March 10, 2017

ಮುಂಜಾವಿನ ಬಸ್ ಪ್ರಯಾಣವೂ... ದಿನಪತ್ರಿಕೆ ಓದುವವರೂ...

ಈ ಕೆಳಗಿನ ಫೋಟೋ ನೋಡಿದಾಗ ಯಾರಿಗಾದರೂ ಹಳೆಯ ನೆನಪಾಗುತ್ತಿದೆಯಾಇದು ನಾರ್ವೆ ದೇಶದ ರಾಜಧಾನಿ ಓಸ್ಲೋ ದಲ್ಲಿ VG ಎಂಬ ಪತ್ರಿಕೆಯ ಕಚೇರಿಯ ಎದುರು ತೆಗೆದ ಫೋಟೋ. ಅದು ಅಲ್ಲಿಯ ಅತ್ಯಂತ ಜನಪ್ರಿಯ Tabloid ಪತ್ರಿಕೆಯಂತೆ.

ನನ್ನ ಹಳೆಯ ನೆನಪುಗಳನ್ನು ಹೇಳುತ್ತೇನೆ ಕೇಳಿ. ಸುಮಾರು 2000 ನೇ ಇಸವಿಯ ಸಮಯ. ನಾನು ಧಾರವಾಡದಲ್ಲಿ MA ಓದುತ್ತಿದ್ದೆ. ಆಗ ತಾನೇ ವಿಜಯ ಕರ್ನಾಟಕ ದಿನಪತ್ರಿಕೆ ಶುರುವಾಗಿತ್ತು. ಸ್ವಲ್ಪ ಸಮಯದಲ್ಲೇ ಬಹಳ ಜನಪ್ರಿಯತೆಯನ್ನೂ ಗಳಿಸಿತ್ತು. ನಾನು ಪ್ರತಿ ಹದಿನೈದು ದಿನಗಳಿಗೊಮ್ಮೆ ಹಾಸ್ಟೆಲ್ ನಿಂದ ಊರಿಗೆ ಬರುತ್ತಿದ್ದೆ. ಶುಕ್ರವಾರ ಕ್ಲಾಸ್ ಮುಗಿಸಿಕೊಂಡು ಸಂಜೆ ಊರಿಗೆ ಬಂದರೆ ಸೋಮವಾರ ಬೆಳಿಗ್ಗೆ ಮುಂಜಾವಿಗೇ ಹೊರಟು ಕ್ಲಾಸ್ ಶುರುವಾಗುವುದರೊಳಗೆ ಧಾರವಾಡ ಸೇರಿಕೊಳ್ಳುತ್ತಿದ್ದೆ.

ನಮ್ಮ ಬಸ್ ಶಿರಸಿಯಿಂದ ಹೊರಟು ಮುಂಡಗೋಡು ತಲುಪುವಷ್ಟರಲ್ಲಿ ನಿದ್ದೆ ಮಾಡಿದ್ದವರೆಲ್ಲ ಎಚ್ಚರಾಗಿ ದಿನಪತ್ರಿಕೆಗಾಗಿ ಚಡಪಡಿಸುತ್ತಿದ್ದರು. ಮುಂಡಗೋಡಿನಲ್ಲಿ ಬಸ್ ನಿಂತಾಗ ಪೇಪರ್ ಮಾರುವ ಮಕ್ಕಳು ಬಸ್ ಹತ್ತಿ "ವಿಜಯ ಕರ್ನಾಟಕ ಪೇಪರ್ ತಗೊಳ್ಳಿ, ತಾಜಾ ಸುದ್ದಿ, ಬಿಸಿ ಬಿಸಿ ಸುದ್ದಿ" ಎನ್ನುತ್ತಾ ಮಾರಾಟ ಮಾಡುತ್ತಿದ್ದರು. ಆಗ ಪೇಪರ್ ಗೆ ಬಹುಶಃ ಒಂದೋ ಒಂದೂವರೆಯೋ ರೂಪಾಯಿ ಇದ್ದಿರಬೇಕು, ಸರಿಯಾಗಿ ನೆನಪಿಲ್ಲ. ಯಾರೋ ಒಬ್ಬಿಬ್ಬ ಪುಣ್ಯಾತ್ಮರು ಪೇಪರ್ ಖರೀದಿಸುತ್ತಿದ್ದರು. ಬಸ್ ನಲ್ಲಿದ್ದ ಉಳಿದ ಪ್ರಯಾಣಿಕರೆಲ್ಲರೂ "ಆಹಾ! ಬಿಟ್ಟಿ ಪೇಪರ್ ಓದಲು ಸಿಕ್ಕಿತು!" ಎಂದು ನೆಮ್ಮದಿಯ ಉಸಿರು ಬಿಡುತ್ತಿದ್ದರು.

ಖರೀದಿಸಿದ ಮನುಷ್ಯ ಪೇಪರ್ ಬಿಡಿಸಿ ಓದಲು ಶುರು ಮಾಡುವುದೊಂದೇ ತಡ, ಅವನ ಎಡಕ್ಕೆ, ಬಲಕ್ಕೆ ಇರುವವರು ಇಣುಕಲು ಶುರು! ಇನ್ನು ಹಿಂದುಗಡೆ ಕುಳಿತವರು "ಸರ್, ನೀವು ಹೇಗೂ ಎದುರಿನ ಪುಟ ಓದುತ್ತಿದ್ದೀರಿ, ಒಳಗಡೆಯ ಪುಟ ನನಗೆ ಕೊಡಿ" ಎಂದರೆ, ಮುಂದುಗಡೆ ಕುಳಿತವರು "ಸರ್, ಕ್ರೀಡಾ ಪುರವಣಿ (ಅಥವಾ ಇನ್ನಾವುದೋ ಪುರವಣಿ) ನನಗೆ ಕೊಡಿ" ಎನ್ನುತ್ತಿದ್ದರು. ಕೆಲವೇ ನಿಮಿಷಗಳಲ್ಲಿ ಎದುರಿನ ಪುಟ ಮಾತ್ರ ಖರೀದಿಸಿದವರ ಕೈಯಲ್ಲಿ. ಒಳಗಡೆಯ ಪುಟಗಳೆಲ್ಲಾ ಪುಡಿ ಪುಡಿಯಾಗಿ ಬಸ್ ನ ತುಂಬಾ ಹಂಚಿ ಹೋಗಿರುತ್ತಿದ್ದವು! ಇನ್ನು ಕೆಲವರಿಗೆ ಒಳಗಡೆಯ ಪುಟಗಳಲ್ಲಿ ಆಸಕ್ತಿ ಕಡಿಮೆ ಅವರು headlines ಗಳಿಗಾಗಿಯೇ ಕಾಯುತ್ತಿರುವವರು. ಖರೀದಿಸಿದವರು ಅದನ್ನು ಓದಿ ಮುಗಿಸಿದ ತಕ್ಷಣ "ಸರ್, ನನಗೆ ಕೊಡುತ್ತೀರಾ?" ಎಂದು ಹಲ್ಲು ಗಿಂಜುತ್ತಿದ್ದರು!  ಪೇಪರ್ ನ ಮಾಲೀಕರು ಹೇಗೂ ತನ್ನದು ಮೊದಲಿನ ಪುಟ ಮುಗಿಯಿತಲ್ಲ, ಇನ್ನು ಒಳಪುಟಗಳನ್ನು ಓದೋಣ, ಇಲ್ಲವೇ ಪುರವಣಿಯನ್ನಾದರೂ ಓದೋಣ ಎಂದುಕೊಂಡರೆ, ಆ ಪುಟಗಳೆಲ್ಲ ಹಾಗೆಯೇ ಮುಂದೆ, ಹಿಂದೆ, ಇನ್ನೊಬ್ಬರ, ಮತ್ತೊಬ್ಬರ, ಕೈ ಸೇರುತ್ತಾ ಬಸ್ ನ ತುದಿ ಮುಟ್ಟಿರುತ್ತಿದ್ದವು!

ಎಲ್ಲೂ ಒಬ್ಬಿಬ್ಬರು ದುಡ್ಡುಕೊಟ್ಟು ಖರೀದಿಸಿದ ಪೇಪರ್ ಅನ್ನು ಬಸ್ ನಲ್ಲಿದ್ದವರೆಲ್ಲಾ ಓದಿರುತ್ತಿದ್ದರು. ನಾನು ನೋಡಿದ್ದೇನೆ, ಕೆಲವೊಮ್ಮೆ ಖರೀದಿಸಿದ ವ್ಯಕ್ತಿ ಬೇಸತ್ತು ತನ್ನ ಪೇಪರ್ ಅನ್ನು ಬಸ್ ನಲ್ಲಿಯೇ ಬಿಟ್ಟು ಹುಬ್ಬಳ್ಳಿಯಲ್ಲಿ ಇಳಿದು ಹೋಗಿದ್ದೂ ಇದೆ. ಆದರೆ ಪೇಪರ್ ಮಾತ್ರ ಧಾರಾವಾಡದವರೆಗೂ ಕಯ್ಯಿಂದ ಕೈ ದಾಟುತ್ತಲೇ ಇರುತ್ತಿತ್ತು. ಮುಂದೂ ದಾಟುತ್ತಿರಬಹುದು, ನಾನು ಧಾರವಾಡದಲ್ಲಿ ಇಳಿಯುತ್ತಿದ್ದೆ.

ಕೆಲವು ದಿನಗಳ ನಂತರ ಬಸ್ ಗಳ ಮೇಲೆ ಜಾಹೀರಾತು ಬರತೊಡಗಿತು- "ವಿಜಯ ಕರ್ನಾಟಕ ಕರ್ನಾಟಕದ ಅತಿ ಹೆಚ್ಚು ಓದುಗರನ್ನು ಹೊಂದಿದ ದಿನಪತ್ರಿಕೆ, *** ಲಕ್ಷ (ಎಷ್ಟೋ ಲಕ್ಷ, ಈಗ ನೆನಪಾಗುತ್ತಿಲ್ಲ) ಓದುಗರನ್ನು ಹೊಂದಿದೆ" ಎಂದು. ಅದನ್ನು ನೋಡಿ ನನ್ನ ಸ್ನೇಹಿತನೊಬ್ಬ ತಮಾಷೆ ಮಾಡಿದ್ದ, "ಬಹುಶಃ ಬಸ್ ನಲ್ಲಿ ಬಿಟ್ಟಿ ಓದುವವರು, ಬಸ್ ಕಾಯುತ್ತಾ ನಿಂತಾಗ ನಾವು ಓದುತ್ತಿರುವ ಪೇಪರ್ ನಲ್ಲಿ ಇಣುಕು ಹಾಕಿ ಓದುವವರು ಎಲ್ಲರನ್ನೂ ಸೇರಿಸಿ ಲೆಕ್ಕ ಹಾಕಿದ್ದಾರೋ ಏನೋ" ಎಂದು.


