August 22, 2007

ಮಾತನಾಡುವ ಪರಿ- 1

ಮಾತನಾಡುವುದು ಕತ್ತಿಯ ಅಲುಗಿನ ಮೇಲೆ ನಡೆದಂತೆ. ಸ್ವಲ್ಪ ಲಕ್ಷ್ಯ ಕಡಿಮೆಯಾದರೂ ಮಾತು ಅಪಾರ್ತಕ್ಕೆ ಗುರಿಯಾಗುತ್ತದೆ. ಅಂತಹ ಒಂದು ಘಟನೆಯನ್ನು ಬರೆದಿದ್ದೇನೆ ಓದಿ... ಉತ್ತರ ಕನ್ನಡದ ಹಳ್ಳಿಗಳಲ್ಲಿ ಇಂತಹ ಸನ್ನಿವೇಶಗಳು ಅಪರೂಪವೇನಲ್ಲ.
ನಮ್ಮ ಮನೆ ಶಿರಸಿಯ ಸಮೀಪದ ಒಂದು ಹಳ್ಳಿ. ಅಲ್ಲಿ ನಮ್ಮದು ಕಾಡಿನಿಂದ ಸುತ್ತುವರಿದ ಒಂಟಿ ಮನೆ. ಅದಕ್ಕಾಗಿ ನಮ್ಮ ಮನೆಯಲ್ಲಿ ದೈತ್ಯಾಕಾರದ ಎರಡು ನಾಯಿಗಳನ್ನು ಸಾಕುವುದು ಎಂದಿನಿಂದಲೂ ಬಂದ ರೂಢಿ.
ನೋಡಿದರೆ ಭಯ ಬರುವಂತಹ ನಾಯಿಗಳು ಯಾರಾದರೂ ಬಂದರೆ ಕಟ್ಟಿ ಹಾಕಿದ ಸರಪಳಿಯನ್ನು ಹರಿದುಕೊಂಡು ಬಂದು ಕಚ್ಚಿ ಸಾಯಿಸಿ ಹಾಕುತ್ತವೇನೋ ಅನ್ನುವಷ್ಟರ ಮಟ್ಟಿಗೆ ಬೊಗಳುತ್ತವೆ. ಬಿಟ್ಟು ಹಾಕಿದರೆ ಎಂಥ ಕಳ್ಳರ ಜೊತೆಗೂ ಆಟ ಆಡಿಬಿಡುತ್ತವೆ! (ಈ ವಿಷಯ ನಿಮ್ಮಲ್ಲೇ ಇರಲಿ).
ಸಾಮಾನ್ಯವಾಗಿ ಊರಿನವರೆಲ್ಲಾ ಆ ನಾಯಿಗಳಿಗೆ ಹೆದರುವುದು ವಾಡಿಕೆ. ನಾಯಿಗಳು ಅವುಗಳನ್ನು ಕಟ್ಟುವ ಜಾಗದಲ್ಲಿ ಕಾಣದಿದ್ದಾಗ "ಹೆಗಡೆ ರೇ...... ನಾಯಿೇ......" ಅಥವಾ "ಅಮ್ಮಾ...... ನಾಯಿೇ......" ಎಂದು ಒಂದು ಗಾವುದ ದೂರದಿಂದಲೇ ಕೂಗುತ್ತಾರೆ.
ಯಾರಾದರೂ ಬಂದು ನಾಯಿಗಳನ್ನು ಕಟ್ಟಿದ ಮೇಲೆಯೇ ಅವರು ಮುಂದ ಹೆಜ್ಜೆ ಇಡುವುದು.

