August 7, 2012

ನೊಣ ತಿಂದು (ಉತ್ತರ ಕನ್ನಡದ ಗಾದೆ – 255 ಮತ್ತು 256)


ನೊಣ ತಿಂದು ಜಾತಿ ಕೆಟ್ಟಂತೆ.
ಯಾವುದೇ ಮಾಂಸವನ್ನು ತಿಂದರೂ ಜಾತಿ ಕೆಡುತ್ತದೆ. ನೊಣದಂಥ ಕೀಟವನ್ನು ತಿಂದರೂ ಅದು ಮಾಂಸವೇ ಆಗಿರುವುದರಿಂದ ಜಾತಿ ಕೆಟ್ಟೇ ಕೆಡುತ್ತದೆ. ಎಷ್ಟೋ ವರ್ಷಗಳ ಕಾಲ ಜಾತಿಗೆ ಬದ್ಧನಾಗಿ ನಡೆದುಕೊಂಡು ಒಮ್ಮೆ ಅರಿವಿಲ್ಲದೆಯೇ ನೊಣವನ್ನು ತಿಂದು ಜಾತಿ ಕೆಟ್ಟುಹೋಗುತ್ತದೆ. ಅಂದರೆ, ಎಷ್ಟೋ ವರ್ಷ ಸರಿಯಾಗಿ ನಡೆದುಕೊಂಡು ಎಂದಾದರೊಮ್ಮೆ ಅತಿ ಚಿಕ್ಕ ತಪ್ಪಿನಿಂದಾಗಿ reputation ಕೆಡುವಂತಾದರೆ ಈ ಗಾದೆಯನ್ನು ಬಳಸುತ್ತಾರೆ- "ಅಯ್ಯೋ, ನೊಣತಿಂದು ಜಾತಿ ಕೆಟ್ಟಂತಾಯಿತು" ಎಂದು. ಇನ್ನೂ ಕೆಲವೊಮ್ಮೆ, ಸಣ್ಣ-ಪುಟ್ಟ ತಪ್ಪುಗಳಾಗುವ ಬಗ್ಗೆ ಹುಷಾರಾಗಿರೋಣ; ನೊಣ ತಿಂದು ಜಾತಿ ಕೆಡುವುದು ಬೇಡ" ಎಂದೂ ಕೂಡ ಹೇಳುತ್ತಾರೆ.

ಇದೇ ರೀತಿಯಲ್ಲಿ ಬಳಸುವ ಇನ್ನೊಂದು ಗಾದೆ- ಮಾಳಶೆಟ್ಟಿ ಸಾಯುವ ಕಾಲಕ್ಕೆ ಮೀನು ತಿಂದಿದ್ದ. ಶೆಟ್ಟಿಯಾದರೂ ಅವನು ಎಂದೂ ಮೀನು ತಿಂದಿರಲಿಲ್ಲ, ಆದರೆ ಅದೇನಾಯಿತೋ ಗೊತ್ತಿಲ್ಲ- ಸಾಯುವ ಕಡೇ ಕಾಲದಲ್ಲಿ ಮೀನು ತಿಂದುಬಿಟ್ಟಿದ್ದ!

July 9, 2012

ಬಾಳೇಕಾಯಿ ಕಸ


ನಮ್ಮೂರು ಶಿರಸಿಯಿಂದ ಬೆಂಗಳೂರಿಗೆ ಮಗನ ಮನೆಗೆ ಅಪ್ಪ ಬಂದಿದ್ದರು. ರಾತ್ರಿ ಅವರ ಕಾಲಿಗೆ ಬಾಳೇಕಾಯಿ ಕಸ ಬಂತು. ಕಸ ಬರುವುದು ಎಂದರೆ ಸ್ನಾಯುಸೆಳೆತ ಉಂಟಾಗುವುದು ಎಂದರ್ಥ. ಅದನ್ನು ಕಸ ಎಂದು ಯಾಕೆ ಕರೆಯುತ್ತಾರೆ ಎನ್ನುವುದು ನನಗೂ ಗೊತ್ತಿಲ್ಲ. ಕೆಲವೊಮ್ಮೆ ದೇಹದ ಯಾವುದಾದರೂ ಭಾಗದಲ್ಲಿ ತೀವ್ರವಾದ ಸ್ನಾಯುಸೆಳೆತ ಉಂಟಾದರೆ ಆ ಭಾಗದ ಸ್ನಾಯುಗಳು ಒಂದು ಬಾಳೆಕಾಯಿಯಷ್ಟು ದೊಡ್ಡದಾಗಿ ಉಬ್ಬಿಕೊಂಡುಬಿಡುತ್ತವೆ. ನೋಡಲು ಒಂದು ಸಣ್ಣ ಬಾಳೆಕಾಯಿ ಅಂಟಿಕೊಂಡಿರುವಂತೆ ಕಾಣಿಸುತ್ತದೆ. ಆ ರೀತಿ ಆಗುವುದನ್ನು ಬಾಳೇಕಾಯಿ ಕಸ ಬರುವುದು ಎನ್ನುತಾರೆ. ಇನ್ನೂ ಕೆಲವರು ಬಾಳೇಕಾಯಿ ಬಂದಿದೆ ಎಂದಷ್ಟೇ ಹೇಳುವುದೂ ಉಂಟು. ವಯಸ್ಸಾದಮೇಲೆ ಸ್ನಾಯುಗಳು ಬಲಹೀನವಾದಮೇಲೆ ಇದು ಪದೇಪದೇ ಬರುವುದುಂಟು. ಆ ರೀತಿ ಬಾಳೇಕಾಯಿ ಬಂದಾಗ ಉಂಟಾಗುವ ನೋವು ಅತ್ಯಂತ ತೀವ್ರ ತರದ್ದು; ಸಾಮಾನ್ಯದ ನೋವುನಿವಾರಕಗಳಿಗೆ ಕಡಿಮೆಯಾಗುವುದಿಲ್ಲ.

