December 17, 2008

ಹಾಡಿ ಹರಸಿ (ಉತ್ತರ ಕನ್ನಡದ ಗಾದೆ – 234 ಮತ್ತು 235 )

ಹಾಡಿ ಹರಸಿ ಮಗಳೇ ನಿನ್ನ ಪುಣ್ಯ ಎಂದಿದ್ದರು.
ಮಗಳಿಗೆ ಸಹಾಯ ಮಾಡುವಷ್ಟು ಮಾಡಬಹುದು ನಂತರ ಕೈಮೀರಿದಾಗ ಹಣೆಬರಹದಲ್ಲಿದ್ದಂತೆ ಆಗುತ್ತದೆ ಎಂದು ಸುಮ್ಮನಿರಬೇಕಾಗುತ್ತದೆ. ಬುದ್ಧಿ ಮಾತನ್ನು ಹೇಳುವಷ್ಟು ಹೇಳುವುದು ಒಂದು ವೇಳೆ ಅವರು ಕೇಳದಿದ್ದರೆ ನಂತರ ಅದೃಷ್ಟವಿದ್ದಂತೆ ಆಗುತ್ತದೆ ಎಂದು ಕೈಚೆಲ್ಲುವುದು. ಹೆಚ್ಚು-ಕಮ್ಮಿ ಇದೇ ಅರ್ಥದ ಇನ್ನೂ ಒಂದು ಮಾತಿದೆ- ಮರ ಹತ್ತುವವನನ್ನು ಕೈಗೆಟುಕುವವರೆಗೆ ಮಾತ್ರ ನೂಕಬಹುದು. ಮೊನ್ನೆ ಅಪ್ಪನ ಜೊತೆ phone ನಲ್ಲಿ ಮಾತನಾಡುವಾಗ ಅಪ್ಪ ಯಾರೋ ಒಬ್ಬರ ಬಗ್ಗೆ ಹೇಳುತ್ತಿದ್ದರು. ನಾನು ಆಗ ಹೇಳಿದೆ, "ಹೋಗ್ಲಿ ಬಿಡು ಅಪ್ಪ, ನೀನು ಎಷ್ಟು ಎಂದು ಸಹಾಯ ಮಾಡಲು ಸಾಧ್ಯ? ಮರ ಹತ್ತುವವನನ್ನು ಎಲ್ಲಿಯ ತನಕ ನೂಕಲು ಸಾಧ್ಯ?". ಆಗ ಅಪ್ಪ ಹೇಳಿದ್ದು- "ಈಗಿನ ಕಾಲಕ್ಕೆ ಮರ ಹತ್ತುವವನನ್ನು ಸ್ವಲ್ಪವೂ ನೂಕಲು ಸಾದ್ಯವಿಲ್ಲ, ಎಲ್ಲರೂ ಅವರವರೆ ಹತ್ತಬೇಕು. ನೋಡು ಅಲ್ಲೊಂದು ಮರ ಇದೆ, ಬೇಕಾದರೆ ಹತ್ತು ಎಂದು ತೋರಿಸಬಹುದು ಅಷ್ಟೇ!!"

December 13, 2008

ಗೆಣಸಿನ ಬಳ್ಳಿ

ಹಿಂದೊಮ್ಮೆ ಗೆಣಸಿನ ಗಡ್ಡೆಗಳನ್ನು ಕೊಂಡಿದ್ದೆ. ಅವುಗಳಲ್ಲಿ ಮೂರೋ ಅಥವಾ ನಾಲ್ಕೋ ಗಡ್ಡೆಗಳನ್ನು ಉಪಯೋಗಿಸಿ ಉಳಿದ ಒಂದೆರಡನ್ನು ಹಾಗೆಯೇ ಇಟ್ಟಿದ್ದೆ. ಎಷ್ಟೋ ದಿನಗಳ ನಂತರ ನೋಡಿದರೆ ಅದರಲ್ಲಿ ಒಂದು ಗಡ್ಡೆಗೆ ಬೇರುಬರಲು ಶುರುವಾಗಿತ್ತು. ಅದನ್ನು ಒಂದು pot ನಲ್ಲಿ ನೆಟ್ಟೆ. ಬಳ್ಳಿ ದಿನದಿಂದ ದಿನಕ್ಕೆ ಚಿಗುರಿ ಬೆಳೆಯತೊಡಗಿತ್ತು. ಒಂದು ತಿಂಗಳ ನಂತರ ಅದಕ್ಕೆ ಆ pot ಚಿಕ್ಕದಾಯಿತು ಎಂದೆನಿಸಲು ಶುರುವಾಯಿತು. ಒಂದು ದೊಡ್ಡ pot ಕೊಂಡು ತಂದು ಅಳುಕು ಮನಸ್ಸಿನಿಂದಲೇ ಚಿಕ್ಕ pot ನಿಂದ ದೊಡ್ಡ pot ಗೆ transfer ಮಾಡಿದೆ. ಬಳ್ಳಿ ಬಾಡತೊಡಗಿದಾಗ ಇನ್ನೆಲ್ಲಿ ಸತ್ತೇ ಹೋಗುತ್ತದೆಯೇನೋ ಎಂದು ಕೊರಗಿದ್ದೆ. ಒಂದೆರಡು ದಿನದಲ್ಲಿ ಮತ್ತೆ ಹಸಿರಾಗಿ ಬೆಳೆಯತೊಡಗಿತು. Balcony ಯ grills ಗೆ ಹಬ್ಬತೊಡಗಿತು. ಆದರೆ ನಾನು ಇಲ್ಲಿ ಮನೆ ಖಾಲಿ ಮಾಡಿ ಭಾರತಕ್ಕೆ ಮರಳುತ್ತಿರುವುದರಿಂದ ಆ ಬಳ್ಳಿಯನ್ನು ಏನು ಮಾಡಬೇಕು ಎನ್ನುವ ಸಮಸ್ಯೆ ಶುರುವಾಯಿತು. ನನ್ನ ಇನ್ನಿತರ ಕೆಲವು ಸಣ್ಣ-ಪುಟ್ಟ pot ಗಳನ್ನು ಇಲ್ಲಿಯ ಕೆಲವು ಸ್ನೇಹಿತರಿಗೆ ಕೊಟ್ಟೆ. ಕೆಲವೊಂದಷ್ಟು ಗಿಡಗಳು ಚಳಿ ತಡೆಯಲಾರದೇ ಆಗಲೇ ಒಣಗಿಹೋಗಿದ್ದವು. ಅವುಗಳ ಅವಷೇಶವನ್ನೂ, ಮಣ್ಣನ್ನೂ dispose ಮಾಡಬೇಕಾಗಿತ್ತು. ಗೆಣಸಿನ ಬಳ್ಳಿಯ pot ದೊಡ್ಡದಿರುವುದರಿಂದ ಅದನ್ನು ಸ್ನೇಹಿತರ ಮನೆಗೆ train ನಲ್ಲಿ ಸಾಗಿಸುವುದೂ ಕೂಡ ಕಷ್ಟ. ಈ ಬಳ್ಳಿಯೂ ಕೂಡ ಚಳಿಗೆ ತನ್ನ ಎಲೆ ಉದುರಿಸಲು ಶುರುಮಾಡಿತ್ತು. ಆದರೆ ಅದು ಸಾಯುವುದಿಲ್ಲ ಎಂಬುದು ಖಂಡಿತ. ಇಲ್ಲಿನ ಗಿಡಗಳು ಚಳಿಗೆ ಒಂದೂ ಎಲೆ ಇಲ್ಲದಂತೆ ಎಲ್ಲವನ್ನೂ ಉದುರಿಸಿ ನಂತರ April ತಿಂಗಳಿನಲ್ಲಿ ಮತ್ತೆ ಚಿಗುರುತ್ತವೆ; ಹೂವಿನ ಗಿಡಗಳೂ ಕೂಡ. ಇನ್ನು ಕೆಲವು ಚಳಿಗಾಲದಲ್ಲಿಯೇ ಹೂವು ಬಿಡುವ ಜಾತಿಯ ಗಿಡಗಳು ಬೇರೆ. ಹಿಂದಿನ ಚಳಿಗಾಲದಲ್ಲಿ ಎಲ್ಲ ಗಿಡಗಳೂ ಸತ್ತೇ ಹೋದವೆಂದು ನಾನು ತಿಳಿದುಕೊಂಡು ಊರಿಗೆ ಬಂದಿದ್ದೆ. ಏನಾದರೂ ಆಗಲೀ ನೀರು ಮಾತ್ರ ಹಾಕುವುದನ್ನು ಬಿಡಬೇಡ ಎಂದು ರಾಜೀವನಿಗೆ ಹೇಳಿದ್ದೆ. ಮತ್ತೆ spring ನಲ್ಲಿ ನಾನು ಊರಿಂದ ಇಲ್ಲಿನ ಮನೆಗೆ ಬಂದು ಮೊದಲು ಮಾಡಿದ ಕೆಲಸವೇ balcony ಗೆ ಹೋಗಿ ಗಿಡಗಳು ಏನಾಗಿವೆ ಎಂದು ನೋಡಿದ್ದು. ಎಲ್ಲ ಗಿಡಗಳೂ ರಾಜೀವ ಹಾಕಿದ ನೀರು ಉಂಡು ಮತ್ತೆ ಚಿಗುರಿ ನಗುತ್ತಿದ್ದವು! ಈ ವರ್ಷದ spring ನಲ್ಲಿಯೂ ಅವೆಲ್ಲಾ ಮತ್ತೆ ಚಿಗುರುತ್ತವೆ ಎಂಬುದು ಗೊತ್ತಿತ್ತು. ಆದರೆ ಈಗ dispose ಮಾಡದೆ ಬೇರೆ ವಿಧಿಯಿಲ್ಲ. ಒಲ್ಲದ ಮನಸ್ಸಿನಿಂದ ಎಲ್ಲವನ್ನೂ dispose ಮಾಡುವ ನಿರ್ಧಾರಕ್ಕೆ ಬಂದೆ. ಸತ್ತಂತಿರುವ ಇತರ ಗಿಡಗಳನ್ನೂ, ಅವುಗಳ ಮಣ್ಣನ್ನೂ plastic bag ನಲ್ಲಿ ಸುರುವಿಕೊಂಡೆ. ಗೆಣಸಿನ ಬಳ್ಳಿಯನ್ನು ಆಗಲೇ pot ನಿಂದ ಆಗಲೇ ಖಾಲಿ ಮಾಡಲು ಮನಸ್ಸಾಗಲಿಲ್ಲ. ಏಕೆಂದರೆ ಅದಿನ್ನೂ ಹಸಿರಾಗಿ ಕಾಣುತ್ತಿತ್ತು. ಅದನ್ನು pot ಸಮೇತ bicycle ಮೇಲೆ ಹೇರಿಕೊಂಡು disposal ಜಾಗಕ್ಕೆ ಹೊರಟೆ. ನದಿಯ ಅಂಚಿಗೆ ಮಣ್ಣನ್ನು dispose ಮಾಡಲು ಜಾಗ ಇದೆ. ಅಲ್ಲಿ ತಲುಪಿ plastic bag ನಲ್ಲಿದ್ದ ಎಲ್ಲಾ ಮಣ್ಣನ್ನೂ ಸುರುವಿದೆ. ಗೆಣಸಿನ ಬಳ್ಳಿಯ pot ಕೂಡ ಖಾಲಿ ಮಾಡಲೇ ಬೇಕಾಗಿತ್ತು. ಅದನ್ನು ಸುರುವಿ ನೋಡಿದರೆ ನಾನು ನೆಟ್ಟ ದೊಡ್ಡ ಗೆಣಸಿನ ಗಡ್ಡೆ ಮೂರು ನಾಲ್ಕು ಚಿಕ್ಕ ಚಿಕ್ಕ ಗಡ್ದೆಗಳಾಗಿ ಮರಿಯೊಡೆದಿತ್ತು. ನಾನೆಷ್ಟು ಕಟುಕಿ ಎಂದೆನಿಸಿ ಅಳುವೇ ಬಂತು. ಆ ಗಡ್ಡೆಗಳನ್ನೂ, ಬಳ್ಳಿಯನ್ನೂ ಅದೇ ಮಣ್ಣಿನಲ್ಲಿ ಊರಿದಂತೆ ಮಾಡಿ, ತಿರುಗಿ ನೋಡದೆ bicycle ಹತ್ತಿ ಹೊರಟೆ. ಅಯ್ಯೋ ದೇವರೇ ಒಂದು ಮಳೆಯಾದರೂ ಬಂದರೆ ನನ್ನ ಬಳ್ಳಿ ಅಲ್ಲಿಯೇ ಜೀವ ಹಿಡಿದುಕೊಂಡು ಪುನಃ ಹಬ್ಬಬಹುದೇನೋ. ಮನೆಗೆ ಬಂದವಳೇ weather forecast ನೋಡಿದೆ, ಭಾನುವಾರ ಮಳೆ ಎನ್ನುತ್ತಿತ್ತು. ಭಾರತಕ್ಕೆ ಹೊರಡುವ ಮೊದಲು ಮಾಡಿ ಮುಗಿಸಬೇಕಾಗಿರುವ ಕೆಲಸಗಳ list ನಲ್ಲಿ ‘dispose off plants and soil' ಎಂಬುದರ ಮೇಲೆ ಅಡ್ಡ ಗೆರೆ ಎಳೆದೆ ಆದರೆ ಆದರೆ ಮಗನ ಶ್ರಾದ್ಧ ಮಾಡಿ ಮುಗಿಸಿದ ತಂದೆಯೊಬ್ಬನ ಮನಸ್ಸಿನಂತಾಗಿತ್ತು ಮನಸ್ಸು.

December 8, 2008

ವಾಜೆ ಕಲಿಯೇ (ಉತ್ತರ ಕನ್ನಡದ ಗಾದೆ – 233)

ವಾಜೆ ಕಲಿಯೇ ಮಗಳೇ ಎಂದರೆ ಓಲೆ ಮುಂದೆ ಉಚ್ಚೆ ಹೊಯ್ದಿದ್ದಳು.
'ವಾಜೆ' ಎಂದರೆ ಕೆಲಸ, ಒಳ್ಳೆಯ ನಡತೆ ಎಂದು ಹೇಳಬಹುದು. ಒಳ್ಳೆಯ ಕೆಲಸವನ್ನು ಕಲಿ ಎಂದರೆ ಒಲೆಯ ಮುಂದೆ ಉಚ್ಚೆ ಹೊಯ್ದಿದ್ದಳಂತೆ. ಯಾರಿಗಾದರೂ ಏನಾದರೂ ಒಳ್ಳೆಯದನ್ನು ಕಲಿ ಎಂದರೆ ಅವರು ಏನೋ ಅನಾಹುತಕಾರಿ ಕೆಲಸವನ್ನು ಮಾಡಿದರೆ ಈ ಮಾತನ್ನು ಹೇಳಬಹುದು.

December 4, 2008

ಕದಿಯಲು ಹೋಗುವವನು (ಉತ್ತರ ಕನ್ನಡದ ಗಾದೆ – 232)

ಕದಿಯಲು ಹೋಗುವವನು ಬಳ್ಳನನ್ನು ಕಟ್ಟಿಕೊಂಡು ಹೋಗಿದ್ದನಂತೆ.
‘ಬಳ್ಳ’ ಎಂದರೆ ನರಿ. ನರಿಗಳು ವಿಚಿತ್ರ ರೀತಿಯಲ್ಲಿ ಕೂಗುವುದಕ್ಕೆ ಹೆಸರುವಾಸಿ. ಅವಕ್ಕೆ ತಾಳ್ಮೆ ಕಡಿಮೆ ಎನ್ನುತ್ತಾರೆ. ಕದಿಯಲು ಹೋಗುವಾಗ ನರಿಯನ್ನು ಕಟ್ಟಿಕೊಂಡು ಹೋದರೆ ಅವು ಕೂಗಿಬಿಡುತ್ತವೆ, ಅದರಿಂದಾಗಿ ಅಪಾಯ ಎಂದು ಅರ್ಥ. ಗುಟ್ಟಿನ ವಿಚಾರವನ್ನು ವಿಚಾರಹೀನರ ಬಳಿ ಹೇಳಬಾರದು ಎನ್ನುವಾಗ ಬಳಸಬಹುದು. ಇಂಥದೇ ಇನ್ನೊಂದು ಮಾತಿದೆಯಲ್ಲ- ಕಹಳೆಯ ಬಾಯಿಗೆ ಮುತ್ತಿಟ್ಟಂತೆ.

December 3, 2008

ಖಾಲಿ ಕೈಲಿರುವುದಕ್ಕಿಂತ (ಉತ್ತರ ಕನ್ನಡದ ಗಾದೆ – 231)

ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆ ಬಳೆ ಲೇಸು.
ಬಂಗಾರದ ಬಳೆ ಇಲ್ಲವೆಂದು ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆಯ ಬಳೆಯಾದರೂ ಅಡ್ಡಿಯಿಲ್ಲ ಎಂಬ ಅರ್ಥ.
Something is better than nothing :)

December 1, 2008

ಅಳಿಯನ ಕುರುಡು (ಉತ್ತರ ಕನ್ನಡದ ಗಾದೆ – 230)

ಅಳಿಯನ ಕುರುಡು(ತನ) ಬೆಳಗಾದರೆ ಕಾಣುತ್ತದೆ.
ಹಿಂದಿನ ಕಾಲದಲ್ಲಿ ಗೋಧೂಳಿ ಮುಹೂರ್ತದ ಮದುವೆಗಳು ತುಂಬಾ ನಡೆಯುತ್ತಿದ್ದವಂತೆ. ಆ ದೀಪದ ಬೆಳಕಿನಲ್ಲಿ ಅಳಿಯನ ಕುರುಡುತನವನ್ನು (ದೃಷ್ಟಿ ದೋಷವನ್ನು) ಯಾರೂ ಸರಿಯಾಗಿ ಗಮನಿಸದಿದ್ದರೂ ಅದು ಬೆಳಗಾದ ಮೇಲೆ ಎಲ್ಲರಿಗೂ ಕಂಡೇ ಕಾಣುತ್ತದೆ. ಹೊಸ ವಸ್ತುವನ್ನು ಖರೀದಿಸಿ ತಂದಾಗ ಚೆನ್ನಾಗಿ ಕಂಡರೂ ಅದರ ಅವಗುಣಗಳು ಶೀಘ್ರದಲ್ಲಿ ಕಂಡುಬರುತ್ತವೆ ಎನ್ನುವಾಗ ಬಳಸಿ.
ಹಿಂದಿನ ಕಾಲದ ಮದುವೆಗಳು ಐದು ದಿನ ನಡೆಯುತ್ತಿದ್ದವಂತೆ. ಎಲ್ಲರಿಗೂ ಪುರಸೊತ್ತು ಇರುತ್ತಿತ್ತು. ಎಲ್ಲರೂ ಮದುವೆಯನ್ನು ಹಬ್ಬದಂತೆ ಆಚರಿಸಿ, ಮದುಮಕ್ಕಳಿಗೆ ಆಶೀರ್ವಾದ ಮಾಡುತ್ತಿದ್ದರು. ಈಗಿನ ಮದುವೆಗಳು ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದರೆ 12-2 ಘಂಟೆಯ ವರೆಗೆ rush hour ಎನ್ನಬಹುದು. ಎಲ್ಲರೂ ಬಂದು queue ನಲ್ಲಿ ನುಗ್ಗಿ ಊಟ ಮಾಡಿ, ಮದುಮಕ್ಕಳ ಕೈಗೆ ಮುಂದೆ ಏನೂ ಉಪಯೋಗಕ್ಕೆ ಬಾರದ ಗಣಪತಿ ಚಿತ್ರವಿರುವ ಒಂದು ಗೋಡೆ ಗಡಿಯಾರವನ್ನು ತುರುಕಿ ತಮ್ಮ ತಮ್ಮ ವಾಹನಗಳನ್ನು ಹತ್ತಿ ಹೋಗಿಬಿಟ್ಟಿರುತ್ತಾರೆ. ಇನ್ನು ತೀರಾ ಗಡಿಬಿಡಿಯಲ್ಲಿದ್ದರೆ ಮದುಮಕ್ಕಳ ಅಪ್ಪ- ಅಮ್ಮರ ಎದುರು ಹಲ್ಲು ಕಿರಿದು ಹಾಜರಿ ಹಾಕಿ ಮದುಮಕ್ಕಳನ್ನೂ ನೋಡದೇ ಹೋಗಿಬಿಡುತ್ತಾರೆ. ಮತ್ತೆ 3 ಘಂಟೆಗೆ ಕಲ್ಯಾಣ ಮಂಟಪ ಬಣ ಬಣ. ತೀರಾ ಹತ್ತಿರದವರನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಅವರೂ ಕೂಡ ರಾತ್ರಿಯ VRL ಬಸ್ಸಿಗೆ ಬೆಂಗಳೂರಿಗೆ ಹೋಗಲು ತಮ್ಮನ್ನು bus-stand ಗೆ ಯಾರು ಮುಟ್ಟಿಸುತ್ತಾರೆ ಎಂಬ ಚಿಂತೆಯಲ್ಲಿರುತ್ತಾರೆ. ಮನೆಯಲ್ಲಿ ಮದುವೆ ನಡೆದರೂ ಸನ್ನಿವೇಶ ಬೇರೆ ಇರುವುದಿಲ್ಲ ಮತ್ತೆ! ಎಲ್ಲಾ ಕಡೆ ಹೀಗೆಯೇ!! ಜೀವನದಲ್ಲಿ ಯಾರಿಗೂ ಯಾವ ಕೆಲಸಕ್ಕೂ ಪುರಸೊತ್ತಿಲ್ಲ. ನಾವೆಲ್ಲಾ ಯಾವ ದಿಕ್ಕಿಗೆ ಮುಖ ಮಾಡಿ ಓಡುತ್ತಿದ್ದೇವೆ?

November 28, 2008

ಒಬ್ಬನೇ(ಳೇ) ಇದ್ದರೆ (ಉತ್ತರ ಕನ್ನಡದ ಗಾದೆ – 228 ಮತ್ತು 229 )

ಒಬ್ಬನೇ(ಳೇ) ಇದ್ದರೆ ಹೆದರಿ ಸಾಯುತ್ತಾನೆ(ಳೆ), ಇಬ್ಬರಿದ್ದರೆ ಹೊಡೆದಾಡಿ ಸಾಯುತ್ತಾರೆ.
ಒಟ್ಟಿಗಿಲ್ಲದಿದ್ದಾಗ ಕಸಿವಿಸಿಯಾಗುತ್ತದೆ, ಒಟ್ಟಿಗಿದ್ದರೆ ಯಾವಾಗಲೂ ಜಗಳವೇ ಎನ್ನುವ ಸಂದರ್ಭದಲ್ಲಿ ಇದನ್ನು ಉಪಯೋಗಿಸಬಹುದು. ಇದೇ ರೀತಿಯ ಇನ್ನೊಂದು ಗಾದೆ- ಕಾಣದಿದ್ದರೆ ಬೇಸರಿಕೆ, ಕಂಡರೆ ವಾಕರಿಕೆ.

November 26, 2008

ನಡುಗಿದವನನ್ನು (ಉತ್ತರ ಕನ್ನಡದ ಗಾದೆ – 227)

ನಡುಗಿದವನನ್ನು ನಡುಗಿಸಿತ್ತು, ಮುಡುಗಿದವನನ್ನು ಮುಡುಗಿಸಿತ್ತು, ಎದ್ದೋಡುವವನ ಜೊತೆ ಗುದ್ದಾಡಲಾರೆನೋ ಎಂದಿತ್ತು ಚಳಿ.
ಮುದುರಿಕೊಂಡು ಕುಳಿತಿದ್ದರೆ ಚಳಿ ಇನ್ನೂ ಜಾಸ್ತಿಯಾದಂತೆ ಅನಿಸುತ್ತದೆ. ಎದ್ದು ಕೆಲಸ ಮಾಡಿದರೆ ಅಷ್ಟೊಂದು ಚಳಿ ಎನಿಸುವುದಿಲ್ಲ ಎನ್ನುವಾಗ ಹೇಳುತ್ತಾರೆ. ಹೀಗೇ ಸ್ವಲ್ಪ flash‑back… ಚಿಕ್ಕವರಿದ್ದಾಗ (ಈಗ ಊರಿಗೆ ಹೋದಾಗಲೂ ಸಹ) ಚಳಿಗಾಲದಲ್ಲಿ ನಾನು, ರಘು ಎದ್ದ ಕೂಡಲೇ ಬಚ್ಚಲು ಒಲೆಯ ಮುಂದೆ ಕುಳಿತುಬಿಡುತ್ತಿದ್ದೆವು- ಇನ್ನೊಬ್ಬರು ಮೊದಲು ಸ್ನಾನಕ್ಕೆ ಹೋಗಲಿ ಎಂಬ ಆಶಯದಲ್ಲಿ, ವಾದಾಟದಲ್ಲಿ. ಅಪ್ಪ, ಅಮ್ಮರ ಕಣ್ಣು ತಪ್ಪಿಸಿ ಹಾಸಿಗೆಯಲ್ಲಿ ನಾವು ಮುಚ್ಚಿಟ್ಟು ಮಲಗಿಸಿಕೊಂಡ ಪಾಲಿ, ನಮ್ಮನೆಯ ಬೆಕ್ಕು ನಮಗಿಂತ ಮೊದಲೇ ಎದ್ದು ಹೋಗಿ ಅಮ್ಮನ ಕಾಲು ಸುತ್ತಿ, "ಥೋ ಯನ್ನ ವೈತರಣಿ ನದಿಯಲ್ಲಿ ಬೀಳ್ಸಿ ಹಾಕಡ್ದೇ" ಎಂದು ಬೈಸಿಕೊಂಡು, ಅಮ್ಮನ ಹಿಂದೆ ಮುಂದೆ ಎಡೆಬಿಡದೆ ಸುತ್ತಿ ಹಾಲು ಹಾಕಿಸಿಕೊಂಡು ಕುಡಿದು, ಕೈಕಾಲು, ಮುಖ ಎಲ್ಲ ನೆಕ್ಕಿಕೊಂಡು ಬಚ್ಚಲು ಒಲೆಯ ಮುಂದೆ ಗುರ್ರ್... ಗುರ್ರ್... ಎಂದು ಸದ್ದು ಮಾಡುತ್ತಾ ನಮಗಾಗಿ ಕಾಯುತ್ತಿರುತ್ತಿತ್ತು. ನಾನು, ರಘು ಅದರ ಜೊತೆ ಆಟವಾಡುತ್ತಾ, ಅಲ್ಲಿಗೆ ಬಂದು ನಮ್ಮ ಕಿವಿಗೆ ತಮ್ಮ ತಣ್ಣನೆಯ ಮೂಗನ್ನು ತಾಗಿಸುತ್ತಿದ್ದ ನಾಯಿಗಳು ಜ್ಯೂಲಿ ಮತ್ತು ಮೋಗ್ಲಿಯ ಜೊತೆ ಆಟವಾಡುತ್ತಾ ಕುಳಿತುಬಿಡುತ್ತಿದ್ದೆವು. ಅಜ್ಜ ನಮ್ಮ ಜೊತೆಯೇ ಕುಳಿತಿರುತ್ತಿದ್ದರು. ಅಮ್ಮ ಅಜ್ಜನಿಗೆ ಅಲ್ಲಿಯೇ ಚಹಾ ತಂದು ಕೊಡುತ್ತಿದ್ದಳು. ಅಪ್ಪ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದರೆ ಅಮ್ಮ ಅಡುಗೆ ಮನೆಯಲ್ಲಿ ದೋಸೆಯ ತಯಾರಿಯಲ್ಲಿರುತ್ತಿದ್ದಳು. ನಾವು ಶಾಲೆಗೆ ಹೊತ್ತಾಗುತ್ತದೆ ಎಂಬ ಪರಿವೆಯಿಲ್ಲದೆ ಬೆಕ್ಕು, ನಾಯಿಗಳ ಜೊತೆ ಆಟವಾಡುವುದರಲ್ಲಿ ಕಳೆಯುತ್ತಿದ್ದೆವು. ಯಾರಾದರೂ ಮೊದಲು ಸ್ನಾನಕ್ಕೆ ಹೋಗಿ ಇಲ್ಲವಾದರೆ ಶಾಲೆಗೆ ತಡವಾಗುತ್ತದೆ ಎಂಬ ಮಾತು ಅಮ್ಮನಿಂದ ಬಂದರೆ ನಾವು 'ಚಳಿ' ಎಂಬ ನೆಪ ಒಡ್ಡುತ್ತಿದ್ದೆವು. ಆಗ ಅಜ್ಜ ಈ ಗಾದೆ ಹೇಳುತ್ತಿದ್ದರು. ಈಗ ಅಜ್ಜನೂ ಇಲ್ಲ... ಪಾಲಿ, ಜ್ಯೂಲಿ, ಮೋಗ್ಲಿ ಯಾರೂ ಇಲ್ಲ (ಅವುಗಳ ಜಾಗಕ್ಕೆ ಮುಮ್ಮಡಿ ಪಾಲಿ, ಮುಮ್ಮಡಿ ಜ್ಯೂಲಿ ಮತ್ತು ಇಮ್ಮಡಿ ಮೋಗ್ಲಿ ಬಂದಿದ್ದಾರೆ). ನಾನು, ರಘು ವರ್ಷಕ್ಕೊಮ್ಮೆ ಭೇಟಿಯಾಗುವುದು ಕೂಡ ಕಷ್ಟ.... Good old days... :(

November 25, 2008

ಸ್ವಾರ್ಥವೂ ಆಗಬೇಕು (ಉತ್ತರ ಕನ್ನಡದ ಗಾದೆ – 225 ಮತ್ತು 226 )

ಸ್ವಾರ್ಥವೂ ಆಗಬೇಕು, ಸ್ವಾಮಿ ಸೇವೆಯೂ ಆಗಬೇಕು.
ಒಡೆಯನ ಸೇವೆ ಮಾಡುವ ನೆಪದಲ್ಲಿ ಸ್ವಕಾರ್ಯ ಸಾಧನೆ ಮಾಡಿಕೊಳ್ಳುವವರನ್ನು ಕುರಿತಾದ ಮಾತು ಇದು.
ಬೇರೆಯವರ ಹೆಳೆ, ತನ್ನ ಬೆಳೆ ಎಂದೂ ಕೂಡ ಹೇಳುತ್ತಾರೆ. ಹೆಳೆ ಎಂದರೆ ನೆಪ. ಬೇರೆಯವರಿಗೆ ಸಹಾಯ ಮಾಡುವ ನೆಪದಲ್ಲಿ ತಾನು ಲಾಭ ಮಾಡಿಕೊಳ್ಳುತ್ತಾನೆ(ಳೆ) ಎಂಬ ಅರ್ಥ.

November 24, 2008

ಸೋರೆಯಿಂದ (ಉತ್ತರ ಕನ್ನಡದ ಗಾದೆ – 224)

ಸೋರೆಯಿಂದ ಏಳ (ಏಳುವುದಿಲ್ಲ), ಗುಂಜಿನಿಂದ ಬಿಡ (ಬಿಡುವುದಿಲ್ಲ).
ಸೋರೆ ಮತ್ತು ಗುಂಜು ಎರಡೂ ಹಲಸಿನ ಹಣ್ಣಿನೊಳಗಿನ ಭಾಗಗಳು.
ಹಲಸಿನ ತೊಳೆಯನ್ನು ಸೋರೆಯಿಂದ ಬಿಡಿಸತೊಡಗಿದರೆ ಗುಂಜಿಗೆ ಅಂಟಿಕೊಳ್ಳುತ್ತದೆ, ಗುಂಜಿನಿಂದ ಬಿಡಿಸತೊಡಗಿದರೆ ಸೋರೆಗೆ ಅಂಟಿಕೊಳ್ಳುತ್ತದೆ. ಯಾವ ಕೆಲಸವನ್ನು ಮಾಡಿದರೆ ಸರಿ ಎಂದು ಬಗೆಹರಿಯದೆ ಎರಡರ ನಡುವೆಯೂ ಹೊಯ್ದಾಡುತ್ತಿದ್ದರೆ ಈ ಮಾತು ಅನ್ವಯಿಸುತ್ತದೆ. ಒಮ್ಮೆ ಒಂದು ಸರಿ ಎನಿಸಿದರೆ ಮತ್ತೊಮ್ಮೆ ಇನ್ನೊಂದು ಸರಿ ಎನಿಸುತ್ತದೆ. ಉತ್ತರ ಕನ್ನಡದ ಹವ್ಯಕರಲ್ಲಿ ಇದಕ್ಕೆ 'ಹಲವರಿಯುವುದು' ಎಂಬ ವಿಶೇಷ ಶಬ್ದ ಇದೆ. ಅಂದರೆ ಹಲವಾರು ವಿಚಾರಗಳು ಸರಿ ಎನಿಸುತ್ತವೆ, ಯಾವುದನ್ನು ಅನುಸರಿಸುವುದು ಎಂದು ಗೊತ್ತಾಗುವುದಿಲ್ಲ.

November 22, 2008

ಸಾಲ ಮಾಡಿ (ಉತ್ತರ ಕನ್ನಡದ ಗಾದೆ – 222 ಮತ್ತು 223 )

ಸಾಲ ಮಾಡಿ ಓಲೆ ಮಾಡಿಸಿ ಸಾಲದ ಬಡ್ಡಿಗೆ ಓಲೆ ಮಾರಿದ.
ಕೈಲಾಗದಿದ್ದರೂ ಸಾಲ ಮಾಡಿ ಓಲೆ ಮಾಡಿಸಿದರೆ ಮುಂದೆ ಆ ಸಾಲಕ್ಕೆ ಬಡ್ಡಿ ಬೆಳೆಯುತ್ತಾ ಹೋದಂತೆ ಓಲೆಯನ್ನು ಮಾರಿ ಬಡ್ಡಿಯನ್ನು ತೀರಿಸಬೇಕಾಗುತ್ತದೆ. ಆದರೆ ಸಾಲದ ಅಸಲು ಹಾಗೆಯೇ ಉಳಿದುಕೊಳ್ಳುತ್ತದೆ. ಅದಕ್ಕಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಇನ್ನೂ ಒಂದು ಮಾತಿದೆ ತಲೆಯಿಂದ ಮೇಲೆ ಸಾಲ ಒಲೆಯಿಂದ ಮೇಲೆ ಬೆಂಕಿ ಆಗಬಾರದು ಎಂದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇರುವ ಮಾತೆಂದರೆ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು.

November 21, 2008

ಶಿದ್ದೆಯಂಥ (ಉತ್ತರ ಕನ್ನಡದ ಗಾದೆ – 221)

ಶಿದ್ದೆಯಂಥ ಮಕ್ಕಳಿದ್ದರೆ ಎದ್ದು ಗೇಯುವುದು ಬೇಡ.
'ಶಿದ್ದೆ' ಎಂದರೆ ಬಿದಿರಿನಿಂದ ಮಾಡಿದ ಅಕ್ಕಿ ಅಳೆಯಲು ಉಪಯೋಗಿಸುವ ಮಾಪು. ಅತ್ಯಂತ ಗಟ್ಟಿಯಾಗಿರುತ್ತದೆ. ತಳತಲಾಂತರಗಳಿಂದಲೂ ಮನೆಯಲ್ಲಿ ಇರುವಂಥದು. 'ಗೇಯುವುದು' ಎಂದರೆ ದುಡಿಮೆ ಮಾಡುವುದು.
ಸಮರ್ಥರಾದ ಮಕ್ಕಳಿದ್ದರೆ ಮುದಿಕಾಲಕ್ಕೆ ಕಷ್ಟಪಡುವ ಅಗತ್ಯವಿಲ್ಲ ಎಂಬ ಮಾತು ಇದು.

November 20, 2008

ಮಂಡೆ ಹಿಡಿದರೂ (ಉತ್ತರ ಕನ್ನಡದ ಗಾದೆ – 220)

ಮಂಡೆ ಹಿಡಿದರೂ ಬೋಳು, ಕುಂಡೆ ಹಿಡಿದರೂ ಬೋಳು.
ಈ ಗಾದೆಯನ್ನು ಸಾಮಾನ್ಯವಾಗಿ ಗಂಡಸರು ಬೇಜವಾಬ್ದಾರಿತನವನ್ನು ತೋರಿಸಿದಾಗ ಹೆಂಗಸರು ಹೇಳುತ್ತಾರೆ. ಗಂಡಸರಿಗೆ ಯಾವುದೇ ನಿಯಮಕ್ಕೂ ಅಂಟಿಕೊಳ್ಳುವ ಅಗತ್ಯ ಇಲ್ಲ, ಹೆಚ್ಚು-ಕಮ್ಮಿ ಹೇಗೆ ಬದುಕಿದರೂ ನಡೆಯುತ್ತದೆ, ಯಾವುದಕ್ಕೂ ಗಂಡಸರು ಜಾಸ್ತಿ ತಲೆಕೆಡಿಸಿಕೊಳ್ಳುವವರಲ್ಲ ಎಂಬ ಅಭಿಪ್ರಾಯವನ್ನು ಗಂಡಸರ ಬಗ್ಗೆ ಹೇಳುವಾಗ ಬಳಸುತ್ತಾರೆ. To be on the safer side.... ಇದು ನನ್ನ ವೈಯ್ಯಕ್ತಿಕ ಅಭಿಪ್ರಾಯವಲ್ಲ, ಈ ರೀತಿಯ ಗಾದೆ ಇದೆ :-)

November 19, 2008

ಪಾತ್ರೆಯಲ್ಲಿದ್ದರೆ (ಉತ್ತರ ಕನ್ನಡದ ಗಾದೆ – 219)

ಪಾತ್ರೆಯಲ್ಲಿದ್ದರೆ ಸೌಟಿಗೆ ಬರುತ್ತದೆ.
ಯಾರ ಬಳಿಯಾದರೂ ಒಂದು ವಿಷಯವನ್ನು ಕೇಳಿದಾಗ ಅವರಿಗೆ ಗೊತ್ತಿದ್ದರೆ ಮಾತ್ರ ಹೇಳಲು ಬರುತ್ತದೆ. ಅಥವಾ ಹಣ ಕೂಡ ಅವರ ಬಳಿ ಇದ್ದರೆ ಮಾತ್ರ ಕೊಡಲು ಸಾಧ್ಯವಾಗುತ್ತದೆ ಇಲ್ಲವಾದರೆ ಸಾಧ್ಯವಿಲ್ಲ ಎಂಬ ಎರಡು ಸಂದರ್ಭಗಳಲ್ಲಿ ಬಳಸಬಹುದು. ಗೊತ್ತಿಲ್ಲದ ವಿಷಯವನ್ನು ಗೊತ್ತಿದೆ ಎಂದು ಬಡಾಯಿ ಕೊಚ್ಚಿಕೊಂಡ ಮಾತ್ರಕ್ಕೆ ಆ ವಿಷಯವನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಪಾತ್ರೆಯಲ್ಲಿದ್ದರೆ ತಾನೆ ಸೌಟಿಗೆ ಬರುವುದು?

November 18, 2008

ನೆಗಡಿಯಂತಾ (ಉತ್ತರ ಕನ್ನಡದ ಗಾದೆ – 218)

ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ.
ಎಷ್ಟೊಂದು ರೋಗಗಳಿಗೆ ಔಷಧಗಳಿದ್ದರೂ ನೆಗಡಿಗೆ ಮಾತ್ರ ಸರಿಯಾದ ಔಷಧವಿಲ್ಲ. ನೆಗಡಿ ಔಷಧ ಮಾಡಿದರೆ ಒಂದು ವಾರಕ್ಕೆ ಗುಣವಾಗುತ್ತದೆ, ಔಷಧ ಮಾಡದಿದ್ದರೆ ಏಳು ದಿನಕ್ಕೆ ಗುಣವಾಗುತ್ತದೆ ಎಂಬ ಮಾತಿದೆ. ಎಷ್ಟೊಂದು ಆಭರಣಗಳಿದ್ದರೂ ಅವ್ಯಾವುದೂ ಬುಗುಡಿಗೆ ಸಾಟಿಯಲ್ಲ. ಬುಗುಡಿಗೆ ಅದರದ್ದೇ ಆದ ವಿಶೇಷತೆ ಇದೆ. ಮದುವೆಯಂಥ ಕಾರ್ಯದಲ್ಲಿ ಹೆಂಗಸರು ಹೊಸದಾಗಿ ಕಿವಿ ಚುಚ್ಚಿಕೊಂಡಾದರೂ ಬುಗುಡಿಯನ್ನು ಹಾಕಿಕೊಳ್ಳುವುದನ್ನು ನೋಡುತ್ತೇವೆ. ಇತ್ತೀಚಿಗೆ ಸಣ್ಣ ಬುಗುಡಿಯನ್ನು ಹಾಕಿಕೊಳ್ಳುವುದು fashion ಆಗಿರುವುದನ್ನು ನೀವು ಗಮನಿರಲೂಬಹದು. ನೆಗಡಿಗೆ ಬೇಕಾದಷ್ಟು ಔಷಧ ಮಾಡಿ, ಅದು ಸಾಮಾನ್ಯವಾಗಿ ಕನಿಷ್ಠ ಒಂದು ವಾರದ ತನಕ ಕಾಡಿಯೇ ಕಾಡುತ್ತದೆ. ಬೇಕಾದಷ್ಟು ಆಭರಣಗಳನ್ನು ಹಾಕಿಕೊಳ್ಳಿ, ಬುಗುಡಿ ಹಾಕಿಕೊಂಡಾಗ ಬರುವ ಲಕ್ಷಣವೇ ಬೇರೆ. ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ ಅಲ್ವಾ?

November 17, 2008

ನನಗೇ ಮದುವೆ ಬೇಡ (ಉತ್ತರ ಕನ್ನಡದ ಗಾದೆ – 217)

ನನಗೇ ಮದುವೆ ಬೇಡ ನಮ್ಮಪ್ಪ ಯಾರಿಗೆ ಹೆಣ್ಣು ಕೇಳುತ್ತಾನೆ?
ಯಾವುದೋ ವಿಷಯಕ್ಕೆ ನಾವೇ ತಯಾರಿಲ್ಲದಿರುವಾಗ ಬೇರೆಯವರು ತಾನೆ ಏನು ಮಾಡಿಯಾರು? ಬೇರೆಯವರು ನಮಗೆ ಸಹಾಯ ಮಾಡಲು ಬಂದರೂ ಅದು ವ್ಯರ್ಥ ಎಂಬ ಸಂದರ್ಭಕ್ಕೆ ಬಳಕೆಯಾಗುವಂಥದು.

November 14, 2008

ಕೊರಕ್ಲಜ್ಜಿಯ (ಉತ್ತರ ಕನ್ನಡದ ಗಾದೆ – 216)

ಕೊರಕ್ಲಜ್ಜಿಯ ಮನೆಯ ಎಮ್ಮೆ ಕರುವನ್ನು ಹುಲಿ ಹಿಡಿದಿತ್ತಂತೆ.
ಇದರ ಹಿಂದೊಂದು ಕಥೆಯೇ ಇದೆ.... ಎಲ್ಲದಕ್ಕೂ ಕಿರಿಕಿರಿ ಮಾಡುವ ಸ್ವಭಾವವುಳ್ಳ ಅಜ್ಜಿಯ ಬಳಿ ಒಂದು ಎಮ್ಮೆ ಕರುವಿತ್ತು. ಅದು ಮೇಯಲು ಹೋದಾಗ ಅದನ್ನು ಹುಲಿ ಹಿಡಿದುಬಿಟ್ಟಿತು... ತಿಂದೂಹಾಕಿತು. ನಂತರ ಹುಲಿ ಅಜ್ಜಿಯ ಮನೆಯ ಹಿಂದೆ ಬಂದು ಅಜ್ಜಿ ಏನು ಮಾಡುತ್ತಾಳೆ ಎಂದು ನೋಡುತ್ತಾ ಕುಳಿತಿತ್ತು (ಯಾಕೆ ಅಂತ ಗೊತ್ತಿಲ್ಲ :-) ಎಮ್ಮೆ ಕರು ಮನೆಗೆ ಬರದಿದ್ದನ್ನು ಕಂಡ ಅಜ್ಜಿ ಕಿರಿಕಿರಿ, ಗೊಣಗಾಟ ಶುರುಮಾಡಿದಳು. ಹುಲಿಗೆ ಆ ಕಿರಿಕಿರಿ ಸಹಿಸಲು ಸಾಧ್ಯವಾಗದೆ ಎಮ್ಮೆ ಕರುವನ್ನು ಅಜ್ಜಿಯ ಮನೆಯ ಹಿಂದೆ ಉಗುಳಿಹಾಕಿ ಓಡಿ ಹೋಯಿತು.


ನಾನು ಅಥವಾ ರಘು ಏನಾದರೂ ವಿಷಯಕ್ಕೆ ಕಿರಿಕಿರಿ ಮಾಡಿ ಮಾಡಿ ಅಪ್ಪ ಅಥವಾ ಅಮ್ಮನಿಗೆ ನಮ್ಮ ಕಿರಿಕಿರಿಯನ್ನು ತಡೆಯಲಾರದೆ ನಮ್ಮ ಹಟಕ್ಕೆ ಮಣಿಯುವಂತೆ ಆದಾಗ ಈ ಮಾತನ್ನು ನಾವು ಕೇಳಿಸಿಕೊಳ್ಳುತ್ತಿದ್ದೆವು - "ತಗ ನೆಡಿ ಅತ್ಲಾಗೆ, ಕೊರಕ್ಲಜ್ಜಿಯ ಮನೆ ಎಮ್ಮೆ ಕರುವನ್ನು ಹುಲಿ ಹಿಡಿದಿತ್ತಡ" ಎಂದು :)
ಇದು ನಿಜವಾಗಿ ಗಾದೆಯಲ್ಲದಿದ್ದರೂ ಗಾದೆಯಂತೆ ಬಳಸಲ್ಪಡುತ್ತದೆ.

November 13, 2008

‘ಸು’ ಅಂದರೆ … (ಉತ್ತರ ಕನ್ನಡದ ಗಾದೆ – 215)

‘ಸು’ ಅಂದರೆ ಸುಕನುಂಡೆ ಅಂದಿದ್ದ.
ಸ್ವಲ್ಪವೇ ಸುಳಿವು ಸಿಕ್ಕರೂ ಪೂರ್ತಿ ಸನ್ನಿವೇಶವನ್ನೇ ಊಹಿಸಿಬಿಡುವವರ ಬಗೆಗಿನ ಮಾತು.

November 12, 2008

ಸಲಿಗೆ ಕೊಟ್ಟರೆ … (ಉತ್ತರ ಕನ್ನಡದ ಗಾದೆ – 212, 213 ಮತ್ತು 214)

ಸಲಿಗೆ ಕೊಟ್ಟರೆ ನಾಯಿ ಸೊಟ್ಟಗ ನೆಕ್ಕಿತ್ತು.
ಅತಿಯಾದ ಸಲಿಗೆ ಕೊಟ್ಟರೆ ನಾಯಿ ಅಡಿಗೆಯನ್ನು ಬಡಿಸುವ ಸೌಟನ್ನೇ (ಸೊಟ್ಟಗ) ನೆಕ್ಕಲು ಮುಂದಾಗುತ್ತದೆ. ಅಂತೆಯೇ ಯಾರಿಗಾದರೂ ಸ್ವಲ್ಪ ಸಲಿಗೆ ಕೊಟ್ಟರೂ ನಮ್ಮ ವೈಯಕ್ತಿಕ ವಿಷಯಗಳವರೆಗೆ ಮುಂದುವರಿದರೆ ಈ ಗಾದೆಯನ್ನು ಹೇಳುತ್ತಾರೆ. ಸಲಿಗೆ ಕೊಟ್ಟರೆ ನಾಯಿ ನೊಸಲು (ಹಣೆ) ನೆಕ್ಕಿತ್ತು ಎಂದೂ ಕೂಡ ಹೇಳುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುತ್ತಾರೆ ಎಂದೂ ಅಥವಾ ಮುಂಗೈ ಕೊಟ್ಟರೆ ಅಂಗೈಯನ್ನೇ ಹಿಡಿಯುತ್ತಾರೆ ಎಂದೂ ಬಳಸುವುದುಂಟು.

November 7, 2008

ಹಾಡು ಹೇಳಿದವರಿಗೂ … (ಉತ್ತರ ಕನ್ನಡದ ಗಾದೆ – 211)

ಹಾಡು ಹೇಳಿದವರಿಗೂ ಮೂರು ಸುಕನುಂಡೆ, ಹಾಡು ಹೇಳದಿದ್ದವರಿಗೂ ಮೂರು ಸುಕನುಂಡೆ.
ಸುಕನುಂಡೆ ಅಂದರೆ ಒಂದು ಬಗೆಯ ಸಿಹಿ ತಿಂಡಿ. ಕೆಲಸ ಮಾಡಿದವರಿಗೂ, ಮಾಡದಿದ್ದವರಿಗೂ ಒಂದೇ ತರಹದ ಅತಿಥ್ಯ, recognition ಸಿಕ್ಕಾಗ ಹೇಳುವಂಥ ಮಾತು.

November 5, 2008

ಹುಚ್ಚು ಬಿಟ್ಟ ಹೊರತೂ … (ಗಾದೆ)

ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ, ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.
ಎರಡು ಕೆಲಸಗಳು ಒಂದಕ್ಕೊಂದು ಸಂಬಂಧಪಟ್ಟಿದ್ದು ಒಂದು ಕೆಲಸವಾದಂತೂ ಇನ್ನೊಂದು ಆಗುವುದಿಲ್ಲ ಎಂಬ ಸಂದರ್ಭಕ್ಕೆ ಅನ್ವಯಿಸುತ್ತದೆ. ಉದಾಹರಣೆಗೆ, ನಮ್ಮ ಸಮಾಜ ಮತ್ತು ಸಿನಿಮಾಗಳು- ಸಮಾಜವನ್ನು ನಾವು ಪ್ರತಿಬಿಂಬಿಸುತ್ತೇವೆ ಎಂದು ಸಿನಿಮಾದವರು ಹೇಳಿದರೆ, ಇಂದಿನ ಸಿಮಿಮಾಗಳನ್ನು ನೋಡಿ ಸಮಾಜ ಹಾಳಾಗುತ್ತದೆ ಎಂದು ಜನರು ಹೇಳುತ್ತಾರೆ. ಕೋಳಿ ಮೊದಲೋ? ಮೊಟ್ಟೆ ಮೊದಲೋ? :)

November 3, 2008

ಸಡಗರದಲ್ಲಿ … (ಉತ್ತರ ಕನ್ನಡದ ಗಾದೆ – 209 ಮತ್ತು 210)

ಸಡಗರದಲ್ಲಿ ಸರಸಕ್ಕ ಮೈನೆರೆದಿದ್ದಳು.
ಎಲ್ಲವೂ ಸರಿಯಾದಿದೆ ಎಂದುಕೊಂಡಾಗ ಏನೋ ಒಂದು ಕಿರಿಕಿರಿ ಆಗುವಂಥ ಸನ್ನಿವೇಶ ಎದುರಾದರೆ ಬಳಸಬಹುದು. ಉದಾಹರಣೆಗೆ ಎಲ್ಲ ಕೆಲಸ ಮುಗಿಸಿ ಗಡಿಬಿಡಿಯಲ್ಲಿ ಹೊರಡಲನುವಾದಾಗ ನೋಡಿದರೆ ಚಪ್ಪಲಿ ಕಿತ್ತು ಹೋಗಿರುತ್ತದೆ! ಇಂಥದೇ ಇನ್ನೊಂದು ಗಾದೆ- ಹೊತ್ತಲ್ಲದ ಹೊತ್ತಿನಲ್ಲಿ ತೊತ್ತು ಮೈನೆರೆದಿದ್ದಳು.

October 31, 2008

ರಾಮೇಶ್ವರಕ್ಕೆ ಹೋದರೂ … (ಉತ್ತರ ಕನ್ನಡದ ಗಾದೆ – 206, 207 ಮತ್ತು 208)

ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ (ಬಿಡಲಿಲ್ಲ).
ಶನೀಶ್ವರನ ಕಾಟದಿಂದ ತಪ್ಪಿಸಿಕೊಳ್ಳಬೇಕೆಂದು ಮನೆ ಬಿಟ್ಟು ರಾಮೇಶ್ವರಕ್ಕೆ ಹೋದರೂ ಶನೀಶ್ವರ ಅಲ್ಲಿಗೂ ಬಂದು ಕಾಡಿದ್ದನಂತೆ। ಯಾರಿಂದಲಾದರೂ ಅಥವಾ ಯಾವುದೋ ಒಂದು ಬೇಜಾರಾಗುವಂಥ ಕೆಲಸದಿಂದಲಾದರೂ ತಪ್ಪಿಸಿಕೊಂಡೆನಪ್ಪಾ ಎಂದುಕೊಳ್ಳುವಷ್ಟರಲ್ಲೇ ಅಂಥದೇ ವ್ಯಕ್ತಿ ಅಥವಾ ಅಂಥದೇ ಕೆಲಸ ಬಂದು ತಗಲಿಕೊಂಡರೆ ಹೇಳಿಕೊಳ್ಳಬಹುದು। ಒಂದು ತೊಂದರೆಯಿಂದ ತಪ್ಪಿಸಿಕೊಂಡು ಬೇರೆಲ್ಲೋ ಹೋದರೆ ಅಲ್ಲೂ ಕೂಡ ಅಂಥದೇ ತೊಂದರೆ ಎದುರಾದರೆ ಈ ಮಾತನ್ನು ನೆನಪಿಸಿಕೊಳ್ಳಿ.

ಶನಿ ಹಿಡಿದು ಸಂತೆಗೆ ಹೋದರೆ ಇಲಿ ಹಿಡಿದು ತಲೆ ಬೋಳಿಸಿತ್ತು ಅಂತ ಹೇಳ್ತಾರೆ ಅನ್ನೋದು ~ragu ಹೇಳಿದ ಮೇಲೆ ಗೊತ್ತಾಯಿತು. Thanks ~ragu :)
ಪಾಪಿ ಸಮುದ್ರ ಹೊಕ್ಕರೂ ಮೊಳಕಾಲು ನೀರು ಎನ್ನುವುದನ್ನು ಸ್ವಲ್ಪ ಬೇರೆ ಅರ್ಥದಲ್ಲಿ ಉಪಯೋಗಿಸುತ್ತಾರೆ....ಎಲ್ಲಿ ಹೋದರೂ ಅದೃಷ್ಟವೇ ಇಷ್ಟು ಎನ್ನುವಂಥ ಸಂದರ್ಭದಲ್ಲಿ.

October 24, 2008

ಹೇಳೋದ್ರಲ್ಲೇ ಕಾಶಿ … (ಉತ್ತರ ಕನ್ನಡದ ಗಾದೆ – 203, 204 ಮತ್ತು 205)

ಹೇಳೋದ್ರಲ್ಲೇ ಕಾಶಿ ಕಂಡ ತಿನ್ನೋದೆಲ್ಲಾ ಮಶಿಕೆಂಡ.
ಯಾವಾಗ ನೋಡಿದರೂ ಹೇಳುವುದು ಕಾಶಿಯ ಪುರಾಣವನ್ನೇ, ಆಚಾರ- ವಿಚಾರಗಳ ಬಗ್ಗೆ ಆದರೆ ತಾನು ಮಾತ್ರ ಅದ್ಯಾವುದನ್ನೂ ಪಾಲಿಸದೇ ಬದುಕುತ್ತಾನೆ. ಅನಾಚಾರಗಳನ್ನೇ ಮಾಡುತ್ತಾನೆ. ಯಾರಾದರೂ ಬೇರೆಯವರಿಗೆ ಬುದ್ಧಿವಾದಗಳನ್ನು, ಸರಿ- ತಪ್ಪುಗಳ ಬಗ್ಗೆ, ಹೇಳಿ ನಂತರ ತಾವೇ ತಪ್ಪು ಹಾದಿಯಲ್ಲಿ ನಡೆದಾಗ ಅಂಥವರ ಬಗ್ಗೆ ಹೇಳುವಂಥ ಮಾತು ಇದು.
ಪುರಾಣ ಹೇಳೋಕೆ ಬದನೇಕಾಯಿ ತಿನ್ನೋಕೆ ಅಂತ ಕೂಡ ಉಪಯೋಗಿಸೋದುಂಟು.
ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ- ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ.

October 22, 2008

ಗಂಡ ಸತ್ತ ದುಃಖ … (ಉತ್ತರ ಕನ್ನಡದ ಗಾದೆ – 202)

ಗಂಡ ಸತ್ತ ದುಃಖವಲ್ಲದೇ, ಬಡ್ದು ಕೂಪಿನ ಉರಿ ಬೇರೆ.
ಗಂಡ ಸತ್ತ ದುಃಖದ ಜೊತೆಗೇ ಬಡ್ದು ಕೂಪಿನ ಉರಿಯನ್ನೂ ಸಹಿಸಿಕೊಳ್ಳಬೇಕು.
ಎಂಥ ನೋವು ತುಂಬಿರುವ ಗಾದೆ ಇದು. ಹಿಂದಿನ ಕಾಲದಲ್ಲಿ ಗಂಡ ಸತ್ತ ಹೆಂಗಸಿಗೆ ತಲೆ ಕೂದಲನ್ನು ಪೂರ್ತಿಯಾಗಿ ಬೋಳಿಸಿಬಿಡುತ್ತಿದ್ದರು- ಅಮಾನವೀಯವಾಗಿ. ಆದರೆ ಹೆಂಡತಿ ಸತ್ತ ಗಂಡಸಿಗೆ ಹದಿನೈದನೆಯ ದಿನ ಮುಗಿದ ತಕ್ಷಣ ಮರುಮದುವೆಯ ವಿಚಾರ ಮಾಡುತ್ತಿದ್ದರು! ಡುಂಡಿರಾಜರ ಒಂದು ಹನಿಗವನ ನೆನಪಾಗುತ್ತಿದೆ.

ಗಂಡ ಸತ್ತರೆ ಹೆಂಡತಿಯಾಗುತ್ತಾಳೆ
ವಿಧವೆ.
ಹೆಂಡತಿ ಸತ್ತರೆ ಗಂಡ ಆಗುತ್ತಾನೆ
ಮದುವೆ!

ಗಂಡನನ್ನು ಕಳೆದುಕೊಂಡ ಹೆಂಗಸು ಆ ದುಃಖದ ಜೊತೆಗೇ ಹಜಾಮನ ಬಡ್ದು ಕೂಪಿನ ಉರಿಯನ್ನೂ ಸಹಿಸಿಕೊಳ್ಳಬೇಕು ಎಂಬುದು ಅರ್ಥ. ನಾನು ಒಂದು ಕಷ್ಟದಲ್ಲಿ ಆಗಲೇ ಸಿಕ್ಕಿ ಬಿದ್ದಿರುವಾಗಲೇ ಇನ್ನೊಬ್ಬರು ನಮಗೆ ನೋವಾಗುವಂಥ ಮಾತನಾಡಿದಾಗ ಬಳಸಬಹುದು. ಗಾಯದ ಮೇಲೆ ಬರೆ ಎಳೆದಂತೆ ಎನ್ನುವುದು ಇದಕ್ಕೆ ಹತ್ತಿರದ ಗಾದೆ.

ನಾನು ಇದನ್ನು ಮೊತ್ತ ಮೊದಲನೆಯ ಬಾರಿಗೆ ಕೇಳಿದ್ದು - ಅಮ್ಮ ಅಕಸ್ಮಾತ್ ಕೈತಪ್ಪಿ ತುಪ್ಪದ ಪಾತ್ರೆಯನ್ನು ಬೀಳಿಸಿಕೊಂಡು ಕಿರಿಕಿಯಲ್ಲಿದ್ದಾಗ ಅಡುಗೆ ಮನೆಗೆ ಬಂದ ಅಪ್ಪ ಸ್ವಲ್ಪ ನಿಧಾನಕ್ಕೆ ಮಾಡಬೇಕಿತ್ತು ಎಂದು ಗುರ್ರ್... ಎಂದಾಗ.

October 10, 2008

ಕೊಟ್ಟ ಸಾಲ … (ಉತ್ತರ ಕನ್ನಡದ ಗಾದೆ – 201)

ಕೊಟ್ಟ ಸಾಲ ಕೇಳದೆ ಹೋಯಿತು, ಮಾಡಿದ ಬದುಕು ನೋಡದೆ ಹೋಯಿತು.
ಕೊಟ್ಟ ಸಾಲ ಕೇಳದೆ ಹೋಯಿತು- ಕೆಲವರಿಗೆ ಒಂದು ಕೆಟ್ಟ ಚಟವಿರುತ್ತದೆ. ಸಾಲ ತೆಗೆದುಕೊಂಡಮೇಲೆ ಅದನ್ನು ಕೊಟ್ಟವನು ಮತ್ತೆ ಮತ್ತೆ ಕೇಳುವ ತನಕ ಹಿಂದಿರುಗಿಸುವ ಅಭ್ಯಾಸವಿರುವುದಿಲ್ಲ. ಅಂಥವರ ಬಳಿ ಕೇಳದೆ ಇದ್ದರೆ ಸಾಲವಾಗಿ ಕೊಟ್ಟ ಹಣ ಯಾವತ್ತೂ ಮರಳಿ ಸಿಗುವುದಿಲ್ಲ.
ಮಾಡಿದ ಬದುಕು ನೋಡದೆ ಹೋಯಿತು- ಸಾಮಾನ್ಯವಾಗಿ ಮದುವೆ ಮುರಿದು ಬೀಳುವ ಹಂತಕ್ಕೆ ಬಂದು ತಲುಪಿದರೆ ಹೇಳುವ ಮಾತು. ಬರಿದೆ ಮದುವೆಯಾದರೆ ಸಾಲದು, ಅದನ್ನು ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ಮಾಡಿಕೊಂಡ ಬದುಕನ್ನು ತಿರುಗಿ ನೋಡದೆ ಇದ್ದರೆ ಹಾಳಾಗ ಹೋಗುತ್ತದೆ ಎನ್ನುವ ಅರ್ಥ.


ಸಾಲವನ್ನು ತಿರುಗಿ ಕೇಳುವ ಸಮಯದಲ್ಲಿ ಅಥವಾ ಗಂಡ ಹೆಂಡಿರ ಸಂಬಂಧದಲ್ಲಿ (ನಿರ್ಲಕ್ಷ್ಯದಿಂದಾಗಿ ) ಬಿರುಕುಂಟಾದಾಗ ಈ ಮಾತನ್ನು ಹೇಳುತ್ತಾರೆ.

October 7, 2008

ಬೇಡವೆಂದು ಎಸೆಯುವ … (ಉತ್ತರ ಕನ್ನಡದ ಗಾದೆ – 200)

ಬೇಡವೆಂದು ಎಸೆಯುವ ಕಡ್ಡಿ ಹಲ್ಲಿನಲ್ಲಿ ಹಾಕುವುದಕ್ಕಾದರೂ ಬೇಕಾಗುತ್ತದೆ.
ಯಾವುದೊ ಒಂದು ಕಡ್ಡಿಯನ್ನು ಉಪಯೋಗಕ್ಕೆ ಬರುವುದಿಲ್ಲ ಎಂದು ಎಸೆದರೆ ಅದರ ಉಪಯುಕ್ತತೆ ಇನ್ಯಾವತ್ತೋ ಕಂಡು ಬರಬಹುದು - ಹಲ್ಲಿನಲ್ಲಿ ಏನೋ ಪದಾರ್ಥ ಸಿಕ್ಕುಬಿದ್ದು ಅದನ್ನು ತೆಗೆಯಲು ಕಡ್ಡಿಯನ್ನು ಹುಡುಕುತ್ತಿರುವಾಗ. ಇಂದು ಎಸೆಯಲು ಅನುವಾದ ವಸ್ತು ಇನ್ಯಾವತ್ತೋ ಉಪಯೋಗಕ್ಕೆ ಬರಬಹುದು ಎಂದು ಅನಿಸಿದಾಗ ಹೇಳುವ ಮಾತು. ಯಾರದ್ದೋ ಜೊತೆ ಸಂಬಂಧವನ್ನು ಕೆಡಿಸಿಕೊಳ್ಳುವ ಮೊದಲು ಅವರು ಮುಂದೆ ಉಪಯೋಗಕ್ಕೆ ಬರಬಹುದಾ ಎಂಬ ಬಗ್ಗೆ ವಿಚಾರ ಮಾಡು ಎನ್ನುವಾಗಲೂ ಬಳಕೆಯಾಗುತ್ತದೆ.

October 6, 2008

ಭಟ್ಟರ ಅಂಗವಸ್ತ್ರ … (ಉತ್ತರ ಕನ್ನಡದ ಗಾದೆ – 199)

ಭಟ್ಟರ ಅಂಗವಸ್ತ್ರ ಆಗಬಾರದು, ವೈದ್ಯನ ಹೆಂಡತಿ ಆಗಬಾರದು.
ಅಡುಗೆ ಭಟ್ಟರ ಹೆಗಲ ಮೇಲಿರುವ ಅಂಗವಸ್ತ್ರದ ಪಾಡು ಯಾರಿಗೂ ಬೇಡ. ಕಂಡ ಕಂಡದ್ದನ್ನೆಲ್ಲಾ ಒರೆಸಲು, ಬಿಸಿ ಪಾತ್ರೆ ಒಲೆಯಿಂದ ಇಳಿಸಲು ಮೊದಲಾದ ಕೆಲಸಕ್ಕೆಲ್ಲಾ ಅದರ ಪ್ರಯೋಗ. ಅಂತೆಯೇ ವೈದ್ಯ ಕೂಡ ಎಲ್ಲಾ ಔಷಧಗಳನ್ನೂ ಹೆಂಡತಿಯ ಮೇಲೆಯೇ ಮೊದಲು ಪ್ರಯೋಗಿಸುತ್ತಾನೆ. ಅವರಿಬ್ಬರ ಬದುಕೂ ಕೂಡ ಕಷ್ಟ. (ಅಂಗವಸ್ತ್ರಕ್ಕೂ ಕೂಡ ಜೀವ ಇದೆ ಎಂದುಕೊಂಡರೆ!)

October 3, 2008

ತಲೆಗೆ ಮಿಂದರೆ … (ಉತ್ತರ ಕನ್ನಡದ ಗಾದೆ – 198)

ತಲೆಗೆ ಮಿಂದರೆ ಕಾಲಿಗೆ ಬರುತ್ತದೆ.
ತಲೆಯ ಮೇಲೆ ನೀರು ಹಾಕಿಕೊಂಡು ಸ್ನಾನ ಮಾಡಿದರೆ ಕಾಲ ತನಕ ಹರಿದು ಬರುತ್ತದೆ. ಹಿರಿಯರಿಗೆ ಏನಾದರೂ ಸಲ್ಲಿಸಿದರೆ ಅದು ಕಿರಿಯರಿಗೆ ಸಂದಂತೆಯೇ ಎಂದು ಹೇಳುವಾಗ ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಅಜ್ಜ/ ಅಜ್ಜಿಗೆ ನಮಸ್ಕಾರ ಮಾಡಿದ ನಂತರ ದೊಡ್ಡಪ್ಪ, ಚಿಕ್ಕಪ್ಪ, ದೊಡ್ಡಮ್ಮ, ಚಿಕ್ಕಮ್ಮ ಮೊದಲಾದವರಿಗೂ ನಮಸ್ಕಾರ ಮಾಡಲು ಮುಂದಾದಾಗ ಅವರ ಬಾಯಿಯಿಂದ ಹೊರಡುವ ಮಾತು.

October 1, 2008

ಜೇನು ಕೊಯ್ದವನು … (ಉತ್ತರ ಕನ್ನಡದ ಗಾದೆ – 197)

ಜೇನು ಕೊಯ್ದವನು ಕೈ ನೆಕ್ಕದೇ ಇರುತ್ತಾನಾ?
ಹೆಚ್ಚಿನ ಲಾಭ ಇರುವಂಥ ಕೆಲಸ ಮಾಡಿ ಮುಗಿಸಿದವನು (ಬೇರೆಯವರ ಉಪಕಾರಕ್ಕಾದರೂ ಕೂಡ) ಸ್ವಲ್ಪವಾದರೂ ಲಾಭವನ್ನು ಸ್ವಂತಕ್ಕೆ ಮಾಡಿಯೇ ಮಾಡಿಕೊಳ್ಳುತ್ತಾನೆ ಎಂದು ಅರ್ಥ.

September 26, 2008

ಕದ್ದ ರೊಟ್ಟಿ … (ಉತ್ತರ ಕನ್ನಡದ ಗಾದೆ – 196)

ಕದ್ದ ರೊಟ್ಟಿ ಬೇರೆ, ದೇವರ ಪ್ರಸಾದ ಬೇರೆ.
ಕದ್ದ ರೊಟ್ಟಿ ಮಾತ್ರವಲ್ಲದೇ ದೇವರ ಪ್ರಸಾದವನ್ನೂ ಪಡೆದುಕೊಳ್ಳುತ್ತಾನೆ ಎಂದು ಅರ್ಥ. ಕದ್ದು ರೊಟ್ಟಿಯನ್ನು ತಿಂದಿರುವುದಲ್ಲದೆ, ಏನೂ ತಿಳಿಯದವರಂತೆ ನಟಿಸಿ ದೇವರ ಪ್ರಸಾದವನ್ನು ಎಲ್ಲರೆದುರಿಗೇ ತೆಗೆದುಕೊಂಡು ತಿನ್ನುತಾನೆ.

ಅನ್ಯ ಮಾರ್ಗದಲ್ಲಿ ಲಾಭ ಮಾಡಿಕೊಳ್ಳುವುದರ ಜೊತೆಗೇ ಸಂಭಾವಿತನಂತೆ ನಟಿಸುತ್ತಾ ಸಹಜವಾಗಿ ಬರುವ ಲಾಭವನ್ನೂ ತೆಗೆದುಕೊಳ್ಳುತ್ತಾನೆ. ಇಂದಿನ ಅಧಿಕಾರಿಗಳು, ರಾಜಕಾರಣಿಗಳು ಇವರೆಲ್ಲರನ್ನು ಕುರಿತು ಹಿಂದೆಂದೋ ರೂಪಿಸಿಟ್ಟ ಗಾದೆ!

September 24, 2008

ಕದ್ದು ಹೋಳಿಗೆ ಕೊಟ್ಟರೆ … (ಉತ್ತರ ಕನ್ನಡದ ಗಾದೆ – 195)

ಕದ್ದು ಹೋಳಿಗೆ ಕೊಟ್ಟರೆ ಬೆಲ್ಲ ಸಾಲದು ಎಂದಿದ್ದಳು.
ನಮ್ಮ ಕೈಮೀರಿ ಅಥವಾ ಅನ್ಯ ಮಾರ್ಗದಲ್ಲಿ ಹೋಗಿಯಾದರೂ ಇನ್ನೊಬ್ಬರಿಗೆ ಸಹಾಯ ಮಾಡಿದಾಗ ಅವರು ಉಪಕಾರವನ್ನು ಸ್ಮರಿಸುವ ಬದಲು ಉಪಕಾರ ಮಾಡಿದ್ದು ಸಾಲದು ಎಂದು ಹೇಳಿದರೆ ಅಥವಾ ಇನ್ನೂ ಬೇರೆ ರೀತಿಯಲ್ಲಿ ಉಪಕಾರವನ್ನು ನಿರೀಕ್ಷಿಸಿದರೆ ಬಳಸಬಹುದು.

September 23, 2008

ಅಭ್ಯಾಸ ಇಲ್ಲದ ಭಟ್ಟ … (ಉತ್ತರ ಕನ್ನಡದ ಗಾದೆ – 194)

ಅಭ್ಯಾಸ ಇಲ್ಲದ ಭಟ್ಟ ಅಗ್ನಿಕಾರ್ಯ ಮಾಡಲು ಹೋಗಿ ಗಡ್ಡ ಸುಟ್ಟುಕೊಂಡಿದ್ದನಂತೆ.
ನಮಗೆ ಅಭ್ಯಾಸ ಇಲ್ಲದ ಕೆಲಸವನ್ನು ಮಾಡಲು ಹೋದರೆ ಅನಾಹುತವನ್ನು ಮಾಡುತ್ತೇವೆ ಎಂಬ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಉದಾಹರಣೆಗೆ, ಹೆಂಡತಿ ತವರಿಗೆ ಹೋದ ಸಂದರ್ಭದಲ್ಲಿ ಅಡುಗೆ ಮಾಡು ಹೋಗಿ ಗಂಡ ಏನೇನೋ ಅನಾಹುತವನ್ನು ಮಾಡುತ್ತಿರುತ್ತಾನೆ.... ಕೈ ಸುಟ್ಟುಕೊಳ್ಳುವುದು, ಬಾಟಲಿ ಒಡೆಯುವುದು, ಎಣ್ಣೆಯನ್ನು ಚೆಲ್ಲಿ ಹಾಕುವುದು, ಇತ್ಯಾದಿ...

September 19, 2008

ಜುಟ್ಟು ಹಣ್ಣಾಗಿದೆ … (ಉತ್ತರ ಕನ್ನಡದ ಗಾದೆ – 193)

ಜುಟ್ಟು ಹಣ್ಣಾಗಿದೆ ಜಾಗಟೆ ಬಾರಿಸಲು ಬರುವುದಿಲ್ಲ ಎಂದಿದ್ದ.
ಜುಟ್ಟು ಹಣ್ಣಾಗುವುದಕ್ಕೂ ಜಾಗಟೆ ಬಾರಿಸಲು ಬಾರದೇ ಇರುವುದಕ್ಕೂ ಯಾವುದೇ ಸಂಬಂಧವಿಲ್ಲ. ಕೆಲಸದಿಂದ ತಪ್ಪಿಸಿಕೊಳ್ಳಲು ಯಾರಾದರೂ ಅಸಂಬದ್ಧ ಕಾರಣ ಕೊಟ್ಟಾಗ ಈ ಗಾದೆಯನ್ನು ಹೇಳಬಹುದು.

September 18, 2008

ಎಂತೆಂಥವರೋ ಮಣ್ಣು ಮುಕ್ಕುತ್ತಿರುವಾಗ … (ಉತ್ತರ ಕನ್ನಡದ ಗಾದೆ – 192)

ಎಂತೆಂಥವರೋ ಮಣ್ಣು ಮುಕ್ಕುತ್ತಿರುವಾಗ ಓತಿಕ್ಯಾತ ತಾನು ಮಾಡುತ್ತೇನೆ ಎನ್ನುತ್ತಿತ್ತು.
ಯಾವುದೊ ಒಂದು ಕೆಲಸ ಮಾಡಲು ಸಮರ್ಥರಾದವರೇ ವಿಫಲರಾಗಿ ಕೈಚೆಲ್ಲಿ ಕುಳಿತಿರುವಾಗ ಅಶಕ್ತರು, ಅನುಭವ ಇಲ್ಲದವರು ತಾನು ಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಂಡರೆ ಹೇಳಬಹುದು.

September 17, 2008

ಮುಳುಗಿಕೊಂಡು … (ಉತ್ತರ ಕನ್ನಡದ ಗಾದೆ – 191)

ಮುಳುಗಿಕೊಂಡು ಹೇತರೂ ತಲೆಯ ಮೇಲೆಯೇ ತೇಲುತ್ತದೆ.
ಅಯ್ಯೋ ಇದೆಂತಾ ಗಾದೆ ಅಸಹ್ಯ ಅನ್ನುತ್ತೀರಾ? ಅಸಹ್ಯ ನಿಜ, ಆದರೆ ಅದರ ಅರ್ಥವನ್ನೊಮ್ಮೆ ನೋಡಿ ಬಿಡಿ.
ಯಾರಿಗೂ ಗೊತ್ತಾಗಬಾರದೆಂದು ಕೆಟ್ಟ ಕೆಲಸವನ್ನು ಕದ್ದು ಮುಚ್ಚಿ ಮಾಡಿದರೂ ಅದು ಹೇಗಾದರೂ ಆಗಿ ಎಲ್ಲರ ಕಣ್ಣಿಗೆ ಬಿದ್ದೇ ಬೀಳುತ್ತದೆ ಮತ್ತು ತಿರುಗಿ ಅನಾನುಕೂಲವನ್ನೇ ಉಂಟು ಮಾಡುತ್ತದೆ ಎಂದು ಹೇಳಬೇಕಾದಾಗ ಬಳಸಿಕೊಳ್ಳಿ.

September 15, 2008

ಮೂರು ಲೋಕವೂ … (ಉತ್ತರ ಕನ್ನಡದ ಗಾದೆ – 189 ಮತ್ತು 190)

ಮೂರು ಲೋಕವೂ ಕಾಣುತ್ತಿದೆ ಏನು ಹೇಳುತ್ತಿದ್ದಾಗ, ನಮ್ಮ ಮನೆಯ ಎಮ್ಮೆ ಕರು ಕಾಣುತ್ತಿದೆಯೇ ಎಂದು ಕೇಳಿದ್ದ.
ಯಾರೋ ಒಬ್ಬ ನನಗೆ ಮೂರು ಲೋಕವೂ ಕಾಣುತ್ತಿದೆ ಅಂದರೆ ಇನ್ನೊಬ್ಬ ಕಳೆದು ಹೋದ ಎಮ್ಮೆ ಕರು ಕಾಣುತ್ತಿದೆಯೇ ಎಂದು ಕೇಳಿದ್ದನಂತೆ. ಎಲ್ಲ ಸುಖವೂ ಇದೆ ಎಂದು ಖುಷಿಪಡುವ ಸಮಯದಲ್ಲಿ ಅಥವಾ ನೋಡಿ ಸಂತೋಷ ಪಡಲು ಎಷ್ಟೆಲ್ಲಾ ವಿಷಯಗಳು ಇದ್ದಾಗ ಕ್ಷುಲ್ಲಕ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುವವರನ್ನು ನೋಡಿ ಮಾಡಿದ ಮಾತು ಇದು.
ಇದನ್ನು ನಾನು ಕೇಳಿದ್ದು ತ್ಯಾಗಲಿಯ ನಾಗಪತಿ ಭಾವನಿಂದ. ಮಾಲತಿ ಅಕ್ಕನನ್ನು ಬೆಂಗಳೂರಿನಿಂದ ಮೈಸೂರಿಗೆ ವೋಲ್ವೋ ಬಸ್ಸಿನಲ್ಲಿ ಕರೆದುಕೊಂಡು ಹೊರಟಾಗ- "ನೋಡೇ ಮಾಲತಿ, AC ಬಸ್ಸು, ಸೀಟು-ಗೀಟು ಎಲ್ಲ ಎಷ್ಟು ಚೆನ್ನಾಗಿದೆ" ಎಂದು ಭಾವ ಹೇಳುತ್ತಿದ್ದರೆ "ಕಿಟಕಿ ತೆಗೆಯಲು ಬರುವುದಿಲ್ಲ, ವಾಂತಿ ಬಂದರೆ ಮಾಡುವ ಬಗೆ ಹೇಗೆ?" ಎಂದು ಕೇಳಿದ್ದಳಂತೆ. ಭಾವ ಊರಿಗೆ ಬಂದ ಮೇಲೆ ಆ ಪ್ರಸಂಗವನ್ನು ವಿವರಿಸಿದ ಬಗೆ ಇದು; ಈ ಗಾದೆಯ ಜೊತೆಯಲ್ಲಿ.
ಅಜ್ಜಿಗೆ ಅರಿವೆ ಚಿಂತೆ ಆದರೆ ಮೊಮ್ಮಗಳಿಗೆ ಮದುವೆ ಚಿಂತೆ ಅನ್ನುವ ಗಾದೆ ಕೂಡ ಇದೆ ಅನ್ನುತ್ತೀರಾ? ಅದೂ ಇದೆ. ಆದರೆ ಸ್ವಲ್ಪ ಬೇರೆ ಸಂದರ್ಭಕ್ಕೆ; ಇಬ್ಬರೂ ಒಂದಲ್ಲಾ ಒಂದು ಚಿಂತೆಯಲ್ಲಿ ಇದ್ದಾಗ ಬಳಸುವಂಥದು.

ನಿನ್ನೆ ಬೆಳಿಗ್ಗೆ ನಾನು

ನಿನ್ನೆ ಬೆಳಿಗ್ಗೆ...

ರಾಜೀವ- “ಎಷ್ಟು ಘಂಟೆಗೆ ಹೊರಡೋಣ? ನಿನಗೆ ಒಮ್ಮೆ ಕೆಸಲ ಮುಗಿಸಿ ಎಷ್ಟು ಘಂಟೆಗೆ ಹೊರಡಲಿಕ್ಕೆ ಆಗುತ್ತದೆ?”

ನಾನು- “ನೀನು ಆಗ Japanese class ಮುಗಿಸಿಕೊಂಡು ಬರುವಷ್ಟರಲ್ಲಿ ಊಟ ತಯಾರಾಗಿ ಇರುತ್ತಿತ್ತು.....ಅದೇ ಈಗ ನಾನು ಬರುವಷ್ಟರಲ್ಲಿ? ಗಲೀಜಾಗಿರುವ ಮನೆ, ಅಲ್ಲಲ್ಲಿ ಬಿದ್ದು ಒದ್ದಾಡುತ್ತಿರುವ ವಸ್ತುಗಳು, ಅಡುಗೆಮನೆ ಎಲ್ಲವೂ ಕಾಯುತ್ತಿರುತ್ತವೆ..... ನೀನು ಬಾಲ್ಕನಿಯಲ್ಲಿ ಬಿಸಿಲಿಗೆ ಬಾಡಿ ಹೋಗುತ್ತಿರುವ ಗಿಡಕ್ಕೆ ನೀರೂ ಕೂಡ ಹಾಕದೆ ಹಾಯಾಗಿ ಅದ್ಯಾವುದೋ ಸುಡುಗಾಡು English movie ನೋಡುತ್ತಿರುತ್ತೀಯ...

ನೀನು ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಬಿಸಿ ಬಿಸಿ ಅಡುಗೆ..... ಅದೇ ನಾನು ಕೆಲಸದಿಂದ ಬರುವಷ್ಟರಲ್ಲಿ?...

ನಿನಗಾದರೆ weekend ಅಂದರೆ ನಿಜವಾಗಿಯೂ weekend ಇದೆ- relax ಮಾಡಲಿಕ್ಕೆ... ಆದರೆ ನನ್ನ ಕೆಲಸಕ್ಕೆ weekend ಅನ್ನುವುದು ಇಲ್ಲವೇ ಇಲ್ಲ…..

ನಾನಂತೂ ಮುಂದಿನ ಜನ್ಮವೊಂದಿದ್ದರೆ ಹೆಣ್ಣು ಸೊಳ್ಳೆಯಾಗಿಯೂ ಕೂಡ ಹುಟ್ಟುವುದಿಲ್ಲ....."

ರಾಜೀವ- “????!!!!”


September 12, 2008

ಬಾಯಿ ಮುಂದಿನ ಹಲ್ಲು … (ಉತ್ತರ ಕನ್ನಡದ ಗಾದೆ – 188)

ಬಾಯಿ ಮುಂದಿನ ಹಲ್ಲು, ಊರ ಹೊರಗಿನ ಜಮೀನು ಇವೆರಡರಿಂದಲೂ ಅನಾನುಕೂಲವೇ ಜಾಸ್ತಿ.
ಹಲ್ಲು ಬಾಯಿಗಿಂತ ಮುಂದಿದ್ದರೆ ಪೆಟ್ಟಾಗುವ ಸಂಭವ ಹೆಚ್ಚು. ಅಂತೆಯೇ, ಜಮೀನು ಊರ ಹೊರಗಿದ್ದರೆ ಕಳ್ಳತನ, ಅತಿಕ್ರಮಣಗಳ ಭಯ ಹೆಚ್ಚು. ಆ ಜಮೀನಿನಿಂದ ಬರುವ ಆದಾಯಕ್ಕಿಂತ ಅದರ ಕಾವಲಿನ ಮೇಲೆ ಮಾಡುವ ಖರ್ಚೇ ಕೆಲವೊಮ್ಮೆ ಜಾಸ್ತಿ ಆಗಿಬಿಡುತ್ತದೆ. ಆದರೆ ಅದನ್ನು ಮಾರುವುದಕ್ಕೂ ಮನಸ್ಸು ಬರುವುದಿಲ್ಲ. ಯಾರಾದರೂ ಜಮೀನು ಕೊಂಡುಕೊಳ್ಳುವ ಬಗ್ಗೆ ವಿಚಾರ ಮಾಡುತ್ತಿದ್ದರೆ ದೂರದ ಜಮೀನು ಬೇಡವೇ ಬೇಡ ಎಂದು ಹೇಳುವ ಸಂದರ್ಭದಲ್ಲಿ ಬಳಕೆಯಾಗುತ್ತದೆ.

September 4, 2008

ಈ ಬಾರಿ ಫ್ಯುಜಿಗೆ ನಾನೂ ಕೂಡ

ಹಿಂದೊಮ್ಮೆ ಫ್ಯುಜಿ ಪರ್ವತದ ಬಗ್ಗೆ ಬರೆದಿದ್ದೆ.
ಈ ಬಾರಿ ನಾನೇ ಹೋದ ಅನುಭವವನ್ನು ಬರೆಯುತ್ತಿದ್ದೇನೆ.

ಫ್ಯುಜಿ ಪರ್ವತ ಜಪಾನಿಗಳ ಅಗ್ನಿ ದೇವತೆ; 3776 ಮೀಟರುಗಳಷ್ಟು ಎತ್ತರ. ಟೋಕಿಯೋದಿಂದ ಸುಮಾರು 80 ಕಿ. ಮೀ. ಗಳಷ್ಟು ದೂರ. ಜಪಾನಿನಲ್ಲಿ ಗೌರವದಿಂದ ಅದನ್ನು ಫ್ಯುಜಿ-ಸಾನ್ ಎಂದು ಕರೆಯುತ್ತಾರೆ ('ಸಾನ್ ' ಎಂದರೆ ನಮ್ಮ ಹಿಂದಿಯಲ್ಲಿ ಗೌರವದಿಂದ ಹೆಸರಿನ ಮುಂದೆ 'ಜಿ' ಎಂದ ಹಾಗೆ). ಚಳಿಗಾಲದಲ್ಲಿ ಪೂರ್ತಿ ಹಿಮದಿಂದ ಕೂಡಿರುವುದರಿಂದ ಅದನ್ನು ಹತ್ತಲು ಜುಲೈನಿಂದ ಅಗಸ್ಟ್ ಕೊನೆಯವರೆಗೆ ಮಾತ್ರ ಅನುಮತಿಯಿರುತ್ತದೆ (ಅಂದರೆ ಇಲ್ಲಿನ ಕಡು ಬೇಸಿಗೆಯಲ್ಲಿ).

ಈ ಬಾರಿ ಫ್ಯುಜಿ ಪರ್ವತವನ್ನು ಏರಲು ನಾನೂ ಬರುತ್ತೇನೆ ಎಂದು ನಾನು ಹೇಳಿದಾಗಲೆಲ್ಲಾ ರಾಜೀವನಿಂದ ಒಂದೇ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆ. ನೀನು ಕನಿಷ್ಠ ಒಂದು ತಿಂಗಳು ಮೊದಲಿನಿಂದಾದರೂ running, exercise ಮಾಡಬೇಕು ಇಲ್ಲದಿದ್ದರೆ ತುಂಬಾ ಕಷ್ಟ ಎಂದು. ನನಗೆ ನನ್ನ ಕೆಲಸದಿಂದ ಬಿಡುವು ಸಿಕ್ಕಿ ನಾನು cycling ಮಾಡಿದ್ದು ಫ್ಯುಜಿಗೆ ಹೋಗುವ ಒಂದು ವಾರ ಮೊದಲಿನಿಂದ ಅಷ್ಟೆ. ನನಗೂ ಭಯವಿದ್ದಿದ್ದು ಮಾತ್ರ ನಿಜ. ಒಂದು ವೇಳೆ ಮಧ್ಯದಲ್ಲೇ ನಿಲ್ಲುವಂತಾದರೆ ಎಂದು.

ಅಂತೂ ಧೈರ್ಯ ಮಾಡಿ ಹೊರಟೇಬಿಟ್ಟೆ, ದೇವರ ಮೇಲೆ ಭಾರ ಹಾಕಿ. ಅದಕ್ಕಿಂತ ಜಾಸ್ತಿ ರಾಜೀವನ ಮೇಲೆ ಭಾರ ಹಾಕಿ! ನಮ್ಮಂತೆಯೇ ನಮ್ಮ ಜೊತೆ ಸೇರಿಕೊಂಡವರು ವಿನಾಯಕ - ಸಂಧ್ಯಾ ಮತ್ತು ಪುನೀತ್ - ಪರಿಣೀತಾ.

ಶನಿವಾರ ಅಗಸ್ಟ್ 9ರ ಬೆಳಿಗ್ಗೆ 6:45 ಕ್ಕೆ ಮನೆಯಿಂದ ಹೊರಡುವುದು ಎಂದು ಮೊದಲೇ ತೀರ್ಮಾನವಾಗಿತ್ತು. ಮನೆಯ ಹತ್ತಿರದಿಂದ train ಹಿಡಿದು ‘ಶಿಂಜುಕು’ ಎಂಬ station ತಲುಪುವುದು, ಅಲ್ಲಿಂದ ಮುಂದೆ ಮೊದಲೇ reserve ಮಾಡಿಸಿದ bus ನಲ್ಲಿ ಹೋಗುವುದು ಎಂದು ಎಂದು ನಿರ್ಧಾರವಾಗಿತ್ತು. (ಶಿಂಜುಕು station ಬಗ್ಗೆ ಒಮ್ಮೆ ನೋಡಿ ಬಿಡಿ. The busiest train station in the world in terms of passengers. ದಿನಾಲೂ ಸಾಮಾನ್ಯವಾಗಿ 3.60 ಮಿಲಿಯನ್ ನಷ್ಟು ಜನರು ಅಡ್ಡಾಡುವ station ಅದು. ಆ station ನ toilet ಗೆ ಹೋಗಬೇಕಾದರೆ ಮಾರುದ್ದದ ಕ್ಯೂ... ಆದರೆ toilet ನಮ್ಮ ಮನೆಯ toilet ನಷ್ಟೇ ಸ್ವಚ್ಛ, ಥಳಥಳ!)

ಅಂತೆಯೇ ಹೊರಟೆವು. ದಾರಿಯಲ್ಲಿ ವಿನಾಯಕ - ಸಂಧ್ಯಾ ಜೊತೆಯಾದರು. 7:45 ರ ಹೊತ್ತಿಗೆ ಶಿಂಜುಕು ತಲುಪಿ ಬಸ್ ಗಾಗಿ ಕಾಯುತ್ತಿದ್ದಾಗ ಪುನೀತ್ - ಪರಿಣೀತಾ ಬಂದು ನಮ್ಮನ್ನು ಸೇರಿಕೊಂಡರು. 8:30ಕ್ಕೆ ನಿಗದಿತ ಸಮಯಕ್ಕೆ ಒಂದು ನಿಮಿಷವೂ ಹೆಚ್ಚು ಕಮ್ಮಿ ಇಲ್ಲದಂತೆ ಬಸ್ ಬಂತು. ಫ್ಯುಜಿಗೆ ಹೊರಟ ಇತರ ಎಲ್ಲ ಪ್ರಯಾಣಿಕರೊಡನೆ ನಾವೂ ಬಸ್ಸಿನ ಹೊಟ್ಟೆಯೊಳಗೆ ಸೇರಿಕೊಂಡೆವು. ನಮ್ಮನ್ನು ಹೊತ್ತ ಬಸ್ 11:30 ಕ್ಕೆ 5th base station ಗೆ ತಲುಪಿತು. ಅಲ್ಲಿ ನೋಡಿದರೆ ಜನರ ಸಂತೆ. ವಾರಂತ್ಯವಾದ್ದರಿಂದ ಸಿಕ್ಕಾಪಟ್ಟೆ ಜನರು ನಮ್ಮಂತೆಯೇ ಫ್ಯುಜಿಯನ್ನು ಏರುವ ಉತ್ಸಾಹದಲ್ಲಿದ್ದರು.

ಆ ನಂತರವೇ ಶುರುವಾಗಿದ್ದು ನಿಜವಾದ ಸಮಸ್ಯೆ. ಮೊದಲೇ ನೋಡಿಟ್ಟುಕೊಂಡ weather forecast 60% ಮಳೆ ಎಂದು ಸಾರಿತ್ತು. ಅಂತೂ ಧೈರ್ಯ ಮಾಡಿ ಹೊರಟಿದ್ದೆವು. 12:00ಘಂಟೆಯಿಂದ ಒಂದೇ ಸಮನೆ ಗುಡುಗು, ಸಿಡಿಲು, ಮಳೆ ಪ್ರಾರಭವಾಯಿತು. ಅಲ್ಲೇ ಒಂದು ಕಡೆ ಕುಳಿತು ಮನೆಯಿಂದ ತೆಗೆದುಕೊಂಡು ಹೋಗಿದ್ದ ಚಪಾತಿ ತಿಂದೆವು. ಮಳೆ ನಿಲ್ಲುವ ಲಕ್ಷಣವೇ ಕಾಣಲಿಲ್ಲ. ಹೊರಡದೆ ಬೇರೆ ವಿಧಿಯಿರಲಿಲ್ಲ. Raincoat, ಬೆಚ್ಚಗಿನ ಬಟ್ಟೆ ಎಲ್ಲವನ್ನೂ ಧರಿಸಿದೆವು.


ಹತ್ತುವಾಗ ದಾರಿಯಲ್ಲಿ ಬೇಕಾಗಬಹುದು ಎಂದು ಟೋಕಿಯೋದಿಂದ ಕಟ್ಟಿಕೊಂಡು ಹೋಗಿದ್ದ chocolate ನೋಡಿದೆ, ಅದು bag ನಲ್ಲಿ ಸೆಖೆಗೆ ಸಿಕ್ಕಿ ಕರಗಿ ನೀರಾಗಿ ಹೋಗಿತ್ತು. ಅದನ್ನು ಎಸೆಯಲು ಏಕೋ ಕರುಳು ಚುರ್ ಎಂದಿತು! ಏನಾದರೂ ಆಗಲಿ ಎಂದು ಇಟ್ಟುಕೊಂಡೆ. ತೀರ ಅಗತ್ಯದ ವಸ್ತುಗಳಾದ torch, winter jacket, muffler ಮೊದಲಾದವುಗಳನ್ನು plastic cover ನಲ್ಲಿ ಹಾಕಿ bag ನಲ್ಲಿ ಹಾಕಿಕೊಂಡೆವು; ಮಳೆಯಿಂದ ಸ್ವಲ್ಪವಾದರೂ ರಕ್ಷಣೆ ಸಿಗಲಿ ಎಂದು. ಮಳೆ ನಿಲ್ಲುವಂತೆ ಕಾಣಲಿಲ್ಲ. ಹೊರಡಲು ಅನುವಾದೆವು. 3:00 ಘಂಟೆಗೆ ಹತ್ತಲು ಪ್ರಾರಂಭಿಸಿದೆವು.

ಬಲವಾಗಿ ಬೀಸುತ್ತಿದ್ದ ಗಾಳಿಗೆ raincoat ನ ಟೊಪ್ಪಿ ನಿಲ್ಲುತ್ತಲೇ ಇರಲಿಲ್ಲ. ಹೊರಟ ಎರಡೇ ನಿಮಿಷದಲ್ಲಿ ತಲೆ ಪೂರ್ತಿ ಒದ್ದೆಯಾಯಿತು. ಆಗಲೇ ಚಳಿ ಪ್ರಾರಂಭ. ಏಕೆಂದರೆ 5th station ಇರುವುದು 2300 ಮೀಟರ್ ಎತ್ತರದಲ್ಲಿ. ಟೋಕಿಯೋದ 40 ಡಿಗ್ರಿ C ಸೆಖೆಗೆ ಒಗ್ಗಿಕೊಂಡಿದ್ದ ನಮ್ಮ ದೇಹ ಒಮ್ಮೆ ಅಲ್ಲಿನ 12 ಡಿಗ್ರಿ C ಗೆ ಹೊಂದಿಕೊಳ್ಳಲು ಒಂದು ಘಳಿಗೆ ಚಡಪಡಿಸಿತು. ಫ್ಯುಜಿಯ ತುತ್ತ ತುದಿಯನ್ನು ಮುಟ್ಟಲು ನಾವಿನ್ನು ಕ್ರಮಿಸಬೇಕಗಿದ್ದ ದೂರ ಕೇವಲ 1476 ಮೀಟರ್ ಅಷ್ಟೇ. ಹಾಕಿಕೊಂಡಿದ್ದ shoes, socks ಗಳೆಲ್ಲಾ ಪೂರ್ತಿ ಒದ್ದೆಯಾಗಿ ಕಾಲು ಮರಗಟ್ಟಿದಂತೆ ಆಗಲು ಪ್ರಾರಂಭವಾಗಿತ್ತು. ಸುಮಾರು 6:30 ರ ವರೆಗೆ ಹೊಡೆದ ಮಳೆ ನಿಂತು ಆಕಾಶ ಶುಭ್ರವಾಗಲು ಪ್ರಾರಂಭವಾಗಿತ್ತು. ನಮ್ಮಂತೆಯೇ ಏರುತ್ತಿದ್ದ ಸಾವಿರಾರು ಚಾರಣಿಗರ ಮುಖದಲ್ಲಿ ಉತ್ಸಾಹ, ನಗು ಕಾಣುತ್ತಿದ್ದವು.

ಮೇಲೆ ಮೇಲೆ ಹತ್ತುತ್ತಾ ಹೋದಂತೆಲ್ಲಾ ಕಷ್ಟದ ಅರಿವಾಗತೊಡಗಿತು. ಗಾಳಿ ಬೀಸುವುದು ಜೋರಾಗುತ್ತಿತ್ತು, ಕೊರೆಯುವ ಚಳಿ ಜಾಸ್ತಿಯಾಗಿತ್ತು. Temperature 8 ಡಿಗ್ರಿ C ರಷ್ಟು ಇತ್ತು. ಪರ್ವತವನ್ನು ಹತ್ತುತ್ತಿರುವಾಗ jacket ಮೊದಲಾದವುಗಳನ್ನು ತೆಗೆದು ಎಸೆಯುವಷ್ಟು ಸೆಖೆ, ಬೆವರು. ನಡೆದು, ನಡೆದು ಸುಸ್ತಾಗಿ ಸುಧಾರಿಸಿಕೊಳ್ಳಲೆಂದು ಒಂದೇ ಒಂದು ನಿಮಿಷ ನಿಂತರೂ ಸಾಕು ಚಳಿಯ ಕೊರೆತವನ್ನು ತಡೆಯಲಸಾಧ್ಯ ಎಂದು ಎನಿಸತೊಡಗುತ್ತದೆ.

ಹತ್ತುವ ದಾರಿಯೂ ಕಷ್ಟವಾಗುತ್ತಾ ಹೋಗುತ್ತದೆ. Steepness ಜಾಸ್ತಿಯಾಗುತ್ತಾ ಹೋಗುತ್ತದೆ. ಬಾಯಾರಿಕೆ, ಹಸಿವು...ಆದರೆ ಒಂದೇ ಸಮ ಹತ್ತುತ್ತಲೇ ಇರುವುದು. ಆಮ್ಲಜನಕ ಕೊರತೆಯೂ ಸ್ವಲ್ಪ ಮಟ್ಟಿಗೆ ಅನುಭವಕ್ಕೆ ಬರುತ್ತದೆ. ಉಸಿರಾಡಲು ಸ್ವಲ್ಪ ಅಡೆತಡೆ ಉಂಟಾಗುತ್ತದೆ. ಜಪಾನಿಯರಲ್ಲಿ ಕೆಲವರು ಸಣ್ಣ ಆಮ್ಲಜನಕದ cylinder ತಂದಿರುತ್ತಾರೆ. ಸುಮಾರು 10-12 ವರ್ಷದ ಮಕ್ಕಳಿಂದ ಹಿಡಿದು 70-75 ವರ್ಷ ವಯಸ್ಸಿನವರೂ ಬಹಳ ಜನರಿರುತ್ತಾರೆ. ಅಷ್ಟು ವಯಸ್ಸಾದವರು ಹತ್ತುದುವುದನ್ನು ಕಂಡರೆ ನಮಗೆ ನಾಚಿಗೆಯಾಗಬೇಕು. ನಾವು ಕಷ್ಟ ಪಡುತ್ತಿದ್ದರೆ 'ಗಂಬತ್ತೇ' (Do your best, all the best, ಶುಭವಾಗಲಿ, ಜಯವಾಗಲಿ) ಎನ್ನುತ್ತಾ ಹತ್ತುತ್ತಿರುತ್ತಾರೆ. ನಮ್ಮ ಕಾಲಂತೂ ಪೂರ್ತಿ ಒದ್ದೆಯಾಗಿದ್ದರಿಂದ ಮರಗಟ್ಟಿದಂತಾಗಿ ಹೆಚ್ಚು ಕಮ್ಮಿ ಜೀವವನ್ನೇ ಕಳೆದುಕೊಂಡಿತ್ತು. ದಾರಿಯಲ್ಲಿ 7th station ಬಂತು. ಎಲ್ಲ station ಗಳಲ್ಲಿ ಹಣ ಕೊಟ್ಟರೆ ಕುಳಿತುಕೊಳ್ಳಲು, ಮಲಗಲು ಬೆಚ್ಚನೆಯ ಜಾಗವಿರುತ್ತದೆ. ತುಂಬಾ ದುಬಾರಿ ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ಆ ಜನ ಸಾಗರದಲ್ಲಿ ಎಲ್ಲವೂ ತುಂಬಿ ಹೋಗಿದ್ದವು. ಹೊರಗಡೆ ಇದ್ದ bench ನ ಮೇಲೆ ಒಂದರ್ಧ ಘಂಟೆ ಕುಳಿತು ಸುಧಾರಿಸಿಕೊಂಡು corn soup ಕುಡಿದು ಮತ್ತೆ ಹೊರಟೆವು. ಹೊರಡುವ ಮೊದಲು chocolate ಏನಾಗಿದೆ ಎಂದು ತೆಗೆದು ನೋಡಿದರೆ shape ಇಲ್ಲದ ಕಟ್ಟಿಗೆ ತುಂಡುಗಳಂತೆ ಆಗಿದ್ದವು. ಮೇಲೆ ಮೇಲೆ ಹತ್ತುತ್ತಾ ಹೋದಂತೆಲ್ಲಾ ಮಾರಟಕ್ಕಿಟ್ಟಿರುವ ವಸ್ತುಗಳು ದುಬಾರಿಯಾಗುತ್ತಾ ಹೋಗುತ್ತವೆ. ಅದು ಗೊತ್ತಿದ್ದ ನಾವು ತಿಂಡಿಯನ್ನು ಮನೆಯಿಂದಲೇ ತೆಗೆದುಕೊಂಡು ಹೋಗಿದ್ದೆವು.

ಮೋಡ ನಮಗಿಂತ ಎಷ್ಟೋ ಕೆಳಗೆ. ಅದರ ಜೊತೆ ಸುತ್ತ ಮುತ್ತಲಿನ ದೃಶ್ಯ ಅದ್ಭುತ. ನಿಂತಾಗ ಅದನ್ನೆಲ್ಲಾ ಆಸ್ವಾದಿಸುವುದು, ಮತ್ತೆ ನಡೆಯುವುದು ಇಷ್ಟೇ ಕೆಲಸ. ನಂತರ 8th station ಬಂತು. ಅಲ್ಲಿಗೆ ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು. ಅಲ್ಲಿ ಹೊರಗಡೆ ಇದ್ದ bench ನ ಮೇಲೆ ಸುಮಾರು 2 ತಾಸು ಕುಳಿತು ವಿರಮಿಸಿದೆವು. ಎಲ್ಲಾದರೂ ಕುಳಿತಿರುವಾಗ jacket, gloves ಮೊದಲಾದವುಗಳನ್ನೆಲ್ಲಾ ಹಾಕಿಕೊಳ್ಳುವುದು, ನಡೆಯುವಾಗ ಪುನಃ ತೆಗೆಯುವುದು! ಸ್ವಲ್ಪ ಸುಧಾರಿಸಿಕೊಂಡು bread ತಿಂದು ಪುನಃ ಹೊರಟೆವು. ಅಷ್ಟು ಹೊತ್ತಿಗೆ ಹತ್ತುತ್ತಿರುವ ಜನರ ಸಂಖ್ಯೆಯೂ ತೀರಾ ಜಾಸ್ತಿಯಾಗುತ್ತಿತ್ತು. ರಾತ್ರಿಯಾಗಿದ್ದರಿಂದ ಎಲ್ಲರ ಕೈಲೂ torch ಅಥವಾ ತಲೆಗೆ ಹಾಕಿಕೊಂಡ headlight. ಅದರ ಬೆಳಕಿನಲ್ಲೇ ಹತ್ತುತ್ತಿರುವುದು. ನಂತರ ಮೇಲೆ ಹೋದಂತೆಲ್ಲಾ ಹತ್ತುವ ದಾರಿ ಕಿರಿದಾಗುವುದರಿಂದ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಹತ್ತಬೇಕಾಗುತ್ತದೆ. ಅಷ್ಟೊಂದು ಜನ ಸಮೂಹ. ಅಂದು ಹೆಚ್ಚು-ಕಮ್ಮಿ 10-12 ಸಾವಿರ ಜನರು ಇದ್ದಿರಬಹುದು. ಶಿರಸಿಯ ಜಾತ್ರೆಯಲ್ಲಿ ರಾತ್ರಿ ಓಡಾಡಿದಂತೆ! ವಾರಾಂತ್ಯದಲ್ಲಿ ಹೋದರೆ ಇದೆ ಕಥೆಯಂತೆ.

ಹಾಗೆ ಹತ್ತುತ್ತಾ 9th station ಕೂಡ ದಾಟಿಕೊಂಡು ರಾತ್ರಿ ಸುಮಾರು 3:00 ಘಂಟೆಗೆ ಫ್ಯುಜಿ ಪರ್ವತದ ತಲೆಯ ಮೇಲೆ ಇದ್ದೆವು. ಆಕಾಶ ಶುಭ್ರವಾಗಿತ್ತು. ನಕ್ಷತ್ರಗಳು ಕಾಣತೊಡಗಿದ್ದವು. ನಮಗೆ ಸಮಾಧಾನ, ಇನ್ನು ಮಳೆಯಿಲ್ಲ ಎಂದು. Winter jacket, muffler, scarf, hand gloves....ಊಹೂಂ ಎಷ್ಟು ಧರಿಸಿದರೂ ಚಳಿ ತಡೆಯುವುದು ಕಷ್ಟ. ಕೊರೆಯುವ ಚಳಿ, ಜೋರಾಗಿ ಬೀಸುವ ಗಾಳಿ, ಹೊಟ್ಟೆಯೊಳಗಿನಿಂದ ಬರುವ ನಡುಕ ಇದೆಲ್ಲದರ ಜೊತೆ ಉಸಿರಾಟ ಸ್ವಲ್ಪ ಕಷ್ಟ. ಚಳಿಯನ್ನು ತಡೆಯಲು ಸಹಾಯವಾಗಲಿ ಎಂದು ಒಬ್ಬರಿಗೊಬ್ಬರು ಅಂಟಿಕೊಂಡು ನಾಯಿಮರಿಗಳ ತರಹ ಕುಳಿತಿದ್ದೆವು; ಸೂರ್ಯೋದಯಕ್ಕೆ ಕಾಯುತ್ತಾ. ಸುಮಾರು 4:15 ರ ಹೊತ್ತಿಗೆ ಆಕಾಶ ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿತು.

ಎಲ್ಲರೂ ನೋಡುತ್ತಿರುವಂತೆಯೇ, ಆಕಾಶ ಪೂರ್ತಿ ಕೆಂಪಗಾಯಿತು...ಮೋಡವೆಲ್ಲಾ ಕೇಸರಿಯಲ್ಲಿ ಅದ್ದಿಟ್ಟ ಹತ್ತಿಯಂತಾಯಿತು. ನೋಡುತ್ತಿದ್ದಂತೆಯೇ ಸೂರ್ಯೋದಯ 4:45 ಕ್ಕೆ...ಒಂದೇ ಒಂದು ಕೆಂಪನೆಯ ಗೆರೆಯಂತೆ ಸೂರ್ಯ ಮೊದಲು ಕಂಡಿದ್ದು. Photo ತೆಗೆಯುವುದನ್ನೂ ಕೂಡಾ ಮರೆತು ನೋಡುತ್ತಾ ನಿಂತೆವು. ನಂತರ ಇಡೀ ಸೂರ್ಯ ಕಂಡು ಬಂದ. ಜಪಾನಿಯರಿಗೆ ಸೂರ್ಯ ಕೂಡ ದೇವರು. ಸೂರ್ಯ ಕಂಡ ತಕ್ಷಣ ಪರ್ವತದ ತಲೆಯ ಮೇಲೆ ಇರುವವರೆಲ್ಲಾ ಏನೋ ಒಂದು ವಾಕ್ಯ ಉಚ್ಚರಿಸುತ್ತಾ ಬಗ್ಗಿ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ.

ಫ್ಯುಜಿ ಪರ್ವತದ ತುದಿಯಲ್ಲಿ ಚಳಿಗಾಲದಲ್ಲಿ ಬಿದ್ದ ಹಿಮ ಇನ್ನೂ ಸ್ವಲ ಉಳಿದುಕೊಂಡಿತ್ತು. ಅದು ನಮಗೆ ಸರಿಯಾಗಿ ಕಂಡಿದ್ದು ಬೆಳಗಾದ ಮೇಲೆ. ನಂತರ ಮೇಲೆ ಜ್ವಾಲಾಮುಖಿ ಸಿಡಿದು ಉಂಟಾದ ಹೊಂಡವನ್ನು ನೋಡಿದೆವು. ನಾವು ತೆಗೆದುಕೊಂಡು ಹೋಗಿದ್ದ ತಿಂಡಿ ಎಲ್ಲವೂ ಖರ್ಚಾಗಿ ಕೇವಲ ಮೊಳಕೆ ತರಿಸಿದ್ದ ಹೆಸರು ಕಾಳು ಮಾತ್ರ ಸ್ವಲ್ಪ ಉಳಿದಿತ್ತು. ನೀರು ಕೂಡ ಮುಗಿದಿತ್ತು. ಅಲ್ಲೇ ತುತ್ತ ತುದಿಯ 10th station ನಲ್ಲಿ vending machine ನಲ್ಲಿ 500 ಯೆನ್ ಬಡಿದು 500 ml ನ ಎರಡು ನೀರು ಬಾಟಲಿಯನ್ನು ಖರೀದಿಸಿದೆವು. ಟೋಕಿಯೋದಲ್ಲಿ ಅದೇ ನೀರಿನ ಬಾಟಲಿಗೆ 120 ಯೆನ್ (ಸುಮಾರು 48 ರೂಪಾಯಿಗಳು). ಫ್ಯುಜಿ ಪರ್ವತದ ತಲೆಯಿಂದ ಹಿಡಿದು...ಸುತ್ತಮುತ್ತಲಿನ ಜಾಗವನ್ನು cultural heritage centre ಮಾಡಲು ಹೊರಟಿರುವುದರಿಂದ ಅಲ್ಲಿ ಎಲ್ಲಿಯೂ ಕಸವನ್ನು ಎಸೆಯುವಂತೆ ಇಲ್ಲ. ಕಸದ ಡಬ್ಬಿಯೇ ಇಲ್ಲ. ತಿಂಡಿ ಕಟ್ಟಿಕೊಂಡು ಹೋದ plastic cover, ನೀರಿನ ಬಾಟಲಿ...ಎಲ್ಲವನ್ನೂ ತಿರುಗಿ ಮನೆಗೇ ಕಟ್ಟಿಕೊಂಡು ಹೋಗಬೇಕು!

ಬಿಸಿಲು ಜಾಸ್ತಿಯಾಗುವುದರೊಳಗೆ ಇಳಿಯಲು ತೊಡಗಬೇಕಿತ್ತು. ಬೆಳಿಗ್ಗೆ 6:00 ಘಂಟೆಗೆ ಇಳಿಯಲು ಪ್ರಾರಂಭಿಸಿದೆವು. ಸೂರ್ಯ ಹುಟ್ಟಿ ಸ್ವಲ್ಪ ಹೊತ್ತಿನಲ್ಲಿಯೇ ಬಿಸಿಲು ಎಷ್ಟು ಪ್ರಖರವಾಗಿ ಸುಡುತ್ತಿರುತ್ತದೆ ಎಂದರೆ ಚಳಿಯೇ ಚೆನ್ನಾಗಿತ್ತು ಎನಿಸುವಷ್ಟು! ಇಳಿಯುವ ದಾರಿ ಕೂಡ ತುಂಬಾ ಕಷ್ಟವೇ. ತುಂಬಾ ಇಳಿಜಾರು...ಜಾರುವ ಗೊಚ್ಚು ಮಣ್ಣು. ಕಾಲಿನ ಮಂಡಿಯನ್ನು ಬಗ್ಗಿಸದೇ ನಡೆಯಬೇಕು. ಬೆರಳುಗಳೆಲ್ಲಾ ಬೂಟಿನ ತುದಿ ಹೋಗಿ ಒತ್ತಿಕೊಂಡು ಉಗುರಿನಲ್ಲಿ ಅಸಾಧ್ಯ ನೋವು ಉಂಟುಮಾಡುತ್ತವೆ. ಬಿಸಿಲಿನ ಝಳ ತಡೆಯಲು ಅಸಾಧ್ಯ. ಎಂಥಾ sunscreen lotion ಕೂಡ ಉಪಯೋಗಕ್ಕೆ ಬರಲಿಲ್ಲ. ಹಸಿವು, ಬಿಸಿಲು ಎರಡೂ ಸೇರಿ ಜೀವ ಹಿಂಡುತ್ತಿದ್ದವು. ಸುಧಾರಿಸಿಕೊಳ್ಳೋಣವೆಂದರೆ ಸುಟ್ಟು ಉರಿದು ಹೋಗುವಷ್ಟು ಬಿಸಿಲು. ಆದರೂ ಮುಂದೆ ನಡೆಯಲು ಅಸಾಧ್ಯ ಎನಿಸಿದಾಗ ಅಲ್ಲಲ್ಲಿ ನಿಂತು ಒಂದೆರಡು ಕ್ಷಣ ಸುಧಾರಿಸಿಕೊಳ್ಳುತ್ತಾ 11:30 ಕ್ಕೆ 5th station ಗೆ ಬಂದು ತಲುಪುವಷ್ಟರಲ್ಲಿ ಮುಖ, ಕುತ್ತಿಗೆಯೆಲ್ಲಾ ಸುಟ್ಟು ಕೆಂಪಗಾಗಿ ಉರಿಯತೊಡಗಿದ್ದವು. ನಾವು reserve ಮಾಡಿಸಿಕೊಂಡಿದ್ದ bus ಅರ್ಧ ಘಂಟೆಯಷ್ಟು ಅಂತರದಲ್ಲಿ ತಪ್ಪಿಹೋಗಿತ್ತು. ಅಲ್ಲೇ ಏನೋ ತಿಂದು ಬೇರೆ bus ಹಿಡಿದು...ನಂತರ train ಹಿಡಿದು ಕಸದ bag ನ ಜೊತೆ ಮನೆಗೆ ಬಂದು ತಲುಪುವಷ್ಟರಲ್ಲಿ ಭಾನುವಾರ ಅಗಸ್ಟ್ 10 ರ ಸಂಜೆ 6:30. ಅನ್ನ ಒಂದನ್ನು ಮಾಡಿ ಮೊಸರು ಹಾಕಿ ಉಂಡರೆ ಸ್ವರ್ಗ ಸುಖ.... ಮಲಗಿದ್ದೊಂದೇ ಗೊತ್ತು...ಮರುದಿನ ಬೆಳಿಗ್ಗೆ ಏಳುವಷ್ಟರಲ್ಲಿ ಮುಖ sunburn ನಿಂದಾಗಿ ಸಿಪ್ಪೆ ಸುಲಿದುಕೊಳ್ಳಲು ತೊಡಗಿತ್ತು... ಪೊರೆ ಕಳಚುತಿದ್ದ ಹಾವಿನಂತೆ!

Photo ಗಳಿಗಾಗಿ ಕ್ಲಿಕ್ಕಿಸಿ…
http://picasaweb.google.co.in/seemahegde78/FujiSanBlog?authkey=Tzu91JLlf38

August 27, 2008

ಅಂಟು

ಈಗಂತೂ ಎಷ್ಟೆಲ್ಲಾ ಬಗೆಯ ಅಂಟುಗಳು ಮಾರುಕಟ್ಟೆಗೆ ಬಂದಿವೆ. ಮೊನ್ನೆ ಅಂಟು ತೆಗೆದುಕೊಳ್ಳಲೆಂದು ಇಲ್ಲಿನ ಒಂದು ಮಾರುಕಟ್ಟೆಯಲ್ಲಿ ಹೋಗಿ ನೋಡಿದೆ ಒಮ್ಮೆ ಬೆರಗಾಗಿ ನಿಂತೆ! ಒಂದು ನಿಮಿಷದಲ್ಲಿ ಎರಡು ವಸ್ತುಗಳನ್ನು ಅಂಟಿಸುವ ಫೆವಿಕಾಲ್ ನಂತಹ ಅಂಟಿನಿಂದ ಹಿಡಿದು ಒಂದೇ ಸೆಕೆಂಡಿನಲ್ಲಿ ಅಂಟಿಸುವ ಫೆವಿಕ್ವಿಕ್ ತರದ ಅಂಟಿನ ನಡುವೆ ಅದೆಷ್ಟು ಅಂಟುಗಳು ಬಂದು ನಮ್ಮನ್ನೂ ನಡುವೆ ಸಿಕ್ಕಿಸಿಕೊಂಡು ಆಯ್ಕೆಯನ್ನು ಕಷ್ಟ ಮಾಡಿಬಿಟ್ಟಿವೆ ಎನಿಸಿತು. ನಂತರ ಯಾವುದೋ ಒಂದು ಅಂಟನ್ನು ತೆಗೆದುಕೊಂಡು ಮನೆಯತ್ತ ನಡೆಯತೊಡಗಿದರೆ ದಾರಿಯಲ್ಲಿ ಅಂಟಿನ ಆಲೋಚನೆ ಮಾತ್ರ ತಲೆಗೆ ಅಂಟಿಕೊಂಡೇ ಇತ್ತು.

ನಾನು ಚಿಕ್ಕವಳಿದ್ದಾಗ ಗೊತ್ತಿದ್ದುದು ಒಂದೇ ಅಂಟು. ಬೇಸಿಗೆಯಲ್ಲಿ ಅಪ್ಪ ಗೇರು ಮರಕ್ಕೆ ಕತ್ತಿಯಿಂದ ಕಚ್ಚು ಹಾಕಿ ಗಾಯ ಮಾಡಿ, ಹಲವಾರು ದಿನಗಳವರೆಗೆ ಕಾಯ್ದು, ಆ ಗಾಯದಿಂದ ಸೋರಿದ ಗಟ್ಟಿಯಾದ ಅಂಟನ್ನು ತೆಗೆದು ಬಾಟಲಿಯಲ್ಲಿ ನೀರು ಹಾಕಿ ಆ ನೀರಿನಲ್ಲಿ ಅಂಟನ್ನು ಎರಡು ದಿನ ಮುಳುಗಿಸಿಟ್ಟು ನಂತರ ಅದನ್ನು ಕದಡಿ ಮಾಡಿದ, ಬಾಟಲಿಯ ಮುಚ್ಚಳವನ್ನು ತೆಗೆದರೆ ಕೆಟ್ಟ ವಾಸನೆ ಬೀರುತ್ತಿದ್ದ ಗೇರು ಮರದ ಅಂಟು. ತೆಂಗಿನ ಹಿಡಿಯ ಕಡ್ಡಿಗೆ ಹತ್ತಿಯನ್ನು ಸುತ್ತಿ ಮಾಡಿದ ಜುಂಜು ಅದನ್ನು ಹಚ್ಚುವ ಸಾಧನ. ನನಗೆ ಮತ್ತು ರಘುನಿಗೆ ಕಿತ್ತುಹೋದ ಪುಸ್ತಕದ ಹಾಳೆಗಳನ್ನು ಅಂಟಿಸಲು, ಗಾಳಿಪಟ ಮಾಡಲು ಅಪ್ಪ ಆ ಅಂಟನ್ನು ರೇಶನ್ ತರಹ ಕೊಡುತ್ತಿದ್ದರು - ಎಂದೋ ಒಡೆದು ಹೋದ ಗಾಜಿನ ಬಾಟಲಿಯ ಪ್ಲಾಸ್ಟಿಕ್ ಮುಚ್ಚಳದಲ್ಲಿ! ಅದು ಬೇಸಿಗೆಯಲ್ಲಿ ಕಾಗದವನ್ನು ಸುಮಾರು ಒಂದು ಒಪ್ಪತ್ತಿನಲ್ಲಿ ಅಂಟಿಸಿದರೆ, ಮಳೆಗಾಲದಲ್ಲಿ ಮಾತ್ರ ವಾರಗಟ್ಟಲೆ ತೆಗೆದುಕೊಂಡು ಅಂಟು ಹಚ್ಚಿದ ಜಾಗದಲ್ಲಿ (ಸಾಮಾನ್ಯವಾಗಿ ಪುಸ್ತಕದ ಕಿತ್ತು ಹೋದ ಹಾಳೆಗಳ ನಡುವಿನಲ್ಲಿ) ಬೂಸ್ಟು ಬೆಳೆಯುವಂತೆ ಮಾಡುತ್ತಿತ್ತು.


ನಂತರ ಬಂತು camel ನವರ ಅಂಟು ಕೆಂಪು ಮುಚ್ಚಳದ ಟ್ಯೂಬಿನಲ್ಲಿ. ಅದು ಆಗಿನ ಕಾಲದ ಅದ್ಭುತ ಅಂಟು! ತುಟ್ಟಿ ಬೇರೆ. ಅಪ್ಪ ಅದನ್ನು ನಮಗೆ ಮುಟ್ಟಲೂ ಕೂಡ ಕೊಡುತ್ತಿರಲಿಲ್ಲ. ಪುಸ್ತಕದ ಹಾಳೆಗಳು ಕಿತ್ತು ಹೋಗಿದ್ದರೆ ತಾವೇ ಹಚ್ಚಿಕೊಡುತ್ತಿದ್ದರು. ಗೇರು ಮರಕ್ಕೆ ಕಚ್ಚು ಹಾಕುವುದನ್ನು ಬಿಟ್ಟು ಬಿಟ್ಟಿದ್ದರು. ಗೇರು ಮರಕ್ಕೆ ಗಾಯ ಮಾಡುವುದು ಅಪ್ಪನಿಗೂ ಮನಸ್ಸಿರಲಿಲ್ಲವೆಂದು ಕಾಣಿಸುತ್ತದೆ. ಬಹುಶ ಬೇರೆ ಉಪಾಯ ಕಾಣದೆ ಮಾಡುತ್ತಿದ್ದರು. ಗಾಳಿಪಟಕ್ಕೆ ಗೇರು ಮರದ ಅಂಟು ಸಿಗದ ಕಾರಣ ನಾವು ಅಮ್ಮ ಮಾಡಿ ಕೊಡುವ ಮೈದಾ ಹಿಟ್ಟಿನ ಅಂಟಿಗೆ shift ಆದೆವು. ಶಾಲೆಯ ಪರಪರೆಗೂ ಅದೇ ಅಂಟು. ಅಜ್ಜನ ಮನೆಗೆ ಪತ್ರ ಬರೆದರೆ ಅದನ್ನು ಅಂಟಿಸಲು ಅಪ್ಪ ಬಂದು ಅದನ್ನು camel ಅಂಟಿನಿಂದ ಅಂಟಿಸುವ ತನಕ ಕಾಯುವ ತಾಳ್ಮೆ ಇಲ್ಲದೆಯೇ ಅಮ್ಮನ 'ಮುಸರೇ....' ಎಂಬ ಕೂಗಿನ ನಡುವೆಯೇ ಒಂದೆರಡು ಅನ್ನದ ಅಗುಳುಗಳನ್ನು ಹಾಕಿ ಅಂಟಿಸಿಬಿಡುತ್ತಿದ್ದೆವು!

ನಂತರ ಒಂದೊಂದೇ ಹೊಸ ಹೊಸ ಅಂಟುಗಳು ಬರಲು ಪ್ರಾರಂಭವಾದವು. ಫೆವಿಕಾಲ್ ಅಂಟು ನಮಗೆ ಆಗ ಹೊಸದರಲ್ಲಿ ಅತ್ಯದ್ಭುತವಾಗಿ ಕಂಡಿತ್ತು. ಅಪ್ಪ ತಂದಿಟ್ಟ ಬಾಟಲಿಯನ್ನು ಕದ್ದು ಉಪಯೋಗಿಸಿ ಮುಚ್ಚಳವನ್ನು ಸರಿಯಾಗಿ ಹಾಕದೆ ಓಡಿ ಹೋಗಿ ಫೆವಿಕಾಲ್ ಗಾಳಿಗೆ ಪೂರ್ತಿ ಗಟ್ಟಿಯಾಗಿ ಅಪ್ಪನಿಂದ ಬೈಗುಳ ಪಡೆದದ್ದು ಇನ್ನೂ ನೆನಪಿದೆ.

ಫೆವಿಕಾಲ್ ನ ನಂತರ ಎಷ್ಟೋ ಬಗೆಯ ಅಂಟುಗಳು ನಮ್ಮನೆಗೆ ಪ್ರವೇಶ ಪಡೆದಿವೆ. ಅಮ್ಮ ಕೈ ತಪ್ಪಿ ಒಡೆದುಕೊಂಡ ಉಪ್ಪಿನ ಕಾಯಿಯ ಭರಣಿಯ ಮುಚ್ಚಳವನ್ನು ಅಂಟಿಸುವ Araldite (ಎರಡು ಬೇರೆ ಬೇರೆ ಟ್ಯೂಬುಗಳಲ್ಲಿ ಬರುತ್ತಿತ್ತು. ಒಂದು ಬಿಳಿಯ ಬಣ್ಣದ ಮತ್ತು ಇನ್ನೊಂದು transparent ದ್ರವಗಳನ್ನು ಸೇರಿಸಿ ಚೆನ್ನಾಗಿ ತಿಕ್ಕಿ ಬಳಸುವಂತದು), ಸೋರುತ್ತಿದ್ದ ನಲ್ಲಿಯನ್ನು ಸರಿಪಡಿಸುವ M-seal (ಕೆಟ್ಟ ವಾಸನೆಯ ಎರೆಡು ರಬ್ಬರಿನಂಥ ವಸ್ತುಗಳನ್ನು ಸೇರಿಸಿ ತಿಕ್ಕಿ ಬಳಸುವಂಥದು), ಚಪ್ಪಲಿ ಅಂಟಿಸುವ Fevibond ಇನ್ನೂ ಏನೇನೋ ಸಣ್ಣ ಸಣ್ಣ ವಸ್ತುಗಳನ್ನು ಅಂಟಿಸುವ Feviquick, ಒಂದೇ ಎರಡೇ ಹತ್ತು ಹಲವಾರು ಬಗೆಯ ಅಂಟುಗಳು. ಈ ಎಲ್ಲ ಅಂಟುಗಳು ಮನೆ ಪ್ರವೇಶಿಸುವ ಹೊತ್ತಿಗೆ ನಾವೂ ಬೆಳೆದು ದೊಡ್ದವರಾಗಿದ್ದರಿಂದ ಅಪ್ಪ ಅವನ್ನು ಅಡಗಿಸಿಡುವ ಗೋಜಿಗೆ ಹೋಗುತ್ತಿರಲಿಲ್ಲ. ನಾವೂ ಜಾಗ್ರತೆಯಿಂದ ಬಳಸುವುದನ್ನು ಕಲಿತಿದ್ದೆವು. ಇಂದೂ ಸಹ ಅಪ್ಪನ ಹರಗಣದ ಪೆಟ್ಟಿಗೆಯಲ್ಲಿ ಹುಡುಕಿದರೆ ಇವುಗಳ ಅವಶೇಷಗಳು ಕಾಣ ಸಿಗುತ್ತವೆ. ಆದರೆ ಗೇರು ಮರದ ಅಂಟು ಮಾತ್ರ ಅವಶೇಷವೂ ಇಲ್ಲದಂತೆ ಮಾಯವಾಗಿದೆ. ಅದನ್ನು ಹಾಕಿ ಹಾಕಿ ಕಪ್ಪು ಬಣ್ಣಕ್ಕೆ ತಿರುಗಿದ್ದ ಬಾಟಲಿಯನ್ನೂ ಅಪ್ಪ ಎಂದೋ ಎಸೆದುಬಿಟ್ಟಿದ್ದಾರೆ. ಆದರೆ ಅದರ ವಾಸನೆ ಮಾತ್ರ ಇಂದಿಗೂ ಮೂಗಿನಲ್ಲಿಯೇ ಇದ್ದಂತಿದೆ ಮತ್ತು ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ Aralditeನ ಜಾಹೀರಾತು ಕೂಡ ನೆನಪಿದೆ – “ಒಡೆದ ಹಾಲು ಮತ್ತು ಒಡೆದ ಹೃದಯಗಳನ್ನು ಬಿಟ್ಟು ಉಳಿದೆಲ್ಲವನ್ನೂ ಜೋಡಿಸುತ್ತದೆ!!”


ಯಾವ ಅಂಟು ಇದ್ದರೆಷ್ಟು ಬಿಟ್ಟರೆಷ್ಟು? ಇಂದು ನನಗೆ, ರಘುನಿಗೆ ಗಾಳಿಪಟ ಮಾಡಲೂ ಪುರಸೊತ್ತಿಲ್ಲ, ಪತ್ರ ಬರೆಯಲೂ ಪುರಸೊತ್ತಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡುವುದೇ ವರ್ಷಕ್ಕೊಮ್ಮೆ. ಜೀವನದಲ್ಲಿ ತಾಳ್ಮೆ, ಪುರಸೊತ್ತು ಕಡಿಮೆ ಆಗುತ್ತಾ ಹೋದಂತೆಲ್ಲಾ, ಕ್ಷಣಮಾತ್ರದಲ್ಲಿ ಒಣಗುವ ಅಂಟಿನ ಅಗತ್ಯ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇಷ್ಟೆಲ್ಲಾ ಅಂಟುಗಳು ಇರದಿದ್ದ ಕಾಲದಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಳ್ಳುತ್ತಿದ್ದರು; ಸಂಬಂಧಗಳ ಮೂಲಕ. ದುರದೃಷ್ಟವಶಾತ್ ಇಂದು ಇಷ್ಟೆಲ್ಲಾ ಅಂಟುಗಳ ನಡುವೆಯೂ ನಮ್ಮನ್ನು ಇನ್ನೊಬ್ಬರಿಗೆ ಅಂಟಿಸುವ ಅಂಟು ಮಾತ್ರ ಕಾಣುತ್ತಿಲ್ಲ. ಎಲ್ಲರಿಗೂ ಅಂಟಿಸಿಕೊಳ್ಳದೇ ಇರುವುದೇ ಇಷ್ಟ.

ಕಂಚಿಗೆ ಹೋದರೂ … (ಉತ್ತರ ಕನ್ನಡದ ಗಾದೆ – 187)

ಕಂಚಿಗೆ ಹೋದರೂ ಮಂಚಕ್ಕೆ ನಾಲ್ಕೇ ಕಾಲು.
ನಮ್ಮ ಊರಿನಲ್ಲಿ ಇರುವ ಎಲ್ಲಾ ಮಂಚಗಳಿಗೂ ನಾಲ್ಕು ಕಾಲು, ಆದರೆ ಕಂಚಿ ಪಟ್ಟಣಕ್ಕೆ ಹೋಗಿ ನೋಡಿದರೂ ಅಲ್ಲಿನ ಮಂಚಗಳಿಗೂ ನಾಲ್ಕೇ ಕಾಲು. ಯಾವುದೋ ಒಂದು ವಿಷಯ ಎಲ್ಲಿದ್ದರೂ, ಎಂದಿದ್ದರೂ ಸತ್ಯವೇ ಎಂದು ಸರ್ವಕಾಲಿಕ ಸತ್ಯದ ಬಗ್ಗೆ ಹೇಳುವಾಗ ಬಳಸಬಹುದು. ಇನ್ನೊಂದು ಸಂದರ್ಭ ಎಂದರೆ, ಜನರ ನಡುವಳಿಕೆ, ಸ್ವಭಾವಗಳು ಎಲ್ಲಿ ಹೋದರೂ ಒಂದೇ ರೀತಿ ಎನ್ನುವಾಗ ಕೂಡ ಬಳಸಬಹುದು.

August 22, 2008

ಹೆಣ ಹೊರುವವನಿಗೆ … (ಉತ್ತರ ಕನ್ನಡದ ಗಾದೆ – 186)

ಹೆಣ ಹೊರುವವನಿಗೆ ಏನೋ ಭಾರವಾ?
'ಏನೋ' ಎನ್ನುವುದನ್ನು ನಿಮ್ಮ ಊಹೆಗೆ ಬಿಡುತ್ತೇನೆ. ಅಥವಾ ಬೇರೆ ಯಾರಿಗಾದರೂ ಗೊತ್ತಿದ್ದರೆ ಕೇಳಿಕೊಳ್ಳಿ!
ಪೂರ್ತಿ ಹೆಣವನ್ನೇ ಹೊರುತ್ತಿದ್ದಾಗ 'ಏನೋ' ಭಾರವಾಗುವುದಿಲ್ಲ.
ಅಂತೆಯೇ, ಒಂದು ದೊಡ್ಡ ಕೆಲಸವನ್ನೇ ಮಾಡುತ್ತಿರುವವನಿಗೆ ಅದರ ಜೊತೆಗಿನ ಸಣ್ಣ ಕೆಲಸವೇನೂ ಕಷ್ಟವಲ್ಲ ಎಂಬ ಅರ್ಥ. ಇದು ಅಶ್ಲೀಲ ಗಾದೆಯಾದ್ದರಿಂದ ಸಾಮಾನ್ಯವಾಗಿ ಇದನ್ನು ಬೇರೆಯವರ ಕೆಲಸವನ್ನು ಮನಸ್ಸಿಲ್ಲದಿದ್ದರೂ ಮಾಡಬೇಕಾಗಿ ಬಂದಾಗ ಅದರ ಜೊತೆ ಬಂದು ಸೇರುವ ಇನ್ನೊಂದು ಕೆಲಸದ ಬಗ್ಗೆ ಹೇಳುತ್ತಾರೆ.

August 21, 2008

ಎತ್ತು ಹೌದು … (ಉತ್ತರ ಕನ್ನಡದ ಗಾದೆ – 185)

ಎತ್ತು ಹೌದು, ಕೋಡು ಅಲ್ಲ.
ಇದನ್ನು ವಿವರಿಸುವುದು ಕಷ್ಟ. ಎತ್ತಿನ ಬಗ್ಗೆ ಹೇಳುತ್ತಿರುವವನು ಅದರ ಕೋಡನ್ನೂ ಸೇರಿಸಿ ವಿವರಣೆ ಕೊಡಬೇಕಾಗುತ್ತದೆ. ಎತ್ತು ನನ್ನದು ಆದರೆ ಅದರ ಕೋಡು ನನ್ನದಲ್ಲ ಎಂದು ಹೇಳಲು ಸಾಧ್ಯವಿಲ್ಲ.
ಬೇರ್ಪಡಿಸಲು ಸಾಧ್ಯವಿಲ್ಲದಂತಹ ವಿಷಯದಲ್ಲಿ ಯಾರಾದರೂ ಅರ್ಧ ಮಾತ್ರ ತನಗೆ ಸಂಬಂಧ ಇರುವಂಥದು, ಇನ್ನರ್ಧ ಸಂಬಂಧವಿಲ್ಲ ಎಂದು ಹೇಳಿದಾಗ ಇದನ್ನು ಹೇಳಬಹುದು.
ಇದನ್ನೇ ಇನ್ನೊಂದು ಸಂದರ್ಭದಲ್ಲಿ ಬಳಸಬಹುದು... ಯಾರೋ ಒಬ್ಬರು ಒಂದು ಘಟನೆಯನ್ನು ವಿವರಿಸುತ್ತಿರುವಾಗ, ನಡೆದ ಘಟನೆಯ ಅರ್ಧ ಭಾಗವನ್ನು ವಿವರಿಸಿ ಉಳಿದರ್ಧ ಭಾಗವೂ ಅದಕ್ಕೆ ಸಂಬಂಧವಿದ್ದರೂ ಕೂಡ ಸಂಬಂಧವಿಲ್ಲ ಎಂದು ಹೇಳಿದಾಗ.

August 20, 2008

ನಿತ್ಯ ಸಾಯುವವರಿಗೆ … (ಉತ್ತರ ಕನ್ನಡದ ಗಾದೆ – 184)

ನಿತ್ಯ ಸಾಯುವವರಿಗೆ ಅತ್ತು ಯಾರು ಪೂರೈಸುತ್ತಾರೆ?
ಸಾವನ್ನು ಪದೇ ಪದೇ ನೋಡಿದರೆ ಅದರ ಬಗ್ಗೆ ಅತೀವ ದುಃಖ ಉಂಟಾಗುವುದೇ ಇಲ್ಲವಂತೆ.
ಉದಾಹರಣೆಗೆ ಡಾಕ್ಟರುಗಳೇ ಸಾಕ್ಷಿ. ದಿನವೂ ಅದನ್ನೇ ನೋಡಿ ನೋಡಿ ಅವರು ಸಾವಿನ ಬಗ್ಗೆ ಅವರು indifferent ಆಗಿ ಬಿಟ್ಟಿರುತ್ತಾರೆ. ಒಂದು ಬಗೆಯ ನಿರ್ಲಿಪ್ತತೆಯನ್ನು ಹೊಂದಿಬಿಟ್ಟಿರುತ್ತಾರೆ.
ಅಂತೆಯೇ, ಬೇರೆಯವರಿಗೆ ಕಷ್ಟ ಬಂದಾಗ ಒಂದೆರಡು ಬಾರಿ ನಾನು ಅದಕ್ಕಾಗಿ ಕೊರುಗುತ್ತೇವೆ, ಸಹಾಯ ಮಾಡಲು ಹೋಗುತ್ತೇವೆ. ಆದರೆ ದಿನಾಲೂ ಅದೇ ಗೋಳು ಆದರೆ ನಾವು ನಂತರದಲ್ಲಿ ಅವರ ಕಷ್ಟಗಳ ಬಗ್ಗೆ ನಿರ್ಲಿಪ್ತತೆಯನ್ನು ಹೊಂದುತ್ತೇವೆ ಎಂಬ ಅರ್ಥ.

August 8, 2008

ನೆರೆ ಹಾಳಾದರೆ … (ಉತ್ತರ ಕನ್ನಡದ ಗಾದೆ – 183)

ನೆರೆ ಹಾಳಾದರೆ ಕರು ಕಟ್ಟಲು ಜಾಗವಾಯಿತು.
ಪಕ್ಕದ ಮನೆ ನಾಶವಾದರೆ ನಮ್ಮ ಮನೆಯ ಕರುವನ್ನು ಕಟ್ಟಲು ಆ ಜಾಗವನ್ನು ಉಪಯೋಗಿಸಬಹುದು ಎಂಬ ಅರ್ಥ. ಬೇರೆಯವರ ತೊಂದರೆಯಲ್ಲಿ ತಮ್ಮ ಲಾಭವನ್ನು ಹುಡುಕುವವರ ಬಗ್ಗೆ ಈ ಗಾದೆಯನ್ನು ಹೇಳಬಹುದು.

March 5, 2008

ಗಾದೆ ಹೇಳುವವನ… (ಉತ್ತರ ಕನ್ನಡದ ಗಾದೆ – 180, 181 ಮತ್ತು 182)

ಗಾದೆ ಹೇಳುವವನ ಬಾಯಿಗೆ ಬೂದಿ ಬೀಳುತ್ತದೆ.

ಹೌದು, ಹೀಗೂ ಒಂದು ಗಾದೆ ಇದೆ. ಗಾದೆ ಹೇಳುವ ರೂಢಿ ಇರುವವರು ಒಂದು ಗಾದೆ ಹೇಳಿಕೊಂಡು ತಮಗೇ ತಾವು ಹೇಳಿಕೊಳ್ಳುವ ಇನ್ನೊಂದು ಗಾದೆ ಇದು. ಹಾಗಾಗಿ ನಾನು ಕೊಟ್ಟ ಗಾದೆಗಳನ್ನೆಲ್ಲ ಹೇಳಿಕೊಂಡು ಓಡಾಡುವ idea ನಿಮಗಿದ್ದರೆ ಸ್ವಲ್ಪ ಯೋಚನೆ ಮಾಡಿ! ಇನ್ನೂ ಒಂದು ಎಚ್ಚರಿಕೆ... ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲವಂತೆ!!


ಈ ನನ್ನ ಗಾದೆಗಳ ಪ್ರವಾಹಕ್ಕೆ ಒಂದು ಅಲ್ಪವಿರಾಮ ಹಾಕುತ್ತಿದ್ದೇನೆ. ಅನಿವಾರ್ಯ ಕಾರಣಗಳಿಂದಾಗಿ ಒಂದೆರಡು ತಿಂಗಳುಗಳ ಕಾಲ blog ಜೀವನಕ್ಕೆ ವಿದ್ಯುಕ್ತವಾಗಿ ರಜೆ ಘೋಷಿಸುತ್ತಿದ್ದೇನೆ. ನಿಮ್ಮೆಲ್ಲರ ಶುಭ ಹಾರೈಕೆಗಳಿದ್ದರೆ ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಗಾದೆಗಳನ್ನು ನಿಮಗೆ ಕೊಟ್ಟೇನು. ಎಲ್ಲಾ commitment ಗಳನ್ನೂ ಮುಗಿಸಿ ಎಂದು ಹಿಂದಿರುಗುತ್ತೇನೆಂದು ನಿರ್ದಿಷ್ಟವಾಗಿ ಹೇಳಲಾರೆ. ಇತರ ಎಲ್ಲಾ ಕೆಲಸಗಳನ್ನು ಮುಗಿಸಿ ಬರುವುದು ಎಂದರೆ ತೆರೆ ಕಳೆದು ಸಮುದ್ರ ಮುಳುಗಿದಂತೆ. ಆದರೆ ಇಷ್ಟು ದಿನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನಿಮ್ಮೆಲ್ಲರನ್ನೂ ನಾನು miss ಮಾಡಿಕೊಳ್ಳಲಿರುವುದಂತೂ ನಿಜ. ಏನೋ ಒಂಥರಾ ಬೇಜಾರಾಗ್ತಾ ಇದೆ. ತನ್ನ ಮಗುವನ್ನು ಎಲ್ಲೋ ನಡುದಾರಿಯಲ್ಲಿ ಅನಾಥವಾಗಿ ಬಿಟ್ಟು ಸ್ವಲ್ಪ ಕಾಯುತ್ತಿರು ಮತ್ತೆ ಬರುತ್ತೇನೆ ಎಂದು ಹೊರಟ ಅಮ್ಮ ಆಗಿದ್ದೇನೆ ಬಹುಶ. ಹಿಂದಿರುಗಿ ಎಂದು ಬರುತ್ತೇನೆ ಎಂಬುದು ಅಮ್ಮನಿಗೂ ಸರಿಯಾಗಿ ಗೊತ್ತಿಲ್ಲ. ಅಥವಾ ನನ್ನದೇ ದೇಹದ ಒಂದು ಅಂಗವನ್ನು ಕಿತ್ತಿಟ್ಟು ಇನ್ನೆಲ್ಲೋ ಹೊರಟಂತೆ... ನಾನು ಪ್ರೀತಿಯಿಂದ ಸಾಕಿ ಸಲಹಿದ blog... ಅಯ್ಯೋ ಹೋಗ್ಲಿ ಬಿಡಿ ಯಾಕೆ ಈಗ ಅವೆಲ್ಲಾ ಪುರಾಣ?

ನಿಮಗೆಲ್ಲಾ ದಿನಾಲೂ ಒಂದು ಗಾದೆಯ ಸಲುವಾಗಿ ನನ್ನ blog ಗೆ ಇಣುಕುವ ಕೆಲಸ ತಿಪ್ಪಿತು. ಒಂದು ಗಾದೆಯನ್ನು ಓದುವ ಆಸೆಗಾಗಿ ನಾನು ಬರೆಯುತ್ತಿದ್ದ ಉಳಿದೆಲ್ಲಾ bla bla bla ಗಳನ್ನೆಲ್ಲಾ ಓದುವ ತೊಂದರೆಯಿಲ್ಲ- ಅಗುಳು ಬರುತ್ತದೆ ಎಂದು ತಿಳಿ ಕುಡಿದಂತೆ.

ಸದ್ಯಕ್ಕೆ ಮಜಾ ಮಾಡಿ. ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲ್ಲಿ ಎಂದು ಮುಂದೆ ಮತ್ತೆ ಬರಲಿದ್ದೇನೆ :)

March 4, 2008

ಬಾಲ್ಯ ಮರುಕಳಿಸಿದೆ!

ಮಕ್ಕಳಿಗೆ ಮೊದಲ ಬಾರಿಗೆ ಅಕ್ಷರ ಕಲಿತು ಓದಲು ತೊಡಗಿದಾಗ ಎನೆನಿಸುತ್ತದೆ? ಅಥವಾ ನನಗೆ ಪ್ರಥಮ ಬಾರಿಗೆ ಕನ್ನಡದ ಎಲ್ಲಾ ಅಕ್ಷರಗಳನ್ನೂ ಗುರುತಿಸಲು ಬಂದಾಗ ಎನೆನಿಸಿತ್ತು? ಈಗ ಮರೆತು ಹೋಗಿದೆ. ಆದರೆ ಅಂತಹದೇ ಒಂದು ಅನುಭವ ಮತ್ತೊಮ್ಮೆ ಆಗಿದೆ! ಹೌದು, ನನಗೀಗ ಜಪಾನಿಗಳ ಭಾಷೆಯ ಎಲ್ಲಾ ಅಕ್ಷರಗಳನ್ನೂ ಗುರುತಿಸಲು ಬರುತ್ತದೆ. ಮತ್ತೊಮ್ಮೆ ಮಗುವಾಗಿದ್ದೇನೆ. ಬಾಲ್ಯದ ನೆನಪಾಗಿದೆ. ಮಕ್ಕಳು ಅಕ್ಷರಗಳನ್ನು ಜೋಡಿಸಿ ಓದುತ್ತಿರುತ್ತಾರೆ ಆದರೆ ಆ ಶಬ್ದಗಳ ಅರ್ಥವೇನೆಂದು ಗೊತ್ತಿರುವುದಿಲ್ಲ. ನಾನೂ ಈಗ ಅದೇ ಪರಿಸ್ಥಿತಿಯಲ್ಲಿದ್ದೇನೆ. ಓದಲು ಬರುತ್ತದೆ ಆದರೆ ಬಹುತೇಕ ಶಬ್ದಗಳು ಅರ್ಥವಾಗುವುದಿಲ್ಲ. ಇಲ್ಲಿಗೆ ಬಂದ ಹೊಸದರಲ್ಲಿ ಅವರ ಎಲ್ಲಾ ಅಕ್ಷರಗಳೂ ಒಂದೇ ತರಹ ಕಾಣಿಸುತ್ತಿದ್ದವು ಮತ್ತು ಅವು ನನ್ನ ಜೀವನದಲ್ಲಿ ಅವುಗಳಿಗೆ ಯಾವುದೇ ಪ್ರಾಮುಖ್ಯತೆ ಇರಲಿಲ್ಲ. ಈಗ ಒಮ್ಮೆಲೇ ಅವಕ್ಕೆಲ್ಲಾ ಪ್ರಾಮುಖ್ಯತೆ ಬಂದಿದೆ ಏಕೆಂದರೆ they do make sense to me! ಎಲ್ಲಿ ಯಾವ ಅಕ್ಷರಗಳು ಕಂಡರೂ ಓದಲು ಖುಷಿಯಾಗುತ್ತದೆ. ಏನೋ ಸಾಧಿಸಿದ ಭಾವನೆ! ಕನ್ನಡ ಓದಲು ಬಂದಾಗ ಏನೆನಿಸಿರಬಹುದೆಂದು ಈಗ ನಿಜವಾಗಿಯೂ ಅರ್ಥವಾಗಿದೆ.

ಜಪಾನಿಗಳ ಭಾಷೆಗೆ ಮೂರು ವಿಧದ ಲಿಪಿಗಳಿವೆ. ‘ಹಿರಗನಾ’, ‘ಕತಕನಾ’ ಮತ್ತು 'ಕಾಂಜಿ'. ಹಿರಗನಾ ಲಿಪಿಯನ್ನು ಬಳಸಿ ಕೇವಲ ಜಪಾನಿಗಳ ಹೆಸರುಗಳು, ಸ್ಥಳಗಳು, ಮತ್ತು ವಸ್ತುಗಳನ್ನು ಬರೆಯಲಾಗುತ್ತದೆ. ಇನ್ಯಾವುದೇ ಜಪಾನಿನ ಹೊರತಾದ ಹೆಸರು, ಸ್ಥಳಗಳು, ವಸ್ತುಗಳನ್ನು ಬರೆಯುವಾಗ ಕತಕನಾ ಲಿಪಿಯನ್ನೇ ಬಳಸಬೇಕು. ಇನ್ನೊಂದು ಚೀನೀಯರಿಂದ ಎರವಲು ಪಡೆದ ಲಿಪಿ- ಕಾಂಜಿ. ಒಂದೇ ಒಂದು ಚಿತ್ರ ಏನೆಲ್ಲಾ ಹೇಳುತ್ತದೆ; ಬಹಳ complicated. ನನಗೆ ಕೇವಲ ಏಳೆಂಟು ಕಾಂಜಿಯನ್ನು ಗುರುತಿಸಲು, ಬರೆಯಲು ಬರುತ್ತದೆ ಅಷ್ಟೇ. ಅವೂ ಕೂಡ ಅತ್ಯಂತ ಸರಳವಾದವು. ಒಂದೇ ಕಾಂಜಿಗೆ ಕೆಲವೊಮ್ಮೆ ಎರಡು ಮೂರು ಅರ್ಥಗಳೂ ಇರುವುದು ಉಂಟಂತೆ. ಅವು ಸಂದರ್ಭದ ಮೇಲೆ ನಿರ್ಧಾರವಾಗುವಂಥವು. ಜಪಾನಿಗಳ computer ನಲ್ಲಿ ಹಿರಗನಾ ಲಿಪಿಯಲ್ಲಿ type ಮಾಡುತ್ತಾ ಹೋದಂತೆ ಅದು ಸಾಧ್ಯವಾದಷ್ಟು ಮಟ್ಟಿಗೆ ಕಾಂಜಿಯಾಗಿ ಪರಿವರ್ತಿಸುತ್ತದೆ; ನಾವು ಗೂಗಲ್ ಕನ್ನಡದಲ್ಲಿ type ಮಾಡುವಾಗ ತನ್ನಷ್ಟಕ್ಕೆ ತಾನು ಕೆಲವು ಶಬ್ದಗಳನ್ನು ಪರಿವರ್ತಿಸಿದಂತೆ. ಕಾಂಜಿಯನ್ನು ಬರೆಯಲು ತುಂಬಾ ಕ್ಲಿಷ್ಟಕರ ಎನಿಸುವುದರಿಂದ ಹೆಚ್ಚುಪಾಲು ಜಪಾನಿಯರಿಗೆ ಬಹಳಷ್ಟು ಕಾಂಜಿಯನ್ನು ಓದಲು ಮಾತ್ರ ಬರುತ್ತದೆ, ಬರೆಯಲು ಬರುವುದಿಲ್ಲ ಎಂದು ಕೇಳಿದ್ದೇನೆ. ಹಿರಗನಾ ಲಿಪಿಗೆ ಸರಳವಾದ 46 ಅಕ್ಷರಗಳು (syllable ಎನ್ನಬಹುದು) ಮತ್ತು 58 modified syllable ಗಳು ಇವೆ. ಅಂತೆಯೇ ಕತಕನಾ ಲಿಪಿಗೆ 46 syllable ಗಳು ಮತ್ತು 79 modified syllable ಗಳು ಇವೆ. ಅವೆಲ್ಲವನ್ನೂ ನಾನು ಈಗ ಓದಬಲ್ಲೆ, ಬರೆಯಬಲ್ಲೆ. ಬಾಲ್ಯ ಮರುಕಳಿಸಿದೆ!

ಆರತಿ ತೆಗೆದುಕೊಂಡರೆ… (ಉತ್ತರ ಕನ್ನಡದ ಗಾದೆ – 179)

ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ.

ಮಂಗಳಾರತಿಯ ಬಳಿ ಕೈ ತೆಗೆದುಕೊಂಡು ಹೋದರೆ ಸಾಕು ಉಷ್ಣವಾಗಿಬಿಡುತ್ತದೆ. ಕುಡಿದ ಒಂದೇ ಒಂದು ಚಮಚ ತೀರ್ಥ ಶೀತವನ್ನುಂಟುಮಾಡುತ್ತದೆ. ಅತ್ಯಂತ ನಾಜೂಕಿನ ಮನುಷ್ಯರ ಬಗೆಗಿನ ಮಾತು ಇದು. ಎಲ್ಲರೂ ತಿನ್ನುವ, ಕುಡಿಯುವ ವಸ್ತುಗಳು ಅಂಥವರ ಆರೋಗ್ಯವನ್ನು ಕೆಡಿಸುತ್ತವೆ. ಯಾರಾದರೊಬ್ಬರು ತನಗೆ ಅದನ್ನು ತಿಂದರೆ, ಇದನ್ನು ಕುಡಿದರೆ ಆರೋಗ್ಯ ಕೆಡುತ್ತದೆ ಎಂದು ಹೇಳುತ್ತಿದ್ದರೆ ನೀವು ಈ ಮಾತನ್ನು ಉದಾಹರಿಸಬಹುದು.

March 3, 2008

ಮುಂಡೆಯ ಮದುವೆಗೆ… (ಉತ್ತರ ಕನ್ನಡದ ಗಾದೆ – 178)

ಮುಂಡೆಯ ಮದುವೆಗೆ ಮುನ್ನೂರು ವಿಘ್ನ.

ಅವಳು ವಿಧವೆ, ಅವಳಿಗೆ ಮರು ಮದುವೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಆ ಮದುವೆಗೆ ಒಂದಲ್ಲ ಒಂದು ಅಡೆತಡೆ ಬರುತ್ತಲೇ ಇದೆ. ನಾವು ಕಷ್ಟಪಟ್ಟು ಮಾಡುತ್ತಿರುವ ಅಪರೂಪದ, ಮತ್ತು ಒಳ್ಳೆಯ ಉದ್ದೇಶದ ಕೆಲಸಕ್ಕೆ ಪದೇ ಪದೇ ಅಡ್ಡಿ ಉಂಟಾದರೆ ಈ ಮಾತನ್ನು ಬಳಸಬಹುದು.

February 29, 2008

ಮುನ್ನೋಡಿ ಪಾಯಸ … (ಉತ್ತರ ಕನ್ನಡದ ಗಾದೆ – 177)

ಮುನ್ನೋಡಿ ಪಾಯಸ ಉಣ್ಣೋ ಮೂಳಾ ಎಂದರೆ ಯಾವ ಹೊಲದ ಗಸಗಸೆ ಎಂದು ಕೇಳಿದ.

ಗಸಗಸೆಯ ಪಾಯಸ ಬಡಿಸಿದ್ದೇನೆ ಊಟ ಮಾಡು ಎಂದರೆ, ಪಾಯಸದಲ್ಲಿ ಉಪಯೋಗಿಸಿದ ಗಸಗಸೆ ಯಾವ ಹೊಲದಲ್ಲಿ ಬೆಳೆದಿದ್ದು ಎಂದು ಕೇಳಿದ್ದನಂತೆ. ನಾವು ಗಡಿಬಿಡಿಯಲ್ಲಿದ್ದಾಗ ಬೇರೆಯವರ ಬಳಿ ಏನಾದರೂ ಕೆಲಸ ಮಾಡಲು ಹೇಳಿದರೆ (ಆ ಕೆಲಸದಿಂದ ಅವರಿಗೇ ಲಾಭ ಆಗುವಂತಿದ್ದರೂ ಸಹ) ಅವರು ತಿರುಗಿ ನಮ್ಮ ಬಳಿ ಆ ಕೆಲಸ ಏಕೆ ಹಾಗೆ? ಏನು? ಎತ್ತ? ಎಂದೆಲ್ಲಾ ವಿಚಾರಿಸತೊಡಗಿದರೆ ಈ ಮಾತನ್ನು ಹೇಳಬಹುದು. ಇದಕ್ಕೊಂದು ಅಶ್ಲೀಲ ಗಾದೆ ಇದೆ. ನಾನು ಹೇಳಲ್ಲ. ಬೇಕಿದ್ರೆ ಬೇರೆ ಯಾರನ್ನಾದರೂ ಕೇಳಿ ನೋಡಿ :)

'ಉಂಡೆಲೆ ಎತ್ತೋ ಗುಂಡ ಅಂದ್ರೆ ಉಂಡೋರು ಎಷ್ಟು ಜನ ಅಂತ ಕೇಳಿದ್ನಂತೆ'- ಈ ಗಾದೆ ನನಗೆ ಮರೆತು ಹೋಗಿತ್ತು. ನೆನಪಿಸಿದ್ದಕ್ಕೆ ವಿಕಾಸನಿಗೆ ಧನ್ಯವಾದಗಳು.

February 28, 2008

ಮೂರು ದೋಸೆ … (ಉತ್ತರ ಕನ್ನಡದ ಗಾದೆ – 176)

ಮೂರು ದೋಸೆ ಕೊಡುತ್ತೇನೆ ಹಾಡು ದಾಸಯ್ಯ, ಆರು ದೋಸೆ ಕೊಡುತ್ತೇನೆ ನಿಲ್ಲಿಸು ದಾಸಯ್ಯ.

ಮನೆ ಬಾಗಿಲಿಗೆ ದಾಸಯ್ಯ ಬಂದಾಗ ಅವನಿಗೆ ಮೂರು ದೋಸೆಯ ಆಮಿಷ ತೋರಿಸಿ ಹಾಡಲು ಹೇಳಿದರೆ ನಂತರ ಅವನ ಹಾಡನ್ನು ಕೇಳಲು ಸಾಧ್ಯವಿಲ್ಲದೇ ಆರು ದೋಸೆ ಕೊಟ್ಟು ನಿಲ್ಲಿಸು ಎಂದು ಹೇಳುವ ಪ್ರಸಂಗ ಬರಬಹುದು! ಅಂತೆಯೇ ಯಾರ ಬಳಿಯಾದರೂ ಒಂದು ಸಣ್ಣ ಕೆಲಸ ಮಾಡಿಸಿಕೊಳ್ಳಲು ಏನಾದರೂ ಆಮಿಷ ತೋರಿಸಿ ನಂತರ ಅವರಿಂದ ತಪ್ಪಿಸಿಕೊಳ್ಳಲು ಇನ್ನೂ ಹೆಚ್ಚಿನ ಬೆಲೆ ತೆರಬೇಕಾದಾಗ ಈ ಗಾದೆಯನ್ನು ನೆನಪಿಸಿಕೊಳ್ಳಿ.

February 27, 2008

ಹೆಚ್ಚು ಪ್ರೀತಿ ಯಾರಿಗೆ?

ಈ ಮೊದಲೊಮ್ಮೆ ಮದುವೆಯ ವಿಚಾರವನ್ನು ಬರೆದಿದ್ದೆ. ಆದರೆ ಅದನ್ನು ಪೂರ್ತಿ ಬರೆದ ಸಮಾಧಾನವಿರಲಿಲ್ಲ. ಈಗ ಅದೇ ವಿಚಾರವನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗುತ್ತಿದ್ದೇನೆ... ಹೆಣ್ಣುಮಕ್ಕಳಿಗೆ ಮದುವೆಯಾಗಿ ಹೋದ ತಕ್ಷಣ ಒಂಥರಾ ವಿಚಿತ್ರ ಅನುಭವ. ತವರು ಮನೆಯಿಂದ ಹೊರಗೆ ಕಳುಹಿಸಿಬಿಟ್ಟಿದ್ದಾರೆ. ಅದು ಇನ್ನು ಮುಂದೆ ತನ್ನ ಮನೆಯಲ್ಲ. ಆ ಮನೆಯಲ್ಲಿ ತನ್ನ existence ಗೆ ಅರ್ಥ ಇಲ್ಲ. ಅಥವಾ ಬೇರೆಯದೇ ಆದ ಅರ್ಥವಿದೆ. ಗಂಡನ ಮನೆ, ಅಲ್ಲಿಯ ಆಚಾರ ವಿಚಾರಗಳು ತೀರಾ ಹೊಸದು. ಆ ಮನೆ ತನ್ನದೆಂದು ಅನಿಸುವುದಿಲ್ಲ. ಮನೆಯೇ ಇಲ್ಲದಂತಾದ ಅನುಭವ. ಮದುವೆಯಾದ ಮರುಕ್ಷಣದಿಂದಲೇ ಅವಳ ಊರು, ಮನೆ ಎಲ್ಲವೂ ಬದಲಾಗುತ್ತದೆ. ಇದೆಲ್ಲಾ ಆಗುತ್ತದೆ ಎಂದು ಗೊತ್ತಿದ್ದರೂ ಏನೋ ಒಂದು ತರಹದ ಮನಸ್ಸು ಒಪ್ಪಿಕೊಳ್ಳಲಾರದ ಸ್ಥಿತಿ. ನಿಧಾನಕ್ಕೆ ಮನಸ್ಸಿಗೆ ಬುದ್ಧಿ ಹೇಳುತ್ತಾ ಗಂಡನ ಮನೆಗೆ ಒಗ್ಗಿಕೊಳ್ಳುತ್ತಾಳೆ. ತವರನ್ನು ಮರೆತಳೆಂದು ಅದರ ಅರ್ಥವಲ್ಲ. ಗಂಡನ ಮನೆಯಲ್ಲಿದ್ದರೂ ಅವಳಿಗೆ ತನ್ನ ತವರಿನ ಚಿಂತೆ ಇದ್ದೆ ಇದೆ. ನಾಲ್ಕು ದಿನ ತವರಿಗೆ ಬಂದರೂ ಗಂಡನ ಮನೆಯ ಚಿಂತೆಯನ್ನು ಮಾಡುತ್ತಾಳೆ! ಇದಕ್ಕೆಲ್ಲಾ ಕನ್ನಡದ ಜಾನಪದ ಸಾಹಿತ್ಯದಲ್ಲಿ ಸಾಕಷ್ಟು ಉದಾಹರಣೆಗಳಿವೆ ಬಿಡಿ. ಅವಳಿಗೆ ಗಂಡನ ಮನೆಯ ಮೇಲೆ ಜಾಸ್ತಿ ಪ್ರೀತಿಯೋ ಅಥವಾ ತವರು ಮನೆಯ ಮೇಲೋ? ಗಂಡನ ಮೇಲೆ ಜಾಸ್ತಿ ಪ್ರೀತಿಯೋ ಅಥವಾ ಅಣ್ಣ/ತಮ್ಮನ ಮೇಲೋ? ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ.

ಇದು ನಾನು ಇಲ್ಲಿಗೆ ಬಂದು ತಲುಪುವ ಮುನ್ನ ಇನ್ನೂ ಧಾರವಾಡದಲ್ಲಿ ಇದ್ದಾಗಲೇ ನಡೆದ ಮಾತುಕತೆ. ನನ್ನ ಬಳಿ computer ಇರದಿದ್ದ ಕಾರಣ ಮತ್ತು ನನ್ನ ಕೆಲಸ ತುಂಬಾ urgent ಇದ್ದ ಕಾರಣ ನನ್ನ junior ರಾಜೇಶನ room ನಲ್ಲಿ ಕುಳಿತು ಅವನ computer ನಲ್ಲಿ ನನ್ನ ಕೆಲಸ ಮಾಡಿಕೊಳ್ಳುತ್ತಿದ್ದೆ. ನನ್ನ ಹತ್ತಿರದವರೆಲ್ಲರಿಗೂ ಗೊತ್ತು ನನ್ನ ಮಾತಿನಲ್ಲಿ ಪದೇ ಪದೇ ಇಣುಕುವವರೆಂದರೆ ರಾಜೀವ ಮತ್ತು ರಘು. ರಾಜೀವ ಗಂಡನಾದರೆ ರಘು ನನ್ನ ತಮ್ಮ. ಅಂತೆಯೇ ರಾಜೇಶನ ಜೊತೆಯಲ್ಲಿ ಮಾತನಾಡುವಾಗಲೂ ನಾನು ಎಂದಿನಂತೆಯೇ ರಾಜೀವ...ರಘು....ಎಂದಿರಬೇಕು... ಒಂದು ದಿನ ಏನೋ ಬರೆಯುತ್ತಾ (type ಮಾಡುತ್ತಾ) ಕುಳಿತಿದ್ದೆ; ರಾತ್ರಿಯಾಗಿಬಿಟ್ಟಿತ್ತು. ರಾಜೇಶ ನನ್ನನ್ನು ನನ್ನ room ನ ವರೆಗೂ ಕಳುಹಿಸಲೆಂದು ಬಂದ. ದಾರಿಯಲ್ಲಿ ನನ್ನನ್ನು ಕೇಳಿದ, "ನಿನಗೆ ಯಾರ ಮೇಲೆ ಹೆಚ್ಚು ಪ್ರೀತಿ? ರಘುನ ಮೇಲೋ ರಾಜೀವನ ಮೇಲೋ?" ನನಗೆ ತಕ್ಷಣದಲ್ಲಿ ನೆನಪಾಗಿದ್ದು ರಘು ಹೇಳಿಕೊಟ್ಟ readymade ಉತ್ತರ. "ಪ್ರೀತಿ ಎನ್ನುವುದು ಹಾಗೆ ಅಳೆಯಲು, ಚೂರು ಮಾಡಿ ಇಬ್ಬರಿಗೂ ಕೊಡಲು ಬಾರದ್ದು. ಅದನ್ನು ಇಡಿಯಾಗಿಯೇ ಇಬ್ಬರಿಗೂ ಕೊಡುತ್ತೇನೆ." (ಇದು Indian Army ಯ officer’s ಪರೀಕ್ಷೆಯ psychological test ನಲ್ಲಿ ಖಾಯಂ ಕೇಳುವ ಪ್ರಶ್ನೆಯಂತೆ; ಅಭ್ಯರ್ಥಿ ಒಂದು ವೇಳೆ select ಆದರೆ ತನ್ನ ಕೆಳಗಿನ ಸೈನಿಕರ ನಡುವೆ ತಾರತಮ್ಯ ತೋರುತ್ತಾನೋ ಇಲ್ಲವೊ ಎಂದು ಅಳೆಯಲು! ಹಾಗೆಯೇ ಅವನಿಗೂ ಕೇಳಿದ್ದರಂತೆ. ಇದೇ ಉತ್ತರವನ್ನೂ ಕೊಟ್ಟಿದ್ದನಂತೆ!).

ರಾಜೇಶನಿಗೆ ಸಮಾಧಾನವಾದಂತೆ ಕಾಣಲಿಲ್ಲ. ಮತ್ತೆ ಕೇಳಿದ, "ಇಲ್ಲ, ನೀನು ಸರಿಯಾದ ಉತ್ತರ ಹೇಳಲೇ ಬೇಕು." ನಾನೆಂದೆ, "ಅರೆ ಇದೆಂತ ಪ್ರಶ್ನೆ? ಇಬ್ಬರ ಮೇಲೂ ಅಷ್ಟೇ ಪ್ರೀತಿ." ಅವನು ಅದೇ ಉತ್ತರಕ್ಕಾಗಿ ಕಾಯುತ್ತಿದ್ದವನಂತೆ ತಕ್ಷಣ ಹೇಳಿದ, "ಎಷ್ಟೋ ವರ್ಷ ಒಟ್ಟಿಗೆ ಬದುಕಿದ ತಮ್ಮನೂ ಮತ್ತು ನಿನ್ನೆ ಮೊನ್ನೆ ಬಂದ ಗಂಡನೂ ಹೇಗೆ ಅಷ್ಟೇ ಪ್ರೀತಿಗೆ ಪಾತ್ರರಾಗುತ್ತಾರೆ? ಇಪ್ಪತೈದು ವರ್ಷ ಒಟ್ಟಿಗಿದ್ದ ತಮ್ಮನಿಗಿಂತ ಎರಡು ವರ್ಷ ನೋಡಿದ ಗಂಡನೇ ಹೆಚ್ಚಾ?" ಅರೆ ಹೌದಲ್ವಾ?!! ನಾನು ಅರೆಕ್ಷಣ ದಿಗಿಲುಗೊಂದೆ. ಅವನು ಹೇಳುತ್ತಿರುವುದು ಒಂದು ಲೆಕ್ಕದಲ್ಲಿ ನಿಜವೆನಿಸಿತು. ಒಂದು ಕ್ಷಣ ಬಿಟ್ಟು ಸುಧಾರಿಸಿಕೊಂಡು ಅವನಿಗೆ ಹೇಳಿದೆ, "ನೋಡು, ಇದರಲ್ಲಿ ಯಾರು ಹೆಚ್ಚೂ ಅಲ್ಲ, ಯಾರು ಕಡಿಮೆಯೂ ಅಲ್ಲ. ರಘುನ ಜೊತೆ ನಾನು ಇಪ್ಪತ್ತೈದು ವರ್ಷಗಳು ಬೆಳೆದಿದ್ದೇನೆ. ಆದರೆ ರಾಜೀವನ ಜೊತೆ ಮುಂದೆ ಇಪ್ಪತ್ತೈದು ವರ್ಷಗಳ ಕಾಲ ಬೆಳೆಯಲಿದ್ದೇನೆ. ರಘು ಕೂಡ ನಾಳೆ ಅವನ ಹೆಂಡತಿ ಬಂದ ಮೇಲೆ ನನ್ನನ್ನು ಪ್ರೀತಿಸಿದಷ್ಟೇ ಅವಳನ್ನೂ ಪ್ರೀತಿಸುತ್ತಾನೆ, ಪ್ರೀತಿಸಬೇಕು. ಇದು ಹೀಗೆಯೇ ನಡೆದರೆ ಮಾತ್ರ ಬದುಕಿಗೊಂದು ಅರ್ಥವಿರುತ್ತದೆ. ನಾನು ಅವನ ಬಗ್ಗೆ possessive ಆಗಲಾರೆ. ನಾನು possessive ಆದಷ್ಟೂ ಅದು ನಮ್ಮಿಬ್ಬರ ಸಂಬಂಧಕ್ಕೂ ಹಾಳು. ಅತಿಯಾದ possessiveness ಯಾವತ್ತಿದ್ದರೂ ಸಂಬಂಧವನ್ನು ಕೆಡಿಸುತ್ತದೆ. ಅವನಿಗೂ ಅವನದೇ ಆದ ಜೀವನವಿರಬೇಕು. ಅದರಲ್ಲಿ ನನಗೊಂದು ಜಾಗ ಇದ್ದರೆ ಸಾಕು. ಅಂತೆಯೇ ನನಗೂ ನನ್ನದೇ ಆದ ಜೀವನವಿದೆ, ಅದರಲ್ಲಿ ಅವನಿಗೆ ಜಾಗ ಎಂದೂ ಇದ್ದೇ ಇದೆ. ಒಬ್ಬರನ್ನೊಬ್ಬರು ಮರೆತುಬಿಡುತ್ತೇವೆ ಎಂದಲ್ಲ, ಬೇರೆ ಬೇರೆ ದಾರಿಯಲ್ಲಿ ನಡೆಯುತ್ತಿರುತ್ತೇವೆ ಅಷ್ಟೇ." ಮುಂದೆ ಅವನೂ ಮಾತನಾಡಲಿಲ್ಲ, ಅಂತೆಯೇ ನಾನೂ ಕೂಡ. ಬಹುಶ ಇಬ್ಬರೂ ಯೋಚಿಸುತ್ತಿದ್ದೆವು... ರಾಜೇಶನ ಪ್ರಶ್ನೆಯ ಬಗ್ಗೆ ನಾನು ಯೋಚಿಸುತ್ತಿದ್ದರೆ ಅವನು ನನ್ನ ಉತ್ತರದ ಬಗ್ಗೆ ಯೋಚಿಸುತ್ತಿದ್ದ.

ಬಿಸಿಯ ಹೊರತೂ… (ಉತ್ತರ ಕನ್ನಡದ ಗಾದೆ – 175)

ಬಿಸಿಯ ಹೊರತೂ ಬೆಣ್ಣೆ ಕರಗುವುದಿಲ್ಲ.

ಬೆಣ್ಣೆಯನ್ನು ಅದರ ಪಾಡಿಗೆ ಅದನ್ನು ಇಟ್ಟರೆ ಕರಗುವುದಿಲ್ಲ. ಆದರೆ ಬಿಸಿ ತಟ್ಟಿದಾಗ ಮಾತ್ರ ತಟ್ಟನೆ ಕರಗುತ್ತದೆ. ಅಂತೆಯೇ, ಕೆಲವೆಡೆ ನಾವು ಸುಮ್ಮನೆ ಇದ್ದರೆ ಕೆಲಸವಾಗುವುದಿಲ್ಲ, ಆದರೆ ಸ್ವಲ್ಪ ಬಾಯಿ ಜೋರು ಮಾಡಿದಾಗ ಅಥವಾ ಒತ್ತಡ ಹೇರಿದಾಗ ಮಾತ್ರ ಕೆಲಸ ಆಗುತ್ತದೆ ಎಂಬ ಸಂದರ್ಭದಲ್ಲಿ ಬಳಸಬಹುದು.

February 26, 2008

ಹೆದ್ದಿನಿಸು ಹಿತ್ತಲಿಗೆ… (ಉತ್ತರ ಕನ್ನಡದ ಗಾದೆ – 174)

ಹೆದ್ದಿನಿಸು ಹಿತ್ತಲಿಗೆ ಬಳಿ ಎಣ್ಣೆ ಬಚ್ಚಲಿಗೆ.

ಹೆದ್ದಿನಿಸು ಅಂದರೆ ಅಗತ್ಯಕ್ಕಿಂತ ಹೆಚ್ಚು ತಿಂದ ತಿಂಡಿ ತಿನಿಸು. ಅಗತ್ಯಕ್ಕಿಂತ ಜಾಸ್ತಿ ತಿಂದರೆ ಅದರಿಂದ ದೇಹಕ್ಕೆ ಪ್ರಯೋಜನವಿಲ್ಲ. ಅದು ವಿಸರ್ಜಿಸಿ ಹೋಗುತ್ತದೆ. ಅಂತೆಯೇ ತಲೆಯಿಂದ ಬಳಿದು ಹೋಗುವಷ್ಟು ಎಣ್ಣೆ ಹಾಕಿಕೊಂಡರೆ ಅದರಿಂದಲೂ ಪ್ರಯೋಜನವಿಲ್ಲ ಸ್ನಾನ ಮಾಡುವಾಗ ಅದು ಬಚ್ಚಲು ಮನೆಯಲ್ಲಿ ಹರಿದು ಹೋಗುತ್ತದೆ. ಯಾರಾದರೂ ಅತಿ ಎನಿಸುವಷ್ಟು ತಿನ್ನುವವರು ಅಥವಾ ದೇಹದ ಕಾಳಜಿಯ ನೆಪದಲ್ಲಿ ಅಗತ್ಯಕ್ಕಿಂತ ಜಾಸ್ತಿ ವಸ್ತುಗಳನ್ನು ಉಪಯೋಗಿಸುವವರ ಕುರಿತು ಇದನ್ನು ಹೇಳಬಹುದು.

February 25, 2008

ಹಣ ಇದ್ದರೂ … (ಉತ್ತರ ಕನ್ನಡದ ಗಾದೆ – 173)

ಹಣ ಇದ್ದರೂ ಋಣ ಇದ್ದಷ್ಟೇ ತಿನ್ನುತ್ತಾರೆ.

ಶ್ರೀಮಂತನಾದ ಮಾತ್ರಕ್ಕೆ ಜಾಸ್ತಿ ದಿನ ಬದುಕುತ್ತಾನೆ ಎಂಬುದು ಸುಳ್ಳು. ಅವನ ಬಳಿ ಎಷ್ಟು ಹಣವಿದ್ದರೂ ಋಣವಿದ್ದಷ್ಟೇ ಅನುಭವಿಸುತ್ತಾನೆ. ಯಾರಾದರೂ ಕೆಟ್ಟ ದಾರಿಯಿಂದ ಹಣ ಸಂಪಾದನೆ ಮಾಡಿ ಶ್ರೀಮಂತರಾಗಿ ಏನೋ ಕಾರಣದಿಂದ ಬೇಗ ಸತ್ತು ಹೋದರೆ ಅಥವಾ ಜೈಲು ಸೇರಿದರೆ ಈ ಮಾತು ಕೇಳಿ ಬರುತ್ತದೆ.

February 21, 2008

ಹುಚ್ಚು ಬಿಟ್ಟ … (ಉತ್ತರ ಕನ್ನಡದ ಗಾದೆ – 172)

ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ; ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.

ಒಬ್ಬನಿಗೆ ಮದುವೆಯಾಗಬೇಕೆಂಬ ಹುಚ್ಚು. ಆದರೆ ಅವನು ಹುಚ್ಚ ಎಂದು ಯಾರೂ ಹೆಣ್ಣು ಕೊಡುವವರಿಲ್ಲ. ಆದರೆ ಮದುವೆಯಾದ ಹೊರತೂ ಅವನಿಗೆ ಹುಚ್ಚು ಬಿಡುವುದಿಲ್ಲ. ಯಾವುದಾದರೂ ಎರಡು ಕೆಲಸಗಳು interdependnet ಇದ್ದು ಒಂದು ಕೆಲಸ ಆದ ಹೊರತೂ ಇನ್ನೊಂದು ಆಗುವುದಿಲ್ಲ ಎಂಬ ಸಂದರ್ಭದಲ್ಲಿ ಬಳಸಿ.

February 20, 2008

ಊರ ಉಪಕಾರಕ್ಕೆ … (ಉತ್ತರ ಕನ್ನಡದ ಗಾದೆ – 171)

ಊರ ಉಪಕಾರಕ್ಕೆ ಹೋಗಿ ಮುಲ್ಲಾ ಸೊರಗಿದ್ದ.

ಮುಲ್ಲಾ ಇಡೀ ಊರಿಗೆ ಉಪಕಾರ ಮಾಡಲು ಹೋಗಿ ಸೊರಗಿದರೂ ಅವನನ್ನು ಹೇಳುವವರು, ಕೆಳುವಾವರು ಯಾರೂ ಇರುವುದಿಲ್ಲ. ಅಂತೆಯೇ ಮಾಡಿದ ಉಪಕಾರವನ್ನು ಇನ್ನೊಬ್ಬರು ನೆನಪಿನಲ್ಲಿಟ್ಟುಕೊಳ್ಳದಿದ್ದಾಗ ಈ ಮಾತನ್ನು ಹೇಳಬಹುದು.
ಇದರಂತೆಯೇ ಇರುವ ಮಾತನ್ನು ಹಿಂದೊಮ್ಮೆ ಹಾಕಿದ್ದೇನೆ.

February 19, 2008

ಫ್ಯೂಜಿ ಪರ್ವತ

ನಮ್ಮ ಮೆನೆಯ ಹಿಂದುಗಡೆ balcony ಯಲ್ಲಿ ನಿಂತು ಪಶ್ಚಿಮ ದಿಕ್ಕಿನೆಡೆ ನೋಡಿದರೆ ಫ್ಯೂಜಿ ಪರ್ವತ ಮನೋಹರವಾಗಿ ಕಾಣಿಸುತ್ತದೆ. ಚಳಿಗಾಲವಾದ್ದರಿಂದ ಈಗ ಮೈತುಂಬಾ ಹಿಮದ ಹೊದಿಕೆಯನ್ನು ಹೊದ್ದುಕೊಂಡ ಫ್ಯೂಜಿ ಬೆಳಗಿನ ಸಮಯದಲ್ಲಿ ಪೂರ್ತಿ ಬೆಳ್ಳಗೆ ಕಾಣುತ್ತದೆ.ಸಂಜೆಯ ಹೊತ್ತಿಗೆ ಸೂರ್ಯ ಅದಕ್ಕೆ ತಾಕಿಕೊಂಡೇ ಮುಳುಗುತ್ತಾನೆ ಎನ್ನುವಂತಿರುತ್ತದೆ. ಆ ಸಮಯದಲ್ಲಿ ಸುತ್ತಮುತ್ತಲೂ ಕೇಸರಿ- ಹಳದಿ ಬಣ್ಣದ ಹಿನ್ನೆಲೆಯಲ್ಲಿ ಫ್ಯೂಜಿ ದಟ್ಟ ಬೂದು ಬಣ್ಣದಲ್ಲಿ ಕಂಡು ಕಣ್ಣಿಗೆ ಮುದ ಕೊಡುತ್ತದೆ. ಆದರೆ ಕೆಲವು electric line ಗಳು ಅಡ್ಡ ಬಂದು ನೋಡುಗರ ಕಣ್ಣಿಗೂ, ಪರ್ವತಕ್ಕೂ ನಡುವೆ ಬೇಲಿ ಕಟ್ಟುತ್ತವೆ.ಅಸಾಧ್ಯ ಚಳಿ ಇರುವ ಕಾರಣ ಅದನ್ನು ವರ್ಷದ ಎಲ್ಲ ಕಾಲದಲ್ಲಿಯೂ ಹತ್ತಲು ಅನುಮತಿ ಇರುವುದಿಲ್ಲ. ನಡು ಬೇಸಿಗೆಯಲ್ಲಿ ಕೆಲವು ದಿನಗಳು ಮಾತ್ರ ಚಾರಣಿಗರಿಗೆ ಅನುಮತಿ ಇರುತ್ತದೆ. ಅಂತಹ ದಿನಗಳಲ್ಲಿ ಆ ಪರ್ವತವನ್ನು ಲಕ್ಷಾಂತರ ಜನರು ಏರಿರುತ್ತಾರೆ. ಆ ಪರ್ವತವನ್ನು ದೇವತೆ ಎಂದು ತಿಳಿಯುವ ಜಪಾನಿಯರಲ್ಲಿ ಕೆಲವರು ತಮ್ಮ ಜೀವನದಲ್ಲಿ ಅದನ್ನು ಹಲವಾರು ಬಾರಿ ಏರಿರುತ್ತಾರೆ. 3,776 ಮೀಟರುಗಳನ್ನು ಕ್ರಮಿಸಿದ ಚಾರಣಿಗರು ರಾತ್ರಿ ಅಲ್ಲಿಯೇ ಉಳಿದು ಮರುದಿನದ ಸೂರ್ಯೋದಯವನ್ನು ನೋಡಿಕೊಂಡು ಹಿಂದಿರುಗುತ್ತಾರೆ. ಸೂರ್ಯೋದಯದ ಸಮಯದಲ್ಲಿ ಇಡಿಯ ಪರ್ವತವೂ ತಾಮ್ರದ ಬಣ್ಣದಲ್ಲಿ ಹೊಳೆಯುತ್ತದೆಯಂತೆ.


ಚಾರಣದ ಪ್ರಾರಂಭದಲ್ಲಿ.
ಫ್ಯೂಜಿ ಪರ್ವತದ ಮೇಲೆ ಸೂರ್ಯಾಸ್ತದ ನಂತರದ ರಾತ್ರಿ.
ಫ್ಯೂಜಿ ಪರ್ವತದಿಂದ ಕಾಣುವ ಸೂರ್ಯೋದಯ.

ಸೂರ್ಯೋದಯದ ಸಮಯದಲ್ಲಿ ಫ್ಯೂಜಿ ಪರ್ವತ.
ಜ್ವಾಲಾಮುಖಿ ಸಿಡಿದಾಗ ಉಂಟಾದ ಬಿರುಕುಗಳು.

ಒಂದು ದಿನಕ್ಕೆ ಪರ್ವತವನ್ನು ಏರಲು ಬರುವ ಜನಸಾಗರ!!

ಆನು, ಮಾಣಿ … (ಉತ್ತರ ಕನ್ನಡದ ಗಾದೆ – 170)

ಆನು, ಮಾಣಿ, ಗೋವಿಂದ.

ಇದನ್ನು ಗಾದೆ ಎನ್ನುವುದಕ್ಕಿಂತ ನುಡಿಗಟ್ಟು ಎನ್ನಬಹುದು. ಇದರಲ್ಲಿ ನೋಡಲು ಮೂರು ಜನರು ಸೇರಿರುವಂತೆ ಕಂಡರೂ ನಿಜವಾಗಿ ಇರುವವನು ಒಬ್ಬನೇ. ಆನು (ನಾನು) ಅವನೇ ಮಾಣಿ ಮತ್ತು ಗೋವಿಂದ ಎನ್ನುವ ಹೆಸರು ಅವನದು. ತನಗೆ ತಾನು ಹೇಳಿಕೊಂಡು ಮೂರು ಜನರಿರುವ ಕಲ್ಪನೆಯನ್ನು ಕೊಡುತ್ತಿದ್ದಾನೆ. ಯಾವುದಾದರೂ ಕೆಲಸವನ್ನು ಒಬ್ಬನೇ ಮಾಡಬೇಕು ಇನ್ಯಾರೂ ಸಹಾಯಕ್ಕೂ ಸಿಗುವುದಿಲ್ಲ ಎನ್ನುವಂಥ ಸಂದರ್ಭದಲ್ಲಿ ಇದನ್ನು ನಮಗೆ ನಾವೇ ಹೇಳಿಕೊಳ್ಳಬಹುದು. ಮನೆಯಲ್ಲಿ ಒಬ್ಬರೇ ಇದಾಗ ಕೂಡ ಹೇಳಿಕೊಳ್ಳುವ ರೂಢಿ ಇದೆ.

February 18, 2008

ಆದಷ್ಟು ಆಯಿತು … (ಉತ್ತರ ಕನ್ನಡದ ಗಾದೆ – 169)

ಆದಷ್ಟು ಆಯಿತು ಮಾದೇವ ಭಟ್ಟರ ಪುರಾಣ.

ಸುಮ್ಮನೆ ಕುಳಿತಿರುವ ಬದಲು ಮಾದೇವ (ಮಹಾದೇವ) ಭಟ್ಟರು ಪುರಾಣವನ್ನು ಅಷ್ಟಷ್ಟಾಗಿ ಓದಿ ಮುಗಿಸಿದ್ದರು. ಇಡೀ ಪುರಾಣವನ್ನು ಒಮ್ಮೆಲೇ ಓದುತ್ತೆನೆಂದು ಕುಳಿತರೆ ಆಗುವ ಕೆಲಸವಲ್ಲ. ಖಾಲಿ ಕುಳಿತುಕೊಳ್ಳದೆ ಸಮಯ ಸಿಕ್ಕಾಗಲೆಲ್ಲ ಸ್ವಲ್ಪ ಕೆಲಸ ಮಾಡಿಕೊಂಡಿದ್ದರ ಬಗ್ಗೆ ಹೇಳಬಹುದು. ಪೂರ್ತಿ ಕೆಲಸವನ್ನು ಒಮ್ಮೆಲೇ ಮಾಡಿ ಮುಗಿಸಲು ಸಾಧ್ಯವಿಲ್ಲದಿದ್ದರೂ ಚೂರು ಚೂರಾಗಿ ಮಾಡಿ ಮುಗಿಸಬಹುದು; ಮಾದೇವ ಭಟ್ಟರು ಪುರಾಣವನ್ನು ಓದಿ ಮುಗಿಸಿದಂತೆ.

February 15, 2008

ಹುಚ್ಚು ಮುಂಡೆಯ … (ಉತ್ತರ ಕನ್ನಡದ ಗಾದೆ – 166, 167 ಮತ್ತು 168)

ಹುಚ್ಚು ಮುಂಡೆಯ ಮದುವೆಯಲ್ಲಿ ಹೆಚ್ಚು ಉಂಡವನೇ ಜಾಣ.

ಇದನ್ನು 'ಮುಂಡೆಯ ಮದುವೆಯಲ್ಲಿ ಉಂಡವನೇ ಜಾಣ' ಎಂದೂ ಕೂಡ ಹೇಳುತ್ತಾರೆ. ಹೇಗಿದ್ದರೂ ಹೇಳುವವರು, ಕೇಳುವವರು ಇಲ್ಲದ ಮದುವೆ. ಅಲ್ಲಿ ಎಲ್ಲರೂ ತಮ್ಮ ತಮ್ಮ ಲಾಭವನ್ನು ನೋಡಿಕೊಳ್ಳುವವರೇ. ಸಿಕ್ಕ ಅವಕಾಶವನ್ನು ಕೈತಪ್ಪಿ ಹೋಗದಂತೆ ನೋಡಿಕೊಂಡು ಸಿಕ್ಕಷ್ಟು ದೋಚಿಕೊಳ್ಳುವವರ ಬಗೆಗಿನ ಮಾತು ಇದು. ಇದರ ಬದಲು ನೀವು ಉಪಯೋಗಿಸಬಹುದಾದಂಥವು- ಓಡಿ ಹೋಗುತ್ತಿರುವವನನ್ನು ಕಿತ್ತು ಕೊಂಡಷ್ಟೇ ಬಂತು ಮತ್ತು ಬಂದಷ್ಟೇ ಬಂತು ಬರಡೆಮ್ಮೆಯ ಹಾಲು.

February 14, 2008

ಆಳು ನೋಡಿದರೆ … (ಉತ್ತರ ಕನ್ನಡದ ಗಾದೆ – 163, 164 ಮತ್ತು 165)

ಆಳು ನೋಡಿದರೆ ಅಲಂಕಾರ, ಬಾಳು ನೋಡಿದರೆ ಬಾಯಿ ಬಡಿದುಕೊಳ್ಳುವ ಹಾಗಿದೆ.

ಮನೆಯಲ್ಲಿ ಊಟಕ್ಕೆ ಗತಿಯಿಲ್ಲದಿದ್ದರೂ ಕೂಡ ಮನೆಯ ಆಳಿಗೂ ಅಲಂಕಾರ ಮಾಡಿ ಇಟ್ಟಿದ್ದಾರೆ. ಹೊರಗಡೆಯಿಂದ ಆಳೂ ಕೂಡ ಚೆನ್ನಾಗಿಯೇ ಕಾಣುತ್ತಾನೆ. ಆದರೆ ಒಳಗಡೆಯ ಕಥೆಯೇ ಬೇರೆ. ಅಗತ್ಯ ಇದ್ದದ್ದನ್ನು ಬಿಟ್ಟು ಅನಗತ್ಯವಾದುದಕ್ಕೆ ಜಾಸ್ತಿ ಖರ್ಚು ಮಾಡಿಕೊಳ್ಳುವ ಜನರ ಬಗೆಗಿನ ಮಾತು ಇದು. ಅಥವಾ ಹೊರಗಡೆಯಿಂದ ಸ್ಥಿಥಿವಂತರಂತೆ ಕಂಡುಬಂದು ಒಳಗಡೆ ಕಷ್ಟದಲ್ಲಿರುವವರ ಬಗ್ಗೆಯೂ ಹೇಳಬಹುದು. ಇದೆ ರೀತಿಯ ಇನ್ನೊಂದು ಗಾದೆ- ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು.
ಇನ್ನೂ ಸ್ವಲ್ಪ ಬೇರೆಯ ರೀತಿಯಲ್ಲಿ ಬಳಸಬಹುದಾದರೆ, ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು.

February 13, 2008

ಸ್ವಾರ್ಥ

ಹೀಗೊಂದು ಕಥೆ...ನೀವು ಕೇಳಿದ್ದಿರಲೂ ಬಹುದು...
'ಮನುಷ್ಯ ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥ ಸಿದ್ಧಿಯಿಲ್ಲದೆ ಯಾವ ಮನುಷ್ಯನೂ ಯಾವ ಕೆಲಸವನ್ನೂ ಮಾಡಲಾರ.' ಹೀಗೆಂದು ಹೇಳಿದವರು ಅಮೇರಿಕಾದ ಹಿಂದಿನ ಅಧ್ಯಕ್ಷ ಅಬ್ರಹಾಂ ಲಿಂಕನ್. ಅವರು ತಮ್ಮ ಸ್ನೇಹಿತನ ಜೊತೆ ಮಾತನಾಡುತ್ತಿದ್ದಾಗ ಇದನ್ನು ಹೇಳಿದರು. ಸ್ನೇಹಿತ ಸುತರಾಂ ಒಪ್ಪಲಿಲ್ಲ. ಸಾಧ್ಯವೇ ಇಲ್ಲ ಎಂದು ತಳ್ಳಿ ಹಾಕಿದರು.

ಒಂದು ಭಾನುವಾರದಂದು ಇಬ್ಬರೂ ಕಾರಿನಲ್ಲಿ ಕುಳಿತು ಹೊರಟರು. ಹಳ್ಳಿಗೆ ಹೊರಟಾಗ ನಡುವೆ ದಾರಿಯಲ್ಲಿ ಅಬ್ರಹಾಂ ಲಿಂಕನ್ ಅವರು ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಹೇಳಿದರು. ಏಕೆಂದರೆ ಅವರು ಮುಳ್ಳಿನ ಬೇಲಿಯಲ್ಲಿ ಒಂದು ಹಂದಿಯ ಮರಿ ಸಿಕ್ಕಿ ಬಿದ್ದು ತಪ್ಪಿಸಿಕೊಳ್ಳಲು ಬಾರದೆ ಒದ್ದಾಡುತ್ತಿರುವುದನ್ನು ಕಂಡಿದ್ದರು. ಕಾರಿನಿಂದ ಇಳಿದು ಹೋಗಿ ಅವರು ಆ ಹಂದಿಯ ಮರಿಯನ್ನು ಮುಳ್ಳು ಬೇಲಿಯಿಂದ ತಪ್ಪಿಸಿ ಬಿಟ್ಟು ಬಂದರು.


ಅವರ ಸ್ನೇಹಿತ ಕೇಳಿದರು, "ನೀವು ಈಗ ಮಾಡಿದ ಕೆಲಸದಲ್ಲಿ ನನಗೇನೂ ಸ್ವಾರ್ಥ ಕಾಣಲಿಲ್ಲ." ಅದಕ್ಕೆ ಅಬ್ರಹಾಂ ಲಿಂಕನ್ ಹೇಳಿದ್ದು, "ಆ ಕೆಲಸದಲ್ಲಿಯೂ ಕೂಡ ಸ್ವಾರ್ಥವೇ ಇತ್ತು. ಹಂದಿಯ ಮರಿಯನ್ನು ನೋಡಿಕೊಂಡು ಹಾಗೆಯೇ ಬಿಟ್ಟು ಮುಂದೆ ಹೋಗಿದ್ದರೆ ನನಗೆ ರಾತ್ರಿಯಿಡೀ ನಿದ್ದೆ ಬರುತ್ತಿರಲಿಲ್ಲ!"

ಎಷ್ಟು ನಿಜ ಅಲ್ಲವೇ? ನಾವೂ ಕೂಡ ಸ್ವಾರ್ಥ ಸಾಧನೆಗಾಗಿಯೇ ಏನೆಲ್ಲಾ ಮಾಡುತ್ತಿರುತ್ತೇವೆ; ಕೆಲವೊಂದು ನಮಗೆ ಅರಿವಿರುತ್ತದೆ, ಇನ್ನು ಕೆಲವು ನಮಗೆ ಅರಿವಿಲ್ಲದಂತೆಯೇ.

ಹೊಗಳಿದ ಎಮ್ಮೆ … (ಉತ್ತರ ಕನ್ನಡದ ಗಾದೆ – 161 ಮತ್ತು 162)

ಹೊಗಳಿದ ಎಮ್ಮೆ ಹೋರಿಗರು ಹಾಕಿತ್ತು.

ಈ ಗಾದೆ ನಿಜವಾಗಿ ‘ಹೊಗಳಿಸಿಕೊಂಡ ಎಮ್ಮೆ ಹೋರಿಗರು ಹಾಕಿತ್ತು’ ಎಂದು ಆಗಬೇಕು. ಆದರೆ ರೂಢಿಯಲ್ಲಿ 'ಹೊಗಳಿದ ಎಮ್ಮೆ...' ಅಂತಲೇ ಇದೆ. ಆ ಎಮ್ಮೆ ಚೆನ್ನಾಗಿದೆ ಎಂದು ಹೋಗಳಿದರೆ ಅದು ಹೋರಿಗರುವನ್ನು ಹಾಕಿತ್ತಂತೆ. ಹೋರಿಗರು ಎಂದರೆ ಗಂಡು ಕರು. ಅದು ಹೆಣ್ಣು ಕರುವಿನಷ್ಟು ಉಪಯೋಗಕ್ಕೆ ಬರುವುದಿಲ್ಲ. ಯಾರೋ ಒಬ್ಬರು ಯಾವುದೋ ಒಂದು ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ ಎಂದು ಹೊಗಳಿದ ಮರು ಘಳಿಗೆಯಲ್ಲೇ ಅವರು ತಪ್ಪು ಮಾಡಿದಾಗ ಈ ಮಾತನ್ನು ಹೇಳುತ್ತಾರೆ. ಇದರ ಬದಲು ನೀವು ಹೊಗಳಿದ ಎಮ್ಮೆಯ ಮಜ್ಜಿಗೆ ಹುಳಿ ನಾರಿತ್ತು ಎಂದೂ ಕೂಡ ಉಪಯೋಗಿಸಬಹುದು.

February 12, 2008

ಕಂಡಿದ್ದು ಹೇಳೋ … (ಉತ್ತರ ಕನ್ನಡದ ಗಾದೆ – 158, 159 ಮತ್ತು 160)

ಕಂಡಿದ್ದು ಹೇಳೋ ಪಾರುಪತ್ಯಗಾರ ನನ್ನ ಮಠದಲ್ಲಿರಬೇಡ.

ಪಾರುಪತ್ಯಗಾರ ಎಂದರೆ ವ್ಯವಸ್ಥೆಯನ್ನೂ, ಆಗು ಹೋಗುಗಳನ್ನೂ ನೋಡಿಕೊಳ್ಳುವ ವ್ಯಕ್ತಿ. ನೀವು ಬೇಕಿದ್ದಲ್ಲಿ manager ಎಂದು ಕರೆಯಬಹುದು. ಕಂಡಿದ್ದನ್ನು ನಿಷ್ಠುರವಾಗಿ ಇದ್ದ ಹಾಗೆಯೇ ಹೇಳಿಬಿಡುವ ಪಾರುಪಾತ್ಯಾಗಾರನನ್ನು ಕಂಡರೆ ಎಲ್ಲರಿಗೂ ಅಸಹನೆ. ಮಠದ ಗುರುಗಳಿಗೂ ಕೂಡ. ಹಾಗಾಗಿ ಅವನನ್ನು ಮಠದಿಂದ ಓಡಿಸಿಬಿಡುತ್ತಾರೆ. ಸತ್ಯ ಮತ್ತು ನಿಷ್ಠುರ ವಾದಿಗಳ ಬಗ್ಗೆ ಜನರು ಅಸಹನೆ ತೋರಿದಾಗ ಈ ಗಾದೆಯನ್ನು ಹೇಳುತ್ತಾರೆ. ನಿಮಗೂ ಗೊತ್ತಲ್ಲ- ಇದ್ದಿದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದ ಮತ್ತು ಕಂಡದ್ದನ್ನು ಹೇಳಿದರೆ ಕೆಂಡದಂತಾ ಕೋಪ.

February 11, 2008

ಹುತ್ತವನ್ನು ನೋಡಿ … (ಉತ್ತರ ಕನ್ನಡದ ಗಾದೆ – 156 ಮತ್ತು 157)

ಹುತ್ತವನ್ನು ನೋಡಿ ಹಾವನ್ನು ಅಳೆಯಬಾರದು.

ಹಾವಿನ ಗಾತ್ರ ಅಥವಾ ವಿಷ ಹುತ್ತದ ಗಾತ್ರವನ್ನು ಅವಲಂಬಿಸಿ ಇರುವುದಿಲ್ಲ. ಹುತ್ತ ಸಣ್ಣದಿದ್ದರೂ ಅದರೊಳಗಿರುವ ಹಾವು ದೊಡ್ಡದಿರಬಹುದು ಅಥವಾ ಹುತ್ತ ನೋಡಲು ದೊಡ್ಡದಾಗಿ ಕಂಡರೂ ಹಾವು ಸಣ್ಣದಿರಬಹುದು. ಒಬ್ಬ ಮನುಷ್ಯನ ಗಾತ್ರವನ್ನು ನೋಡಿ ಅವನ ಸಾಮರ್ಥ್ಯ, ಬುದ್ಧಿಶಕ್ತಿಯನ್ನು ಅಳೆಯಬಾರದು
ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಇನ್ನೊ ಸರಿಯಾಗಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿಯ ಬಾಹ್ಯ ಇರುವಿಕೆಯನ್ನು ನೋಡಿ ಅವನನ್ನು ಅಳೆಯಬಾರದು, ಆಂತರ್ಯದಲ್ಲಿ ಅವನು ಬೇರೆಯೇ ಆಗಿರಬಹುದು. ಚೆನ್ನಾಗಿ ಮಾತನಾಡುವವರೆಲ್ಲಾ ಒಳ್ಳೆಯವರು ಎನ್ನಲು ಬರುವುದಿಲ್ಲ ಅಲ್ಲವೇ? ಸಾಮಾನ್ಯವಾಗಿ ಎಲ್ಲರೂ ಬಳಸುವುದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಆದರೆ ಮೇಲೆ ಹೇಳಿದ ಗಾದೆ ಅದಕ್ಕಿಂತ ವಿಭಿನ್ನವಾದುದು. ಭಿನ್ನತೆ ಎಲ್ಲಿ ಎಂದರೆ, ಮೂರ್ತಿ ಚಿಕ್ಕದಾದರೂ.... ಗಾದೆಯನ್ನು ಒಳ್ಳೆಯ ಗುಣಗಳನ್ನು ಹೇಳುವಾಗ ಉಪಯೋಗಿಸಿದರೆ, ಹುತ್ತವನ್ನು.... ಗಾದೆಯನ್ನು ಕೆಟ್ಟ ವ್ಯಕ್ತಿಯಿಂದ ಮೋಸ ಹೋಗದಿರು ಎನ್ನುವಾಗ, ಅಥವಾ ಅನಿಶ್ಚಿತವಾದುದನ್ನು ಹೇಳುವಾಗ ಉಪಯೋಗಿಸುತ್ತಾರೆ.

February 8, 2008

ಶಾಂತಲಾಳೊಂದಿಗೆ ಕೆಲವು ಕ್ಷಣಗಳು…

ಮೊನ್ನೆ gmail ನಲ್ಲಿ online ಇದ್ದೆ. ಶಾಂತಲಾ ping ಮಾಡಿದಳು. ನಾವಿಬ್ಬರೂ ಆಗಾಗ ಮಾತನಾಡುತ್ತಲೇ ಇರುತ್ತೇವೆ. ಅವಳು ನನ್ನ ಅತ್ಯಂತ ಆಪ್ತ ಸ್ನೇಹಿತೆಯರಲ್ಲಿ ಒಬ್ಬಳು. ನಾವಿಬ್ಬರು ಮಾತನಾಡತೊಡಗಿದರೆ ಮಾತು ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗುತ್ತದೆ. ಮೊದಲು ಹವಾಮಾನ ಹೇಗಿದೆ? ಚಳಿ ಎಷ್ಟಿದೆ? ಏನು ಅಡಿಗೆ? ಎಂಬೆಲ್ಲಾ ಮುಗಿದ ಮೇಲೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯತೊಡಗುತ್ತೇವೆ.
ಮಾತು ಕತೆ ಹೀಗಿತ್ತು ನೋಡಿ; ಮೊದಲಿನ hi ಕೊನೆಯಲ್ಲಿನ bye ಗಳನ್ನೆಲ್ಲ ಬಿಟ್ಟಿದ್ದೇನೆ.
.....
.....
.....
ನಾನು: ಮೊನ್ನೆ ಇಲ್ಲಿ snowfall ಆತು. ಫೋಟೋ link ಕಳಿಸ್ತಿ ತಡಿ. ಫೋಟೋದಲ್ಲಿ ಯನ್ನ ನೋಡು. ಎಷ್ಟು ದಪ್ಪ ಆಜಿ ಹೇಳಿ. ಯನ್ನ ಜೀವಮಾನದ ಗುರಿ ಆಗಿತ್ತು ಅದು :)
ಶಾಂತಲಾ: ಹೌದೇ, ಚೊಲೋ ದಪ್ಪ ಆಜೆ. ಆನೂ ಈಗ ದಪ್ಪ ಆಜಿ.
ನಾನು: ಒಳ್ಳೇದು ತಗ ಹಂಗಾರೆ ಇಬ್ಬರಿಗೂ. ಧಾರವಾಡದಲ್ಲಿ ಓದಲ್ಲೆ ಇದ್ದಾಗಲಂತೂ ಇಬ್ಬರೂ ಬರಗಾಲದ ಹೆಣಗಳ ತರ ಕಾಣ್ತಿದ್ಯ. ಯಾವಾಗ ನೋಡಿದ್ರೂ ಆರಾಮು ಇರ್ತಿತ್ತಿಲ್ಲೆ.
ಶಾಂತಲಾ: ಊರಿಗೆ ಯಾವಾಗ ಹೋಗ್ತಾ ಇದ್ದೆ?
ನಾನು: March ನಲ್ಲಿ.

(ಇನ್ನು ಶಾಂತಲಾ form ಗೆ ಬಂದಳು ಎಂದು ಕಾಣಿಸುತ್ತದೆ)
ಶಾಂತಲಾ: ಸೀಮಕ್ಕ, ನಿನ್ನ ಹತ್ರ ಜಗಳ ಮಾಡವು ಹೇಳಿ ಮಾಡ್ಕ್ಯಂಜಿ.
ನಾನು: ಯಂತಕ್ಕೆ?
ಶಾಂತಲಾ: ಯಂಗೆ ನಿನ್ನ ಮೇಲೆ ಹೊಟ್ಟೆಕಿಚ್ಚು ಬರ್ತಾ ಇದ್ದು.
ನಾನು: ಅಯ್ಯೋ ಯಂತಕ್ಕೆ?
ಶಾಂತಲಾ: ನೀನು ರಾಜೀವ ಭಾವ ಒಳ್ಳೆಯವ ಹೇಳಿ ಬರಿತೆ ಹಂಗಾಗಿ. ಯನ್ನ ಗಂಡನೂ ಒಳ್ಳೆಯವ ಹೇಳಿ ಬರದ್ದೆ ಇಲ್ಲೇ.
ನಾನು: ಅಷ್ಟೆಯ? ಬರದ್ರೆ ಆತು ಬಿಡು. ರಾಜೇಂದ್ರ ಭಾವ ಒಳ್ಳೆಯವ ಹೇಳಿ ಯಂಗೆ ಗೊತ್ತಿದ್ದು. ಮತ್ತೆ ಹೊಟ್ಟೆಕಿಚ್ಚು ಯಂತಕ್ಕೆ ಬಿಡು.
ಶಾಂತಲಾ: ಹೂಂ... ಸುಖ ಹೆಚ್ಚಾಗಿ, ಕೆಲ್ಸ ಇಲ್ದೆ ಹೋದ್ರೆ ಮತ್ತೆಂತ ಆಗ್ತು ಹೇಳು? ಎಲ್ಲರ ಮೇಲೂ ಹೊಟ್ಟೆಕಿಚ್ಚು ಹುಟ್ತು.
(ಜೀವನದ philosophy ಯನ್ನೇ ಹೇಳಿಬಿಟ್ಟಿದ್ದಳು, ಅವಳಿಗೆ ಗೊತ್ತಿಲ್ಲದೆಯೇ!)

ನಾನು: ಸರಿ ಬಿಡು. ಬರಿತಿ. (ನಿಜವಾಗಿಯೂ ರಾಜೇಂದ್ರ ಒಳ್ಳೆಯ ವ್ಯಕ್ತಿ; ಆ ಬಗ್ಗೆ ಎರಡು ಮಾತಿಲ್ಲ)
ಶಾಂತಲಾ: ಬರದ್ದಿಲ್ಲೇ ಅಂದ್ರೆ ನೋಡು ಮತ್ತೆ. ಕಡಿಗೆ ನೋಡ್ಕ್ಯತ್ತಿ ನಿನ್ನ. ಎಲ್ಲಾರೂ ಒಬ್ನೇ ಸಿಗು.
ನಾನು: ಕೊಡ್ಲ ಮಟ್ಟಿ ಕಾನಲ್ಲಿ ಹೊಡಿತ್ಯ?
ಶಾಂತಲಾ: ನೀನು ದಪ್ಪ ಆಜೆ. ಯನ್ನತ್ರ ನಿನಗೆ ಹೊಡಿಯಲ್ಲೇ ಆಗ್ತಿಲ್ಲೆ. ಜನರನ್ನ ಕರಸ್ತಿ :)
ನಾನು: ದೇವಿಕೆರೆ gang ಕರಸ್ತ್ಯ? :)
ಶಾಂತಲಾ: ಅವು ಸಾಕಾ ನಿನಗೆ?
ನಾನು: ಕೋಟೆ ಕೆರೆ gang ಕೂಡ ಕರಶ್ಗ್ಯ ಬೇಕಾರೆ. ಇನ್ನೂ ಬೇಕಾರೆ ಹೀಪನಳ್ಳಿ gang.
ಶಾಂತಲಾ: ಹೀಪನಳ್ಳಿ gang ನವು ಬಂದ್ರೆ ಯಂಗೆ ಹೊಡಿತ :)
ನಾನು: ಯಂತಕ್ಕೆ?
ಶಾಂತಲಾ: ಯಂಗ್ಳ ಊರಿನ ಮಾಣಿ ಮದುವೆ ಆಜೆ. ಗನಾ ಮಾಣಿ ಆಗಿದ್ದ, ಕೆಟ್ಟು ಹೋದ ಹೇಳಿ :)
ಟಿಪ್ಪಣಿ: ಶಾಂತಲಾ, ನೀನು ಹೊಡಿತೆ, ಹೊಡಸ್ತೆ ಹೇಳಿ ಹೆದ್ರಿಕ್ಯಂದು ಬರದ್ನಿಲ್ಲೇ ಮತ್ತೆ... ಬರೆಯವ್ವು ಅನಿಸ್ತು ಬರದ್ದಿ :)

ಕಲ್ಲಪ್ಪ ಗುಂಡಪ್ಪರ … (ಉತ್ತರ ಕನ್ನಡದ ಗಾದೆ – 154 ಮತ್ತು 155)

ಕಲ್ಲಪ್ಪ ಗುಂಡಪ್ಪರ ನಡುವೆ ಕಾಯಪ್ಪ ಚಟ್ನಿಯಾಗಿ ಹೋದ.

ರಬ್ಬುವ ಕಲ್ಲು ಮತ್ತು ಗುಂಡುಗಳ ನಡುವೆ ತೆಂಗಿನಕಾಯಿ ತುರಿ ಸಿಕ್ಕಿ ನುರಿದು ಚಟ್ನಿಯಾಗಿ ಹೋಗುತ್ತದೆ. ಅಂತೆಯೇ ಇಬ್ಬರ ಜಗಳ, ಮನಸ್ತಾಪಗಳ ನಡುವೆ ಮೂರನೆಯ ವ್ಯಕ್ತಿ ಸಿಕ್ಕಿ ನಲುಗಿ ಹೋಗುತ್ತಾನೆ. ಇದೇ ರೀತಿಯ ಇನ್ನೊಂದು ಗಾದೆ- ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು.

February 7, 2008

ಕಡ ಹುಟ್ಟಿ … (ಉತ್ತರ ಕನ್ನಡದ ಗಾದೆ – 153)

ಕಡ ಹುಟ್ಟಿ ಬಡವ ಕೆಟ್ಟ.

ಕಡ ಎಂದರೆ ಒಂದು ರೀತಿಯ ಸಾಲ. ಇದಕ್ಕೆ ಕೈಸಾಲ ಎಂದೂ ಕೂಡ ಹೇಳುತ್ತಾರೆ. ಹಣ ಅಥವಾ ಇನ್ಯಾವುದೇ ವಸ್ತುವನ್ನು ಎರವಲು ತೆಗೆದುಕೊಂಡು ಸ್ವಲ್ಪವೇ ದಿನಗಳಲ್ಲಿ ಹಿಂದಿರುಗಿ ಕೊಡುವಂತಹದು. ಇದಕ್ಕೆ ಯಾವುದೇ ಲೆಕ್ಕ ಪತ್ರಗಳ ದಾಖಲಾತಿ ಇರುವುದಿಲ್ಲ. ಬರಿಯ ನಂಬುಗೆಯ ಮೇಲೆಯೇ ನಡೆಯುತ್ತಿರುತ್ತದೆ. ಬಡವನಿಗೆ ಹಣದ ಅವಶ್ಯಕತೆ ಕಂಡಾಗ ಶ್ರೀಮಂತರ ಬಳಿಯಲ್ಲಿ ಕಡವನ್ನು ತೆಗೆದುಕೊಳ್ಳುತ್ತಾನೆ, ಬೇಗ ತೀರಿಸಬಹುದು ಎಂಬ ಆಶಯದಿಂದ. ಆದರೆ ಅವನಿಗೆ ತೊಂದರೆಯ ಮೇಲೆ ತೊಂದರೆ ಬರುತ್ತಲೇ ಇರುತ್ತದೆ. ಕಡವನ್ನು ತೀರಿಸಲು ಆಗುವುದೇ ಇಲ್ಲ. ನಂತರ ಅದನ್ನು ಸಾಲವಾಗಿ ಪರಿವರ್ತಿಸಲಾಗುತ್ತದೆ ಮತ್ತು ಬಡವ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಅದೇ ಒಂದು ವೇಳೆ ಕಡವೆಂಬ ವ್ಯವಸ್ಥೆ ಇಲ್ಲದೇ ಹೊಗಿದ್ದರೆ ಆ ಬಡವ ದೊಡ್ಡ ಸಾಲಕ್ಕೆ ಹೆದರಿ ಅದರ ಗೋಜಿಗೆ ಹೋಗದೇ ಪರಿಸ್ಥಿತಿಯನ್ನು ಹೇಗೋ ನಿಭಾಯಿಸುತ್ತಿದ್ದ . ಕಡವೆಂಬ ವ್ಯವಸ್ಥೆ ಹುಟ್ಟಿ ಅವನನ್ನು ಇನ್ನೂ ಕಷ್ಟಕ್ಕೆ ತಳ್ಳಿದೆ. ಯಾರಾದರೋ ಕಡವನ್ನು ತೆಗೆದುಕೊಂಡು ತೀರಿಸಲಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಈ ಗಾದೆ ಅನ್ವಯಿಸುತ್ತದೆ.

February 6, 2008

ಕತ್ತಿಯ ಮೇಲೆ … (ಉತ್ತರ ಕನ್ನಡದ ಗಾದೆ – 151 ಮತ್ತು 152)

ಕತ್ತಿಯ ಮೇಲೆ ಕುಂಬಳ ಕಾಯಿ ಬಿದ್ದರೂ ಒಂದೇ ಕುಂಬಳ ಕಾಯಿಯ ಮೇಲೆ ಕತ್ತಿ ಬಿದ್ದರೂ ಒಂದೇ.

ಇವೆರಡರಲ್ಲಿ ಯಾವುದೇ ಆದರೂ ಪರಿಣಾಮ ಮಾತ್ರ ಒಂದೇ- ಕುಂಬಳ ಕಾಯಿ ಚೂರಾಗುತ್ತದೆ. ಸನ್ನಿವೇಶ ಯಾವುದೇ ಇರಲಿ, ತೊಂದರೆಯಾಗುವುದು ಮಾತ್ರ ಮೆತ್ತಗಿರುವವರಿಗೇ ಎಂಬ ಅರ್ಥವನ್ನು ಕೊಡುತ್ತದೆ. ಇಂಥದೇ ಇನ್ನೊಂದು ಗಾದೆ- ಯಾವ ಕಾಲು ಜಾರಿದರೂ ಸೊಂಟಕ್ಕೇ ಮೃತ್ಯು. ಎಡಗಾಲು ಜಾರಿದರೂ ಅಷ್ಟೇ ಬಲಗಾಲು ಜಾರಿದರೂ ಅಷ್ಟೇ, ಪೆಟ್ಟಾಗುವುದು ಮಾತ್ರ ಸೊಂಟಕ್ಕೇ ತಾನೇ.


ಶಾಂತಲಾ ಮತ್ತು ಅರುಣ್ ಬರೆದ ನನಗೆ ಗೊತ್ತಿರದೇ ಇದ್ದ ಇನ್ನೂ ಮೂರು ಗಾದೆಗಳು. ಇಬ್ಬರಿಗೂ ಧನ್ಯವಾದಗಳು.
ಬಂಡೆ ಮೇಲೆ ಗಡಿಗೆ ಬಿದ್ರೂ ಒಂದೆ-ಗಡಿಗೆ ಮೇಲೆ ಬಂಡೆ ಬಿದ್ರೂ ಒಂದೆ.
ಗಾಜು ಕಲ್ಲಿನ ಮೇಲೆ ಬಿದ್ರೂ ಒಂದೆ-ಕಲ್ಲು ಗಾಜಿನ ಮೇಲೆ ಬಿದ್ರೂ ಒಂದೆ.
ಬಟ್ಟೆ ಮೇಲೆ ಮುಳ್ಳು ಬಿದ್ರೂ ಮುಳ್ಳಿನ ಮೇಲೆ ಬಟ್ಟೆ ಬಿದ್ರೂ ಒಂದೆ.

ನನ್ನ ಕಂದ ಅವರು ಹೇಳಿದ್ದು- ಹೂವಿನ ಮೇಲೆ ಮುಳ್ಳು ಬಿದ್ದರೂ, ಮುಳ್ಳಿನ ಮೇಲೆ ಹೂವು ಬಿದ್ದರೂ ನೋವಾಗುವುದು ಹೂವಿಗೆ.

February 5, 2008

ಬ್ಲಾಗ್ ಮತ್ತು ಜಪಾನಿನಲ್ಲಿ ತೆಂಗಿನಮರ

ನಾವು ಬ್ಲಾಗ್ ನಲ್ಲಿ ಏನೆಲ್ಲಾ ಬರೆಯುತ್ತೇವಲ್ಲಾ? ಮತ್ತು ಬರೆದಾದ ಮೇಲೆ ಏನೋ ಕಡಿದು ಕಟ್ಟೆ ಹಾಕಿದ್ದೇವೆಂದು ಬೀಗುತ್ತೇವಲ್ಲಾ? ಅದರ ಮಜಾ ಹೇಳುತ್ತೇನೆ ಕೇಳಿ. ಬೇರೆಯವರು ಏನನ್ನೋ ಹುಡುಕುತ್ತಿರುವಾಗ ಗೂಗಲ್ ನಲ್ಲಿ ಅವೆಲ್ಲಾ ಬಂದು ಅಡೆತಡೆಯನ್ನು ಉಂಟುಮಾಡುತ್ತವೆ; ಕಾಡಿನಲ್ಲಿ ಮೊದಲೇ ಗೊತ್ತಿಲ್ಲದ ದಾರಿಯಲ್ಲಿ ಹೋಗುತ್ತಿರುವಾಗ ಕಾಲಿಗೆ ಸಿಕ್ಕಿಕೊಳ್ಳುವ ಬಳ್ಳಿಯಂತೆ.

ಆ ದಿನ ರಾಜೀವ್ ನ colleague ಸತೀಶ್ ಊಟಕ್ಕೆ ಬಂದಿದ್ದರು. ಊಟವಾದ ಮೇಲೆ ಮಾತು ಕತೆ ಹೀಗೆ ಸುಮ್ಮನೆ ಸಾಗಿತ್ತು. ಸತೀಶ್ ಮಾತಾಡುತ್ತಿದ್ದರೆ ಕೇಳಲು ತುಂಬಾ ಚೆನ್ನಾಗಿರುತ್ತದೆ... ನಗುವುದೊಂದೇ ಕೆಲಸ. ಅವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಎಷ್ಟು ಚೆನ್ನಾಗಿ ಅಂದರೆ ಮರದ ಮೇಲಿನ ಮಂಗ ಕೈ ಬಿಡುವಷ್ಟು! ಅವರ ಜೊತೆಯಲ್ಲಿ ಮಾತು ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಗಿ ಹೋಗುತ್ತದೆ. ಮಾತು ಕತೆ ಹೀಗೆ ನಡೆದಿರಬೇಕಾದರೆ ನಾಳೆ ಎಲ್ಲಿ ಹೋಗೋಣ ಎಂಬುದರ ಬಗ್ಗೆ ಮಾತು ಬಂತು. ರಾಜೀವ್ ಮೊದಲೇ ಯೋಚಿಸಿದ್ದವರ ತರ ಹೇಳಿದರು "ತಕೆ (ಬಿದಿರು- ಜಪಾನಿಗಳ ಭಾಷೆಯಲ್ಲಿ) temple ಗೆ ಹೋಗೋಣ. ಹೋಗುವ ದಾರಿಯೂ ಚೆನ್ನಾಗಿದೆ, ತುಂಬಾ ಕಾಡು ಇದೆ, ಒಂದು ಸುಂದರವಾದ ಕೊಳವೂ ಇದೆ ಎಂದು ಕೇಳಿದ್ದೇನೆ.


(ಎಡದಿಂದ ಬಲಕ್ಕೆ- ತಕೆ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ನಾನು, ವಿನಾಯಕ, ಸತೀಶ್ ಮತ್ತು ರಾಜೀವ್)


(ತಕೆ ದೇವಸ್ಥಾನದ ಮುಖ್ಯ ದ್ವಾರದ ಬಳಿ)

"ಸತೀಶ್ ಕೇಳಿದರು, "ದಾರಿ ಹೇಗೆ, ಯಾವ train, ಎಷ್ಟು ಹೊತ್ತಿಗೆ ಎಂದು ಗೊತ್ತಾ ?" ರಾಜೀವ್ ಹೇಳಿದ್ದು "ಗೂಗಲ್ ನಲ್ಲಿ ನೋಡೋಣ." ಸತೀಶ್ ತಕ್ಷಣ ಹೇಳಿದರು, "ರಾಜೀವ್, forget it. ಯಾವ site ನೋಡಬೇಕೆಂದು specific ಆಗಿ ಗೊತ್ತಿಲ್ಲದಿದ್ದರೆ ಹುಡುಕುವುದು waste". ಮತ್ತು ತಮ್ಮ ಒಂದು ಅನುಭವವನ್ನು ಕೂಡ ಹೇಳಿದರು.

ಒಂದು ದಿನ ಅವರು ಆಫೀಸ್ ನಿಂದ ಬರುವಷ್ಟರಲ್ಲಿ ಅವರ ಪತ್ನಿ ಮೀನಾಕ್ಷಿ ಯಾವುದೋ cake ಮಾಡುವ ಬಗೆಯನ್ನು ಇಂಟರ್ನೆಟ್ ನಲ್ಲಿ ನೋಡಿಕೊಂಡಿದ್ದರಂತೆ. ಮತ್ತು ಇವರ ಹತ್ತಿರ ಬನ್ನಿ ಬೇಕಾಗುವ ವಸ್ತುಗಳನ್ನೆಲ್ಲ ತೆಗೆದುಕೊಂಡು ಬರೋಣ ಎಂದರಂತೆ. ಬೇಕಾಗುವ ವಸ್ತುಗಳ list ನೋಡಿದರೆ ಏನೋ ಒಂದು 'ದೆಮೆರಾ ಶುಗರ್' ಅಂತ ಒಂದು ಕಂಡಿತು. ಸತೀಶ್ ಹೇಳಿದರಂತೆ. "ಮೀನಾ, ಅದನ್ನು ಜಪಾನಿಗಳ ಅಂಗಡಿಯಲ್ಲಿ ಏನೆಂದು ಕೇಳುವುದು? ಸಾಧ್ಯವಿಲ್ಲ ಬಿಡು" ಎಂದು. ಮೀನಾ ಹೇಳಿದರಂತೆ, "ಇರಿ ಸತೀಶ್ ಗೂಗಲ್ ನಲ್ಲಿ ನೋಡುತ್ತೇನೆ." ಸರಿ ಕೊಟ್ಟರಂತೆ ಗೂಗಲ್ ನಲ್ಲಿ 'Demera sugar in Japanese'. ಅದು ಕರೆದುಕೊಂಡು ಹೋಯಿತಂತೆ ಯಾವುದೊ ಬ್ಲಾಗ್ ಗೆ ಅದರಲ್ಲಿ 'Demera sugar' ಮತ್ತು 'Japanese' ಅನ್ನುವ ಎರಡೂ ಶಬ್ದಗಳೂ ಇದ್ದವು. ಆದರೆ ಒಂದಕ್ಕೊಂದು ಸಂಬಂಧವಿಲ್ಲ; ಎರಡೂ ಒಂದೊಂದು ಮೂಲೆಯಲ್ಲಿ!

ಇನ್ನೂ ಏನೇನೋ ಮಾತಾಡುತ್ತಾ ನಾನು ಹೇಳಿದೆ, "ನಾನು ಜಪಾನಿನಲ್ಲಿ ಒಂದೇ ಒಂದು ತೆಂಗಿನ ಮರವನ್ನೂ ನೋಡಿಲ್ಲ". ರಾಜೀವ್ ಹೇಳಿದರು "ಜಪಾನಿನ ಇನ್ನೂ ದಕ್ಷಿಣ ಭಾಗಕ್ಕೆ ಹೋದರೆ ಕಾಣುತ್ತದೆ. Tropical plant ಅಲ್ವಾ? ಒಕಿನಾವಾ (ಜಪಾನಿನ ದಕ್ಷಿಣ ತುದಿ)ಗೆ ಹೋಗೋಣ್ವಾ?" ನಾನು ಹೇಳಿದೆ "ಒಹ್ ಹೌದಲ್ವಾ? ನನಗೆ ಗಮನವೇ ಇರಲಿಲ್ಲ. ಆದರೆ ಗೂಗಲ್ ನಲ್ಲಿ ಚಿತ್ರವನ್ನಾದರೂ ನೋಡಬಹುದಲ್ಲಾ?" ಸತೀಶ್ ಜೋರಾಗಿ ನಗಲಾರಂಭಿಸಿದರು. ನಾನು ಹುಬ್ಬೇರಿಸಿದೆ. "ದಯಮಾಡಿ ಅದರಲ್ಲಿ ಹುಡುಕಬೇಡ, ಯಾವುದೋ ಮಲೆಯಾಳಿ ಮನುಷ್ಯ ಬರೆದ ಬ್ಲಾಗ್ ಗೆ ಹೋಗಿ ಸೇರುತ್ತೀಯಾ!" ಎಂದರು. ಈಗ ಎಲ್ಲರೂ ನಗುತ್ತಿದ್ದೆವು.

ಗಣಪತಿಯವರು ಒಮ್ಮೆ ನನಗೆ comment ಬರೆದಿದ್ದರು, 'sometimes I feel like searching my car key also in Google!' ಎಂದು . ಆ ದಿನ ಬಹಳ ದೂರವಿಲ್ಲ ಎಂದೆನಿಸುತ್ತದೆ!! ನಮಗೆ ಗೂಗಲ್ ಮೇಲೆ ಎಷ್ಟು dependency ಎಂದರೆ ಏನು ಬೇಕಾದರೂ ಅದರಲ್ಲಿ ಹುಡುಕಲು ಮುಂದಾಗುತ್ತೇವೆ. ಇಷ್ಟೆಲ್ಲಾ ಆಗುವಷ್ಟರಲ್ಲಿ ರಾಜೀವ್ station, train, time, ಎಲ್ಲಾ ಇಂಟರ್ನೆಟ್ ನಲ್ಲಿ ನೋಡಿ ಆಗಿತ್ತು. ನಂತರ ರಾಜೀವ್ ಬಳಿ ಇರುವ ಪುಸ್ತಕ* ದಲ್ಲಿ ಉಳಿದ ಮಾಹಿತಿಗಳನ್ನು ನೋಡಿಕೊಂಡು ಮರುದಿನ ಹೋಗುವುದೆಂದು ನಿರ್ಧಾರ ಮಾಡಿದೆವು. ಮರುದಿನ ಬೆಳಿಗ್ಗೆ ಬೇಗ ಹೊರಟು ಕಾಡು, ಪರ್ವತಗಳ ನಡುವೆ ಹಾದು ಹೋಗಿ ತಕೆ ದೇವಸ್ಥಾನವನ್ನು
ನೋಡಿಕೊಂಡು, ಒಂದು ಸುಂದರ ಕೊಳವನ್ನೂ ನೋಡಿಕೊಂಡು ಬಂದ ಅನುಭವ ನಮ್ಮದಾಯಿತು.(ಎಡದಿಂದ ಬಲಕ್ಕೆ- ತಕೆ ದೇವಸ್ಥಾನದ ಹತ್ತಿರವೇ ಇರುವ ಕೊಳದ ಬಳಿ ರಾಜೀವ್, ಸತೀಶ್, ನಾನು ಮತ್ತು ವಿನಾಯಕ)

(ಕೊಳದ ಬಳಿ ರಾಜೀವ್ ಮತ್ತು ನಾನು)

* Walters, Gary D’A. (1992), Day Walks Near Tokyo, Kodansha International, Tokyo. http://www.kodansha-intl.com/

ಕದ್ದವನು ಯಾರು? … (ಉತ್ತರ ಕನ್ನಡದ ಗಾದೆ – 150)

ಕದ್ದವನು ಯಾರು? ಎಂದರೆ ಕಾನುಗೋಡು ಸುಬ್ಬ.

ಕಾನುಗೋಡು ಎಂಬುದು ಒಂದು ಊರಿನ ಹೆಸರು. ಆ ಊರಿನ ಒಬ್ಬ ವ್ಯಕ್ತಿ ಸುಬ್ಬ ಎಂದೋ ಒಮ್ಮೆ ಕಳ್ಳತನ ಮಾಡಿರಬೇಕು. ಅದರ ನಂತರ ಎಲ್ಲಿ ಏನು ಕಳ್ಳತನವಾದರೂ ಎಲ್ಲರಿಗೂ ಕಾನುಗೋಡಿನ ಸುಬ್ಬನ ಮೇಲೆಯೇ ಅನುಮಾನ. ಒಮ್ಮೆ ಏನಾದರೂ ಕೆಲಸ ಮಾಡಿ ಸಿಕ್ಕಿ ಬಿದ್ದರೆ ಮುಂದೆ ಇನ್ಯಾರೇ ಆ ಕೆಲಸ ಮಾಡಿದರೂ ಅನುಮಾನ ನಮ್ಮ ಮೇಲೆಯೇ ಎಂದು ಹೇಳುವಾಗ ಈ ಮಾತನ್ನು ಬಳಸಬಹುದು.

February 4, 2008

ಅಗುಳು ಬರುತ್ತದೆ … (ಉತ್ತರ ಕನ್ನಡದ ಗಾದೆ – 149)

ಅಗುಳು ಬರುತ್ತದೆ ಎಂದು ತಿಳಿ ಕುಡಿದಂತೆ.

ಅನ್ನದ ನೀರನ್ನು ಬಸಿದಾಗ ಆ ತಿಳಿಯ ಜೊತೆ ಕೆಲವೊಂದು ಅಗುಳೂ ಸಹ ಬಿದ್ದಿರುತ್ತದೆ. ಹಾಗೆ ಬಿದ್ದ ಅನ್ನದ ಅಗುಳುಗಳು ತಳದಲ್ಲಿ ಸೇರಿಕೊಂಡಿರುತ್ತವೆ. ಅಗುಳನ್ನು ಪಡೆಯುವ ಆಸೆಯಿಂದ ತಿಳಿಯನ್ನು ಕುಡಿಯಬೇಕಾಗುತ್ತದೆ. ಕೆಲವೊಮ್ಮೆ ಅಗುಳುಗಳು ಬಿದ್ದಿರದ ಸಾಧ್ಯತೆಯೂ ಉಂಟು! ಯಾವುದೋ ಒಂದು ಕೆಲಸದಿಂದ ಸಿಗುವ ಫಲ ಅನಿಶ್ಚಿತವಾಗಿದ್ದಾಗಲೂ ಕೂಡ ಫಲ ಸಿಗುತ್ತದೆ ಎಂಬ ಆಸೆಯಿಂದ ಆ ಕೆಲಸದಲ್ಲಿ ಬರುವ ಕಷ್ಟಗಳನ್ನೆಲ್ಲಾ ಮೈಮೇಲೆ ಹಾಕಿಕೊಳ್ಳುತ್ತಿರುವವರ ಬಗೆಗಿನ ಮಾತು ಇದು.

February 1, 2008

ಅಜ್ಜಿ ಸುಟ್ಟ ಹಾಗೂ … (ಉತ್ತರ ಕನ್ನಡದ ಗಾದೆ – 147 ಮತ್ತು 148)

ಅಜ್ಜಿ ಸುಟ್ಟ ಹಾಗೂ ಆಯಿತು, ಚಳಿ ಕಾಯಿಸಿದ ಹಾಗೂ ಆಯಿತು.

ಅಜ್ಜಿ ಸತ್ತು ಹೋಗಿದ್ದಾಳೆ. ಹೇಗಿದ್ದರೂ ಅವಳನ್ನು ಸುಡಲು ಬೆಂಕಿ ಹಾಕಿಯೇ ಹಾಕುತ್ತಾರೆ. ಅದೇ ಬೆಂಕಿಯಲ್ಲೇ ಚಳಿಯನ್ನು ಕಾಯಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಜಿಪುಣರನ್ನು ಕುರಿತು ಹೇಳುವ ಮಾತಲ್ಲ. ಆದರೆ, ಒಂದರ ಜೊತೆಯಲ್ಲೇ ಇನ್ನೊಂದು ಕೆಲಸದ ಸಾಧ್ಯತೆಯನ್ನು ಅರಿತು ಎರಡೂ ಕೆಲಸವನ್ನು ಒಟ್ಟಿಗೆ ಮಾಡಿ ಮುಗಿಸಿಕೊಳ್ಳುವವರನ್ನು ಕುರಿತು ಹೇಳುವ ಮಾತು. ಇದನ್ನೇ ಸ್ವಲ್ಪ ಬದಲಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವವನು ಎಂದು ಕೂಡಾ ಹೇಳುತ್ತಾರೆ.

January 31, 2008

ಊರ ಮುಂದೆ … (ಉತ್ತರ ಕನ್ನಡದ ಗಾದೆ – 146)

ಊರ ಮುಂದೆ ಹೊಡೆದು ಒಲೆ ಮುಂದೆ ಎಣ್ಣೆ ಹಚ್ಚಿದಂತೆ.

ಇಡೀ ಊರವರ ಮುಂದೆ ಹೊಡೆದರೆ ಉರಿಯಾಗಿದ್ದಕ್ಕಿಂತ ಅವಮಾನವಾಗಿದ್ದು ಜಾಸ್ತಿ. ನಂತರ ಮನೆಯಲ್ಲಿ ಒಲೆಯ ಮುಂದೆ ಎಷ್ಟೇ ಎಣ್ಣೆ ಹಚ್ಚಿದರೂ ಆದ ಅವಮಾನ ಹೋಗುವುದಿಲ್ಲ. ಎಲ್ಲರ ಎದುರಲ್ಲಿ ಅವಮಾನ ಮಾಡಿ ಒಬ್ಬರೇ ಇದ್ದಾಗ ಬಂದು ಕ್ಷಮೆ ಕೇಳುವವರನ್ನು ಕುರಿತಾದ ಮಾತು ಇದು.

January 30, 2008

ಅಪ್ಪ, ಅಮ್ಮ ಮದುವೆಯಾದ ದಿನ

ಇಂದು ಅವರ ಮೂವತ್ತೊಂದನೆಯ wedding anniversary.
ಮೊದಲೆಂದೂ ನಾನು ಅವರ ಮದುವೆಯಾದ ದಿನದ ಬಗ್ಗೆ ತಲೆ ಕೆಡಿಸಿಕೊಂಡವಳೂ ಅಲ್ಲ, ಫೋನ್ ಮಾಡಿದವಳೂ ಅಲ್ಲ. ಆದರೆ ಈಗ ಎರಡು ವರ್ಷಗಳಿಂದ ಮಾಡುತ್ತಿದ್ದೇನೆ. ಏಕೆಂದರೆ ನನಗೆ ಮದುವೆ ಎಂದರೆ ಏನು ಎಂಬುದು ಅರ್ಥವಾಗಿದೆ ಎಂದು ಹೇಳಲಾಗದಿದ್ದರೂ ಕೂಡ ಅರ್ಥವಾಗತೊಡಗಿದೆ ಎಂದು ಹೇಳಬಲ್ಲೆ. ಅಪ್ಪ ಅಮ್ಮನ ಮದುವೆ ನನ್ನ ಕಲ್ಪನೆಗೂ ಮೀರಿದ್ದು. ವೀಡಿಯೋ ಇರದಿದ್ದ ಕಾಲ, ಆದರೆ ಒಂದು ಫೋಟೋ ಕೂಡ ಇಲ್ಲ. ಮದುವೆ ಕರೆಯೋಲೆಯನ್ನೂ ಇಟ್ಟುಕೊಳ್ಳುವ ಗೋಜಿಗೆ ಅವರು ಹೋಗಲಿಲ್ಲ. ಆದರೆ ಅವರ ಮದುವೆಯ ಕರೆಯೋಲೆಯನ್ನು ನಾನು, ರಘು ಇಬ್ಬರೂ ನೋಡಿದ್ದೇವೆ. ಏಕೆಂದರೆ ಅಜ್ಜ ಇಟ್ಟುಕೊಂಡಿದ್ದರು!

ಮದುವೆ, ಒಬ್ಬರ ಜೀವನದಲ್ಲಿ ಒಮ್ಮೆ ಮಾತ್ರ ಬರುವಂತಹ ಅಮೂಲ್ಯ ಘಳಿಗೆ. ಕೆಲವರ ಜೀವನದಲ್ಲಿ ಅದು ಎರಡು ಮೂರು ಬಾರಿಯೂ ಬರುವುದುಂಟು. ಆದರೆ ಆಗ ಅದು ಅರ್ಥ ಕಳೆದುಕೊಂಡಿರುತ್ತದೆ. ಎಲ್ಲೋ ಹುಟ್ಟಿ ಬೆಳೆದ ಬೇರೆ ಬೇರೆ ಮನಸ್ಥಿತಿಯ ಇಬ್ಬರನ್ನು ತಂದು ಆ ದಿನ ಒಟ್ಟಿಗೆ ನಿಲ್ಲಿಸಿ, ಮುಂದೆ ಜೀವನ ಪರ್ಯಂತ ಒಟ್ಟಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿಸಿರುತ್ತಾರೆ. ಅದಕ್ಕೆ ನೂರಾರು ಜನರ ಸಾಕ್ಷಿ ಬೇರೆ! ನನಗಂತೂ ಇದು ತೀರ ವಿಚಿತ್ರ ಎನಿಸಿತ್ತು. ಹಾಗೆಂದು ನನಗೆ ಇದಕ್ಕೆ ವಿರುದ್ಧವಾದ ಪಾಶಿಮಾತ್ಯ ಪದ್ಧತಿಯಲ್ಲಿ ಎಳ್ಳಷ್ಟೂ ನಂಬಿಕೆಯಿಲ್ಲ. ನನ್ನ ಮದುವೆಗೆ ಕೆಲವು ದಿನಗಳಿದ್ದಾಗ ಜ್ಯೋತಿ ಅಕ್ಕನನ್ನು ಕೇಳಿದ್ದೆ 'ಒಬ್ಬ ಗೊತ್ತಿಲ್ಲದ ಮನುಷ್ಯನ ಜೊತೆ ಹೇಗೆ ಬದುಕುವುದು, ಅದೂ ನನ್ನ ಮನೆ ಬಿಟ್ಟು ಹೋಗಿ?' ಎಂದು. ಅದಕ್ಕವಳು 'ನಾವೆಲ್ಲಾ ಬದುಕುತ್ತಿಲ್ಲವಾ ಈಗ? ನಿನಗೇ ಗೊತ್ತಾಗುತ್ತದೆ ನೋಡುತ್ತಿರು. ನೀನು ನಿನ್ನ ಅಮ್ಮನ ಬಳಿ ಇದ್ದಿದ್ದಕ್ಕಿಂತ close ಆಗಿ ಇರುತ್ತೀಯ ನಿನ್ನ ಗಂಡನ ಜೊತೆ.' ಸಾಧ್ಯವೇ ಇಲ್ಲ ಎಂಬ ತೀರ್ಪನ್ನೂ ಕೊಟ್ಟುಬಿಟ್ಟಿದ್ದೆ ಅವಳಿಗೆ.

ಆದರೆ ಆ ಮದುವೆಯ ಬಂಧನವೇ ವಿಚಿತ್ರವಾದುದು. ಅದು ನಿಧಾನವಾಗಿ ನನ್ನನ್ನು ತನ್ನೊಳಗೆ ಸೆಳೆದುಕೊಂಡು ಬಿಟ್ಟಿತು, ನನಗರಿವಿಲ್ಲದಂತೆಯೇ. ಅಮ್ಮನ ಬಳಿ ಹೇಳಲು ಹಿಂಜರಿಯುತ್ತಿದ್ದ ವಿಚಾರವನ್ನೂ ನಾನು ಇಂದು ರಾಜೀವನ ಬಳಿ ಅರೆಕ್ಷಣದಲ್ಲಿ ಹೇಳಿ ಮುಗಿಸಿರುತ್ತೇನೆ. ಜ್ಯೋತಿ ಅಕ್ಕ ಹೇಳಿದ್ದು ಎಷ್ಟು ನಿಜ! ರಾಜೀವ್ ಕೂಡಾ ಅಷ್ಟೇ, ಯಾವ ವಿಷಯವನ್ನು ಬೇಕಾದರೂ ನನ್ನ ಜೊತೆ ಹಂಚಿಕೊಳ್ಳಬಲ್ಲರು. ಅವರು ಒಬ್ಬ opposite sex ನ ಮನುಷ್ಯ ಎಂಬುದೂ ಕೂಡಾ ಮರೆತು ಹೋಗಿರುತ್ತದೆ.

ಒಂದು ಸಣ್ಣ ಕಾರಣವೇ ಅಲ್ಲದ ಕಾರಣಕ್ಕೆ ಜಗಳ, ಪ್ರೀತಿಸಲಂತೂ ಕಾರಣವೇ ಬೇಡ, ಮಾತಿಗೆ ಮಾತು ಬೆಳೆಸುವ ಜಗಳ, ಮಾತನಾಡದೇ ಇರುವ ಶೀತಲ ಸಮರ, ನಾನೇಕೆ sorry ಹೇಳಲಿ ಎಂಬ ego-ಹಟ, ಹೋಗಲಿ ಬಿಡು ಜಗಳವೇಕೆ ಎಂದು ಯಾರೋ ಒಬ್ಬರು ಬಿಟ್ಟುಕೊಡುವ ego, ಒಬ್ಬರಿಗೊಬ್ಬರ ಪ್ರೋತ್ಸಾಹ,-ಉತ್ತೇಜನ, ‘ನಾನಿದ್ದೇನೆ’ ಎಂದು ಇನ್ನೊಬ್ಬರು ಕೊಡುವ ಸಾಂತ್ವನ-ಧೈರ್ಯ, ಒಬ್ಬರ success ನಲ್ಲಿ ಇನ್ನೊಬ್ಬರು ಪಡುವ ಸಂತಸ, ನಾಲ್ಕು ಕಣ್ಣುಗಳು ಒಟ್ಟಾಗಿ ಕಾಣುವ ಕನಸುಗಳು, ಭವಿಷ್ಯದ ಬಗೆಗಿನ ಚಿಂತೆ, ಇನ್ನೊಬ್ಬರ ಬಗೆಗಿನ ಕಾಳಜಿ, ಪ್ರೀತಿ, ವಾತ್ಸಲ್ಯ,... ಹೋಗ್ಲಿ ಬಿಡಿ... ಇನ್ನೂ ಏನೇನೋ ಭಾವನೆಗಳು ಸೇರಿಕೊಂಡು ಈ ಸಂಬಂಧವನ್ನು ನಮಗೇ ಗೊತ್ತಾಗದಂತೆ ಭದ್ರವಾಗಿಸಿಬಿಡುತ್ತವೆ.

ನನಗೆ ಈಗೀಗ ಅರಿವಾಗುತ್ತಿರುವುದು ಅಪ್ಪ, ಅಮ್ಮನಿಗೆ ಮೂವತ್ತು ವರ್ಷಗಳ ಹಿಂದೆಯೇ ಅರಿವಾಗಿರುತ್ತದೆ. ಅದೇ ಅರಿವಿನ ಸೇತುವೆಯ ಮೇಲೆಯೇ ಅವರಿಬ್ಬರೂ ಇಷ್ಟೆಲ್ಲಾ ವರ್ಷಗಳ ಕಾಲ ನಡೆದು ಬರುತ್ತಿದ್ದಾರೆ; ಮುಂದೆ ನಾವೂ ನಡೆಯಲಿ ಎಂದು ಆಶಿಸುತ್ತಾರೆ. ಅಪ್ಪ, ಅಮ್ಮರಿಗೆ ಮದುವೆಯಾದ ದಿನದ ಹಾರ್ದಿಕ ಶುಭಾಶಯಗಳು :)

ಕುರಿ ಕೇಳಿ … (ಉತ್ತರ ಕನ್ನಡದ ಗಾದೆ – 145)

ಕುರಿ ಕೇಳಿ ಸಾಂಬಾರ ಅರೆಯುವುದಿಲ್ಲ.

ಕುರಿಯ ಬಳಿ 'ನಿನ್ನನ್ನು ಕಡಿಯಬೆಕಾಗಿದೆ, ಸಾಂಬಾರ ಅರೆಯಲಾ?' ಎಂದು ಕೇಳಿದರೆ ಅದು ಬೇಡ ಎಂದೇ ಹೇಳುತ್ತದೆ. ಆದ್ದರಿಂದ ಅದನ್ನು ಕೇಳುವುದಿಲ್ಲ, ಸಾಂಬಾರ ಅರೆಯುತ್ತಾರೆ. ಇನ್ನೊಬ್ಬರನ್ನು ಕೇಳಿದರೆ ಅವರು ಬೇಡವೆಂದೇ ಹೇಳುತ್ತಾರೆ ಅದಕ್ಕಾಗಿ ಅವರನ್ನು ಕೇಳುವುದಿಲ್ಲ ಆ ಕೆಲಸವನ್ನು ಮಾಡುತ್ತೇನೆ ಎನ್ನುವ ಅರ್ಥದಲ್ಲಿ ಹೇಳಬಹುದು.

ನಾನು High school ನಲ್ಲಿ ಓದುತ್ತಿದ್ದಾಗ ನಮ್ಮ ಕನ್ನಡ ಶಿಕ್ಷಕರಾದ ಶ್ರೀ ಜಿ. ಕೆ. ಭಟ್ಟರು ಪರೀಕ್ಷೆ ಪೇಪರ್ ತೆಗೆಯುವ ಮೊದಲು ನಾವು ‘ಸರ್, ಈ ಪರೀಕ್ಷೆಗೆ ಎರಡೇ ಪಾಠ ಸಾಕು, ಮೂರನೆಯದು ಬೇಡ’ ಎಂದು ಗೋಗರೆಯುತ್ತಿದ್ದೆವು. ಆಗ ಅವರು ಈ ಗಾದೆಯನ್ನು ಉಪಯೋಗಿಸುತ್ತಿದ್ದುದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಕಂಡ ಅತ್ಯುತ್ತಮ ಶಿಕ್ಷಕರಲ್ಲೊಬ್ಬರಾದ ಅವರನ್ನು ಈ ಮೂಲಕ ನೆನಪಿಸಿಕೊಳ್ಳುತ್ತಿದ್ದೇನೆ. ನನಗೆ ಓದುವ, ಬರೆಯುವ ಹವ್ಯಾಸವನ್ನು ಬೆಳೆಸಿದವರೇ ಅವರು.

January 29, 2008

ಗೂಗಲ್ ಮತ್ತು ನಾನು

ಅಬ್ಬಾ! ಈ ವಿಕಿಪೀಡಿಯಾ, ಗೂಗಲ್ ಗಳ ಕಾಲದಲ್ಲಿ ಸುಖವಿಲ್ಲ.
ಮೊನ್ನೆ ಒಂದು ವಿಷಯ ತಲೆ ತಿನ್ನುತ್ತಿತ್ತು. Specific gravity, biomass estimation ಗಳ ನಡುವೆ ಸಿಕ್ಕಿ ಒದ್ದಾಡುತ್ತಿದ್ದೆ. Specific gravity ಬಗ್ಗೆ ಏನನ್ನೋ ಕೇಳಬೇಕಿತ್ತು. ರಾಜೀವ್ online ಇರುವುದನ್ನು ನೋಡಿ ಪಿಂಗ್ ಮಾಡಿದೆ. Office ನಲ್ಲಿ ಇದ್ದಿದ್ದು ನಿಜ. Busy ಇದ್ದಿರಲೂಬಹುದು. ನಾನು ಒಂದು ಪ್ರಶ್ನೆ ಕೇಳಿದ್ದೇ ತಡ, ಬಂತು ಉತ್ತರ 'ವಿಕಿಪೀಡಿಯಾ ನೋಡೇ'. ಸರಿ ಬಿಡು ಹೋಗ್ಲಿ ಎಂದುಕೊಂಡೆ.

ರಾಜೀವ್ ನ ಫ್ರೆಂಡ್ ರೋಹಿತ್ online ಇರುವುದನ್ನು ನೋಡಿ ಅವನಿಗೆ ಪಿಂಗ್ ಮಾಡಿದೆ. 'ನನಗೊಂದು doubt ಇತ್ತು....' ಅವನು ತಮಾಷೆ ಮಾಡಿದ 'ಏನು ಸಂಶಯ? ಜಪಾನಿನಿಂದ ಭೂಮಿಯನ್ನು ಕೊರೆದರೆ ಭಾರತವನ್ನೋ ಅಥವಾ ಪ್ರಪಂಚದ ಇನ್ಯಾವುದೋ ಮೂಲೆಯನ್ನು ತಲುಪಬಹುದಾ ಎಂಬುದಾ ;)?' ಅದಲ್ಲ ಎಂದು ಹೇಳಿ ನಾನು ನನ್ನ ಸಮಸ್ಯೆಯನ್ನು ಬರೆದೆ...ಒಂದೆರಡು ನಿಮಿಷ ರೋಹಿತ್ ಪತ್ತೆಯೇ ಇಲ್ಲ... ಮನಸ್ಸು ಹೇಳಿತು 'ಮುಗಿಯಿತು ಕಥೆ. ಇನ್ನು ಕನಿಷ್ಠ ಹತ್ತು ಲಿಂಕ್ ಗಳು ಬಂದು ಚಾಟ್ ವಿಂಡೋವಿನ ಬಾಗಿಲು ಬಡಿಯುವುದರಲ್ಲಿ ಸಂಶಯವೇ ಇಲ್ಲ....ಮೊದಲೇ ರೋಹಿತ್ ಗೂಗಲ್ ನಲ್ಲಿ expert'. ಮರು ಘಳಿಗೆಯಲ್ಲೇ 'r u there?' ಎನ್ನುತ್ತ ಒಂದು ಲಿಂಕ್ ಬಂದು ಅಪ್ಪಳಿಸಿತು. ಆದರೆ ಆಶ್ಚರ್ಯವೆನಿಸುವಂತೆ ಆ ದಿನ ಬಂದಿದ್ದು ಒಂದೇ ಒಂದು ಲಿಂಕ್!! ಅದು ಚೆನ್ನಾಗಿತ್ತು ನಿಜ, ಆದರೆ ನನ್ನ ಸಮಸ್ಯೆಗೆ ಪರಿಹಾರವನ್ನು ಕೊಡಲಿಲ್ಲ. ಸರಿ ಬಿಡು ಎಂದೆ.

ನನ್ನ ಹೈಸ್ಕೂಲ್ ಫ್ರೆಂಡ್ ವಿನಯ್ online ಕಾಣಿಸಿದ. ಅವನಿಗೂ ಹೇಳಿಯೇ ಬಿಡೋಣ...ಹೋದರೆ ಒಂದು ಕಲ್ಲು, ಬಿದ್ದರೆ ಮೂರು ಹಣ್ಣು ಎಂದುಕೊಂಡು ಅವನಿಗೆ ನನ್ನ ಸಮಸ್ಯೆಯನ್ನು ಹೇಳಿದೆ. ಅಬ್ಬಾ!!..ಮರುನಿಮಿಷದಲ್ಲಿ ಮೂರು pdf ಫೈಲುಗಳು ಮತ್ತು ಏಳೆಂಟು ಲಿಂಕ್ ಗಳು ಹಾರಿಕೊಂಡು ಬಂದು ದೊಪ್ಪೆಂದು ನನ್ನ inbox ನ ತಲೆಯ ಮೇಲೆ ಬಿದ್ದವು. ನೂರಾರು ಪುಟಗಳಿರುವ ಆ ಫೈಲುಗಳಲ್ಲಿ ನನಗೆ ಬೇಕಾಗಿರುವುದನ್ನು (ಅದು ಇದ್ದೇ ಇರುತ್ತದೆ ಎಂದು ಖಾತ್ರಿ ಇಲ್ಲ) ಹುಡುಕುವುದು ಎಂದರೆ ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಹುಡುಕಿದಂತೆ. ಇನ್ನು ಲಿಂಕ್ ಗಳೋ ಒಂದರಲ್ಲಿ ಇನ್ನೊಂದಕ್ಕೆ ಲಿಂಕ್ ಎಂದು ಒಳಗೊಳಗೆ ಹೋಗಿ ಅದರ ಸುಳಿಯಲ್ಲಿ ಸಿಕ್ಕಿಕೊಂಡು ಮುಳುಗಿಯೇ ಹೋಗುತ್ತೇನೆ.

ಅವರು ಕೊಟ್ಟ ಲಿಂಕ್ ಗಳೆಲ್ಲವೂ informative ನಿಜ. ಇನ್ನು ವಿಕಿಪೀಡಿಯಾ, ಗೂಗಲ್ ಗಳ ಬಗ್ಗೆ ಅಂತೂ ಎರಡು ಮಾತಿಲ್ಲ. ಆದರೆ ತಕ್ಷಣವೇ ಪರಿಹಾರ ಸಿಗಬಹುದು ಎಂದುಕೊಂಡು ಕೇಳಿದ ಪ್ರಶ್ನೆಗಳಿಗೆ ಯಾವುದಕ್ಕೂ ತಕ್ಷಣದ ಪರಿಹಾರ ಸಿಗುವುದಿಲ್ಲ. ಗಣಿಯಲ್ಲಿ ಚಿನ್ನ ಹುಡುಕಿದಂತೆ ಹುಡುಕುತ್ತಾ ಹೋಗುತ್ತೇನೆ... ಈ ಮಧ್ಯೆ ಕೊನೆ ಮೊದಲಿಲ್ಲದ ಯಾವುದೋ ಸೈಟ್ ನಲ್ಲಿ ಸಿಕ್ಕಿಕೊಂಡು ಬಿಡುತ್ತೇನೆ. ಏನು ಹುಡುಕುತ್ತಿದ್ದೇನೆ ಎಂಬುದನ್ನೂ ಕೆಲವೊಮ್ಮೆ ಮರೆತು ಇನ್ನೆಲ್ಲೋ ತಲುಪಿರುತ್ತೇನೆ.

ಶ್ರೀನಿವಾಸ ಕುಲಕರ್ಣಿಯವರು ಬರೆದ ಪುಟ್ಟ ಕವನ ನೆನಪಾಗುತ್ತದೆ.
ಮನಸು
ಗೂಗಲ್ ಸರ್ಚ್ ಎಂಜಿನ್ ನಂತೆ !!
ಒಂದು ನೆನಪು ತುಂಬಿ ಗುಂಡಿ ಒತ್ತಿ ಬಿಟ್ಟರೆ,
ಬೇಕಾದ ಬೇಡವಾದ ಹಣ್ಣುಗಳ ಜೊತೆಗೆ,
ಕಸ ಕಡ್ಡಿಯನ್ನು ತಂದು ಒಗೆಯುತ್ತದೆ
ನಮ್ಮ ಕಡೆಗೆ ಸುನಾಮಿ ಅಲೆಯಂತೆ !!


ವಿನಯ್ ನಿಂದ ಅನೇಕ ಮಾಹಿತಿಗಳು ಬಂದವು. ಆದರೆ ರೋಹಿತ್ ಸಮಸ್ಯೆಯನ್ನು ನಿಜವಾಗಿಯೂ ಬಗೆಹರಿಸಿ ಮರುದಿನ ಒಂದು ಒಳ್ಳೆಯ mail ರವಾನಿಸಿದ. ಧನ್ಯವಾದಗಳು ರೋಹಿತ್, ವಿನಯ್ :)

ಗೂಗಲ್ ಕೂಡ ಮನಸ್ಸಿನಂತೆಯೇ ತಾನೆ?

ಕೋಲು ಕೊಟ್ಟು … (ಉತ್ತರ ಕನ್ನಡದ ಗಾದೆ – 143 ಮತ್ತು 144)

ಕೋಲು ಕೊಟ್ಟು ಹೊಡೆಸಿಕೊಂಡಂತೆ.

ನಿರಾಯುಧನಾಗಿದ್ದವನ ಕೈಗೆ ನಾವೇ ಕೊಲನ್ನು ಕೊಟ್ಟರೆ ಅವನು ನಮಗೇ ತಿರುಗಿ ಹೊಡೆಯುತ್ತಾನೆ. ಸುಮ್ಮನಿರಲಾರದೇ ನಾವೇ ಏನಾದರೂ ಹೇಳಿಕೊಟ್ಟು ಅದರಲ್ಲಿ ಸಿಕ್ಕಿ ಬೀಳುವಂತಾಗಿ ನಷ್ಟ ಅನುಭವಿಸಬೇಕಾಗಿ ಬಂದರೆ ಈ ಮಾತು ಅನ್ವಯಿಸುತ್ತದೆ. ಇನ್ನೊಂದು ಗಾದೆ ಇದೇ ಅರ್ಥಕೊಡುವಂತದು- ಹಗ್ಗ ಕೊಟ್ಟು ಕೈ ಕಾಲು ಕಟ್ಟಿಹಾಕಿಸಿಕೊಂಡಂತೆ.

January 28, 2008

ಆತ್ಮಹತ್ಯೆ… (ಉತ್ತರ ಕನ್ನಡದ ಗಾದೆ – 139, 140,141 ಮತ್ತು 142)

ಆತ್ಮಹತ್ಯೆ ಮಾಡಿಕೊಂಡವನಿಗೆ ಬ್ರಹ್ಮಹತ್ಯೆ ಮಾಡಿದವನು ಸಾಕ್ಷಿ ಹೇಳಿದ್ದ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸರಿಯಿಲ್ಲ ಎಂದುಕೊಂಡರೆ ಅವನಿಗೆ ಸಾಕ್ಷಿ ಹೇಳುವ ವ್ಯಕ್ತಿ ಬ್ರಾಹ್ಮಣನನ್ನೇ* ಕೊಂದವನು. ಯಾರ ಪರವಾಗಿಯೂ ಮಾತನಾಡುವ ಹಾಗಿಲ್ಲ. ಇಬ್ಬರೂ equally bad ಎಂದು ಹೇಳುವಾಗ ಬಳಸುವ ಇನ್ನೂ ಕೆಲವು ಗಾದೆಗಳೆಂದರೆ, ಹೊಟ್ಟು ಗಡಿಗೆ, ಹುಳುಕು ತೊಗರಿ- ಗಡಿಗೆ ಒಡಕು ಅದರ ಪರವಾಗಿ ಮಾತನಾಡುವಂತಿಲ್ಲ ಎಂದರೆ ಅದರ ಜೊತೆಗಿರುವ ತೊಗರಿ ಕೂಡ ಹುಳುಕು. ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ ಮತ್ತು ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

ಚಿಕ್ಕವರಿದ್ದಾಗ (ಈಗಲೂ ಕೂಡ!) ನಾನು, ನನ್ನ ತಮ್ಮ ಒಬ್ಬರ ಪರವಾಗಿ ಇನ್ನೊಬ್ಬರು ವಕಾಲತ್ತು ನಡೆಸಿದಾಗ ಈ ಮೇಲಿನ ಗಾದೆಗಳಲ್ಲಿ ಯಾವುದೋ ಒಂದು ಅಮ್ಮನ ಬಾಯಿಂದ ಉದುರುತ್ತಿದ್ದುದು ಗ್ಯಾರೆಂಟಿ! ಇದೇ ಅರ್ಥವನ್ನು ಕೊಡುವ ಇನ್ನೊಂದು ಗಾದೆ ಕೂಡ ಗೊತ್ತು. ಅಮ್ಮನಿಂದ ಗೊತ್ತಾಗಿದ್ದಲ್ಲ; ಬೇರೆಲ್ಲೋ ಕೇಳಿದ್ದು. ಆದರೆ ಅದು ಅಷ್ಲೀಲವಾಗಿರುವುದರಿಂದ ಇಲ್ಲಿ ಹಾಕುವುದಿಲ್ಲ.


*ತಪ್ಪನ್ನು ತಿದ್ದಿದ ಹರೀಶ ಮತ್ತು ಗಣಪತಿಗೆ ಧನ್ಯವಾದಗಳು.

January 25, 2008

ಕುರುಡ ಕತ್ತ … (ಉತ್ತರ ಕನ್ನಡದ ಗಾದೆ – 136, 137 ಮತ್ತು 138)

ಕುರುಡ ಕತ್ತ ಹೊಸೆದಂತೆ.

ಬೆಂಕಿಯ ಪಕ್ಕದಲ್ಲಿ ಕುಳಿತು ಕುರುಡ ಒಂದು ಕಡೆಯಿಂದ ಕತ್ತ ಹೊಸೆಯುತ್ತಿದ್ದರೆ, ಹೊಸೆದ ಕತ್ತವೆಲ್ಲಾ ಇನ್ನೊಂದು ಕಡೆಯಲ್ಲಿ ಬೆಂಕಿಗೆ ತಾಗಿ ಸುಟ್ಟುಹೋಗಿತ್ತು. ಯಾವುದೋ ಕೆಲಸವನ್ನು ಒಂದು ಕಡೆಯಿಂದ ನಾವು ಮಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಅದು ಪ್ರಯೋಜನಕ್ಕೆ ಬಾರದಂತೆ ನಾಶ ಹೊಂದಿದರೆ ಈ ಗಾದೆಯನ್ನು ಬಳಸಬಹುದು. ಸಾಮಾನ್ಯವಾಗಿ ಮಾಡಿದ ಕೆಲಸ ಪ್ರಯೋಜನಕ್ಕೆ ಬಾರದಂತಾದಾಗ ಎಲ್ಲರೂ ಬಳಸುವ ಮಾತೆಂದರೆ ನೀರಿನಲ್ಲಿ ಹೋಮ ಮಾಡಿದಂತೆ ಅಥವಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.

January 24, 2008

ಕೆಪ್ಪಳಾದರೂ … (ಉತ್ತರ ಕನ್ನಡದ ಗಾದೆ – 135)

ಕೆಪ್ಪಳಾದರೂ ನಮ್ಮೊಳೇ ವಾಸಿ.

