September 15, 2008

ಮೂರು ಲೋಕವೂ … (ಉತ್ತರ ಕನ್ನಡದ ಗಾದೆ – 189 ಮತ್ತು 190)

ಮೂರು ಲೋಕವೂ ಕಾಣುತ್ತಿದೆ ಏನು ಹೇಳುತ್ತಿದ್ದಾಗ, ನಮ್ಮ ಮನೆಯ ಎಮ್ಮೆ ಕರು ಕಾಣುತ್ತಿದೆಯೇ ಎಂದು ಕೇಳಿದ್ದ.
ಯಾರೋ ಒಬ್ಬ ನನಗೆ ಮೂರು ಲೋಕವೂ ಕಾಣುತ್ತಿದೆ ಅಂದರೆ ಇನ್ನೊಬ್ಬ ಕಳೆದು ಹೋದ ಎಮ್ಮೆ ಕರು ಕಾಣುತ್ತಿದೆಯೇ ಎಂದು ಕೇಳಿದ್ದನಂತೆ. ಎಲ್ಲ ಸುಖವೂ ಇದೆ ಎಂದು ಖುಷಿಪಡುವ ಸಮಯದಲ್ಲಿ ಅಥವಾ ನೋಡಿ ಸಂತೋಷ ಪಡಲು ಎಷ್ಟೆಲ್ಲಾ ವಿಷಯಗಳು ಇದ್ದಾಗ ಕ್ಷುಲ್ಲಕ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುವವರನ್ನು ನೋಡಿ ಮಾಡಿದ ಮಾತು ಇದು.
ಇದನ್ನು ನಾನು ಕೇಳಿದ್ದು ತ್ಯಾಗಲಿಯ ನಾಗಪತಿ ಭಾವನಿಂದ. ಮಾಲತಿ ಅಕ್ಕನನ್ನು ಬೆಂಗಳೂರಿನಿಂದ ಮೈಸೂರಿಗೆ ವೋಲ್ವೋ ಬಸ್ಸಿನಲ್ಲಿ ಕರೆದುಕೊಂಡು ಹೊರಟಾಗ- "ನೋಡೇ ಮಾಲತಿ, AC ಬಸ್ಸು, ಸೀಟು-ಗೀಟು ಎಲ್ಲ ಎಷ್ಟು ಚೆನ್ನಾಗಿದೆ" ಎಂದು ಭಾವ ಹೇಳುತ್ತಿದ್ದರೆ "ಕಿಟಕಿ ತೆಗೆಯಲು ಬರುವುದಿಲ್ಲ, ವಾಂತಿ ಬಂದರೆ ಮಾಡುವ ಬಗೆ ಹೇಗೆ?" ಎಂದು ಕೇಳಿದ್ದಳಂತೆ. ಭಾವ ಊರಿಗೆ ಬಂದ ಮೇಲೆ ಆ ಪ್ರಸಂಗವನ್ನು ವಿವರಿಸಿದ ಬಗೆ ಇದು; ಈ ಗಾದೆಯ ಜೊತೆಯಲ್ಲಿ.
ಅಜ್ಜಿಗೆ ಅರಿವೆ ಚಿಂತೆ ಆದರೆ ಮೊಮ್ಮಗಳಿಗೆ ಮದುವೆ ಚಿಂತೆ ಅನ್ನುವ ಗಾದೆ ಕೂಡ ಇದೆ ಅನ್ನುತ್ತೀರಾ? ಅದೂ ಇದೆ. ಆದರೆ ಸ್ವಲ್ಪ ಬೇರೆ ಸಂದರ್ಭಕ್ಕೆ; ಇಬ್ಬರೂ ಒಂದಲ್ಲಾ ಒಂದು ಚಿಂತೆಯಲ್ಲಿ ಇದ್ದಾಗ ಬಳಸುವಂಥದು.

2 comments:

shivu.k said...

ಅಜ್ಜಿಗೆ ಅರಿವೆ ಚಿಂತೆ ಆದ್ರೆ ಮೊಮ್ಮಗಳಿಗೆ ಮದುವೆ ಚಿಂತೆ ಅನ್ನೋ ಗಾದೆ ನನ್ನ ಜೀವನದಲ್ಲಿ ತುಂಬಾ ಸಲ ಆಗಿದೆ. ನನಗೆ ಕೆಲಸ ಚಿಂತೆಯಾದಾಗ ನನ್ನ ಶ್ರೀಮತಿ ಹಬ್ಬದ ಚಿಂತೆ. ಹೀಗೆ ತುಂಬಾ ಸಲ ಆಗಿದೆ.
ನೀವೊಮ್ಮೆ ನನ್ನ ಬ್ಲಾಗಿನಲ್ಲಿ ಮಲ್ಲೇಶ್ವರ ರೈಲ್ವೇ ನಿಲ್ದಾಣದ ಬಗ್ಗೆ ಓದಿ enjoy ಮಾಡ್ತೀರ. ನಿಮಗೆ ತುಂಬಾ ಹೊಸ ಗಾದೆ ಹುಟ್ಟಿಕೊಳ್ಳಬಹುದು.

Seema S. Hegde said...

@ ಶಿವು,
ಅಜ್ಜಿಗೆ ಅರಿವೆ ಚಿಂತೆ.... ಎಲ್ಲರ ಜೀವನದಲ್ಲೂ ಮತ್ತೆ ಮತ್ತೆ ಆಗುತ್ತಲೇ ಇರುತ್ತದೆ!
ಮಲ್ಲೇಶ್ವರಂ post ಅನ್ನು ಆಗಲೇ ಓದಿ ಬಂದಿದ್ದಾಗಿದೆ.
ಚೆನ್ನಾಗಿದೆ.