ಅಕ್ಕ ತಂಗಿಯರು ಕಾಶಿಗೆ ಹೋದಂತೆ.
ಇದು ಕೇಳಲು ಗಾದೆ ಮಾತಿನಂತೆ ಅನಿಸದಿದ್ದರೂ ಇದನ್ನು ಗಾದೆ ಮಾತಿನಂತೆ ಉಪಯೋಗಿಸುತ್ತಾರೆ. ನೂರಾರು ವರ್ಷಗಳ ಹಿಂದೆ ಅಕ್ಕ ತಂಗಿಯರು ಕಾಶಿಗೆ ಹೋಗಿದ್ದರಂತೆ. ವಾಹನಗಳು ಇರದಿದ್ದ ಕಾಲ. ನಡೆದುಕೊಂಡೇ ಹೋಗಿ ನಡೆದುಕೊಂಡೇ ಬಂದರು. ಹೋಗುವಾಗ, ಬರುವಾಗ ಸುದ್ದಿ ಹೇಳುತ್ತಲೇ ಇದ್ದಿರಬೇಕು, ಸುಮ್ಮನಂತೂ ಇದ್ದಿರಲಿಕ್ಕಿಲ್ಲ. ಹಿಂದಿರುಗಿ ಬಂದ ಮೇಲೆ ತಂಗಿಯ ಮನೆ ಮೊದಲು ಸಿಕ್ಕಿತು. ರಾತ್ರಿಯಾಗಿರುವುದರಿಂದ ಅಕ್ಕ ತಂಗಿಯ ಮನೆಯಲ್ಲೇ ಉಳಿದಳು. ರಾತ್ರಿಯಿಡೀ ಕುಳಿತು ಇಬ್ಬರೂ ಸುದ್ದಿ ಹೇಳಿದರು. ಬೆಳಗಾದ ತಕ್ಷಣ ಅಕ್ಕ ತನ್ನ ಮನೆಗೆ ಹೊರಟಳು. ಆಗ ತಂಗಿ, 'ಅಕ್ಕಾ, ಒಂದೆರಡು ದಿನ ಪುರಸೊತ್ತು ಮಾಡಿಕೊಂಡು ನಮ್ಮನೆಗೆ ಉಳಿಯಲು ಬಾ. ನಿನ್ನ ಹತ್ತಿರ ತುಂಬಾ ಸುದ್ದಿ ಹೇಳುವುದಿದೆ' ಎಂದಳಂತೆ!
ನಾವೆಲ್ಲಾ cousins ಒಟ್ಟಿಗೆ ಸೇರಿದಾಗ ರಾತ್ರಿಯೆಲ್ಲಾ ಕುಳಿತು ಸುದ್ದಿ ಹೇಳುವುದುಂಟು. ಆಗ ನೋಡಿದವರು ಯಾರಾದರೂ, 'ಮುಗದ್ದಿಲ್ಯನ್ರೇ ಸುದ್ದಿ ಇನ್ನೂವಾ, ಅಕ್ಕ ತಂಗಿ ಕಾಶಿಗ್ ಹೋಗಿದಿದ್ವಡ' ಎಂದು ನಗುವುದುಂಟು.
No comments:
Post a Comment