August 7, 2012

ನೊಣ ತಿಂದು (ಉತ್ತರ ಕನ್ನಡದ ಗಾದೆ – 255 ಮತ್ತು 256)


ನೊಣ ತಿಂದು ಜಾತಿ ಕೆಟ್ಟಂತೆ.
ಯಾವುದೇ ಮಾಂಸವನ್ನು ತಿಂದರೂ ಜಾತಿ ಕೆಡುತ್ತದೆ. ನೊಣದಂಥ ಕೀಟವನ್ನು ತಿಂದರೂ ಅದು ಮಾಂಸವೇ ಆಗಿರುವುದರಿಂದ ಜಾತಿ ಕೆಟ್ಟೇ ಕೆಡುತ್ತದೆ. ಎಷ್ಟೋ ವರ್ಷಗಳ ಕಾಲ ಜಾತಿಗೆ ಬದ್ಧನಾಗಿ ನಡೆದುಕೊಂಡು ಒಮ್ಮೆ ಅರಿವಿಲ್ಲದೆಯೇ ನೊಣವನ್ನು ತಿಂದು ಜಾತಿ ಕೆಟ್ಟುಹೋಗುತ್ತದೆ. ಅಂದರೆ, ಎಷ್ಟೋ ವರ್ಷ ಸರಿಯಾಗಿ ನಡೆದುಕೊಂಡು ಎಂದಾದರೊಮ್ಮೆ ಅತಿ ಚಿಕ್ಕ ತಪ್ಪಿನಿಂದಾಗಿ reputation ಕೆಡುವಂತಾದರೆ ಈ ಗಾದೆಯನ್ನು ಬಳಸುತ್ತಾರೆ- "ಅಯ್ಯೋ, ನೊಣತಿಂದು ಜಾತಿ ಕೆಟ್ಟಂತಾಯಿತು" ಎಂದು. ಇನ್ನೂ ಕೆಲವೊಮ್ಮೆ, ಸಣ್ಣ-ಪುಟ್ಟ ತಪ್ಪುಗಳಾಗುವ ಬಗ್ಗೆ ಹುಷಾರಾಗಿರೋಣ; ನೊಣ ತಿಂದು ಜಾತಿ ಕೆಡುವುದು ಬೇಡ" ಎಂದೂ ಕೂಡ ಹೇಳುತ್ತಾರೆ.

ಇದೇ ರೀತಿಯಲ್ಲಿ ಬಳಸುವ ಇನ್ನೊಂದು ಗಾದೆ- ಮಾಳಶೆಟ್ಟಿ ಸಾಯುವ ಕಾಲಕ್ಕೆ ಮೀನು ತಿಂದಿದ್ದ. ಶೆಟ್ಟಿಯಾದರೂ ಅವನು ಎಂದೂ ಮೀನು ತಿಂದಿರಲಿಲ್ಲ, ಆದರೆ ಅದೇನಾಯಿತೋ ಗೊತ್ತಿಲ್ಲ- ಸಾಯುವ ಕಡೇ ಕಾಲದಲ್ಲಿ ಮೀನು ತಿಂದುಬಿಟ್ಟಿದ್ದ!

July 9, 2012

ಬಾಳೇಕಾಯಿ ಕಸ


ನಮ್ಮೂರು ಶಿರಸಿಯಿಂದ ಬೆಂಗಳೂರಿಗೆ ಮಗನ ಮನೆಗೆ ಅಪ್ಪ ಬಂದಿದ್ದರು. ರಾತ್ರಿ ಅವರ ಕಾಲಿಗೆ ಬಾಳೇಕಾಯಿ ಕಸ ಬಂತು. ಕಸ ಬರುವುದು ಎಂದರೆ ಸ್ನಾಯುಸೆಳೆತ ಉಂಟಾಗುವುದು ಎಂದರ್ಥ. ಅದನ್ನು ಕಸ ಎಂದು ಯಾಕೆ ಕರೆಯುತ್ತಾರೆ ಎನ್ನುವುದು ನನಗೂ ಗೊತ್ತಿಲ್ಲ. ಕೆಲವೊಮ್ಮೆ ದೇಹದ ಯಾವುದಾದರೂ ಭಾಗದಲ್ಲಿ ತೀವ್ರವಾದ ಸ್ನಾಯುಸೆಳೆತ ಉಂಟಾದರೆ ಆ ಭಾಗದ ಸ್ನಾಯುಗಳು ಒಂದು ಬಾಳೆಕಾಯಿಯಷ್ಟು ದೊಡ್ಡದಾಗಿ ಉಬ್ಬಿಕೊಂಡುಬಿಡುತ್ತವೆ. ನೋಡಲು ಒಂದು ಸಣ್ಣ ಬಾಳೆಕಾಯಿ ಅಂಟಿಕೊಂಡಿರುವಂತೆ ಕಾಣಿಸುತ್ತದೆ. ಆ ರೀತಿ ಆಗುವುದನ್ನು ಬಾಳೇಕಾಯಿ ಕಸ ಬರುವುದು ಎನ್ನುತಾರೆ. ಇನ್ನೂ ಕೆಲವರು ಬಾಳೇಕಾಯಿ ಬಂದಿದೆ ಎಂದಷ್ಟೇ ಹೇಳುವುದೂ ಉಂಟು. ವಯಸ್ಸಾದಮೇಲೆ ಸ್ನಾಯುಗಳು ಬಲಹೀನವಾದಮೇಲೆ ಇದು ಪದೇಪದೇ ಬರುವುದುಂಟು. ಆ ರೀತಿ ಬಾಳೇಕಾಯಿ ಬಂದಾಗ ಉಂಟಾಗುವ ನೋವು ಅತ್ಯಂತ ತೀವ್ರ ತರದ್ದು; ಸಾಮಾನ್ಯದ ನೋವುನಿವಾರಕಗಳಿಗೆ ಕಡಿಮೆಯಾಗುವುದಿಲ್ಲ.

ಆ ರೀತಿ ಬಾಳೇಕಾಯಿ ಬಂದು ರಾತ್ರಿಯಿಡೀ ಗೋಳಾಡಿಡ ಅಪ್ಪನನ್ನು ಮರುದಿನ ಮಗ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದ. ಡಾಕ್ಟರು ಏನಾಯಿತು?” ಎಂದರು. ಮಗ ಬಾಯಿಬಿಡುವಷ್ಟರಲ್ಲಿ ಅಪ್ಪ, ಡಾಕ್ಟ್ರೇ, ಯಂತಾ ಮಾಡದು... ನಿನ್ನೆ ರಾತ್ರೆ ಬಾಳೇಕಾಯಿ ಬಂದು.... ವಂದೇಸಮ ಜಗ್ತಾ... ಶಳ್ತಾ ಅಂದ್ರೇ... ರಾತ್ರಿಡೀ ನಿದ್ದಿಲ್ಲಾಳಿ, ಗುಳ್ಗೆ ತಗಂಡ್ರೂ ಬಗ್ಲಿಲ್ಲಾ.... ನಾ ಇಲ್ದೋದ್ರೆ ಊರಲ್ಲೆಲ್ಲಾ ಇದ್ದಾಗ ಈ ಗುಳ್ಗೆ ಗಿಳ್ಗೆ ಯಲ್ಲಾ ತಗಳದಿಲ್ಲಾ ಹೇಳಿ. ನಮ್ದೆಂತಾ ಇದ್ರೂ ತೈಲ ಹಚ್ಚಿ ತಿಕ್ಕದೇಯಾ. ಇಲ್ ಬಂದ್ಕಂಡು ಯಂತಾರೂ ಪರಾಮಶಿ ಆಗದು ಬ್ಯಾಡಾ ಹೇಳಿ... ಇದೆ ಇಂವ ಕೊಟ್ಟ ಗುಳ್ಗೆ ತಗಂಡೆ.  ಮುಂದೆ ನಾನು ಹೇಳಬೇಕಾಗಿಲ್ಲ. ಡಾಕ್ಟರು ಕಣ್ಣು ಕಣ್ಣು ಬಿಟ್ಟರು, ಅರ್ಥವಾಗಲಿಲ್ಲ. ಅಪ್ಪ ಮುಂದುವರಿಸಬೇಕೆನ್ನುವಷ್ಟರಲ್ಲಿ ಮಗ ಅವನನ್ನು ತಡೆದು, ಕನ್ನಡವನ್ನು ಕನ್ನಡಕ್ಕೆ “translate” ಮಾಡಿ, ಡಾಕ್ಟರಿಗೆ ಅರ್ಥವಾಗುವ ಕನ್ನಡದಲ್ಲಿ ಹೇಳಿದ, ನಿನ್ನೆ ರಾತ್ರಿ ಅವರಿಗೆ muscle catch ಆಗಿ, ತುಂಬಾ pain ಆಯ್ತು. Pain killer tablet ಮತ್ತೆ spray ನಲ್ಲಿ ಕೂಡ ಕಡಿಮೆಯಾಗಲಿಲ್ಲ. ಅದಕ್ಕೆ ತಮ್ಮ ಹತ್ತಿರ....

