August 30, 2011

ಅರಿಶಿಣದ ಅನ್ನಕ್ಕೆ ಹೋಗಿ (ಉತ್ತರ ಕನ್ನಡದ ಗಾದೆ – 250)

ಅರಿಶಿಣ ಅನ್ನಕ್ಕೆ ಹೋಗಿ ವರುಷನ ಅನ್ನ ಕಳೆದುಕೊಂಡಿದ್ದ.

ಅರಿಶಿಣ ಇದರ correct form ‘ಅನ್ನಕ್ಕೆ ಹೋಗಿ ವರುಷದ ಅನ್ನ ಕಳೆದುಕೊಂಡಿದ್ದಎಂಬುದು. ಪ್ರಾಸಕ್ಕೆ ಸರಿ ಹೊಂದುವಂತೆವರುಷನ ಎಂದು ಹೇಳುತ್ತಾರೆ. ಅರಿಶಿಣದ ಅನ್ನ ಅಂದರೆ ಚಿತ್ರಾನ್ನ. ಪೇಟೆಯ ಜನರಿಗೆ ಇಂದಿನ ಅನ್ನ ಉಳಿದರೆ ಅದನ್ನು ಹಾಳುಮಾಡದೆ ಬಳಸಬೇಕೆಂದರೆ ಇರುವ ಪ್ರಮುಖ ದಾರಿ- ನಾಳೆ ಚಿತ್ರಾನ್ನ! ಹಳ್ಳಿಗಳಲ್ಲಿ ಇಂದು ಅನ್ನ ಉಳಿದರೆ ಅದನ್ನು ನಾಳೆಯವರೆಗೆ ಇಡುವ ಪ್ರಮೇಯವಿರುವುದಿಲ್ಲ. ಇಂದೇ ದನ-ಕರುಗಳಿಗೆ ಕೊಟ್ಟು ಖಾಲಿಮಾಡಿಬಿಡುತ್ತಾರೆ. ಹಳ್ಳಿಗಳಲ್ಲಿ ಚಿತ್ರಾನ್ನ ಮಾಡುವುದು ಕೇವಲ ವಿಶೇಷದ ದಿನಗಳಲ್ಲಿ ಮಾತ್ರ. ಅಂದರೆ ಹಬ್ಬ ಹರಿದಿನಗಳು ಅಥವಾ ಶ್ರಾದ್ಧದ ದಿನಗಳು. ಯಾರೋ ಒಬ್ಬ ಹಬ್ಬದೂಟದ ಆಸೆಗೆ (ಅರಿಶಿಣ ಅನ್ನಕ್ಕೆ) ಪ್ರತಿದಿನ ಬೇರೆಯವರ ಮನೆಗೆ ಹೋಗುತ್ತಿದ್ದನಂತೆ. ಇಂದಿನ ದಿನ ಕಳೆದರಾಯಿತೆಂಬಭಾವನೆ ಅವನಿಗೆ. ಪ್ರತಿದಿನ ಮನೆಯಲ್ಲಿರದ ಅವನಿಗೆ ತನ್ನ ಗದ್ದೆ-ತೋಟಗಳ ಕಡೆ ಗಮನವೇ ಇರಲಿಲ್ಲ. ಅವು ಹಾಳುಬಿದ್ದು ಆ ವರ್ಷ ಅವನಿಗೆ ಬೆಳೆಯೇ ಸಿಗಲಿಲ್ಲ. ಅರಿಶಿಣ ಅನ್ನದ ಆಸೆಯಲ್ಲಿ ವರ್ಷಾವಧಿಯ ಅನ್ನವನ್ನು ಕಳೆದುಕೊಂಡುಬಿಟ್ಟಿದ್ದ. ಮುಂದಿನ ದಿನಗಳ ಬಗ್ಗೆ ಆಲೋಚನೆ ಮಾಡದೆ ಇಂದು ಸಿಗುವ ಸಣ್ಣ ಸುಖದ ಬೆನ್ನುಹತ್ತಿ ಹೋಗುವವರನ್ನು ಕುರಿತುಹೇಳಬಹುದಾದಂತ ಗಾದೆ ಇದು.

August 4, 2011

ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ'

ಹದಿನೈದು ದಿನಗಳ ಹಿಂದೆ ಊರಿಗೆ ಹೊರಟಿದ್ದೆವು. ಊರಿನ ಮಳೆಗಾಲವನ್ನು ಅನುಭವಿಸದೆ ಎಷ್ಟೋ ವರ್ಷಗಳಾಗಿತ್ತು. ನಾನು ಊರಿನ ಮಳೆಯನ್ನು ಕಣ್ಣಲ್ಲಿ ತುಂಬಿಕೊಳ್ಳುವ ಮೊದಲೇ ಮನಸ್ಸಿನಲ್ಲಿ ತುಂಬಿಕೊಂಡಿದ್ದೆ. ಬೆಳಿಗ್ಗೆ ಆರು ಘಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಡುವ ಜನಶತಾಬ್ದಿ ರೈಲಿನಲ್ಲಿ ಕಾಯ್ದಿರಿಸಿದ್ದ ಸೀಟಿನಲ್ಲಿ ಎಂದಿನಂತೆಯೇ ಕಿಟಕಿಯ ಪಕ್ಕ ನಾನು, ನನ್ನ ಪಕ್ಕ ರಾಜೀವ ಕುಳಿತೆವು. ಹಾವೇರಿಯಲ್ಲಿ ಇಳಿದು ಶಿರಸಿಗೆ ಬಸ್ಸಿನಲ್ಲಿ ಹೋದರೆ ಮಧ್ಯಾನ್ಹದ ಊಟಕ್ಕೆ ಮನೆ ತಲುಪಬಹುದು. ರಾಜೀವನ ಪಕ್ಕದಲ್ಲಿ ಇನ್ಯಾರೋ ಕುಳಿತರು. ಎದುರು-ಬದುರಿಗೆ ಇರುವಂಥ ಸೀಟುಗಳಾಗಿದ್ದರಿಂದ ನಮ್ಮ ಎದುರಿಗೆ ಅಜ್ಜಿ-ಮೊಮ್ಮಗ, ಇನ್ನೊಬ್ಬ ವ್ಯಕ್ತಿ ನಮಗಿಂತ ಮೊದಲೇ ಆಸೀನರಾಗಿದ್ದರು. ನಮಗೆ diagonally opposite ಆಗಿ ಯಾರೋ ಒಬ್ಬರು ಮಧ್ಯ ವಯಸ್ಸಿನ uncle ಕುಳಿತಿದ್ದರು. ರೈಲು ಹೊರಟಿತು. ರಾಜೀವನಿಗೆ ನನಗಿಂತಲೂ ಓದುವ ಹುಚ್ಚು ತುಂಬಾ ಜಾಸ್ತಿ. ಮೂರ್ನಾಲ್ಕು ಪುಸ್ತಕ ತಂದಿದ್ದ.... ಒಂದನ್ನು ಚೀಲದಿಂದ ಎಳೆದು ಶುರು ಹಚ್ಚಿಕೊಂಡ.

ನಾನು ಕಿಟಕಿಯಿಂದ ಹೊರಗಡೆ ನೋಡಿ ರೈಲ್ವೆ ಟ್ರಾಕ್ ನ ಪಕ್ಕದ ಪ್ಲಾಸ್ಟಿಕ್ ನೋಡಿ ದುಃಖಿಸತೊಡಗಿದ್ದೆ . ನನಗಾದ ಕಿರಿಕಿರಿಯನ್ನು ಅವನಿಗೂ ಸ್ವಲ್ಪ ಅಂಟಿಸಿ ಕೃತಾರ್ಥಳಾಗೋಣವೆಂದು "ರಾಜೀವ..." ಎಂದೆ. "ತಡಿಯೇ" ಎಂಬ ಉತ್ತರ ಬಂತು. ಸುಮ್ಮನಾದೆ. ಪುಸ್ತಕದಲ್ಲಿ ಮುಳುಗಿ ಹೋಗಿದ್ದ. ನನಗೆ ಸ್ವಲ್ಪ ನಿದ್ದೆಯ ಜೋಂಪು ಹತ್ತಿ ಎಚ್ಚರವಾಗುವಷ್ಟರಲ್ಲಿ ಒಂದು ಘಂಟೆ ಕಳೆದಿತ್ತು. ರಾಜೀವ ಓದುತ್ತಿದ್ದ ಪುಸ್ತಕ ಮುಗಿಸಿ ಆಗಿತ್ತು. ಏನೋ ವಿಚಾರ ಮಾಡುತ್ತಿದ್ದವನಂತೆ ಕಂಡ. "ಏನು?!!" ಎಂದೆ. "ಈ ಪುಸ್ತಕ ಓದು" ಎಂದು ಕೈಲಿರುವ ಪುಸ್ತಕ ಕೊಟ್ಟ. ನೋಡಿದೆ. ಅಗ್ನಿ ಶ್ರೀಧರ್ ಬರೆದ 'ಎದೆಗಾರಿಕೆ' ಆಗಿತ್ತು. “Underworld ಬಗ್ಗೆಯಾ? ನಂಗೆ ಇಷ್ಟ ಇಲ್ಲ, ಓದಲ್ಲ. ಬೇರೆ ಪುಸ್ತಕ ಕೊಡು" ಎಂದೆ. "ಒಮ್ಮೆ ಓದಿ ನೋಡು, ತುಂಬಾ ಚೆನ್ನಾಗಿದೆ" ಎಂದ. "ಒಬ್ಬರನ್ನೊಬ್ಬರು ಕೊಚ್ಚಿ ಸಾಯಿಸೋದು- ಇನ್ನೆಷ್ಟು ಚೆನ್ನಾಗಿರಲು ಸಾಧ್ಯ?" ಎಂದು ಗೊಣಗಿದೆ. “Different ಆಗಿದೆ, ನೋಡು ಒಮ್ಮೆ" ಎಂದ. ತಾನು ರಜನೀಕಾಂತ್ ಬಗ್ಗೆ ಇನ್ಯಾವುದೋ ಪುಸ್ತಕದಲ್ಲಿ ಮುಳುಗಿದ. ಅವನ ಒತ್ತಾಯಕ್ಕೆ ತೆಗೆದುಕೊಂಡು ಶುರು ಮಾಡಿದೆ. 'ಎದೆಗಾರಿಕೆ' ಹೆಚ್ಚು ಕಡಿಮೆ ಅರವತ್ತು ಪುಟಗಳ ಸಣ್ಣ ಪುಸ್ತಕ. ಒಂದು-ಒಂದೂವರೆ ತಾಸಿನಲ್ಲಿ ಓದಿ ಮುಗಿಸಬಹುದು. ಓದುತ್ತಾ ಹೋದೆ... ಓದುತ್ತಾ ಹೋದೆ...ಓದುತ್ತಾ ಹೋದೆ... ರಾಜೀವ "ಸೀಮಾ.." ಎಂದ... ನಾನು "ಸ್ವಲ್ಪ ತಡಿಯೋ" ಎಂದೆ. ನಂಗೆ ಗೊತ್ತಿತ್ತು ಎನ್ನುವವರ ತರ ನಕ್ಕ.

ರಾಜೀವ ಹೇಳಿದಂತೆ ತುಂಬಾ different ಆಗಿತ್ತು ಕಥೆ. ಹೇಳುವಂಥ ದೊಡ್ಡ ಕಥೆಯೇನೂ ಇಲ್ಲ. ಆದರೆ ನಿರೂಪಿಸಿರುವ ರೀತಿ ಮಾತ್ರ ಅಮೋಘ! ಸಾರಾಂಶ ಇಷ್ಟೇ- ಮುಂಬೈನ underworld ನ ರೌಡಿಯಾಗಿದ್ದವನ ಪೈಕಿ ಒಬ್ಬನನ್ನು (ಕಥಾನಾಯಕ) ಮುಗಿಸಲು ಬೆಂಗಳೂರಿನ ಏಳೆಂಟು ಜನ ರೌಡಿಗಳು ತುಮಕೂರಿನ ಹತ್ತಿರ ಒಳಗೆಲ್ಲೋ farmhouse ಗೆ ಕರೆದುಕೊಂಡು ಹೋಗುತ್ತಾರೆ. ಅವನಿಗೆ ತನ್ನನ್ನು ಸಾಯಿಸಲು ಹೊರಟಿದ್ದಾರೆ ಎಂಬುದರ ಅರಿವಾಗಿರುತ್ತದೆ. ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು ಎಂಬ ಅವರ ಊಹೆ ಸುಳ್ಳಾಗುತ್ತದೆ. ದಾರಿಯಲ್ಲಿ ಒಂದೆರಡು ಸಣ್ಣ-ಪುಟ್ಟ ಅವಕಾಶಗಳು ಸಿಕ್ಕಿದರೂ ಅವನು ಅವುಗಳನ್ನು ಬಳಸಿಕೊಳ್ಳುವುದಿಲ್ಲ. ಅವನು ವರ್ತನೆ ಎಷ್ಟು ಸಹಜವಾಗಿರುತ್ತದೆಯೆಂದರೆ ಅವನಿಗೆ ತಾನು ಸಾಯಲಿರುವುದು ಗೊತ್ತೇ ಆಗಿಲ್ಲವೇನೋ ಎಂಬ ಗುಮಾನಿ ಆ ರೌಡಿಗಳಿಗೆ ಬರತೊಡಗುತ್ತದೆ.

ನಡುವೆ ಬೆಕ್ಕುಗಳ ಒಂದು ಕಥೆ ಬರುತ್ತದೆ- ಸಾಯಿಸಲು ತೆಗೆದುಕೊಂಡು ಹೋಗುತ್ತಿರುವ ಎರಡು ಬೆಕ್ಕುಗಳ ಪೈಕಿ ಒಂದು ಸ್ಥಿತಪ್ರಜ್ನನಾಗಿ ಕುಳಿತು ಸಾವಿಗೆ ಮಾನಸಿಕ ತಯಾರಿ ನಡೆಸುತ್ತಿದ್ದಂತೆ ಕಂಡರೆ ಇನ್ನೊಂದು ಬೋನಿನಿಂದ ಜಿಗಿದು ಓಡಿ ಹೋಗಿ ತಪ್ಪಿಸಿಕೊಳ್ಳಲು ನೋಡಿ ಹಿಂದಿನಿಂದ ಬರುತ್ತಿರುವ ಕಾರಿನ ಚಕ್ರದಡಿ ಸಿಕ್ಕಿ ಸಾಯುತ್ತದೆ. ಇವೆರಡರಲ್ಲಿ ಯಾವ ಬೆಕ್ಕು ನಿಜವಾಗಿ ಹೀರೋ? ಸಾವನ್ನು ಎದುರಿಸಲು ಸಿದ್ಧವಾಗಿರುವ ಬೆಕ್ಕೋ ಅಥವಾ ಧೈರ್ಯ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಬೆಕ್ಕೋ?!

ಆ ರೌಡಿಗಳ ಪೈಕಿ ಒಬ್ಬರಲ್ಲಿ ನಾಯಕ ಮನಸ್ಸನ್ನು ತೆರೆದುಕೊಳ್ಳುತ್ತಾನೆ. ಆ ರೌಡಿಗೆ ತಮ್ಮನ್ನು ನಾಯಕ emotional blackmail ಮಾಡುತ್ತಿದ್ದಾನಾ ಎಂದು ಗುಮಾನಿ ಶುರುವಾಗುತ್ತದೆ. ನಾಯಕ ಒಮ್ಮೆ "ನನ್ನನ್ನು ಹೇಗೆ ಮತ್ತು ಯಾವಾಗ ಸಾಯಿಸಬೇಕೆಂದು ಪ್ಲಾನ್ ಮಾಡಿದ್ದೀರಿ?" ಎಂದೂ ಕೂಡ ಕೇಳುತ್ತಾನೆ. ತಾನು ಸಾಯಲಿರುವುದು ಅವನಿಗೆ ಗೊತ್ತಿದ್ದರೂ ಅವನ ಸಹಜ ವರ್ತನೆಯನ್ನು ಕಂಡು ರೌಡಿಗಳು ಹೌಹಾರುತ್ತಾರೆ! ಮುಂಬೈ ನಲ್ಲಿ ಅವನಿಗಾದ ಅನುಭವಗಳ ಪೈಕಿ ಎರಡು ಅನುಭವಗಳು ಅತ್ಯಂತ ನೋವುಂಟುಮಾಡಿದವು ಎಂದೆನ್ನುತ್ತಾ ಆ ಅನುಭವಗಳನ್ನು ಬಿಡಿಸಿಡುತ್ತಾನೆ. ಇಸ್ಪೀಟು ಆಡುವಾಗ ಇತರರು ಬೇಕೆಂತಲೇ ಅವನನ್ನು ಗೆಲ್ಲಿಸುತ್ತಾರೆ. ಅವನಿಗೂ ಗೊತ್ತು, ಹಾಗೆಂದು ಕೇಳಿಯೇ ಬಿಡುತ್ತಾನೆ.

ರೌಡಿಗಳ ಗ್ಯಾಂಗ್ ನ ಮುಖ್ಯಸ್ಥನೂ ಈತನನ್ನು ಪ್ರೀತಿಸತೊಡಗುತ್ತಾನೆ. ಗ್ಯಾಂಗ್ ನ ಇತರರಂತೂ ಅವನು ಹೇಗಾದರೂ ತಪ್ಪಿಸಿಕೊಂಡು ಓಡಿ ಹೋಗಲಿ ಎಂದು ಬಯಸತೊಡಗುತ್ತಾರೆ. ಆದರೆ ಕೊಲ್ಲದೆ ವಿಧಿಯಿಲ್ಲ- ಮುಂಬೈ ನಿಂದ ಆರ್ಡರ್ ಆಗಿದೆ. ಗ್ಯಾಂಗ್ ನ ಮುಖ್ಯಸ್ಥ ಅವನನ್ನು ಆದಷ್ಟು ಮಟ್ಟಿಗೆ ನೋವಾಗದಂತೆ ಸಾಯಿಸಿ. ಸಾಯಿಸುವಾಗ ಹೆಚ್ಚು ಸಮಯ ಹಿಡಿಯದಂತೆ ನೋಡಿಕೊಳ್ಳಿ" ಎಂದು ಆಜ್ಞೆ ನೀಡುತ್ತಾನೆ. ಅವನಿಂದ ಇಷ್ಟೇ ಸಾಧ್ಯ. ಸಾಯಿಸುವ ಹಿಂದಿನ ದಿನ ರಾತ್ರಿ ಜಾಗವನ್ನು ನೋಡಿಕೊಂಡು ಬರಲು ಗ್ಯಾಂಗ್ ನವರು ಹೋಗುತ್ತಾರೆ. ನಾಯಕನೂ ಜೊತೆಯಲ್ಲಿ ಹೋಗುತ್ತಾನೆ. ಗ್ಯಾಂಗ್ ನಲ್ಲಿ ಯಾರಿಗೆ ಇವನು ಹತ್ತಿರವಾಗಿದ್ದಾನೋ ಅವನು ಜಾರಿ ಬೀಳುತ್ತಾನೆ; ಅವನ ಪ್ಯಾಂಟ್ ಪೂರ್ತಿ ಕೆಸರಾಗುತ್ತದೆ. ಮನೆಗೆ ಬಂದ ನಂತರ ನಾಯಕನು ಅವನಿಗೆ ತನ್ನದೇ ಪ್ಯಾಂಟನ್ನು ಕೊಡುತ್ತಾನೆ, ಹೇಳಿಮಾಡಿಸಿದಂತೆ ಹೊಂದಿಕೆಯಾಗುತ್ತದೆ. ನಾಳೆ ಸಾಯಲಿರುವ ವ್ಯಕ್ತಿಯ ಪ್ಯಾಂಟನ್ನು ಹಾಕಿಕೊಳ್ಳಲು ಭಯವಾದರೂ ಒತ್ತಾಯಕ್ಕೆ ಮಣಿದು ಹಾಕಿಕೊಳ್ಳುತ್ತಾನೆ. ನಾಯಕನ ಪ್ಯಾಂಟ್ ನಲ್ಲಿರುವ ಈತ ನಾಯಕನ ಮನಸ್ಥಿತಿಯನ್ನು ತಾನೂ ಅನುಭವಿಸತೊಡಗುತ್ತಾನೆ.

ನಾಯಕನಿಗೆ ಗೊತ್ತು, ಇವತ್ತು ಓಡಿ ಹೋದರೂ ನಾಳೆ ಸಾವು ತಪ್ಪಿದ್ದಲ್ಲ ಎಂದು. ಸಾವನ್ನು ಎದುರುಗೊಳ್ಳುತ್ತಾನೆ; ಎದೆಗಾರಿಕೆ ತೋರಿಸುತ್ತಾನೆ. ನಾಯಕನ ಹೆಸರು ಎಲ್ಲಿಯೂ ಇಲ್ಲ. ಇತರ ಯಾರ ಹೆಸರೂ ಇಲ್ಲ. ಕೇವಲ ಕಥಾನಾಯಕಿಯ ಹೆಸರು ಮಾತ್ರ ಸಿಗುತ್ತದೆ; ರಶ್ಮಿ ಎಂದು. ಸಾವಿನ ಬಗ್ಗೆ ಅವನು ಹೇಳುವ ಕೆಲವು ಮಾತುಗಳಂತೂ ಮನ ಮುಟ್ಟುತ್ತವೆ. ಮನದಲ್ಲಿಯೇ ಉಳಿಯುತ್ತವೆ. ಹಿಂದಿನ ದಿನ ರಾತ್ರಿ ರಶ್ಮಿ ತನ್ನ ಕನಸಿನಲ್ಲಿ ಬಂದಿದ್ದಳು ಎಂದು ಹೇಳಿಕೊಳ್ಳುತ್ತಾನೆ.

ಮರುದಿನ ರಾತ್ರಿ ಅವನನ್ನು ಸಾಯಿಸುವ ಪ್ಲಾನ್…. ಅವನು ಓಡಿ ಹೋಗಬಾರದಾ ಎಂದು ಎಲ್ಲರೂ ಹಾತೊರೆಯುತ್ತಾರೆ, ಓದುಗನೂ ಹಾತೊರೆಯುತ್ತಾನೆ.... ಆದರೆ ಹಾಗಾಗುವುದೇ ಇಲ್ಲ. ಇಷ್ಟವಿಲ್ಲದಿದ್ದರೂ ಕುತ್ತಿಗೆಗೆ ಹಗ್ಗ ಬಿಗಿಯಲೇ ಬೇಕು, ಎಲ್ಲವೂ ಸರಾಗವಾಗಿ ನಡೆದುಹೋಗುತ್ತದೆ, ಯಾವುದೇ ಪ್ರತಿರೋಧವನ್ನೊಡ್ಡದೆಯೇ ಸಾವನ್ನಪ್ಪುತ್ತಾನೆ; ಕೆಲವೇ ಕೆಲವು ಸೆಕೆಂಡುಗಳಲ್ಲಿ ಪ್ರಾಣ ತ್ಯಜಿಸುತ್ತಾನೆ. ಇವರಿಗೆಲ್ಲ ಅವನ ಸಾವಿಗೆ ತಾವು ಕೇವಲ ನೆಪ ಮಾತ್ರವಾಗಿದ್ದೆವಾ ಎಂದೆನಿಸಿಬಿಡುತ್ತದೆ. ಅವನು ಯಾವಾಗಲೋ ಸಮಾಧಿ ಸ್ಥಿತಿ ತಲುಪಿಬಿಟ್ಟಿದ್ದ! "ದೇಹದಿಂದ ಬಟ್ಟೆಯನ್ನು ಕಳಚಿದ ಹಾಗೆ" ಎಂದು ಶ್ರೀಧರ್ ಬರೆಯುತ್ತಾರೆ. ಅವನಿಷ್ಟದಂತೆಯೇ ನಾಯಕಿಗೆ ಅವನು ಅಪಘಾತದಲ್ಲಿ ತೀರಿಹೋದಎಂದು ತಿಳಿಸಲು ಫೋನ್ ಮಾಡಲಾಗುತ್ತದೆ. ಮುಂದಿನ ಎಂಟು-ಹತ್ತು ಸಾಲುಗಳಲ್ಲಿ ಪುಸ್ತಕ ಮುಗಿದೇ ಹೋಗುತ್ತದೆ. ಅವುಗಳೇನೆಂದು ಇಲ್ಲಿ ಬರೆಯುವುದಿಲ್ಲ. ಓದಿ ಅನುಭವಿಸಿ.

ನಾನು ಒಂದೇ ಉಸಿರಿಗೆ ಪುಸ್ತಕ ಮುಗಿಸಿದೆ. ತಡೆಯಲಾಗಲಿಲ್ಲ; ಪಟಪಟನೆ ಕೆಲ ಹನಿ ಕಣ್ಣೀರು ಉದುರಿದವು. ಒರೆಸಿಕೊಳ್ಳುವಷ್ಟರಲ್ಲಿ diagonally opposite ಕೂತಿದ್ದ uncle ನೋಡಿಯೇ ಬಿಟ್ಟರು! ರಾಜೀವನ ಪಕ್ಕದಲ್ಲಿದ್ದ ವ್ಯಕ್ತಿ ಎದ್ದು ಹೋಗಿದ್ದ. ಕೆಲ ನಿಮಿಷಗಳ ನಂತರuncle ಬಂದು ರಾಜೀವನ ಪಕ್ಕದಲ್ಲಿ ಕುಳಿತರು; ಕುತೂಹಲವಿರಬೇಕು, ಏನು ಓದುತ್ತಿದ್ದಾರೆ ಎಂದು. ಪುಸ್ತಕ ಕೇಳಿ ಪಡೆದುಕೊಂಡರು. ರಾಜೀವ ಎರಡೂ ಪುಸ್ತಕ ಕೊಟ್ಟ. ಪುಸ್ತಕಗ ಮುಖಪುಟವನ್ನೊಮ್ಮೆ, ಹಿಂಭಾಗವನ್ನೊಮ್ಮೆ ಎರೆಡೆರೆಡು ಬಾರಿ ನೋಡಿದರು, ರಜನೀಕಾಂತ್ ಬಗೆಗಿನ ಪುಸ್ತಕದ ಒಂದು ಪುಟವನ್ನು ಓದಿ ಪುಸ್ತಕಗಳನ್ನು ಹಿಂದಿರುಗಿಸಿ ತಮ್ಮ ಸೀಟಿಗೆ ಮರಳಿದರು! ನಾನು ಕಿಟಕಿಯ ಕಡೆ ಮುಖ ಮಾಡಿಕೊಂಡು ಅಳುವನ್ನು ತಡೆಹಿಡಿಯುವ ಸಾಹಸ ನಡೆಸಿದ್ದೆ!

ಶ್ರೀಧರ್ ಹೊರಹಾಕಿರುವ ಎಲ್ಲಾ ಭಾವನೆಗಳನ್ನು ಇಲ್ಲಿ ಬರೆಯಲು ಏಕೋ ಸಾಧ್ಯವಾಗುತ್ತಿಲ್ಲ. ಕಥೆಯನ್ನು ಓದುವಾಗ ಮತ್ತು ಆ ನಂತರ ಅನುಭವಿಸಿದ ಕೆಲವೇ ಕೆಲವು ಭಾವನೆಗಳನ್ನು ಇಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಎಷ್ಟೋ ಹೊತ್ತು ಮಾತಾಡಲಿಲ್ಲ; ಯೋಚಿಸುತ್ತಿದ್ದೆ. ಕಣ್ಣಿನಲ್ಲಿ, ಮನಸ್ಸಿನಲ್ಲಿ ಮಳೆ! ಊರು ತಲುಪಿದರೂ ಕಥೆಯಿಂದ ಹೊರಬಂದಿರಲಿಲ್ಲ. ಈಗಲೂ ಕೂಡ ಮನಸ್ಸಿನ ಮೂಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಕೊರೆಯುತ್ತಲೇ ಇದೆ. Hats off to ಅಗ್ನಿ ಶ್ರೀಧರ್!