October 31, 2008

ರಾಮೇಶ್ವರಕ್ಕೆ ಹೋದರೂ … (ಉತ್ತರ ಕನ್ನಡದ ಗಾದೆ – 206, 207 ಮತ್ತು 208)

ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ (ಬಿಡಲಿಲ್ಲ).
ಶನೀಶ್ವರನ ಕಾಟದಿಂದ ತಪ್ಪಿಸಿಕೊಳ್ಳಬೇಕೆಂದು ಮನೆ ಬಿಟ್ಟು ರಾಮೇಶ್ವರಕ್ಕೆ ಹೋದರೂ ಶನೀಶ್ವರ ಅಲ್ಲಿಗೂ ಬಂದು ಕಾಡಿದ್ದನಂತೆ। ಯಾರಿಂದಲಾದರೂ ಅಥವಾ ಯಾವುದೋ ಒಂದು ಬೇಜಾರಾಗುವಂಥ ಕೆಲಸದಿಂದಲಾದರೂ ತಪ್ಪಿಸಿಕೊಂಡೆನಪ್ಪಾ ಎಂದುಕೊಳ್ಳುವಷ್ಟರಲ್ಲೇ ಅಂಥದೇ ವ್ಯಕ್ತಿ ಅಥವಾ ಅಂಥದೇ ಕೆಲಸ ಬಂದು ತಗಲಿಕೊಂಡರೆ ಹೇಳಿಕೊಳ್ಳಬಹುದು। ಒಂದು ತೊಂದರೆಯಿಂದ ತಪ್ಪಿಸಿಕೊಂಡು ಬೇರೆಲ್ಲೋ ಹೋದರೆ ಅಲ್ಲೂ ಕೂಡ ಅಂಥದೇ ತೊಂದರೆ ಎದುರಾದರೆ ಈ ಮಾತನ್ನು ನೆನಪಿಸಿಕೊಳ್ಳಿ.

ಶನಿ ಹಿಡಿದು ಸಂತೆಗೆ ಹೋದರೆ ಇಲಿ ಹಿಡಿದು ತಲೆ ಬೋಳಿಸಿತ್ತು ಅಂತ ಹೇಳ್ತಾರೆ ಅನ್ನೋದು ~ragu ಹೇಳಿದ ಮೇಲೆ ಗೊತ್ತಾಯಿತು. Thanks ~ragu :)
ಪಾಪಿ ಸಮುದ್ರ ಹೊಕ್ಕರೂ ಮೊಳಕಾಲು ನೀರು ಎನ್ನುವುದನ್ನು ಸ್ವಲ್ಪ ಬೇರೆ ಅರ್ಥದಲ್ಲಿ ಉಪಯೋಗಿಸುತ್ತಾರೆ....ಎಲ್ಲಿ ಹೋದರೂ ಅದೃಷ್ಟವೇ ಇಷ್ಟು ಎನ್ನುವಂಥ ಸಂದರ್ಭದಲ್ಲಿ.

October 24, 2008

ಹೇಳೋದ್ರಲ್ಲೇ ಕಾಶಿ … (ಉತ್ತರ ಕನ್ನಡದ ಗಾದೆ – 203, 204 ಮತ್ತು 205)

ಹೇಳೋದ್ರಲ್ಲೇ ಕಾಶಿ ಕಂಡ ತಿನ್ನೋದೆಲ್ಲಾ ಮಶಿಕೆಂಡ.
ಯಾವಾಗ ನೋಡಿದರೂ ಹೇಳುವುದು ಕಾಶಿಯ ಪುರಾಣವನ್ನೇ, ಆಚಾರ- ವಿಚಾರಗಳ ಬಗ್ಗೆ ಆದರೆ ತಾನು ಮಾತ್ರ ಅದ್ಯಾವುದನ್ನೂ ಪಾಲಿಸದೇ ಬದುಕುತ್ತಾನೆ. ಅನಾಚಾರಗಳನ್ನೇ ಮಾಡುತ್ತಾನೆ. ಯಾರಾದರೂ ಬೇರೆಯವರಿಗೆ ಬುದ್ಧಿವಾದಗಳನ್ನು, ಸರಿ- ತಪ್ಪುಗಳ ಬಗ್ಗೆ, ಹೇಳಿ ನಂತರ ತಾವೇ ತಪ್ಪು ಹಾದಿಯಲ್ಲಿ ನಡೆದಾಗ ಅಂಥವರ ಬಗ್ಗೆ ಹೇಳುವಂಥ ಮಾತು ಇದು.
ಪುರಾಣ ಹೇಳೋಕೆ ಬದನೇಕಾಯಿ ತಿನ್ನೋಕೆ ಅಂತ ಕೂಡ ಉಪಯೋಗಿಸೋದುಂಟು.
ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ- ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ.

October 22, 2008

ಗಂಡ ಸತ್ತ ದುಃಖ … (ಉತ್ತರ ಕನ್ನಡದ ಗಾದೆ – 202)

ಗಂಡ ಸತ್ತ ದುಃಖವಲ್ಲದೇ, ಬಡ್ದು ಕೂಪಿನ ಉರಿ ಬೇರೆ.
ಗಂಡ ಸತ್ತ ದುಃಖದ ಜೊತೆಗೇ ಬಡ್ದು ಕೂಪಿನ ಉರಿಯನ್ನೂ ಸಹಿಸಿಕೊಳ್ಳಬೇಕು.
ಎಂಥ ನೋವು ತುಂಬಿರುವ ಗಾದೆ ಇದು. ಹಿಂದಿನ ಕಾಲದಲ್ಲಿ ಗಂಡ ಸತ್ತ ಹೆಂಗಸಿಗೆ ತಲೆ ಕೂದಲನ್ನು ಪೂರ್ತಿಯಾಗಿ ಬೋಳಿಸಿಬಿಡುತ್ತಿದ್ದರು- ಅಮಾನವೀಯವಾಗಿ. ಆದರೆ ಹೆಂಡತಿ ಸತ್ತ ಗಂಡಸಿಗೆ ಹದಿನೈದನೆಯ ದಿನ ಮುಗಿದ ತಕ್ಷಣ ಮರುಮದುವೆಯ ವಿಚಾರ ಮಾಡುತ್ತಿದ್ದರು! ಡುಂಡಿರಾಜರ ಒಂದು ಹನಿಗವನ ನೆನಪಾಗುತ್ತಿದೆ.

ಗಂಡ ಸತ್ತರೆ ಹೆಂಡತಿಯಾಗುತ್ತಾಳೆ
ವಿಧವೆ.
ಹೆಂಡತಿ ಸತ್ತರೆ ಗಂಡ ಆಗುತ್ತಾನೆ
ಮದುವೆ!

ಗಂಡನನ್ನು ಕಳೆದುಕೊಂಡ ಹೆಂಗಸು ಆ ದುಃಖದ ಜೊತೆಗೇ ಹಜಾಮನ ಬಡ್ದು ಕೂಪಿನ ಉರಿಯನ್ನೂ ಸಹಿಸಿಕೊಳ್ಳಬೇಕು ಎಂಬುದು ಅರ್ಥ. ನಾನು ಒಂದು ಕಷ್ಟದಲ್ಲಿ ಆಗಲೇ ಸಿಕ್ಕಿ ಬಿದ್ದಿರುವಾಗಲೇ ಇನ್ನೊಬ್ಬರು ನಮಗೆ ನೋವಾಗುವಂಥ ಮಾತನಾಡಿದಾಗ ಬಳಸಬಹುದು. ಗಾಯದ ಮೇಲೆ ಬರೆ ಎಳೆದಂತೆ ಎನ್ನುವುದು ಇದಕ್ಕೆ ಹತ್ತಿರದ ಗಾದೆ.

ನಾನು ಇದನ್ನು ಮೊತ್ತ ಮೊದಲನೆಯ ಬಾರಿಗೆ ಕೇಳಿದ್ದು - ಅಮ್ಮ ಅಕಸ್ಮಾತ್ ಕೈತಪ್ಪಿ ತುಪ್ಪದ ಪಾತ್ರೆಯನ್ನು ಬೀಳಿಸಿಕೊಂಡು ಕಿರಿಕಿಯಲ್ಲಿದ್ದಾಗ ಅಡುಗೆ ಮನೆಗೆ ಬಂದ ಅಪ್ಪ ಸ್ವಲ್ಪ ನಿಧಾನಕ್ಕೆ ಮಾಡಬೇಕಿತ್ತು ಎಂದು ಗುರ್ರ್... ಎಂದಾಗ.

October 10, 2008

ಕೊಟ್ಟ ಸಾಲ … (ಉತ್ತರ ಕನ್ನಡದ ಗಾದೆ – 201)

ಕೊಟ್ಟ ಸಾಲ ಕೇಳದೆ ಹೋಯಿತು, ಮಾಡಿದ ಬದುಕು ನೋಡದೆ ಹೋಯಿತು.
ಕೊಟ್ಟ ಸಾಲ ಕೇಳದೆ ಹೋಯಿತು- ಕೆಲವರಿಗೆ ಒಂದು ಕೆಟ್ಟ ಚಟವಿರುತ್ತದೆ. ಸಾಲ ತೆಗೆದುಕೊಂಡಮೇಲೆ ಅದನ್ನು ಕೊಟ್ಟವನು ಮತ್ತೆ ಮತ್ತೆ ಕೇಳುವ ತನಕ ಹಿಂದಿರುಗಿಸುವ ಅಭ್ಯಾಸವಿರುವುದಿಲ್ಲ. ಅಂಥವರ ಬಳಿ ಕೇಳದೆ ಇದ್ದರೆ ಸಾಲವಾಗಿ ಕೊಟ್ಟ ಹಣ ಯಾವತ್ತೂ ಮರಳಿ ಸಿಗುವುದಿಲ್ಲ.
ಮಾಡಿದ ಬದುಕು ನೋಡದೆ ಹೋಯಿತು- ಸಾಮಾನ್ಯವಾಗಿ ಮದುವೆ ಮುರಿದು ಬೀಳುವ ಹಂತಕ್ಕೆ ಬಂದು ತಲುಪಿದರೆ ಹೇಳುವ ಮಾತು. ಬರಿದೆ ಮದುವೆಯಾದರೆ ಸಾಲದು, ಅದನ್ನು ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ಮಾಡಿಕೊಂಡ ಬದುಕನ್ನು ತಿರುಗಿ ನೋಡದೆ ಇದ್ದರೆ ಹಾಳಾಗ ಹೋಗುತ್ತದೆ ಎನ್ನುವ ಅರ್ಥ.


ಸಾಲವನ್ನು ತಿರುಗಿ ಕೇಳುವ ಸಮಯದಲ್ಲಿ ಅಥವಾ ಗಂಡ ಹೆಂಡಿರ ಸಂಬಂಧದಲ್ಲಿ (ನಿರ್ಲಕ್ಷ್ಯದಿಂದಾಗಿ ) ಬಿರುಕುಂಟಾದಾಗ ಈ ಮಾತನ್ನು ಹೇಳುತ್ತಾರೆ.

October 7, 2008

ಬೇಡವೆಂದು ಎಸೆಯುವ … (ಉತ್ತರ ಕನ್ನಡದ ಗಾದೆ – 200)

ಬೇಡವೆಂದು ಎಸೆಯುವ ಕಡ್ಡಿ ಹಲ್ಲಿನಲ್ಲಿ ಹಾಕುವುದಕ್ಕಾದರೂ ಬೇಕಾಗುತ್ತದೆ.
ಯಾವುದೊ ಒಂದು ಕಡ್ಡಿಯನ್ನು ಉಪಯೋಗಕ್ಕೆ ಬರುವುದಿಲ್ಲ ಎಂದು ಎಸೆದರೆ ಅದರ ಉಪಯುಕ್ತತೆ ಇನ್ಯಾವತ್ತೋ ಕಂಡು ಬರಬಹುದು - ಹಲ್ಲಿನಲ್ಲಿ ಏನೋ ಪದಾರ್ಥ ಸಿಕ್ಕುಬಿದ್ದು ಅದನ್ನು ತೆಗೆಯಲು ಕಡ್ಡಿಯನ್ನು ಹುಡುಕುತ್ತಿರುವಾಗ. ಇಂದು ಎಸೆಯಲು ಅನುವಾದ ವಸ್ತು ಇನ್ಯಾವತ್ತೋ ಉಪಯೋಗಕ್ಕೆ ಬರಬಹುದು ಎಂದು ಅನಿಸಿದಾಗ ಹೇಳುವ ಮಾತು. ಯಾರದ್ದೋ ಜೊತೆ ಸಂಬಂಧವನ್ನು ಕೆಡಿಸಿಕೊಳ್ಳುವ ಮೊದಲು ಅವರು ಮುಂದೆ ಉಪಯೋಗಕ್ಕೆ ಬರಬಹುದಾ ಎಂಬ ಬಗ್ಗೆ ವಿಚಾರ ಮಾಡು ಎನ್ನುವಾಗಲೂ ಬಳಕೆಯಾಗುತ್ತದೆ.