ಉತ್ತರ ಕನ್ನಡದಲ್ಲಿ, ಅದರಲ್ಲೂ ವಿಶೇಷವಾಗಿ ಹವ್ಯಕರಲ್ಲಿ ಅನೇಕ ರೀತಿಯ ವಿಚಿತ್ರವಾದ ಪದಗಳಿವೆ. ಇತರರಿಗೆ ಅವುಗಳನ್ನು ಮೊದಲಬಾರಿಗೆ ಕೇಳಿದರೆ ಅರ್ಥವೇ ಆಗುವುದಿಲ್ಲ. ಉದಾಹರಣೆಗೆ, ಪರಾಮಶಿ ಎಂದರೆ ಅತಿಸಣ್ಣ ಪ್ರಮಾಣದ ಅನಾಹುತ. ಕಪ್ಪು ಎಂದರೆ ಚುಚ್ಚು. ಮುಳ್ಳು ಕಪ್ಪಿತು ಎಂದರೆ ಮುಳ್ಳು ಚುಚ್ಚಿತು ಎಂದರ್ಥ. ಹರುಕು ಅಥವಾ ಗಿಬುರು ಎಂಬುದರ ಅರ್ಥ ಪರಚು’. ಬೆಕ್ಕು ಪರಚಿತು ಎನ್ನುವುದನ್ನು ಬೆಕ್ಕು ಹರುಕಿತು ಅಥವಾ ಬೆಕ್ಕು ಗಿಬುರಿತು ಎಂದು ಹೇಳುತ್ತಾರೆ. ಅರಚು ಅಥವಾ ಅರ್ಚು’- ಯಾವುದಾದರೂ ಎರಡು ವಸ್ತುಗಳ ನಡುವೆ ಸಿಕ್ಕುಬಿದ್ದು ಪೆಟ್ಟಾಗುವುದು ಉದಾ: ಬಾಗಿಲಿಗೆ ಸಿಕ್ಕಿ ಕೈಬೆರಳು ಅರ್ಚಿ ಹೋಯಿತು”.    

ಅದೆಲ್ಲಾ ಹೊಗಲಿ, ನೋವಾಗುತ್ತಿದೆ ಎನ್ನುವುದನ್ನು ಉತ್ತರ ಕನ್ನಡದ ಜನರು ಎಷ್ಟೆಲ್ಲಾ ಶಬ್ದಗಳನ್ನು ಬಳಸಿ ಹೇಳುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನೋಯ್ತು, ಶಳಿತು, ವಡಿತು, ಜಗಿತು, ಘಮಿತು, ಭುಗುಭುಗು ಗುಡ್ತು ಹೀಗೇ ಇನ್ನೂ ಹಲವಾರು. But each term corresponds to a different type of pain or sensation or sometimes to a pain in different parts of the body. ವಿವರಿಸುವುದು ಅತ್ಯಂತ ಕಷ್ಟ. ಅದು ಅಲ್ಲೇ ಹುಟ್ಟಿ ಬೆಳೆದವರಿಗೆ ಮಾತ್ರ ಗೊತ್ತಾಗಬಹುದೇನೊ! ಉದಾಹರಣೆಗೆ,

ನೋವು: ಸಾಮಾನ್ಯವಾಗಿ ಎಲ್ಲರೂ ಹೇಳುವಂಥದು. ದೇಹದ ಯಾವುದೇ ಭಾಗಕ್ಕೆ ಗಾಯವಾಗದೇ ಪೆಟ್ಟಾದಾಗ ಆಗುವಂಥದು. ಆದರೆ ಪೆಟ್ಟಾಗದೇ ಬಂದಂಥ ನೋವೂ ಕೂಡ ಇರಬಹುದು. ಉದಾ: ತಲೆ, ಬೆನ್ನು, ಸೊಂಟ, ಕಾಲು, ಕೈ ನೋವು.

ಸೆಳೆತ (ಶಳ್ತ): ಒಂದು ಭಾಗವನ್ನು ಎಲ್ಲಾ ಕಡೆಯಿಂದ ಎಳೆದಂತಾಗುವ ನೋವು. ಊತುಕೊಂಡು ನೋವಾಗುವುದು, ಜಜ್ಜಿದಂತಾಗಿ ನೋವಾಗುವುದು ಕೂಡ ಸೆಳೆತದಲ್ಲಿ ಸೇರಿಕೊಳ್ಳುತ್ತವೆ. ಉದಾ: ಬಾಗಿಲಿಗೆ ಸಿಕ್ಕಿ ಅರ್ಚಿಹೋದ ಕೈಬೆರಳು ಸೆಳೆಯುತ್ತದೆ (ಶಳಿಯುತ್ತದೆ).

ವಡೆತ (ವಡ್ತ): ಖುರುವಿನಂತ ಹುಣ್ಣಾದಾಗ ನೋಯುವ ಪರಿ. ಈ ಶಳ್ತ-ವಡ್ತಗಳನ್ನು ಬಹಳಷ್ಟು ಸಲ ಜೊತೆಯಾಗಿ ಉಪಯೋಗಿಸುತ್ತಾರೆಶಳ್ತಾs-ವಡ್ತಾs ಎಂದು. ತಲೆ ಒಂದೇ ಸಮ ಹೊಡೆದುಕೊಳ್ಳುತ್ತಿದೆ ಎನ್ನುವುದಕ್ಕೂ ಕೂಡ ಉಪಯೋಗಿಸುತ್ತಾರೆ, ‘ತಲೆವಡ್ತ ಎಂದು! ಎಷ್ಟೋ ಸಲ ಸೆಳೆತ ಮತ್ತು ವಡೆತಗಳನ್ನು ಬದಲಿಯಾಗಿ ಉಪಯೋಗಿಸುತ್ತಾರೆ. ಆದರೆ ತಲೆವಡ್ತದ ಬದಲುತಲೆಶಳ್ತ ಎಂದರೆ ನಗೆಪಾಟಲಿಗೆ ಗುರಿಯಾಗುತ್ತೀರಿ. ಏಕೆಂದರೆ ಅದು ಬಳಕೆಯಲ್ಲಿಲ್ಲ! 

ಜಗಿತ (ಜಗ್ತ): ಇಕ್ಕಳವನ್ನು ಹಾಕಿ ಒತ್ತಿ-ಬಿಟ್ಟು ಮಾಡಿದರೆ ಆಗುವಂಥ ನೋವು. ಬಹುತೇಕ ಕಾಲು, ಕೈಗಳ ನೋವನ್ನು ಹೇಳುವಾಗ ಉಪಯೋಗಿಸುತ್ತಾರೆ- ಕಾಲು ಜಗಿಯುತ್ತಿದೆ ಎಂದು. ನೆನಪಿರಲಿ, ತಲೆ ಜಗಿಯುತ್ತಿದೆ ಎಂದು ಮಾತ್ರ ಯಾರೂ ಹೇಳುವುದಿಲ್ಲ!

ಘಮಿತ: ಖಾರದ ಪದಾರ್ಥ ತಾಕಿದಾಗ ಆಗುವ ಅನುಭವ. ಉದಾ: ಮೆಣಸಿನ ಪುಡಿ ಮುಟ್ಟಿದ್ದರಿಂದ ಕೈ ಘಮಿಯುತ್ತಿದೆ.

ಭುಗುಭುಗು ಗುಡು: ಸಾಮಾನ್ಯವಾಗಿ ಅಂಗಾಲಿನಲ್ಲಿ ಉಂಟಾಗುವ ಅನುಭವಕ್ಕೆ ಬಳಸುವಂಥದ್ದು. ಬೆಂಕಿಯ ಉರಿ ತಾಕಿದಾಗ ಆಗುವಂಥ ಅನುಭವ. ಉದಾ: ಬಿಸಿಲಿನಲ್ಲಿ ತುಂಬಾ ನಡೆದಿದ್ದರಿಂದ ಅಂಗಾಲು ಭುಗುಭುಗು ಗುಡುತ್ತಿದೆ”. ಬಿಸಿ ತಾಕಿ ಸುಟ್ಟ ಉರಿಯನ್ನೂ ಕೂಡ ಹೀಗೆ ಹೇಳಬಹುದು.

ಇಷ್ಟೆಲ್ಲಾ ವಿವರಿಸಿದ ಮೇಲೆಯೂ ಎಲ್ಲವನ್ನೂ ಹೇಳಿದ್ದೇನೆ ಎನ್ನುವ ಭರವಸೆಯಿಲ್ಲ. ಇನ್ನೂ ಹಲವಾರು ನೋವಿಗೆ ಸಂಭಂದಿಸಿದ ಶಬ್ದಗಳು ಉಳಿದುಹೋಗಿರಬಹುದು. ನೋವನ್ನು ಇಷ್ಟೆಲ್ಲಾ ಬಗೆಯಲ್ಲಿ ಬಣ್ಣಿಸಬಹುದು, ಮತ್ತು ನೋವಿನಲ್ಲಿರುವ ಆ ಸಣ್ಣ-ಪುಟ್ಟ ವ್ಯತ್ಯಾಸಗಳನ್ನೂ ಕೂಡ differentiate ಮಾಡಬಹುದು ಎಂಬುದನ್ನು ವಿಚಾರ ಮಾಡಿದರೆ ಆಶ್ಚರ್ಯವಾಗುತ್ತದೆ!  

