August 27, 2008

ಅಂಟು

ಈಗಂತೂ ಎಷ್ಟೆಲ್ಲಾ ಬಗೆಯ ಅಂಟುಗಳು ಮಾರುಕಟ್ಟೆಗೆ ಬಂದಿವೆ. ಮೊನ್ನೆ ಅಂಟು ತೆಗೆದುಕೊಳ್ಳಲೆಂದು ಇಲ್ಲಿನ ಒಂದು ಮಾರುಕಟ್ಟೆಯಲ್ಲಿ ಹೋಗಿ ನೋಡಿದೆ ಒಮ್ಮೆ ಬೆರಗಾಗಿ ನಿಂತೆ! ಒಂದು ನಿಮಿಷದಲ್ಲಿ ಎರಡು ವಸ್ತುಗಳನ್ನು ಅಂಟಿಸುವ ಫೆವಿಕಾಲ್ ನಂತಹ ಅಂಟಿನಿಂದ ಹಿಡಿದು ಒಂದೇ ಸೆಕೆಂಡಿನಲ್ಲಿ ಅಂಟಿಸುವ ಫೆವಿಕ್ವಿಕ್ ತರದ ಅಂಟಿನ ನಡುವೆ ಅದೆಷ್ಟು ಅಂಟುಗಳು ಬಂದು ನಮ್ಮನ್ನೂ ನಡುವೆ ಸಿಕ್ಕಿಸಿಕೊಂಡು ಆಯ್ಕೆಯನ್ನು ಕಷ್ಟ ಮಾಡಿಬಿಟ್ಟಿವೆ ಎನಿಸಿತು. ನಂತರ ಯಾವುದೋ ಒಂದು ಅಂಟನ್ನು ತೆಗೆದುಕೊಂಡು ಮನೆಯತ್ತ ನಡೆಯತೊಡಗಿದರೆ ದಾರಿಯಲ್ಲಿ ಅಂಟಿನ ಆಲೋಚನೆ ಮಾತ್ರ ತಲೆಗೆ ಅಂಟಿಕೊಂಡೇ ಇತ್ತು.

ನಾನು ಚಿಕ್ಕವಳಿದ್ದಾಗ ಗೊತ್ತಿದ್ದುದು ಒಂದೇ ಅಂಟು. ಬೇಸಿಗೆಯಲ್ಲಿ ಅಪ್ಪ ಗೇರು ಮರಕ್ಕೆ ಕತ್ತಿಯಿಂದ ಕಚ್ಚು ಹಾಕಿ ಗಾಯ ಮಾಡಿ, ಹಲವಾರು ದಿನಗಳವರೆಗೆ ಕಾಯ್ದು, ಆ ಗಾಯದಿಂದ ಸೋರಿದ ಗಟ್ಟಿಯಾದ ಅಂಟನ್ನು ತೆಗೆದು ಬಾಟಲಿಯಲ್ಲಿ ನೀರು ಹಾಕಿ ಆ ನೀರಿನಲ್ಲಿ ಅಂಟನ್ನು ಎರಡು ದಿನ ಮುಳುಗಿಸಿಟ್ಟು ನಂತರ ಅದನ್ನು ಕದಡಿ ಮಾಡಿದ, ಬಾಟಲಿಯ ಮುಚ್ಚಳವನ್ನು ತೆಗೆದರೆ ಕೆಟ್ಟ ವಾಸನೆ ಬೀರುತ್ತಿದ್ದ ಗೇರು ಮರದ ಅಂಟು. ತೆಂಗಿನ ಹಿಡಿಯ ಕಡ್ಡಿಗೆ ಹತ್ತಿಯನ್ನು ಸುತ್ತಿ ಮಾಡಿದ ಜುಂಜು ಅದನ್ನು ಹಚ್ಚುವ ಸಾಧನ. ನನಗೆ ಮತ್ತು ರಘುನಿಗೆ ಕಿತ್ತುಹೋದ ಪುಸ್ತಕದ ಹಾಳೆಗಳನ್ನು ಅಂಟಿಸಲು, ಗಾಳಿಪಟ ಮಾಡಲು ಅಪ್ಪ ಆ ಅಂಟನ್ನು ರೇಶನ್ ತರಹ ಕೊಡುತ್ತಿದ್ದರು - ಎಂದೋ ಒಡೆದು ಹೋದ ಗಾಜಿನ ಬಾಟಲಿಯ ಪ್ಲಾಸ್ಟಿಕ್ ಮುಚ್ಚಳದಲ್ಲಿ! ಅದು ಬೇಸಿಗೆಯಲ್ಲಿ ಕಾಗದವನ್ನು ಸುಮಾರು ಒಂದು ಒಪ್ಪತ್ತಿನಲ್ಲಿ ಅಂಟಿಸಿದರೆ, ಮಳೆಗಾಲದಲ್ಲಿ ಮಾತ್ರ ವಾರಗಟ್ಟಲೆ ತೆಗೆದುಕೊಂಡು ಅಂಟು ಹಚ್ಚಿದ ಜಾಗದಲ್ಲಿ (ಸಾಮಾನ್ಯವಾಗಿ ಪುಸ್ತಕದ ಕಿತ್ತು ಹೋದ ಹಾಳೆಗಳ ನಡುವಿನಲ್ಲಿ) ಬೂಸ್ಟು ಬೆಳೆಯುವಂತೆ ಮಾಡುತ್ತಿತ್ತು.


ನಂತರ ಬಂತು camel ನವರ ಅಂಟು ಕೆಂಪು ಮುಚ್ಚಳದ ಟ್ಯೂಬಿನಲ್ಲಿ. ಅದು ಆಗಿನ ಕಾಲದ ಅದ್ಭುತ ಅಂಟು! ತುಟ್ಟಿ ಬೇರೆ. ಅಪ್ಪ ಅದನ್ನು ನಮಗೆ ಮುಟ್ಟಲೂ ಕೂಡ ಕೊಡುತ್ತಿರಲಿಲ್ಲ. ಪುಸ್ತಕದ ಹಾಳೆಗಳು ಕಿತ್ತು ಹೋಗಿದ್ದರೆ ತಾವೇ ಹಚ್ಚಿಕೊಡುತ್ತಿದ್ದರು. ಗೇರು ಮರಕ್ಕೆ ಕಚ್ಚು ಹಾಕುವುದನ್ನು ಬಿಟ್ಟು ಬಿಟ್ಟಿದ್ದರು. ಗೇರು ಮರಕ್ಕೆ ಗಾಯ ಮಾಡುವುದು ಅಪ್ಪನಿಗೂ ಮನಸ್ಸಿರಲಿಲ್ಲವೆಂದು ಕಾಣಿಸುತ್ತದೆ. ಬಹುಶ ಬೇರೆ ಉಪಾಯ ಕಾಣದೆ ಮಾಡುತ್ತಿದ್ದರು. ಗಾಳಿಪಟಕ್ಕೆ ಗೇರು ಮರದ ಅಂಟು ಸಿಗದ ಕಾರಣ ನಾವು ಅಮ್ಮ ಮಾಡಿ ಕೊಡುವ ಮೈದಾ ಹಿಟ್ಟಿನ ಅಂಟಿಗೆ shift ಆದೆವು. ಶಾಲೆಯ ಪರಪರೆಗೂ ಅದೇ ಅಂಟು. ಅಜ್ಜನ ಮನೆಗೆ ಪತ್ರ ಬರೆದರೆ ಅದನ್ನು ಅಂಟಿಸಲು ಅಪ್ಪ ಬಂದು ಅದನ್ನು camel ಅಂಟಿನಿಂದ ಅಂಟಿಸುವ ತನಕ ಕಾಯುವ ತಾಳ್ಮೆ ಇಲ್ಲದೆಯೇ ಅಮ್ಮನ 'ಮುಸರೇ....' ಎಂಬ ಕೂಗಿನ ನಡುವೆಯೇ ಒಂದೆರಡು ಅನ್ನದ ಅಗುಳುಗಳನ್ನು ಹಾಕಿ ಅಂಟಿಸಿಬಿಡುತ್ತಿದ್ದೆವು!

ನಂತರ ಒಂದೊಂದೇ ಹೊಸ ಹೊಸ ಅಂಟುಗಳು ಬರಲು ಪ್ರಾರಂಭವಾದವು. ಫೆವಿಕಾಲ್ ಅಂಟು ನಮಗೆ ಆಗ ಹೊಸದರಲ್ಲಿ ಅತ್ಯದ್ಭುತವಾಗಿ ಕಂಡಿತ್ತು. ಅಪ್ಪ ತಂದಿಟ್ಟ ಬಾಟಲಿಯನ್ನು ಕದ್ದು ಉಪಯೋಗಿಸಿ ಮುಚ್ಚಳವನ್ನು ಸರಿಯಾಗಿ ಹಾಕದೆ ಓಡಿ ಹೋಗಿ ಫೆವಿಕಾಲ್ ಗಾಳಿಗೆ ಪೂರ್ತಿ ಗಟ್ಟಿಯಾಗಿ ಅಪ್ಪನಿಂದ ಬೈಗುಳ ಪಡೆದದ್ದು ಇನ್ನೂ ನೆನಪಿದೆ.

ಫೆವಿಕಾಲ್ ನ ನಂತರ ಎಷ್ಟೋ ಬಗೆಯ ಅಂಟುಗಳು ನಮ್ಮನೆಗೆ ಪ್ರವೇಶ ಪಡೆದಿವೆ. ಅಮ್ಮ ಕೈ ತಪ್ಪಿ ಒಡೆದುಕೊಂಡ ಉಪ್ಪಿನ ಕಾಯಿಯ ಭರಣಿಯ ಮುಚ್ಚಳವನ್ನು ಅಂಟಿಸುವ Araldite (ಎರಡು ಬೇರೆ ಬೇರೆ ಟ್ಯೂಬುಗಳಲ್ಲಿ ಬರುತ್ತಿತ್ತು. ಒಂದು ಬಿಳಿಯ ಬಣ್ಣದ ಮತ್ತು ಇನ್ನೊಂದು transparent ದ್ರವಗಳನ್ನು ಸೇರಿಸಿ ಚೆನ್ನಾಗಿ ತಿಕ್ಕಿ ಬಳಸುವಂತದು), ಸೋರುತ್ತಿದ್ದ ನಲ್ಲಿಯನ್ನು ಸರಿಪಡಿಸುವ M-seal (ಕೆಟ್ಟ ವಾಸನೆಯ ಎರೆಡು ರಬ್ಬರಿನಂಥ ವಸ್ತುಗಳನ್ನು ಸೇರಿಸಿ ತಿಕ್ಕಿ ಬಳಸುವಂಥದು), ಚಪ್ಪಲಿ ಅಂಟಿಸುವ Fevibond ಇನ್ನೂ ಏನೇನೋ ಸಣ್ಣ ಸಣ್ಣ ವಸ್ತುಗಳನ್ನು ಅಂಟಿಸುವ Feviquick, ಒಂದೇ ಎರಡೇ ಹತ್ತು ಹಲವಾರು ಬಗೆಯ ಅಂಟುಗಳು. ಈ ಎಲ್ಲ ಅಂಟುಗಳು ಮನೆ ಪ್ರವೇಶಿಸುವ ಹೊತ್ತಿಗೆ ನಾವೂ ಬೆಳೆದು ದೊಡ್ದವರಾಗಿದ್ದರಿಂದ ಅಪ್ಪ ಅವನ್ನು ಅಡಗಿಸಿಡುವ ಗೋಜಿಗೆ ಹೋಗುತ್ತಿರಲಿಲ್ಲ. ನಾವೂ ಜಾಗ್ರತೆಯಿಂದ ಬಳಸುವುದನ್ನು ಕಲಿತಿದ್ದೆವು. ಇಂದೂ ಸಹ ಅಪ್ಪನ ಹರಗಣದ ಪೆಟ್ಟಿಗೆಯಲ್ಲಿ ಹುಡುಕಿದರೆ ಇವುಗಳ ಅವಶೇಷಗಳು ಕಾಣ ಸಿಗುತ್ತವೆ. ಆದರೆ ಗೇರು ಮರದ ಅಂಟು ಮಾತ್ರ ಅವಶೇಷವೂ ಇಲ್ಲದಂತೆ ಮಾಯವಾಗಿದೆ. ಅದನ್ನು ಹಾಕಿ ಹಾಕಿ ಕಪ್ಪು ಬಣ್ಣಕ್ಕೆ ತಿರುಗಿದ್ದ ಬಾಟಲಿಯನ್ನೂ ಅಪ್ಪ ಎಂದೋ ಎಸೆದುಬಿಟ್ಟಿದ್ದಾರೆ. ಆದರೆ ಅದರ ವಾಸನೆ ಮಾತ್ರ ಇಂದಿಗೂ ಮೂಗಿನಲ್ಲಿಯೇ ಇದ್ದಂತಿದೆ ಮತ್ತು ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ Aralditeನ ಜಾಹೀರಾತು ಕೂಡ ನೆನಪಿದೆ – “ಒಡೆದ ಹಾಲು ಮತ್ತು ಒಡೆದ ಹೃದಯಗಳನ್ನು ಬಿಟ್ಟು ಉಳಿದೆಲ್ಲವನ್ನೂ ಜೋಡಿಸುತ್ತದೆ!!”


ಯಾವ ಅಂಟು ಇದ್ದರೆಷ್ಟು ಬಿಟ್ಟರೆಷ್ಟು? ಇಂದು ನನಗೆ, ರಘುನಿಗೆ ಗಾಳಿಪಟ ಮಾಡಲೂ ಪುರಸೊತ್ತಿಲ್ಲ, ಪತ್ರ ಬರೆಯಲೂ ಪುರಸೊತ್ತಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡುವುದೇ ವರ್ಷಕ್ಕೊಮ್ಮೆ. ಜೀವನದಲ್ಲಿ ತಾಳ್ಮೆ, ಪುರಸೊತ್ತು ಕಡಿಮೆ ಆಗುತ್ತಾ ಹೋದಂತೆಲ್ಲಾ, ಕ್ಷಣಮಾತ್ರದಲ್ಲಿ ಒಣಗುವ ಅಂಟಿನ ಅಗತ್ಯ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇಷ್ಟೆಲ್ಲಾ ಅಂಟುಗಳು ಇರದಿದ್ದ ಕಾಲದಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಳ್ಳುತ್ತಿದ್ದರು; ಸಂಬಂಧಗಳ ಮೂಲಕ. ದುರದೃಷ್ಟವಶಾತ್ ಇಂದು ಇಷ್ಟೆಲ್ಲಾ ಅಂಟುಗಳ ನಡುವೆಯೂ ನಮ್ಮನ್ನು ಇನ್ನೊಬ್ಬರಿಗೆ ಅಂಟಿಸುವ ಅಂಟು ಮಾತ್ರ ಕಾಣುತ್ತಿಲ್ಲ. ಎಲ್ಲರಿಗೂ ಅಂಟಿಸಿಕೊಳ್ಳದೇ ಇರುವುದೇ ಇಷ್ಟ.

6 comments:

ಮಧು said...

