Showing posts with label ಅಳಿವಿನ ಅಂಚಿನಲ್ಲಿರುವ ಗಾದೆಗಳು. Show all posts
Showing posts with label ಅಳಿವಿನ ಅಂಚಿನಲ್ಲಿರುವ ಗಾದೆಗಳು. Show all posts

August 7, 2012

ನೊಣ ತಿಂದು (ಉತ್ತರ ಕನ್ನಡದ ಗಾದೆ – 255 ಮತ್ತು 256)


ನೊಣ ತಿಂದು ಜಾತಿ ಕೆಟ್ಟಂತೆ.
ಯಾವುದೇ ಮಾಂಸವನ್ನು ತಿಂದರೂ ಜಾತಿ ಕೆಡುತ್ತದೆ. ನೊಣದಂಥ ಕೀಟವನ್ನು ತಿಂದರೂ ಅದು ಮಾಂಸವೇ ಆಗಿರುವುದರಿಂದ ಜಾತಿ ಕೆಟ್ಟೇ ಕೆಡುತ್ತದೆ. ಎಷ್ಟೋ ವರ್ಷಗಳ ಕಾಲ ಜಾತಿಗೆ ಬದ್ಧನಾಗಿ ನಡೆದುಕೊಂಡು ಒಮ್ಮೆ ಅರಿವಿಲ್ಲದೆಯೇ ನೊಣವನ್ನು ತಿಂದು ಜಾತಿ ಕೆಟ್ಟುಹೋಗುತ್ತದೆ. ಅಂದರೆ, ಎಷ್ಟೋ ವರ್ಷ ಸರಿಯಾಗಿ ನಡೆದುಕೊಂಡು ಎಂದಾದರೊಮ್ಮೆ ಅತಿ ಚಿಕ್ಕ ತಪ್ಪಿನಿಂದಾಗಿ reputation ಕೆಡುವಂತಾದರೆ ಈ ಗಾದೆಯನ್ನು ಬಳಸುತ್ತಾರೆ- "ಅಯ್ಯೋ, ನೊಣತಿಂದು ಜಾತಿ ಕೆಟ್ಟಂತಾಯಿತು" ಎಂದು. ಇನ್ನೂ ಕೆಲವೊಮ್ಮೆ, ಸಣ್ಣ-ಪುಟ್ಟ ತಪ್ಪುಗಳಾಗುವ ಬಗ್ಗೆ ಹುಷಾರಾಗಿರೋಣ; ನೊಣ ತಿಂದು ಜಾತಿ ಕೆಡುವುದು ಬೇಡ" ಎಂದೂ ಕೂಡ ಹೇಳುತ್ತಾರೆ.

ಇದೇ ರೀತಿಯಲ್ಲಿ ಬಳಸುವ ಇನ್ನೊಂದು ಗಾದೆ- ಮಾಳಶೆಟ್ಟಿ ಸಾಯುವ ಕಾಲಕ್ಕೆ ಮೀನು ತಿಂದಿದ್ದ. ಶೆಟ್ಟಿಯಾದರೂ ಅವನು ಎಂದೂ ಮೀನು ತಿಂದಿರಲಿಲ್ಲ, ಆದರೆ ಅದೇನಾಯಿತೋ ಗೊತ್ತಿಲ್ಲ- ಸಾಯುವ ಕಡೇ ಕಾಲದಲ್ಲಿ ಮೀನು ತಿಂದುಬಿಟ್ಟಿದ್ದ!

June 26, 2012

ಕಣ್ಣು ಹೆದರಿಸಿತ್ತು (ಉತ್ತರ ಕನ್ನಡದ ಗಾದೆ – 254)

ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು.
ಇದೆಂಥ ಸುಂದರ ಗಾದೆ ಗೊತ್ತಾ? ನನ್ನ ಅತ್ಯಂತ ಪ್ರೀತಿಯ ಗಾದೆಗಳಲ್ಲೊಂದು. ಈ ಗಾದೆಯನ್ನು ನಾನು ಮೊಟ್ಟಮೊದಲ ಬಾರಿ ಕೇಳಿದ್ದು ಚಿಕ್ಕವಳಿದ್ದಾಗ ಗದ್ದೆನಾಟಿಯ ಸಮಯದಲ್ಲಿ. ಗದ್ದೆನಾಟಿ ಮಾಡುವಾಗ ಭತ್ತದ ಸಸಿಯನ್ನು ನೆಡುತ್ತಾ ಹಿಮ್ಮುಖವಾಗಿ ಹೋಗುತ್ತಿರುತ್ತಾರೆ. ಒಂದು ಗದ್ದೆಯನ್ನು ಪ್ರಾರಂಭಿಸಿದಾಗ ಹಿಂದಿರುಗಿ ನೋಡಿದರೆ ಅದು ಮುಗಿಯುವುದೇ ಇಲ್ಲ ಎನ್ನುವಷ್ಟು ದೂರವಾಗಿ ಕಾಣಿಸುತ್ತದೆ. ಆಗ ನಾಟಿ ಮಾಡುತ್ತಿರುವವರಿಗೆ Negative feelings ಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ ನಾಟಿಯ ಸಮಯದಲ್ಲಿ ಅಲ್ಲಿರುವ ಹಿರಿಯರು ಕಿರಿಯರಿಗೆ ಹಿಂದಿರುಗಿ ನೋಡಲು ಬಿಡುವುದಿಲ್ಲ. ಒಂದು ಸಲ ಯಾರೋ ಹಿಂದಿರುಗಿ ನೋಡಿ ಇದೇನು ಮುಗಿಯುವ ರೀತಿಯೇ ಕಾಣಿಸುತ್ತಿಲ್ಲವಲ್ಲ? ಎಂದಾಗ ಅಲ್ಲಿರುವ ಹಿರಿಯರು ಯಾರೋ ಹೀಗೆ ಹೇಳಿದ್ದರು, ಸುಮ್ಮನಿರು, ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು. ನಿಜ, ಕಣ್ಣಳತೆ ಯಾವತ್ತೂ ಬೆಚ್ಚಿಬೀಳಿಸುತ್ತದೆ. ಅಯ್ಯೋ ಇಷ್ಟೆಲ್ಲಾ ಕೆಲಸವನ್ನು ಮುಗಿಸುವುದು ಹೇಗಪ್ಪಾ? ಎನ್ನುವ ಭಾವನೆಯನ್ನು ಹುಟ್ಟಿಸುತ್ತದೆ. ಆದರೆ ಕೆಲಸವನ್ನು ಪ್ರಾರಂಬಿಸಿದರೆ ಅದು ತಾನಾಗಿಯೇ ಮುಗಿಯುತ್ತಾ ಬರುತ್ತದೆ. A journey of thousand miles begins with a single step! ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಬರೆಯಲಿಕ್ಕಿರುವ ಪುಟಗಳ ಸಂಖ್ಯೆಯನ್ನು ನೋಡಿ ಭಯಬಿದ್ದು ನನಗೇ ನಾನು ಹೇಳಿಕೊಳ್ಳುತ್ತಿದ್ದೆ- ಇಲ್ಲ.. ಇಲ್ಲ, ಬರೆಯುತ್ತಾ ಹೋದಂತೆ ಗೊತ್ತೇ ಆಗದಂತೆ ಮುಗಿದುಹೋಗುತ್ತದೆ; ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು ಎಂದು. ಇಂದೂ ಕೂಡ ಎಷ್ಟೊಂದು ಬಾರಿ ನನಗೇ ನಾನು ಈ ಮಾತನ್ನು ಹೇಳಿಕೊಳ್ಳುತ್ತೇನೆ; ಕೆಲಸ ಮಾಡುವ ಉತ್ಸಾಹ ಬರುತ್ತದೆ. 