June 26, 2012

ಕಣ್ಣು ಹೆದರಿಸಿತ್ತು (ಉತ್ತರ ಕನ್ನಡದ ಗಾದೆ – 254)

ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು.
ಇದೆಂಥ ಸುಂದರ ಗಾದೆ ಗೊತ್ತಾ? ನನ್ನ ಅತ್ಯಂತ ಪ್ರೀತಿಯ ಗಾದೆಗಳಲ್ಲೊಂದು. ಈ ಗಾದೆಯನ್ನು ನಾನು ಮೊಟ್ಟಮೊದಲ ಬಾರಿ ಕೇಳಿದ್ದು ಚಿಕ್ಕವಳಿದ್ದಾಗ ಗದ್ದೆನಾಟಿಯ ಸಮಯದಲ್ಲಿ. ಗದ್ದೆನಾಟಿ ಮಾಡುವಾಗ ಭತ್ತದ ಸಸಿಯನ್ನು ನೆಡುತ್ತಾ ಹಿಮ್ಮುಖವಾಗಿ ಹೋಗುತ್ತಿರುತ್ತಾರೆ. ಒಂದು ಗದ್ದೆಯನ್ನು ಪ್ರಾರಂಭಿಸಿದಾಗ ಹಿಂದಿರುಗಿ ನೋಡಿದರೆ ಅದು ಮುಗಿಯುವುದೇ ಇಲ್ಲ ಎನ್ನುವಷ್ಟು ದೂರವಾಗಿ ಕಾಣಿಸುತ್ತದೆ. ಆಗ ನಾಟಿ ಮಾಡುತ್ತಿರುವವರಿಗೆ Negative feelings ಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ ನಾಟಿಯ ಸಮಯದಲ್ಲಿ ಅಲ್ಲಿರುವ ಹಿರಿಯರು ಕಿರಿಯರಿಗೆ ಹಿಂದಿರುಗಿ ನೋಡಲು ಬಿಡುವುದಿಲ್ಲ. ಒಂದು ಸಲ ಯಾರೋ ಹಿಂದಿರುಗಿ ನೋಡಿ ಇದೇನು ಮುಗಿಯುವ ರೀತಿಯೇ ಕಾಣಿಸುತ್ತಿಲ್ಲವಲ್ಲ? ಎಂದಾಗ ಅಲ್ಲಿರುವ ಹಿರಿಯರು ಯಾರೋ ಹೀಗೆ ಹೇಳಿದ್ದರು, ಸುಮ್ಮನಿರು, ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು. ನಿಜ, ಕಣ್ಣಳತೆ ಯಾವತ್ತೂ ಬೆಚ್ಚಿಬೀಳಿಸುತ್ತದೆ. ಅಯ್ಯೋ ಇಷ್ಟೆಲ್ಲಾ ಕೆಲಸವನ್ನು ಮುಗಿಸುವುದು ಹೇಗಪ್ಪಾ? ಎನ್ನುವ ಭಾವನೆಯನ್ನು ಹುಟ್ಟಿಸುತ್ತದೆ. ಆದರೆ ಕೆಲಸವನ್ನು ಪ್ರಾರಂಬಿಸಿದರೆ ಅದು ತಾನಾಗಿಯೇ ಮುಗಿಯುತ್ತಾ ಬರುತ್ತದೆ. A journey of thousand miles begins with a single step! ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಬರೆಯಲಿಕ್ಕಿರುವ ಪುಟಗಳ ಸಂಖ್ಯೆಯನ್ನು ನೋಡಿ ಭಯಬಿದ್ದು ನನಗೇ ನಾನು ಹೇಳಿಕೊಳ್ಳುತ್ತಿದ್ದೆ- ಇಲ್ಲ.. ಇಲ್ಲ, ಬರೆಯುತ್ತಾ ಹೋದಂತೆ ಗೊತ್ತೇ ಆಗದಂತೆ ಮುಗಿದುಹೋಗುತ್ತದೆ; ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು ಎಂದು. ಇಂದೂ ಕೂಡ ಎಷ್ಟೊಂದು ಬಾರಿ ನನಗೇ ನಾನು ಈ ಮಾತನ್ನು ಹೇಳಿಕೊಳ್ಳುತ್ತೇನೆ; ಕೆಲಸ ಮಾಡುವ ಉತ್ಸಾಹ ಬರುತ್ತದೆ. 