ಸೀಮಕ್ಕಾ,
ತುಂಬಾ ಚೆನ್ನಾಗಿದೆ ಬರಹ. ಬರಹದ ವಸ್ತು ಮತ್ತು ನಿರೂಪಣೆ ಬಹಳ ಹಿಡಿಸಿತು. ಹಾಗೇ ಕೊನೇ ಪ್ಯಾರಾ ಕೂಡ.
ಯಾಕೋ ಗೊತ್ತಿಲ್ಲ, ಕೆಲವೊಂದು ಶಬ್ದಗಳನ್ನು ಕೇಳಿದರೆ ಮನಸ್ಸಿಗೆ ಬಹಳ ಸಂತೋಷ ಆಗ್ತು. ನೀನು ಬಳಸಿದ "ಕಚ್ಚು ಹಾಕದು", "ಪರಪರೆ ಕಾಗದ" "ಜುಂಜು" "ಅಗುಳು" "ಹರಗಣ" ಇವೆಲ್ಲಾ ಶಬ್ದ ಓದಿ ಯಾಕೋ ಖುಶಿಯಾಯ್ತು.

ಶಾಂತಲಾ ಭಂಡಿ said...

ಸೀಮಕ್ಕಾ,
ನವಿರಾದ ಹಾಸ್ಯದೊಂದಿದೆ, ಊರಿಗೊಮ್ಮೆ ನಮ್ಮನ್ನು ಎತ್ತಿಕೊಂಡುಹೋಗುವಂಥಹ, ಮನಮುಟ್ಟುವ ಲೇಖನ. ಗಾಢವಾದ ಅರ್ಥ, ಸುಂದರವಾದ ಸಂದೇಶ ಎರಡೂ ಇವೆ ಅರ್ಥೈಸಿಕೊಂಡರೆ. ತುಂಬ ಚಂದದ ಲೇಖನ ಸೀಮಕ್ಕ...

Harish - ಹರೀಶ said...

>> ದುರದೃಷ್ಟವಶಾತ್ ಇಂದು ಇಷ್ಟೆಲ್ಲಾ ಅಂಟುಗಳ ನಡುವೆಯೂ ನಮ್ಮನ್ನು ಇನ್ನೊಬ್ಬರಿಗೆ ಅಂಟಿಸುವ ಅಂಟು ಮಾತ್ರ ಕಾಣುತ್ತಿಲ್ಲ. ಎಲ್ಲರಿಗೂ ಅಂಟಿಸಿಕೊಳ್ಳದೇ ಇರುವುದೇ ಇಷ್ಟ.

ಯಾರಿಗೆ ಯಾರುಂಟು ಎರವಿನ ಸಂಸಾರ.. ಅನ್ನೋ ಹಂಗಾಯ್ದು.

>> ಅಮ್ಮನ 'ಮುಸರೇ....' ಎಂಬ ಕೂಗಿನ ನಡುವೆಯೇ

:-)

ಈಗಿನ್ ಜನ ಎಂಜಲೇ ನೋಡ್ತ್ವಿಲ್ಲೇ.. ಇನ್ನೆಲ್ಲಿ ಮುಸರೆ.. ಅಲ್ದಾ?

ಸೂಪರ್ ಆಗಿ ಬರದ್ದೆ..

ಸುಶ್ರುತ ದೊಡ್ಡೇರಿ said...

ಚನಾಗಿದ್ದು ಸೀಮಕ್ಕ..

ಮತ್ತೆ, ಇದಲ್ದೇ, ಹೆಂಗಸರಿಗೆ ಬಾಣಂತನದಲ್ಲಿ ತಿನ್ನಕ್ಕೆ ಕೊಡ್ತ್ವಲ, ಅದ್ನೂ 'ಅಂಟು' ಅಂತ ಕರೀತ ಅಲ್ದಾ? ಮಾತ್ರ ಅದು ಎಂತು ಅಂತ ಗೊತ್ತಿಲ್ಲೆ ನಂಗೆ.. ನನ್ನ ಅತ್ತೆ ಬಾಣಂತದ್ ಟೈಮಲ್ಲಿ ಅಜ್ಜಿ ಮಾಡ್ಕೊಡ್ತಿದ್ದದ್ದು ನೆನ್ಪು ಅಷ್ಟೇ..

sunaath said...

ನಿಮ್ಮ ಲೇಖನ ಓದುತ್ತ ಹೋದಂತೆ, ನನಗೂ ನನ್ನ ಬಾಲ್ಯದಲ್ಲಿ ಬಳಕೆಯಲ್ಲಿದ್ದ ಅಂಟುಗಳೆಲ್ಲಾ ನೆನಪಾಗಿ ಖುಶಿಯಾಯಿತು. ಧನ್ಯವಾದಗಳು.

Seema Hegde said...

@ ಮಧುಸೂದನ,
ನನಗೆ ನಿನ್ನ ಹೆಸರು ಉದ್ದಕ್ಕೆ ಕರಿಯಲ್ಲೇ ಇಷ್ಟ :)
ಮೊದಲಿನಿಂದನೂ ಹಂಗೆ ರೂಢಿ. ಚಂದದ ಹೆಸರು ನಿಂದು.
ಬಹುಶ ಮುಂದಿನ ಪೀಳಿಗೆಯ ಜನಕ್ಕೆಲ್ಲಾ ಇದೆಲ್ಲ ಶಬ್ದ ಗೊತ್ತೇ ಇರ್ತಿಲ್ಯನ
ಅಲ್ದಾ?

@ ಶಾಂತಲಾ,
ಆನು ಯಂತ ಬರದ್ರೂ ಚೊಲೋ ಇದ್ದು ಹೇಳ್ತ್ಯಲೇ ನೀನು ತಂಗಿ :)
ಮತ್ತೊಮ್ಮೆ ಊರಿಗೆ ಹೋಗಿ ಬಂದ್ಯಾ ಯನ್ನ ಅಂಟಿನ ಜೊತೆಯಲ್ಲಿ? :)

@ ಹರೀಶ,
ಥ್ಯಾಂಕ್ಸ್ ಕಣೋ.
ಎಂಜಲು, ಮುಸರೆ ಎಲ್ಲ ಇನ್ನು ಮುಂದೆ ಇರ್ತಿಲ್ಲೆ ಬಿಡು :)

@ ಸುಶ್ರುತ,
ಹೂಂ. ಅದನ್ನು ನಂಗ್ಳ ಕಡೆ 'ಅಂಟಿನ ಉಂಡೆ' ಅಥವಾ 'ಶು೦ಠಿ ಉಂಡೆ' ಹೇಳಿ ಕರಿತ.
ಶು೦ಠಿ, ತಿನ್ನುವ ಅಂಟು (ಯಾವುದೊ ಮರದ ಉತ್ಪಾದನೆ), ಬೆಲ್ಲ ಎಲ್ಲ ಸೇರಿಸಿ ಮಾಡ್ತ.
ಹಸಿವು ಹೆಚ್ಚು ಮಾಡ್ತು. ಪಿತ್ತಜನಕಾಂಗಕ್ಕೆ ಒಳ್ಳೆಯದು. ಬಾಣಂತಿಯರು ಮಾತ್ರ ಅಲ್ಲದೆ ಎಲ್ಲರೂ ತಿನ್ನಲಕ್ಕು.
ಬಾಣಂತಿಯರಿಗೆ ವಿಶೇಷವಾಗಿ ಒಳ್ಳೆಯದು ಅಷ್ಟೆ. ಅದರ ತಯಾರಿಕೆಯ ವಿಧಾನ ನನ್ನ ಹತ್ರ ಇದ್ದು.
ಅಜ್ಜಿ, ದೊಡ್ಡಮ್ಮರ ನಂತರ ಈಗಿನ ಇಂಗ್ಲಿಷ್ ಔಷಧಿಗಳ ಅಬ್ಬರದಲ್ಲಿ ನಶಿಸಿ ಹೊಪ್ಲಾಗ ಹೇಳಿ ಬರದು ಇಟ್ಟಿದ್ದಿ :)

@ ಸುನಾಥ್,
ಧನ್ಯವಾದಗಳು. ನಿಮ್ಮ ಕಾಲದ ಒಂದೆರಡು ಅಂಟುಗಳನ್ನೂ ಇಲ್ಲಿ ಅಂಟಿಸಿದ್ದರೆ ಖುಷಿಪಡುತ್ತಿದ್ದೆ :)