ಬಾಯಲ್ಲಿ ಹುಣ್ಣು.

ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ ಎಂಬ ಅರ್ಥವನ್ನುಕೊಡುತ್ತದೆ ಈ ಗಾದೆ.
ಖರ್ಜೂರದ ಹಣ್ಣು ಆಗುವ ಸಮಯದಲ್ಲಿ ಕಾಗೆಯ ಬಾಯಲ್ಲಿ ಹುಣ್ಣು ಆಗುತ್ತದೆಯಂತೆ.
ಹಾಗಾಗಿ ಕಾಗೆಗೆ ಖರ್ಜೂರದ ಹಣ್ಣನ್ನು ತಿನ್ನಲು ಆಗುವುದಿಲ್ಲ.

ಯಾವುದಾದರೂ ವಸ್ತು ಸಿಗುವಂತಿದ್ದಾಗ ನಮಗೆ ಅದನ್ನು ತೆಗೆದುಕೊಳ್ಳಲು ಕಷ್ಟ ಅಡ್ಡ ಬಂದರೆ ಈ ಮಾತನ್ನು ಹೇಳಬಹುದು.
ಎಲ್ಲಕ್ಕಿಂತ ಮಿಗಿಲಾಗಿ ಮನೆಯಲ್ಲಿ ವಿಶೇಷ ತಿಂಡಿ ಮಾಡಿದಾಗ ನಾವು ಅನಾರೋಗ್ಯದಿಂದ ಬಳಲಬಹುದು!