ನಮ್ಮ ಊರಿನ ಜನ ಅಪ್ಪನ ಹತ್ತಿರ ಮಾತನಾಡಲು ಬಂದರೆ ಏನಾದರೂ ಒಂದು ನಗು ತರಿಸುವಂಥ ಮಾತನ್ನು ಆಡಿಯೇ ತೀರುತ್ತಾರೆ.
ಕೆಲವರಂತೂ ತಮ್ಮನ್ನು ತಾವೇ ರಾಜಕೀಯ ಪುಢಾರಿಗಳು ಎಂದು ತಿಳಿದುಕೊಂಡವರಿದ್ದಾರೆ.
ಅವರಿಗಂತೂ English ಶಬ್ದಗಳನ್ನು ಬಳಸಿ ಮಾತನಾಡುವುದೆಂದರೆ ಎಲ್ಲಿಲ್ಲದ ಪ್ರೀತಿ.
ಅಂತಹ ಕೆಲವು ಸಂದರ್ಭಗಳನ್ನು ಇಲ್ಲಿ ಹೇಳುತ್ತಿದ್ದೇನೆ.
ಶಂಕರ ಗೌಡ - ಊರಿನ ಮುಖಂಡ, ಅಂದು ಅಪ್ಪನ ಹತ್ತಿರ ಹೇಳುತ್ತಿದ್ದ, 'ಹೆಗಡೆರೇ ಆ ದಾಕ್ತಾರ ತವ ಹೋಗಿದ್ದೆ. ಔಷಧಿ ಕೊಟ್ಯಾರು. ಆದ್ರೂ ಯಾಕೋ ಜರ Continuous ಆಗಾಕೆ ವಲ್ದು.'
ಅದರ ಅರ್ಥ Doctor ಬಳಿ ಹೋಗಿದ್ದೆ, ಔಷಧಿ ಕೊಟ್ಟಿದ್ದಾರೆ. ಆದರೂ ಏಕೋ ಜ್ವರ ಕಡಿಮೆ ಆಗ್ತಾನೇ ಇಲ್ಲ. Continuous ಎನ್ನುವ ಶಬ್ದವನ್ನು ಕಡಿಮೆ ಎನ್ನುವ ಅರ್ಥದಲ್ಲಿ ಬಳಸಿಬಿಟ್ಟಿದ್ದಾನೆ ಶಂಕರ ಗೌಡ!
ಗಣಪತಿ- ಅದೇ ಊರಿನ ಒಕ್ಕಲಿಗ. ಅವನಿಗೆ ಆಗಾಗ ಮತಿಭ್ರಮಣೆಯಾಗುತ್ತಿತ್ತು. ಹಾಗಾದಾಗಲೆಲ್ಲ ಅವನು ಹೆಂಡತಿ, ಮಕ್ಕಳಿಗೆಲ್ಲ ಹೊಡೆದು ರಾದ್ಧಾಂತ ಮಾಡುತ್ತಿದ್ದ. ಆಗ ಅವನನ್ನು ಅಪ್ಪನ ಹತ್ತಿರ ಪಂಚಾಯಾತಿಗೆಂದು ಕರೆದುಕೊಂಡು ಬರುತ್ತಿದ್ದರು, ಏಕೆಂದರೆ ಅಪ್ಪ ಹೇಳಿದ ಮಾತನ್ನು ಅವನು ಎಂದೂ ಮೀರುತ್ತಿರಲಿಲ್ಲ. ಒಮ್ಮೆ ಹಾಗೆಯೇ ಅವನನ್ನು ಕರೆದುಕೊಂಡು ಬಂದಿದ್ದಾಗ, ಆ ಊರಿನ ಈಗಿನ ಗೌಡ (ಶಂಕರ ಗೌಡ ತೀರಿಕೊಂಡ ಬಳಿಕ) ಬಂಗಾರ್ಯ ಗೌಡ ಗಣಪತಿಗೆ ಬುದ್ಧಿ ಹೇಳಿದ್ದು, 'ನೀ ಹಿಂಗೆಲ್ಲ ಗದ್ಲಾ ಮಾಡ್ಕೀನಾದು ಚೊಲೊ ಅಲ್ಲ ನೋಡು ಗಣಪತಿ. ಇನ್ನೊಂದು ನಾಕ್ ವರ್ಷ ಆದ್ರೆ ನಿನ್ನ ಮಕ್ಕಳು ಕೈಗೆ ಬರ್ತಾವು. ಕೆಲ್ಸಾ ಅವೇ ಮಾಡ್ಕಿ0ದು ಹೋಕಾವು. ನೀ ಅಷ್ಟ್ರಾಗ ಹಿಂಗೆಲ್ಲಾ temporary ಮಾಡ್ಕಿ0ತಿ.
Temporary ಅನ್ನುವ ಶಬ್ದವನ್ನು ಅನಾಹುತ ಎನ್ನುವ ಅರ್ಥದಲ್ಲಿ ಬಳಸಲಾಗಿದೆ!
ಕೃಷ್ಣ ಪೂಜಾರಿ- ಕುಂದಾಪುರದಿಂದ ಕೆಲಸಕ್ಕೆಂದು ಬಂದು ನಮ್ಮೊರಿನಲ್ಲೇ settle ಆಗಿ ತುಂಬಾ ವರ್ಷಗಳೇ ಕಳೆದಿವೆ.