ಈಗ ಆ ರೀತಿ ಮುಂಜಾನೆಯ ಬಸ್ ನಲ್ಲಿ ಹೋಗದೇ ದಶಕಗಳೇ ಕಳೆದು ಹೋಯಿತು. ನನಗನಿಸುವಂತೆ ಈಗ ಅಂತ ದೃಶ್ಯ ಕಾಣಸಿಗಲಿಕ್ಕಿಲ್ಲ. ಎಲ್ಲರೂ ತಮ್ಮ ತಮ್ಮ ಫೋನ್ ಗಳಲ್ಲೇ ಮಗ್ನರಾಗಿರಬಹುದು. ಆದರೂ, ಆ ಕಾಲದ ನೆನಪೇ ಚೆನ್ನ. ಫೋಟೋದಲ್ಲಿನ ಮೂರ್ತಿಯನ್ನು ನೋಡಿದಾಗ ಒಮ್ಮೆ ಭೂತಕಾಲಕ್ಕೆ ಹೋಗಿ ಬಂದೆ :-)

December 27, 2016

Exchange offer

ಮೊದಲೆಲ್ಲಾ electrical ಅಥವಾ electronic ವಸ್ತುಗಳನ್ನ ಕೊಂಡರೆ ಕನಿಷ್ಠ ಹತ್ತು ಹದಿನೈದು ವರ್ಷಗಳ ಕಾಲ ಬಾಳುತ್ತಿದ್ದವು. ಅಷ್ಟರ ನಂತರ ರಿಪೇರಿ ನಡೆಸುತ್ತಾ ಇನ್ನೂ ಕೆಲವು ವರ್ಷ ತಳ್ಳಬಹುದಿತ್ತು. ಈಗೀಗಂತೂ  ಯಾವ ವಸ್ತುವೂ ಮೂರು ನಾಲ್ಕು ವರ್ಷಗಳಿಗಿಂತ ಜಾಸ್ತಿ ಬಾಳುವುದೇ ಇಲ್ಲ! ರಿಪೇರಿ ಅನ್ನುವಂತ ಪರಿಕಲ್ಪನೆಯೂ ಹೋಗಿಯೇ ಬಿಟ್ಟಿದೆ! ನೋಡುತ್ತಿದ್ದಂತೆಯೇ ಕೆಲವೇ ವರ್ಷಗಳಲ್ಲಿ 'ರಿಪೇರಿ' ಎನ್ನುವುದು ಹೆಚ್ಚು ಕಡಿಮೆ ಸತ್ತೇ ಹೋಗುತ್ತಿದೆ! ಹಾಳಾದ ಕೂಡಲೇ ಬಿಸಾಕು, ಹೊಸದನ್ನು ಕೊಂಡುಕೋ ಎಂಬುದೇ ಬದುಕಾಗಿಬಿಟ್ಟಿದೆ.

ಫೋನಿನ ವಿಚಾರವನ್ನು ಬಿಡಿ, ಅದಂತೂ ದಿನೇ ದಿನೇ outdated ಆಗುತ್ತಲೇ ಇರುತ್ತದೆ. ಹೊಸದರ ಮೇಲೆ ದುಡ್ಡು ಸುರಿಯುತ್ತಲೇ ಇರಬೇಕು. ಉಳಿದ ವಸ್ತುಗಳ ಬಗ್ಗೆ ಒಮ್ಮೆ ವಿಚಾರ ಮಾಡಿ ನೋಡಿ.... ಮೊದಲೆಲ್ಲಾ ಮಿಕ್ಸಿ, ಟಿವಿ, ಫ್ರಿಡ್ಜ್ ಒಮ್ಮೆ ತಗೆದುಕೊಂದರೆ ಎಷ್ಟು ವರ್ಷ ಬಾಳುತ್ತಿದ್ದವು? ಕನಿಷ್ಠ ಹತ್ತು ವರ್ಷ? ಆದರೆ ಈಗೇಕೆ ಒಂದೆರಡೇ ವರ್ಷಕ್ಕೆ ರಿಪೇರಿಗೆ ಬರತೊಡಗುತ್ತವೆ, ಅಥವಾ ಅಥವಾ ಪೂರ್ತಿ ಹಾಳಾಗಿಯೇ ಹೋಗುತ್ತವೆ. ನಾನು ಚಿಕ್ಕವಳಿದ್ದಾಗ ತೆಗೆದುಕೊಂಡ ಮಿಕ್ಸಿಯನ್ನು ಅಮ್ಮ ಇಪ್ಪತ್ತೈದು ವರ್ಷಗಳ ಕಾಲ ಉಪಯೋಗಿಸಿದ್ದಳು. ನಂತರ ತೆಗೆದುಕೊಂಡ ಹೊಸ ಮಿಕ್ಸಿ ಕೆಲವೇ ತಿಂಗಳುಗಳಲ್ಲಿ ಕಿರಿಕಿರಿ ಶುರು ಹಚ್ಚಿಕೊಂಡಿತು. ಹಳೇ ಫ್ರಿಡ್ಜ್ ಇಪ್ಪತ್ತು ವರ್ಷ ಬಾಳಿದರೆ ಈಗಿನದು ಒಂದೇ ವರ್ಷಕ್ಕೆ "ಉಸ್ಸಪ್ಪಾ... ಇನ್ನು ಸಾಧ್ಯವಿಲ್ಲ" ಎನ್ನುತ್ತಿದೆ. ಯಾವುದೇ ಹೊಸ ಸ್ಟೀಲ್ ವಸ್ತುಗಳನ್ನು ತೆಗೆದುಕೊಂಡರೂ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ತುಕ್ಕು ಹಿಡಿವ ಲಕ್ಷಣಗಳು ಕಾಣತೊಡಗುತ್ತವೆ. ಹಲವಾರು ವರ್ಷಗಳ ಹಿಂದಿನ ಸ್ಟೀಲ್ ಪಾತ್ರೆಗಳು ಗಟ್ಟಿಮುಟ್ಟಾಗಿ ಚೆನ್ನಾಗಿವೆ.  ಏಕೆ ಹೀಗೆ? ದಿನೇ ದಿನೇ ತಾಂತ್ರಿಕತೆ ಮುಂದುವರಿಯುತ್ತಿರುವಾಗ ಇವೆಲ್ಲ ಬೇಗ ಹಾಳಾಗುತ್ತಿರುವುದಾದರೂ ಏಕೆ?

ಈಗೀಗ ಏನು ಬೇಕಾದರೂ exchange ಮಾಡಿಕೊಳ್ಳಬಹುದು. ಅದು ಹೇಗೆ? ಮೊದಲೆಲ್ಲಾ ಹೀಗಿರಲಿಲ್ಲವಲ್ಲ? ಆವಾಗ ಇಷ್ಟೊಂದು recycling option ಇರಲಿಲ್ಲ ನಿಜ, ಆದರೆ ಈಗ ನಾವು exchange ಗೆ ಹಾಕಿದ ಪ್ರತಿಯೊಂದು ವಸ್ತುಗಳೂ 100% recycle ಆಗುತ್ತಿವೆಯಾ? ಇಲ್ಲವಾದರೆ ಏನಾಗುತ್ತಿವೆ? ಈ ತರ exchange ಮಾಡಿಕೊಳ್ಳುವುದರಿಂದ ಕಂಪೆನಿಯವರಿಗೆ/ ಮಾರಾಟಗಾರರಿಗೆ ಆಗುತ್ತಿರುವ ಲಾಭವಾದರೂ ಏನು? ಮತ್ತಷ್ಟು ಬೇಗ ಜನರು ಹೊಸ ವಸ್ತುಗಳನ್ನು ಕೊಳ್ಳಲು ಬರುತ್ತಾರೆಂಬುದೇ? ಅಥವಾ ಹೇಗಿದ್ದರೂ ಜನರಿಗೆ ಈಗೀಗ ಹಳೆಯದನ್ನು discard ಮಾಡಿ ಹೊಸದನ್ನು ಕೊಳ್ಳುವ ರೂಢಿ ಜಾಸ್ತಿಯಾಗುತ್ತಿದೆ ಎಂಬುದನ್ನೇ ಆಧಾರವಾಗಿಟ್ಟುಕೊಂಡು ವಸ್ತುಗಳನ್ನೇ ಕಡಿಮೆ ಬಾಳಿಕೆ ಬರುವವಂತೆ ತಯಾರಿಸುತ್ತಾರಾ? ಈ ಎಲ್ಲಾ  ಪ್ರಶ್ನೆಗಳು ಎಷ್ಟೊಂದು ದಿನಗಳಿಂದ ತಲೆ ತಿನ್ನುತ್ತಿವೆ. ನನಗೇಕೋ ಒಂದು ಹುಚ್ಚು ಅನುಮಾನ- ನಾವು exchange ಗೆಂದು ಹಾಕಿದ ಎಲ್ಲ ವಸ್ತುಗಳಲ್ಲಿರುವ ಚೆನ್ನಾಗಿರುವ parts ಗಳನ್ನೆಲ್ಲ ತೆಗೆದು revamp ಮಾಡಿ ಹೊಸವಸ್ತುಗಳನ್ನಾಗಿಸಿ ಮಾರುತ್ತಿದ್ದಾರಾ?

