October 31, 2007

ಶುಭ ನುಡಿಯೇ … (ಉತ್ತರ ಕನ್ನಡದ ಗಾದೆ – 59 ಮತ್ತು 60)

ಶುಭ ನುಡಿಯೇ ಮದುವಣಗಿತ್ತಿ ಅಂದರೆ ಹಂದರದೊಳಗಿದ್ದವರೆಲ್ಲಾ ಬೋಳೇರಾ ಎಂದಳು

ಮದುವಣಗಿತ್ತಿಯ ಬಳಿ ಏನಾದರೂ ಒಳ್ಳೆಯ ಮಾತನಾಡು ಅಂದರೆ ಮದುವೆಯ ಚಪ್ಪರದೊಳಗಿದ್ದವರೆಲ್ಲಾ ವಿಧವೆಯರಾ ಎಂದು ಹೇಳಿದಳ0ತೆ.

ಏನಾದರೂ ಒಳ್ಳೆಯ ಕೆಲಸವನ್ನು ಮಾಡಲು ಹೊರಟಾಗ ಅದರ ಬಗ್ಗೆ ಒಳ್ಳೆಯ ಮಾತನಾಡುವ ಬದಲು ನಿರಾಶಾವಾದದ ಮಾತನ್ನಡುವವರನ್ನು ಕುರಿತು ಇರುವ ಮಾತು ಇದು.
ಕೆಲಸಕ್ಕೆ ಹೊರಟಾಗ ಅಡ್ಡ ಬಾಯಿ ಹಾಕುವುದು ಎನ್ನುತ್ತಾರೆ ಇದಕ್ಕೆ ನಮ್ಮ ಕಡೆ.

ಇದೇ ಅರ್ಥದಲ್ಲಿ ಉಪಯೋಗಿಸುವ ಇನ್ನೊಂದು ಮಾತು; ಸೋಬಾನೆ ಹಾಡೇ ಸುಬ್ಬಕ್ಕ ಅಂದರೆ ಹಂದರದೊಳಗಿದ್ದವರೆಲ್ಲಾ ರಂಡೆ, ಮು0ಡೇರಾ ಎಂದಳು.

October 30, 2007

ಶಾಲೆ ಮಾಸ್ತರಿಗೆ … (ಉತ್ತರ ಕನ್ನಡದ ಗಾದೆ – 58)

ಶಾಲೆ ಮಾಸ್ತರಿಗೆ ಬುಧ್ಧಿಯಿಲ್ಲ, ಸ್ಟೇಷನ್ ಮಾಸ್ತರಿಗೆ ನಿದ್ದೆಯಿಲ್ಲ.

ಎಲ್ಲಾ ಶಾಲೆ ಮಾಸ್ತರುಗಳ ಕ್ಷಮೆ ಕೋರಿ ಇದನ್ನು ಬರೆಯುತ್ತಿದ್ದೇನೆ.
ನನಗೆ ಕಳಿಸಿದ ಎಲ್ಲ ಮಾಸ್ತರುಗಳಿಗೂ ನಾನು ಎಂದಿಗೂ ಚಿರರುಣಿ.
ಅವರೆಲ್ಲ ನೀಡಿದ ದಾರಿದೀಪಗಳ ಸಹಾಯದಿಂದ ಇಂದು ನಾನು ಈ ಮಟ್ಟವನ್ನು ತಲುಪಿದ್ದೇನೆ ಮತ್ತು ಮುನ್ನಡೆಯುತ್ತಿದ್ದೇನೆ.
ಎಲ್ಲಕ್ಕಿಂತ ಮಿಗಿಲಾಗಿ ನಾನು ಕೂಡ ಸುಮಾರು ಮೂರು ವರ್ಷಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ.

ಇದೆಲ್ಲದಕ್ಕೆ ಅಪವಾದವೆಂಬಂತೆ, ತಮ್ಮ ಕೆಲಸ ಸರಿಯಾಗಿ ಮಾಡದ ಕೆಲವು ಶಾಲೆ ಮಾಸ್ತರುಗಳು ಇರುವುದುಂಟು.
ಅಂಥವರನ್ನು ನೋಡಿ ಈ ಗಾದೆಯನ್ನು ಮಾಡಿರಲಿಕ್ಕೆ ಸಾಕು. ಇದನ್ನು ಇಲ್ಲಿಗೇ ಬಿಡುತ್ತೇನೆ. ವಿವರಣೆಯ ಅಗತ್ಯ ಇಲ್ಲ ಎಂದು ನಂಬಿದ್ದೇನೆ.

October 27, 2007

ಅಕ್ಕಸಾಲಿಗ ಚುಚ್ಚಿದರೆ … (ಉತ್ತರ ಕನ್ನಡದ ಗಾದೆ – 56 ಮತ್ತು 57)

ಅಕ್ಕಸಾಲಿಗ ಚುಚ್ಚಿದರೆ ನಚ್ಚ ನಚ್ಚಗೆ.

ನಚ್ಚಗೆ ಆಗುವುದು ಎಂದರೆ ಬೆಚ್ಚಾಗಾಗುವಿಕೆ ಅಥವಾ ಹಿತವಾಗುವಿಕೆ.
ನೋವಿದ್ದಾಗ ಶಾಖ ಮಾಡಿಕೊಂಡರೆ ನಚ್ಚಗಾಗುತ್ತದೆ ಎನ್ನುವುದು ರೂಢಿ.
ಯಾರೋ ಕಿವಿ ಚುಚ್ಚಿದರೆ ನಚ್ಚಗಾಗುವುದಿಲ್ಲ ಆದರೆ ಅಕ್ಕಸಾಲಿಗ ಚುಚ್ಚಿದರೆ ಮಾತ್ರ ನಚ್ಚಗಾಗುತ್ತದೆ.

ನಾವು ಹೇಳಿದರೆ ಆ ಮಾತು ಪಥ್ಯವಾಗುವುದಿಲ್ಲ ಆದರೆ ಬೇರೆ ಯಾರೋ ಒಬ್ಬ ನಿರ್ದಿಷ್ಟ ವ್ಯಕ್ತಿ ಹೇಳಿದರೆ ಮಾತ್ರ ಮನಸ್ಸಿಗೆ ನಾಟುತ್ತದೆ ಎಂಬ ಅರ್ಥವನ್ನು ಕೊಡುತ್ತದೆ.

ಇದೇ ಅರ್ಥದಲ್ಲಿ ಉಪಯೋಗಿಸಲ್ಪಡುವ ಇನ್ನೊಂದು ಗಾದೆ ಎಂದರೆ ಶಂಖದಿಂದ ಬಿದ್ದರೇ ತೀರ್ಥ. ಬೇರೆ ಯಾವುದೋ ಪಾತ್ರೆಯಿಂದ ಬಿದ್ದರೂ, ಅದು ತೀರ್ಥವೇ ಆಗಿದ್ದರೂ ತೀರ್ಥವೆಂದು ಅನಿಸುವುದಿಲ್ಲ. ಆದರೆ ಅದೇ ನೀರು ಶಂಖದಿಂದ ಬಿದ್ದಾಗ ತೀರ್ಥವೆಂದು ಅನಿಸುತ್ತದೆ.

October 26, 2007

ಎಲ್ಲ ಕೆಲಸ ಆದ ಮೇಲೆ … (ಉತ್ತರ ಕನ್ನಡದ ಗಾದೆ – 55)

ಎಲ್ಲ ಕೆಲಸ ಆದ ಮೇಲೆ ಆದ ಮೇಲೆ ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳು.

ಯಾರೋ ಕೆಲಸ ಮಾಡುತ್ತಿದ್ದಾಗ ಸಹಾಯಕ್ಕೆ ಹೋಗದ ಅವಳು ಕೆಲಸ ಮುಗಿದ ಮೇಲೆ ಸಹಾಯ ಮಾಡಲು ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳಂತೆ.

ನೀವು ಮಾಡುತ್ತಿರುವ ಕೆಲಸ ಮುಗಿದ ನಂತರ ಯಾರಾದರೂ ಸಹಾಯ ಮಾಡುತ್ತೇನೆಂದು ಬಂದಾಗ (ಮೊದಲು ಬರದೇ) ಈ ಗಾದೆಯು ನಿಮಗೂ ಕೂಡ ಉಪಯೋಗಕ್ಕೆ ಬರುತ್ತದೆ.

October 24, 2007

ಬಡವ ದೇವರನ್ನು … (ಉತ್ತರ ಕನ್ನಡದ ಗಾದೆ – 53 ಮತ್ತು 54)

ಬಡವ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಹುಬ್ಬು ಹಾರಿಸಿತ್ತು.

ಹುಬ್ಬು ಹಾರಿಸುವುದು ಎಂದರೆ ಮಾತನಾಡದೆಯೇ 'ಏನು' ಎಂದು ಕೇಳುವುದು.
ದೇವರು ಬಡವ ಎಂದು ಗೊತ್ತಾದರೆ ಅವನ ಎದುರಿನಲ್ಲಿ ಇಟ್ಟಿರುವ ಬಿಲ್ವ ಪತ್ರೆಯೂ ಕೂಡ ಸೊಕ್ಕಿನಿಂದ 'ಏನು' ಎಂದು ದೇವರನ್ನು ಪ್ರಶ್ನಿಸುತ್ತದೆ, ಹುಬ್ಬು ಹಾರಿಸುವ ಮೂಲಕ.

ಮೆತ್ತಗಿರುವವರನ್ನು ಕಂಡರೆ ಎಂಥ ಯೋಗ್ಯತೆ ಇಲ್ಲದವರೂ ಕೂಡ ಕೀಳಾಗಿ ನೋಡಲು ಪ್ರಯತ್ನಿಸುತ್ತಾರೆ ಎಂಬ ಅರ್ಥವನ್ನು ಕೊಡುತ್ತದ ಈ ಗಾದೆ.

ಸಾಮಾನ್ಯವಾಗಿ ಇದೇ ಅರ್ಥವನ್ನು ಕೊಡುವ ಇನ್ನೊಂದು ಮಾತೆಂದರೆ ಮೆತ್ತಗಿರುವಲ್ಲೇ ಮತ್ತೊಂದು ಗುದ್ದಲಿ ಅಗೆಯುತ್ತಾರೆ. ಮಣ್ಣನ್ನು ಅಗೆಯಲು ಹೊರಟಾಗ ಎಲ್ಲರೂ ಮೆತ್ತಗಿರುವ ಜಾಗವನ್ನು ಹುಡುಕುತ್ತಾರೆಯೇ ವಿನಹ ಗಟ್ಟಿಯಿರುವ ಜಾಗವನ್ನಲ್ಲ. ಎಲ್ಲಿ ಮಣ್ಣು ಮೆತ್ತಗಿದೆಯೋ ಅಲ್ಲಿಯೇ ಮತ್ತೊಂದು ಗುದ್ದಲಿ ಮಣ್ಣನ್ನು ಹೆಚ್ಚು ತೆಗೆದುಕೊಳ್ಳುತ್ತಾರೆ.
ಅಂತೆಯೇ ಮೆತ್ತಗಿರುವ ಮನುಷ್ಯನಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.

October 23, 2007

ಅಪ್ಪನನ್ನು ದೂಡಿ … (ಉತ್ತರ ಕನ್ನಡದ ಗಾದೆ – 52)

ಅಪ್ಪನನ್ನು ದೂಡಿ ಮಾವಿನ ಹಣ್ಣು ಆರಿಸುವವನು.