ಆ ರೀತಿ ಬಾಳೇಕಾಯಿ ಬಂದು ರಾತ್ರಿಯಿಡೀ ಗೋಳಾಡಿಡ ಅಪ್ಪನನ್ನು ಮರುದಿನ ಮಗ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದ. ಡಾಕ್ಟರು ಏನಾಯಿತು?” ಎಂದರು. ಮಗ ಬಾಯಿಬಿಡುವಷ್ಟರಲ್ಲಿ ಅಪ್ಪ, ಡಾಕ್ಟ್ರೇ, ಯಂತಾ ಮಾಡದು... ನಿನ್ನೆ ರಾತ್ರೆ ಬಾಳೇಕಾಯಿ ಬಂದು.... ವಂದೇಸಮ ಜಗ್ತಾ... ಶಳ್ತಾ ಅಂದ್ರೇ... ರಾತ್ರಿಡೀ ನಿದ್ದಿಲ್ಲಾಳಿ, ಗುಳ್ಗೆ ತಗಂಡ್ರೂ ಬಗ್ಲಿಲ್ಲಾ.... ನಾ ಇಲ್ದೋದ್ರೆ ಊರಲ್ಲೆಲ್ಲಾ ಇದ್ದಾಗ ಈ ಗುಳ್ಗೆ ಗಿಳ್ಗೆ ಯಲ್ಲಾ ತಗಳದಿಲ್ಲಾ ಹೇಳಿ. ನಮ್ದೆಂತಾ ಇದ್ರೂ ತೈಲ ಹಚ್ಚಿ ತಿಕ್ಕದೇಯಾ. ಇಲ್ ಬಂದ್ಕಂಡು ಯಂತಾರೂ ಪರಾಮಶಿ ಆಗದು ಬ್ಯಾಡಾ ಹೇಳಿ... ಇದೆ ಇಂವ ಕೊಟ್ಟ ಗುಳ್ಗೆ ತಗಂಡೆ.  ಮುಂದೆ ನಾನು ಹೇಳಬೇಕಾಗಿಲ್ಲ. ಡಾಕ್ಟರು ಕಣ್ಣು ಕಣ್ಣು ಬಿಟ್ಟರು, ಅರ್ಥವಾಗಲಿಲ್ಲ. ಅಪ್ಪ ಮುಂದುವರಿಸಬೇಕೆನ್ನುವಷ್ಟರಲ್ಲಿ ಮಗ ಅವನನ್ನು ತಡೆದು, ಕನ್ನಡವನ್ನು ಕನ್ನಡಕ್ಕೆ “translate” ಮಾಡಿ, ಡಾಕ್ಟರಿಗೆ ಅರ್ಥವಾಗುವ ಕನ್ನಡದಲ್ಲಿ ಹೇಳಿದ, ನಿನ್ನೆ ರಾತ್ರಿ ಅವರಿಗೆ muscle catch ಆಗಿ, ತುಂಬಾ pain ಆಯ್ತು. Pain killer tablet ಮತ್ತೆ spray ನಲ್ಲಿ ಕೂಡ ಕಡಿಮೆಯಾಗಲಿಲ್ಲ. ಅದಕ್ಕೆ ತಮ್ಮ ಹತ್ತಿರ....

ಉತ್ತರ ಕನ್ನಡದಲ್ಲಿ, ಅದರಲ್ಲೂ ವಿಶೇಷವಾಗಿ ಹವ್ಯಕರಲ್ಲಿ ಅನೇಕ ರೀತಿಯ ವಿಚಿತ್ರವಾದ ಪದಗಳಿವೆ. ಇತರರಿಗೆ ಅವುಗಳನ್ನು ಮೊದಲಬಾರಿಗೆ ಕೇಳಿದರೆ ಅರ್ಥವೇ ಆಗುವುದಿಲ್ಲ. ಉದಾಹರಣೆಗೆ, ಪರಾಮಶಿ ಎಂದರೆ ಅತಿಸಣ್ಣ ಪ್ರಮಾಣದ ಅನಾಹುತ. ಕಪ್ಪು ಎಂದರೆ ಚುಚ್ಚು. ಮುಳ್ಳು ಕಪ್ಪಿತು ಎಂದರೆ ಮುಳ್ಳು ಚುಚ್ಚಿತು ಎಂದರ್ಥ. ಹರುಕು ಅಥವಾ ಗಿಬುರು ಎಂಬುದರ ಅರ್ಥ ಪರಚು’. ಬೆಕ್ಕು ಪರಚಿತು ಎನ್ನುವುದನ್ನು ಬೆಕ್ಕು ಹರುಕಿತು ಅಥವಾ ಬೆಕ್ಕು ಗಿಬುರಿತು ಎಂದು ಹೇಳುತ್ತಾರೆ. ಅರಚು ಅಥವಾ ಅರ್ಚು’- ಯಾವುದಾದರೂ ಎರಡು ವಸ್ತುಗಳ ನಡುವೆ ಸಿಕ್ಕುಬಿದ್ದು ಪೆಟ್ಟಾಗುವುದು ಉದಾ: ಬಾಗಿಲಿಗೆ ಸಿಕ್ಕಿ ಕೈಬೆರಳು ಅರ್ಚಿ ಹೋಯಿತು”.    

ಅದೆಲ್ಲಾ ಹೊಗಲಿ, ನೋವಾಗುತ್ತಿದೆ ಎನ್ನುವುದನ್ನು ಉತ್ತರ ಕನ್ನಡದ ಜನರು ಎಷ್ಟೆಲ್ಲಾ ಶಬ್ದಗಳನ್ನು ಬಳಸಿ ಹೇಳುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನೋಯ್ತು, ಶಳಿತು, ವಡಿತು, ಜಗಿತು, ಘಮಿತು, ಭುಗುಭುಗು ಗುಡ್ತು ಹೀಗೇ ಇನ್ನೂ ಹಲವಾರು. But each term corresponds to a different type of pain or sensation or sometimes to a pain in different parts of the body. ವಿವರಿಸುವುದು ಅತ್ಯಂತ ಕಷ್ಟ. ಅದು ಅಲ್ಲೇ ಹುಟ್ಟಿ ಬೆಳೆದವರಿಗೆ ಮಾತ್ರ ಗೊತ್ತಾಗಬಹುದೇನೊ! ಉದಾಹರಣೆಗೆ,

ನೋವು: ಸಾಮಾನ್ಯವಾಗಿ ಎಲ್ಲರೂ ಹೇಳುವಂಥದು. ದೇಹದ ಯಾವುದೇ ಭಾಗಕ್ಕೆ ಗಾಯವಾಗದೇ ಪೆಟ್ಟಾದಾಗ ಆಗುವಂಥದು. ಆದರೆ ಪೆಟ್ಟಾಗದೇ ಬಂದಂಥ ನೋವೂ ಕೂಡ ಇರಬಹುದು. ಉದಾ: ತಲೆ, ಬೆನ್ನು, ಸೊಂಟ, ಕಾಲು, ಕೈ ನೋವು.

ಸೆಳೆತ (ಶಳ್ತ): ಒಂದು ಭಾಗವನ್ನು ಎಲ್ಲಾ ಕಡೆಯಿಂದ ಎಳೆದಂತಾಗುವ ನೋವು. ಊತುಕೊಂಡು ನೋವಾಗುವುದು, ಜಜ್ಜಿದಂತಾಗಿ ನೋವಾಗುವುದು ಕೂಡ ಸೆಳೆತದಲ್ಲಿ ಸೇರಿಕೊಳ್ಳುತ್ತವೆ. ಉದಾ: ಬಾಗಿಲಿಗೆ ಸಿಕ್ಕಿ ಅರ್ಚಿಹೋದ ಕೈಬೆರಳು ಸೆಳೆಯುತ್ತದೆ (ಶಳಿಯುತ್ತದೆ).