ಅದೇ ಊರಿನವನಾದ 'ಧರ್ಮ ' ಅಪ್ಪನ ಹತ್ತಿರ ಹಣಕಾಸಿಗಾಗಿ ಆಗಾಗ ಬರುತ್ತಿದ್ದವ. ಒಮ್ಮೆ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಸಮಯ. ಅಮ್ಮ ಗಿಡಗಳಿಗೆ ನೀರು ಹಾಕುವಾಗ ಎಂದಿನಂತೆಯೇ ನಾಯಿಗಳನ್ನು ಬಿಟ್ಟು ಹಾಕಿದ್ದರು.
ಅವು ಇಡೀ ಅಂಗಳದ ತುಂಬಾ ಕುಣಿದು, ದಣಿದು ಕಟ್ಟೆಯ ಮೇಲೆ ಮಲಗಿ ನಿದ್ದೆ ಹೊಡೆಯುತ್ತಿದ್ದವು.
ನೀರು ಹಾಕುತ್ತಿದ್ದ ಅಮ್ಮ ಏನೋ ಸದ್ದು ಕೇಳಿದಂತಾಗಿ ತಿರುಗಿ ನೋಡಿದರೆ ಧರ್ಮ ಮರ ಹತ್ತಿ ಕುಳಿತಿದ್ದಾನೆ!ಅಮ್ಮ ಅಲ್ಲಿಂದಲೇ ಹೇಳಿದರು, "ಏ ಧರ್ಮ ಮರ ಇಳಿಯೋ..." ಅವ ಅಮ್ಮನಿಗಿಂತ ಜೋರಾಗಿ ಕೂಗಿದ,
"ಅಮ್ಮಾ, ಮೊದ್ಲು ನೀವು ನಾಯಿ ಕಟ್ಟಾಕ್ರೀ ಮಾರಯ್ರಾ...ಅಂಕಾ ಮಟಾ ನಾ ಇಲ್ಲೇ ಕುಂದ್ರತೆನಿ".
ಅಮ್ಮ ನಾಯಿ ಕಟ್ಟಿ ಹಾಕಿದ್ದೆ ತಡ, ಸರಸರನೆ ಮಂಗನಂತೆ ಮರ ಇಳಿದು ಬಂದ ಧರ್ಮ.
ಅಮ್ಮ ಹೇಳಿದರು, "ಹೆಗಡೆರು ಇಲ್ಲಲ ಧರ್ಮ, ಈಗಷ್ಟೇ ಸಿರ್ಸಿಗೆ ಹೊದ್ರೂ... ನೀ ಬೆಳಿಗ್ಗೆ ಬೇಗ ಬರಬೇಕಾಗಿತ್ತು..."
ನಾಯಿಗಳಿಗೆ ತುಂಬಾ ಹೆದರುತ್ತಿದ್ದ ಧರ್ಮ ತನಗೆ ಅರಿವಿಲ್ಲದಂತೆ ಹೇಳಿದ, "ಹೆಗಡೆರು ಸಾಯ್ಲ್ ರಿ ಮಾರಯ್ರಾ... ನಿಮ್ಮ ನಾಯಿ ನನ್ನ ತೆಗದೆ ಬಿಡ್ತಿದ್ವು...ಹೆಗಡೆರು ಹೋಗೆ ಬಿಟ್ರೆನ್ರಿ?" !!!! ನಗು ಬರುತ್ತಿದ್ದರೂ ತಡೆದುಕೊಂಡು ಅಮ್ಮ ಮತ್ತೊಮ್ಮೆ ಕೇಳಿದರು, "ಹೆಗಡೆರಿಗೆ ಯಾಕೆ ಹಾಗಂತೀಯೋ ಧರ್ಮ... " ನಾಯಿಗಳ ಭಯದಿಂದ ಇನ್ನೊ ಹೊರ ಬಂದಿರದ ಧರ್ಮ ಅದನ್ನೇ ಪುನರುಚ್ಚರಿಸಿದ, "ಹೆಗಡೆರು ಸಾಯ್ಲ್ ರಿ... ನಾಯಿೇ..." ಎಂದವನೆ ತಲೆ ಕೆರೆದುಕೊಳ್ಳುತ್ತಾ, "ನಮ್ಮ ಎತ್ತಿಗೊಂದು ಉಸಾರಿಲ್ಲಾಗಿತ್ತು.... ಹೆಗಡೆರ ತವ ರೊಕ್ಕ...." ಎಂದು ಗೊಣಗುತ್ತಾ ಹೊರಟೆ ಹೋದ.

ಧರ್ಮನೇನೋ ಏನೂ ಆಗದವನಂತೆ ಹೋದ. ಉಕ್ಕಿ ಬರುತ್ತಿದ್ದ ನಗುವನ್ನು ತಡೆಯುವ ಬಗೆ ನಮಗೆ ತಿಳಿಯಲಿಲ್ಲ!

3 comments:

ಅನಿಕೇತನ said...

Wow....

ಶಾಂತಲಾ ಭಂಡಿ said...

ಸೀಮಕ್ಕ...
ಬಿದ್ ಬಿದ್ ನಿಗ್ಯಾಡ್ದಿ.ರಾಶೀ ಚೊಲೊ ಇದ್ದು ಮಾರಾಯ್ತಿ, ಓದಿ ೧೦ ನಿಮಿಷ ಆತು, ಈಗ್ಲೂ ನಗು ಬರ್ತಾ ಇದ್ದು.
ಇಂತದ್ದೂ ಬರಿ ಇನ್ನೊಂದಿಷ್ಟು , ನೆಗ್ಯಾಡ್ಕ್ಯತ್ಯ ಯಂಗ.

Seema said...

ಅನಿಕೇತನ and ಶಾಂತಲಾ
Thanks :)