June 21, 2012

ಉಣ್ಣಲಿಕ್ಕೆ ಇಲ್ಲದಿದ್ದರೆ (ಉತ್ತರ ಕನ್ನಡದ ಗಾದೆ – 253)

ಉಣ್ಣಲಿಕ್ಕೆ ಇಲ್ಲದಿದ್ದರೆ ಸಣ್ಣಕ್ಕಿ ಅನ್ನ, ಉಡಲಿಕ್ಕೆ ಇಲ್ಲದಿದ್ದರೆ ಪಟ್ಟೆ ಸೀರೆ.
ನಿಜವಾಗಿ ಈ ಗಾದೆ "ಉಣ್ಣಲಿಕ್ಕೆ ಇಲ್ಲದಿದ್ದರೂ ಸಣ್ಣಕ್ಕಿ  ಅನ್ನ, ಉಡಲಿಕ್ಕೆ ಇಲ್ಲದಿದ್ದರೂ ಪಟ್ಟೆ ಸೀರೆ" ಎಂದಾಗಬೇಕು. ಆದರೆ ಆಡು ಭಾಷೆಯಲ್ಲಿ  ಇಲ್ಲದಿದ್ದರೂ ಎನ್ನುವುದು ಇಲ್ಲದಿದ್ದರೆ ಎಂದು ಮಾರ್ಪಾಟಾಗಿದೆ. ತಮ್ಮ ಹಣಕಾಸಿನ ಮಿತಿಯನ್ನು ಅರಿತುಕೊಳ್ಳದೇ ಖರ್ಚು ಮಾಡುವವರನ್ನು ನೋಡಿದಾಗ ಹೇಳುವ ಮಾತು ಇದು. ಮನೆಯಲ್ಲಿ ಅಕ್ಕಿಗೆ ಗತಿಯಿಲ್ಲದಿದ್ದರೂ ಹೇಗಾದರೂ ಸಣ್ಣಕ್ಕಿ ತಂದು ಊಟಮಾಡುತ್ತಾರೆ, ಬಟ್ಟೆಗೆ ಗತಿಯಿಲ್ಲದಿದ್ದರೂ ರೇಷ್ಮೆಸೀರೆಯನ್ನೇ ಉಡುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ  ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಇನ್ನೊಂದು ಗಾದೆ ಇದೇ ರೀತಿಯ ಅರ್ಥವನ್ನು ಕೊಡುತ್ತದೆ. ನೋಡಿ- http://seemahegde78.blogspot.nl/2008/02/163-164.html

February 6, 2012

ಡಾಕ್ಟರ ಹೆಂಡತಿ (ಉತ್ತರ ಕನ್ನಡದ ಗಾದೆ – 252)

ಡಾಕ್ಟರ ಹೆಂಡತಿ ಹುಳಿಸಿಕೊಂಡು ಸಾಯುತ್ತಾಳೆ.
'ಹುಳಿಸಿಕೊಂಡು' ಎಂದರೆ 'ಹುಳುವಾಗಿಸಿಕೊಂಡು' ಅಂದರೆ... 'ಹುಳುವನ್ನು ದೇಹದಲ್ಲಿ ಹೊಂದಿರು' ಎಂದರ್ಥ. ದನ-ಕರುಗಳಿಗೆ ಗಾಯಗಳಾಗಿ ಕೆಲವೊಮ್ಮೆ ಅದರಲ್ಲಿ ಹುಳುಗಳಾಗುತ್ತವೆ. ಆಗ ಹೇಳುವುದುಂಟು- "ದನ ಹುಳಿಸಿಕೊಂಡಿದೆ" ಎಂದು.

ಡಾಕ್ಟರಿಗೆ ಬೇರೆ ರೋಗಿಗಳನ್ನು ನೋಡಿ ಮುಗಿಸುವಷ್ಟರಲ್ಲೇ ಸಾಕು ಸಾಕಾಗಿರುತ್ತದೆ. ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೂ ನೋಡಲು ಪುರಸೊತ್ತಿಲ್ಲ. ಹೆಂಡತಿಗೆ ಚಿಕ್ಕ ಗಾಯವಾದರೆ, "ಚಿಕ್ಕ ಗಾಯ ಬಿಡು, ಹೋಗುತ್ತದೆ" ಎಂದು ಉಪೇಕ್ಷಿಸುತ್ತಾನೆ. ಅದೇ ಗಾಯ ದೊಡ್ಡದಾಗುತ್ತದೆ, ಅದರಲ್ಲಿ ಹುಳುಗಳಾಗುತ್ತವೆ, ಆದರೂ ನೋಡಲು ಡಾಕ್ಟರಿಗೆ ಬಿಡುವಿಲ್ಲ. ಹುಳುಗಳನ್ನು ಹೊಂದಿದ ಗಾಯ ಹೆಂಡತಿಯ ಸಾವಿಗೂ ಕಾರಣವಾಗಬಹುದು. ಊರಿಗೆಲ್ಲ ಮದ್ದು ನೀಡುವ ಡಾಕ್ಟರು ಮನೆಯ ಜನರ ಆರೋಗ್ಯವನ್ನು ಉಪೇಕ್ಷಿಸಿದಾಗ ಬೇಸರದಿಂದ ಹೇಳುವ ಮಾತು ಇದು. ಇಂಥದೇ ಒಂದು ಗಾದೆಯನ್ನು ಈ ಹಿಂದೆ ಹಾಕಿದ್ದೇನೆ ನೋಡಿ- http://seemahegde78.blogspot.in/2008/10/199.html

ಕುಂಬಾರನ ಮನೆಯ ಮಡಿಕೆ ತೂತು ಮತ್ತು ನೇಕಾರನ ಹೆಂಡತಿಗೆ ಹರುಕಲು ಸೀರೆ ಎನ್ನುವ ಗಾದೆಗಳಂತೆಯೇ ಡಾಕ್ಟರ ಹೆಂಡತಿಯ ಗಾದೆಯೂ ಕೂಡ.   

