August 28, 2007

ಮಾತನಾಡುವ ಪರಿ- 2

ಅರಿವಿಲ್ಲದೇ ಮಾತನಾಡಿ ಉಳಿದವರು ನಗುವಂತಾದ ಮತ್ತೊಂದು ಘಟನೆಯಿದು.
'ನಾಗ್ಯಾ' ನಮ್ಮ ಗದ್ದೆಯನ್ನು ಊಳಲು ಖಾಯಂ ಬರುತ್ತಿದ್ದವ. ನಮ್ಮ ಮನೆಯ ಎತ್ತುಗಳಿಗೂ ಮತ್ತು ಅವನಿಗೂ ಅವಿನಾಭಾವ ಸಂಭಂಧ. ಗದ್ದೆ ಊಳುವಾಗ ಎತ್ತುಗಳು ಸ್ವಲ್ಪ ಆಕಡೆ ಈಕಡೆ ಎಳೆದರೂ ಅವನು ಅವುಗಳನ್ನು ಬಯ್ಯುತ್ತಿದ್ದುದು
"ಹೂ... ಇದರ ಮನೆ ಹಾಳಾಗಾ..." !!! ಒಮ್ಮೆ ಅಮ್ಮ ಕೊಟ್ಟಿಗೆಯಲ್ಲಿ ಸಂಜೆ ಹೊತ್ತು ಹಾಲು ಕರೆಯುತ್ತಿದ್ದಾಗ
ನಾಗ್ಯಾ ಗದ್ದೆ ಯಿಂದ ಎತ್ತುಗಳನ್ನು ಹೊಡೆದುಕೊಂಡು ಕೊಟ್ಟಿಗೆಗೆ ಬಂದ. ಅವುಗಳನ್ನು ಜಾಗದಲ್ಲಿ ಕಟ್ಟಿ ಹಾಕುತ್ತಿರುವಾಗ ಪಕ್ಕದಲ್ಲಿ ಕಟ್ಟಿದ್ದ ಆಕಳು ಕುಣಿದಾಡಿತು. ಕೊಟ್ಟಿಗೆಯಲ್ಲಿ ಕೆಲವೊಮ್ಮೆ ಎತ್ತು ಅಥವಾ ಆಕಳುಗಳನ್ನು ಕಟ್ಟಿ ಹಾಕುವಾಗ ಅಕ್ಕ ಪಕ್ಕದಲ್ಲಿರುವ ಆಕಳುಗಳು ಕುಣಿದಾಡುವದುಂಟು. ಅದು ಕುಣಿದಾಡುವುದನ್ನು ನೋಡಿದ ನಾಗ್ಯಾ ಹೇಳಿದ್ದು- "ತಡಿ...ತಡಿ...ಯಾಕ್ ಹಾಂಗ್ ಕುಣೀತೀ... ನಾವೂ ನಿಮ್ಮಂಗಲೇ ಮನಾಷಾರೇ..." ನಾಗ್ಯಾ ಎತ್ತುಗಳನ್ನು ಕಟ್ಟಿ ಹಾಕಿ ಹೋದ. ಅಮ್ಮ ಕೊಟ್ಟಿಗೆಯಲ್ಲಿ ಒಬ್ಬರೇ ನಗುತ್ತಿದ್ದರು!

No comments: