September 30, 2007

ಮನೆ ದೇವರೇ … (ಉತ್ತರ ಕನ್ನಡದ ಗಾದೆ – 23, 24 ಮತ್ತು 25)

ಮನೆ ದೇವರೇ ಮಣ್ಣು ತಿನ್ನುತ್ತಿರುವಾಗ ಮಾರಿಯಮ್ಮ ಹೋಳಿಗೆ ಕೇಳಿದ್ದಳು.

ಮನೆಯಲ್ಲಿನ ದೇವರಿಗೇ ನೈವೇದ್ಯ ಮಾಡುವುದು ಕಷ್ಟವಾಗಿರುವಾಗ ಮರಿಯಮ್ಮನಿಗೆ ಎಲ್ಲಿಂದ ಹೋಳಿಗೆ ನೈವೇದ್ಯ ಮಾಡುವುದು?

ನಾವೇ ಕಷ್ಟದಲ್ಲಿರುವಾಗ ಇನ್ನೊಬ್ಬರು ನಮ್ಮಿಂದ ಮಾಡಲು ಸಾಧ್ಯವಿಲ್ಲದ ಸಹಾಯವನ್ನು ಬಯಸಿದಾಗ ಹೇಳುವ ಮಾತು ಇದು.

ಇದಕ್ಕೆ ಹತ್ತಿರದ ಇನ್ನೆರಡು ಗಾದೆಗಳೆಂದರೆ, ಹನುಮಂತ ದೇವರೇ ಹಗ್ಗ ತಿನ್ನುತ್ತಿರುವಾಗ ಪೂಜಾರಿ ಶಾವಿಗೆ ಕೇಳಿದ್ದನು ಮತ್ತು
ಗುರುವಿಗೇ ಗುಟುಕು ನೀರು ಶಿಷ್ಯನಿಗೆಲ್ಲಿಂದ ಎಣ್ಣೆ ಮಜ್ಜನ?

September 29, 2007

ಗಂಡ ರಂಡೆ ಎಂದರೆ … (ಉತ್ತರ ಕನ್ನಡದ ಗಾದೆ – 22)

ಗಂಡ ರಂಡೆ ಎಂದರೆ ಘಟ್ಟದ ಕೆಳಗಿನ ಭಟ್ಟನೂ ಹೇಳುತ್ತಾನೆ.

ರಂಡೆ ಎಂದರೆ ಸ್ವಲ್ಪ ಕೀಳು ಭಾಷೆಯಲ್ಲಿ ವಿಧವೆ ಎಂದರ್ಥ.
ಸಾಮಾನ್ಯವಾಗಿ ಬಯ್ಯುವಾಗ ಈ ಶಬ್ದವನ್ನು ಬಳಸುತ್ತಾರೆ.
ಗಂಡನೇ ತನ್ನ ಹೆಂಡತಿಯನ್ನು ರಂಡೆ ಎಂದು ಕರೆದರೆ ಘಟ್ಟದ ಕೆಳಗಿನಿಂದ ಅತಿಥಿಯಾಗಿ ಬಂದ ಭಟ್ಟನೂ ಕೂಡ ಅವಳನ್ನು ಹಾಗೆಯೇ ಸಂಭೋಧಿಸುತ್ತಾನೆ.

ನಮಗೆ ತೀರಾ ಹತ್ತಿರದವರೇ ನಮ್ಮನ್ನು ಅವಮಾನಿಸಿದರೆ ದೂರದವರೂ ಕೂಡ ಅವಮಾನಿಸಿಯೇ ತೀರುತ್ತಾರೆ ಎಂಬುದು ಈ ಗಾದೆಯ ಅರ್ಥ.

September 28, 2007

ಮನೆಯಲ್ಲಿ ಗದ್ದಲ ಎಂದು … (ಉತ್ತರ ಕನ್ನಡದ ಗಾದೆ – 21)

ಮನೆಯಲ್ಲಿ ಗದ್ದಲ ಎಂದು ಮಂಜುಗುಣಿ ತೇರಿಗೆ ಹೋಗಿದ್ದನಂತೆ.

ತೇರು ಎಂದರೆ ಸಣ್ಣ ಪ್ರಮಾಣದ ಜಾತ್ರೆ.
ಮನೆಯಲ್ಲಿ ಗದ್ದಲವನ್ನು ತಡೆಯಲಾರದೇ ಒಬ್ಬನು ಮಂಜುಗುಣಿ ಎಂಬ ಊರಿನಲ್ಲಿ ನಡೆಯುವ ತೇರಿಗೆ ಹೋಗಿದ್ದನಂತೆ.

ಯಾರಾದರೂ ಮನಃ ಶಾಂತಿಯನ್ನು ಹುಡುಕಿಕೊಂಡು ಇದ್ದ ಸ್ಥಳದಿಂದ ಬೇರೆ ಕಡೆ ಹೋಗಿ ಅಲ್ಲೂ ಗದ್ದಲದ ಪರಿಸ್ಥಿತಿಯನ್ನೇ ಎದುರಿಸುವ ಪ್ರಸಂಗ ಬಂದರೆ ಈ ಮಾತನ್ನು ಉದಾಹರಿಸುತ್ತಾರೆ.

September 27, 2007

ಊದುವುದನ್ನು ಕೊಟ್ಟು … (ಉತ್ತರ ಕನ್ನಡದ ಗಾದೆ – 19 ಮತ್ತು 20)

ಊದುವುದನ್ನು ಕೊಟ್ಟು ಬಾರಿಸುವುದನ್ನು ತೆಗೆದುಕೊಂಡಿದ್ದನು.

ಊದುವ ವಾದ್ಯ ಕಷ್ಟಕರ ಎಂದೆನಿಸಿ ಅಥವಾ ಅದರಲ್ಲಿ ನಿರಾಸಕ್ತಿ ಹೊಂದಿ ಬಾರಿಸುವ ತಮಟೆಯನ್ನು ತೆಗೆದುಕೊಂಡಿದ್ದನು.
ಆದರೆ ಎರಡರಲ್ಲೂ ಅಷ್ಟೇ ಕಷ್ಟ ಇದೆ ಎಂದು ಅವನಿಗೆ ನಂತರ ತಿಳಿಯುತ್ತದೆ.

ಯಾವುದೋ ಒಂದು ಕೆಲಸದಲ್ಲಿ ಅಥವಾ ವಸ್ತುವಿನಲ್ಲಿ ಕಷ್ಟ ಇದೆ ಎಂದು ಅದನ್ನು ಬದಲಾಯಿಸಿಕೊಂಡರೆ ಇನ್ನೊಂದರಲ್ಲೂ ಅಷ್ಟೇ ಕಷ್ಟ ಇದೆಯೆಂದು ತಿಳಿದಾಗ ಈ ಮಾತನ್ನು ಹೇಳಬಹುದು.

ಇದಕ್ಕೆ ಸರಿಸಮಾನವಾಗಿ ಬಳಸುವ ಮಾತೆಂದರೆ ಕರಿಯುವ ಬಾಣಲೆಯಿಂದ ಉರಿಯುವ ಬೆಂಕಿಗೆ ಬಿದ್ದಂತೆ.
ಒಂದು ಕಷ್ಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಇನ್ನೊಂದು ದೊಡ್ಡ ಕಷ್ಟದಲ್ಲಿ ಸಿಕ್ಕಿಕೊಂಡಾಗ ಬಳಸುವ ಮಾತು.

September 26, 2007

ಮಾಣಿ, ಗೋಣಿ, ಓಣಿ … (ಉತ್ತರ ಕನ್ನಡದ ಗಾದೆ – 17 ಮತ್ತು 18)

ಮಾಣಿ, ಗೋಣಿ, ಓಣಿ ಈ ಮೂರು ಸಿಗದಿದ್ದರೆ ನಾಯಿ ಮೂರೂ ಮುಕ್ಕಾಲು ಘಳಿಗೆಯಲ್ಲಿ ಕಾಶಿಗೆ ಹೋಗುತ್ತಿತ್ತು.

ನಾಯಿ ಕಾಶಿಗೆ ಹೊರಟರೆ ನೇರವಾಗಿ ಹೋಗುವುದಿಲ್ಲ. ಮಾಣಿ (ಹುಡುಗ) ಕಂಡ ಕೂಡಲೇ ಆಟ ಆಡುತ್ತದೆ, ಗೋಣಿಚೀಲ ಕಂಡ ಕೂಡಲೇ ಮಲಗಿಕೊಳ್ಳುತ್ತದೆ ಮತ್ತು ಓಣಿ ಕಂಡ ಕೂಡಲೇ ಸುಮ್ಮನೆ ಅಲೆಯತೊಡಗುತ್ತದೆ.
ಹಾಗಾಗಿ ಅದು ಕಾಶಿಯನ್ನೇ ತಲುಪುವುದಿಲ್ಲ.

ನೇರವಾಗಿ ಗುರಿ ಮುಟ್ಟುವ ಬಗ್ಗೆ ಆಲೋಚನೆ ಮಾಡದೇ ಸಣ್ಣ ಪುಟ್ಟ ಆಕರ್ಷಣೆಗಳಲ್ಲೇ ತಲ್ಲೀನರಾಗಿರುವವರ ಬಗ್ಗೆ ಹೇಳುವಾಗ ಈ ಗಾದೆಯನ್ನು ಬಳಸುತ್ತಾರೆ.

ಇದಕ್ಕೆ ಹತ್ತಿರವಾದ ಇನ್ನೊಂದು ಗಾದೆ ಅಂದರೆ ಮಾಡುವ ಕೆಲಸ ಬಿಟ್ಟು ಹಾಡುವ ದಾಸಯ್ಯನ ಜೊತೆ ಹೋಗಿದ್ದಳು.
ಅವಳು ಕೆಲಸ ಮಾಡುತ್ತಿದ್ದಾಗ ದಾಸಯ್ಯ ಬಂದು ಹಾಡು ಹೇಳಿದರೆ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಅವನ ಜೊತೆ ಹೋಗಿ ಬಿಡುತ್ತಾಳೆ.ತನ್ನ ಕೆಲಸವನ್ನು ನಿರ್ಲಕ್ಷಿಸಿ ಇನ್ನೊಂದು ಆಕರ್ಷಣೆಗೆ ಒಳಪಟ್ಟಾಗ ಬಳಸುವ ಮಾತು.

September 25, 2007

ಹೊಳೆಗೆ ಮೂರು ಮಾರು … (ಉತ್ತರ ಕನ್ನಡದ ಗಾದೆ – 16)

ಹೊಳೆಗೆ ಮೂರು ಮಾರು ಇರುವಾಗಲೇ ಚಲ್ಲಾಣ ಮೇಲೇರಿಸಿದ್ದ.

ನೀರು ತಾಕಿದರೆ ಒದ್ದೆಯಾಗುತ್ತದೆ ಎಂದು ಹೊಳೆ ಇನ್ನೊ ಸ್ವಲ್ಪ ದೂರದಲ್ಲಿರುವಾಗಲೇ ಚಡ್ಡಿಯನ್ನು ಮೇಲೇರಿಸಿಕೊಂಡಿದ್ದ.

ಅಗತ್ಯಕ್ಕಿಂತ ತುಂಬಾ ಮೊದಲೇ ಮುಂಜಾಗ್ರತೆವಹಿಸುವವರನ್ನು ನೋಡಿ ಈ ಗಾದೆಯನ್ನು ಮಾಡಿದ್ದಾರೆ.

September 21, 2007

ಕುದುರೆ ಕಂಡರೆ… (ಉತ್ತರ ಕನ್ನಡದ ಗಾದೆ – 14 ಮತ್ತು 15)

ಕುದುರೆ ಕಂಡರೆ ಕಾಲು ನೋವು.

ಎಷ್ಟೋ ಹೊತ್ತಿನ ತನಕ ಸುಮ್ಮನೆ ನಡೆಯುತ್ತಿದ್ದವನಿಗೆ ಕುದುರೆ ಕಂಡ ಕೂಡಲೇ ಕಾಲು ನೋವು ಬಂದಂತೆನಿಸುತ್ತದೆ.

ಆರಾಮದಾಯಕ ವಸ್ತುಗಳನ್ನು ಕಂಡ ಕೂಡಲೇ ಆಯಾಸವೆಂದು ಹೇಳುವವರನ್ನು ಕುರಿತು ಈ ಗಾದೆಯನ್ನು ಹೇಳುತ್ತಾರೆ.

ಹೆಚ್ಚೂ ಕಡಿಮೆ ಇದೇ ಅರ್ಥದಲ್ಲಿ ಉಪಯೋಗಿಸಲ್ಪಡುವ ಇನ್ನೊಂದು ಗಾದೆ ಎಂದರೆ ಹೊತ್ತುಕೊಂಡು ಹೋಗುವವರಿದ್ದರೆ ಸತ್ತವರಂತೆ ಬಿದ್ದೇನು. ಬೇರೆ ಯಾರಾದರೂ ಕೆಲಸ ಮಾಡುತ್ತಾರೆ ಎಂದು ಅನಿಸಿದರೆ ನಾನು ಆಲಸಿಯಾಗುತ್ತೇನೆ ಎಂಬ ಅರ್ಥವನ್ನು ಕೊಡುತ್ತದೆ.

ಇವೆರಡರ ಬದಲಿಗೆ ಉಪಯೋಗಿಸಬಹುದಾದಂತ ಗಾದೆ ಎಂದರೆ ತಾಯಿ ಕಂಡರೆ ತಲೆ ಬೇನೆ. ಇದನ್ನು ನೆನಪಿಸಿದ ಗಾಯತ್ರಿ ಅವರಿಗೆ ಧನ್ಯವಾದಗಳು.

September 20, 2007

ಅಕಸ್ಮಾತ್ ಉದುರಿದ ಹನಿಗಳು...!!

Chatting

ಪಕ್ಕದಲ್ಲಿಯೇ ಜೀವದ ಗೆಳೆಯ ನಿಂತಿದ್ದರೂ
ಅವನ ಕಡೆ ದಿವ್ಯ ನಿರ್ಲಕ್ಷ ತೋರಿ
ದೂರದ ಮುಖ ಕಾಣದಿರುವ
ಗೆಳೆಯನ ಜೊತೆ
ಹರಟೆ ಹೊಡೆಯುವುದೇ chatting.
========================================================

i-pod

'ಅದೂ ಇದೂ ಕೇಳಿಸದಂತೆ
ಕಿವುಡನ ಮಾಡಯ್ಯ...' ಎಂದು
ದಾಸರು ಅಂದು ಹಾಡಿದ್ದು
ದೇವರಿಗೆ ಇಂದು ಕೇಳಿಸಿರಬೇಕು.
ಜಗತ್ತಿಗೆ i-pod ಕರುಣಿಸಿ
ತಣ್ಣಗೆ ಕುಳಿತಿದ್ದಾನೆ.


ನಾನೆಷ್ಟು ಮೊರೆಯಿಟ್ಟರೂ
ಕೇಳುತ್ತಿಲ್ಲ ಆತ ನನ್ನ ಪಾಡು.
ಆ ದೇವರ ಬಳಿಯೂ ಇರಬಹುದೇ
i- ಪಾಡು?
========================================================

ಸೃಷ್ಟಿ ವೈಚಿತ್ರ್ಯ

ಬ್ರಹ್ಮನ ಸೃಷ್ಟಿ ವಿಚಿತ್ರವಾಗತೊಡಗಿದೆ:
ಹಿಂದೆ ಗಾತ್ರ ದೊಡ್ಡದಾದಂತೆ
ಸಾಮರ್ಥ್ಯ ಹೆಚ್ಚಾಗುತ್ತಿತ್ತು, ರಾಕ್ಷಸರಿಗೆ.
ಇಂದು ಗಾತ್ರ ಚಿಕ್ಕದಾದಂತೆ
ಸಾಮರ್ಥ್ಯ ಹೆಚ್ಚಾಗುತ್ತಿದೆ USB, Nano ಗಳಿಗೆ.
========================================================

Google

ಎಲ್ಲಾ ಮಾಹಿತಿಗಳನ್ನೂ ನೆನಪಿಟ್ಟುಕೊಳ್ಳುವ
ಅಗತ್ಯ ಈಗ ಇಲ್ಲ ಬಿಡಿ.
Google ಗೆ ಹೋಗಿ ನೋಡಿ.
========================================================

ಸುಖ ಹೆಚ್ಚಾಗಿ… (ಉತ್ತರ ಕನ್ನಡದ ಗಾದೆ – 13)

ಸುಖ ಹೆಚ್ಚಾಗಿ ಶಾನೂಭೋಗನನ್ನು ಬಯಸಿದ್ದಳು.

ಅವಳ ಗಂಡ ಊರಿನ ಸಾಹುಕಾರ. ಒಳ್ಳೆಯ ಗಂಡನಿದ್ದಾನೆ, ಸಂಸಾರ ಇದೆ. ಅವಳಿಗೆ ಯಾವುದಕ್ಕೂ ಕೊರತೆಯಿಲ್ಲ. ಆದರೂ ತನ್ನ ಗಂಡನ ಕೈಕೆಳಗೆ ಕೆಲಸ ಮಾಡುವ ಶಾನೂಭೋಗನ ಕಡೆಗೆ ಆಕರ್ಷಿತಳಾಗುತ್ತಾಳೆ.

ಜೀವನದಲ್ಲಿ ಎಲ್ಲಾ ಸುಖ ಇದ್ದರೂ ಏನೋ ಒಂದು ಒಳ್ಳೆಯದಲ್ಲದ್ದಕ್ಕೆ ಆಸೆಪಡುವವರ ಕುರಿತು ಇರುವ ಮಾತು ಇದು.

September 19, 2007

ಅಗ್ಗಕ್ಕೆ… (ಉತ್ತರ ಕನ್ನಡದ ಗಾದೆ – 12)

ಅಗ್ಗಕ್ಕೆ ಮುಗ್ಗಿದ ಜೋಳ.

ಕಡಿಮೆ ಬೆಲೆ ಕೊಟ್ಟು ಜೋಳ ತಂದರೆ ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಅದು ಮುಗ್ಗಿ ಹಾಳಾಗಿ ಹೋಗುತ್ತದೆ.

ಯಾರಾದರೂ ಕಾಂಜೂಸುತನದಿಂದ ಅಗ್ಗದ ವಸ್ತುವನ್ನು ತಂದು ಅದು ಬೇಗ ಹಾಳಾದರೆ, ಅಂಥವರನ್ನು ಉದ್ದೇಶಿಸಿ ಈ ಮಾತನ್ನು ಹೇಳಿ.

September 18, 2007

ಅಕ್ಕಮ್ಮಜ್ಜಿಗೆ... (ಉತ್ತರ ಕನ್ನಡದ ಗಾದೆ – 11)

ಅಕ್ಕಮ್ಮಜ್ಜಿಗೆ ಗಂಡ ಇಲ್ಲ, ಮಾಣೇಶ ಭಟ್ಟರಿಗೆ ಹೆಂಡತಿಯಿಲ್ಲ.

ಅಕ್ಕಮ್ಮಜ್ಜಿಗೆ ಗಂಡ ಇಲ್ಲದ್ದರಿಂದ ಹಾಗೂ ಮಾಣೇಶ ಭಟ್ಟರಿಗೆ ಹೆಂಡತಿಯಿಲ್ಲದ್ದರಿಂದ ಮದುವೆಯಾಗುತ್ತಾರೆಯೇ ವಿನಹ ಪರಸ್ಪರ ಮೆಚ್ಚುಗೆಯಿಂದಲ್ಲ.

ಯಾರಿಗೂ ಮನಸ್ಸಿಲ್ಲದಿದ್ದರೂ ಅನಿವಾರ್ಯ ಕಾರಣಗಳಿಗಾಗಿ, ಬೇರೆ ದಾರಿ ಕಾಣದೇ ಒಪ್ಪಂದ ಮಾಡಿಕೊಳ್ಳುವಂತಹ ಸಂದರ್ಭ ಬಂದರೆ ನೀವೂ ಕೂಡ ಈ ಮಾತನ್ನು ಉಪಯೋಗಿಸಬಹುದು.

September 15, 2007

ಸಣ್ಣ ಹುಣ್ಣಿಗೆ... (ಉತ್ತರ ಕನ್ನಡದ ಗಾದೆ – 10)

ಸಣ್ಣ ಹುಣ್ಣಿಗೆ ಸಣ್ಣ ಕ್ವಾಟಲೆ; ದೊಡ್ಡ ಹುಣ್ಣಿಗೆ ದೊಡ್ಡ ಕ್ವಾಟಲೆ.

ಕ್ವಾಟಲೆ ಅಂದರೆ ನೋವು. ಕೋಟಲೆ ಎಂಬ ಶಬ್ದ ವಾಡಿಕೆಯಲ್ಲಿ ಕ್ವಾಟಲೆ ಆಗಿರಬಹುದೆಂದು ನನ್ನ ಊಹೆ.ಹುಣ್ಣು ಸಣ್ಣದಿದ್ದರೆ ಕಡಿಮೆ ನೋವಿರುತ್ತದೆ. ಹುಣ್ಣು ದೊಡ್ಡದಿದ್ದರೆ ಹೆಚ್ಚು ನೋವಿರುತ್ತದೆ. ನೋವು ಮಾತ್ರ ತಪ್ಪಿದ್ದಲ್ಲ.

ಶ್ರೀಮಂತರು, ದೊಡ್ಡ ಜನರೆಂದು ಕರೆಸಿಕೊಳ್ಳುವವರು ಕೂಡ ಅವರದೇ ಆದ ಕಷ್ಟಗಳನ್ನು ಹೊಂದಿರುತ್ತಾರೆ ಎಂದು ಹೇಳುವಾಗ ಈ ಮಾತನ್ನು ಬಳಸುವುದು ರೂಢಿಯಲ್ಲಿದೆ.

September 14, 2007

ಭಟ್ಟನ ಮಗಳಿಗೆ... (ಉತ್ತರ ಕನ್ನಡದ ಗಾದೆ – 9)

ಭಟ್ಟನ ಮಗಳಿಗೆ ಹುಟ್ಟಲು ದಿನವಿಲ್ಲ.

ಭಟ್ಟನ ಪ್ರಕಾರ ಅವನ ಮಗಳು ಅತ್ಯಂತ ಶ್ರೇಷ್ಟ ದಿನದಂದು ಹುಟ್ಟಬೇಕು. ಆದರೆ ಅವನಿಗೆ ಪ್ರತಿಯೊಂದು ದಿನದಲ್ಲೂ ಏನಾದರೂ ಕುಂದು ಕಂಡೇ ಕಾಣುತ್ತದೆ. ಅದಕ್ಕೆ ಅವನು 'ದೇವರೇ ನನ್ನ ಮಗಳು ಇವತ್ತು ಹುಟ್ಟುವುದು ಬೇಡ' ಎಂದು ದಿನಾಲೂ ಪ್ರಾರ್ಥಿಸುತ್ತಿದ್ದನಂತೆ.

ಯಾವುದಾದರೂ ಕೆಲಸವನ್ನು ಕ್ಷುಲ್ಲಕ ಕಾರಣಕ್ಕೆ ಮುಂದೂಡುವವರನ್ನು ಕುರಿತು ಈ ಗಾದೆ ಮಾತನ್ನು ಹೇಳುತ್ತಾರೆ.
ಭಟ್ಟನ ಮಗಳೇ ಏಕೆ? ಮಗನೂ ಆಗಿರಬಹುದಲ್ಲ, ಅವನಿಗೆ ಮೊದಲೇ ಹೇಗೆ ಗೊತ್ತಾಯಿತು ಎಂದು ಕೇಳಬೇಡಿ. ಇದು ಕೇವಲ ವಾಡಿಕೆಯ ಮಾತು ಅಷ್ಟೇ.

September 13, 2007

ಉಂಡಾತಾ ಕೇಳಿದರೆ... (ಉತ್ತರ ಕನ್ನಡದ ಗಾದೆ – 8)

ಉಂಡಾತಾ ಕೇಳಿದರೆ ಮುಂಡಾಸು ಮೂವತ್ಮೂರು ಮೊಳ ಎಂದಿದ್ದ.

ಒಬ್ಬನ ಬಳಿ ಊಟಾವಾಯಿತಾ ಎಂದು ಕೇಳಿದ್ದಕ್ಕೆ, ತನ್ನ ಮುಂಡಾಸು ಮೂವತ್ಮೂರು ಮೊಳ ಇದೆ ಎಂದಿದ್ದನಂತೆ.

ಯಾರನ್ನಾದರೂ ಏನಾದರೂ ಕೇಳಿದಾಗ ಅವರು ಅದಕ್ಕೆ ಸಂಬಂಧವಿಲ್ಲದ ಉತ್ತರವನ್ನು ಕೊಟ್ಟರೆ ಈ ಗಾದೆಯನ್ನು ಉದಾಹರಿಸುತ್ತಾರೆ.

September 12, 2007

ತೆಪ್ಪಾರ ಗೌಡ... (ಉತ್ತರ ಕನ್ನಡದ ಗಾದೆ – 7)

ತೆಪ್ಪಾರ ಗೌಡ ಮುಂಡಾಸು ಸುತ್ತುವುದರೊಳಗೆ ಮಂಜುಗುಣಿ ತೇರು ನೆಲೆ ನಿಂತಿತ್ತು.

ಮಂಜುಗುಣಿ ಎಂಬ ಊರಲ್ಲಿ ತೇರನ್ನು ಎಳೆಯುವಲ್ಲಿ ಮುಖ್ಯ ಪಾತ್ರ ವಹಿಸಬೇಕಾಗಿದ್ದ ತೆಪ್ಪಾರು ಎಂಬ ಊರಿನ ಗೌಡ ಮುಂಡಾಸು ಸುತ್ತಿಕೊಂಡು ತಯಾರಾಗಿ ಬರುವುದರೊಳಗೆ ತೇರನ್ನು ಎಳೆದು ಮುಗಿಸಿದ್ದರು.

ಯಾವುದಾದರೂ ಕೆಲಸಕ್ಕೆ ಯಾರಾದರೂ ಗಡಿಬಿಡಿಯಿಲ್ಲದೇ ತುಂಬಾ ನಿಧಾನವಾಗಿ ತಯಾರಿ ನಡೆಸುತ್ತಿದ್ದರೆ ಅಂಥವರ ಬಗ್ಗೆ ಈ ಗಾದೆಯನ್ನು ಹೇಳಲಾಗುತ್ತದೆ.

September 11, 2007

ಹಂಚು ಕಾಣದ ಮೂಳೆ … (ಉತ್ತರ ಕನ್ನಡದ ಗಾದೆ – 4, 5 ಮತ್ತು 6)

ಹಂಚು ಕಾಣದ ಮೂಳೆ (ಮುದುಕಿ) ಕಂಚು ಕಂಡರೆ ಮೂರು ಸಲ ಬೆಳಗಿ ನೋಡಿದ್ದಳು.

ಹೆಂಚಿನ ಮನೆಯನ್ನೂ ಕಾಣದ ಮುದುಕಿಗೆ ಅಕಸ್ಮಾತ್ ಕ0ಚಿನ ಪಾತ್ರೆಗಳೇನಾದರೂ ಸಿಕ್ಕಿದರೆ ಅವುಗಳನ್ನು ಸೊಕ್ಕಿನಿಂದ ಮೂರು ಸಲ ತಿಕ್ಕಿ, ತೊಳೆದು ಎಲ್ಲರ ಮುಂದೆ ಪ್ರದರ್ಶನ ಮಾಡುತ್ತಾಳೆ.

ಅಪರೂಪಕ್ಕೊಮ್ಮೆ ಸಿಕ್ಕ ವಸ್ತುವನ್ನು ಎಲ್ಲರ ಮುಂದೆ ಜಂಭದಿಂದ ಪ್ರದರ್ಶನ ಮಾಡುವವರ ಬಗ್ಗೆ ಇರುವ ಗಾದೆ ಇದು.

ಇದಕ್ಕೆ ತತ್ಸಮಾನವಾದ ಇನ್ನೂ ಎರಡು ಗಾದೆಗಳು ಪ್ರಚಲಿತದಲ್ಲಿವೆ.
ಅಲ್ಪನಿಗೆ ಐಶ್ವರ್ಯ ಬಂದರೆ ಹಗಲಲ್ಲಿ ದೀವಟಿಗೆ ಹಿಡಿದ ಮತ್ತು ಮೂರ್ಖನಿಗೆ ಅಧಿಕಾರ ಬಂದರೆ ಮಧ್ಯ ರಾತ್ರಿಯಲ್ಲೂ ಕೊಡೆ ಹಿಡಿದ.
ಇದನ್ನು ನೆನಪಿಸಿದಂತಹ ಹರೀಶ್ ಗೆ ಧನ್ಯವಾದಗಳು.

September 10, 2007

ಕಾಶಿಗೆ ಹೋದರೆ... (ಉತ್ತರ ಕನ್ನಡದ ಗಾದೆ - 3)

ಕಾಶಿಗೆ ಹೋದರೆ ಕಾಸಿಗೊಂದು ಕುದುರೆ.

ನಾವಿರುವ ಸ್ಥಳದಲ್ಲಿ ಕುದುರೆ ದುಬಾರಿ.
ಕಾಶಿಗೆ ಹೋದರೆ ಒಂದು ಕಾಸಿಗೆ ಒಂದು ಕುದುರೆ ಸಿಗುತ್ತದೆ.
ಆದರೆ ಅದನ್ನು ತರಲು ಕಾಶಿಯ ತನಕ ಹೋಗಬೇಕು.

ಯಾವುದಾದರೂ ವಸ್ತುವನ್ನು ಕಡಿಮೆ ಬೆಲೆಗೆ ತರಲು ನಾವಿರುವ ಸ್ಥಳದಿಂದ ದೂರ ಹೋಗಬೇಕಾದ ಪ್ರಸಂಗ ಬಂದಾಗ ಈ ಗಾದೆಯನ್ನು ಉಪಯೋಗಿಸುತ್ತಾರೆ.

September 8, 2007

ಅಡಿಕೆ ಕೊಯ್ಲು... (ಉತ್ತರ ಕನ್ನಡದ ಗಾದೆ - 2)

ಅಡಿಕೆ ಕೊಯ್ಲು, ಅಗಚಯದ ಹೊತ್ತು; ಅಳುವ ಮಕ್ಕಳು, ಹೊರುವ ನೀರು; ಒದ್ದೆ ಕಟ್ಟಿಗೆ, ಒಡಕಲು ಗಡಿಗೆ; ಒದಕಲು ಎಮ್ಮೆ, ಬಡಕಲು (ಬಡಿಯುವ) ಗಂಡ ಇಷ್ಟಿದ್ದರೆ ಆ ಹೆಂಗಸಿಗೆ ಅಷ್ಟೈಶ್ವರ್ಯಕ್ಕೆ ಎಂಟೆ ಕಮ್ಮಿ.

ಅಡಿಕೆ ಕೊಯ್ಲಿನ ಸಂದರ್ಭ, ಬೇಗ ಕತ್ತಲಾಗುವ ದಿನಗಳು, ಅಳುತ್ತಿರುವ ಮಕ್ಕಳು, ದೂರದಿಂದ ಹೊತ್ತು ತರುವ ನೀರು, ಒದ್ಡೆಯಾದ ಕಟ್ಟಿಗೆ, ಒಡಕು ಗಡಿಗೆ, ಕರೆಯಲು ಹೋದರೆ ಒದೆಯುವ ಎಮ್ಮೆ, ಯಾವಾಗಲೂ ಹೊಡೆಯುತ್ತಿರುವ ಗಂಡ ಇದ್ದರೆ ಆ ಹೆಂಗಸಿನ ಕಷ್ಟಕ್ಕೆ ಕೊನೆಯಿಲ್ಲ.

ತುಂಬಾ ಕರುಣಾಜಾನಕಾವಾದ ಸ್ಥಿತಿಯನ್ನು ಹೇಳುವಾಗ ಈ ಗಾದೆಯ ಉಪಯೋಗವನ್ನು ಕಾಣಬಹುದು.

ಬಕನ ಬಾರಿ... (ಉತ್ತರ ಕನ್ನಡದ ಗಾದೆ - 1)

ಬಕನ ಬಾರಿ, ಮಗನ ಮದುವೆ, ಹೊಳೆಯಿಂದ ಆಚೆ ಪರಾನ್ನ.

ಬಕಾಸುರಾನಿಗೆ ಊಟವನ್ನು ತೆಗೆದುಕೊಂಡು ಹೋಗುವ ಪಾಳಿ ಬಂದಿದೆ, ಅದೇ ದಿನ ಮಗನ ಮದುವೆ ಇದೆ, ಇನ್ನೊಂದೆಡೆ ಹೊಳೆಯಿಂದ ಆಚೆ ಶ್ರಾಧ್ಧಕ್ಕೂ ಹೋಗಬೇಕಾಗಿದೆ.

ಹಲವಾರು ಕೆಲಸಗಳು ಒಟ್ಟಿಗೆ ಬಂದು ಯಾವುದನ್ನು ಮೊದಲು ಮಾಡಬೇಕು, ಯಾವುದನ್ನು ನಂತರ ಮಾಡಬೇಕು ಎಂದು ತಿಳಿಯದಂತಾದ ಸಂದರ್ಭದಲ್ಲಿ ಈ ಗಾದೆಯನ್ನು ಬಳಸುತ್ತಾರೆ.


ಟಿಪ್ಪಣಿ: ನನ್ನ ದೊಡ್ಡಮ್ಮನ ಪ್ರತಿಯೊಂದು ಮಾತಿನಲ್ಲೂ ಗಾದೆಗಳು ಇಣುಕುತ್ತಿದ್ದುದು ವಿಶೇಷ. ಅವರ ಬಾಯಿಯಿಂದ ನಾನು ಕೇಳಿದ ಗಾದೆಗಳು ಸಾವಿರಕ್ಕಿಂತಲೂ ಹೆಚ್ಚು.
ಅವರ ಜೊತೆ ಹನ್ನೊಂದು ವರುಷಗಳನ್ನು ಕಳೆದ ನಾನು ಅವರು ಹೇಳುತ್ತಿದ್ದ ಪ್ರತಿಯೊಂದು ಗಾದೆಗಳನ್ನೂ ದಾಖಲಿಸಿಕೊಂಡಿದ್ದೇನೆ. ಇಂದು ಅವರು ನನ್ನೊಂದಿಗಿಲ್ಲ. ಆದರೆ ಅವರ ನೆನಪುಗಳು ಈ ಗಾದೆಗಳ ರೂಪದಲ್ಲಿ ನನ್ನೊಂದಿಗಿವೆ.
ಅವುಗಳನ್ನೆಲ್ಲಾ ಒಂದೊಂದಾಗಿ ನಿಮ್ಮ ಮುಂದಿಡುವ ಆಸೆ ನನಗೆ. ಅಂತೆಯೇ, ಗಾದೆಗಳಿಗೆ ಸಂಬಂಧಿಸಿದ ಎಲ್ಲ ಬರಹಗಳನ್ನೂ ನನ್ನ ದೊಡ್ಡಮ್ಮ, ದಿವಂಗತ ಶ್ರೀಮತಿ ಮೀನಾಕ್ಷಿ ಹೆಗಡೆ ಅವರಿಗೆ ಅರ್ಪಿಸುತ್ತಿದ್ದೇನೆ.

September 6, 2007

ಏಳೂವರೆ ಗಡಿಗೆ ಹೊನ್ನು

ಚಿಕ್ಕಂದಿನಲ್ಲಿ ಅಜ್ಜ ಹೇಳಿದ ಕತೆ.
ಆಗ ಅದರಲ್ಲಿ ವಿಶೇಷವೇನೂ ಕಂಡಿರಲಿಲ್ಲ.
ವರುಷಗಳು ಉರುಳಿದಂತೆ ಅದರ ವಿಶೇಷತೆ ಮನವರಿಕೆಯಾಗುತ್ತಿದೆ...
ಅಜ್ಜ ಆ ಕತೆಯನ್ನು ಯಾಕೆ ಹೇಳಿದ್ದ ಎಂಬುದೂ ತಿಳಿಯುತ್ತಿದೆ...

ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಅವನು ಒಂದು ದಿನ ಕಟ್ಟಿಗೆ ತರಲು ಕಾಡಿಗೆ ಹೋದಾಗ ತನ್ನ ಬಡತನವನ್ನು ನೆನೆದು ದುಃಖಿಸತೊಡಗಿದ.
ಆಗ ಅವನ ಎದುರು ಒಂದು ದೇವತೆ ಪ್ರತ್ಯಕ್ಷವಾಗಿ ಹೇಳಿತು- "ಅಯ್ಯಾ, ನಿನ್ನ ಬಡತನಕ್ಕಾಗಿ ದುಃಖಿಸಬೇಡ. ನಾನು ನಿನಗೆ ಏಳೂವರೆ ಗಡಿಗೆ ಹೊನ್ನನ್ನು ಕೊಡುತ್ತೇನೆ. ಅದರಿಂದ ನೀನು ಜೀವನಪೂರ್ತಿ ಸುಖವಾಗಿರಬಹುದು."
ಆತ ಒಪ್ಪಿ ಏಳೂವರೆ ಗಡಿಗೆ ಹೊನ್ನನ್ನು ತೆಗೆದುಕೊಂಡು ಮನೆಗೆ ಬಂದ. ಜೀವಮಾನದಲ್ಲೇ ಅಷ್ಟು ಹೊನ್ನನ್ನು ಕಂಡಿರದ ಆತ ಒಂದು ಕ್ಷಣ ಗಡಿಗೆಗಳನ್ನೇ ನೋಡುತ್ತಾ ನಿಂತ.
ತಕ್ಷಣ ಅವನ ಮನಸ್ಸಿಗೆ ಒಂದು ಆಲೋಚನೆ ಬಂತು- "ಈ ಗಡಿಗೆಗಳಲ್ಲಿ ಒಂದು ಗಡಿಗೆ ಮಾತ್ರ ಅರ್ಧ ತುಂಬಿದೆ. ಅದನ್ನೊಂದು ತುಂಬಿಸಿಬಿಟ್ಟರೆ ಮುಂದೆ ಇಡೀ ಜೀವನ ಸುಖವಾಗಿ ಕಳೆಯಬಹುದು."
ನಂತರ ಆತ ಗಡಿಗೆಯನ್ನು ತುಂಬಿಸಲು ಹಗಲು ಇರುಳು ದುಡಿಯ ತೊಡಗಿದ.
ದಿನಾಲೂ ಸಂಜೆ ದಿನದ ಗಳಿಕೆಯ ಹೊನ್ನನ್ನು ತಂದು ಗಡಿಗೆಗೆ ಹಾಕುತ್ತಿದ್ದ.
ಎಷ್ಟೋ ದಿನಗಳ ವರೆಗೆ ಹೀಗೆಯೇ ನಡೆಯಿತು...
ಗಡಿಗೆ ಮಾತ್ರ ಅರ್ಧದಷ್ಟೇ ಇತ್ತು. ತುಂಬುವ ಲಕ್ಷಣವೇ ಕಾಣಿಸಲಿಲ್ಲ.
ಆತ ಮಾತ್ರ ತನ್ನ ಆರೋಗ್ಯವನ್ನು ಕಳೆದುಕೊಂಡ. ಮನಃಶಾಂತಿಯನ್ನು ಕಳೆದುಕೊಂಡ. ಗಡಿಗೆಯನ್ನು ತುಂಬಿಸುವ ಹಟದಲ್ಲಿ ಕೃಶವಾಗಿ ಹೋದ. ನಿದ್ದೆಯನ್ನು ಕಳೆದುಕೊಂಡು ಹುಚ್ಚನಾಂತಾದ.
ದಿನಗಳು ಉರುಳಿದಂತೆ ಅವನಿಗೆ ಒಂದು ದಿನ ಅರಿವಾಯಿತು, ತಾನು ಎಡವಿದ್ದೇನೆಂದು. ಪುನಃ ಕಾಡಿಗೆ ಹೋಗಿ ದೇವತೆಯನ್ನು ಕರೆದ. ದೇವತೆ ಪ್ರತ್ಯಕ್ಷವಾಯಿತು.
ಆತ ಹೇಳಿದ- "ದಯವಿಟ್ಟು ನನ್ನ ಬಳಿಯಿರುವ ಗಡಿಗೆಗಳನ್ನು ಹಿಂದೆಗೆದುಕೊ. ಇರುವುದರಲ್ಲಿಯೇ ನಾನು ಸುಖವಾಗಿರಬಲ್ಲೆ ಎಂಬುದು ನನಗೆ ಗೊತ್ತಾಗಿದೆ."
ದೇವತೆ ಗಡಿಗೆಗಳನ್ನು ತೆಗೆದುಕೊಂಡು ಮಾಯವಾಯಿತು. ಆತ ಮನೆಗೆ ಬಂದು ಎಷ್ಟೋ ದಿನಗಳ ನಂತರ ಸುಖವಾಗಿ ನಿದ್ದೆ ಮಾಡಿದ.

ಇಂದು ನಾವೂ ಕೂಡ ನಮ್ಮ ಬಳಿಯಿರುವ ಏಳು ಗಡಿಗೆ ಹೊನ್ನನ್ನು ಲಕ್ಷಿಸದೆಯೇ ಇನ್ನುಳಿದ ಅರ್ಧ ಗಡಿಗೆಯನ್ನು ತುಂಬಿಸುವ ಯತ್ನದಲ್ಲಿ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆಯೇ?

Home


There is an old saying, ‘Home’ is not the place where you live, but the place where they understand you.

How true! One will never recognize the value of a home unless one really stays in the place other than home. It is not only the place where we learn to utter the first word and listen to some bedtime stories, but it is the place where we are taken care of and the place where all our emotions are understood. We will be cared for everything right from our hunger to our anger. Only people in our home can understand our varying emotions…from our aspiration to our desperation. If we slam the door in anger, they just seem to understand. Can you ever imagine slamming the door at the place other than your home?