ವಡೆತ (ವಡ್ತ): ಖುರುವಿನಂತ ಹುಣ್ಣಾದಾಗ ನೋಯುವ ಪರಿ. ಈ ಶಳ್ತ-ವಡ್ತಗಳನ್ನು ಬಹಳಷ್ಟು ಸಲ ಜೊತೆಯಾಗಿ ಉಪಯೋಗಿಸುತ್ತಾರೆಶಳ್ತಾs-ವಡ್ತಾs ಎಂದು. ತಲೆ ಒಂದೇ ಸಮ ಹೊಡೆದುಕೊಳ್ಳುತ್ತಿದೆ ಎನ್ನುವುದಕ್ಕೂ ಕೂಡ ಉಪಯೋಗಿಸುತ್ತಾರೆ, ‘ತಲೆವಡ್ತ ಎಂದು! ಎಷ್ಟೋ ಸಲ ಸೆಳೆತ ಮತ್ತು ವಡೆತಗಳನ್ನು ಬದಲಿಯಾಗಿ ಉಪಯೋಗಿಸುತ್ತಾರೆ. ಆದರೆ ತಲೆವಡ್ತದ ಬದಲುತಲೆಶಳ್ತ ಎಂದರೆ ನಗೆಪಾಟಲಿಗೆ ಗುರಿಯಾಗುತ್ತೀರಿ. ಏಕೆಂದರೆ ಅದು ಬಳಕೆಯಲ್ಲಿಲ್ಲ! 

ಜಗಿತ (ಜಗ್ತ): ಇಕ್ಕಳವನ್ನು ಹಾಕಿ ಒತ್ತಿ-ಬಿಟ್ಟು ಮಾಡಿದರೆ ಆಗುವಂಥ ನೋವು. ಬಹುತೇಕ ಕಾಲು, ಕೈಗಳ ನೋವನ್ನು ಹೇಳುವಾಗ ಉಪಯೋಗಿಸುತ್ತಾರೆ- ಕಾಲು ಜಗಿಯುತ್ತಿದೆ ಎಂದು. ನೆನಪಿರಲಿ, ತಲೆ ಜಗಿಯುತ್ತಿದೆ ಎಂದು ಮಾತ್ರ ಯಾರೂ ಹೇಳುವುದಿಲ್ಲ!

ಘಮಿತ: ಖಾರದ ಪದಾರ್ಥ ತಾಕಿದಾಗ ಆಗುವ ಅನುಭವ. ಉದಾ: ಮೆಣಸಿನ ಪುಡಿ ಮುಟ್ಟಿದ್ದರಿಂದ ಕೈ ಘಮಿಯುತ್ತಿದೆ.

ಭುಗುಭುಗು ಗುಡು: ಸಾಮಾನ್ಯವಾಗಿ ಅಂಗಾಲಿನಲ್ಲಿ ಉಂಟಾಗುವ ಅನುಭವಕ್ಕೆ ಬಳಸುವಂಥದ್ದು. ಬೆಂಕಿಯ ಉರಿ ತಾಕಿದಾಗ ಆಗುವಂಥ ಅನುಭವ. ಉದಾ: ಬಿಸಿಲಿನಲ್ಲಿ ತುಂಬಾ ನಡೆದಿದ್ದರಿಂದ ಅಂಗಾಲು ಭುಗುಭುಗು ಗುಡುತ್ತಿದೆ”. ಬಿಸಿ ತಾಕಿ ಸುಟ್ಟ ಉರಿಯನ್ನೂ ಕೂಡ ಹೀಗೆ ಹೇಳಬಹುದು.

ಇಷ್ಟೆಲ್ಲಾ ವಿವರಿಸಿದ ಮೇಲೆಯೂ ಎಲ್ಲವನ್ನೂ ಹೇಳಿದ್ದೇನೆ ಎನ್ನುವ ಭರವಸೆಯಿಲ್ಲ. ಇನ್ನೂ ಹಲವಾರು ನೋವಿಗೆ ಸಂಭಂದಿಸಿದ ಶಬ್ದಗಳು ಉಳಿದುಹೋಗಿರಬಹುದು. ನೋವನ್ನು ಇಷ್ಟೆಲ್ಲಾ ಬಗೆಯಲ್ಲಿ ಬಣ್ಣಿಸಬಹುದು, ಮತ್ತು ನೋವಿನಲ್ಲಿರುವ ಆ ಸಣ್ಣ-ಪುಟ್ಟ ವ್ಯತ್ಯಾಸಗಳನ್ನೂ ಕೂಡ differentiate ಮಾಡಬಹುದು ಎಂಬುದನ್ನು ವಿಚಾರ ಮಾಡಿದರೆ ಆಶ್ಚರ್ಯವಾಗುತ್ತದೆ!  

June 26, 2012

ಕಣ್ಣು ಹೆದರಿಸಿತ್ತು (ಉತ್ತರ ಕನ್ನಡದ ಗಾದೆ – 254)

ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು.
ಇದೆಂಥ ಸುಂದರ ಗಾದೆ ಗೊತ್ತಾ? ನನ್ನ ಅತ್ಯಂತ ಪ್ರೀತಿಯ ಗಾದೆಗಳಲ್ಲೊಂದು. ಈ ಗಾದೆಯನ್ನು ನಾನು ಮೊಟ್ಟಮೊದಲ ಬಾರಿ ಕೇಳಿದ್ದು ಚಿಕ್ಕವಳಿದ್ದಾಗ ಗದ್ದೆನಾಟಿಯ ಸಮಯದಲ್ಲಿ. ಗದ್ದೆನಾಟಿ ಮಾಡುವಾಗ ಭತ್ತದ ಸಸಿಯನ್ನು ನೆಡುತ್ತಾ ಹಿಮ್ಮುಖವಾಗಿ ಹೋಗುತ್ತಿರುತ್ತಾರೆ. ಒಂದು ಗದ್ದೆಯನ್ನು ಪ್ರಾರಂಭಿಸಿದಾಗ ಹಿಂದಿರುಗಿ ನೋಡಿದರೆ ಅದು ಮುಗಿಯುವುದೇ ಇಲ್ಲ ಎನ್ನುವಷ್ಟು ದೂರವಾಗಿ ಕಾಣಿಸುತ್ತದೆ. ಆಗ ನಾಟಿ ಮಾಡುತ್ತಿರುವವರಿಗೆ Negative feelings ಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ ನಾಟಿಯ ಸಮಯದಲ್ಲಿ ಅಲ್ಲಿರುವ ಹಿರಿಯರು ಕಿರಿಯರಿಗೆ ಹಿಂದಿರುಗಿ ನೋಡಲು ಬಿಡುವುದಿಲ್ಲ. ಒಂದು ಸಲ ಯಾರೋ ಹಿಂದಿರುಗಿ ನೋಡಿ ಇದೇನು ಮುಗಿಯುವ ರೀತಿಯೇ ಕಾಣಿಸುತ್ತಿಲ್ಲವಲ್ಲ? ಎಂದಾಗ ಅಲ್ಲಿರುವ ಹಿರಿಯರು ಯಾರೋ ಹೀಗೆ ಹೇಳಿದ್ದರು, ಸುಮ್ಮನಿರು, ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು. ನಿಜ, ಕಣ್ಣಳತೆ ಯಾವತ್ತೂ ಬೆಚ್ಚಿಬೀಳಿಸುತ್ತದೆ. ಅಯ್ಯೋ ಇಷ್ಟೆಲ್ಲಾ ಕೆಲಸವನ್ನು ಮುಗಿಸುವುದು ಹೇಗಪ್ಪಾ? ಎನ್ನುವ ಭಾವನೆಯನ್ನು ಹುಟ್ಟಿಸುತ್ತದೆ. ಆದರೆ ಕೆಲಸವನ್ನು ಪ್ರಾರಂಬಿಸಿದರೆ ಅದು ತಾನಾಗಿಯೇ ಮುಗಿಯುತ್ತಾ ಬರುತ್ತದೆ. A journey of thousand miles begins with a single step! ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಬರೆಯಲಿಕ್ಕಿರುವ ಪುಟಗಳ ಸಂಖ್ಯೆಯನ್ನು ನೋಡಿ ಭಯಬಿದ್ದು ನನಗೇ ನಾನು ಹೇಳಿಕೊಳ್ಳುತ್ತಿದ್ದೆ- ಇಲ್ಲ.. ಇಲ್ಲ, ಬರೆಯುತ್ತಾ ಹೋದಂತೆ ಗೊತ್ತೇ ಆಗದಂತೆ ಮುಗಿದುಹೋಗುತ್ತದೆ; ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು ಎಂದು. ಇಂದೂ ಕೂಡ ಎಷ್ಟೊಂದು ಬಾರಿ ನನಗೇ ನಾನು ಈ ಮಾತನ್ನು ಹೇಳಿಕೊಳ್ಳುತ್ತೇನೆ; ಕೆಲಸ ಮಾಡುವ ಉತ್ಸಾಹ ಬರುತ್ತದೆ. 

