June 15, 2011

ಮಳೆಗಾಲದಲ್ಲಿ ನನ್ನೂರು; ಅಜ್ಜನ ಮಾತುಗಳು

ಊರಲ್ಲಿ ಮಳೆಗಾಲ ಆಗಲೇ ಪ್ರಾರಂಭವಾಗಿದೆಯಂತೆ; ಅಮ್ಮ phone receiver ಅನ್ನು ಕಿಟಕಿಯ ಬಳಿ ಹಿಡಿದು "ಕೇಳುತ್ತಿದೆಯಾ ಶಬ್ದ?" ಎಂದಳು. ಹೌದು, ಮಳೆ ಧೋ... ಎಂದು ಸುರಿಯುತ್ತಿದೆ ಅನಿಸ್ತು. "ಬಾವಿಗೆ ಹೊಸ ನೀರು ಕೂಡ ಬಂದಾಯ್ತು" ಎಂದಳು. "ಅಪ್ಪ ಎಲ್ಲಿ?" ಎಂದು ಕೇಳಿದ್ದಕ್ಕೆ, "ಬೀಜದ ಭತ್ತ ತಯಾರಿಕೆಯಲ್ಲಿ busy" ಎಂದು ನಕ್ಕಳು. ನಮ್ಮೂರ ಕಡೆ ಬಿತ್ತನೆಗೆ ಉಪಯೋಗಿಸುವ ಭತ್ತದ ಬೀಜಕ್ಕೆ 'ಬೀಜದ ಭತ್ತ' ಎನ್ನುತ್ತಾರೆ. "ನೀನೇನು ಮಾಡುತ್ತಿದ್ದೆ?" ಎಂದು ಕೇಳಿದ್ದಕ್ಕೆ, “ಯಾರೋ ನೆಂಟರು ಬರುವವರಿದ್ದಾರೆ, ಅದಕ್ಕೆ ಹಲಸಿನ ಹಣ್ಣಿನ ಕಡುಬು ಮಾಡಲು ತಯಾರಿ ನಡೆಸುತ್ತಿದ್ದೆ" ಎಂದಳು.

ಮುಂಗಾರಿನ ಸಮಯದಲ್ಲಿನ ಊರಿನ ಚಂದವೇ ಬೇರೆ. ಬೇಸಿಗೆಯಲ್ಲಿ ಆಗಾಗ ಬಿದ್ದ ಮಳೆಯಿಂದಾಗಿ ಆಗ ತಾನೇ ಚಿಗುರಿ ಹಸಿರಾದ ಹುಲ್ಲು, ಬೇಸಿಗೆಯಲ್ಲಿ ಮರಗಳ ಮೇಲೆ ಕುಳಿತ ಧೂಳೆಲ್ಲ ತೊಳೆದು ಹೋಗಿ ಎಲ್ಲಿ ನೋಡಿದರೂ ಸ್ವಚ್ಚ ಹಸಿರು, ಎಲ್ಲಿ ನೋಡಿದರೂ ನೀರು, ಹಲಸಿನ ಕಾಯಿಯ ಹಪ್ಪಳ, ಹಲಸಿನ ಹಣ್ಣಿನ ಕಡುಬು,.........ನಾವೆಲ್ಲಾ ಚಿಕ್ಕವರಿದ್ದಾಗ ಜೂನ್ ಒಂದನೇ ತಾರೀಖಿಗೆ ಶಾಲೆ ಪ್ರಾರಂಭವಾಗುತ್ತದೆ ಎನ್ನುತ್ತಿರುವಾಗಲೇ ಮಳೆಯೂ ಪ್ರಾರಂಭವಾಗಿರುತ್ತಿತ್ತು. ಆಗೆಲ್ಲ ನಾವು ಹೊರಗೆ ಆಟವಾಡಲು ಕಷ್ಟ ಎಂದು ಬೇಸಿಗೆಯೇ ಚೆನ್ನ ಎಂದು ಮಳೆಗೆ ಶಾಪ ಹಾಕುತ್ತಲೇ ಶಾಲೆಗೇ ಹೊರಡುತ್ತಿದ್ದೆವು. ಹಿಂದಿರುಗಿ ಬರುವಾಗ ಮಳೆಯಲ್ಲಿ ಆಟವಾಡಿ ನೆನೆದುಕೊಂಡು ಮನೆಗೆ ಬಂದು ಬೈಗುಳ ತಿನ್ನುವುದು ಮಾಮೂಲಾಗಿತ್ತು.

ಈ ವರ್ಷ ಮಳೆಗಾಲ ಮೊದಲಿನಂತೆಯೇ ಸಮಯಕ್ಕೆ ಸರಿಯಾಗಿ ಬಂದಿದ್ದು ಸಂತಸವಾಗಿದೆ. ಹಲವಾರು ವರ್ಷಗಳಿಂದ ಕೆಟ್ಟು ಹೋದಂತಿದ್ದ monsoon pattern ನೋಡಿ ಭಯವೇ ಆಗುತ್ತಿತ್ತು. ವಿಜ್ಞಾನಿಗಳು, ಸಂಶೋಧಕರು ಹೇಳುವಂತೆ- farmers have a greater potential to combat and mitigate climate change by maintaining greater biodiversity in their field, and through carbon sequestration. ನಂಬಬೇಕಾ?

ಇನ್ನೆಲ್ಲೋ ಓದಿದ್ದು- "Climate change puts the onus on the poor farmers to adapt – Think who is using the planes, the cars and the plastic bottles?" ಹವಾಮಾನದಲ್ಲಿ ಏನೇ ಏರುಪೇರಾದರೂ ನೇರ ಮತ್ತು ಮೊಟ್ಟ ಮೊದಲ ಏಟು ಬೀಳುವುದು ರೈತರಿಗೇ ತಾನೇ.ಈ ವರ್ಷ ಮಳೆಗಾಲ ಕಳೆದ ಕೆಲವು ವರ್ಷಗಳಿಗಿಂತ ಮೊದಲೇ ಶುರುವಾಗಿದ್ದಕ್ಕೆ ಎಲ್ಲ ರೈರತೂ ಒಂದೇ ಸಲ busy ಆಗಿದ್ದಾರಂತೆ. ನಾವು ಚಿಕ್ಕವರಿದ್ದಾಗಿನಂತೆ ಮಳೆ ಚೆನ್ನಾಗಿ ಹೊಯ್ದು, ಸಮೃದ್ಧಿ ತರಲಿ ಎಂದು ಪ್ರಾರ್ಥನೆ, ಹಾರೈಕೆ.

ಆಗಿನ ಮಳೆಗಾಲಕ್ಕೆ ಒಂದು ನಿಗದಿತ pattern ಇತ್ತು. ಇಪ್ಪತ್ತೇಳು ಮಳೆ ನಕ್ಷತ್ರಗಳಿಗೂ ಒಂದೊಂದು pattern ಇದೆ ಎಂದು ಅಜ್ಜ ಹೇಳುತ್ತಿದ್ದರು. ಒಂದೊಂದು ಮಳೆ ನಕ್ಷತ್ರವೂ ಸುಮಾರು 13 ರಿಂದ 15 ದಿನಗಳ ಕಾಲ ಇರುತ್ತದೆ. ನಕ್ಷತ್ರ ಬದಲಾದಂತೆ ಮಳೆ ಬೀಳುವ ಸ್ವರೂಪವೂ ಬದಲಾಗುತ್ತದೆ. ಅಜ್ಜ ಪಂಚಾಗ ನೋಡಿ "ನಾಳೆ ಬೆಳಿಗ್ಗೆ ನಾಲ್ಕು ಘಂಟೆಗೆ ಆರಿದ್ರ ನಕ್ಷತ್ರ ಬರುತ್ತದೆ" ಎಂದು ಹೇಳಿದ್ದರೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಮಳೆಯ ಸ್ವರೂಪ ಬದಲಾಗಿರುತ್ತಿತ್ತು. ಒಂದೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತದೆ. ಪ್ರತಿ ಪಾದವನ್ನು ಗಮನಿಸಿದರೂ ಮಳೆ ಬೀಳುವ ರೀತಿಯಲ್ಲಿ slight variation ಇರುತ್ತಿತ್ತು. ನನಗಿನ್ನೂ ಚೆನ್ನಾಗಿ ನೆನಪಿದೆ- ಅಪ್ಪ ಗದ್ದೆ ನಾಟಿ ಮಾಡಿ ಮುಗಿಸಿದ್ದರು. ಪುನರ್ವಸು ಎಂಬ ನಕ್ಷತ್ರದಲ್ಲಿ ಮಳೆ ಹೊಯ್ದಿರಲೇ ಇಲ್ಲ. ಅಪ್ಪ ಚಿಂತೆ ಮಾಡುತ್ತಿದ್ದರು. ಆಗ ಅಜ್ಜ, "ನಾಳೆ ಬೆಳಗಿನ ಜಾವದಿಂದಲೇ ಪುಷ್ಯ (ತಿಷ್ಯ ಎಂದು ಕೂಡ ಕರೆಯುತ್ತಾರೆ) ಬರುತ್ತದೆ. ಯೋಚನೆ ಮಾಡಬೇಡ. ಪುನರ್ವಸು-ಪುಷ್ಯ ನಕ್ಷತ್ರಗಳನ್ನು ಅಣ್ಣ-ತಮ್ಮ ಎಂದೂ ಕರೆಯುತ್ತಾರೆ. ಅವರು ರೈತರಿಗೆ ಮಾತು ಕೊಟ್ಟಿದ್ದಾರಂತೆ. ತಮ್ಮಿಬ್ಬರಲ್ಲಿ ಒಬ್ಬರಾದರೂ ಚೆನ್ನಾಗಿ ಹೊಯ್ದು ರೈತರ ಗದ್ದೆಗೆ ನೀರುಣಿಸುತ್ತೇವೆ ಎಂದು. ಹಾಗಾಗಿ ನೀನೇನೂ ಯೋಚನೆಮಾಡಬೇಡ" ಎಂದು ಹೇಳಿದ್ದರು. ರಾತ್ರಿ ಮಲಗುವ ಮುನ್ನ ಅಪ್ಪನ ಜೊತೆ ನಾವೆಲ್ಲಾ ಆಕಾಶ ನೋಡಿದ್ದೆವು. ಅಲ್ಲೊಂದು ಇಲ್ಲೊಂದು ಹೊಳೆಯುವ ನಕ್ಷತ್ರಗಳು ಸಹ ಕಾಣುವಷ್ಟು ಕಡಿಮೆ ಮೋಡಗಳಿದ್ದವು; ಅವೂ ಕೂಡ ನಿಲ್ಲದಂತೆ ಓಡುತ್ತಿದ್ದವು. ಆದರೆ ಅಜ್ಜ ಹೇಳಿದ್ದು ನಿಜ- ಬೆಳಗಿನ ಜಾವಕ್ಕೆ ಜಿಟಿಜಿಟಿ ಶುರುವಾದ ಮಳೆ ಪೂರ್ತಿ ಹಗಲಾಗುವಷ್ಟರಲ್ಲಿ ಜೋರಾಗಿ ಸುರಿಯಲಾರಂಭಿಸಿತ್ತು! ಚಂದಮಾಮ, ಬೊಂಬೆಮನೆ ಓದುವ ರಘು ಮತ್ತು ನನಗೆ ಅಜ್ಜ ಮಹಾ ಮಾಂತ್ರಿಕನಂತೆ ಕಂಡಿದ್ದರು! ಆಗಿನ ಕಾಲದಲ್ಲಿ ಪರಿಸರದಲ್ಲಿನ ಬದಲಾವಣೆಯನ್ನು ನೋಡಿಯೇ ಮಳೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ಅರಿಯಬಹುದಾಗಿತ್ತು. ಅಜ್ಜ ಹೇಳುತ್ತಿದ್ದ, ನನಗೆ ಸಧ್ಯ ನೆನಪಾಗುತ್ತಿರುವ ಕೆಲವು ಮಾತುಗಳನ್ನು ನಿಮಗಾಗಿ ಇಲ್ಲಿ ನೀಡುತ್ತಿದ್ದೇನೆ.....

ಮಳೆಹುಳುಗಳು ಮನೆಯೊಳಕ್ಕೆ ಬಂದರೆ ಮಳೆ ಬರುತ್ತದೆ. ಮಳೆಹುಳುಗಳು ಮುಸ್ಸಂಜೆಯಲ್ಲಿ ಭೂಮಿಯನ್ನು ಕೊರೆದು ದೀಪಕ್ಕೆ ಆಕರ್ಷಿತವಾಗಿ ಮನೆಯೊಳಕ್ಕೆ ಬರುತ್ತವೆ. ಆಗ ಮಳೆ ಬರುತ್ತದೆ ಎನ್ನುತ್ತಿದ್ದರು ಅಜ್ಜ. ರಘು ಮತ್ತು ನಾನು ಶಾಲೆಯ ವಿಜ್ಞಾನ ಪುಸ್ತಕದ ಉದಾಹರಣೆಯನ್ನು ಕೊಟ್ಟು "ಹುಳುಗಳು ಬರುವು ದೀಪಕ್ಕೆ, ಮಳೆ ಬರುತ್ತದೆ ಎಂದು ಅಲ್ಲ" ಎಂದು ಅಜ್ಜನೊಡನೆ ಯುದ್ಧ ಮಾಡುತ್ತಿದ್ದೆವು. ಹೆಲಿಕಾಪ್ಟರ್ ಹುಳುಗಳು ನೆಲಕ್ಕೆ ಹತ್ತಿರದಲ್ಲಿ ಹಾರಿದರೆ ಮಳೆ ಬರುತ್ತದೆ ಎಂದೂ ಕೂಡ ಹೇಳುತ್ತಾರೆ.

ಅಜ್ಜಿ ಅರಿವೆ ಹಾಸಿದರೆ ಮಳೆ ಬರುವುದಿಲ್ಲ; ಅಥವಾ ಮಳೆಗಾಲ ಮುಗಿಯುತ್ತಾ ಬಂತು ಎಂದರ್ಥ. 'ಅಜ್ಜಿ ಅರಿವೆ' ಎಂದರೆ ಹುಲ್ಲಿನ ಮೇಲೆ ಜೇಡರ ಹುಳುವಿನಂಥ ಹುಳುವೊಂದು ನೇಯ್ದ ಬಲೆ. ಅದರ ಮೇಲೆ ಬಿದ್ದ ಇಬ್ಬನಿಯಿಂದಾಗಿ ಅದು ಬಟ್ಟೆ ಹಾಸಿದಂತೆ ಕಾಣುತ್ತದೆ. ಅಂಗೈ ಅಷ್ಟು ಅಗಲ ಗಾತ್ರದಲ್ಲಿರುತ್ತದೆ.


ಮಳೆಗಾಲ ಮುಗಿಯುತ್ತಾ ಬಂದಂತೆ ಜೆಳಗಿನ ಹೊತ್ತು ಅಲ್ಲಲ್ಲಿ ಕಾಣುತ್ತದೆ. ಬಿಸಿಲು ಜಾಸ್ತಿಯಾದಂತೆ ಕರಗಿ ಹೋಗುತ್ತದೆ. ಅಜ್ಜ ಇದನ್ನು ನೋಡಿ ಅಮ್ಮನಿಗೆ ಹೇಳುತ್ತಿದ್ದರು- "ಸಾವಿತ್ರಿ ನೀನು ಕಾಳು-ಕಡಿ ಬಿಸಿಲಿಗೆ ಹಾಕಬಹುದು, ಅಜ್ಜಿ ಅರಿವೆ ಹಾಸಿದ್ದಾಳೆ ಮಳೆ ಬರುವುದಿಲ್ಲ" ಎಂದು. ಅಜ್ಜಿ ಹಾಸಿದ ಅರಿವೆಯಲ್ಲಿ ಹುಳುಗಳಿದ್ದರೆ ಮಳೆ ಮುಗಿದಿಲ್ಲ; ಮತ್ತೆ ಬರುತ್ತದೆ ಎಂದರ್ಥ!

ಗುಬ್ಬಿ ಮಣ್ಣು ಆಡಿದರೆ ಮಳೆ ಬರುತ್ತದೆ, ನೀರು ಆಡಿದರೆ ಮಳೆ ಬರುವುದಿಲ್ಲ. ಗುಬ್ಬಿಗಳು ತಮ್ಮ ರೆಕ್ಕೆಗಳನ್ನು ಮಣ್ಣಿನಲ್ಲಿ ಅಥವಾ ನೀರಿನಲ್ಲಿ ಪಟಪಟನೆ ಬಡಿದು ಆಡುವುದನ್ನು ನೀವೂ ಕೂಡ ಗಮನಿಸಿರಬಹುದು. ಬೇಸಿಗೆಯಲ್ಲಿ ಇನ್ನೇನು ಮಳೆ ಬರುತ್ತದೆ ಎನ್ನುವ ಮೊದಲು ಗುಬ್ಬಿಗಳು ಮಣ್ಣಿನಲ್ಲಿ ಆಡುತ್ತವೆ.

ಸೂರ್ಯನಿಗೆ ಕೊಡೆ ಕಟ್ಟಿದರೆ ಮಳೆ ಬರುತ್ತದೆ. ಇದನ್ನು ನಾನೂ ಕೂಡ ನೋಡಿಲ್ಲ. ಹೇಳಿದ್ದನ್ನು ಮಾತ್ರ ಕೇಳಿದ್ದೇನೆ. ಸೂರ್ಯನ ಸುತ್ತಲೂ ಅಂದರೆ ಸೂರ್ಯನಿಂದ ಸುಮಾರು ದೂರದಲ್ಲಿ ಒಂದು ವರ್ತುಲಾಕಾರ ಕಂಡುಬರುತ್ತದೆಯಂತೆ. ಅದನ್ನು ಸೂರ್ಯನ ಕೊಡೆ ಎಂದು ಕರೆಯುತ್ತಾರೆ. ಅದೇ ರೀತಿ ಚಂದ್ರನಿಗೆ ಕೊಡೆ ಕಟ್ಟಿದರೆ ಮಳೆ ಬರುವುದಿಲ್ಲ; ಅಥವಾ ಮಳೆ ಬರುವುದು ಇನ್ನೂ ಕೆಲದಿನಗಳು ಮುಂದೆ ಹೋಗುತ್ತದೆ.

ಚಗಟೆ (ತಗಟೆ) ಗಿಡ-Cassia tora (http://www.vedicshop.co.in/wp-content/uploads/2010/11/Cassia-Tora.jpg) ಚಿಗುರಿದರೆ ಶುರುವಾದ ಮಳೆ ಹೋಗುವುದಿಲ್ಲ. ಮಳೆಗಾಲ ಸರಿಯಾಗಿ ಪ್ರಾರಂಭವಾದ ಹೊರತು ಚಗಟೆ ಗಿಡ ಸರಿಯಾಗಿ ಚಿಗುರುವುದೇ ಇಲ್ಲ. ಅಲ್ಲೊಂದು ಇಲ್ಲೊಂದು ಚಿಗುರಬಹುದು; ಆದರೆ ಹಿಂಡು ಹಿಂಡಾಗಿ ಅಲ್ಲ. ಈ ಗಿಡದ ಕಾಯಿಗಳು ಎತ್ತಿನ ಕೊಂಬಿನ ರೀತಿಯಲ್ಲಿ ತೊಟ್ಟಿನಲ್ಲಿ ಒಂದಕ್ಕೊಂದು ಸೇರಿಕೊಂಡಿರುವುದರಿಂದ ನಾವು ಶಾಲೆಗೇ ಹೋಗುವ ದಾರಿಯ ಬದಿಯಲ್ಲೆಲ್ಲ ಅವುಗಳನ್ನು ಕೊಯ್ದು ಒಂದಕ್ಕೊಂದು ಸಿಕ್ಕಿಸಿ ಎಳೆದು ಯಾರ ಎತ್ತು ಗೆದ್ದಿತು, ಯಾರ ಎತ್ತು ಸೋತಿತು ಎಂದು ಆಡಿದ್ದು ಈಗ ಬರೀ ನೆನಪು.

ಅಂತೆಯೇ ಬಸವನ ಹೂ ಆಗುವವರೆಗೂ ಮಳೆಗಾಲ ಹಿಡಿಯುವುದಿಲ್ಲ. ಇದರ ವೈಜ್ಞಾನಿಕ ಹೆಸರು ಗೊತ್ತಿಲ್ಲ. http://4.bp.blogspot.com/_GpC2Vvhnixo/THKgt9J4SqI/AAAAAAAAAbM/SCifp4KHk2s/s1600/2.jpg

Thanks to V. D. Bhat Sugavi.... ಈ photo ಅವರ blog ನಿಂದ ಕದ್ದಿದ್ದು!
ಬಿಳಿಯ ಬಣ್ಣದ ಈ ಚಿಕ್ಕ ಹೂವು ನೆಲದಿಂದಲೇ ಎದ್ದು ಬರುತ್ತದೆ. ಬೇಸಿಗೆಯಲ್ಲಿ ಒಂದೂ ಕಾಣ ಸಿಗುವುದಿಲ್ಲ. ಮಳೆಗಾಲ ಪೂರ್ತಿಯಾಗಿ ಶುರುವಾದ ನಂತರ ಭೂಮಿಯಿಂದ ಹೊರಬರುತ್ತದೆ. ಹೂವಿನ ಒಳಭಾಗದಲ್ಲಿ ಎತ್ತಿನ ಮುಖದಂಥದೊಂದು ಅತಿ ಸೂಕ್ಷ್ಮವಾದ ಭಾಗವಿರುತ್ತದೆ.

'ಮೃಗಶಿರ ಮಳೆಯಲ್ಲಿ ಗಿಡವನ್ನು ಮುರಿದು ನೆಟ್ಟರೂ ಬದುಕುತ್ತದೆ'. ಮೃಗಶಿರ ಮಳೆಯನ್ನೂ 'ಗಿಡ ನೆಡುವ ಮಳೆ' ಎಂದೇ ಕರೆಯುತ್ತಾರೆ. ಆ ಸಮಯದಲ್ಲಿ ನೆಟ್ಟ ಗಿಡ ಸಾಮಾನ್ಯವಾಗಿ ಸಾಯುವುದಿಲ್ಲ.

'ಆರಿದ್ರಾ ಮಳೆ ಮಾಡಿದಂತೆ ಆರು ಮಳೆ ಮಾಡುತ್ತವೆ'. ಆರಿದ್ರಾ ನಕ್ಷತ್ರದ ಮಳೆ ಚೆನ್ನಾಗಿ ಹೊಯ್ದರೆ ನಂತರದ ಆರು ನಕ್ಷತ್ರಗಳೂ ಚೆನ್ನಾಗಿ ಹೊಯ್ಯುತ್ತವೆ; ಇಲ್ಲವಾದರೆ ಇಲ್ಲ. 'ಆರಿದ್ರಾ ನಕ್ಷತ್ರದಲ್ಲಿ ಆಚೆ ಮರದ ಕಾಗೆ ಈಚೆ ಮರಕ್ಕೆ ಹಾರಲಾರದಷ್ಟು ಮಳೆ ಹೊಯ್ಯುತ್ತದೆ'

ಮಘೆ ಮಳೆ ಕುರಿತು ಅನೇಕ ಮಾತುಗಳಿವೆ. 'ಮಘೆ ಮಳೆ ಮೊಗೆದು ಮೊಗೆದು ಹೊಯ್ಯುತ್ತದೆ'. 'ಹೊಯ್ದರೆ ಮಘೆ, ಹೋದರ ಹೊಗೆ'. ಸಾಮಾನ್ಯವಾಗಿ ಜೋರಾಗಿಯೇ ಸುರಿಯುವ ಮಘೆ ಮಳೆಯ ಸಮಯದಲ್ಲಿ ಕೆಲವೊಮ್ಮೆ ಮೋಡಗಳು ಹೊಗೆಯಂತೆ ಚದುರಿ ಹೋಗುತ್ತವೆ. 'ಮಘೆ ಮಳೆ ಹೊಯ್ದಷ್ಟೂ ಚೆನ್ನ; ಮನೆ ಮಗ ಉಂಡಷ್ಟೂ ಚೆನ್ನ'. ಈ ಮಾತಿಗೆ ನಾನು ಅಜ್ಜನ ಬಳಿ "ಮಗ ಮಾತ್ರ ಏಕೆ ಉಣ್ಣಬೇಕು? ಮಗಳೇಕೆ ಅಲ್ಲ?" ಎಂದು ವಾದಮಾದಿದ್ದೆ!

'ಹುಬ್ಬೆ ಮಳೆ ಹೊಯ್ದರೆ ಗಿಡಗಳಿಗೆ ಅಬ್ಬೆಯ ಹಾಲು ಕುಡಿದಂತೆ'. ಹುಬ್ಬಾ (ಅಥವಾ ಹುಬ್ಬೆ) ಮಳೆಯ ನೀರು ಗಿಡಗಳಿಗೆ ತಾಯಿಯ ಹಾಲಿನಲ್ಲಿರುವಷ್ಟು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆಯಂತೆ.

ಹಸ್ತೆ ಹನಿಸಿ, ಚಿತ್ತೆ ಭರಸಿ, ಸ್ವಾತಿ ಸುರಿದರೆ ಎತ್ತು ಕೊಟ್ಟು ಎಮ್ಮೆ ತತ್ತಾ (ತೆಗೆದುಕೊಂಡು ಬಾ) ಎಂದಿದ್ದಳು. ಹಸ್ತ ಮಳೆ ಚೆನ್ನಾಗಿ ಬೀಳಬೇಕು, ಚಿತ್ತ ಮತ್ತು ಸ್ವಾತಿ ಮಳೆಗಳು ಆಗೊಂದು ಈಗೊಂದು ಬಿದ್ದರೆ ಸಾಕು. ಆದರೆ ಅದೇನಾದರೂ ಉಲ್ಟಾಪಲ್ಟಾ ಆದರೆ ವ್ಯವಸಾಯಕ್ಕೆ ಅನುಕೂಲವಿಲ್ಲ, ಹೈನುಗಾರಿಕೆಯೇ ಗತಿ ಎಂಬುದನ್ನು ಸೂಚಿಸುತ್ತದೆ.

'ಸ್ವಾತಿ ಮಳೆ ಎಂದರೆ ಹೊಸ ಮಜ್ಜಿಗೆ ಮಳೆ'. ಆ ಮಳೆಯ ನೀರನ್ನು ಹಾಲಿಗೆ ಹಾಕಿದರೆ ಹಾಲು ಹೆಪ್ಪಾಗುತ್ತದೆ. ಹಳೆಯ ಕಾಲದಲ್ಲಿ ಸ್ವಾತಿ ಮಳೆಯ ನೀರನ್ನು ಹಿಡಿದು ವರ್ಷಕೊಮ್ಮೆ ಹೊಸ ಮಜ್ಜಿಗೆ ಮಾಡುತ್ತಿದ್ದರಂತೆ.

ನಾವು ವೈಜ್ಞಾನಿಕವಾಗಿ ಮುಂದುವರಿಯುತ್ತ ಹಳೆಯ ಕೊಂಡಿಗಳನ್ನೆಲ್ಲ ಕಳಚಿಕೊಳ್ಳುತ್ತಿದ್ದೇವೆ. ಹವಾಮಾನದ ವೈಪರೀತ್ಯದ ಬಗ್ಗೆ ಒಬ್ಬರನ್ನೊಬ್ಬರು ದೂರುತ್ತಾ ನಾವೇನು ಮಾಡಬಹುದೆಂಬುದನ್ನು ಮರೆತು ನಿಂತಿದ್ದೇವೆ. ಇದು ದುರದೃಷ್ಟಕರ.