ದೂಡುವುದು ಎಂದರೆ ತಳ್ಳುವುದು.
ಅಪ್ಪ, ಮಗ ಇಬ್ಬರೂ ಮಾವಿನ ಹಣ್ಣುಗಳನ್ನು ಆರಿಸುತ್ತಿರುವಾಗ ಮಗನಿಗೆ ಒಂದು ಒಳ್ಳೆಯ ಮಾವಿನ ಹಣ್ಣು ಬಿದ್ದಿರುವುದು ಕಾಣಿಸುತ್ತದೆ.
ಅಪ್ಪ ಅದರ ಹತ್ತಿರ ಹೋಗಿಬಿಟ್ಟಿದ್ದಾನೆ.
ಇನ್ನೇನು ಅಪ್ಪ ಅದನ್ನು ಆರಿಸಿಕೊಳ್ಳುತ್ತಾನೆ ಎನ್ನುವಷ್ಟರಲ್ಲಿ ಮಗ ಬಂದು ಅಪ್ಪನನ್ನು ತಳ್ಳಿ ಚೆನ್ನಾಗಿರುವ ಆ ಮಾವಿನ ಹಣ್ಣನ್ನು ತಾನು ಎತ್ತಿಕೊಳ್ಳುತ್ತಾನೆ.

ಚೆನ್ನಾಗಿರುವ ವಸ್ತುವನ್ನು ಅಪ್ಪನಿಂದ ಮಗ/ ಮಗಳು ಹೇಗಾದರೂ ಮಾಡಿ ಕಿತ್ತುಕೊಂಡಾಗ ಈ ಮಾತನ್ನು ಹೇಳುತ್ತಾರೆ.

October 22, 2007

ಮೊದಲು ಹುಟ್ಟಿದ … (ಉತ್ತರ ಕನ್ನಡದ ಗಾದೆ – 51)

ಮೊದಲು ಹುಟ್ಟಿದ ಕಿವಿಗಿಂತ ನಂತರ ಹುಟ್ಟಿದ ಕೋಡು ಚೂಪು.

ಹಸುಗಳಿಗೆ ಕಿವಿ ಹುಟ್ಟುವಾಗಲೇ ಇದ್ದರೆ, ಕೋಡು ನಂತರದಲ್ಲಿ ಬೆಳೆಯುವಂತದು.
ಮೊದಲೇ ಹುಟ್ಟಿದರೂ ಕೂಡ ಕಿವಿ ಚೂಪಾಗಿಲ್ಲ ಆದರೆ ಕೋಡು ನಂತರ ಹುಟ್ಟಿದರೂ ಚೂಪಗಿರುತ್ತದೆ.

ಹಿರಿಯರಿಗಿಂತಲೂ ಕಿರಿಯರು ಜಾಣ್ಮೆ ತೋರಿದಾಗ ಈ ಮಾತನ್ನು ಹೇಳುವುದು ವಾಡಿಕೆ.

October 21, 2007

ಅಜ್ಜ ತಿನ್ನುವ ಕಬ್ಬು … (ಉತ್ತರ ಕನ್ನಡದ ಗಾದೆ – 49 ಮತ್ತು 50)

ಅಜ್ಜ ತಿನ್ನುವ ಕಬ್ಬು ರಸದಾಳಿ.

ಅಜ್ಜ, ಮೊಮ್ಮಗ ಇಬ್ಬರೂ ಕಬ್ಬು ತಿನ್ನುತ್ತಿದ್ದಾಗ ಮೊಮ್ಮಗನಿಗೆ ಅನಿಸುತ್ತದೆ- 'ಬಹುಶಃ ಅಜ್ಜ ತಿನ್ನುತ್ತಿರುವುದು ರಸದಾಳಿ ಕಬ್ಬೇ ಇರಬೇಕು. ಏಕೆಂದರೆ ಅವನು ಸ್ವಲ್ಪವೂ ಕಷ್ಟಪಡದೇ ತಿನ್ನುತ್ತಿದ್ದಾನೆ. ನಾನು ತಿನ್ನುತ್ತಿರುವ ಕಬ್ಬು ಮಾತ್ರ ಗಟ್ಟಿಯಾಗಿದೆ'' ಎಂದು. ಅಜ್ಜನ ಕೈಯ್ಯಲ್ಲಿರುವ ಕಬ್ಬನ್ನು ತೆಗೆದುಕೊಂಡು ಸ್ವಲ್ಪ ತಿಂದು ನೋಡಿದಾಗ ಗೊತ್ತಾಗುತ್ತದೆ, ಅದೂ ಕೂಡ ಗಟ್ಟಿಯಾಗಿದೆ ಎಂದು.

ಬೇರೆಯವರು ಮಾಡುತ್ತಿರುವ ಕೆಲಸ ಸುಲಭವೆಂದು ಕಾಣಿಸುತ್ತದೆ. ಅದೇ ಕೆಲಸವನ್ನು ನಾವು ಮಾಡಿದಾಗ ಅದರಲ್ಲಿರುವ ಕಷ್ಟ ಗೊತ್ತಾಗುತ್ತದೆ.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಎಲ್ಲರಿಗೂ ಗೊತ್ತಿರುವ ಗಾದೆಯ ಬದಲಾಗಿ ಬಳಸಲ್ಪಡುವ ಗಾದೆ ಇದು.

ನನ್ನನ್ನು ಕಾಡುವ ದೆವ್ವ … (ಉತ್ತರ ಕನ್ನಡದ ಗಾದೆ – 48)

ನನ್ನನ್ನು ಕಾಡುವ ದೆವ್ವ ನೆರೆಮನೆ ಬೊಮ್ಮಕ್ಕನನ್ನು ಕಾಡು.

ನನ್ನನ್ನು ಕಾಡಲು ಬಂದ ದೆವ್ವದ ಬಳಿ, ನನ್ನನ್ನು ಕಾಡಬೇಡ, ಅಲ್ಲಿ ಪಕ್ಕದ ಮನೆಯಲ್ಲಿ ಬೊಮ್ಮಕ್ಕ ಇದ್ದಾಳೆ. ಅವಳನ್ನು ಕಾಡು ಎಂದು ಹೇಳುತ್ತೇನೆ.

ನಮಗೆ ಇಷ್ಟವಿಲ್ಲದವರು ನಮ್ಮ ಬಳಿ ಕೆಲಸ ತಂದಾಗ ನಾವು ಅವರನ್ನು ನಮ್ಮಿಂದ ದೂರ ಮಾಡಿ ಬೇರೆಯವರ ಬಳಿ ಸಾಗು ಹಾಕಿದಾಗ ಈ ಮಾತನ್ನು ಹೇಳಬಹುದು.

October 19, 2007

ತಾಮ್ರದ ದುಡ್ಡು … (ಉತ್ತರ ಕನ್ನಡದ ಗಾದೆ – 46 ಮತ್ತು 47)

ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಕೆಡಿಸಿತ್ತು.

ಹಣ ಅಂದರೆ ಹೆಣವೂ ಬಾಯಿಬಿಡುತ್ತದೆ ಎನ್ನುವ ಮಾತು ಎಲ್ಲರಿಗೂ ಗೊತ್ತಿರುವಂತದು. ದುಡ್ಡು ಎಂತಹ ಸಂಬಂಧವನ್ನೂ ಹಾಳು ಮಾಡುವ ಗುಣವನ್ನು ಹೊಂದಿದೆ. ಅದಕ್ಕೆ ತಾಯಿ ಮಕ್ಕಳ ಸಂಬಂಧವೂ ಹೊರತಲ್ಲ.

ಹಣದ ಈ ಸ್ವಭಾವದ ಬಗ್ಗೆ ಮಾತನಾಡುವಾಗ, ವಿಶೇಷವಾಗಿ ಹಣದಿಂದಾಗಿ ಯಾರದ್ದೋ ಸಂಬಂಧ ಹಾಳಾದ ವಿಚಾರವನ್ನು ಮಾತನಾಡುವಾಗ ಈ ಗಾದೆಯ ಪ್ರಯೋಗವನ್ನು ಕಾಣಬಹುದು.

October 18, 2007

ಒಲ್ಲದ ಅಳಿಯ … (ಉತ್ತರ ಕನ್ನಡದ ಗಾದೆ – 45)

ಒಲ್ಲದ ಅಳಿಯ ಒರಳು ಕಲ್ಲು ನೆಕ್ಕಿದ್ದನಂತೆ.

ಇದರ ಬಗ್ಗೆ ಒಂದು ಕಥೆಯೇ ಇದೆ. ಅಳಿಯ ಮಾವನ ಮನೆಗೆ ಬಂದಾಗ ಅತ್ತೆ ಹೋಳಿಗೆ ಮಾಡಿದ್ದಳು.
ಊಟಕ್ಕೆ ಕುಳಿತಾಗ ಹೋಳಿಗೆ ಬಡಿಸಲು ಹೋದರೆ ದಾಕ್ಷಿಣ್ಯ ಮಾಡಿಕೊಂಡ ಅಳಿಯ ಒಂದು ಹೋಳಿಗೆಯನ್ನೂ ತಿನ್ನಲಿಲ್ಲ.
ಎಲ್ಲರೂ ಮಲಗಿದರು. ಕೆಲಸ ಮಾಡಿ ಸುಸ್ತಾಗಿದ್ದ ಅತ್ತೆ ಹೋಳಿಗೆಯ ಹೂರಣವನ್ನು ರುಬ್ಬಿದ್ಡ ಒರಳು ಕಲ್ಲನ್ನು ತೊಳೆಯದೇ ಮಲಗಿದ್ದಳು. ಅಳಿಯನಿಗೆ ಹೋಳಿಗೆ ತಿನ್ನಬೇಕೆಂದು ಆಸೆ. ಎಲ್ಲರೂ ಮಲಗಿದ್ದಾಗ ಸದ್ದು ಮಾಡದೇ ಎದ್ದು ಹೋಗಿ ಒರಳು ಕಲ್ಲನ್ನು ನೆಕ್ಕಿದ್ದನಂತೆ!

ಯಾವುದಾದರೂ ವಸ್ತು ಮನಸ್ಸಿಗೆ ಬೇಕು ಎನಿಸಿದರೂ ದಾಕ್ಷಿಣ್ಯಕ್ಕೆಂದು ಬೇಡ ಎಂದು ನಂತರ ಆಸೆಯನ್ನು ತಡೆಯಲಾರದೇ ಅದನ್ನು ತೆಗೆದುಕೊಂಡರೆ ಈ ಗಾದೆಯನ್ನು ಹೇಳುತ್ತಾರೆ.

October 17, 2007

ಕೇಳದೆಯೇ ಕುದುರೆ … (ಉತ್ತರ ಕನ್ನಡದ ಗಾದೆ – 44)

ಕೇಳದೆಯೇ ಕುದುರೆ ಕೊಟ್ಟ ಕೇಳಿದರೆ ಹೆಂಡತಿಯನ್ನೂ ಕೊಡುತ್ತಾನೆ.

ಅವನು ತುಂಬಾ ದಾನಿ. ಬಾಯಿ ಬಿಟ್ಟು ಕೇಳದಿದ್ದರೂ ತನ್ನ ಕುದುರೆಯನ್ನು ಕೊಟ್ಟುಬಿಟ್ಟಿದ್ದಾನೆ.
ಇನ್ನು ಒಂದು ವೇಳೆ ಕೇಳಿಯೇ ಬಿಟ್ಟರೆ ಹೆಂಡತಿಯನ್ನೂ ಕೊಟ್ಟುಬಿಡುತ್ತಾನೆ.

ಹಿಂದೆ ಮುಂದೆ ವಿಚಾರ ಮಾಡದೇ ಅನಗತ್ಯವಾಗಿ ದಾನ ಮಾಡುವವರನ್ನು ಕುರಿತಾಗಿ ಇರುವಂತಹ ಮಾತು ಇದು.
ದಾನ ಶೂರ ಕರ್ಣ ಎನ್ನುತ್ತೇವಲ್ಲ ಅಂಥವರು ಇವರು.

October 16, 2007

ಆಲದ ಮರವನ್ನು … (ಉತ್ತರ ಕನ್ನಡದ ಗಾದೆ – 43)

ಆಲದ ಮರವನ್ನು ನೋಡುತ್ತೀಯಾ? ಬ್ರಹ್ಮರಾಕ್ಷಸನನ್ನು ನೋಡುತ್ತೀಯಾ?

ಅದು ಸೊಂಪಾಗಿ ಬೆಳೆದ ಸುಂದರವಾದ ಆಲದ ಮರ. ಆದರೆ ಅದರಲ್ಲಿ ಬ್ರಹ್ಮರಾಕ್ಷಸ ವಾಸವಾಗಿದ್ದಾನೆ.
ಆಲದ ಮರದ ಮೇಲಿನ ಪ್ರೀತಿಯಿಂದ ಹತ್ತಿರ ಹೋದರೆ ಬ್ರಹ್ಮರಾಕ್ಷಸ ಹಿಡಿದುಕೊಳ್ಳುತ್ತಾನೆ.
ಹಾಗೆಂದು ಆಲದ ಮರವನ್ನು ಬಿಡಲೂ ಮನಸ್ಸಿಲ್ಲ.

ಒಂದು ವಸ್ತುವಿನ ಅಥವಾ ಒಬ್ಬ ಮನುಷ್ಯನ ಒಳ್ಳೆಯ ಗುಣಗಳ ಜೊತೆಯಲ್ಲೇ ಸೇರಿಕೊಂಡಿರುವ ಕೆಟ್ಟ ಗುಣಗಳನ್ನು ಅವಲೋಕಿಸುವಾಗ ಈ ಮಾತನ್ನು ಉಪಯೋಗಿಸುತ್ತಾರೆ.

October 15, 2007

ಉಂತೇ ಹೋಗೋಳೇ … (ಉತ್ತರ ಕನ್ನಡದ ಗಾದೆ – 41 ಮತ್ತು 42)

ಉಂತೇ ಹೋಗೋಳೇ ನನ್ನ ಅಪ್ಪನ ಸೊಸೆಯಾಗು.

ಸುಮ್ಮನೇ ಅವಳು ಹೋಗುತ್ತಿದ್ದಾಳೆ.
ಅವಳನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಕಷ್ಟ ಇಲ್ಲ ಎಂದು ಕಂಡುಕೊಂಡ ಅವನು ಅವಳನ್ನು ಕುರಿತು "ಸುಮ್ಮನೇ ಯಾಕೆ ಹೋಗುತ್ತೀಯಾ, ನನ್ನ ಹೆಂಡತಿಯಾಗು" ಎಂದು ಹೇಳುತ್ತಾನೆ.

ಕಷ್ಟಪಡದೇ ಸಿಗುವ ವಸ್ತುವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಕಾತುರರಾಗಿರುವವರನ್ನು ಕುರಿತು ಇರುವ ಮಾತು ಇದು.
ಇದೇ ಅರ್ಥ ಕೊಡುವ ಇನ್ನೊಂದು ಗಾದೆ ಎಂದರೆ ಪುಕ್ಕಟೆ ಸಿಗುವುದಿದ್ದರೆ ನನಗೊಂದಿರಲಿ, ನನ್ನ ಅಪ್ಪನಿಗೊಂದಿರಲಿ.

October 12, 2007

ಮದುವೆಯಾಗೋ ಬ್ರಹ್ಮಚಾರಿ … (ಉತ್ತರ ಕನ್ನಡದ ಗಾದೆ – 40)

ಮದುವೆಯಾಗೋ ಬ್ರಹ್ಮಚಾರಿ ಅಂದರೆ ನೀನೇ ಹೆಂಡತಿಯಾಗು ಅಂದ.

ಅವನು ಬ್ರಹ್ಮಚಾರಿಯಾಗಿಯೇ ಜೀವನ ಕಳೆಯುತ್ತಿದ್ದವ.
ಅವಳು ಅವನಿಗೆ, "ಮದುವೆಯಾಗು ನಿನ್ನ ಜೀವನ ಚೆನ್ನಾಗಿರುತ್ತದೆ" ಎಂದರೆ ಅವನು ತಿರುಗಿ ಅವಳಿಗೆ "ಹಾಗಾದರೆ ನೀನೇ ನನ್ನ ಹೆಂಡತಿಯಾಗು" ಎಂದನಂತೆ.

ಯಾರಿಗಾದರೂ ಒಳ್ಳೆಯದಾಗುವಂತಹ ಕೆಲಸವನ್ನು ಮಾಡಿಕೊಳ್ಳಲು ನಾವು ಹೇಳಿದಾಗ ಅವರು ನಮ್ಮ ಹತ್ತಿರವೇ ಆ ಕೆಲಸವನ್ನು ಮಾಡಿಕೊಡು ಅಂದರೆ ಈ ಗಾದೆಯನ್ನು ಹೇಳಬಹುದು.

October 11, 2007

ಬಗ್ಗಿದಾಗಲೇ … (ಉತ್ತರ ಕನ್ನಡದ ಗಾದೆ – 39)

ಬಗ್ಗಿದಾಗಲೇ ಆಚೆ ಮನೆಯ ಅತ್ತೇರಿಗೂ ಒಂದು ನಮಸ್ಕಾರ.

ತನ್ನ ಅತ್ತೇರಿಗೆ ನಮಸ್ಕಾರ ಮಾಡಲೆಂದು ಬಗ್ಗಿದ್ದಾಳೆ. ಅಲ್ಲೇ ಪಕ್ಕದಲ್ಲಿ ಆಚೆ ಮನೆಯ ಅತ್ತೇರೂ ಕೂತಿದ್ಡಾಳೆ (ಬಹುಶಃ ಸಣ್ಣ ಅತ್ತೆ ಇರಬಹುದು). ಹೇಗೂ ಬಗ್ಗಿ ಆಗಿದೆ, ಹಾಗಾಗಿ ಆಚೆ ಮನೆಯ ಅತ್ತೇರಿಗೂ ಒಂದು ನಮಸ್ಕಾರ ಮಾಡಿ ಮುಗಿಸಿಬಿಡುತ್ತಾಳೆ.

ಒಂದು ಕೆಲಸವನ್ನು ಮಾಡುವಾಗ ಅದರ ಜೊತೆಯಲ್ಲಿಯೇ ಇನ್ನೊಂದು ಕೆಲಸದ ಸಾಧ್ಯತೆಯೂ ಆಕಸ್ಮಾತಾಗಿ ಅರಿವಾಗಿ, ತಕ್ಷಣ ಅದನ್ನೂ ಕೂಡ ಮಾಡಿ ಮುಗಿಸಿಬಿಟ್ಟಾಗ ಹೇಳುವ ಗಾದೆ ಇದು.

October 10, 2007

ಅಲವರಿಕೆಯ ಗಂಡನಿಗೆ … (ಉತ್ತರ ಕನ್ನಡದ ಗಾದೆ – 37 ಮತ್ತು 38)

ಅಲವರಿಕೆಯ ಗಂಡನಿಗೆ ತುದಿ ಕೈಯ್ಯಲ್ಲಿ ಬಾಯಿ ಬಡಿದುಕೊಂಡಿದ್ದಳು.

ಅವನು ಕಿರಿಕಿರಿ ಮಾಡುತ್ತಿದ್ದ ಗಂಡ. ಅವನು ಸತ್ತಾಗ ಅವಳು ಒಲ್ಲದ ಮನಸ್ಸಿನಿಂದ ಬಾಯಿಬಡಿದುಕೊಳ್ಳುತ್ತಾಳೆ.
ಇಡೀ ಕೈಯ್ಯಾನ್ನೂ ಕೂಡ ಉಪಯೋಗಿಸುವ ಮನಸ್ಸಿಲ್ಲ ಅವಳಿಗೆ.
ಅವನು ಸತ್ತಿದ್ದಾನೆ; ಬಾಯಿ ಬಡಿದುಕೊಳ್ಳದೇ ಬೇರೆ ದಾರಿಯಿಲ್ಲ.
ಅದಕ್ಕಾಗಿ ತುದಿ ಕೈಯ್ಯಲ್ಲಿಯೇ ಬಾಯಿ ಬಡಿದುಕೊಂಡು ಮುಗಿಸುತ್ತಾಳೆ.

ನೀವು ಯಾರಿಗಾದರೂ ಇಷ್ಟವಿಲ್ಲದ ಕೆಲಸ ಹೇಳಿದಾಗ ಅವರು ಅದನ್ನು
ಒಲ್ಲದ ಮನಸ್ಸಿನಿಂದ ಹೇಗೆ ಹೇಗೋ ಅಂತೂ ಮಾಡಿ ಮುಗಿಸಿದಾಗ ಈ ಮಾತನ್ನು ಹೇಳಿ!

ಇದಕ್ಕೆ ಬದಲಾಗಿ ನೀವು ಹೇಳಬಹುದಾದಂತಹ ಇನ್ನೊಂದು ಗಾದೆ- ಕಟಕಟೆಯ ದೇವರಿಗೆ ಮರದ ಜಾಗಟೆ.
ಅವನು ಕಿರಿಕಿರಿ ಮಾಡುವ ದೇವರು. ಆದರೂ ಅವನ ಪೂಜೆಗೆ ಜಾಗಟೆ ಬಾರಿಸುವುದು ಅನಿವಾರ್ಯ.
ಲೋಹದ ಜಾಗಟೆ ಬಾರಿಸಲು ಮನಸ್ಸಿಲ್ಲದೇ ಮರದ ಜಾಗಟೆಯಲ್ಲಿಯೇ ಪೂಜೆ ಮುಗಿಸಲಾಗುತ್ತದೆ.

October 9, 2007

ಇಷ್ಟು ಕ0ಡ್ಯಾ ವಿಷ್ಣು ಭಟ್ಟ … (ಉತ್ತರ ಕನ್ನಡದ ಗಾದೆ – 36)

ಇಷ್ಟು ಕ0ಡ್ಯಾ (ಕಂಡೆಯಾ) ವಿಷ್ಣು ಭಟ್ಟ ಮುಪ್ಪಿನ ಕಾಲಕ್ಕೆ ಮೂರು ಹೆ೦ಡ್ರು.

ವಿಷ್ಣು ಭಟ್ಟನಿಗೆ ಮುಪ್ಪಿನ ಕಾಲ ಬರುವುದರೊಳಗೆ ಮುರು ಸಲ ಮದುವೆಯಾಗಿ, ಮೂರು ಹೆಂಡತಿಯರನ್ನು ಕಂಡಿದ್ದಾನೆ.
ಆದರೂ ಜೀವನದಲ್ಲಿ ತನಗೆ ಸಿಕ್ಕಿದ್ದು ಸಾಲದು ಎಂದು ಹೇಳುತ್ತಲೇ ಇರುತ್ತಾನೆ.

ಜೀವನದಲ್ಲಿ ಸಾಮಾನ್ಯವಾಗಿ ಎಲ್ಲಾ ಸುಖಗಳೂ ಸಿಕ್ಕಿದರೂ ಇನ್ನೂ ಸಾಲದು ಎಂದು ಹೇಳುತ್ತಾ ಕೊರಗುತ್ತಿರುವವರನ್ನು ಕುರಿತು 'ನಿನಗೆ ಇಷ್ಟೆಲ್ಲಾ ಸಿಕ್ಕಿದೆ, ಸುಮ್ಮನಿರು. ಇನ್ನೊ ದುರಾಸೆ ಪಡಬೇಡ' ಎಂದು ಹೇಳುವಾಗ ಉಪಯೋಗಿಸುವ ಮಾತು ಇದು.

October 8, 2007

ಕರುವಿನ ಹಾರಾಟ … (ಉತ್ತರ ಕನ್ನಡದ ಗಾದೆ – 35)

ಕರುವಿನ ಹಾರಾಟ ಗೂಟದ ಕೆಳಗೆ.

ಆಕಳ ಕರು ಗೂಟಕ್ಕೆ ಕಟ್ಟಿ ಹಾಕಿಕೊಂಡಿದ್ದಾಗ ತಪ್ಪಿಸಿಕೊಳ್ಳಲೆಂದು ಕೆಲವೊಮ್ಮೆ ಜಿಗಿದಾಡುತ್ತದೆ.
ಆದರೆ ಗೂಟ ಎತ್ತರವಿರುವುದರಿಂದ ಅದಕ್ಕೆ ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಸಾಮಾನ್ಯವಾಗಿ ಸಣ್ಣ ಮಕ್ಕಳು ದೊಡ್ಡವರ ಇಚ್ಛೆಗೆ ವಿರುಧ್ಧವಾಗಿ ಹೋರಾಡಿ ವಿಫಲರಾದಾಗ ಈ ಗಾದೆಯ ಉಪಯೋಗ ಕಾಣ ಸಿಗುತ್ತದೆ.

October 6, 2007

ಸುಟ್ಟೇವು ಸುಡುವ ಮುದುಕಿಗೆ … (ಉತ್ತರ ಕನ್ನಡದ ಗಾದೆ – 33 ಮತ್ತು 34)

ಸುಟ್ಟೇವು ಸುಡುವ ಮುದುಕಿಗೆ ಸಿಂಬಳ ತೆಗೆಯಲು ಇನ್ನೊಬ್ಬಳು.

ಸುಟ್ಟೇವು ಅಂದರೆ ಎಣ್ಣೆಯಲ್ಲಿ ಕರಿದ ಸಿಹಿ ತಿಂಡಿ.
ಸುಟ್ಟೇವನ್ನು ಕರಿಯುತ್ತಿರುವ ಮುದುಕಿಗೆ ಸಿಂಬಳ ಬಂದರೆ ಅದನ್ನು ತೆಗೆಯಲು ಇನ್ನೊಬ್ಬಳು ಸಹಾಯಕಿ ಬೇಕು.

ಮಾಡುತ್ತಿರುವುದು ಸಣ್ಣ ಕೆಲಸವಾದರೂ ಅದಕ್ಕೆ ಬೇರೆಯವರ ಸಹಾಯವನ್ನು ಬಯಸಿದರೆ ಈ ಗಾದೆ ಅನ್ವಯಿಸುತ್ತದೆ.

ಇದಕ್ಕೆ ಬದಲಿಯಾಗಿ ಬಳಸುವಂತಹ ಗಾದೆ ಎಂದರೆ ಅಂಬಲಿ ಕುಡಿಯುವವನಿಗೆ ಮೀಸೆ ತೀಡಲು ಇನ್ನೊಬ್ಬ.
ಇದನ್ನು ನೆನಪಿಸಿದಂತಹ ವಿಕಾಸ್‌ಗೆ ಧನ್ಯವಾದಗಳು.

October 5, 2007

ಕುರುಡಿಯ ಕೈಲಿ … (ಉತ್ತರ ಕನ್ನಡದ ಗಾದೆ – 32)

ಕುರುಡಿಯ ಕೈಲಿ ಬಾಳೆ ಒಗೆಸಿದಂತೆ.

ಒಗೆಯುವುದು ಎಂದರೆ ಎಸೆಯುವುದು ಎಂದು ಅರ್ಥ.
ಕುರುಡಿಯ ಕೈಲಿ ಬಾಳೆಯನ್ನು ತೆಗೆದು ಎಸೆ ಎಂದು ಹೇಳಿದರೆ ಅವಳಿಂದ ಅದು ಆಗದ ಕೆಲಸ.
ಬಾಳೆಯನ್ನು ತೆಗೆಯುವುದು ಮಾತ್ರವಲ್ಲದೇ ಅದನ್ನು ಎಸೆಯುವ ಅರೆಗೂ ಅವಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಬೇಕು.
ಅದೆಲ್ಲದರ ಬದಲು ಆ ಕೆಲಸವನ್ನು ನಾವೇ ಮಾಡುವುದು ಉತ್ತಮ ಎನಿಸುತ್ತದೆ.

ಯಾರಿಗಾದರೂ ಗೊತ್ತಿಲ್ಲದ ಕೆಲಸವನ್ನು ಮಾಡಲು ಹೇಳಿ ಅವರಿಗೆ ಪ್ರತಿಯೊಂದು ಹಂತದಲ್ಲೂ ನಾವೇ ಸಹಾಯ ಮಾಡಬೇಕಾದಂತ ಸಂದರ್ಭದಲ್ಲಿ ಈ ಗಾದೆಯ ಉಪಯೋಗವನ್ನು ಕಾಣಬಹುದು.

October 4, 2007

ಆದರೆ, ಹೋದರೆ … (ಉತ್ತರ ಕನ್ನಡದ ಗಾದೆ – 31)

ಆದರೆ, ಹೋದರೆ, ಹತ್ತಿ ಬೆಳೆದರೆ, ಅಜ್ಜಿಗೊಂದು ಪಟ್ಟೆ ಸೀರೆ.

ಬಿತ್ತಿದ ಹತ್ತಿ ಬೀಜ ಸರಿಯಾಗಿ ಹುಟ್ಟಿ, ಬೆಳೆದು, ಹೂವಾದರೆ ಅಜ್ಜಿಗೊಂದು ಪಟ್ಟೆ ಸೀರೆಯನ್ನು ನೇಯಿಸಿ ಕೊಡಬಹುದು.

ಎಲ್ಲಾ ಕಡೆಯಿಂದ ಅನಿಶ್ಚಿತತೆ ಇದ್ದು, ಎಲ್ಲವೂ ನಾವೆಣಿಸಿದಂತೆ ನಡೆದರೆ ಮಾತ್ರ ಏನೋ ಒಂದು ಲಾಭ ಆಗಬಹುದು ಎಂಬುದನ್ನು ಸೂಚಿಸಲು ಹೇಳುವ ಗಾದೆ ಇದು.