ಎಷ್ಟೇ ಆದರೂ ಅವಳು ನಮ್ಮವಳು. ಕೆಪ್ಪಳಾದರೂ ಪರವಾಗಿಲ್ಲ. ಕಿವಿ ಕೇಳುವ ಹೊರಗಿನವರಿಗಿಂತ ಇವಳೇ ಪರವಾಗಿಲ್ಲ. ಚೆನ್ನಾಗಿರುವ ಬೇರೆಯವರ ವಸ್ತುವನ್ನು ತೆಗೆದುಕೊಳ್ಳುವ ಬದಲು ಚೆನ್ನಾಗಿಲ್ಲದಿದ್ದರೂ ನಮ್ಮ ವಸ್ತುವೇ ನಮಗೆ ಪ್ರಿಯ ಎಂದು ಇದರ ಅರ್ಥ. ಚೆನ್ನಾಗಿರದಿದ್ದರೂ ಪರವಾಗಿಲ್ಲ, ನಮಗೆ ನಮ್ಮ ವಸ್ತುವಿನ ಜೊತೆಯಲ್ಲೇ ಹಿತವೆನಿಸುತ್ತದೆ.

January 23, 2008

ಗಂಡ ಹೊಸ ಸೀರೆ … (ಉತ್ತರ ಕನ್ನಡದ ಗಾದೆ – 134)

ಗಂಡ ಹೊಸ ಸೀರೆ ತರುತ್ತಾನೆಂದು ಹಳೆ ಸೀರೆ ಸುಟ್ಟುಹಾಕಿದ್ದಳು.

ಗಂಡ ಹೊಸ ಸೀರೆಯನ್ನು ತಂದೇ ತರುತ್ತಾನೆ ಎಂಬ ಬಲವಾದ ನಂಬಿಕೆಯಿಂದ ಹಳೆಯದನ್ನು ಸುಟ್ಟುಹಾಕುತ್ತಾಳೆ. ಆದರೆ ಗಂಡ ಹೊಸ ಸೀರೆ ತರಲಿಲ್ಲ. ಅವಳಿಗೆ ಹೊಸದೂ ಇಲ್ಲ, ಹಳೆಯದೂ ಇಲ್ಲವಾಯಿತು. ಹೊಸ ವಸ್ತು ಸಿಗುವ ಮೊದಲೇ ಅದು ಸಿಕ್ಕೇ ಸಿಗುತ್ತದೆ ಎಂಬ ಊಹೆಯಲ್ಲಿ ಹಳೆಯದನ್ನು ಬಿಟ್ಟುಬಿಡುವವರಿಗೆ ಇದು ಅನ್ವಯಿಸುತ್ತದೆ.

January 22, 2008

ದಂಡಿಗೆ ಹೆದರಲಿಲ್ಲ… (ಉತ್ತರ ಕನ್ನಡದ ಗಾದೆ – 132 ಮತ್ತು 133)

ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ದಾಸಯ್ಯನ ಜಾಗಟೆಗೆ ಹೆದರುತ್ತೀನಾ?

ಸೈನ್ಯ ಬಂದರೂ ಹೆದರಲಿಲ್ಲ, ಸೈನ್ಯ ದಾಳಿಯಿಟ್ಟರೂ ಹೆದರಲಿಲ್ಲ, ಯಕ್ಕಶ್ಚಿತ ಒಂದು ದಾಸಯ್ಯನ ಜಾಗಟೆ ನಾನು ಹೆದರುವುದಿಲ್ಲ ಎಂಬ ಅರ್ಥ. ದೊಡ್ಡ ದೊಡ್ಡ ಕಷ್ಟಗಳಿಗೇ ಹೆದರದವನು ಸಣ್ಣ ಪುಟ್ಟ ಕಷ್ಟಗಳಿಗೆ ಏಕೆ ಹೆದರುತ್ತೇನೆ ಎಂಬ ಅರ್ಥದಲ್ಲಿ ಇದನ್ನು ಬಳಸಲಾಗುತ್ತದೆ. ಇದೇ ಅರ್ಥವನ್ನು ಕೊಡುವ ಇನ್ನೊಂದು ಮಾತು- ಕರಡಿಗೇ ಹೆದರದವನು ನಾನು, ಕರಿ ಕಂಬಳಿಗೆ ಹೆದರುತ್ತೀನಾ?

January 21, 2008

ಅರಿಯೆನೆಂದರೆ … (ಉತ್ತರ ಕನ್ನಡದ ಗಾದೆ – 131)

ಅರಿಯೆನೆಂದರೆ ಅರವತ್ತು ಗುಣ, ಬಲ್ಲೆನೆಂದರೆ ಹೋಯ್ತವನ ಹೆಣ.

ಯಾವುದೋ ಒಂದು ಕೆಲಸ ಗೊತ್ತಿಲ್ಲ ಎಂದು ಹೇಳಿದರೆ, ಜನರು 'ಗೊತ್ತಿಲ್ಲ ಅವನಿಗೆ ಬಿಡಿ' ಎಂದು ಸುಮ್ಮನಾಗುತ್ತಾರೆ. ಕೆಲಸ ಗೊತ್ತು ಎಂದು ಹೇಳಿಕೊಂಡರೆ ಎಲ್ಲಾ ಕೆಲಸವನ್ನೂ ನಿಮಗೇ ಹಚ್ಚಿ ನಿಮ್ಮ ಹೆಣ ಬೀಳುವವರೆಗೂ ದುಡಿಸುತ್ತಾರೆ ಎಂದು ಅರ್ಥ.

January 17, 2008

ಮರೆತೇನೆಂದರೂ ಮರೆಯಲಿ ಹ್ಯಾಂಗಾ...?

ಊರನ್ನು ಬಿಟ್ಟು ಬಂದ ಮೇಲೆ ಊರಿನ ನೆನಪು ತುಂಬಾ ಕಾಡತೊಡಗಿದೆ. ಮೊನ್ನೆ ಅಪ್ಪನ ಜೊತೆ ಫೋನಿನಲ್ಲಿ ಮಾತನಾಡುತ್ತಿರುವಾಗ ನಾನೇನೋ ಹೇಳಿದ್ದಕ್ಕೆ ಅಪ್ಪ, 'ನಿನಗೆ ತಿಳುವಳಿಕೆ ಸಾಲದು ಸುಮ್ಮನಿರು, ಕುಂಬಾರಿ' ಎಂದಿದ್ದರು. ಕುಂಬಾರ ಎಂಬ ಪುಲ್ಲಿಂಗ ರೂಪವನ್ನು ಕುಂಬಾರಿ ಎಂದು ಅದ್ಭುತವಾಗಿ ಸ್ತ್ರೀಲಿಂಗ ರೂಪಕ್ಕೆ ಇಳಿಸಿದ್ದರು ಅಪ್ಪ! ನಗು ಬಂದಿತ್ತಾದರೂ ಮರು ಕ್ಷಣವೇ ಮನಸ್ಸು ಊರಿನ ಜನರ ಹೆಸರುಗಳನ್ನೆಲ್ಲಾ ಮೆಲುಕು ಹಾಕಿಬಿಟ್ಟಿತ್ತು.

ಅಂದ್ರೆ, ನಮ್ಮೂರಿನ ಜನ ಗಂಡಸರಿಗೆ ಇಡುವ ಹೆಸರನ್ನೇ ಸ್ತ್ರೀಲಿಂಗ ರೂಪಕ್ಕೆ ತಂದು ಹೆಂಗಸರಿಗೆ ಇಟ್ಟುಬಿಡುತ್ತಾರೆ. ಹೆಂಗಸರಿಗಾಗಿ ವಿಶೇಷ ಹೆಸರೇ ಬೇಕಾಗುವುದಿಲ್ಲ ಅವರಿಗೆ! ಕೆಲವು ಉದಾಹರಣೆ ಇಲ್ಲಿವೆ ನೋಡಿ... ನಾಗ್ಯಾ-ನಾಗಿ...ಇವರಿಬ್ಬರೂ ಅಣ್ಣ-ತಂಗಿ, ಅಕ್ಕ-ತಮ್ಮ, ಗಂಡ-ಹೆಂಡತಿ ಯಾರೂ ಅಲ್ಲ. ಬೇರೆ ಬೇರೆ ಮನೆಯವರು.

ಅಂತೆಯೇ... ಹನುಮ-ಹನುಮಿ... ಗುತ್ಯ-ಗುತ್ತಿ... ಬೊಮ್ಮ-ಬೊಮ್ಮಿ... ಕೆರಿಯ-ಕೆರೆದೇವಿ... ನರಸ-ನರಸಿ...ಮಾರ್ಯ-ಮಾರಿ...

ತಿಮ್ಮ-ತಿಮ್ಮಿ... ತಿಪ್ಪ-ತಿಪ್ಪಿ... ಯಲ್ಲ-ಯಲ್ಲಿ... ಭದ್ರ-ಭದ್ರಿ...
ಚಂದ್ರ-ಚಂದ್ರಿ... ಮೋಟ್ಯ-ಮೋಟಿ... ಬಸವ-ಬಸವಿ… ನಿಂಗ-ನಿಂಗಿ... ಚನ್ನ-ಚನ್ನಿ... ರುದ್ರ-ರುದ್ರಿ... ಗಿಡ್ಡ-ಗಿಡ್ದಿ... ಹುಲಿಯಾ-ಹುಲಿಗೆಮ್ಮ... ಗಣಪ-ಗಣಪಿ... ಬಂಗಾರ್ಯ-ಬಂಗಾರಿ... ಈರ-ಈರಿ (ವೀರಭದ್ರ ಎನ್ನುವುದು ವೀರ ಎಂದು ಮೊಟಕಾಗಿ ಈರ ಎಂದಾಗಿ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ). ನನಗೀಗ ನೆನಪಾಗುತ್ತಿರುವುದು ಇಷ್ಟು. ಇನ್ನೊ ಹಲವಾರು ಇವೆ.

ಈಗೀಗ ಹೊಸ ಹೆಸರುಗಳನ್ನು ಇಡಲು ತೊಡಗಿದ್ದಾರೆ. 'ನೆಹರು' ಎಂಬುದೇ ಒಬ್ಬ ವ್ಯಕ್ತಿಯ ಹೆಸರು ಎಂದರೆ ನಿಮಗೆ ನಂಬಲು ಕಷ್ಟವಾಗಬಹುದು! ಇನ್ನು 'ವಸೇಕಾ' ಎಂದು ಕೂಗುತ್ತಿರುತ್ತಾರೆ. ಅವನ ಹೆಸರು 'ಅಶೋಕ'! 'ಸಬೈಚಂದ್ರಾ' ಎಂದು ಕೂಗುತ್ತಿದ್ದರೆ ಅದು ನಮಗೆ ಕೇಳಿ ಗೊತ್ತಿದ್ದವರಿಗಷ್ಟೇ ಗೊತ್ತಾಗುತ್ತದೆ 'ಸುಭಾಸಚಂದ್ರ'ನನ್ನು ಕರೆಯುತ್ತಿದ್ದಾರೆ ಎಂದು. ನನ್ನ ಅಮ್ಮ ಮದುವೆಯಾಗಿ ಆ ಊರಿಗೆ ಬಂದು ಸೇರಿದ ಕೆಲವು ದಿನಗಳಲ್ಲಿ ಹುಟ್ಟಿದ ಹೆಚ್ಚು ಕಮ್ಮಿ ಎಲ್ಲ ಮಕ್ಕಳಿಗೂ 'ಸಾವಿತ್ರಿ' ಎಂದೇ ಹೆಸರಿಟ್ಟಿದ್ದರಂತೆ! ನನಗಿಂತ ಎರಡು ವರ್ಷ ದೊಡ್ಡವರಾದ ಆ ಸಾವಿತ್ರಿಯರ ಜೊತೆಯಲ್ಲೆಲ್ಲಾ ನಾನು ಆಟ ಆಡಿದ್ದೇನೆ. ನಾಲ್ಕೈದು ಸಾವಿತ್ರಿಯರು ಇರುವುದರಿಂದ ಅವರನ್ನೆಲ್ಲಾ ಕರೆಯುತ್ತಿದ್ದುದು 'ಗಿಡ್ಡ ಸಾವುಂತ್ರಿ'... 'ಅಂಗಡಿ ಸಾವುಂತ್ರಿ'... 'ಬೊಮ್ಮನ ಮನೆ ಸಾವುಂತ್ರಿ'... 'ಕೆಳಗಿನ ಕೇರಿ ಸಾವುಂತ್ರಿ'....ಇತ್ಯಾದಿ. ಅಮ್ಮನನ್ನು ಕರೆಯುತ್ತಿದ್ದುದು 'ಸಾವುಂತ್ರಮ್ಮ' ಎಂದು. ಈಗ ಆ ಊರಲ್ಲಿ 'ಸಾವುಂತ್ರಮ್ಮ' ಒಬ್ಬರೇ. ಉಳಿದೆಲ್ಲಾ ಸಾವಿತ್ರಿಯರು ಮದುವೆಯಾಗಿ ಬೇರೆ ಬೇರೆ ಊರು ಸೇರಿ ನನ್ನಂತೆಯೇ ಸತಿ ಸಾವಿತ್ರಿಯರಾಗಿದ್ದಾರೆ.

ಊರು ಎಂದೊಡನೆ ಅಪ್ಪ, ಅಮ್ಮ, ತಮ್ಮ, ದನ-ಕರು, ಶಾಲೆಯವರೆಗೂ ಕಳುಹಿಸಲು ಬರುತ್ತಿದ್ದ ನಾಯಿ, ಹಾಸಿಗೆಯಲ್ಲಿ ಬೆಚ್ಚಗೆ ಮಲಗುತ್ತಿದ್ದ ಬೆಕ್ಕು, ಓದಿದ ಶಾಲೆ, ಕಲಿಸಿದ ಮಾಸ್ತರು-ಆಕ್ಕೋರು, ಶಾಲೆಗೆ ಇನ್ಸಸ್ಪೆಕ್ಟರ್ ಬರುತ್ತಾರೆಂದು ಕೈಯಾರೇ ಮಾಡಿದ್ದ ಮಣ್ಣಿನ ಆಟಿಗೆಗಳು, ಶಾಲೆಯಲ್ಲಿ ಆಡಿದ ಅಲೆಕ್ಸಾಂಡರ್ ನಾಟಕ, ಮಧ್ಯದಲ್ಲೇ ಮರೆತು ಹೋದ ಸ್ವಾತಂತ್ರ್ಯೋತ್ಸವದ ಭಾಷಣ, ಅಪ್ಪ ಬರೆದುಕೊಟ್ಟ ಭಾಷಣದ ಚೀಟಿ, ಅಪ್ಪ ರೇಡಿಯೋದಲ್ಲಿ ದಿನಲೂ ಕೇಳುತ್ತಿದ್ದ ಪ್ರದೇಶ ಸಮಾಚಾರ, ಇಂದು ಮುನಿಸಿಕೊಂಡರೂ ನಾಳೆ ಕೂಡಿ ಆಡುತ್ತಿದ್ದ ಗೆಳೆಯ-ಗೆಳತಿಯರು, ಕಣ್ಣಮುಚ್ಚಾಲೆ ಆಡುವಾಗ ಅವಿತುಕೊಳ್ಳುತ್ತಿದ್ದ ಮೂಲೆಗಳು, ಭತ್ತದ ಪಣತ, ಸುತ್ತಾಡಿದ ಬೆಟ್ಟ-ಗುಡ್ಡ, ಮೀನು ಹಿಡಿದ ಹೊಳೆ, ಸೂರ್ಯ ಕಿರಣ ಬೀಳದಷ್ಟು ದಟ್ಟವಾಗಿದ್ದ ಕಾಡು, ನಾಲ್ಕಾಳು ಎತ್ತರಕ್ಕೆ ಜೀಕಿದ ಆಲದ ಬೀಳಲಿನ ಜೋಕಾಲಿ, ಆಲೆಮನೆ, ಬೆಂಕಿ ಪೊಟ್ಟಣದಲ್ಲಿಟ್ಟ ಜೀರುಂಡೆ ಹುಳು, ಬಾಲಕ್ಕೆ ದಾರ ಕಟ್ಟಿಸಿಕೊಂಡ ಹೆಲಿಕಾಪ್ಟರ್ ಹುಳು, ಜಿಟಿ-ಜಿಟಿ ಮಳೆ, ಜಡಿ ಮಳೆ, ಅಡುಗೆ ಮನೆಯ ಒಲೆಯಲ್ಲಿ ಅಮ್ಮ ಸುಡುತ್ತಿದ್ದ ಹಪ್ಪಳ, ಬಚ್ಚಲ ಒಲೆಯ ಬೆಂಕಿಯಲ್ಲಿ ನಾವು ಸುಡುತ್ತಿದ್ದ ಹಲಸಿನ ಬೇಳೆ....ಒಂದೇ ಎರಡೇ....ಏನೆಲ್ಲಾ ನೆನಪಾಗುತ್ತದೆ.

ಈಗ ಯಾವುದೋ ಒಂದು ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶದ ಮೂಲೆಯಲ್ಲಿ ಕುಳಿತಿದ್ದರೂ ಕೂಡ ಎಷ್ಟೆಲ್ಲಾ ಸವಿನೆನಪುಗಳನ್ನು ಇತ್ತ ನನ್ನ ಊರನ್ನು ಮರೆತೇನೆಂದರೂ ಮರೆಯಲಿ ಹ್ಯಾಂಗಾ?

ಗುಡ್ಡ ಅಗೆದು … (ಉತ್ತರ ಕನ್ನಡದ ಗಾದೆ – 130)

ಗುಡ್ಡ ಅಗೆದು ಇಲಿ ಹುಡುಕಿದಂತೆ.

ದೊಡ್ಡದೇನೋ ಹುಡುಕುವ ಉದ್ದೇಶದಿಂದ ಒಂದು ದೊಡ್ಡ ಗುಡ್ಡವನ್ನು ಆಗೆದರೆ ಕೊನೆಯಲ್ಲಿ ಸಿಕ್ಕಿದ್ದು ಮಾತ್ರ ಒಂದು ಚಿಕ್ಕ ಇಲಿ. ದೊಡ್ಡದೇನೂ ಪತ್ತೆ ಮಾಡಲು ತುಂಬಾ ಪ್ರಯತ್ನ ಮಾಡಿ ಕೊನೆಯಲ್ಲಿ ಒಂದು ಸಣ್ಣ ವಿಷಯವನ್ನು ಪತ್ತೆ ಮಾಡಿಗಾಗ ಈ ಮಾತು ಅನ್ವಯಿಸುತ್ತದೆ.

January 16, 2008

ಗುರು ಕೊಟ್ಟ … (ಉತ್ತರ ಕನ್ನಡದ ಗಾದೆ – 129)

ಗುರು ಕೊಟ್ಟ ಜೋಳಿಗೆಯೆಂದು ಗೂಟಕ್ಕೆ ನೇತು ಹಾಕಿದರೆ ಭಿಕ್ಷೆ ಬಂದು ಬೀಳುವುದಿಲ್ಲ.

ಅದು ಗುರು ಕೊಟ್ಟ ಅದ್ಭುತ ಶಕ್ತಿಯುಳ್ಳ ಜೋಳಿಗೆಯಾದರೂ ಅದನ್ನು ಬರಿದೇ ಗೂಟಕ್ಕೆ ನೇತು ಹಾಕಿ ಇಟ್ಟರೆ ಭಿಕ್ಷೆ ತಾನಾಗಿಯೇ ಬಂದು ಅದರಲ್ಲಿ ಬೀಳುವುದಿಲ್ಲ. ತಾನೇ ಹೋಗಿ ಬೇಡಿದರೆ ಮಾತ್ರ ಭಿಕ್ಷೆ ಸಿಗುತ್ತದೆ.

ಅಂತೆಯೇ ಯಾರಿಗೋ ಹೇಳಿದ್ದೇನೆ, ಅಥವಾ ಇನ್ಯಾರೋ ಹೇಳಿದ್ದಾರೆ ಎಂದುಕೊಂಡು ನಾವು ಸುಮ್ಮನಿದ್ದರೆ ನಮ್ಮ ಕೆಲಸ ಆಗುವುದಿಲ್ಲ. ನಮ್ಮ ಕೆಲಸ ಆಗಬೇಕಾದರೆ ನಮ್ಮ ಪ್ರಯತ್ನ ತೀರಾ ಅವಶ್ಯ ಎಂಬುದನ್ನು ಈ ಗಾದೆ ಹೇಳುತ್ತದೆ.

January 15, 2008

ಗಂಗಾಳ ತೊಳೆಯಲು … (ಉತ್ತರ ಕನ್ನಡದ ಗಾದೆ – 128)

ಗಂಗಾಳ ತೊಳೆಯಲು ಮಂಗಳ ವಾರವೇ ಏಕೆ ಬರಬೇಕು?

ಪಾತ್ರೆ ತೊಳೆಯಲು ಮಂಗಳವಾರವೇ ಬರಬೇಕೆಂದು ಕಾಯುವ ಅಗತ್ಯವಿಲ್ಲ. ಅದೊಂದು ನೆಪ ಅಷ್ಟೇ. ಪಾತ್ರೆಯನ್ನು ಯಾವ ದಿನ ಬೇಕಾದರೂ ತೊಳೆಯಬಹುದು. ಯಾವುದಾದರೂ ಕೆಲಸವನ್ನು ಅನಗತ್ಯವಾದ ಅಥವಾ ಅಸಂಬದ್ಧವಾದ ಕಾರಣಗಳಿಗಾಗಿ ಮುಂದೂಡುವವರನ್ನು ಕುರಿತ ಗಾದೆ ಇದು.

January 14, 2008

ಮೊಳ ನೇಯುವಷ್ಟರಲ್ಲಿ … (ಉತ್ತರ ಕನ್ನಡದ ಗಾದೆ – 127)

ಮೊಳ ನೇಯುವಷ್ಟರಲ್ಲಿ ಮಾರು ಹೋಗಿತ್ತು.

ಬಟ್ಟೆಯನ್ನು ಒಂದು ಮೊಳದಷ್ಟು ನೇಯುವಷ್ಟರಲ್ಲಿ ಒಂದು ಮಾರಿನಷ್ಟು ಹಾಳಾಗಿ ಹೋಗಿತ್ತು. ಈ ಗಾದೆಯನ್ನು ಹಣಕಾಸಿನ ತೊಂದರೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಕಷ್ಟಪಟ್ಟು ಸ್ವಲ್ಪ ಹಣವನ್ನು ಕೂಡಿಹಾಕುವಷ್ಟರಲ್ಲಿ ದೊಡ್ಡದೇನೋ ಖರ್ಚು ಬಂದು ಗಳಿಸಿದ್ದಕ್ಕಿಂತ ಜಾಸ್ತಿ ಖರ್ಚಾದರೆ ಈ ಮಾತು ಅನ್ವಯಿಸುತ್ತದೆ.

January 11, 2008

ಅನಿಸುತಿದೆ ಯಾಕೋ ಇಂದು...

ಈ ಹಾಡನ್ನು ನೀವೇ ಬರೆದಿದ್ದು ಅಂದುಕೊಳ್ಳಿ ಒಂದು ನಿಮಿಷ. ಅಯ್ಯೋ ಅದು ಜಯಂತ ಕಾಯ್ಕಿಣಿ ಅವರು ಬರೆದಿದ್ದು ನಾನು ನನ್ನದು ಅಂತ ಹೇಗೆ ಹೇಳಲಿ ಅಂತೀರಾ? ಒಂದು ನಿಮಿಷ ಹಾಗೇ ಅಂದುಕೊಳ್ಳಿ... ಯೋಚನೆಗೇನು... ಏನು ಬೇಕಾದರೂ ಮಾಡಬಹುದು! In fact ಬೇಕಾಗಿದ್ದನ್ನೆಲ್ಲಾ ಮಾಡಲು ಸಾಧ್ಯವಿರುವುದು ಯೋಚನೆಯಲ್ಲಿ ಮಾತ್ರ ತಾನೇ! ನಿಮ್ಮ ಮಗಳು ಪಿಕ್‌ನಿಕ್‌ಗೆ ಹೋದಾಗ ಯಾರೋ ಹುಡುಗರು ನೀವು ಬರೆದ ಹಾಡನ್ನೇ ಹೇಳಿ ನಿಮ್ಮ ಮಗಳನ್ನೇ tease ಮಾಡಿದರೆ ಎನೆನಿಸುತ್ತದೆ?

ಅದೇ ಆಗಿದ್ದು ಜಯಂತ ಕಾಯ್ಕಿಣಿಯವರಿಗೆ ಮತ್ತು ಅವರ ಮಗಳಿಗೂ ಕೂಡ. ಇದು ಯಾವುದೋ newspaper ನ ಮಸಾಲಾ column ನಲ್ಲಿ ಓದಿದ್ದಲ್ಲ. ಖುದ್ದಾಗಿ ಜಯಂತ ಕಾಯ್ಕಿಣಿಯವರೇ ಹೇಳಿದ್ದು… ನನಗಲ್ಲ, ನನ್ನ ಚಿಕ್ಕಮ್ಮನಿಗೆ. ಅವರು ನನ್ನ ಚಿಕ್ಕಪ್ಪನ ಹಳೆಯ friend. ಚಿಕ್ಕಪ್ಪನ ಮನೆಗೆ ಕಾಯ್ಕಿಣಿಯವರು ಹಿಂದಿನ ಬಾರಿ ಬಂದಾಗ ಚಿಕ್ಕಮ್ಮ ಹೇಳಿದರಂತೆ, ' ಜಯಂತ ನೀನು ಬರದಿದ್ದು ಹಾಡು... ಅನಿಸುತಿದೆ ಯಾಕೋ ಇಂದು... ರಾಶಿ ಚೊಲೊ ಇದ್ದು.' ಆಗ ಕಾಯ್ಕಿಣಿಯವರು ಹೇಳಿದ್ದರಂತೆ, 'ಅದೇ ಆಗಿದ್ದು ಮಜಾ ಶಕು ಅಕ್ಕಾ, ಈಗಿತ್ತಲಾಗಿ ನನ್ನ ಮಗಳು ಪಿಕ್‌ನಿಕ್‌ಗೆ ಹೋದಾಗ ಯಾರೋ ಹುಡುಗ್ರು ಅದೇ ಹಾಡು ಹೇಳಿ ನನ್ನ ಮಗಳನ್ನು ಗೇಲಿ ಮಾಡಿದಿದ್ವಡ, ಆವಾಗ ನನ್ನ ಮಗಳಿಗೂ ಅನಿಸಿತ್ತಡ ನನ್ನ ಅಪ್ಪ ಬರೆದ ಹಾಡನ್ನ ನನ್ಗೇ ಹೇಳ್ತಾ ಇದ್ದ ಹೇಳಿ!!’ (ಜಯಂತ ಕಾಯ್ಕಿಣಿಯವರು ಹವ್ಯಕರಷ್ಟೇ ಚೆನ್ನಾಗಿ ಹವ್ಯಕ ಭಾಷೆಯನ್ನು ಮಾತನಾಡುತ್ತಾರಂತೆ.)

ಸರಿ, ನಿಮಗೇನು ಅನಿಸ್ತಾ ಇದೆ?

ಹೊಸದರಲ್ಲಿ ಅಗಸ … (ಉತ್ತರ ಕನ್ನಡದ ಗಾದೆ – 126)

ಹೊಸದರಲ್ಲಿ ಅಗಸ ಗೋಣಿಯನ್ನೂ ಎತ್ತಿ ಎತ್ತಿ ಒಗೆದಿದ್ದ.

ಹೊಸದಾಗಿ ಅಗಸನ ಕೆಲಸವನ್ನು ಪ್ರಾರಂಭಿಸಿದ ಉತ್ಸಾಹದಲ್ಲಿ ಗೋಣಿಯನ್ನೂ ಕೂಡಾ ಎತ್ತಿ ಎತ್ತಿ ಒಗೆದು ತೊಳೆದಿದ್ದ. ನಂತರ ಅವನಿಗೆ ಬಟ್ಟೆಯನ್ನು ತೊಳೆಯಲೂ ಕೂಡ ಬೇಜಾರಾಗುತ್ತದೆ. ಆರಂಭ ಶೂರರು ಎಂದು ಹೇಳುತ್ತೇವಲ್ಲಾ ಅವರೇ ಇವರು. ಮೊದಲು ಇದ್ದ ಉತ್ಸಾಹ ಕೊನೆಯವರೆಗೂ ಇರುವುದಿಲ್ಲ. ಒಂದು ಕೆಲಸವನ್ನು ಎಲ್ಲಿಲ್ಲದ ಉತ್ಸಾಹದಿಂದ ಪ್ರಾರಂಭಿಸಿ ಸ್ವಲ್ಪ ಸಮಯದ ನಂತರ ಆ ಕೆಲಸದಲ್ಲಿ ನಿರಾಸಕ್ತಿಯನ್ನು ತಳೆಯುವವರ ಬಗೆಗಿನ ಗಾದೆ ಇದು. English ನಲ್ಲಿ ಹೇಳುವುದಾದರೆ New broom sweeps well.

January 10, 2008

ಕುರುಡನಿಗೆ ಕಣ್ಣು … (ಉತ್ತರ ಕನ್ನಡದ ಗಾದೆ – 125)

ಕುರುಡನಿಗೆ ಕಣ್ಣು ಬಂದಿದ್ದೇ ಗೊತ್ತು.

ಕಣ್ಣು ಯಾವುದರಿಂದ ಬಂದರೇನು, ಹೇಗೆ ಬಂದರೇನು? ಅವನಿಗೆ ಕಣ್ಣು ಬಂದಿದ್ದಷ್ಟೇ ಗೊತ್ತು. ಉಳಿದವುಗಳ ಬಗ್ಗೆ ಅವನು ತಲೆ ಕೆಡಿಸಿಕೊಳ್ಳುವುದಿಲ್ಲ.
ಹಾಗೆಯೇ, ನಮ್ಮ ಕೆಲಸ ಆದರಾಯಿತು; ಯಾರಿಂದಲಾದರೂ ಆಗಲಿ, ಹೇಗೆ ಬೇಕಾದರೂ ಆಗಲಿ, ಕೆಲಸ ಆಗುವುದಷ್ಟೇ ಮುಖ್ಯ ಎಂದಿದ್ದಾಗ ಈ ಮಾತನ್ನು ಬಳಸಿ.

January 8, 2008

ಕ0ಜೂಸಿಗೆ… (ಉತ್ತರ ಕನ್ನಡದ ಗಾದೆ – 124)

ಕ0ಜೂಸಿಗೆ ಮತ್ತೊಂದು ಖರ್ಚು, ಮೈಗಳ್ಳನಿಗೆ ಮತ್ತೊಂದು ಕೆಲಸ...

ಕ0ಜೂಸಿಗೆ ಮತ್ತೊಂದು ಖರ್ಚು, ಮೈಗಳ್ಳನಿಗೆ ಮತ್ತೊಂದು ಕೆಲಸ ಬಂದೆ ತೀರುತ್ತದೆ ಎಂದರೆ ಗಾದೆ ಪೂರ್ತಿಯಾಗುತ್ತದೆ. ಆದರೆ ವಾಡಿಕೆಯಲ್ಲಿ ಅದನ್ನು ಹೇಳುವುದು ಕಡಿಮೆ. ಕ0ಜೂಸಿಯು ಹಣ ಉಳಿಸಲು ಹೋಗಿ ಅಗ್ಗದ ವಸ್ತುವನ್ನು ಕೊಳ್ಳುತ್ತಾನೆ. ಅದು ಬೇಗ ಹಾಳಾಗುವುದರಿಂದ ಅವನಿಗೆ ಪುನಃ ಖರ್ಚು ಬರುತ್ತದೆ. ಮೈಗಳ್ಳನು ಕೆಲಸವನ್ನು ಸುಲಭದಲ್ಲಿ ಮಾಡಲು ಹೋಗಿ ಇನ್ನೊಂದು ಕೆಲಸವನ್ನು ಮೈಮೇಲೆ ಹಾಕಿಕೊಳ್ಳುತ್ತಾನೆ.


ನಾನು ಕುಳಿತಲ್ಲಿಂದಲೇ ಕಸವನ್ನು ಬುಟ್ಟಿಗೆ ಎಸೆಯಲು ಹೋದಾಗಲೆಲ್ಲಾ ಅದು ಬುಟ್ಟಿಯ ಪಕ್ಕದಲ್ಲಿ ಬೇಳುತ್ತದೆ. ಮತ್ತೆ ಎದ್ದು ಹೋಗಿ ಅದನ್ನು ಆರಿಸಿ ಬುಟ್ಟಿಗೆ ಹಾಕಬೇಕಾಗುತ್ತದೆ. ಹೀಗಾದಗಲೆಲ್ಲಾ ಈ ಗಾದೆ ನೆನಪಾಗುತ್ತದೆ.

January 7, 2008

ಉಗುರಿನಲ್ಲಿ ಹೋಗುವುದಕ್ಕೆ … (ಉತ್ತರ ಕನ್ನಡದ ಗಾದೆ – 123)

ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಿದ್ದನು.

ಯಾವುದೋ ಒಂದು ಸಣ್ಣ ವಸ್ತುವನ್ನು ಕೀಳಲು ಉಗುರೇ ಸಾಕಾಗುತ್ತಿತ್ತು. ಆದರೆ ಅವನು ಆ ಕೆಲಸವನ್ನು ಮಾಡಲು ಕೊಡಲಿಯನ್ನು ತೆಗೆದುಕೊಂಡಿದ್ದ.

ಸ್ವಲ್ಪದರಲ್ಲೇ ಬಗೆಹರಿಯುವ ಸಣ್ಣ ವಿಷಯವನ್ನೂ ದೊಡ್ಡದು ಮಾಡಿಕೊಂಡು ಅದನ್ನು ಬಗೆಹರಿಸಲು ದೊಡ್ಡ ಯೋಜನೆಯನ್ನು ಹಾಕುವವರಿಗೆ ಈ ಮಾತು ಅನ್ವಯಿಸುತ್ತದೆ.

January 4, 2008

ಒಕ್ಕಣ್ಣರ ರಾಜ್ಯದಲ್ಲಿ … (ಉತ್ತರ ಕನ್ನಡದ ಗಾದೆ – 122)

ಒಕ್ಕಣ್ಣರ ರಾಜ್ಯದಲ್ಲಿ ಒಂದು ಕಣ್ಣನ್ನು ಮುಚ್ಚಿಕೊಂಡೇ ಇರು.

ಆ ರಾಜ್ಯದಲ್ಲಿ ಎಲ್ಲರೂ ಒಕ್ಕಣ್ಣರು. ಅಲ್ಲಿ ಅದೇ ಸರಿ. ಅಲ್ಲಿಗೆ ನೀನು ಹೋದರೆ ಒಂದು ಕಣ್ಣನ್ನು ಮುಚ್ಚಿಕೊಂಡೇ ಇರು. ಇಲ್ಲವಾದರೆ ಒಂದು ಕಣ್ಣನ್ನು ಕಿತ್ತು ಹಾಕುತ್ತಾರೆ.

ಯಾವ ವ್ಯವಸ್ಥೆಯಲ್ಲಿ ಇರುತ್ತೇವೋ ಅದೇ ವ್ಯವಸ್ಥೆಯನ್ನು ಅನುಸರಿಸಿಕೊಂಡು ಹೋಗಬೇಕಾಗುತ್ತದೆ (ನಮಗೆ ಮನಸ್ಸಿಲ್ಲದಿದ್ದರೂ ಕೂಡ) ಎಂಬುದನ್ನು ಸೂಚಿಸುತ್ತದೆ. Be a Roman while you are in Rome!

January 1, 2008

ಮೊದಲಿದ್ದವಳೇ ಒಳ್ಳೆಯವಳು … (ಉತ್ತರ ಕನ್ನಡದ ಗಾದೆ – 120 ಮತ್ತು 121)

ಮೊದಲಿದ್ದವಳೇ ಒಳ್ಳೆಯವಳು ಎಬ್ಬಿಸಿದರಾದ್ರೂ ಉಣ್ಣೋಳು.

ಮೊದಲಿದ್ದವಳು ಮಲಗಿದ್ದವಳನ್ನು ಎಬ್ಬಿಸಿದರಾದ್ರೂ ಊಟ ಮಾಡುತ್ತಿದ್ದಳು. ಈಗಿನವಳದ್ದು ಇನ್ನೂ ಕಷ್ಟ. ಎಬ್ಬಿಸಿದರೂ ಊಟ ಮಾಡುವುದಿಲ್ಲ. ಬಹುಶಃ ಊಟವನ್ನೂ ಮಾಡಿಸಬೇಕು.

ಮೊದಲಿದ್ದ ವ್ಯಕ್ತಿ ಅಥವಾ ವ್ಯವಸ್ಥೆಯೇ ಕೆಟ್ಟದಾಗಿತ್ತು ಅಂದುಕೊಂಡರೆ ನಿಜವಾಗಿ ಅದೇ ಚೆನ್ನಾಗಿತ್ತು, ಹೊಸದಾಗಿ ಬಂದಿದ್ದು ಇನ್ನೊ ಕೆಟ್ಟದಾಗಿದೆ ಎನ್ನುವ ಅರ್ಥ. ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ- ಭತ್ತ ತಿನ್ನುವವನು ಹೋದರೆ ಉಮಿ ತಿನ್ನುವವನು ಬರುತ್ತಾನೆ. ಉಮಿ ಎಂದರೆ ಭತ್ತದ ಮೇಲಿನ ಸಿಪ್ಪೆ ಅಥವಾ ಹೊಟ್ಟು. ಅವನು ಕೆಟ್ಟವನು, ಅಕ್ಕಿಯನ್ನು ತಿನ್ನುವುದಿಲ್ಲ, ಭತ್ತವನ್ನೇ ತಿಂದು ಮುಗಿಸುತ್ತಾನೆ ಅವನು ಹೋದರೆ ಒಳ್ಳೆಯದು ಎಂದುಕೊಂಡರೆ ನಂತರ ಬಂದವನು ಇನ್ನೂ ಕೆಟ್ಟವನು. ಅವನು ಉಮಿಯನ್ನೇ ತಿಂದು ಮುಗಿಸುತ್ತಾನೆ.