June 21, 2012

ಉಣ್ಣಲಿಕ್ಕೆ ಇಲ್ಲದಿದ್ದರೆ (ಉತ್ತರ ಕನ್ನಡದ ಗಾದೆ – 253)

ಉಣ್ಣಲಿಕ್ಕೆ ಇಲ್ಲದಿದ್ದರೆ ಸಣ್ಣಕ್ಕಿ ಅನ್ನ, ಉಡಲಿಕ್ಕೆ ಇಲ್ಲದಿದ್ದರೆ ಪಟ್ಟೆ ಸೀರೆ.
ನಿಜವಾಗಿ ಈ ಗಾದೆ "ಉಣ್ಣಲಿಕ್ಕೆ ಇಲ್ಲದಿದ್ದರೂ ಸಣ್ಣಕ್ಕಿ  ಅನ್ನ, ಉಡಲಿಕ್ಕೆ ಇಲ್ಲದಿದ್ದರೂ ಪಟ್ಟೆ ಸೀರೆ" ಎಂದಾಗಬೇಕು. ಆದರೆ ಆಡು ಭಾಷೆಯಲ್ಲಿ  ಇಲ್ಲದಿದ್ದರೂ ಎನ್ನುವುದು ಇಲ್ಲದಿದ್ದರೆ ಎಂದು ಮಾರ್ಪಾಟಾಗಿದೆ. ತಮ್ಮ ಹಣಕಾಸಿನ ಮಿತಿಯನ್ನು ಅರಿತುಕೊಳ್ಳದೇ ಖರ್ಚು ಮಾಡುವವರನ್ನು ನೋಡಿದಾಗ ಹೇಳುವ ಮಾತು ಇದು. ಮನೆಯಲ್ಲಿ ಅಕ್ಕಿಗೆ ಗತಿಯಿಲ್ಲದಿದ್ದರೂ ಹೇಗಾದರೂ ಸಣ್ಣಕ್ಕಿ ತಂದು ಊಟಮಾಡುತ್ತಾರೆ, ಬಟ್ಟೆಗೆ ಗತಿಯಿಲ್ಲದಿದ್ದರೂ ರೇಷ್ಮೆಸೀರೆಯನ್ನೇ ಉಡುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ  ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಇನ್ನೊಂದು ಗಾದೆ ಇದೇ ರೀತಿಯ ಅರ್ಥವನ್ನು ಕೊಡುತ್ತದೆ. ನೋಡಿ- http://seemahegde78.blogspot.nl/2008/02/163-164.html

February 6, 2012

ಡಾಕ್ಟರ ಹೆಂಡತಿ (ಉತ್ತರ ಕನ್ನಡದ ಗಾದೆ – 252)

ಡಾಕ್ಟರ ಹೆಂಡತಿ ಹುಳಿಸಿಕೊಂಡು ಸಾಯುತ್ತಾಳೆ.
'ಹುಳಿಸಿಕೊಂಡು' ಎಂದರೆ 'ಹುಳುವಾಗಿಸಿಕೊಂಡು' ಅಂದರೆ... 'ಹುಳುವನ್ನು ದೇಹದಲ್ಲಿ ಹೊಂದಿರು' ಎಂದರ್ಥ. ದನ-ಕರುಗಳಿಗೆ ಗಾಯಗಳಾಗಿ ಕೆಲವೊಮ್ಮೆ ಅದರಲ್ಲಿ ಹುಳುಗಳಾಗುತ್ತವೆ. ಆಗ ಹೇಳುವುದುಂಟು- "ದನ ಹುಳಿಸಿಕೊಂಡಿದೆ" ಎಂದು.

ಡಾಕ್ಟರಿಗೆ ಬೇರೆ ರೋಗಿಗಳನ್ನು ನೋಡಿ ಮುಗಿಸುವಷ್ಟರಲ್ಲೇ ಸಾಕು ಸಾಕಾಗಿರುತ್ತದೆ. ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೂ ನೋಡಲು ಪುರಸೊತ್ತಿಲ್ಲ. ಹೆಂಡತಿಗೆ ಚಿಕ್ಕ ಗಾಯವಾದರೆ, "ಚಿಕ್ಕ ಗಾಯ ಬಿಡು, ಹೋಗುತ್ತದೆ" ಎಂದು ಉಪೇಕ್ಷಿಸುತ್ತಾನೆ. ಅದೇ ಗಾಯ ದೊಡ್ಡದಾಗುತ್ತದೆ, ಅದರಲ್ಲಿ ಹುಳುಗಳಾಗುತ್ತವೆ, ಆದರೂ ನೋಡಲು ಡಾಕ್ಟರಿಗೆ ಬಿಡುವಿಲ್ಲ. ಹುಳುಗಳನ್ನು ಹೊಂದಿದ ಗಾಯ ಹೆಂಡತಿಯ ಸಾವಿಗೂ ಕಾರಣವಾಗಬಹುದು. ಊರಿಗೆಲ್ಲ ಮದ್ದು ನೀಡುವ ಡಾಕ್ಟರು ಮನೆಯ ಜನರ ಆರೋಗ್ಯವನ್ನು ಉಪೇಕ್ಷಿಸಿದಾಗ ಬೇಸರದಿಂದ ಹೇಳುವ ಮಾತು ಇದು. ಇಂಥದೇ ಒಂದು ಗಾದೆಯನ್ನು ಈ ಹಿಂದೆ ಹಾಕಿದ್ದೇನೆ ನೋಡಿ- http://seemahegde78.blogspot.in/2008/10/199.html

ಕುಂಬಾರನ ಮನೆಯ ಮಡಿಕೆ ತೂತು ಮತ್ತು ನೇಕಾರನ ಹೆಂಡತಿಗೆ ಹರುಕಲು ಸೀರೆ ಎನ್ನುವ ಗಾದೆಗಳಂತೆಯೇ ಡಾಕ್ಟರ ಹೆಂಡತಿಯ ಗಾದೆಯೂ ಕೂಡ.   

January 18, 2012

ಬಡಿ ಗೋವಿಗೇಕೆ (ಉತ್ತರ ಕನ್ನಡದ ಗಾದೆ – 251)


ಬಡಿ ಗೋವಿಗೇಕೆ ಧರೆಯಂಚಿನ ಹುಲ್ಲು?
'ಬಡಿ' ಎಂಬ ಪದ 'ಬಡವ' ಎಂಬ ಅರ್ಥವನ್ನು ಕೊಡುತ್ತದೆ. ಆರ್ಥಿಕವಾಗಿ ಬಡವ ಎಂದಲ್ಲ, ಆದರೆ 'ಅಯ್ಯೋ ಪಾಪ' ಎಂಬ ಅರ್ಥ. 'ಬಡವ' ಎಂಬುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂದರ್ಭಿಕವಾಗಿ ಬಳಸಲ್ಪಡುತ್ತದೆ. ಕೆಲವೊಮ್ಮೆ ಆರ್ಥಿಕವಾಗಿ ಬಡವ ಎಂಬುದನ್ನು ಸೂಚಿಸಿದರೆ, ಮತ್ತೊಮ್ಮೆ ಬಡಪಾಯಿ, ಪಾಪದವ ಎಂಬುದನ್ನು ಸೂಚಿಸುತ್ತದೆ. 'ಬಡಿ' ಎಂಬ ಶಬ್ದ ಇನ್ನೂ ಕೆಲವೊಮ್ಮೆ ಕೃಷ ಶರೀರವನ್ನು ಸೂಚಿಸುತ್ತದೆ. ಎಲ್ಲವೂ ಸಂದರ್ಭಕ್ಕೆ ತಕ್ಕಂತೆ ಬಳಸಲ್ಪಡುತ್ತವೆ.

ಧರೆ ಎಂದರೇನು ಎಂಬುದನ್ನು ವಿವರಿಸುವುದು ಕಷ್ಟ. ಭೂಮಿಯ ಕಡಿದಾದ ಭಾಗ ಎನ್ನಬಹುದು. ಒಂದು ಕಡೆ ಕಡಿದಾಗಿದ್ದರೆ ಇನ್ನೊಂದು ಕಡೆಯಿಂದ ಅದರ ತುದಿಯವರೆಗೆ ಹೋಗಬಹುದಾಗಿರುತ್ತದೆ. ಈ ಕೆಳಗಿನ photos ನೋಡಿ. 
ಈ ಗಾದೆಯಲ್ಲಿ ಬಡಿ ಗೋವು ಎಂದರೆ, ಪಾಪದ ಗೋವು ಅಥವಾ ಮೈಯಲ್ಲಿ ಹೆಚ್ಚು ಶಕ್ತಿ ಇಲ್ಲದ ಗೋವು ಎಂದರ್ಥ. ಅಂಥ ಗೋವು ಧರೆಯಂಚಿನ ಹುಲ್ಲಿಗೆ ಆಸೆಪಟ್ಟು ಅಲ್ಲಿಗೆ ಹೋದರೆ ಬಿದ್ದು ಹೋಗುವ ಸಂಭವ ಜಾಸ್ತಿ. ಬಡಪಾಯಿಯಾದ ವ್ಯಕ್ತಿಯು ತನ್ನ ಶಕ್ತಿಗೂ ಮೀರಿದಂಥ ಕೆಲಸಕ್ಕೆ ಕೈಹಾಕಿ ತನ್ನನ್ನು ತಾನು ಕಷ್ಟದಲ್ಲಿ ಸಿಕ್ಕಿಸಿಕೊಳ್ಳುವಂಥ ಸಂದರ್ಭದಲ್ಲಿ ಈ ಗಾದೆಯನ್ನು ಹೇಳಬಹುದು.

ನಮ್ಮ ಮನೆಯ ಎರಡು ನಾಯಿಗಳಲ್ಲಿ ಮೋಗ್ಲಿ ಭಯಂಕರ ಗಾತ್ರದ Doberman ನಾಯಿ; ಇನ್ನೊಂದು ದೇಸಿ ತಳಿಯ ಸಣ್ಣ ನಾಯಿ ಚೋಟು. ಆ ಚೋಟು ಒಮ್ಮೆ ಮೋಗ್ಲಿ ಆಚೆ ಎಲ್ಲೋ ಇರುವಾಗ ಅವನ ಅನ್ನದ ಪಾತ್ರೆಗೆ ಬಾಯಿ ಹಾಕಲು ಹೊರಟಿದ್ದನ್ನು ನೋಡಿದ ಅಮ್ಮ ಹೇಳಿದ್ದರು- "ಸುಮ್ಮನಿರು ಚೋಟು, ಬಡಿ ಗೋವಿಗೇಕೆ ಧರೆಯಂಚಿನ ಹುಲ್ಲು? ಮೋಗ್ಲಿ ಈಗ ನೋಡಿದರೆ ನಿನ್ನನ್ನು ಕಚ್ಚಿ ಸಾಯಿಸುತ್ತಾನೆ ನೋಡು" ಆಗಲೇ ನಾನು ಈ ಗಾದೆಯನ್ನು ಮೊದಲ ಬಾರಿಗೆ ಕೇಳಿದ್ದು. 

August 30, 2011

ಅರಿಶಿಣದ ಅನ್ನಕ್ಕೆ ಹೋಗಿ (ಉತ್ತರ ಕನ್ನಡದ ಗಾದೆ – 250)

ಅರಿಶಿಣ ಅನ್ನಕ್ಕೆ ಹೋಗಿ ವರುಷನ ಅನ್ನ ಕಳೆದುಕೊಂಡಿದ್ದ.

ಅರಿಶಿಣ ಇದರ correct form ‘ಅನ್ನಕ್ಕೆ ಹೋಗಿ ವರುಷದ ಅನ್ನ ಕಳೆದುಕೊಂಡಿದ್ದಎಂಬುದು. ಪ್ರಾಸಕ್ಕೆ ಸರಿ ಹೊಂದುವಂತೆವರುಷನ ಎಂದು ಹೇಳುತ್ತಾರೆ. ಅರಿಶಿಣದ ಅನ್ನ ಅಂದರೆ ಚಿತ್ರಾನ್ನ. ಪೇಟೆಯ ಜನರಿಗೆ ಇಂದಿನ ಅನ್ನ ಉಳಿದರೆ ಅದನ್ನು ಹಾಳುಮಾಡದೆ ಬಳಸಬೇಕೆಂದರೆ ಇರುವ ಪ್ರಮುಖ ದಾರಿ- ನಾಳೆ ಚಿತ್ರಾನ್ನ! ಹಳ್ಳಿಗಳಲ್ಲಿ ಇಂದು ಅನ್ನ ಉಳಿದರೆ ಅದನ್ನು ನಾಳೆಯವರೆಗೆ ಇಡುವ ಪ್ರಮೇಯವಿರುವುದಿಲ್ಲ. ಇಂದೇ ದನ-ಕರುಗಳಿಗೆ ಕೊಟ್ಟು ಖಾಲಿಮಾಡಿಬಿಡುತ್ತಾರೆ. ಹಳ್ಳಿಗಳಲ್ಲಿ ಚಿತ್ರಾನ್ನ ಮಾಡುವುದು ಕೇವಲ ವಿಶೇಷದ ದಿನಗಳಲ್ಲಿ ಮಾತ್ರ. ಅಂದರೆ ಹಬ್ಬ ಹರಿದಿನಗಳು ಅಥವಾ ಶ್ರಾದ್ಧದ ದಿನಗಳು. ಯಾರೋ ಒಬ್ಬ ಹಬ್ಬದೂಟದ ಆಸೆಗೆ (ಅರಿಶಿಣ ಅನ್ನಕ್ಕೆ) ಪ್ರತಿದಿನ ಬೇರೆಯವರ ಮನೆಗೆ ಹೋಗುತ್ತಿದ್ದನಂತೆ. ಇಂದಿನ ದಿನ ಕಳೆದರಾಯಿತೆಂಬಭಾವನೆ ಅವನಿಗೆ. ಪ್ರತಿದಿನ ಮನೆಯಲ್ಲಿರದ ಅವನಿಗೆ ತನ್ನ ಗದ್ದೆ-ತೋಟಗಳ ಕಡೆ ಗಮನವೇ ಇರಲಿಲ್ಲ. ಅವು ಹಾಳುಬಿದ್ದು ಆ ವರ್ಷ ಅವನಿಗೆ ಬೆಳೆಯೇ ಸಿಗಲಿಲ್ಲ. ಅರಿಶಿಣ ಅನ್ನದ ಆಸೆಯಲ್ಲಿ ವರ್ಷಾವಧಿಯ ಅನ್ನವನ್ನು ಕಳೆದುಕೊಂಡುಬಿಟ್ಟಿದ್ದ. ಮುಂದಿನ ದಿನಗಳ ಬಗ್ಗೆ ಆಲೋಚನೆ ಮಾಡದೆ ಇಂದು ಸಿಗುವ ಸಣ್ಣ ಸುಖದ ಬೆನ್ನುಹತ್ತಿ ಹೋಗುವವರನ್ನು ಕುರಿತುಹೇಳಬಹುದಾದಂತ ಗಾದೆ ಇದು.

April 14, 2011

ಕುರುಡನಿಗೆ ದೀಪ ಬೇಡವಾದರೆ (ಉತ್ತರ ಕನ್ನಡದ ಗಾದೆ – 249)

ಕುರುಡನಿಗೆ ದೀಪ ಬೇಡವಾದರೆ ಮನೆಮಂದಿಗೆಲ್ಲಾ ದೀಪ ಬೇಡವೇ? ಕುರುಡನಿಗೆ ದೀಪ ಇದ್ದರೂ, ಇಲ್ಲದಿದ್ದರೂ ವ್ಯತ್ಯಾಸವಾಗುವುದಿಲ್ಲ. ಆದರೆ ಮನೆಯಲ್ಲಿ ಕುರುಡರಲ್ಲದ ಇನ್ನಿತರರಿಗೆ ದೀಪದ ಅವಶ್ಯಕತೆ ಇರುತ್ತದೆ. ತನಗೆ ಉಪಯೋಗವಿಲ್ಲವೆಂದಾದ/ ಬೇಡವಾದ ವಸ್ತು ಇತರರಿಗೂ ಬೇಡವಾಗಿರುತ್ತದೆ ಎಂಬ ಅಭಿಪ್ರಾಯದಲ್ಲಿ ಕೆಲವರಿರುತ್ತಾರೆ. ಅಂಥವರ ಬಗ್ಗೆ ಬಳಸಬಹುದಾದ ಗಾದೆ ಇದು. ಉಳಿದೆಲ್ಲ ವೈಕಲ್ಯಗಳಿಗಿಂಥ ಕುರುಡುತನ ಕಷ್ಟದ್ದು. ಕಣ್ಣು ಇದ್ದವರಿಗಿಂತ ಎಷ್ಟೋ ಹೆಚ್ಚಿನ ಸಾಧನೆ ಮಾಡಿದ ಕುರುಡರೂ ಇದ್ದಾರೆ. ಎಲ್ಲಾ ಕುರುಡರ ಬಗ್ಗೆ ಅಪಾರ ಗೌರವಗಳೊಂದಿಗೆ ಈ ಗಾದೆಯನ್ನು ಬರೆಯುತ್ತಿದ್ದೇನೆ. ಓದುಗರು ಈ ಗಾದೆಯಲ್ಲಿ 'ಕುರುಡ' ಎಂಬ ಪದಕ್ಕೆ ಒತ್ತು ನೀಡದೆ, ಗಾದೆಯ ಒಳಾರ್ಥವನ್ನು ಗ್ರಹಿಸಲಿ ಎಂಬ ಆಶಯ ನನ್ನದು.

February 21, 2011

ತಾನು ಕೆಟ್ಟು ಇರಬಹುದು (ಉತ್ತರ ಕನ್ನಡದ ಗಾದೆ – 248)

ತಾನು ಕೆಟ್ಟು ಇರಬಹುದು; ತವರು ಕೆಟ್ಟು ಇರಲಾಗದು.
ಹೆಣ್ಣು ಮಕ್ಕಳಿಗೆ ತವರುಮನೆಯ ಬಗ್ಗೆ ಇರುವ ಪ್ರೀತಿಯನ್ನು ಹೇಳುವ ಗಾದೆ ಇದು. ತಮಗೇನಾದರೂ ಕಷ್ಟ ಬಂದರೆ ಸಹಿಸಿಕೊಳ್ಳುತ್ತಾರೆ. ಆದರೆ ತವರು ಮನೆಯಲ್ಲಿ ಕಷ್ಟ ಎಂದು ತಿಳಿದಾಗ ಹೆಣ್ಣುಮಕ್ಕಳು ಅನುಭವಿಸುವ ಚಡಪಡಿಕೆ ಅವರ್ಣನೀಯ. ತವರಿನ ಕಷ್ಟಕ್ಕೆ ಸಹಾಯ ಮಾಡಬೇಕೆಂದೆನಿಸಿದರೂ ಗಂಡನ ಮನೆಯಲ್ಲಿ ಬರುವ ಪ್ರತಿಕ್ರಿಯೆಯನ್ನು ನೆನೆನು ಸುಮ್ಮನಾಗುತ್ತಾರೆ. ಒಂದುವೇಳೆ ಅವರು ಸಹಾಯಕ್ಕೆ ಬಂದರೂ ಸಹಾಯ ತೆಗೆದುಕೊಳ್ಳಲು ತವರುಮನೆಯವರು ಸಮಾಜದಲ್ಲಿ ಜನರು ವಿಧ ವಿಧವಾಗಿ ಮಾತನಾಡುತ್ತಾರೆ ಎಂಬ ಭಯದಿಂದ ಹಿಂಜರಿಯುತ್ತಾರೆ. ಇದು ಹಿಂದಿನಕಾಲಕ್ಕೆ ಅನ್ವಯಿಸುವಂಥ ಮಾತು. ಈಗ ಪರಿಸ್ಥಿತಿ ಬದಲಾಗಿದೆ. ಆದರೆ ಹೆಣ್ಣುಮಕ್ಕಳ ತವರಿನ ಮೇಲಿನ ಪ್ರೀತಿ ಬದಲಾಗಲಿಲ್ಲ. ಇಬ್ಬರೂ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸಹಾಯಮಾಡುವಂಥ ಸೌಹಾರ್ದ ಪರಿಸ್ಥಿತಿ ಇದೆ.

'ತವರುಮನೆ' ಎಂಬ ಶಬ್ದವನ್ನು ಕೇಳಿದಾಕ್ಷಣವೇ ಏನೋ ಒಂಥರಾ ಪುಳಕ. ಮದುವೆಯಾಗಿ ಬಂದ ಎಲ್ಲ ಹೆಣ್ಣುಮಕ್ಕಳೂ ಅನುಭವಿಸುತ್ತಾರೆ. ಮದುವೆಯಾಗಿ ಎಷ್ಟೋ ವರ್ಷಗಳ ನಂತರವೂ ಬಹುಪಾಲು ಹೆಣ್ಣುಮಕ್ಕಳಿಗೆ ತವರುಮನೆಯ ಮೇಲಿನ ಪ್ರೀತಿ ಅಷ್ಟೇ ತೀವ್ರವಾಗಿರುತ್ತದೆ; ಇರಬೇಕು ಕೂಡ. ನಾನೂ ಹಾಗೆ ಸ್ವಲ್ಪ ಭೂತಕಾಲಕ್ಕೆ.....


ನನ್ನ ಮದುವೆಯಾದ ಹೊಸದರಲ್ಲಿ ನಾವು ಶಿರಸಿಯಲ್ಲಿ ವಾಸವಾಗಿದ್ದೆವು. ನಮ್ಮ ಮನೆ main road ಗೆ ತುಂಬಾ ಹತ್ತಿರವಿದ್ದುದರಿಂದ ಊರ ಕಡೆಯಿಂದ ಬರುವ ಬಸ್ಸುಗಳನ್ನೆಲ್ಲ ನಾನು excited ಆಗಿ ನೋಡುತ್ತಿದ್ದೆ ಮತ್ತು "ನಮ್ಮನೆಗೆ ಹೋಗುವ ಬಸ್ಸು" ಎಂದು ಹೇಳುತ್ತಿದ್ದೆ! ಆಗ ರಾಜೀವ ತಮಾಷೆ ಮಾಡುತ್ತಿದ್ದುದು ಇನ್ನೂ ನೆನಪಿದೆ- "ನೋಡು, ನೋಡು ಆ ಬಸ್ಸಿನ ಮೇಲೆ ನಿನ್ನ ಅಮ್ಮ ತನ್ನ ಕೈ ಅಚ್ಚು ಹೊಡೆದು ಕಳಿಸಿದ್ದಾಳೆ.... ಸರಿಯಾಗಿ ನೋಡು...ಅಯ್ಯೋ ಬಸ್ಸು ಹೋಯಿತು ಬಿಡು...ನಂಗೆ ಕಾಣಿಸಿತು... ಮುಂದಿನ ಬಸ್ಸಿಗೂ ಇರುತ್ತದೆ...ಆಗ ನೋಡಬಹುದು." ನಗುತ್ತಿದ್ದೆ; ಆದರೆ ಕಣ್ಣಲ್ಲಿ ನೀರು ಬರುತ್ತಿದ್ದುದು ನಿಜ. ಈಗಿನ ನನ್ನ ಮನೆ 'ನನ್ನ ಮನೆ' ಎಂದು ಅನಿಸಲು ಎಷ್ಟೋ ದಿನಗಳು ಬೇಕಾದವು. ಎಷ್ಟೋ ಸಲ ರಾಜೀವನ ಬಳಿ "ನಿನ್ನ ಮನೆಯಲ್ಲಿ....." ಎನ್ನುತ್ತಾ ಮಾತಿಗಾರಂಭಿಸುತ್ತಿದ್ದೆ. ಮತ್ತೆ ನಗುವ ಸರದಿ ಅವನದು- "ಈ ಮನೆ ನಿಂದೂ ಕೂಡಾ" ಎನ್ನುತ್ತಿದ್ದ. ಅವನಿಗೂ ಗೊತ್ತು, ನನ್ನ ಒಳಗೆ ಏನು ನಡೆಯುತ್ತಿದೆಯೆಂದು. ಅವನು ಕೆಲವೊಮ್ಮೆ ಹೀಗೆ ಹೇಳಿದ್ದೂ ಇದೆ- "ನೋಡು, ನಿನಗಾದರೆ ಈಗ ಎರಡು ಮನೆ; ನನಗೆ ಒಂದೇ ಮನೆ". ಒಂದು ಕ್ಷಣ ಸಮಾಧಾನವಾದರೂ ಮರುಕ್ಷಣ ಮತ್ತದೇ ಬೇಜಾರು.

