April 14, 2011

ಕುರುಡನಿಗೆ ದೀಪ ಬೇಡವಾದರೆ (ಉತ್ತರ ಕನ್ನಡದ ಗಾದೆ – 249)

ಕುರುಡನಿಗೆ ದೀಪ ಬೇಡವಾದರೆ ಮನೆಮಂದಿಗೆಲ್ಲಾ ದೀಪ ಬೇಡವೇ? ಕುರುಡನಿಗೆ ದೀಪ ಇದ್ದರೂ, ಇಲ್ಲದಿದ್ದರೂ ವ್ಯತ್ಯಾಸವಾಗುವುದಿಲ್ಲ. ಆದರೆ ಮನೆಯಲ್ಲಿ ಕುರುಡರಲ್ಲದ ಇನ್ನಿತರರಿಗೆ ದೀಪದ ಅವಶ್ಯಕತೆ ಇರುತ್ತದೆ. ತನಗೆ ಉಪಯೋಗವಿಲ್ಲವೆಂದಾದ/ ಬೇಡವಾದ ವಸ್ತು ಇತರರಿಗೂ ಬೇಡವಾಗಿರುತ್ತದೆ ಎಂಬ ಅಭಿಪ್ರಾಯದಲ್ಲಿ ಕೆಲವರಿರುತ್ತಾರೆ. ಅಂಥವರ ಬಗ್ಗೆ ಬಳಸಬಹುದಾದ ಗಾದೆ ಇದು. ಉಳಿದೆಲ್ಲ ವೈಕಲ್ಯಗಳಿಗಿಂಥ ಕುರುಡುತನ ಕಷ್ಟದ್ದು. ಕಣ್ಣು ಇದ್ದವರಿಗಿಂತ ಎಷ್ಟೋ ಹೆಚ್ಚಿನ ಸಾಧನೆ ಮಾಡಿದ ಕುರುಡರೂ ಇದ್ದಾರೆ. ಎಲ್ಲಾ ಕುರುಡರ ಬಗ್ಗೆ ಅಪಾರ ಗೌರವಗಳೊಂದಿಗೆ ಈ ಗಾದೆಯನ್ನು ಬರೆಯುತ್ತಿದ್ದೇನೆ. ಓದುಗರು ಈ ಗಾದೆಯಲ್ಲಿ 'ಕುರುಡ' ಎಂಬ ಪದಕ್ಕೆ ಒತ್ತು ನೀಡದೆ, ಗಾದೆಯ ಒಳಾರ್ಥವನ್ನು ಗ್ರಹಿಸಲಿ ಎಂಬ ಆಶಯ ನನ್ನದು.