February 5, 2008

ಬ್ಲಾಗ್ ಮತ್ತು ಜಪಾನಿನಲ್ಲಿ ತೆಂಗಿನಮರ

ನಾವು ಬ್ಲಾಗ್ ನಲ್ಲಿ ಏನೆಲ್ಲಾ ಬರೆಯುತ್ತೇವಲ್ಲಾ? ಮತ್ತು ಬರೆದಾದ ಮೇಲೆ ಏನೋ ಕಡಿದು ಕಟ್ಟೆ ಹಾಕಿದ್ದೇವೆಂದು ಬೀಗುತ್ತೇವಲ್ಲಾ? ಅದರ ಮಜಾ ಹೇಳುತ್ತೇನೆ ಕೇಳಿ. ಬೇರೆಯವರು ಏನನ್ನೋ ಹುಡುಕುತ್ತಿರುವಾಗ ಗೂಗಲ್ ನಲ್ಲಿ ಅವೆಲ್ಲಾ ಬಂದು ಅಡೆತಡೆಯನ್ನು ಉಂಟುಮಾಡುತ್ತವೆ; ಕಾಡಿನಲ್ಲಿ ಮೊದಲೇ ಗೊತ್ತಿಲ್ಲದ ದಾರಿಯಲ್ಲಿ ಹೋಗುತ್ತಿರುವಾಗ ಕಾಲಿಗೆ ಸಿಕ್ಕಿಕೊಳ್ಳುವ ಬಳ್ಳಿಯಂತೆ.

ಆ ದಿನ ರಾಜೀವ್ ನ colleague ಸತೀಶ್ ಊಟಕ್ಕೆ ಬಂದಿದ್ದರು. ಊಟವಾದ ಮೇಲೆ ಮಾತು ಕತೆ ಹೀಗೆ ಸುಮ್ಮನೆ ಸಾಗಿತ್ತು. ಸತೀಶ್ ಮಾತಾಡುತ್ತಿದ್ದರೆ ಕೇಳಲು ತುಂಬಾ ಚೆನ್ನಾಗಿರುತ್ತದೆ... ನಗುವುದೊಂದೇ ಕೆಲಸ. ಅವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಎಷ್ಟು ಚೆನ್ನಾಗಿ ಅಂದರೆ ಮರದ ಮೇಲಿನ ಮಂಗ ಕೈ ಬಿಡುವಷ್ಟು! ಅವರ ಜೊತೆಯಲ್ಲಿ ಮಾತು ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಗಿ ಹೋಗುತ್ತದೆ. ಮಾತು ಕತೆ ಹೀಗೆ ನಡೆದಿರಬೇಕಾದರೆ ನಾಳೆ ಎಲ್ಲಿ ಹೋಗೋಣ ಎಂಬುದರ ಬಗ್ಗೆ ಮಾತು ಬಂತು. ರಾಜೀವ್ ಮೊದಲೇ ಯೋಚಿಸಿದ್ದವರ ತರ ಹೇಳಿದರು "ತಕೆ (ಬಿದಿರು- ಜಪಾನಿಗಳ ಭಾಷೆಯಲ್ಲಿ) temple ಗೆ ಹೋಗೋಣ. ಹೋಗುವ ದಾರಿಯೂ ಚೆನ್ನಾಗಿದೆ, ತುಂಬಾ ಕಾಡು ಇದೆ, ಒಂದು ಸುಂದರವಾದ ಕೊಳವೂ ಇದೆ ಎಂದು ಕೇಳಿದ್ದೇನೆ.


(ಎಡದಿಂದ ಬಲಕ್ಕೆ- ತಕೆ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ನಾನು, ವಿನಾಯಕ, ಸತೀಶ್ ಮತ್ತು ರಾಜೀವ್)


(ತಕೆ ದೇವಸ್ಥಾನದ ಮುಖ್ಯ ದ್ವಾರದ ಬಳಿ)

"ಸತೀಶ್ ಕೇಳಿದರು, "ದಾರಿ ಹೇಗೆ, ಯಾವ train, ಎಷ್ಟು ಹೊತ್ತಿಗೆ ಎಂದು ಗೊತ್ತಾ ?" ರಾಜೀವ್ ಹೇಳಿದ್ದು "ಗೂಗಲ್ ನಲ್ಲಿ ನೋಡೋಣ." ಸತೀಶ್ ತಕ್ಷಣ ಹೇಳಿದರು, "ರಾಜೀವ್, forget it. ಯಾವ site ನೋಡಬೇಕೆಂದು specific ಆಗಿ ಗೊತ್ತಿಲ್ಲದಿದ್ದರೆ ಹುಡುಕುವುದು waste". ಮತ್ತು ತಮ್ಮ ಒಂದು ಅನುಭವವನ್ನು ಕೂಡ ಹೇಳಿದರು.

ಒಂದು ದಿನ ಅವರು ಆಫೀಸ್ ನಿಂದ ಬರುವಷ್ಟರಲ್ಲಿ ಅವರ ಪತ್ನಿ ಮೀನಾಕ್ಷಿ ಯಾವುದೋ cake ಮಾಡುವ ಬಗೆಯನ್ನು ಇಂಟರ್ನೆಟ್ ನಲ್ಲಿ ನೋಡಿಕೊಂಡಿದ್ದರಂತೆ. ಮತ್ತು ಇವರ ಹತ್ತಿರ ಬನ್ನಿ ಬೇಕಾಗುವ ವಸ್ತುಗಳನ್ನೆಲ್ಲ ತೆಗೆದುಕೊಂಡು ಬರೋಣ ಎಂದರಂತೆ. ಬೇಕಾಗುವ ವಸ್ತುಗಳ list ನೋಡಿದರೆ ಏನೋ ಒಂದು 'ದೆಮೆರಾ ಶುಗರ್' ಅಂತ ಒಂದು ಕಂಡಿತು. ಸತೀಶ್ ಹೇಳಿದರಂತೆ. "ಮೀನಾ, ಅದನ್ನು ಜಪಾನಿಗಳ ಅಂಗಡಿಯಲ್ಲಿ ಏನೆಂದು ಕೇಳುವುದು? ಸಾಧ್ಯವಿಲ್ಲ ಬಿಡು" ಎಂದು. ಮೀನಾ ಹೇಳಿದರಂತೆ, "ಇರಿ ಸತೀಶ್ ಗೂಗಲ್ ನಲ್ಲಿ ನೋಡುತ್ತೇನೆ." ಸರಿ ಕೊಟ್ಟರಂತೆ ಗೂಗಲ್ ನಲ್ಲಿ 'Demera sugar in Japanese'. ಅದು ಕರೆದುಕೊಂಡು ಹೋಯಿತಂತೆ ಯಾವುದೊ ಬ್ಲಾಗ್ ಗೆ ಅದರಲ್ಲಿ 'Demera sugar' ಮತ್ತು 'Japanese' ಅನ್ನುವ ಎರಡೂ ಶಬ್ದಗಳೂ ಇದ್ದವು. ಆದರೆ ಒಂದಕ್ಕೊಂದು ಸಂಬಂಧವಿಲ್ಲ; ಎರಡೂ ಒಂದೊಂದು ಮೂಲೆಯಲ್ಲಿ!

ಇನ್ನೂ ಏನೇನೋ ಮಾತಾಡುತ್ತಾ ನಾನು ಹೇಳಿದೆ, "ನಾನು ಜಪಾನಿನಲ್ಲಿ ಒಂದೇ ಒಂದು ತೆಂಗಿನ ಮರವನ್ನೂ ನೋಡಿಲ್ಲ". ರಾಜೀವ್ ಹೇಳಿದರು "ಜಪಾನಿನ ಇನ್ನೂ ದಕ್ಷಿಣ ಭಾಗಕ್ಕೆ ಹೋದರೆ ಕಾಣುತ್ತದೆ. Tropical plant ಅಲ್ವಾ? ಒಕಿನಾವಾ (ಜಪಾನಿನ ದಕ್ಷಿಣ ತುದಿ)ಗೆ ಹೋಗೋಣ್ವಾ?" ನಾನು ಹೇಳಿದೆ "ಒಹ್ ಹೌದಲ್ವಾ? ನನಗೆ ಗಮನವೇ ಇರಲಿಲ್ಲ. ಆದರೆ ಗೂಗಲ್ ನಲ್ಲಿ ಚಿತ್ರವನ್ನಾದರೂ ನೋಡಬಹುದಲ್ಲಾ?" ಸತೀಶ್ ಜೋರಾಗಿ ನಗಲಾರಂಭಿಸಿದರು. ನಾನು ಹುಬ್ಬೇರಿಸಿದೆ. "ದಯಮಾಡಿ ಅದರಲ್ಲಿ ಹುಡುಕಬೇಡ, ಯಾವುದೋ ಮಲೆಯಾಳಿ ಮನುಷ್ಯ ಬರೆದ ಬ್ಲಾಗ್ ಗೆ ಹೋಗಿ ಸೇರುತ್ತೀಯಾ!" ಎಂದರು. ಈಗ ಎಲ್ಲರೂ ನಗುತ್ತಿದ್ದೆವು.

ಗಣಪತಿಯವರು ಒಮ್ಮೆ ನನಗೆ comment ಬರೆದಿದ್ದರು, 'sometimes I feel like searching my car key also in Google!' ಎಂದು . ಆ ದಿನ ಬಹಳ ದೂರವಿಲ್ಲ ಎಂದೆನಿಸುತ್ತದೆ!! ನಮಗೆ ಗೂಗಲ್ ಮೇಲೆ ಎಷ್ಟು dependency ಎಂದರೆ ಏನು ಬೇಕಾದರೂ ಅದರಲ್ಲಿ ಹುಡುಕಲು ಮುಂದಾಗುತ್ತೇವೆ. ಇಷ್ಟೆಲ್ಲಾ ಆಗುವಷ್ಟರಲ್ಲಿ ರಾಜೀವ್ station, train, time, ಎಲ್ಲಾ ಇಂಟರ್ನೆಟ್ ನಲ್ಲಿ ನೋಡಿ ಆಗಿತ್ತು. ನಂತರ ರಾಜೀವ್ ಬಳಿ ಇರುವ ಪುಸ್ತಕ* ದಲ್ಲಿ ಉಳಿದ ಮಾಹಿತಿಗಳನ್ನು ನೋಡಿಕೊಂಡು ಮರುದಿನ ಹೋಗುವುದೆಂದು ನಿರ್ಧಾರ ಮಾಡಿದೆವು. ಮರುದಿನ ಬೆಳಿಗ್ಗೆ ಬೇಗ ಹೊರಟು ಕಾಡು, ಪರ್ವತಗಳ ನಡುವೆ ಹಾದು ಹೋಗಿ ತಕೆ ದೇವಸ್ಥಾನವನ್ನು
ನೋಡಿಕೊಂಡು, ಒಂದು ಸುಂದರ ಕೊಳವನ್ನೂ ನೋಡಿಕೊಂಡು ಬಂದ ಅನುಭವ ನಮ್ಮದಾಯಿತು.(ಎಡದಿಂದ ಬಲಕ್ಕೆ- ತಕೆ ದೇವಸ್ಥಾನದ ಹತ್ತಿರವೇ ಇರುವ ಕೊಳದ ಬಳಿ ರಾಜೀವ್, ಸತೀಶ್, ನಾನು ಮತ್ತು ವಿನಾಯಕ)

(ಕೊಳದ ಬಳಿ ರಾಜೀವ್ ಮತ್ತು ನಾನು)

* Walters, Gary D’A. (1992), Day Walks Near Tokyo, Kodansha International, Tokyo. http://www.kodansha-intl.com/

4 comments:

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕಾ...
ಎಷ್ಟು ನಿಜ ಅಲ್ದಾ? ಮನೆ ಕೀ ಕೂಡ ಗೂಗಲ್ ಅಲ್ಲಿ ಹುಡುಕುವಂಥ ಪರಿಸ್ಥಿತಿ! ಮತ್ತೆ ಅಡುಗೆ ಮನೆಯಲ್ಲಿ ಪಾತ್ರೆ ಕಾಣ್ದೆ ಹೋದ್ರೂ ಮಿಸ್ ಕಾಲ್ ಕೊಟ್ಟು ಹುಡುಕನ ಅನಿಸ್ತು ನಂಗಂತು ಮೊಬೈಲ್ ಹುಡುಕಿದಂಗೆ . ಇನ್ನೇನಾಗ್ತನ ಲೈಫ್ ಅಲ್ಲಿ .
ಚಂದದ ಯಾನ ಗೂಗಲ್ಲೊಂದಿಗೆ. ಹೀಗೇ ಬರೀತ ಇರು.

Seema S. Hegde said...

ಶಾಂತಲಾ,
ನಗು ಬಂತು ನಿನ್ನ comment ಓದಿ.
ಪಾತ್ರೆನೂ ಮಿಸ್ ಕಾಲ್ ಕೊಟ್ಟು ಹುಡುಕದು... ಹ್ಹ ಹ್ಹ ಹ್ಹ...
Comment ಅಷ್ಟೇ meaningful ಆಗಿ ಇದ್ದು ಕೂಡ.

ನಾವಡ said...

ಸೀಮಾ ಅವರೇ,
ನಿಜ. ಶಾಂತಲಾ ಅವರು ಹೇಳಿದ್ದು ಸತ್ಯ. ಟೆಕ್ನಾಲಜೀನ ಎಷ್ಟೊಂದು ಅವಲಂಬಿಸಿದ್ದೇವಲ್ಲಾ ?

ಚೆನ್ನಾಗಿತ್ತು ಬರಹ.
ನಾವಡ

Seema S. Hegde said...

ನಾವಡ ಅವರೇ,
ಅವಳು ಹೇಳಿದ್ದೂ ನಿಜ, ನೀವು ಹೇಳಿದ್ದೂ ನಿಜ.
ಒಂದು ದಿನ technology ಏನಾದರೂ ಕೈ ಕೊಟ್ಟರೆ ನಮ್ಮ ಜೀವನವೇ ಅಲ್ಲೋಲ ಕಲ್ಲೋಲ!