June 21, 2012

ಉಣ್ಣಲಿಕ್ಕೆ ಇಲ್ಲದಿದ್ದರೆ (ಉತ್ತರ ಕನ್ನಡದ ಗಾದೆ – 253)

ಉಣ್ಣಲಿಕ್ಕೆ ಇಲ್ಲದಿದ್ದರೆ ಸಣ್ಣಕ್ಕಿ ಅನ್ನ, ಉಡಲಿಕ್ಕೆ ಇಲ್ಲದಿದ್ದರೆ ಪಟ್ಟೆ ಸೀರೆ.
ನಿಜವಾಗಿ ಈ ಗಾದೆ "ಉಣ್ಣಲಿಕ್ಕೆ ಇಲ್ಲದಿದ್ದರೂ ಸಣ್ಣಕ್ಕಿ  ಅನ್ನ, ಉಡಲಿಕ್ಕೆ ಇಲ್ಲದಿದ್ದರೂ ಪಟ್ಟೆ ಸೀರೆ" ಎಂದಾಗಬೇಕು. ಆದರೆ ಆಡು ಭಾಷೆಯಲ್ಲಿ  ಇಲ್ಲದಿದ್ದರೂ ಎನ್ನುವುದು ಇಲ್ಲದಿದ್ದರೆ ಎಂದು ಮಾರ್ಪಾಟಾಗಿದೆ. ತಮ್ಮ ಹಣಕಾಸಿನ ಮಿತಿಯನ್ನು ಅರಿತುಕೊಳ್ಳದೇ ಖರ್ಚು ಮಾಡುವವರನ್ನು ನೋಡಿದಾಗ ಹೇಳುವ ಮಾತು ಇದು. ಮನೆಯಲ್ಲಿ ಅಕ್ಕಿಗೆ ಗತಿಯಿಲ್ಲದಿದ್ದರೂ ಹೇಗಾದರೂ ಸಣ್ಣಕ್ಕಿ ತಂದು ಊಟಮಾಡುತ್ತಾರೆ, ಬಟ್ಟೆಗೆ ಗತಿಯಿಲ್ಲದಿದ್ದರೂ ರೇಷ್ಮೆಸೀರೆಯನ್ನೇ ಉಡುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ  ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಇನ್ನೊಂದು ಗಾದೆ ಇದೇ ರೀತಿಯ ಅರ್ಥವನ್ನು ಕೊಡುತ್ತದೆ. ನೋಡಿ- http://seemahegde78.blogspot.nl/2008/02/163-164.html

February 6, 2012

ಡಾಕ್ಟರ ಹೆಂಡತಿ (ಉತ್ತರ ಕನ್ನಡದ ಗಾದೆ – 252)

ಡಾಕ್ಟರ ಹೆಂಡತಿ ಹುಳಿಸಿಕೊಂಡು ಸಾಯುತ್ತಾಳೆ.
'ಹುಳಿಸಿಕೊಂಡು' ಎಂದರೆ 'ಹುಳುವಾಗಿಸಿಕೊಂಡು' ಅಂದರೆ... 'ಹುಳುವನ್ನು ದೇಹದಲ್ಲಿ ಹೊಂದಿರು' ಎಂದರ್ಥ. ದನ-ಕರುಗಳಿಗೆ ಗಾಯಗಳಾಗಿ ಕೆಲವೊಮ್ಮೆ ಅದರಲ್ಲಿ ಹುಳುಗಳಾಗುತ್ತವೆ. ಆಗ ಹೇಳುವುದುಂಟು- "ದನ ಹುಳಿಸಿಕೊಂಡಿದೆ" ಎಂದು.

ಡಾಕ್ಟರಿಗೆ ಬೇರೆ ರೋಗಿಗಳನ್ನು ನೋಡಿ ಮುಗಿಸುವಷ್ಟರಲ್ಲೇ ಸಾಕು ಸಾಕಾಗಿರುತ್ತದೆ. ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೂ ನೋಡಲು ಪುರಸೊತ್ತಿಲ್ಲ. ಹೆಂಡತಿಗೆ ಚಿಕ್ಕ ಗಾಯವಾದರೆ, "ಚಿಕ್ಕ ಗಾಯ ಬಿಡು, ಹೋಗುತ್ತದೆ" ಎಂದು ಉಪೇಕ್ಷಿಸುತ್ತಾನೆ. ಅದೇ ಗಾಯ ದೊಡ್ಡದಾಗುತ್ತದೆ, ಅದರಲ್ಲಿ ಹುಳುಗಳಾಗುತ್ತವೆ, ಆದರೂ ನೋಡಲು ಡಾಕ್ಟರಿಗೆ ಬಿಡುವಿಲ್ಲ. ಹುಳುಗಳನ್ನು ಹೊಂದಿದ ಗಾಯ ಹೆಂಡತಿಯ ಸಾವಿಗೂ ಕಾರಣವಾಗಬಹುದು. ಊರಿಗೆಲ್ಲ ಮದ್ದು ನೀಡುವ ಡಾಕ್ಟರು ಮನೆಯ ಜನರ ಆರೋಗ್ಯವನ್ನು ಉಪೇಕ್ಷಿಸಿದಾಗ ಬೇಸರದಿಂದ ಹೇಳುವ ಮಾತು ಇದು. ಇಂಥದೇ ಒಂದು ಗಾದೆಯನ್ನು ಈ ಹಿಂದೆ ಹಾಕಿದ್ದೇನೆ ನೋಡಿ- http://seemahegde78.blogspot.in/2008/10/199.html

ಕುಂಬಾರನ ಮನೆಯ ಮಡಿಕೆ ತೂತು ಮತ್ತು ನೇಕಾರನ ಹೆಂಡತಿಗೆ ಹರುಕಲು ಸೀರೆ ಎನ್ನುವ ಗಾದೆಗಳಂತೆಯೇ ಡಾಕ್ಟರ ಹೆಂಡತಿಯ ಗಾದೆಯೂ ಕೂಡ.   