ಈಗಿನ ಕಾಲದ ವಸ್ತುಗಳು ಬೇಗನೆ ಹಾಳಾಗುತ್ತಿರುವುದನ್ನು ನೋಡಿದಾಗ ಅಪ್ಪನಿಗಂತೂ ನಂಬಲೇ ಆಗುವುದಿಲ್ಲ- "ಅದು ಹೇಗೆ ಅಷ್ಟು ಬೇಗ ಹಾಳಾಗಿ ಹೋಯಿತು?" ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ನಮ್ಮ ಬಳಿ ಉತ್ತರವಿಲ್ಲ! ಹಳೆಯ ಕಾಲದ ಸುಮೀತ್ ಮಿಕ್ಸಿಯನ್ನು ಅಮ್ಮ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಉಪಯೋಗಿಸಿದ್ದಳು. ಅದು ತುಂಬಾ ಹಾಳಾಗಿ ಇನ್ನು ರಿಪೇರಿ ಸಾಧ್ಯವಿಲ್ಲ ಎನಿಸಿದಾಗ ಅದನ್ನು exchange ಮಾಡಿ ಹೊಸದನ್ನು ಕೊಂಡರು, ಮೊದಲು ಎಲ್ಲಿ ಕೊಂಡಿದ್ದರೋ ಅದೇ ಅಂಗಡಿಯಲ್ಲಿ. ಹೊಸ ಮಿಕ್ಸಿ ಕೆಲವೇ ತಿಂಗಳುಗಳಲ್ಲಿ ಕಿರಿಕಿರಿ ಶುರುಮಾಡಿದಾಗ ಅಮ್ಮ ಅದನ್ನು ರಿಪೇರಿಗೆ ಕೊಂಡೊಯ್ದಾಗ ಆ ಅಂಗಡಿಯವ ಹೇಳಿದನಂತೆ - "ನಿಮಗೆ ಮಿಕ್ಸಿಯನ್ನು ಉಪಯೋಗಿಸಲಿಕ್ಕೇ ಬರುವುದಿಲ್ಲ ಬಹುಶಃ, ಅದಕ್ಕೇ ಹಾಳಾಗಿದೆ"!


ನಾವು ಹಾಳಾದ ವಸ್ತುಗಳನ್ನು ಅಪ್ಪ ಕೆಲವು ಬಾರಿ ಮನೆಯಲ್ಲಿ ರಿಪೇರಿ ಮಾಡುವುದನ್ನೋ, ಇನ್ನು ಕೆಲವು ಬಾರಿ ಪೇಟೆಗೆ ಒಯ್ದು ರಿಪೇರಿ ಮಾಡಿಸಿ ತರುವುದನ್ನೋ ಕಂಡು ಬೆಳೆದವರು. ನಮ್ಮ ಮಕ್ಕಳಿಗೆ ಇದರ ಅನುಭವವೇ ಇರುವುದಿಲ್ಲ, ಅವರೇನಿದ್ದರೂ ಹಳೆಯದನ್ನು ಬಿಸಾಕುತ್ತ ಬದುಕುವವರು. ನಾವು ಹೇಗೋ ಈ ಹೊಸ ಜಾಯಮಾನಕ್ಕೆ ಕಷ್ಟವೆನಿಸಿದರೂ ಒಗ್ಗಿಕೊಳ್ಳುತ್ತಿದ್ದೇವೆ, ಆದರೆ ನಮ್ಮ ತಂದೆ ತಾಯಿಯರಿಗೆ ಈ ಹೊಸ ಪ್ರವೃತ್ತಿ ನಿಜವಾಗಲೂ ಕಷ್ಟವೆನಿಸುತ್ತಿದೆ. ಅವರಿಗೆ ಯಾವುದನ್ನೂ ಬಿಸಾಕಿ ಗೊತ್ತಿರಲಿಲ್ಲ- ವಸ್ತುಗಳಿರಲಿ ಅಥವಾ ಸಂಬಂಧಗಳಿರಲಿ. ತೇಪೆ ಹಚ್ಚುತ್ತಿದ್ದರು. ಈಗಿನ ತಲೆಮಾರಿನವರಿಗೆ ತೇಪೆಯ ಕೆಲಸವೇ ಬೇಡ- ವಸ್ತುಗಳಿಗೂ, ಸಂಬಂಧಗಳಿಗೂ.  

June 2, 2016

ದ್ವಂದ್ವದಲ್ಲಿರುವ ಜನರೇಶನ್ ನಮ್ಮದು!

ನಾನೀಗ ಮೂವತ್ತರ ದಶಕದ ಕೊನೆಯಲ್ಲಿ... ಇನ್ನೇನು ಒಂದೆರಡು ವರ್ಷಗಳಲ್ಲಿ ಚಾಳೀಸೂ ಮುಖವೆರೀತು! ಆಧುನಿಕ ತಂತ್ರಜ್ಞಾನದಲ್ಲಿ ಇತ್ತೀಚಗೆ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ ಕೆಲವೊಮ್ಮೆ ಆಶ್ಚರ್ಯವೂ, ಖುಷಿಯೂ ಆದರೆ, ಇನ್ನು ಕೆಲವೊಮ್ಮೆ ತಲೆ ತಿರುಗಿದಂತಾ ಅನುಭವ... ಎಷ್ಟೆಲ್ಲಾ ಮುಂದುವರಿದಿದ್ದೇವೆ ನಾವು! ಜಗತ್ತೆಲ್ಲಾ ಬೆರಳ ತುದಿಯಲ್ಲಿ!

ಒಮ್ಮೆ ಹಿಂದಿರುಗಿ ನೋಡಿದೆ... ಅಪ್ಪ, ಅಮ್ಮನ ಕಾಲದಲ್ಲಿ ರೇಡಿಯೋಗೂ licence ಇತ್ತು! ಅಪ್ಪನ ಯಾವುದೋ ಹಳೆಯ file ನಲ್ಲಿ ನಾನು ಅದನ್ನು ಕಂಡಿದ್ದೆ. ನೀಲಿ ಬಣ್ಣದ ಸಣ್ಣ ಪುಸ್ತಕ (Photo ನೋಡಿ). ನನ್ನ ಎರಡು ವರ್ಷದ ಮಗ smart phone ಹೇಗೆ ಉಪಯೋಗಿಸುವುದು ಎಂದು ಆಗಲೇ ಕಲಿಯತೊಡಗಿದ್ದಾನೆ! ನನ್ನ ಅರವತ್ತಾರು ವರ್ಷದ ಅಪ್ಪ ಇವತ್ತಿಗೂ mobile phone ನಲ್ಲಿ ಪ್ರತೀ ಸಲವೂ number dial ಮಾಡಿಯೇ ಮಾತಾಡುತ್ತಾರೆ. Generation gap ನನ್ನ ಕಣ್ಣೆದುರಿಗೆ!

ನಮ್ಮ ಬಾಲ್ಯದ ಕಾಲದಲ್ಲಿ landline phone ಗಳು ಆಗ ತಾನೇ ಕಾಲು ಹಾಕುತ್ತಿದವು. ಊರಲ್ಲೇ ಇನ್ನೊಬ್ಬರ ಮನೆಗೆ phone ಮಾಡಬೇಕಿದ್ದರೆ ಬರಿದೇ ಎರಡು digit dial ಮಾಡಿದರೆ ಸಿಗುತ್ತಿದ್ದರು. ಆದರೆ ಈಗ ಅವರ ಮನೆಗೆ ಮಾಡಬೇಕಾದರೂ ಆರು digit dial ಮಾಡಬೇಕು! Trunk call ಮಾಡುವ ಮಜವೇ ಬೇರೆ ಇತ್ತು! ನಮ್ಮ ಮನೆಯಿಂದ ಶಿರಸಿ exchange ಗೆ phone ಮಾಡಿನಾನು ಎಕ್ಕಂಬಿ exchange ** ನಿಂದ ಮಾತಾಡುತ್ತಿದ್ದೇನೆ, ನನಗೆ  ಜಾನ್ಮನೆ exchange ** ಕೊಡಿ ಎನ್ನಬೇಕಾಗಿತ್ತು, ನಂತರ ಅವರ call ಗಾಗಿ ಕಾಯುತ್ತಿರಬೇಕಗಿತ್ತು. ಅವರು connect ಮಾಡಿ ನಮಗೆ ತಿರುಗಿ call ಮಾಡುತ್ತಿದರು. ಮೂರು ನಿಮಿಷಗಳ ಕಾಲ ಸಮಯವಿರುತ್ತಿತ್ತು. ಅಷ್ಟರ ನಂತರ ಅವರು ನಡುವೆ ಬಾಯಿ ಹಾಕಿ "ಮೂರು ನಿಮಿಷ ಆಯ್ತ್ರೀ" ಎನ್ನುತ್ತಿದ್ದರು! ನಮ್ಮ ಮಾತು ಮುಗಿದಿರದಿದ್ದರೆ "ಮತ್ತೆ ಮೂರು ನಿಮಿಷ ಕೊಡ್ರೀ" ಎನ್ನುವುದು. ಹೀಗೆಯೇ ನಡೆಯುತ್ತಿರುವಾಗ ಒಮ್ಮೆ ನಮ್ಮ ಎಕ್ಕಂಬಿ exchange lineman ಅಪ್ಪನ ಬಳಿ "ನಿಮ್ಮ ಜಮೀನು ಮಾರುವ ವಿಚಾರ ಏನಾಯಿತು?" ಎಂದು ಕೇಳಿದನಂತೆ. ಅಪ್ಪನಿಗೆ ಆಶ್ಚರ್ಯ! ಆಮೇಲೆ ಗೊತ್ತಾಯಿತು- ಅಪ್ಪ phone ನಲ್ಲಿ ಮಾತನಾಡುತ್ತಿರುವಾಗ ನಡುವೆ ಅವನೂ ಕೇಳಿಸಿಕೊಂಡಿದ್ದ!

ಅಪ್ಪ, ಅಮ್ಮನ ಕಾಲಕ್ಕೆ ರೇಡಿಯೋ ಬಂತು, ನಮ್ಮ ಬಾಲ್ಯದ ಕಾಲಕ್ಕೆ black and white TV ಬಂದಿತ್ತು. ಮಜವೆಂದರೆ ಆಗಿನ ಕಾಲದ ಕೆಲವು TV ಗಳಿಗಂತೂ ಬಾಗಿಲು ಹಾಕಿ child lock ಮಾಡಲೂ ಸಾಧ್ಯವಿತ್ತುಈಗಿನ ಕಾಲದಲ್ಲಿ ದೊಡ್ದವರಿಗಿಂತ ಮಕ್ಕಳೇ ಚೆನ್ನಾಗಿ TV remote control operate ಮಾಡುತ್ತಾರೆ. ಎಂತಹ ಬದಲಾವಣೆ ಕೆಲವೇ ದಶಕಗಳಲ್ಲಿ! ನಾವು ಚಿಕ್ಕವರಿದ್ದಾಗ ನಮ್ಮ ಪಕ್ಕದ ಊರಿನ ಒಬ್ಬರ ಮನೆಯಲ್ಲಿ TV ಇತ್ತು. ಭಾನುವಾರ ಬೆಳಿಗ್ಗೆ ರಾಮಾಯಣ ನೋಡಲು ಅವರ ಮನೆಯಲ್ಲಿ ಜಾತ್ರೆಯೇ ನೆರೆದಿರುತ್ತಿತ್ತು! ಈಗಿನ ಕಾಲದಂತೆ ನಾಲ್ಕು ಜನ ಮನೆಗೆ ಬಂದರೆಂದರೆ ಏನೋ inconvenience ಅನ್ನುವ ತರಹ ಇರಲಿಲ್ಲ ಆಗಿನ ಕಾಲ. ಬಂದವರನ್ನೆಲ್ಲಾ ಸ್ವಾಗತಿಸಿ ಚಾಪೆ ಹಾಸಿ ಕೊಡುತ್ತಿದ್ದರು. ನಾವೆಲ್ಲಾ ಮಕ್ಕಳು ಸೇರಿ ಎಷ್ಟೋ ದೂರ ನಡೆದುಕೊಂಡು ಅವರ ಮನೆಗೆ ಹೋಗುತ್ತಿದ್ದೆವು! ಕೆಲವು ವರ್ಷಗಳ ನಂತರ ನಮ್ಮನೆಗೆ black and white  portable TV ಬಂತು. ಧಾರವಾಡ relay station ನಿಂದ signal ತೆಗೆದುಕೊಳ್ಳಲು ಮನೆಯ ಮೇಲೆ antenna. ಯಾವಾಗ ನೋಡಿದರೂ TV ಮೇಲೆ ಸಬ್ಬಕ್ಕಿ ಪಾಯಸದ ತರಹ ಗುಳ್ಳೆ ಗುಳ್ಳೆ. ನನ್ನ ತಮ್ಮ antenna ತಿರುಗಿಸುವವ, ನಾನು ಮನೆಯೊಳಗಿಂದ "ಸಾಕು ಸಾಕು ಸಾಕು... ನಿಲ್ಲಿಸು ನಿಲ್ಲಿಸು ... ಅಯ್ಯೋ ಮತ್ತೆ ಹೋಯ್ತು ... " ಎಂದು ಕಿರಿಚಿಕೊಳ್ಳುವವಳು. ಇದೆಲ್ಲ ಸಂಭ್ರಮದೊಳಗೆ programme ಬಹುಪಾಲು ಮುಗಿದೇ ಹೋಗಿರುತ್ತಿತ್ತು! ದಿನದಲ್ಲಿ TV programmes ಕೆಲವೇ ಗಂಟೆಗಳ ಕಾಲ, ಉಳಿದ ಸಮಯದಲ್ಲಿ TV ಹಚ್ಚಿದರೆ screen ಮೇಲೆ ಪಟ್ಟೆಸೀರೆ ಕಾಣಿಸುತ್ತಿತ್ತು ಜೊತೆಗೆ ಕುನ್ಯ್ಯ್ಯ್ಯ್ ಎನ್ನುವ ಸದ್ದು ಬೇರೆ. Radio ದಲ್ಲಿ ಅಮೀನ್ ಸಯಾನಿಯವರ 'ಸಿಬಾಕಾ ಗೀತ್ ಮಾಲಾ' ಕೇಳಲು ಒಂದು ವಾರ ಕಾಯಬೇಕಾಗಿತ್ತು; ಹಾಗೆಯೇ TV ಯಲ್ಲಿ ಬುಧವಾರದ 'ಚಿತ್ರಹಾರ್' ಮತ್ತು ಭಾನುವಾರದ 'ರಂಗೋಲಿ'ಗೂ ಕೂಡ. ನಂತರ ಕೆಲವು ವರ್ಷಗಳಲ್ಲಿ ಕನ್ನಡದ 'ಚಂದನ ವಾಹಿನಿ' ಪ್ರಾರಂಭ. ಕೆಲ ಗಂಟೆಗಳ ಕಾಲ ಕನ್ನಡವನ್ನೂ ನೋಡಲು ಸಿಗುತ್ತಿತ್ತು ನಂತರ "Over to Delhi" ಎಂಬ message. ಚಂದನ ವಾಹಿನಿಯ ಪ್ರಾರಂಭದ ಮೊದಲು ಭಾನುವಾರ ದೆಹಲಿಯವರು ಕಿವುಡ ಮೂಕರ ವಾರ್ತೆಯ ನಂತರ ಹಾಕುವ ಪ್ರಾದೇಶಿಕ ಭಾಷಾ ಚಲನಚಿತ್ರದ ಕನ್ನಡದ ಪಾಳಿಗೆ ನಾಲ್ಕು ತಿಂಗಳುಗಳೇ ಕಾಯಬೇಕಾಗಿತ್ತು! ಇನ್ನೂ ಮಜದ ಸಂಗತಿಯೆಂದರೆ ಯಾವುದಾದರೂ ಹಳೆಯ ಹಾಡು ಬಂತೆಂದರೆ 'ಪ್ರಸಾರ ಕಪ್ಪು ಬಿಳುಪು' ಎಂಬ ಕೆಳಗಡೆ flash ಆಗುತ್ತಲೇ ಇರುತ್ತಿತ್ತು, ಏಕೆಂದರೆ ಮನೆಯಲ್ಲಿ colour TV ಇದ್ದವರು ಏನೋ ಆಯಿತು ಎಂದು ಗಾಬರಿ ಬಿದ್ದು ತಮ್ಮ TV ಯ  colour adjustment ಗೆ ತೊಡಗಬಾರದೆಂದು! ಏನೇ ಆಗಲಿ ಹಿಂದಿರುಗಿ ನೋಡಿದರೆ ಅಂದಿನ ದಿನಗಳ ನೆನಪೇ ಅಪ್ಯಾಯಮಾನ! ಈಗಿನ generation ನವರಿಗೆ ಇದ್ಯಾವುದೂ ಗೊತ್ತೇ ಇಲ್ಲ! ನಮ್ಮ generation transition ನಲ್ಲಿ ಬರುವ generation. ಏನೂ ಇಲ್ಲದ ಕಾಲದಿಂದ ಇಷ್ಟೆಲ್ಲಾ ಬೆಳವಣಿಗೆಗಳನ್ನು ಕಂಡಿದೆ.

ನನಗಂತೂ ಯಾವತ್ತೂ ಏನೋ ಒಂದು ತರದ ದ್ವಂದ್ವ. ಇಷ್ಟೆಲ್ಲಾ technological advancement ಆದ ಮೇಲೆ ಹಳೆಯದನ್ನು miss ಮಾಡಿಕೊಂಡಂತ ಭಾವನೆ. ಪತ್ರ ಬರವಣಿಗೆ ಹೋಗಿ email ಬಂತು, ಈಗಂತೂ ಎಲ್ಲದಕ್ಕೂ WhatsApp. ತುಂಬಾ convenient, ನಿಜ. ಆದರೂ ಏನೋ ಕಳೆದುಕೊಂಡಂತೆ ಬಣ ಬಣ. ಉದಾಹರಣೆಗೆ, ಅಂಗಡಿಗೆ ಹೋಗುವಾಗ ರಾಜೀವ ನನಗೆ "ಅದ್ಯಾಕೆ ಸಾಮಾನು ಚೀಟಿ ಬರೆದುಕೊಳ್ಳುತ್ತೀಯಾ, smart phone ನಲ್ಲಿ ಮಾಡಿಕೊ" ಎನ್ನುತ್ತಾನೆ. Smart phone ನಲ್ಲಿ ಏನೆಲ್ಲಾ options ಇದ್ದರೂ ನನಗೆ ಚೀಟಿ ಬರೆದುಕೊಳ್ಳುವುದೇ ಇಷ್ಟ. ಒಮ್ಮೊಮ್ಮೆ ವಿಚಾರ ಮಾಡಿದರೆ ರಾಜೀವ ಹೇಳುವುದೂ ನಿಜ ಎನಿಸುತ್ತದೆ, ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಆದರೂ ಹಳೆಯ ಪದ್ಧತಿಗಳು ಯಾಕೋ ಮನಸ್ಸಿಗೆ ಹತ್ತಿರ ಎನಿಸುತ್ತವೆ. ಈಗಿನ generation ನವರು technology ಗೆ ಹೊಂದಿಕೊಂಡಿದ್ದಾರೆ ಏಕೆಂದರೆ ಅವರಿಗೆ ಹಳೆಯ ವಿಧಾನಗಳಗಳ ಅನುಭವವಿಲ್ಲ. ಹಳೆಯ ಕಾಲದವರು ಇನ್ನೂ ಹಳೆಯ ವಿಧಾನಗಳನ್ನೇ ನೆಚ್ಚಿಕೊಂಡಿದ್ದಾರೆ ಏಕೆಂದರೆ ಅವರಿಗೆ ಹೊಸದರ ಬಗ್ಗೆ ಅಸಡ್ಡೆ. ನನಗೋ ಹೊಸದರ ಮೇಲೆ ಪ್ರೀತಿ, ಆದರೆ ಹಳೆಯದನ್ನು ಬಿಡಲು ಮನಸ್ಸಿಲ್ಲ. ಹಾಗಾಗಿ ನನ್ನಂತ ಕೆಲವು ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ಇರುವವರ ಬಗ್ಗೆ ವಿಚಾರ ಮಾಡುತ್ತಿದ್ದೇನೆ!

June 13, 2013

ಅಪ್ಪನ ಕನ್ನಡಕ (ಭಾಗ- ೨)

ವರ್ಷದಿಂದ ವರ್ಷಕ್ಕೆ ಅಪ್ಪ ಕನ್ನಡಕದೊಂದಿಗೆ ಮಾಡಿಕೊಳ್ಳುವ ಅನಾಹುತ ಒಂದಲ್ಲ ಎರಡಲ್ಲ. ಹಿಂದೊಮ್ಮೆ ಆ ಬಗ್ಗೆ ಬರೆದಿದ್ದೆ (http://seemahegde78.blogspot.nl/2012/01/blog-post.html). ಅದರ ನಂತರ ಮತ್ತೆ ಎಷ್ಟೋ ಅನಾಹುತಗಳು ನಡೆದುಹೋದವು. ಈಗ ಬರೆಯಲೇ ಬೇಕಾಗಿದೆ.

೨೦೧೨ : ಜನೆವರಿ. ನಾನು, ರಾಜೀವ ಮೈಸೂರಿನಲ್ಲಿದ್ದೆವು. ನಮ್ಮ ಮನೆಗೆ ಅಪ್ಪ, ಅಮ್ಮ ಬಂದಿದ್ದರು, ಎರಡು-ಮೂರು ದಿನ ಉಳಿದಿದ್ದರು. ಮೈಸೂರು, ಶ್ರೀರಂಗಪಟ್ಟಣ, ರಂಗನತಿಟ್ಟು ಎಲ್ಲಾ ಅಡ್ಡಾಡಿಸಿ ಮೈಸೂರು-ಶಿರಸಿ ರಾತ್ರಿ ಬಸ್ಸಿಗೆ ಅವರನ್ನು ಹತ್ತಿಸಿ ನಾವು ಮನೆಗೆ ಬಂದೆವು. ಅಪ್ಪ ರಾತ್ರಿ ಬಸ್ಸಿನಲ್ಲಿ ಕನ್ನಡಕವನ್ನು ಜೇಬಿನಲ್ಲಿಟ್ಟುಕೊಂಡು ನಿದ್ದೆ ಮಾಡಿದ. ಅದು ಎಲ್ಲೊ ಬಿದ್ದು ಹೋಗಿರಬೇಕು, ಬಸ್ಸಿನ ಸದ್ದಿನಲ್ಲಿ, ನಿದ್ದೆಯಲ್ಲಿ, ಗೊತ್ತೇ ಆಗಲಿಲ್ಲ. ಶಿರಸಿಯಲ್ಲಿ ಬೆಳಿಗ್ಗೆ ಇಳಿದ ಮೇಲೂ ಗಮನಿಸಲಿಲ್ಲ. ಅಲ್ಲಿಂದ ಬೇರೆ ಬಸ್ಸು ಹಿಡಿದು ಮನೆಗೆ ಹೋದ ಮೇಲೆ ಗಮನಕ್ಕೆ ಬಂತು. ತಕ್ಷಣ ಸಿರಸಿ bus stand control room ಗೆ phone ಮಾಡಿ ವಿಚಾರಿಸಿದ, ಸಿಗಲಿಲ್ಲ ಎಂದುಬಿಟ್ಟರು. ಸರಿ, ಬೇರೆ ಕನ್ನಡಕ ಮಾಡಿಸಿಕೊಂಡ. ತೆಳ್ಳನೆಯ frame ನದು ಎಂದು ರಘು ಮತ್ತು ನಾನು ತಾಕೀತು ಮಾಡಿದ್ದರಿಂದ ತರಹದ್ದೇ ಮಾಡಿಸಿಕೊಂಡ.

ಕೆಲ ದಿನಗಳ ಕಳೆದವು. ೨೦೧೨ ಮಳೆಗಾಲದ ಸಮಯ. ಮನೆಯಿಂದ ದೂರದಲ್ಲಿನ ನಮ್ಮ ಜಾಗದಿಂದ ಹಸಿರು ಹುಲ್ಲು ತರಲೆಂದು ಅಪ್ಪ ಒಂದೆರಡು ಆಳುಗಳನ್ನು ಕರೆದುಕೊಂಡು jeep drive ಮಾಡಿಕೊಂಡು ಹೋಗಿದ್ದ. Drive ಮಾಡುವಾಗ ದೂರ ದೃಷ್ಟಿಯ ಸಲುವಾಗಿ ಅವನಿಗೆ ಕನ್ನಡಕ ಬೇಕೇಬೇಕಾಗುತ್ತದೆ. Driving ನ ನಂತರದಲ್ಲಿ ಅದು ಅವಶ್ಯವಿರುವುದಿಲ್ಲ, ತೆಗೆದು ಜೇಬಿಗೆ ಸೇರಿಸಿಬಿಡುತ್ತಾನೆ. ಕೆಲಸವಾದ ನಂತರ ಹಿಂದಿರುಗಿ ಹೊರಟಾಗ ಜೇಬಿಗೆ ಕೈಹಾಕಿದರೆ ಕನ್ನಡಕ ಇಲ್ಲ! ಸುತ್ತಮುತ್ತಲಿನ ಜಾಗವನ್ನೆಲ್ಲಾ ಒಮ್ಮೆ ಹುಡುಕಿದ, ಸಿಗಲಿಲ್ಲ. ಅಂತೂ ಸ್ವಲ್ಪ ಕಷ್ಟಪಟ್ಟು drive ಮಾಡಿಕೊಂಡು ಮನೆಗೆ ಬಂದ. Jeep ನಿಂದ ಹುಲ್ಲನ್ನು ಇಳಿಸಿ ದನ-ಕರುಗಳಿಗೆ ಹಾಕುವಾಗ ಆಳು ದ್ಯಾಮ್ಯಾನಿಗೆ ಕನ್ನಡಕ ಸಿಕ್ಕಿತು! ಹುಲ್ಲಿನ ಹೊರೆಯನ್ನು jeep ನ ತಲೆಯ ಮೇಲೆ ನಿಂತು ಅಪ್ಪ ಕಟ್ಟುತ್ತಿದ್ದನಂತೆ. ಆಗ ಜೇಬಿನಲ್ಲಿದ್ದ ಕನ್ನಡಕ ಹುಲ್ಲಿನ ನಡುವೆಲ್ಲೋ ಬಿದ್ದುಹೋಗಿರಬೇಕು, ಅವನಿಗದು ಗೊತ್ತಾಗಲೇ ಇಲ್ಲ! ಇದರಿಂದ ಅಪ್ಪ ಪಾಠ ಕಲಿಯಲಿಲ್ಲ. ಆ ಕನ್ನಡಕಕ್ಕೊಂದು ದಾರ ಹಾಕಿಸಿಕೊಳ್ಳಲಿಲ್ಲ. ಇಂತದೇ ಮತ್ತೊಂದು ಘಟನೆ ನಡೆಯಿತು.

೨೦೧೨ ರ ಚಳಿಗಾಲ. ಅಡಿಕೆಕೊಯ್ಲಿನ ಸಮಯ. ತನ್ನ ತೋಟದ ಅಡಿಕೆಯನ್ನು ಕೊಯ್ಸಿಕೊಂಡು ಅದನ್ನು ನಮ್ಮೂರಿನ co-op society van ನಲ್ಲಿ ಹೇರಿಕೊಂಡು, ಸುಲಿಯಿಸಲೆಂದು ಬೇರೆಯವರ ಮನೆಗೆ ತೆಗೆದುಕೊಂಡು ಹೋಗಿ ಹಾಕಿ ಮನೆಗೆ ಬಂದ. ಯಾಕೋ ಕನ್ನಡಕ ಬೇಕಾಯಿತು, ಆದರೆ ಕಾಣಿಸಲಿಲ್ಲ. ಮನೆಯೆಲ್ಲ ಹುಡುಕಿದ, ಸಿಗಲಿಲ್ಲ. ಅವನಿಗೂ ಆ ಕನ್ನಡಕಕ್ಕೂ ಅದೇನು ನಂಟೋ ಆ ದೇವರಿಗೇ ಗೊತ್ತು! ಎರಡು ದಿನಗಳ ನಂತರ ಅಡಿಕೆ ಸುಲಿಯುವ ಹೆಂಗಸರಲ್ಲಿ ಯಾರಿಗೋ ಅಡಿಕೆ ಕೊನೆಯ ರಾಶಿಯಲ್ಲಿ ಕನ್ನಡಕವೊಂದು ಸಿಕ್ಕಿತ್ತು! ಕೆಲಸಕ್ಕೆ ಬರುವ ದ್ಯಾಮ್ಯಾನ ಜೊತೆ ಬಂದು ಪುನಃ ಅಪ್ಪನ ಕೈಸೇರಿತು.

೨೦೧೩: ಒಂದೆರಡು ತಿಂಗಳುಗಳ ಹಿಂದೆ ಅಪ್ಪ ಒಂದಿಷ್ಟು ಕಟ್ಟಿಗೆಯ ಜಿಗ್ಗು, ಮಣ್ಣು ಎಲ್ಲವನ್ನೂ ಸೇರಿಸಿ ಬೆಂಕಿ ಹಾಕಿ ಸುಟ್ಟ. ಆ ರೀತಿ ತಯಾರಿಸಿದ ಮಣ್ಣಿಗೆ ಸುಡುಧೂಳು ಎನ್ನುತ್ತಾರೆ. ಗೊಬ್ಬರದ ರೀತಿ ಅದನ್ನು ಉಪಯೋಗಿಸುತ್ತಾರೆ, ವಿಶೇಷವಾಗಿ ಕಬ್ಬಿನ ಬೆಳೆಗೆ. ಕಟ್ಟಿಗೆಯ ಜಿಗ್ಗನ್ನು ಬಗ್ಗಿ ಒಟ್ಟುಗೂಡಿಸುವಾಗ ಅದಕ್ಕೆ ತನ್ನ ಕನ್ನಡಕವನ್ನೂ ಸೇರಿಸಿಬಿಟ್ಟಿದ್ದ. ಮುಂದಿನ ಸಲ ಊರಿಗೆ phone ಮಾಡಿದಾಗ ಅಮ್ಮ ಅಪ್ಪನ ಕನ್ನಡಕದ ಕಥೆ ಹೇಳಿದಳು. ಅಪ್ಪ phone ತೆಗೆದುಕೊಂಡವನೇ ಕೂಸೇ, ಕನ್ನಡಕದ ಅಂತ್ಯ ಸಂಸ್ಕಾರವೂ ಆಗಿ ಹೋಯಿತು ಎಂದ. ನಾನು ಹುಮ್ಮ್... ಹೋಗ್ಲಿ ಬಿಡು, ಬೇರೆ ಮಾಡಿಸಿಕೋ ಎಂದೆ. ಆದರೆ ಅಪ್ಪನಿಗೆ ಮತ್ತೆ ಹೊಸ ಕನ್ನಡಕದ ಮೇಲೆ ದುಡ್ಡು ಸುರಿಯುವುದು ಬೇಕಿರಲಿಲ್ಲ ಎಂದು ಕಾಣುತ್ತದೆ. ಯಾವುದೋ ಓಬೀರಾಯನ ಕಾಲದ ದಪ್ಪ frame.. ಅದೆಲ್ಲಿಟ್ಟಿದ್ದನೊ, ಯಾವಾಗ ಇಟ್ಟಿದ್ದನೋ ನಮಗ್ಯಾರಿಗೂ ಗೊತ್ತಿಲ್ಲ; ಅಂತೂ ಹೊರತೆಗೆದ. 80 ರ ದಶಕದ frame ತರ ಇದೆ, ಅದಕ್ಕೇ glass ಹಾಕಿಸಲು ಕೊಟ್ಟು ಬಂದಿದ್ದಾರೆ, ಎಷ್ಟು ಬೇಡವೆಂದರೂ ಕೇಳಲಿಲ್ಲ”- ಅಮ್ಮನ ದೂರು. ನಾನು ಹೇಳಿದೆ, “ತಲೆ ಕೇಡಿಸಿಕೊಳ್ಳಬೇಡ ಬಿಡು, ಅವನು ಕಳೆದುಕೊಳ್ಳುತ್ತಿರುವ rate ನೋಡಿದರೆ ಅದಿನ್ನು ಹೆಚ್ಚಿಗೆ ದಿನ ಬಾಳುವುದಿಲ್ಲ. ನಿನಗಿನ್ನು ತೀರಾ ನೋಡಲು ಹಿಡಿಸದಿದ್ದರೆ ಆ ಕನ್ನಡಕವನ್ನು ಎಲ್ಲಾದರೂ ಅಡಗಿಸಿಟ್ಟುಬಿಡು, ಒಂದೆರಡು ದಿನ ಹುಡುಕಿ ತಾನೇ ಎಲ್ಲೋ ಕಳೆದುಕೊಂಡೆ ಎಂದು ಬೇರೆ ಮಾಡಿಸಿಕೊಳ್ಳುತ್ತಾನೆ ಎಂಬ ಕುತಂತ್ರದ idea ಕೊಟ್ಟೆ.

ಇವತ್ತು ಅಮ್ಮ- ನಿನಗೊಂದು ಸುದ್ದಿ ಹೇಳುವುದಿತ್ತು ಅಂದಳು. ಅಪ್ಪನ ಕನ್ನಡವಾ?” ಎಂದೆ. ಅಮ್ಮನಿಗೆ ನಗು ತಡೆಯಲು ಆಗಲಿಲ್ಲ- ಹಾ... car ನ ಗಾಲಿಯ ಕೆಳಗಡೆ ಸಿಕ್ಕು ಪಡ್ಚ ಎನ್ನುತ್ತಾ ಮತ್ತೆ ನಗತೊಡಗಿದಳು. ಅಬ್ಬಾ ಅಂತೂ ಹೋಯಿತಾ ಆ ಕನ್ನಡಕ.. ಅಪ್ಪನನ್ನು ಕರೆ ಎಂದೆ. ಈ ಬಾರಿ ಏನು special?” ಎಂದೆ. ಅಪ್ಪ ಮುಸಿ ಮುಸಿ ನಗುತ್ತಾ ನಾನು car ನ ಗಾಲಿಗೆ ಗಾಳಿ ಹಾಕುವಾಗ ಬಿದ್ದು ಹೋಯಿತೋ ಏನೋ, ಆಮೇಲೆ car reverse ನಲ್ಲಿ ತಂದೆ. ಆಗೆಲ್ಲೋ......  ನಾನು ನೀನು ತಕ್ಷಣ ಹೋಗಿ ಮಾಡಿಸಲು ಕೊಡಬೇಡ, ಎಂತೆಂಥದೋ frame ನ ಕನ್ನಡಕವನ್ನು ಆರಿಸುತ್ತೀಯ, ಒಂದು ವಾರ ಹೇಗೋ ದೂಡು. ಇನ್ನೊಂದು ವಾರದಲ್ಲಿ ಹೇಗೂ ಶ್ವೇತಾ (ಅವನ ಸೊಸೆ) ಬರುವವಳಿದ್ದಾಳೆ. ಅವಳನ್ನು ಕರೆದುಕೊಂಡು ಹೋಗು. ಚೆನ್ನಾಗಿರುವುದನ್ನು ಆರಿಸಿ ಕೊಡುತ್ತಾಳೆ. ಈ ಸಲ ಮಾತ್ರ ಕನ್ನಡಕಕ್ಕೆ ದಾರ ಹಾಕಿಸಿಕೊಂಡೇ ಬಾ" ಎಂದೆ. ಅಷ್ಟರಲ್ಲಿ ಅಮ್ಮ ಕಸಿದುಕೊಂಡು "ಮೊನ್ನೆ ನಾನು ನನ್ನ ಕನ್ನಡಕವನ್ನು ಅಕಸ್ಮಾತ್  ಆಚೆ ಬಿಟ್ಟುಬಿಟ್ಟಿದ್ದೆ, ದ್ಯಾಮ್ಯಾ ಅಮ್ಮಾ ಹೆಗಡೇರು ಮತ್ತೆ ಕನ್ನಡಕ ಅಲ್ಲಿ ಬಿಟ್ಟಿದ್ದರು’ ಎಂದು ತಂದು ಕೊಟ್ಟ" ಎಂದಳು. ನನಗಾಶ್ಚರ್ಯ! ಅಮ್ಮ ಸಾಮಾನ್ಯವಾಗಿ ಕನ್ನಡಕವನ್ನು ಅಲ್ಲಿ-ಇಲ್ಲಿ ಇಡುವುದೇ ಇಲ್ಲ. "ನಿನಗೂ ಶುರುವಾಯಿತಾ? ಅದೇನು ಸೋಂಕು ರೋಗವಾ?" ಕೇಳಿದೆ.  ಅಮ್ಮ ಮತ್ತೆ ನಗತೊಡಗಿದಳು.

ಅಂತೂ ಅಪ್ಪನ ಕನ್ನಡಕವೆಂದರೆ ನಮಗೊಂದು ಹಾಸ್ಯಾಸ್ಪದ ವಸ್ತು ನಿಜ, ಆದರೆ ಅಮ್ಮನೂ ಶುರುಮಾಡಿಕೊಂಡಳಾ?! ಇನ್ನೇನು ಕೆಲ ದಿನಗಳಲ್ಲಿ ಅಪ್ಪನ ಹೊಸ ಕನ್ನಡಕ ಬರಲಿದೆ. ಇನ್ನೂ ಏನೇನು ಅವಾಂತರಗಳಾಗಬೇಕಿದೆಯೋ ಕಾಡು ನೋಡಬೇಕು! 

August 7, 2012

ನೊಣ ತಿಂದು (ಉತ್ತರ ಕನ್ನಡದ ಗಾದೆ – 255 ಮತ್ತು 256)


ನೊಣ ತಿಂದು ಜಾತಿ ಕೆಟ್ಟಂತೆ.
ಯಾವುದೇ ಮಾಂಸವನ್ನು ತಿಂದರೂ ಜಾತಿ ಕೆಡುತ್ತದೆ. ನೊಣದಂಥ ಕೀಟವನ್ನು ತಿಂದರೂ ಅದು ಮಾಂಸವೇ ಆಗಿರುವುದರಿಂದ ಜಾತಿ ಕೆಟ್ಟೇ ಕೆಡುತ್ತದೆ. ಎಷ್ಟೋ ವರ್ಷಗಳ ಕಾಲ ಜಾತಿಗೆ ಬದ್ಧನಾಗಿ ನಡೆದುಕೊಂಡು ಒಮ್ಮೆ ಅರಿವಿಲ್ಲದೆಯೇ ನೊಣವನ್ನು ತಿಂದು ಜಾತಿ ಕೆಟ್ಟುಹೋಗುತ್ತದೆ. ಅಂದರೆ, ಎಷ್ಟೋ ವರ್ಷ ಸರಿಯಾಗಿ ನಡೆದುಕೊಂಡು ಎಂದಾದರೊಮ್ಮೆ ಅತಿ ಚಿಕ್ಕ ತಪ್ಪಿನಿಂದಾಗಿ reputation ಕೆಡುವಂತಾದರೆ ಈ ಗಾದೆಯನ್ನು ಬಳಸುತ್ತಾರೆ- "ಅಯ್ಯೋ, ನೊಣತಿಂದು ಜಾತಿ ಕೆಟ್ಟಂತಾಯಿತು" ಎಂದು. ಇನ್ನೂ ಕೆಲವೊಮ್ಮೆ, ಸಣ್ಣ-ಪುಟ್ಟ ತಪ್ಪುಗಳಾಗುವ ಬಗ್ಗೆ ಹುಷಾರಾಗಿರೋಣ; ನೊಣ ತಿಂದು ಜಾತಿ ಕೆಡುವುದು ಬೇಡ" ಎಂದೂ ಕೂಡ ಹೇಳುತ್ತಾರೆ.

ಇದೇ ರೀತಿಯಲ್ಲಿ ಬಳಸುವ ಇನ್ನೊಂದು ಗಾದೆ- ಮಾಳಶೆಟ್ಟಿ ಸಾಯುವ ಕಾಲಕ್ಕೆ ಮೀನು ತಿಂದಿದ್ದ. ಶೆಟ್ಟಿಯಾದರೂ ಅವನು ಎಂದೂ ಮೀನು ತಿಂದಿರಲಿಲ್ಲ, ಆದರೆ ಅದೇನಾಯಿತೋ ಗೊತ್ತಿಲ್ಲ- ಸಾಯುವ ಕಡೇ ಕಾಲದಲ್ಲಿ ಮೀನು ತಿಂದುಬಿಟ್ಟಿದ್ದ!

July 9, 2012

ಬಾಳೇಕಾಯಿ ಕಸ


ನಮ್ಮೂರು ಶಿರಸಿಯಿಂದ ಬೆಂಗಳೂರಿಗೆ ಮಗನ ಮನೆಗೆ ಅಪ್ಪ ಬಂದಿದ್ದರು. ರಾತ್ರಿ ಅವರ ಕಾಲಿಗೆ ಬಾಳೇಕಾಯಿ ಕಸ ಬಂತು. ಕಸ ಬರುವುದು ಎಂದರೆ ಸ್ನಾಯುಸೆಳೆತ ಉಂಟಾಗುವುದು ಎಂದರ್ಥ. ಅದನ್ನು ಕಸ ಎಂದು ಯಾಕೆ ಕರೆಯುತ್ತಾರೆ ಎನ್ನುವುದು ನನಗೂ ಗೊತ್ತಿಲ್ಲ. ಕೆಲವೊಮ್ಮೆ ದೇಹದ ಯಾವುದಾದರೂ ಭಾಗದಲ್ಲಿ ತೀವ್ರವಾದ ಸ್ನಾಯುಸೆಳೆತ ಉಂಟಾದರೆ ಆ ಭಾಗದ ಸ್ನಾಯುಗಳು ಒಂದು ಬಾಳೆಕಾಯಿಯಷ್ಟು ದೊಡ್ಡದಾಗಿ ಉಬ್ಬಿಕೊಂಡುಬಿಡುತ್ತವೆ. ನೋಡಲು ಒಂದು ಸಣ್ಣ ಬಾಳೆಕಾಯಿ ಅಂಟಿಕೊಂಡಿರುವಂತೆ ಕಾಣಿಸುತ್ತದೆ. ಆ ರೀತಿ ಆಗುವುದನ್ನು ಬಾಳೇಕಾಯಿ ಕಸ ಬರುವುದು ಎನ್ನುತಾರೆ. ಇನ್ನೂ ಕೆಲವರು ಬಾಳೇಕಾಯಿ ಬಂದಿದೆ ಎಂದಷ್ಟೇ ಹೇಳುವುದೂ ಉಂಟು. ವಯಸ್ಸಾದಮೇಲೆ ಸ್ನಾಯುಗಳು ಬಲಹೀನವಾದಮೇಲೆ ಇದು ಪದೇಪದೇ ಬರುವುದುಂಟು. ಆ ರೀತಿ ಬಾಳೇಕಾಯಿ ಬಂದಾಗ ಉಂಟಾಗುವ ನೋವು ಅತ್ಯಂತ ತೀವ್ರ ತರದ್ದು; ಸಾಮಾನ್ಯದ ನೋವುನಿವಾರಕಗಳಿಗೆ ಕಡಿಮೆಯಾಗುವುದಿಲ್ಲ.

ಆ ರೀತಿ ಬಾಳೇಕಾಯಿ ಬಂದು ರಾತ್ರಿಯಿಡೀ ಗೋಳಾಡಿಡ ಅಪ್ಪನನ್ನು ಮರುದಿನ ಮಗ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದ. ಡಾಕ್ಟರು ಏನಾಯಿತು?” ಎಂದರು. ಮಗ ಬಾಯಿಬಿಡುವಷ್ಟರಲ್ಲಿ ಅಪ್ಪ, ಡಾಕ್ಟ್ರೇ, ಯಂತಾ ಮಾಡದು... ನಿನ್ನೆ ರಾತ್ರೆ ಬಾಳೇಕಾಯಿ ಬಂದು.... ವಂದೇಸಮ ಜಗ್ತಾ... ಶಳ್ತಾ ಅಂದ್ರೇ... ರಾತ್ರಿಡೀ ನಿದ್ದಿಲ್ಲಾಳಿ, ಗುಳ್ಗೆ ತಗಂಡ್ರೂ ಬಗ್ಲಿಲ್ಲಾ.... ನಾ ಇಲ್ದೋದ್ರೆ ಊರಲ್ಲೆಲ್ಲಾ ಇದ್ದಾಗ ಈ ಗುಳ್ಗೆ ಗಿಳ್ಗೆ ಯಲ್ಲಾ ತಗಳದಿಲ್ಲಾ ಹೇಳಿ. ನಮ್ದೆಂತಾ ಇದ್ರೂ ತೈಲ ಹಚ್ಚಿ ತಿಕ್ಕದೇಯಾ. ಇಲ್ ಬಂದ್ಕಂಡು ಯಂತಾರೂ ಪರಾಮಶಿ ಆಗದು ಬ್ಯಾಡಾ ಹೇಳಿ... ಇದೆ ಇಂವ ಕೊಟ್ಟ ಗುಳ್ಗೆ ತಗಂಡೆ.  ಮುಂದೆ ನಾನು ಹೇಳಬೇಕಾಗಿಲ್ಲ. ಡಾಕ್ಟರು ಕಣ್ಣು ಕಣ್ಣು ಬಿಟ್ಟರು, ಅರ್ಥವಾಗಲಿಲ್ಲ. ಅಪ್ಪ ಮುಂದುವರಿಸಬೇಕೆನ್ನುವಷ್ಟರಲ್ಲಿ ಮಗ ಅವನನ್ನು ತಡೆದು, ಕನ್ನಡವನ್ನು ಕನ್ನಡಕ್ಕೆ “translate” ಮಾಡಿ, ಡಾಕ್ಟರಿಗೆ ಅರ್ಥವಾಗುವ ಕನ್ನಡದಲ್ಲಿ ಹೇಳಿದ, ನಿನ್ನೆ ರಾತ್ರಿ ಅವರಿಗೆ muscle catch ಆಗಿ, ತುಂಬಾ pain ಆಯ್ತು. Pain killer tablet ಮತ್ತೆ spray ನಲ್ಲಿ ಕೂಡ ಕಡಿಮೆಯಾಗಲಿಲ್ಲ. ಅದಕ್ಕೆ ತಮ್ಮ ಹತ್ತಿರ....

ಉತ್ತರ ಕನ್ನಡದಲ್ಲಿ, ಅದರಲ್ಲೂ ವಿಶೇಷವಾಗಿ ಹವ್ಯಕರಲ್ಲಿ ಅನೇಕ ರೀತಿಯ ವಿಚಿತ್ರವಾದ ಪದಗಳಿವೆ. ಇತರರಿಗೆ ಅವುಗಳನ್ನು ಮೊದಲಬಾರಿಗೆ ಕೇಳಿದರೆ ಅರ್ಥವೇ ಆಗುವುದಿಲ್ಲ. ಉದಾಹರಣೆಗೆ, ಪರಾಮಶಿ ಎಂದರೆ ಅತಿಸಣ್ಣ ಪ್ರಮಾಣದ ಅನಾಹುತ. ಕಪ್ಪು ಎಂದರೆ ಚುಚ್ಚು. ಮುಳ್ಳು ಕಪ್ಪಿತು ಎಂದರೆ ಮುಳ್ಳು ಚುಚ್ಚಿತು ಎಂದರ್ಥ. ಹರುಕು ಅಥವಾ ಗಿಬುರು ಎಂಬುದರ ಅರ್ಥ ಪರಚು’. ಬೆಕ್ಕು ಪರಚಿತು ಎನ್ನುವುದನ್ನು ಬೆಕ್ಕು ಹರುಕಿತು ಅಥವಾ ಬೆಕ್ಕು ಗಿಬುರಿತು ಎಂದು ಹೇಳುತ್ತಾರೆ. ಅರಚು ಅಥವಾ ಅರ್ಚು’- ಯಾವುದಾದರೂ ಎರಡು ವಸ್ತುಗಳ ನಡುವೆ ಸಿಕ್ಕುಬಿದ್ದು ಪೆಟ್ಟಾಗುವುದು ಉದಾ: ಬಾಗಿಲಿಗೆ ಸಿಕ್ಕಿ ಕೈಬೆರಳು ಅರ್ಚಿ ಹೋಯಿತು”.    

ಅದೆಲ್ಲಾ ಹೊಗಲಿ, ನೋವಾಗುತ್ತಿದೆ ಎನ್ನುವುದನ್ನು ಉತ್ತರ ಕನ್ನಡದ ಜನರು ಎಷ್ಟೆಲ್ಲಾ ಶಬ್ದಗಳನ್ನು ಬಳಸಿ ಹೇಳುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನೋಯ್ತು, ಶಳಿತು, ವಡಿತು, ಜಗಿತು, ಘಮಿತು, ಭುಗುಭುಗು ಗುಡ್ತು ಹೀಗೇ ಇನ್ನೂ ಹಲವಾರು. But each term corresponds to a different type of pain or sensation or sometimes to a pain in different parts of the body. ವಿವರಿಸುವುದು ಅತ್ಯಂತ ಕಷ್ಟ. ಅದು ಅಲ್ಲೇ ಹುಟ್ಟಿ ಬೆಳೆದವರಿಗೆ ಮಾತ್ರ ಗೊತ್ತಾಗಬಹುದೇನೊ! ಉದಾಹರಣೆಗೆ,

ನೋವು: ಸಾಮಾನ್ಯವಾಗಿ ಎಲ್ಲರೂ ಹೇಳುವಂಥದು. ದೇಹದ ಯಾವುದೇ ಭಾಗಕ್ಕೆ ಗಾಯವಾಗದೇ ಪೆಟ್ಟಾದಾಗ ಆಗುವಂಥದು. ಆದರೆ ಪೆಟ್ಟಾಗದೇ ಬಂದಂಥ ನೋವೂ ಕೂಡ ಇರಬಹುದು. ಉದಾ: ತಲೆ, ಬೆನ್ನು, ಸೊಂಟ, ಕಾಲು, ಕೈ ನೋವು.

ಸೆಳೆತ (ಶಳ್ತ): ಒಂದು ಭಾಗವನ್ನು ಎಲ್ಲಾ ಕಡೆಯಿಂದ ಎಳೆದಂತಾಗುವ ನೋವು. ಊತುಕೊಂಡು ನೋವಾಗುವುದು, ಜಜ್ಜಿದಂತಾಗಿ ನೋವಾಗುವುದು ಕೂಡ ಸೆಳೆತದಲ್ಲಿ ಸೇರಿಕೊಳ್ಳುತ್ತವೆ. ಉದಾ: ಬಾಗಿಲಿಗೆ ಸಿಕ್ಕಿ ಅರ್ಚಿಹೋದ ಕೈಬೆರಳು ಸೆಳೆಯುತ್ತದೆ (ಶಳಿಯುತ್ತದೆ).

ವಡೆತ (ವಡ್ತ): ಖುರುವಿನಂತ ಹುಣ್ಣಾದಾಗ ನೋಯುವ ಪರಿ. ಈ ಶಳ್ತ-ವಡ್ತಗಳನ್ನು ಬಹಳಷ್ಟು ಸಲ ಜೊತೆಯಾಗಿ ಉಪಯೋಗಿಸುತ್ತಾರೆಶಳ್ತಾs-ವಡ್ತಾs ಎಂದು. ತಲೆ ಒಂದೇ ಸಮ ಹೊಡೆದುಕೊಳ್ಳುತ್ತಿದೆ ಎನ್ನುವುದಕ್ಕೂ ಕೂಡ ಉಪಯೋಗಿಸುತ್ತಾರೆ, ‘ತಲೆವಡ್ತ ಎಂದು! ಎಷ್ಟೋ ಸಲ ಸೆಳೆತ ಮತ್ತು ವಡೆತಗಳನ್ನು ಬದಲಿಯಾಗಿ ಉಪಯೋಗಿಸುತ್ತಾರೆ. ಆದರೆ ತಲೆವಡ್ತದ ಬದಲುತಲೆಶಳ್ತ ಎಂದರೆ ನಗೆಪಾಟಲಿಗೆ ಗುರಿಯಾಗುತ್ತೀರಿ. ಏಕೆಂದರೆ ಅದು ಬಳಕೆಯಲ್ಲಿಲ್ಲ! 

ಜಗಿತ (ಜಗ್ತ): ಇಕ್ಕಳವನ್ನು ಹಾಕಿ ಒತ್ತಿ-ಬಿಟ್ಟು ಮಾಡಿದರೆ ಆಗುವಂಥ ನೋವು. ಬಹುತೇಕ ಕಾಲು, ಕೈಗಳ ನೋವನ್ನು ಹೇಳುವಾಗ ಉಪಯೋಗಿಸುತ್ತಾರೆ- ಕಾಲು ಜಗಿಯುತ್ತಿದೆ ಎಂದು. ನೆನಪಿರಲಿ, ತಲೆ ಜಗಿಯುತ್ತಿದೆ ಎಂದು ಮಾತ್ರ ಯಾರೂ ಹೇಳುವುದಿಲ್ಲ!

ಘಮಿತ: ಖಾರದ ಪದಾರ್ಥ ತಾಕಿದಾಗ ಆಗುವ ಅನುಭವ. ಉದಾ: ಮೆಣಸಿನ ಪುಡಿ ಮುಟ್ಟಿದ್ದರಿಂದ ಕೈ ಘಮಿಯುತ್ತಿದೆ.

ಭುಗುಭುಗು ಗುಡು: ಸಾಮಾನ್ಯವಾಗಿ ಅಂಗಾಲಿನಲ್ಲಿ ಉಂಟಾಗುವ ಅನುಭವಕ್ಕೆ ಬಳಸುವಂಥದ್ದು. ಬೆಂಕಿಯ ಉರಿ ತಾಕಿದಾಗ ಆಗುವಂಥ ಅನುಭವ. ಉದಾ: ಬಿಸಿಲಿನಲ್ಲಿ ತುಂಬಾ ನಡೆದಿದ್ದರಿಂದ ಅಂಗಾಲು ಭುಗುಭುಗು ಗುಡುತ್ತಿದೆ”. ಬಿಸಿ ತಾಕಿ ಸುಟ್ಟ ಉರಿಯನ್ನೂ ಕೂಡ ಹೀಗೆ ಹೇಳಬಹುದು.

ಇಷ್ಟೆಲ್ಲಾ ವಿವರಿಸಿದ ಮೇಲೆಯೂ ಎಲ್ಲವನ್ನೂ ಹೇಳಿದ್ದೇನೆ ಎನ್ನುವ ಭರವಸೆಯಿಲ್ಲ. ಇನ್ನೂ ಹಲವಾರು ನೋವಿಗೆ ಸಂಭಂದಿಸಿದ ಶಬ್ದಗಳು ಉಳಿದುಹೋಗಿರಬಹುದು. ನೋವನ್ನು ಇಷ್ಟೆಲ್ಲಾ ಬಗೆಯಲ್ಲಿ ಬಣ್ಣಿಸಬಹುದು, ಮತ್ತು ನೋವಿನಲ್ಲಿರುವ ಆ ಸಣ್ಣ-ಪುಟ್ಟ ವ್ಯತ್ಯಾಸಗಳನ್ನೂ ಕೂಡ differentiate ಮಾಡಬಹುದು ಎಂಬುದನ್ನು ವಿಚಾರ ಮಾಡಿದರೆ ಆಶ್ಚರ್ಯವಾಗುತ್ತದೆ!  

June 26, 2012

ಕಣ್ಣು ಹೆದರಿಸಿತ್ತು (ಉತ್ತರ ಕನ್ನಡದ ಗಾದೆ – 254)

ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು.
ಇದೆಂಥ ಸುಂದರ ಗಾದೆ ಗೊತ್ತಾ? ನನ್ನ ಅತ್ಯಂತ ಪ್ರೀತಿಯ ಗಾದೆಗಳಲ್ಲೊಂದು. ಈ ಗಾದೆಯನ್ನು ನಾನು ಮೊಟ್ಟಮೊದಲ ಬಾರಿ ಕೇಳಿದ್ದು ಚಿಕ್ಕವಳಿದ್ದಾಗ ಗದ್ದೆನಾಟಿಯ ಸಮಯದಲ್ಲಿ. ಗದ್ದೆನಾಟಿ ಮಾಡುವಾಗ ಭತ್ತದ ಸಸಿಯನ್ನು ನೆಡುತ್ತಾ ಹಿಮ್ಮುಖವಾಗಿ ಹೋಗುತ್ತಿರುತ್ತಾರೆ. ಒಂದು ಗದ್ದೆಯನ್ನು ಪ್ರಾರಂಭಿಸಿದಾಗ ಹಿಂದಿರುಗಿ ನೋಡಿದರೆ ಅದು ಮುಗಿಯುವುದೇ ಇಲ್ಲ ಎನ್ನುವಷ್ಟು ದೂರವಾಗಿ ಕಾಣಿಸುತ್ತದೆ. ಆಗ ನಾಟಿ ಮಾಡುತ್ತಿರುವವರಿಗೆ Negative feelings ಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ ನಾಟಿಯ ಸಮಯದಲ್ಲಿ ಅಲ್ಲಿರುವ ಹಿರಿಯರು ಕಿರಿಯರಿಗೆ ಹಿಂದಿರುಗಿ ನೋಡಲು ಬಿಡುವುದಿಲ್ಲ. ಒಂದು ಸಲ ಯಾರೋ ಹಿಂದಿರುಗಿ ನೋಡಿ ಇದೇನು ಮುಗಿಯುವ ರೀತಿಯೇ ಕಾಣಿಸುತ್ತಿಲ್ಲವಲ್ಲ? ಎಂದಾಗ ಅಲ್ಲಿರುವ ಹಿರಿಯರು ಯಾರೋ ಹೀಗೆ ಹೇಳಿದ್ದರು, ಸುಮ್ಮನಿರು, ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು. ನಿಜ, ಕಣ್ಣಳತೆ ಯಾವತ್ತೂ ಬೆಚ್ಚಿಬೀಳಿಸುತ್ತದೆ. ಅಯ್ಯೋ ಇಷ್ಟೆಲ್ಲಾ ಕೆಲಸವನ್ನು ಮುಗಿಸುವುದು ಹೇಗಪ್ಪಾ? ಎನ್ನುವ ಭಾವನೆಯನ್ನು ಹುಟ್ಟಿಸುತ್ತದೆ. ಆದರೆ ಕೆಲಸವನ್ನು ಪ್ರಾರಂಬಿಸಿದರೆ ಅದು ತಾನಾಗಿಯೇ ಮುಗಿಯುತ್ತಾ ಬರುತ್ತದೆ. A journey of thousand miles begins with a single step! ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಬರೆಯಲಿಕ್ಕಿರುವ ಪುಟಗಳ ಸಂಖ್ಯೆಯನ್ನು ನೋಡಿ ಭಯಬಿದ್ದು ನನಗೇ ನಾನು ಹೇಳಿಕೊಳ್ಳುತ್ತಿದ್ದೆ- ಇಲ್ಲ.. ಇಲ್ಲ, ಬರೆಯುತ್ತಾ ಹೋದಂತೆ ಗೊತ್ತೇ ಆಗದಂತೆ ಮುಗಿದುಹೋಗುತ್ತದೆ; ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು ಎಂದು. ಇಂದೂ ಕೂಡ ಎಷ್ಟೊಂದು ಬಾರಿ ನನಗೇ ನಾನು ಈ ಮಾತನ್ನು ಹೇಳಿಕೊಳ್ಳುತ್ತೇನೆ; ಕೆಲಸ ಮಾಡುವ ಉತ್ಸಾಹ ಬರುತ್ತದೆ.