January 25, 2012

ಇವು ನನ್ನನ್ನು ನಗಿಸಿದವು!


ಕೆಲವು ಬರಹಗಳು ಎಷ್ಟು funny ಆಗಿರುತ್ತವೆಂದರೆ ನಗದಿರಲು ಸಾಧ್ಯವೇ ಇಲ್ಲ. Stressful ಜೀವನದಲ್ಲಿ ಇವು ಮನಸ್ಸಿಗೆ ಮುದ ಕೊಡುವುದಂತೂ ನಿಜ. 





ನಾಗವಾರದ ಬಳಿ ring road  ಪಕ್ಕದಲ್ಲಿ ಕಂಡಿದ್ದು. photo ಚಲಿಸುತ್ತಿದ್ದ bus ನಲ್ಲಿ ಕುಳಿತಿದ್ದ ನಾನು cell phone ನಿಂದ ತೆಗೆದಿದ್ದರಿಂದ ಅಷ್ಟೊಂದು clear ಇಲ್ಲ. ಅಲ್ಲಿ ಬರೆದಿರುವುದು 'ಓಲ್ಡ್ ಬಿಲಿಂಡ್ಗ್ ಡೆಮಲೀಶನ್ ಕಂಟ್ರೆಕರ್ಸ್'. ಕೆಳಗಡೆ ಇಂಗ್ಲಿಷ್ ನಲ್ಲಿ ಬರೆದಿತ್ತು- ‘Old Building Demolition Contractors’. ಇದನ್ನು ನೋಡಿದ ಒಂದೆರಡು ತಿಂಗಳುಗಳ ನಂತರ ಮತ್ತೊಮ್ಮೆ ಅಲ್ಲಿ ಹೋದಾಗ board ಕಾಣಿಸಲಿಲ್ಲ, ಮುರಿದು ಬಿದ್ದಿತ್ತು. ಆ board ಇದ್ದ building demolish ಆಗಿ ಹೋಗಿದೆ! 



ರಸ್ತೆ ಕಿರಿದಿದೆಯೋ? ಕಿರಿದಾಗಿದೆಯೋ?- ಶಿರಸಿಯಿಂದ ಕುಮಟಾಕ್ಕೆ ಹೋಗುವಾಗ ದೇವಿಮನೆ ಘಟ್ಟ ಮುಗಿದ ನಂತರ ಕಂಡಿದ್ದು.  


ಇದು ಬೆಂಗಳೂರಿನಲ್ಲಿ ಎಲ್ಲಿ ಬೇಕಾದಲ್ಲಿ ಕಾಣಸಿಗುತ್ತದೆ. ಇದನ್ನು ಬರೆದವರು 'ಮಧ್ಯ'ಪಾನ (ಮದ್ಯಪಾನ) ಮಾಡಿಕೊಂಡೇ ಬರೆದಿರಬಹುದೇ?


ಮೈಸೂರಿನಲ್ಲಿ 'Nirmala Convent (Nirmalacon) ನಿಂದ L&T' ವರೆಗೆ ಎಂಬುದು ಕನ್ನಡದಲ್ಲಿ 'ಕಹಜಕ ದಿಂದ ಹಜಕಲಜಹ' ವರೆಗೆ ಎಂದಾಗುತ್ತದೆಯೆ?


Pregnancy test ಮಾಡಿಸಿದ ನಂತರ silent ಆಗಿರಬೇಕೇ? ಗಂಗಾನಗರದ 5th main ನಲ್ಲಿ ನಡು ರಸ್ತೆಯಲ್ಲಿ ಇದು ನನ್ನನ್ನು ನಗಿಸಿತ್ತು!