January 25, 2012

ಇವು ನನ್ನನ್ನು ನಗಿಸಿದವು!


ಕೆಲವು ಬರಹಗಳು ಎಷ್ಟು funny ಆಗಿರುತ್ತವೆಂದರೆ ನಗದಿರಲು ಸಾಧ್ಯವೇ ಇಲ್ಲ. Stressful ಜೀವನದಲ್ಲಿ ಇವು ಮನಸ್ಸಿಗೆ ಮುದ ಕೊಡುವುದಂತೂ ನಿಜ. 





ನಾಗವಾರದ ಬಳಿ ring road  ಪಕ್ಕದಲ್ಲಿ ಕಂಡಿದ್ದು. photo ಚಲಿಸುತ್ತಿದ್ದ bus ನಲ್ಲಿ ಕುಳಿತಿದ್ದ ನಾನು cell phone ನಿಂದ ತೆಗೆದಿದ್ದರಿಂದ ಅಷ್ಟೊಂದು clear ಇಲ್ಲ. ಅಲ್ಲಿ ಬರೆದಿರುವುದು 'ಓಲ್ಡ್ ಬಿಲಿಂಡ್ಗ್ ಡೆಮಲೀಶನ್ ಕಂಟ್ರೆಕರ್ಸ್'. ಕೆಳಗಡೆ ಇಂಗ್ಲಿಷ್ ನಲ್ಲಿ ಬರೆದಿತ್ತು- ‘Old Building Demolition Contractors’. ಇದನ್ನು ನೋಡಿದ ಒಂದೆರಡು ತಿಂಗಳುಗಳ ನಂತರ ಮತ್ತೊಮ್ಮೆ ಅಲ್ಲಿ ಹೋದಾಗ board ಕಾಣಿಸಲಿಲ್ಲ, ಮುರಿದು ಬಿದ್ದಿತ್ತು. ಆ board ಇದ್ದ building demolish ಆಗಿ ಹೋಗಿದೆ! 



ರಸ್ತೆ ಕಿರಿದಿದೆಯೋ? ಕಿರಿದಾಗಿದೆಯೋ?- ಶಿರಸಿಯಿಂದ ಕುಮಟಾಕ್ಕೆ ಹೋಗುವಾಗ ದೇವಿಮನೆ ಘಟ್ಟ ಮುಗಿದ ನಂತರ ಕಂಡಿದ್ದು.  


ಇದು ಬೆಂಗಳೂರಿನಲ್ಲಿ ಎಲ್ಲಿ ಬೇಕಾದಲ್ಲಿ ಕಾಣಸಿಗುತ್ತದೆ. ಇದನ್ನು ಬರೆದವರು 'ಮಧ್ಯ'ಪಾನ (ಮದ್ಯಪಾನ) ಮಾಡಿಕೊಂಡೇ ಬರೆದಿರಬಹುದೇ?


ಮೈಸೂರಿನಲ್ಲಿ 'Nirmala Convent (Nirmalacon) ನಿಂದ L&T' ವರೆಗೆ ಎಂಬುದು ಕನ್ನಡದಲ್ಲಿ 'ಕಹಜಕ ದಿಂದ ಹಜಕಲಜಹ' ವರೆಗೆ ಎಂದಾಗುತ್ತದೆಯೆ?


Pregnancy test ಮಾಡಿಸಿದ ನಂತರ silent ಆಗಿರಬೇಕೇ? ಗಂಗಾನಗರದ 5th main ನಲ್ಲಿ ನಡು ರಸ್ತೆಯಲ್ಲಿ ಇದು ನನ್ನನ್ನು ನಗಿಸಿತ್ತು!

January 18, 2012

ಬಡಿ ಗೋವಿಗೇಕೆ (ಉತ್ತರ ಕನ್ನಡದ ಗಾದೆ – 251)


ಬಡಿ ಗೋವಿಗೇಕೆ ಧರೆಯಂಚಿನ ಹುಲ್ಲು?
'ಬಡಿ' ಎಂಬ ಪದ 'ಬಡವ' ಎಂಬ ಅರ್ಥವನ್ನು ಕೊಡುತ್ತದೆ. ಆರ್ಥಿಕವಾಗಿ ಬಡವ ಎಂದಲ್ಲ, ಆದರೆ 'ಅಯ್ಯೋ ಪಾಪ' ಎಂಬ ಅರ್ಥ. 'ಬಡವ' ಎಂಬುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂದರ್ಭಿಕವಾಗಿ ಬಳಸಲ್ಪಡುತ್ತದೆ. ಕೆಲವೊಮ್ಮೆ ಆರ್ಥಿಕವಾಗಿ ಬಡವ ಎಂಬುದನ್ನು ಸೂಚಿಸಿದರೆ, ಮತ್ತೊಮ್ಮೆ ಬಡಪಾಯಿ, ಪಾಪದವ ಎಂಬುದನ್ನು ಸೂಚಿಸುತ್ತದೆ. 'ಬಡಿ' ಎಂಬ ಶಬ್ದ ಇನ್ನೂ ಕೆಲವೊಮ್ಮೆ ಕೃಷ ಶರೀರವನ್ನು ಸೂಚಿಸುತ್ತದೆ. ಎಲ್ಲವೂ ಸಂದರ್ಭಕ್ಕೆ ತಕ್ಕಂತೆ ಬಳಸಲ್ಪಡುತ್ತವೆ.

ಧರೆ ಎಂದರೇನು ಎಂಬುದನ್ನು ವಿವರಿಸುವುದು ಕಷ್ಟ. ಭೂಮಿಯ ಕಡಿದಾದ ಭಾಗ ಎನ್ನಬಹುದು. ಒಂದು ಕಡೆ ಕಡಿದಾಗಿದ್ದರೆ ಇನ್ನೊಂದು ಕಡೆಯಿಂದ ಅದರ ತುದಿಯವರೆಗೆ ಹೋಗಬಹುದಾಗಿರುತ್ತದೆ. ಈ ಕೆಳಗಿನ photos ನೋಡಿ. 
ಈ ಗಾದೆಯಲ್ಲಿ ಬಡಿ ಗೋವು ಎಂದರೆ, ಪಾಪದ ಗೋವು ಅಥವಾ ಮೈಯಲ್ಲಿ ಹೆಚ್ಚು ಶಕ್ತಿ ಇಲ್ಲದ ಗೋವು ಎಂದರ್ಥ. ಅಂಥ ಗೋವು ಧರೆಯಂಚಿನ ಹುಲ್ಲಿಗೆ ಆಸೆಪಟ್ಟು ಅಲ್ಲಿಗೆ ಹೋದರೆ ಬಿದ್ದು ಹೋಗುವ ಸಂಭವ ಜಾಸ್ತಿ. ಬಡಪಾಯಿಯಾದ ವ್ಯಕ್ತಿಯು ತನ್ನ ಶಕ್ತಿಗೂ ಮೀರಿದಂಥ ಕೆಲಸಕ್ಕೆ ಕೈಹಾಕಿ ತನ್ನನ್ನು ತಾನು ಕಷ್ಟದಲ್ಲಿ ಸಿಕ್ಕಿಸಿಕೊಳ್ಳುವಂಥ ಸಂದರ್ಭದಲ್ಲಿ ಈ ಗಾದೆಯನ್ನು ಹೇಳಬಹುದು.

ನಮ್ಮ ಮನೆಯ ಎರಡು ನಾಯಿಗಳಲ್ಲಿ ಮೋಗ್ಲಿ ಭಯಂಕರ ಗಾತ್ರದ Doberman ನಾಯಿ; ಇನ್ನೊಂದು ದೇಸಿ ತಳಿಯ ಸಣ್ಣ ನಾಯಿ ಚೋಟು. ಆ ಚೋಟು ಒಮ್ಮೆ ಮೋಗ್ಲಿ ಆಚೆ ಎಲ್ಲೋ ಇರುವಾಗ ಅವನ ಅನ್ನದ ಪಾತ್ರೆಗೆ ಬಾಯಿ ಹಾಕಲು ಹೊರಟಿದ್ದನ್ನು ನೋಡಿದ ಅಮ್ಮ ಹೇಳಿದ್ದರು- "ಸುಮ್ಮನಿರು ಚೋಟು, ಬಡಿ ಗೋವಿಗೇಕೆ ಧರೆಯಂಚಿನ ಹುಲ್ಲು? ಮೋಗ್ಲಿ ಈಗ ನೋಡಿದರೆ ನಿನ್ನನ್ನು ಕಚ್ಚಿ ಸಾಯಿಸುತ್ತಾನೆ ನೋಡು" ಆಗಲೇ ನಾನು ಈ ಗಾದೆಯನ್ನು ಮೊದಲ ಬಾರಿಗೆ ಕೇಳಿದ್ದು. 

January 4, 2012

ಅಪ್ಪನ ಕನ್ನಡಕ

ಅಪ್ಪನಿಗೆ ಈಗ ಅರವತ್ಮೂರನೆಯ ವರ್ಷ ನಡೆಯುತ್ತಿದೆ. ಚಾಳೀಸು ಬಂದು ಇಪ್ಪತ್ತೆರಡು ವರ್ಷಗಳಾದವು. ಕಣ್ಣಿಗೆ bifocals ಬಂದು ಎಷ್ಟೋ ವರ್ಷಗಳ ತನಕ ಅಪ್ಪ ಕನ್ನಡಕ ಇಲ್ಲದೆಯೇ ಕಳೆದಿದ್ದ. ದಿನಪತ್ರಿಕೆ ಓದುವಾಗ ಒಮ್ಮೆ ಹತ್ತಿರ ಹಿಡಿದು, ಒಮ್ಮೆ ದೂರ ಹಿಡಿದು, ಯಾವ್ಯಾವುದೋ angle ನಲ್ಲಿ ಹಿಡಿದು ಓದುತ್ತಿದ್ದ. ಅಮ್ಮನ ಕಿರಿಕಿರಿ, ಬೈಗುಳಗಳ ಫಲವಾಗಿ ಅಂತೂ ಕೊನೆಗೆ ಕಣ್ಣಿನ doctor ಬಳಿ ಹೋದ; ಅದರ ಫಲವಾಗಿ ಮೂಗಿನ ಮೇಲೆ ಚಾಳೀಸು ವಿಜ್ರಂಭಿಸಿತು! ಅವನೇ ಆರಿಸಿಕೊಂಡು ತಂದ ದಪ್ಪ frame ನ ಕನ್ನಡಕ. ಅದರ frame ಮತ್ತು glass ಅವನ ಮುಖಕ್ಕೆ ದೊಡ್ದದೆನಿಸುತ್ತಿದ್ದುದರಿಂದ ನಾನು ಮತ್ತು ರಘು "ಲಾರಿಯ windshield" ಎಂದು tease ಮಾಡುತ್ತಿದ್ದೆವು. ಅದನ್ನು ಬದಲಾಯಿಸು ಎಂದು ದುಂಬಾಲು ಬೀಳುತ್ತಿದ್ದೆವು. ಆಗೆಲ್ಲ ಅಪ್ಪ, "ಸುಮ್ಮನಿರಿ, ಬದಲಾಯಿಸಬೇಕಂತೆ; ನೂರಾ ಐವತ್ತು ರೂಪಾಯಿ ಅದಕ್ಕೆ" ಎಂದು ಗದರಿದ್ದ. ಆ ಕನ್ನಡಕ ಹೇಗಾದರೂ ಮುರಿದು ಹೋಗಲಿ ಆವಾಗಲಾದರೂ ಅಪ್ಪ ಹೊಸದನ್ನು ಕೊಳ್ಳುತ್ತಾನೆ ಎಂದು ಆಶಿಸಿದ್ದೆವು. ಈಗಿನ ಕಾಲವಾಗಿರಲಿಲ್ಲ ಅದು- ತಂದ ವಸ್ತು ಇಷ್ಟವಾಗಲಿಲ್ಲ ಎಂದ ತಕ್ಷಣ ಅದನ್ನು ಮೂಲೆಗೆ ಬಿಸಾಕಿ ಹೊಸದನ್ನು ತಂದುಬಿಡಲು.

ಅಷ್ಟರ ನಂತರ ಅವನ ಮತ್ತು ಕನ್ನಡಕದ ನಡುವೆ ಏನೋ ಅಂತರ ಅವಿನಾಭಾವ ಸಂಬಂಧ ಬೆಳೆದುಬಿಟ್ಟಿದೆ. ಇತ್ತೀಚಿಗೆ ವರ್ಷದಿಂದ ವರ್ಷಕ್ಕೆ ವಯಸ್ಸಾಗುತ್ತಿದ್ದಂತೆ ಕನ್ನಡಕವಿಲ್ಲದೆಯೇ ಕಳೆಯುವುದೇ ಸಾಧ್ಯವಿಲ್ಲವಾಗಿದೆ. ಆದರೆ ಅವನು ಕನ್ನಡಕದ ಜೊತೆ ಮಾಡಿಕೊಳ್ಳುತ್ತಿರುವ ಅವಾಂತರಗಳು ಒಂದೆರಡಲ್ಲ. ವರ್ಷಕ್ಕೊಂದರಂತೆ ಅವಾಂತರಗಳು ನಡೆದು ಹೋಗಿವೆ. ಅದನ್ನೆಲ್ಲ ಬರೆಯುವ ಮನಸ್ಸಾಗಿದೆ. ಎಷ್ಟೋ ವರ್ಷಗಳಿಂದ ಅವನ ಜೊತೆಗಿದ್ದ ಆ ದಪ್ಪ frame ನ ಕನ್ನಡಕ ಕೆಲವು ವರ್ಷಗಳ ಹಿಂದೆ ಮುರಿದು ಹೋಗಿ ನಂತರ ಹೊಸದೊಂದನ್ನು ಕೊಂಡಿದ್ದ. ಆದರೆ ಅದೂ ಕೂಡ ನಮಗೆ ಹಿಡಿಸುವಂಥದಾಗಿರಲಿಲ್ಲ. ಮೊದಲಿನದಕ್ಕಿಂತ ಪರವಾಗಿಲ್ಲ ಎಂದು ಸುಮ್ಮನಿದ್ದೆವು.