ನಂತರ ಕೆಲಸಗಳಲ್ಲಿ busy ಆಗುತ್ತಿತ್ತದ್ದಂತೆ ಈ ಬೇಜಾರು ಸ್ವಲ್ಪ ಸ್ವಲ್ಪ ಕಡಿಮೆಯಾಗುತ್ತಾ ಹೋಯಿತು. ಅಷ್ಟರಲ್ಲಿ ಮನಸ್ಸು ಕೂಡ ಪರಿಸ್ಥಿತಿಯನ್ನು ಒಪ್ಪಿಕೊಳ್ಳತೊಡಗಿತು. ಆದರೆ ಈಗ ಕೂಡ ಕೆಲವೊಮ್ಮೆ ಅಷ್ಟೇ ತೀವ್ರವಾಗಿ 'ನನ್ನ ಮನೆಯ' ನೆನಪು ಕಾಡುತ್ತದೆ. ಒಮ್ಮೆ ಹೋಗಿಯಾದರೂ ಬರೋಣ ಎನಿಸುತ್ತದೆ. ಇಲ್ಲಿರುವ ಕೆಲಸಗಳು ಕಟ್ಟಿಹಾಕುತ್ತವೆ; ಸುಮ್ಮನಾಗುತ್ತೇನೆ; ಮನಸ್ಸಿಗೆ ಬುದ್ಧಿ ಹೇಳುತ್ತೇನೆ.


January 7, 2011

ಕೋಡ ಕೋಡ ಹೆಣ್ಣುಮಕ್ಕಳಿಗೆ (ಉತ್ತರ ಕನ್ನಡದ ಗಾದೆ – 247)

ಕೋಡ ಕೋಡ ಹೆಣ್ಣುಮಕ್ಕಳಿಗೆ ಕೋಡುಬಳೆಯೇ ಕಜ್ಜಾಯ.
ಕೋಡ= ಕೊಡಗ= ಮಂಗ. ಕೋಡುಬಳೆಯನ್ನು ಯಾರೂ ಸಾಮಾನ್ಯವಾಗಿ ಕಜ್ಜಾಯ ಎಂದು ಪರಿಗಣಿಸುವುದಿಲ್ಲ.
ಮಂಗಗಳಂತೆ ನಡುವಳಿಕೆಯುಳ್ಳ ಹೆಣ್ಣುಮಕ್ಕಳಿಗೆ ಕೋಡುಬಳೆಯನ್ನೇ ಕಜ್ಜಾಯವೆಂದು ನೀಡುತ್ತಾರೆ; ಅವರ ಯೋಗ್ಯತೆಗೆ ಅದೇ ಸಾಕು ಎಂದು. ಹಗುರವಾದ ವ್ಯಕ್ತಿತ್ವವುಳ್ಳವರನ್ನು ಇತರರು ಯಾವುದೋ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಅಂಥವರಿಗೆ ಕೊಡುವ ಬೆಲೆ ಕಡಿಮೆ ಎಂಬರ್ಥದ ಗಾದೆ.

December 29, 2010

ಒಂದೇ ಮಳೆಗೆ ಒಂದು ಕೊಡೆ (ಉತ್ತರ ಕನ್ನಡದ ಗಾದೆ – 246)

ಒಂದೇ ಮಳೆಗೆ ಒಂದು ಕೊಡೆ ಹರಿಯಬಾರದು
ಯಾರೊಬ್ಬರನ್ನೂ ಒಂದೇ ಸಂದರ್ಭವನ್ನು ನೋಡಿ ಅಳೆಯಬಾರದು. ಹಲವಾರು ಪ್ರಕರಣಗಳ ನಂತರ ಒಬ್ಬ ವ್ಯಕ್ತಿಯ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರಬೇಕು- ಇಂಥ ಸಂದರ್ಭಗಳಲ್ಲಿ ಬಳಸುತ್ತಾರೆ.

ಕೊಡೆ ಯಾವುದೊ ಒಂದು ಜೋರು ಮಳೆಗೆ ಸ್ವಲ್ಪ ಚೆನ್ನಾಗಿಲ್ಲ ಅನಿಸಿದರೂ ಅದು ಎಸೆದು ಬಿಡುವಂಥ ಕೊಡೆ ಅಲ್ಲದಿರಬಹುದು. ಮಳೆಯ ಅಬ್ಬರಕ್ಕೆ ಕೊಡೆ ಆ ಕಡೆ ಈ ಕಡೆ ಆಗಬಹುದು. ಅಂತೆಯೇ ಒಬ್ಬ ವ್ಯಕ್ತಿಯೂ ಕೂಡ ಸಂದರ್ಭಕ್ಕೆ ಸಿಲುಕಿ ವಿಚಿತ್ರವಾಗಿ ವರ್ತಿಸಿರಬಹುದು. ಅಂದ ಮಾತ್ರಕ್ಕೆ ಆ ವ್ಯಕ್ತಿಯೇ ಹಾಗೆ ಎಂದು ನಿರ್ಧರಿಸಬಾರದು. ಒಂದೆರಡು ಮಳೆಯನ್ನೂ ನೋಡಿದಾಗ ಕೊಡೆಯ ಯೋಗ್ಯತೆ ಗೊತ್ತಾಗುತ್ತದೆ; ಒಂದೆರಡು ಸನ್ನಿವೇಶಗಳನ್ನು ನೋಡಿದಾಗ ಒಬ್ಬ ವ್ಯಕ್ತಿಯ ಯೋಗ್ಯತೆ ಗೊತ್ತಾಗುತ್ತದೆ.

ಎಂಥ ಅರ್ಥಪೂರ್ಣ ಸುಂದರ ಗಾದೆ ಅಲ್ವ?

December 22, 2010

ಅಮಟೆ ಮರ (ಉತ್ತರ ಕನ್ನಡದ ಗಾದೆ – 244 ಮತ್ತು 245)

ಅಮಟೆ ಮರ ಅಪ್ಪನ ಮನೆಗೆ ಹೋದಂತೆ.
ಅಮಟೆ ಮರ ತವರಿಗೆ ಹೋಗಬೇಕು ಎಂದು ವಿಚಾರ ಮಾಡುತ್ತದೆಯಂತೆ. ವರ್ಷದ ಒಂದು ಕಾಲದಲ್ಲಿ ಮೈತುಂಬಾ ಕಾಯಿ ತುಂಬಿಕೊಡು ಬಿಡುತ್ತದೆ. ಆಗ ಆ ಭಾರವನ್ನು ಹೊತ್ತು ಹೋಗಲು ಸಾಧ್ಯವಿಲ್ಲ ಎಂದು ಹೋಗುವುದಿಲ್ಲವಂತೆ. ನಂತರ ಕಾಯೆಲ್ಲ ಹಣ್ಣಾಗಿ ಉದುರುವಷ್ಟರಲ್ಲಿ ಚಳಿಗಾಲಕ್ಕೆ ಪೂರ್ತಿ ಎಲೆಯನ್ನು ಉದುರಿಸಿ ಬೋಳಾಗಿ ನಿಲ್ಲುತ್ತದೆ. ಈ ರೀತಿ ಬೋಳು ಮೈಯ್ಯಲ್ಲಿ ಹೋಗುವುದು ಬೇಡವೆಂದುಕೊಳ್ಳುತ್ತದೆಯಂತೆ. ವಸಂತ ಬಂದಾಗ ಚಿಗುರುವ ಸಮಯ. ಹೋಗಲು ಸಮಯವೇ ಇಲ್ಲ.

ಎಲ್ಲಿಗಾದರೂ ಹೋಗುವುದನ್ನು ಅಥವಾ ಮಾಡುವ ಕೆಲಸಗಳನ್ನು ಕಾರಣಾಂತರಗಳಿಂದ ಮುಂದೆ ಹಾಕ ಬೇಕಾಗಿ ಬಂದರೆ ಇದನ್ನು ಹೇಳುತ್ತಾರೆ. "ಈ ಕೆಲಸ ನೋಡಿದರೆ ಗಣಪತಿಯ ಮದುವೆಯೇ ಎಂದು ಕಾಣುತ್ತದೆ" ಎಂದು ಹೇಳುವುದನ್ನು ಕೇಳಿರಬಹುದು.

ದೊಡ್ಡ ಕೆಲಸ ಮಾಡುತ್ತಿರುವಾಗ ಇತರ ಸಣ್ಣ ಪುಟ್ಟ ಕೆಲಸಗಳು ಅದ್ದಬಂದರೆ ಹೇಳುವ ಗಾದೆ 'ತೆರೆ ಕಳಿದು ಸಮುದ್ರ ಮುಳುಗಿದಂತೆ'. Check
http://seemahegde78.blogspot.com/2007/11/64.html

ಇವೆಲ್ಲಕ್ಕೂ ವ್ಯತಿರಿಕ್ತವಾಗಿ ಇನ್ನೊಂದು ಗಾದೆ- ಹಾಸ್ಯಗಾರನ ಹೆಂಡತಿ ಅಪ್ಪನ ಮನೆಗೆ ಹೋದ ಹಾಗೆ.
ವರ್ಷಕ್ಕೆ ಎರಡೇ ಬಾರಿ ಹೋಗುತ್ತಾಳೆ. ಒಮ್ಮೆ ಹೋದರೆ ಆರು ತಿಂಗಳು ಮಾತ್ರ ಉಳಿಯುತ್ತಾಳೆ!

November 19, 2010

ಅಜ್ಜಿ ಮುದುಕಿಯ ಕೋಳಿ (ಉತ್ತರ ಕನ್ನಡದ ಗಾದೆ – 243)

ಅಜ್ಜಿ ಮುದುಕಿಯ ಕೋಳಿ ಕೂಗದೆಯೇ ಬೆಳಗಾಗುತ್ತದೆ.
ಯಾರೋ ಒಬ್ಬರು ತನ್ನ ಸಹಾಯ ಇಲ್ಲದೆಯೇ ಯಾವುದೊ ಒಂದು ಕೆಲಸ ಆಗುವುದೇ ಇಲ್ಲ ಎಂದು ತಿಳಿದುಕೊಂಡಾಗ/ ಹೇಳಿದಾಗ ಈ ಗಾದೆಯನ್ನು ಬಳಸುತ್ತಾರೆ. ಈ ಗಾದೆಯ ಹಿನ್ನೆಲೆ ಈ ಕಥೆ.... ಒಂದು ಊರಲ್ಲಿ ಒಬ್ಬಳು ಅಜ್ಜಿಯಿದ್ದಳು. ಅವಳು ಒಂದು ಕೋಳಿಯನ್ನು ಸಾಕಿದ್ದಳು. ದಿನಾಲೂ ಆ ಕೋಳಿ ಬೆಳಗಾಗುವ ಮೊದಲು ಕೂಗುತ್ತಿತ್ತು. ಅಜ್ಜಿಯ ತಿಳುವಳಿಕೆ- ತನ್ನ ಕೋಳಿ ಕೂಗದಿದ್ದರೆ ಬೆಳಗೇ ಆಗುವುದಿಲ್ಲ. ಒಂದು ದಿನ ಅಜ್ಜಿ ಊರವರಿಗೆಲ್ಲಾ ಪಾಠ ಕಲಿಸಬೇಕೆಂದು ಬೆಳಗೇ ಆಗದಂತೆ ಮಾಡಬೇಕೆಂದುಕೊಂಡಳು. ಸಂಜೆಯಾಗುತ್ತಲೇ ಕೋಳಿಯನ್ನು ತೆಗೆದುಕೊಂಡು ಊರ ಹೊರಗೆ ಕಾಡಿಗೆ ಹೋಗಿ ಕುಳಿತುಕೊಂಡಳು. (ಅವಳ ಕೋಳಿ ಕಾಡಿನಲ್ಲಿ ಕೂಗಿತೋ ಇಲ್ಲವೋ ಗೊತ್ತಿಲ್ಲ :-). ಅವಳೆಣಿಸಿದಂತೆ ಆಗಲೇ ಇಲ್ಲ. ಊರಿನಲ್ಲಿ ಎಂದಿನಥೆಯೇ ಬೆಳಗಾಯಿತು.
ಯಾರು ಸಹಾಯ ಮಾಡಲಿ, ಮಾಡದಿರಲಿ, ಕೆಲಸಗಳು ನಡೆಯುವಂತೆ ನಡೆಯುತ್ತಲೇ ಇರುತ್ತವೆ.

October 31, 2010

ಅಪ್ಪಯ್ಯ ನನಗೆ ಹೊಡೆದ (ಉತ್ತರ ಕನ್ನಡದ ಗಾದೆ – 241 ಮತ್ತು 242 )

ಅಪ್ಪಯ್ಯ ನನಗೆ ಹೊಡೆದ, ನಾನು ಸಣ್ಣ ಮಾಣಿಗೆ ಹೊಡೆದೆ.
ತಪ್ಪು ಮಾಡಿದ್ದಕ್ಕಾಗಿ ಅಪ್ಪ ಹೊಡೆದಾಗ ಮಗ ಇನ್ನೇನೂ ಮಾಡುವಂತಿಲ್ಲ; ಹೊಡೆತ ತಿಂದ ಸಿಟ್ಟನ್ನು, ಬೇಸರವನ್ನೂ ತೀರಿಸಿಕೊಳ್ಳುವ ಸಲುವಾಗಿ ತನ್ನ ತಮ್ಮನಿಗೆ ಹೊಡೆಯುತ್ತಾನೆ. Boss ನಮ್ಮ ಮೇಲೆ ಸಿಟ್ಟನ್ನು ತೋರಿಸಿದಾಗ ನಾವು ಅಸಹಾಯಕರಾಗಿ, ಇನ್ನೇನೂ ಮಾಡಲರಿಯದೇ ನಮ್ಮ assistant ಮೇಲೆ ಸಿಟ್ಟು ಮಾಡುವಂಥದು. ಇಂಥದೇ ಇನ್ನೊಂದು- ಅತ್ತೆಯ ಮೇಲಿನ ಸಿಟ್ಟು ತೊತ್ತಿನ ಮೇಲೆ. ಅತ್ತೆಯ ಮೇಲೆ ಸಿಟ್ಟನ್ನು ತೋರಿಸುವಂತಿಲ್ಲ. ಅದಕ್ಕೇ ಸೊಸೆ ಕೆಲಸದವಳ ಮೇಲೆ ಸಿಟ್ಟು ತೋರಿಸುತ್ತಾಳೆ.