ಆತ ಒಮ್ಮೆ ನನ್ನನ್ನು ಕೇಳಿದ್ದು, 'ಅಲ್ರಾ… ಅಮ್ಮಾ ನಿಮ್ಮ ಆಸ್ಟ್ರೇಲಿಯಾದಾಗೆಲ್ಲಾ ಮೀನಾ ಗೀನಾ ಬೇಯ್ಸಾದಿಲ್ಲೇನ್ರಾ?'
ನನಗೆ ಅರ್ಥವೇ ಆಗಲಿಲ್ಲ. ಎಲ್ಲಿಯ ಆಸ್ಟ್ರೇಲಿಯಾ, ಎಲ್ಲಿಯ ಮೀನು ಎಂದು. ಕಣ್ಣು ಕಣ್ಣು ಬಿಡುತ್ತಾ ನಾನು ನಿಂತಿದ್ದನ್ನು ನೋಡಿ ಮತ್ತೆ ಹೇಳಿದ, 'ಅದೇ ಧಾರವಾಡದಾಗೇ, ನಿಮ್ಮ ಆಸ್ಟ್ರೇಲಿಯಾದಾಗೇ.....'
ನನಗೆ ಆಗ ಅರ್ಥ ಆಯಿತು. ಆತ ಕೇಳುತ್ತಿದ್ದುದು ಧಾರವಾಡದ ನನ್ನhostel ಬಗ್ಗೆ ಎಂದು!
ಇನ್ನೂ ಉಮೇಶನಂತೂ SSLC ವರೆಗೆ ಓದಿದ್ದಾನೆ. ಅವನ English ಅಂತೂ ಇನ್ನೊ ಮಜಾವಾಗಿರುತ್ತದೆ.
ಒಮ್ಮೆ ಏನೋ ಒಂದು ವಿಷಯ ಕೇಳಲು ಅಪ್ಪನ ಹತ್ತಿರ ಬಂದಿದ್ದಾನೆ. ಆಗ ಹೇಳುತ್ತಿದ್ದ, 'ನಮಗೆ ಗೊತ್ತಾಗದಿಲ್ಲ ಹೆಗಡೆರೇ ನೀವೇ ಹೇಳ್ರಿ. ನಾವೆಲ್ಲಾ ನೋಸೆಂಟು.'
ನೋಸೆಂಟು ಅಂದರೆ Innocent! ಅದರ ನಂತರ ನಾವು ಅವನನ್ನು ಕರೆಯುತ್ತಿದ್ದುದೇ ನೋಸೆಂಟು ಎಂದು!
ಇಬ್ಬನಿ ಬಿದ್ದಾಗ ಅವನು ಅದಕ್ಕೆ ಇಬ್ಬನಿ ಎಂದು ಅವನು ಎಂದೂ ಹೇಳುವುದಿಲ್ಲ. ಮಿಷ್ಟು (Mist) ಎಂದೇ ಹೇಳುತ್ತಾನೆ.
3 comments:
ನಮ್ಮೂರಲ್ಲೂ ಹೀಗೇ. ನರ್ಸಿಂಹನಂತೂ ಅದೆಷ್ಟು ಬಟ್ಲರ್ ಇಂಗ್ಲೀಷ್ ಹೊಡೀತಿದ್ದ ಅಂದ್ರೆ, ನಾವು ಹುಡುಗ್ರಾಗಿದ್ದಾಗ ಅವನನ್ನ ಫಾರಿನ್ನಿಂದ ಬಂದವನ ಥರ ನೋಡ್ತಿದ್ವಿ! ಈಗ ಈ ಇಂಗ್ಲೀಷು ನಮಗೆ ಸುಲಲಿತವಾಗಿ, ನರಸಿಂಹ ಆಡ್ತಿದ್ದ ಮಾತಲ್ಲಿರ್ತಿದ್ದ ಇಂಗ್ಲಿಷಲ್ಲಿ ಎಷ್ಟು ತಪ್ಪಿರ್ತಿತ್ತು ಅಂತ ಗೊತ್ತಾಗ್ತಾ, ಜತೆಜತೆಗೇ, ನಮಗೆ ಆಗ ಇಂಗ್ಲೀಷು ಕಲಿಯಲು ನರಸಿಂಹನೂ ಅನುಕರಣೀಯನಾಗಿದ್ದನಲ್ಲ ಅನ್ನಿಸಿ, ನರಸಿಂಹನಂತವರ ಮಹತ್ವದ ಅರಿವಾಗುತ್ತದೆ...
ಏನಿಲ್ಲ, ಚೆನ್ನಾಗಿದೆ ಬರ್ದಿದ್ದು ಅಂದೆ... :)
ಬಹಳ ಚೆನ್ನಾಗಿದೆ !
@ ಸುಶ್ರುತ,
ನೀವು ಹೇಳಿದ್ದು ನಿಜ. ಧನ್ಯವಾದಗಳು.
@ ಅನಿಕೇತನ,
ತುಂಬಾ... ತುಂಬಾ... Thanks.
Post a Comment