January 18, 2012

ಬಡಿ ಗೋವಿಗೇಕೆ (ಉತ್ತರ ಕನ್ನಡದ ಗಾದೆ – 251)


ಬಡಿ ಗೋವಿಗೇಕೆ ಧರೆಯಂಚಿನ ಹುಲ್ಲು?
'ಬಡಿ' ಎಂಬ ಪದ 'ಬಡವ' ಎಂಬ ಅರ್ಥವನ್ನು ಕೊಡುತ್ತದೆ. ಆರ್ಥಿಕವಾಗಿ ಬಡವ ಎಂದಲ್ಲ, ಆದರೆ 'ಅಯ್ಯೋ ಪಾಪ' ಎಂಬ ಅರ್ಥ. 'ಬಡವ' ಎಂಬುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂದರ್ಭಿಕವಾಗಿ ಬಳಸಲ್ಪಡುತ್ತದೆ. ಕೆಲವೊಮ್ಮೆ ಆರ್ಥಿಕವಾಗಿ ಬಡವ ಎಂಬುದನ್ನು ಸೂಚಿಸಿದರೆ, ಮತ್ತೊಮ್ಮೆ ಬಡಪಾಯಿ, ಪಾಪದವ ಎಂಬುದನ್ನು ಸೂಚಿಸುತ್ತದೆ. 'ಬಡಿ' ಎಂಬ ಶಬ್ದ ಇನ್ನೂ ಕೆಲವೊಮ್ಮೆ ಕೃಷ ಶರೀರವನ್ನು ಸೂಚಿಸುತ್ತದೆ. ಎಲ್ಲವೂ ಸಂದರ್ಭಕ್ಕೆ ತಕ್ಕಂತೆ ಬಳಸಲ್ಪಡುತ್ತವೆ.

ಧರೆ ಎಂದರೇನು ಎಂಬುದನ್ನು ವಿವರಿಸುವುದು ಕಷ್ಟ. ಭೂಮಿಯ ಕಡಿದಾದ ಭಾಗ ಎನ್ನಬಹುದು. ಒಂದು ಕಡೆ ಕಡಿದಾಗಿದ್ದರೆ ಇನ್ನೊಂದು ಕಡೆಯಿಂದ ಅದರ ತುದಿಯವರೆಗೆ ಹೋಗಬಹುದಾಗಿರುತ್ತದೆ. ಈ ಕೆಳಗಿನ photos ನೋಡಿ. 
ಈ ಗಾದೆಯಲ್ಲಿ ಬಡಿ ಗೋವು ಎಂದರೆ, ಪಾಪದ ಗೋವು ಅಥವಾ ಮೈಯಲ್ಲಿ ಹೆಚ್ಚು ಶಕ್ತಿ ಇಲ್ಲದ ಗೋವು ಎಂದರ್ಥ. ಅಂಥ ಗೋವು ಧರೆಯಂಚಿನ ಹುಲ್ಲಿಗೆ ಆಸೆಪಟ್ಟು ಅಲ್ಲಿಗೆ ಹೋದರೆ ಬಿದ್ದು ಹೋಗುವ ಸಂಭವ ಜಾಸ್ತಿ. ಬಡಪಾಯಿಯಾದ ವ್ಯಕ್ತಿಯು ತನ್ನ ಶಕ್ತಿಗೂ ಮೀರಿದಂಥ ಕೆಲಸಕ್ಕೆ ಕೈಹಾಕಿ ತನ್ನನ್ನು ತಾನು ಕಷ್ಟದಲ್ಲಿ ಸಿಕ್ಕಿಸಿಕೊಳ್ಳುವಂಥ ಸಂದರ್ಭದಲ್ಲಿ ಈ ಗಾದೆಯನ್ನು ಹೇಳಬಹುದು.

ನಮ್ಮ ಮನೆಯ ಎರಡು ನಾಯಿಗಳಲ್ಲಿ ಮೋಗ್ಲಿ ಭಯಂಕರ ಗಾತ್ರದ Doberman ನಾಯಿ; ಇನ್ನೊಂದು ದೇಸಿ ತಳಿಯ ಸಣ್ಣ ನಾಯಿ ಚೋಟು. ಆ ಚೋಟು ಒಮ್ಮೆ ಮೋಗ್ಲಿ ಆಚೆ ಎಲ್ಲೋ ಇರುವಾಗ ಅವನ ಅನ್ನದ ಪಾತ್ರೆಗೆ ಬಾಯಿ ಹಾಕಲು ಹೊರಟಿದ್ದನ್ನು ನೋಡಿದ ಅಮ್ಮ ಹೇಳಿದ್ದರು- "ಸುಮ್ಮನಿರು ಚೋಟು, ಬಡಿ ಗೋವಿಗೇಕೆ ಧರೆಯಂಚಿನ ಹುಲ್ಲು? ಮೋಗ್ಲಿ ಈಗ ನೋಡಿದರೆ ನಿನ್ನನ್ನು ಕಚ್ಚಿ ಸಾಯಿಸುತ್ತಾನೆ ನೋಡು" ಆಗಲೇ ನಾನು ಈ ಗಾದೆಯನ್ನು ಮೊದಲ ಬಾರಿಗೆ ಕೇಳಿದ್ದು.