September 2, 2009

ಹೂವಲ್ಲದಿದ್ದರೆ (ಉತ್ತರ ಕನ್ನಡದ ಗಾದೆ 239, ಮತ್ತು 240)

ಹೂವಲ್ಲದಿದ್ದರೆ ಹೂವಿನ ಎಸಳು.
ಯಾವುದೋ ವಸ್ತು ಪೂರ್ತಿ ಸಿಗದೇ ಹೋದರೂ ಕೂಡ ಸ್ವಲ್ಪವಾದರೂ ಸಿಕ್ಕಾಗ (ಅಥವಾ ಬೇರೆಯವರು ಕೊಟ್ಟಾಗ) ಹೇಳುವ ಮಾತು. ಇದೇ ತರಹದ, ಆದರೆ ಬೇರೆ ಸಂದರ್ಭದಲ್ಲಿ ಬಳಸುವಂಥ ಮಾತೆಂದರೆ- ಬೆಲ್ಲವಿಲ್ಲದಿದ್ದರೂ ಬೆಲ್ಲದಂಥಾ ಮಾತು. ಒಳ್ಳೆಯದನ್ನು ಮಾಡುಲು ಸಾಧ್ಯವಿಲ್ಲದಿದ್ದರೂ ಒಳ್ಳೆಯದನ್ನು ಬಯಸಬಹುದು, ಹಾರೈಸಬಹುದು ಎನ್ನುವಾಗ ಬಳಸಬಹುದು.

August 7, 2009

ಅಜ್ಜ ಊರಿದ್ದಕ್ಕೂ (ಉತ್ತರ ಕನ್ನಡದ ಗಾದೆ 236, 237, ಮತ್ತು 238)

ಅಜ್ಜ ಊರಿದ್ದಕ್ಕೂ ಮೊಮ್ಮಗ ಹಾರಿದ್ದಕ್ಕೂ ಸಮ.
ಅಜ್ಜ ಒಂದು ಹೆಜ್ಜೆ ಊರಿದ್ದನ್ನು ಸರಿಗಟ್ಟಲು ಮೊಮ್ಮಗ ಶಕ್ತಿ ಮೀರಿ ಹಾರಬೇಕಾಗುತ್ತದೆ. ದೊಡ್ಡವರು ಅನುಭವದಿಂದ ಸುಲಭದಲ್ಲಿ ಮಾಡಿ ಮುಗಿಸುವ ಕೆಲಸವನ್ನು ಸಣ್ಣವರು ಕಷ್ಟಪಟ್ಟು ಮಾಡುವ ಸಂದರ್ಭಗಳಿರುತ್ತವೆ. ದೊಡ್ಡವರ ಅನುಭವವನ್ನು ಸಣ್ಣವರ ಜ್ಞಾನ ಸರಿಗಟ್ಟಲಾರದು ಎನ್ನುವಾಗ ಬಳಸಬಹುದು. ಅಜ್ಜನಿಗೆ ಕೆಮ್ಮಲು ಕಲಿಸಲು ಹೋಗಿದ್ದ ಎಂಬ ಗಾದೆಯೂ ಸಹ ಇದೆ; ಅಂದರೆ ಹಿರಿಯರಿಗೆ ಮೊದಲೇ ಗೊತ್ತಿರುವ ಕೆಲಸವನ್ನು ಸಣ್ಣವರು ವಿವರಿಸಲು ಹೋದಾಗ ಹಿರಿಯರಿಂದ ಈ ಮಾತು ಕೇಳಿಸಿಕೊಳ್ಳುತ್ತಾರೆ. ' ಸುಮ್ಮನಿರು, ನಾನು ಉಪ್ಪು ತಿಂದಷ್ಟು ನೀನು ಅನ್ನ ತಿನ್ನಲಿಲ್ಲ' ಎಂದು ಹಿರಿಯರು ಹೇಳುವುದನ್ನಂತೂ ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತಾರೆ.

December 17, 2008

ಹಾಡಿ ಹರಸಿ (ಉತ್ತರ ಕನ್ನಡದ ಗಾದೆ – 234 ಮತ್ತು 235 )

ಹಾಡಿ ಹರಸಿ ಮಗಳೇ ನಿನ್ನ ಪುಣ್ಯ ಎಂದಿದ್ದರು.
ಮಗಳಿಗೆ ಸಹಾಯ ಮಾಡುವಷ್ಟು ಮಾಡಬಹುದು ನಂತರ ಕೈಮೀರಿದಾಗ ಹಣೆಬರಹದಲ್ಲಿದ್ದಂತೆ ಆಗುತ್ತದೆ ಎಂದು ಸುಮ್ಮನಿರಬೇಕಾಗುತ್ತದೆ. ಬುದ್ಧಿ ಮಾತನ್ನು ಹೇಳುವಷ್ಟು ಹೇಳುವುದು ಒಂದು ವೇಳೆ ಅವರು ಕೇಳದಿದ್ದರೆ ನಂತರ ಅದೃಷ್ಟವಿದ್ದಂತೆ ಆಗುತ್ತದೆ ಎಂದು ಕೈಚೆಲ್ಲುವುದು. ಹೆಚ್ಚು-ಕಮ್ಮಿ ಇದೇ ಅರ್ಥದ ಇನ್ನೂ ಒಂದು ಮಾತಿದೆ- ಮರ ಹತ್ತುವವನನ್ನು ಕೈಗೆಟುಕುವವರೆಗೆ ಮಾತ್ರ ನೂಕಬಹುದು. ಮೊನ್ನೆ ಅಪ್ಪನ ಜೊತೆ phone ನಲ್ಲಿ ಮಾತನಾಡುವಾಗ ಅಪ್ಪ ಯಾರೋ ಒಬ್ಬರ ಬಗ್ಗೆ ಹೇಳುತ್ತಿದ್ದರು. ನಾನು ಆಗ ಹೇಳಿದೆ, "ಹೋಗ್ಲಿ ಬಿಡು ಅಪ್ಪ, ನೀನು ಎಷ್ಟು ಎಂದು ಸಹಾಯ ಮಾಡಲು ಸಾಧ್ಯ? ಮರ ಹತ್ತುವವನನ್ನು ಎಲ್ಲಿಯ ತನಕ ನೂಕಲು ಸಾಧ್ಯ?". ಆಗ ಅಪ್ಪ ಹೇಳಿದ್ದು- "ಈಗಿನ ಕಾಲಕ್ಕೆ ಮರ ಹತ್ತುವವನನ್ನು ಸ್ವಲ್ಪವೂ ನೂಕಲು ಸಾದ್ಯವಿಲ್ಲ, ಎಲ್ಲರೂ ಅವರವರೆ ಹತ್ತಬೇಕು. ನೋಡು ಅಲ್ಲೊಂದು ಮರ ಇದೆ, ಬೇಕಾದರೆ ಹತ್ತು ಎಂದು ತೋರಿಸಬಹುದು ಅಷ್ಟೇ!!"