October 3, 2007

ಹಾರುವ ಮಂಗಕ್ಕೆ … (ಉತ್ತರ ಕನ್ನಡದ ಗಾದೆ – 30)

ಹಾರುವ ಮಂಗಕ್ಕೆ ಏಣಿ ಹಾಕಿ ಕೊಟ್ಟಂತೆ.

ಮೊದಲೇ ಅದು ಹಾರುತ್ತ, ಕುಣಿಯುತ್ತ, ಚೇಷ್ಟೆ ಮಾಡುತ್ತಿರುವ ಮಂಗ.
ಅದಕ್ಕೆ ಏಣಿಯನ್ನೂ ಹಾಕಿ ಕೊಟ್ಟು ಬಿಟ್ಟರೆ ಅದರ ಚೇಷ್ಟೆಗೆ ಮಿತಿಯೇ ಇರುವುದಿಲ್ಲ.

ಮೊದಲಿನಿಂದಲೇ ಕಪಿ ಬುದ್ಧಿ ಇರುವವರಿಗೆ ಯಾರಾದರೂ ಇನ್ನಷ್ಟು ಪ್ರೋತ್ಸಾಹ ಕೊಟ್ಟಾಗ ಹೇಳುವ ಮಾತು ಇದು.
ಮಂಗನಿಗೆ ಹೆಂಡ ಕುಡಿಸಿ ಚೇಳು ಕಡಿಸಿಡರೆ... ಎಂಬ ವಾಡಿಕೆಯ ಮಾತೂ ಕೂಡ ಇದೆ.

October 2, 2007

ಸವಿ ಕಂಡ ನಾಯಿ … (ಉತ್ತರ ಕನ್ನಡದ ಗಾದೆ – 28 ಮತ್ತು 29)

ಸವಿ ಕಂಡ ನಾಯಿ ಕಿವಿ ಕೊಯ್ದರೂ ಬಿಡುವುದಿಲ್ಲ.

ನಾಯಿಗೆ ಯಾವುದಾದರೂ ಒಂದು ಕೆಟ್ಟ ವಸ್ತುವಿನ ರುಚಿ ಹತ್ತಿತೆಂದರೆ ಅದು ಕಿವಿ ಕೊಯ್ದರೂ
ಆ ವಸ್ತುವಿನ ಸಹವಾಸವನ್ನು ಬಿಡುವುದಿಲ್ಲ.

ಯಾರಾದರೂ ಒಂದು ಕೆಟ್ಟ ಚಟಕ್ಕೆ ಬಲಿಯಾದರೆಂದರೆ ತೀವ್ರವಾದ ಶಿಕ್ಷೆಯಿಂದ ಕೂಡ ಅವರ ಚಟವನ್ನು ಬಿಡಿಸುವುದು ಕಷ್ಟ ಎಂಬ ಅರ್ಥವನ್ನು ಕೊಡುತ್ತದೆ.

ಇದರ ಹೊರತಾಗಿ ಇಂತಹದೇ ಸಂದರ್ಭದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ ಎಂದರೆ ಹುಟ್ಟು ಗುಣ ಚಟ್ಟ ಹತ್ತಿದರೂ ಹೋಗುವುದಿಲ್ಲ.
ಅಂದರೆ ಮೊದಲಿನಿಂದ ರೂಡಿಸಿಕೊಂಡು ಬಂದ ಚಟ ಸಾಯುವ ತನಕ ಹೋಗುವುದಿಲ್ಲ ಎಂದು.

October 1, 2007

ತಲೆಯನ್ನು … (ಉತ್ತರ ಕನ್ನಡದ ಗಾದೆ – 26 ಮತ್ತು 27)

ತಲೆಯನ್ನು ಕಡಿದು ಕೊಟ್ಟರೂ ಸೋರೆ ಬುರುಡೆ ಎಂದೇ ಹೇಳುತ್ತಾನೆ.

ಸೋರೆ ಬುರುಡೆ ಎಂದರೆ ಸೋರೆ ಕಾಯಿ ಅಥವಾ ಕುಂಬಳ ಕಾಯಿಯನ್ನು ಪೂರ್ತಿಯಾಗಿ ಬೆಳೆಸಿ, ಒಣಗಿಸಿ ಅದರ ಒಳಗಿನ ತಿರುಳು ಮತ್ತು ಬೀಜಗಳನ್ನು ತೆಗೆದಿಟ್ಟಿದ್ದು. ನಮ್ಮ ತಲೆಯನ್ನೇ ಕಡಿದು ಆತನ ಕೈಯ್ಯಲ್ಲಿ ಕೊಟ್ಟರೂ ಆತ ಅದನ್ನು ತಲೆ ಎಂದು ಒಪ್ಪಿಕೊಳ್ಳದೇ ಅದು ಸೋರೆ ಬುರುಡೆ ಎಂದು ಹೇಳುತ್ತಾನೆ.

ತಮ್ಮ ವಾದ ತಪ್ಪಿದ್ದರೂ ಕೂಡ ಅದನ್ನೇ ಮುಂದುವರಿಸುತ್ತಾ, ಬೇರೆಯವರ ಮಾತನ್ನು ಸುತಾರಾಂ ಒಪ್ಪಿಕೊಳ್ಳದವರನ್ನು ಕುರಿತು ಈ ಗಾದೆಯನ್ನು ಬಳಸಿ.

ಇದಕ್ಕೆ ಸರಿ ಹೋಗುವಂತಹ ಮತ್ತು ತುಂಬಾ ಪ್ರಚಲಿತವಾಗಿರುವ ಗಾದೆ ಎಂದರೆ ತಾನು ಕಂಡ ಮೊಲಕ್ಕೆ ಮೂರೇ ಕಾಲು.