೨೦೦೮: ಜೇಬಿನಲ್ಲಿ ಕನ್ನಡಕ ಇಟ್ಟುಕೊಂಡಿದ್ದ. ಮನೆಯ ಭಾವಿಯಲ್ಲಿ ಏನೋ ಸದ್ದದಂತಾಯಿತು. ಇಣುಕಿದ. ಕನ್ನಡಕ ಭಾವಿಯಲ್ಲಿ ಬಿತ್ತು. ಅಮ್ಮ ನಮಗೆ phone ಮಾಡಿ ಹೇಳಿದಳು. ನಮಗೆ ಖುಷಿ. ಭಾವಿ ನೀರು ಖಾಲಿ ಮಾಡಲು ಮುಂದಾದ. ಅಮ್ಮ "ಬೇಡ, ಬೇಸಿಗೆಯಲ್ಲಿ ನೀರು ಖಾಲಿ ಮಾಡಿದರೆ ಮತ್ತೆ ನೀರು ಸರಿಯಾಗಿ ತುಂಬಿಕೊಳ್ಳದಿದ್ದರೆ..." ಎಂದಳು. ಅಮ್ಮ ಯಾರದ್ದೋ ಮದುವೆಗೆ ಹೋದಳು. ಅಪ್ಪ water motor ಹಾಕಿ ಭಾವಿಯ ನೀರನ್ನೆಲ್ಲ almost ಖಾಲಿ ಮಾಡಿದ. ಭಾವಿಯಲ್ಲಿ ಇಳಿದುಕೊಂಡು ಅದರೊಳಗಿನ ಮೆತ್ತನೆಯ ಮಣ್ಣನ್ನು ನಿಧಾನವಾಗಿ ಕಾಲಿನಿಂದ ತುಳಿಯುತ್ತ ಕನ್ನಡಕ ಹುಡುಕಿಯೇ ಬಿಟ್ಟ!

೨೦೦೯: ಮಳೆಗಾಲ ಮುಗಿಯುತ್ತಾ ಬಂದಿತ್ತು. ರಸ್ತೆಗಳಲ್ಲೆಲ್ಲಾ ಎಲ್ಲಿ ನೋಡಿದರೂ ಹೊಂಡಗಳು. ಅಪ್ಪ ನನ್ನ ದೊಡ್ಡಮ್ಮನ ಮನೆಗೆ (ಸುಗಾವಿ ಊರು) ಶ್ರಾದ್ಧಕ್ಕೆಂದು ಹೋದವ ತಿರುಗಿ ಬರುತ್ತಿದ್ದ. ಕಂಡ್ರಾಜಿ ಎಂಬ ಊರಿನ ಒಂದು ಕಡೆ ತಿರುವಿನಲ್ಲಿ ಅವನ motorbike skid ಆಯಿತು. ನೆಲಕ್ಕೆ ಕೈ ಊರಿಕೊಂಡು ಬೀಳುವುದನ್ನು ಹೇಗೋ ತಪ್ಪಿಸಿಕೊಂಡ. Motorbike ಬಿತ್ತು. ಗಡಿಬಿಡಿಯಿಂದ ಅದನ್ನುಎತ್ತಿದ. ಬಟ್ಟೆ ಸ್ವಲ್ಪ ಕೆಸರಾಗಿತ್ತು. ಪಕ್ಕದ ಹೊಂಡದಲ್ಲಿ ಅವನ ನೀಲಿ cap ನ ಬಿಳಿಯ Reynolds pen ತೇಲುತ್ತಿತ್ತು. ಅದನ್ನು ಎತ್ತಿಕೊಂಡ. ಮನೆಗೆ ಬಂದ. ಬಂದ ನಂತರ ನೋಡಿದರೆ ಕನ್ನಡಕ ಕಾಣುತ್ತಿಲ್ಲ. Guess ಮಾಡಿದ- ‘ದಾರಿಯಲ್ಲಿ ಬೀಳುವಂತಾದಾಗ pen ಜೊತೆ ಜೇಬಿನಲ್ಲಿದ್ದ ಕನ್ನಡಕವೂ ಬಿದ್ದಿದೆ…. Pen ತೇಲುತ್ತಿದ್ದರೆ, ಕನ್ನಡ ಮುಳುಗಿತ್ತು…..’ ಕಂಡ್ರಾಜಿ ಊರಿನ ಅವನ ಪರಿಚಯದವರೊಬ್ಬರಿಗೆ phone ಮಾಡಿದ. “…….ಆ ತಿರುವಿನ ಇಂಥ ಹೊಂಡದಲ್ಲಿ ನನ್ನ ಕನ್ನಡಕ ಬಿದ್ದಿರಬೇಕು, ಸ್ವಲ್ಪ ನೋಡುತ್ತೀರಾ? ಸಿಕ್ಕಿದರೆ ದಯವಿಟ್ಟು ಬಿಸಲಕೊಪ್ಪದ ಅಂಗಡಿಗೆ ತಲುಪಿಸಿಡುತ್ತೀರಾ?” ಆ ಮಹಾನುಭಾವ ಹೋಗಿ ರಸ್ತೆಯ ಹೊಂಡದಲ್ಲಿ ಕೋಲು ಹಾಕಿ ಹುಡುಕಿದ, ನಂತರ phone ಮಾಡಿದ “ನಿಮ್ಮ ಕನ್ನಡಕ ಸಿಕ್ಕಿದೆ, ನಾಳೆ ಬಿಸಲಕೊಪ್ಪದ ಕಡೆ ಬರುವವನಿದ್ದೇನೆ, ಅಂಗಡಿಯಲ್ಲಿ ಕೊಟ್ಟಿರುತ್ತೇನೆ ಎಂದು.” ಅಪ್ಪ ಖುಷಿಯ ನಗೆ ನಕ್ಕ.