December 8, 2008

ವಾಜೆ ಕಲಿಯೇ (ಉತ್ತರ ಕನ್ನಡದ ಗಾದೆ – 233)

ವಾಜೆ ಕಲಿಯೇ ಮಗಳೇ ಎಂದರೆ ಓಲೆ ಮುಂದೆ ಉಚ್ಚೆ ಹೊಯ್ದಿದ್ದಳು.
'ವಾಜೆ' ಎಂದರೆ ಕೆಲಸ, ಒಳ್ಳೆಯ ನಡತೆ ಎಂದು ಹೇಳಬಹುದು. ಒಳ್ಳೆಯ ಕೆಲಸವನ್ನು ಕಲಿ ಎಂದರೆ ಒಲೆಯ ಮುಂದೆ ಉಚ್ಚೆ ಹೊಯ್ದಿದ್ದಳಂತೆ. ಯಾರಿಗಾದರೂ ಏನಾದರೂ ಒಳ್ಳೆಯದನ್ನು ಕಲಿ ಎಂದರೆ ಅವರು ಏನೋ ಅನಾಹುತಕಾರಿ ಕೆಲಸವನ್ನು ಮಾಡಿದರೆ ಈ ಮಾತನ್ನು ಹೇಳಬಹುದು.

December 4, 2008

ಕದಿಯಲು ಹೋಗುವವನು (ಉತ್ತರ ಕನ್ನಡದ ಗಾದೆ – 232)

ಕದಿಯಲು ಹೋಗುವವನು ಬಳ್ಳನನ್ನು ಕಟ್ಟಿಕೊಂಡು ಹೋಗಿದ್ದನಂತೆ.
‘ಬಳ್ಳ’ ಎಂದರೆ ನರಿ. ನರಿಗಳು ವಿಚಿತ್ರ ರೀತಿಯಲ್ಲಿ ಕೂಗುವುದಕ್ಕೆ ಹೆಸರುವಾಸಿ. ಅವಕ್ಕೆ ತಾಳ್ಮೆ ಕಡಿಮೆ ಎನ್ನುತ್ತಾರೆ. ಕದಿಯಲು ಹೋಗುವಾಗ ನರಿಯನ್ನು ಕಟ್ಟಿಕೊಂಡು ಹೋದರೆ ಅವು ಕೂಗಿಬಿಡುತ್ತವೆ, ಅದರಿಂದಾಗಿ ಅಪಾಯ ಎಂದು ಅರ್ಥ. ಗುಟ್ಟಿನ ವಿಚಾರವನ್ನು ವಿಚಾರಹೀನರ ಬಳಿ ಹೇಳಬಾರದು ಎನ್ನುವಾಗ ಬಳಸಬಹುದು. ಇಂಥದೇ ಇನ್ನೊಂದು ಮಾತಿದೆಯಲ್ಲ- ಕಹಳೆಯ ಬಾಯಿಗೆ ಮುತ್ತಿಟ್ಟಂತೆ.

December 3, 2008

ಖಾಲಿ ಕೈಲಿರುವುದಕ್ಕಿಂತ (ಉತ್ತರ ಕನ್ನಡದ ಗಾದೆ – 231)

ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆ ಬಳೆ ಲೇಸು.
ಬಂಗಾರದ ಬಳೆ ಇಲ್ಲವೆಂದು ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆಯ ಬಳೆಯಾದರೂ ಅಡ್ಡಿಯಿಲ್ಲ ಎಂಬ ಅರ್ಥ.
Something is better than nothing :)

December 1, 2008

ಅಳಿಯನ ಕುರುಡು (ಉತ್ತರ ಕನ್ನಡದ ಗಾದೆ – 230)

ಅಳಿಯನ ಕುರುಡು(ತನ) ಬೆಳಗಾದರೆ ಕಾಣುತ್ತದೆ.
ಹಿಂದಿನ ಕಾಲದಲ್ಲಿ ಗೋಧೂಳಿ ಮುಹೂರ್ತದ ಮದುವೆಗಳು ತುಂಬಾ ನಡೆಯುತ್ತಿದ್ದವಂತೆ. ಆ ದೀಪದ ಬೆಳಕಿನಲ್ಲಿ ಅಳಿಯನ ಕುರುಡುತನವನ್ನು (ದೃಷ್ಟಿ ದೋಷವನ್ನು) ಯಾರೂ ಸರಿಯಾಗಿ ಗಮನಿಸದಿದ್ದರೂ ಅದು ಬೆಳಗಾದ ಮೇಲೆ ಎಲ್ಲರಿಗೂ ಕಂಡೇ ಕಾಣುತ್ತದೆ. ಹೊಸ ವಸ್ತುವನ್ನು ಖರೀದಿಸಿ ತಂದಾಗ ಚೆನ್ನಾಗಿ ಕಂಡರೂ ಅದರ ಅವಗುಣಗಳು ಶೀಘ್ರದಲ್ಲಿ ಕಂಡುಬರುತ್ತವೆ ಎನ್ನುವಾಗ ಬಳಸಿ.
ಹಿಂದಿನ ಕಾಲದ ಮದುವೆಗಳು ಐದು ದಿನ ನಡೆಯುತ್ತಿದ್ದವಂತೆ. ಎಲ್ಲರಿಗೂ ಪುರಸೊತ್ತು ಇರುತ್ತಿತ್ತು. ಎಲ್ಲರೂ ಮದುವೆಯನ್ನು ಹಬ್ಬದಂತೆ ಆಚರಿಸಿ, ಮದುಮಕ್ಕಳಿಗೆ ಆಶೀರ್ವಾದ ಮಾಡುತ್ತಿದ್ದರು. ಈಗಿನ ಮದುವೆಗಳು ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದರೆ 12-2 ಘಂಟೆಯ ವರೆಗೆ rush hour ಎನ್ನಬಹುದು. ಎಲ್ಲರೂ ಬಂದು queue ನಲ್ಲಿ ನುಗ್ಗಿ ಊಟ ಮಾಡಿ, ಮದುಮಕ್ಕಳ ಕೈಗೆ ಮುಂದೆ ಏನೂ ಉಪಯೋಗಕ್ಕೆ ಬಾರದ ಗಣಪತಿ ಚಿತ್ರವಿರುವ ಒಂದು ಗೋಡೆ ಗಡಿಯಾರವನ್ನು ತುರುಕಿ ತಮ್ಮ ತಮ್ಮ ವಾಹನಗಳನ್ನು ಹತ್ತಿ ಹೋಗಿಬಿಟ್ಟಿರುತ್ತಾರೆ. ಇನ್ನು ತೀರಾ ಗಡಿಬಿಡಿಯಲ್ಲಿದ್ದರೆ ಮದುಮಕ್ಕಳ ಅಪ್ಪ- ಅಮ್ಮರ ಎದುರು ಹಲ್ಲು ಕಿರಿದು ಹಾಜರಿ ಹಾಕಿ ಮದುಮಕ್ಕಳನ್ನೂ ನೋಡದೇ ಹೋಗಿಬಿಡುತ್ತಾರೆ. ಮತ್ತೆ 3 ಘಂಟೆಗೆ ಕಲ್ಯಾಣ ಮಂಟಪ ಬಣ ಬಣ. ತೀರಾ ಹತ್ತಿರದವರನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಅವರೂ ಕೂಡ ರಾತ್ರಿಯ VRL ಬಸ್ಸಿಗೆ ಬೆಂಗಳೂರಿಗೆ ಹೋಗಲು ತಮ್ಮನ್ನು bus-stand ಗೆ ಯಾರು ಮುಟ್ಟಿಸುತ್ತಾರೆ ಎಂಬ ಚಿಂತೆಯಲ್ಲಿರುತ್ತಾರೆ. ಮನೆಯಲ್ಲಿ ಮದುವೆ ನಡೆದರೂ ಸನ್ನಿವೇಶ ಬೇರೆ ಇರುವುದಿಲ್ಲ ಮತ್ತೆ! ಎಲ್ಲಾ ಕಡೆ ಹೀಗೆಯೇ!! ಜೀವನದಲ್ಲಿ ಯಾರಿಗೂ ಯಾವ ಕೆಲಸಕ್ಕೂ ಪುರಸೊತ್ತಿಲ್ಲ. ನಾವೆಲ್ಲಾ ಯಾವ ದಿಕ್ಕಿಗೆ ಮುಖ ಮಾಡಿ ಓಡುತ್ತಿದ್ದೇವೆ?