October 6, 2008

ಭಟ್ಟರ ಅಂಗವಸ್ತ್ರ … (ಉತ್ತರ ಕನ್ನಡದ ಗಾದೆ – 199)

ಭಟ್ಟರ ಅಂಗವಸ್ತ್ರ ಆಗಬಾರದು, ವೈದ್ಯನ ಹೆಂಡತಿ ಆಗಬಾರದು.
ಅಡುಗೆ ಭಟ್ಟರ ಹೆಗಲ ಮೇಲಿರುವ ಅಂಗವಸ್ತ್ರದ ಪಾಡು ಯಾರಿಗೂ ಬೇಡ. ಕಂಡ ಕಂಡದ್ದನ್ನೆಲ್ಲಾ ಒರೆಸಲು, ಬಿಸಿ ಪಾತ್ರೆ ಒಲೆಯಿಂದ ಇಳಿಸಲು ಮೊದಲಾದ ಕೆಲಸಕ್ಕೆಲ್ಲಾ ಅದರ ಪ್ರಯೋಗ. ಅಂತೆಯೇ ವೈದ್ಯ ಕೂಡ ಎಲ್ಲಾ ಔಷಧಗಳನ್ನೂ ಹೆಂಡತಿಯ ಮೇಲೆಯೇ ಮೊದಲು ಪ್ರಯೋಗಿಸುತ್ತಾನೆ. ಅವರಿಬ್ಬರ ಬದುಕೂ ಕೂಡ ಕಷ್ಟ. (ಅಂಗವಸ್ತ್ರಕ್ಕೂ ಕೂಡ ಜೀವ ಇದೆ ಎಂದುಕೊಂಡರೆ!)

October 3, 2008

ತಲೆಗೆ ಮಿಂದರೆ … (ಉತ್ತರ ಕನ್ನಡದ ಗಾದೆ – 198)

ತಲೆಗೆ ಮಿಂದರೆ ಕಾಲಿಗೆ ಬರುತ್ತದೆ.
ತಲೆಯ ಮೇಲೆ ನೀರು ಹಾಕಿಕೊಂಡು ಸ್ನಾನ ಮಾಡಿದರೆ ಕಾಲ ತನಕ ಹರಿದು ಬರುತ್ತದೆ. ಹಿರಿಯರಿಗೆ ಏನಾದರೂ ಸಲ್ಲಿಸಿದರೆ ಅದು ಕಿರಿಯರಿಗೆ ಸಂದಂತೆಯೇ ಎಂದು ಹೇಳುವಾಗ ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಅಜ್ಜ/ ಅಜ್ಜಿಗೆ ನಮಸ್ಕಾರ ಮಾಡಿದ ನಂತರ ದೊಡ್ಡಪ್ಪ, ಚಿಕ್ಕಪ್ಪ, ದೊಡ್ಡಮ್ಮ, ಚಿಕ್ಕಮ್ಮ ಮೊದಲಾದವರಿಗೂ ನಮಸ್ಕಾರ ಮಾಡಲು ಮುಂದಾದಾಗ ಅವರ ಬಾಯಿಯಿಂದ ಹೊರಡುವ ಮಾತು.

October 1, 2008

ಜೇನು ಕೊಯ್ದವನು … (ಉತ್ತರ ಕನ್ನಡದ ಗಾದೆ – 197)

ಜೇನು ಕೊಯ್ದವನು ಕೈ ನೆಕ್ಕದೇ ಇರುತ್ತಾನಾ?
ಹೆಚ್ಚಿನ ಲಾಭ ಇರುವಂಥ ಕೆಲಸ ಮಾಡಿ ಮುಗಿಸಿದವನು (ಬೇರೆಯವರ ಉಪಕಾರಕ್ಕಾದರೂ ಕೂಡ) ಸ್ವಲ್ಪವಾದರೂ ಲಾಭವನ್ನು ಸ್ವಂತಕ್ಕೆ ಮಾಡಿಯೇ ಮಾಡಿಕೊಳ್ಳುತ್ತಾನೆ ಎಂದು ಅರ್ಥ.