೨೦೧೦: ನಾನು ಯಾವಾಗಲೂ ಹೇಳುತ್ತಿದ್ದೆ, "ಕನ್ನಡಕಕ್ಕೆ ದಾರ ಹಾಕಿ ಕುತ್ತಿಗೆಗೆ ಹಾಕಿಕೋ" ಎಂದು. ಓದುವಾಗಷ್ಟೇ ಉಪಯೋಗಿಸುವ ಕನ್ನಡಕವನ್ನು ಉಳಿದ ಸಮಯದಲ್ಲಿ ಮನೆಯಲ್ಲಿರುವಾಗ ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿದ್ದ. ಬೇರೆ ಯಾಕಾದರೂ ಬೇಕಾಗಬಹುದು ಎಂಬ ವಿಚಾರ ಅವನದು. ಅದೇ ರೀತಿ ಜೇಬಿನಲ್ಲಿಟ್ಟುಕೊಂಡು motorbike drive ಮಾಡುತ್ತಿರಬೇಕಾದರೆ ರಸ್ತೆಯಲ್ಲಿ bus ಬಂತೆಂದು ಪಕ್ಕಕ್ಕೆ ಸರಿದ. ರಸ್ತೆಯ ಪಕ್ಕದಲ್ಲಿದ್ದ ಬಿದಿರಿನ ಪೊದೆಯಿಂದ (ಪೊದೆಗಳಿಗೆ ನಮ್ಮೂರ ಕಡೆ 'ಮಟ್ಟಿ' ಎನ್ನುತ್ತಾರೆ) ತೆಳ್ಳನೆಯ ಬಿದಿರಿನ ಎಳೆಯೊಂದು ದಾರಿಯವರೆಗೆ ಹೊರಬಂದಿತ್ತು. ಅದು ಅಪ್ಪನ ಜೇಬಿನಿಂದ ಆ ಕನ್ನಡಕವನ್ನು ಕಿತ್ತು ಎಲ್ಲೋ ಎಸೆದುಬಿಟ್ಟಿತು! ತಕ್ಷಣ motorbike ನಿಲ್ಲಿಸಿ ಸುತ್ತಮುತ್ತ ಹುಡುಕಿದ; ಎಲ್ಲೂ ಸಿಗಲಿಲ್ಲ. ಮನೆಗೆ ಬಂದು ಕಥೆ ಹೇಳಿದ. ಅಮ್ಮ "ಸಾಕು ಬಿಡಿ, ಆ ಕನ್ನಡಕ ನೋಡಿ ನೋಡಿ ಬಿದಿರು ಮಟ್ಟಿಗೂ ಬೇಜಾರಾಗಿತ್ತು" ಎಂದಳಂತೆ. ನಾನು, ರಘು ಇಂದಿಗೂ ಕೂಡ "ಬಿದಿರು ಮಟ್ಟಿಗೆ ಅಪ್ಪ ಕನ್ನಡಕ ಕೊಟ್ಟಿದ್ದಾನೆ, ಬಿದಿರು ಮಟ್ಟಿ ಚಾಳೀಸು ಹಾಕಿಕೊಂಡು ನಿಂತಿದೆ" ಎಂದೆಲ್ಲಾ ಅವನನ್ನು ಕಾಡುತ್ತೇವೆ.

೨೦೧೧: ಹೋದವರ್ಷ ಊರಿಗೆ ಹೋದಾಗ ಅಪ್ಪನ ಹೊಸ ಕನ್ನಡ ಆರಿಸಲು ನಾನೇ ಜೊತೆಗೆ ಹೋಗಿದ್ದೆ. Glass ನ ಬದಲು fibre ಹಾಕಿಸು ಹಗುರವಿರುತ್ತದೆ ಎಂದೆಲ್ಲಾ ಹೇಳಿ ಒಪ್ಪಿಸಿದೆ. ಅಂಗಡಿಯವನು scratch proof ಎಂದು ಹೇಳಿ ಅಪ್ಪನ ಕೈಯಿಂದ ಇನ್ನೊಂದಿಷ್ಟು ದುಡ್ಡು ಕೈಬಿಡಿಸಿದ. ಕನ್ನಡಕವೇನೋ ಚೆನ್ನಾಗಿತ್ತು, ಅಪ್ಪನಿಗೆ ಇಷ್ಟವೂ ಆಯಿತು. ಹಿಂದಿನ ವಾರ ನಾನು ಊರಿನಲ್ಲಿದ್ದೆ. ಕೆಲಸದ ನಿಮಿತ್ತ  ಬೆಳಗಾವಿಗೆ ಹೋಗಬೇಕಿತ್ತು. ಬೆಳಿಗ್ಗೆ 5:30 ಗಂಟೆಗೆ ಬಿಸಲಕೊಪ್ಪದ bus stop ನ road ಪಕ್ಕದಲ್ಲಿ ಅಪ್ಪ, ನಾನು ನಿಂತಿದ್ದೆವು. ಅಪ್ಪ ನನ್ನನ್ನು bus ಹತ್ತಿಸಿ ಹಿಂದಿರುಗಿದ. ಸಂಜೆ ನಾನು  ಹಿಂದಿರುಗಿ ಬಂದಾಗ ಸುದ್ದಿಯೊಂದು ಕಾದಿತ್ತು. ಅಪ್ಪನಿಗೆ ಬೆಳಿಗ್ಗೆ bus ನ board ಯಾಕೋ ಸರಿಯಾಗಿ ಕಂಡಿರಲಿಲ್ಲವಂತೆ, ಮಸುಕಾಗಿ ಕಂಡಿತ್ತಂತೆ. ಮನೆಗೆ ಬಂದು ನೋಡಿದರೆ ಕನ್ನಡಕ ಒಂದು glass ಎಲ್ಲೋ ಬಿದ್ದು ಹೋಗಿದೆ. ಮನೆಯೆಲ್ಲ ಹುಡುಕಿದ. ಎಷ್ಟೋ ಹೊತ್ತಿನ ಮೇಲೆ ನೆನಪಾಯಿತು ರಸ್ತೆಯಮೇಲೆ ಬಿದ್ದಿರಬೇಕು ಎಂದು. ಹೋಗಿ ನೋಡಿದರೆ glass ಅಲ್ಲಿಯೇ ಇತ್ತು! ಗಲೀಜಾಗಿತ್ತು, ಅದರ ಮೇಲೆ ಅಂಟಿನಂತಹ ಪದಾರ್ಥಗಳೂ ಇದ್ದವು. ಅದನ್ನು ಮನೆಗೆ ತಂದವನೇ ಅಪ್ಪ ಅದಕ್ಕೆ ಅಮ್ಮನ ಅಡಿಗೆ ಮನೆಯ scrub pad ಹಾಕಿ ಉಜ್ಜಿ ತೊಳೆದು ನೋಡಿದರೆ ಅದರ ತುಂಬೆಲ್ಲಾ scratch ಆಗಿಬಿಟ್ಟಿತು. ನಾನು "ಅದನ್ನೇಕೆ scrub pad ಹಾಕಿ ಉಜ್ಜಿದೆ ನೀನು? ಅಷ್ಟು ತಿಳಿಯಬೇಡವಾ ನಿನಗೆ?” ಅಂದೆ. ಆಗ ಅಪ್ಪ- "ಹೌದೆ, ಆವತ್ತು ನೀನೇ ಜೊತೆಯಲ್ಲಿದ್ದೆ ನೋಡು, ನೆನಪಿಲ್ಲವಾ, ಕನ್ನಡಕದ ಅಂಗಡಿಯವನು ಹೇಳಿದ್ದ ಇದು scratch proof glass ಅಂತ!" ನನಗನಿಸಿತು ಸುಮ್ಮನೆ ಅಪ್ಪನನ್ನು ಬೈಯ್ಯುವುದು. ಮುಗ್ಧ ಅವನು, ಹೇಳಿದ್ದನ್ನೆಲ್ಲ ನಂಬುತ್ತಾನೆ. ಈ ಜನರ marketing strategy ಎಲ್ಲ ಅವನಿಗೆಲ್ಲಿ ಅರ್ಥವಾಗಬೇಕು? ಅಂಗಡಿಯವನು ಹೇಳಿದ; ಅಪ್ಪ ನಂಬಿದ.

ಅಪ್ಪನ ೨೦೧೨ ರ ಕನ್ನಡಕದ ಅವಾಂತರವನ್ನು ಎದುರುನೋಡುತ್ತಿದ್ದೇವೆ!