December 25, 2007

ಹೊಟ್ಟೆಗಿಲ್ಲದ ಶಾನುಭೋಗ … (ಉತ್ತರ ಕನ್ನಡದ ಗಾದೆ – 113 ಮತ್ತು 114)

ಹೊಟ್ಟೆಗಿಲ್ಲದ ಶಾನುಭೋಗ ಹಳೆ ಕಡತ ಮಗುಚಿದ್ದನು.

ಆ ಶಾನುಭೋಗನಿಗೆ ಹೊಟ್ಟೆಗಿಲ್ಲ. ಅದಕ್ಕಾಗಿ ಅವನು ಹಳೆಯ ಕಡತಗಳನ್ನೆಲ್ಲಾ ತಿರುವಿ ಹಾಕುತ್ತಿದ್ದಾನೆ, ಏಕೆಂದರೆ ಯಾವುದಾದರೂ ಒಬ್ಬ ವ್ಯಕ್ತಿಯಿಂದ ಏನಾದರೂ ಬರಬೇಕಿದ್ದ ಬಾಕಿ ಸಂದಾಯ ಒಂದು ವೇಳೆ ತಪ್ಪಿ ಉಳಿದುಬಿಟ್ಟಿದ್ದರೆ ಅವನನ್ನು ಬೆದರಿಸಿ ಕೊಡಬೇಕಾಗಿರುವ ಬಾಕಿಯ ಜೊತೆಗೆ ತಾನೂ ಸ್ವಲ್ಪ ಲಂಚ ತೆಗೆದುಕೊಳ್ಳಬಹುದು ಎಂಬ ಆಸೆಯಿಂದ.

ಮಾಡಲು ಏನೂ ಕೆಲಸವಿಲ್ಲದಿದ್ದಾಗ ಇನ್ನೊಬ್ಬನಿಂದ ಏನಾದರೂ ಕಿತ್ತುಕೊಳ್ಳಲು (ಅಥವಾ ನಿಜವಾಗಿಯೂ ಬರಬೇಕಾದ್ದನ್ನು ಪಡೆದುಕೊಳ್ಳಲು) ಯೋಜನೆ ಹಾಕುವ ಸಲುವಾಗಿ ಇದ್ದ ಬಿದ್ದ ಕಾಗದ, ರಸೀತಿಗಳನ್ನೆಲ್ಲಾ ಹರಡಿಕೊಂಡು ಹುಡುಕುವ ಅಭ್ಯಾಸ ಕೆಲವರಿಗಿರುತ್ತದೆ. ಅಂಥವರನ್ನು ಕುರಿತಾದ ಮಾತು ಇದು.

ಇನ್ನೂ ಒಂದು ಬಗೆಯ ಜನರಿರುತ್ತಾರೆ. ಅವರಿಗೆ ಮಾಡಲು ಏನೂ ಕೆಲಸವಿಲ್ಲದಿದ್ದಾಗ ಹೊಸ ಕೆಲಸ ಹುಡುಕಿಕೊಂಡು ಮಾಡಲು ಹೋಗಿ ಅನಾಹುತವನ್ನೇ ಮಾಡಿ ಬಿಟ್ಟಿರುತ್ತಾರೆ.ಅಂಥವರ ಬಗ್ಗೆ ಹೇಳುವ ಮಾತೆಂದರೆ- ಉದ್ಯೋಗ ಇಲ್ಲದ ಆಚಾರಿ ಮಗನ ಹಿಂಭಾಗವನ್ನು ಕೆತ್ತಿ ಮೂರು ಮಣೆ ಮಾಡಿದ್ದನಂತೆ.

No comments: