December 27, 2016

Exchange offer

ಮೊದಲೆಲ್ಲಾ electrical ಅಥವಾ electronic ವಸ್ತುಗಳನ್ನ ಕೊಂಡರೆ ಕನಿಷ್ಠ ಹತ್ತು ಹದಿನೈದು ವರ್ಷಗಳ ಕಾಲ ಬಾಳುತ್ತಿದ್ದವು. ಅಷ್ಟರ ನಂತರ ರಿಪೇರಿ ನಡೆಸುತ್ತಾ ಇನ್ನೂ ಕೆಲವು ವರ್ಷ ತಳ್ಳಬಹುದಿತ್ತು. ಈಗೀಗಂತೂ  ಯಾವ ವಸ್ತುವೂ ಮೂರು ನಾಲ್ಕು ವರ್ಷಗಳಿಗಿಂತ ಜಾಸ್ತಿ ಬಾಳುವುದೇ ಇಲ್ಲ! ರಿಪೇರಿ ಅನ್ನುವಂತ ಪರಿಕಲ್ಪನೆಯೂ ಹೋಗಿಯೇ ಬಿಟ್ಟಿದೆ! ನೋಡುತ್ತಿದ್ದಂತೆಯೇ ಕೆಲವೇ ವರ್ಷಗಳಲ್ಲಿ 'ರಿಪೇರಿ' ಎನ್ನುವುದು ಹೆಚ್ಚು ಕಡಿಮೆ ಸತ್ತೇ ಹೋಗುತ್ತಿದೆ! ಹಾಳಾದ ಕೂಡಲೇ ಬಿಸಾಕು, ಹೊಸದನ್ನು ಕೊಂಡುಕೋ ಎಂಬುದೇ ಬದುಕಾಗಿಬಿಟ್ಟಿದೆ.

ಫೋನಿನ ವಿಚಾರವನ್ನು ಬಿಡಿ, ಅದಂತೂ ದಿನೇ ದಿನೇ outdated ಆಗುತ್ತಲೇ ಇರುತ್ತದೆ. ಹೊಸದರ ಮೇಲೆ ದುಡ್ಡು ಸುರಿಯುತ್ತಲೇ ಇರಬೇಕು. ಉಳಿದ ವಸ್ತುಗಳ ಬಗ್ಗೆ ಒಮ್ಮೆ ವಿಚಾರ ಮಾಡಿ ನೋಡಿ.... ಮೊದಲೆಲ್ಲಾ ಮಿಕ್ಸಿ, ಟಿವಿ, ಫ್ರಿಡ್ಜ್ ಒಮ್ಮೆ ತಗೆದುಕೊಂದರೆ ಎಷ್ಟು ವರ್ಷ ಬಾಳುತ್ತಿದ್ದವು? ಕನಿಷ್ಠ ಹತ್ತು ವರ್ಷ? ಆದರೆ ಈಗೇಕೆ ಒಂದೆರಡೇ ವರ್ಷಕ್ಕೆ ರಿಪೇರಿಗೆ ಬರತೊಡಗುತ್ತವೆ, ಅಥವಾ ಅಥವಾ ಪೂರ್ತಿ ಹಾಳಾಗಿಯೇ ಹೋಗುತ್ತವೆ. ನಾನು ಚಿಕ್ಕವಳಿದ್ದಾಗ ತೆಗೆದುಕೊಂಡ ಮಿಕ್ಸಿಯನ್ನು ಅಮ್ಮ ಇಪ್ಪತ್ತೈದು ವರ್ಷಗಳ ಕಾಲ ಉಪಯೋಗಿಸಿದ್ದಳು. ನಂತರ ತೆಗೆದುಕೊಂಡ ಹೊಸ ಮಿಕ್ಸಿ ಕೆಲವೇ ತಿಂಗಳುಗಳಲ್ಲಿ ಕಿರಿಕಿರಿ ಶುರು ಹಚ್ಚಿಕೊಂಡಿತು. ಹಳೇ ಫ್ರಿಡ್ಜ್ ಇಪ್ಪತ್ತು ವರ್ಷ ಬಾಳಿದರೆ ಈಗಿನದು ಒಂದೇ ವರ್ಷಕ್ಕೆ "ಉಸ್ಸಪ್ಪಾ... ಇನ್ನು ಸಾಧ್ಯವಿಲ್ಲ" ಎನ್ನುತ್ತಿದೆ. ಯಾವುದೇ ಹೊಸ ಸ್ಟೀಲ್ ವಸ್ತುಗಳನ್ನು ತೆಗೆದುಕೊಂಡರೂ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ತುಕ್ಕು ಹಿಡಿವ ಲಕ್ಷಣಗಳು ಕಾಣತೊಡಗುತ್ತವೆ. ಹಲವಾರು ವರ್ಷಗಳ ಹಿಂದಿನ ಸ್ಟೀಲ್ ಪಾತ್ರೆಗಳು ಗಟ್ಟಿಮುಟ್ಟಾಗಿ ಚೆನ್ನಾಗಿವೆ.  ಏಕೆ ಹೀಗೆ? ದಿನೇ ದಿನೇ ತಾಂತ್ರಿಕತೆ ಮುಂದುವರಿಯುತ್ತಿರುವಾಗ ಇವೆಲ್ಲ ಬೇಗ ಹಾಳಾಗುತ್ತಿರುವುದಾದರೂ ಏಕೆ?

ಈಗೀಗ ಏನು ಬೇಕಾದರೂ exchange ಮಾಡಿಕೊಳ್ಳಬಹುದು. ಅದು ಹೇಗೆ? ಮೊದಲೆಲ್ಲಾ ಹೀಗಿರಲಿಲ್ಲವಲ್ಲ? ಆವಾಗ ಇಷ್ಟೊಂದು recycling option ಇರಲಿಲ್ಲ ನಿಜ, ಆದರೆ ಈಗ ನಾವು exchange ಗೆ ಹಾಕಿದ ಪ್ರತಿಯೊಂದು ವಸ್ತುಗಳೂ 100% recycle ಆಗುತ್ತಿವೆಯಾ? ಇಲ್ಲವಾದರೆ ಏನಾಗುತ್ತಿವೆ? ಈ ತರ exchange ಮಾಡಿಕೊಳ್ಳುವುದರಿಂದ ಕಂಪೆನಿಯವರಿಗೆ/ ಮಾರಾಟಗಾರರಿಗೆ ಆಗುತ್ತಿರುವ ಲಾಭವಾದರೂ ಏನು? ಮತ್ತಷ್ಟು ಬೇಗ ಜನರು ಹೊಸ ವಸ್ತುಗಳನ್ನು ಕೊಳ್ಳಲು ಬರುತ್ತಾರೆಂಬುದೇ? ಅಥವಾ ಹೇಗಿದ್ದರೂ ಜನರಿಗೆ ಈಗೀಗ ಹಳೆಯದನ್ನು discard ಮಾಡಿ ಹೊಸದನ್ನು ಕೊಳ್ಳುವ ರೂಢಿ ಜಾಸ್ತಿಯಾಗುತ್ತಿದೆ ಎಂಬುದನ್ನೇ ಆಧಾರವಾಗಿಟ್ಟುಕೊಂಡು ವಸ್ತುಗಳನ್ನೇ ಕಡಿಮೆ ಬಾಳಿಕೆ ಬರುವವಂತೆ ತಯಾರಿಸುತ್ತಾರಾ? ಈ ಎಲ್ಲಾ  ಪ್ರಶ್ನೆಗಳು ಎಷ್ಟೊಂದು ದಿನಗಳಿಂದ ತಲೆ ತಿನ್ನುತ್ತಿವೆ. ನನಗೇಕೋ ಒಂದು ಹುಚ್ಚು ಅನುಮಾನ- ನಾವು exchange ಗೆಂದು ಹಾಕಿದ ಎಲ್ಲ ವಸ್ತುಗಳಲ್ಲಿರುವ ಚೆನ್ನಾಗಿರುವ parts ಗಳನ್ನೆಲ್ಲ ತೆಗೆದು revamp ಮಾಡಿ ಹೊಸವಸ್ತುಗಳನ್ನಾಗಿಸಿ ಮಾರುತ್ತಿದ್ದಾರಾ?

ಈಗಿನ ಕಾಲದ ವಸ್ತುಗಳು ಬೇಗನೆ ಹಾಳಾಗುತ್ತಿರುವುದನ್ನು ನೋಡಿದಾಗ ಅಪ್ಪನಿಗಂತೂ ನಂಬಲೇ ಆಗುವುದಿಲ್ಲ- "ಅದು ಹೇಗೆ ಅಷ್ಟು ಬೇಗ ಹಾಳಾಗಿ ಹೋಯಿತು?" ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ನಮ್ಮ ಬಳಿ ಉತ್ತರವಿಲ್ಲ! ಹಳೆಯ ಕಾಲದ ಸುಮೀತ್ ಮಿಕ್ಸಿಯನ್ನು ಅಮ್ಮ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಉಪಯೋಗಿಸಿದ್ದಳು. ಅದು ತುಂಬಾ ಹಾಳಾಗಿ ಇನ್ನು ರಿಪೇರಿ ಸಾಧ್ಯವಿಲ್ಲ ಎನಿಸಿದಾಗ ಅದನ್ನು exchange ಮಾಡಿ ಹೊಸದನ್ನು ಕೊಂಡರು, ಮೊದಲು ಎಲ್ಲಿ ಕೊಂಡಿದ್ದರೋ ಅದೇ ಅಂಗಡಿಯಲ್ಲಿ. ಹೊಸ ಮಿಕ್ಸಿ ಕೆಲವೇ ತಿಂಗಳುಗಳಲ್ಲಿ ಕಿರಿಕಿರಿ ಶುರುಮಾಡಿದಾಗ ಅಮ್ಮ ಅದನ್ನು ರಿಪೇರಿಗೆ ಕೊಂಡೊಯ್ದಾಗ ಆ ಅಂಗಡಿಯವ ಹೇಳಿದನಂತೆ - "ನಿಮಗೆ ಮಿಕ್ಸಿಯನ್ನು ಉಪಯೋಗಿಸಲಿಕ್ಕೇ ಬರುವುದಿಲ್ಲ ಬಹುಶಃ, ಅದಕ್ಕೇ ಹಾಳಾಗಿದೆ"!


ನಾವು ಹಾಳಾದ ವಸ್ತುಗಳನ್ನು ಅಪ್ಪ ಕೆಲವು ಬಾರಿ ಮನೆಯಲ್ಲಿ ರಿಪೇರಿ ಮಾಡುವುದನ್ನೋ, ಇನ್ನು ಕೆಲವು ಬಾರಿ ಪೇಟೆಗೆ ಒಯ್ದು ರಿಪೇರಿ ಮಾಡಿಸಿ ತರುವುದನ್ನೋ ಕಂಡು ಬೆಳೆದವರು. ನಮ್ಮ ಮಕ್ಕಳಿಗೆ ಇದರ ಅನುಭವವೇ ಇರುವುದಿಲ್ಲ, ಅವರೇನಿದ್ದರೂ ಹಳೆಯದನ್ನು ಬಿಸಾಕುತ್ತ ಬದುಕುವವರು. ನಾವು ಹೇಗೋ ಈ ಹೊಸ ಜಾಯಮಾನಕ್ಕೆ ಕಷ್ಟವೆನಿಸಿದರೂ ಒಗ್ಗಿಕೊಳ್ಳುತ್ತಿದ್ದೇವೆ, ಆದರೆ ನಮ್ಮ ತಂದೆ ತಾಯಿಯರಿಗೆ ಈ ಹೊಸ ಪ್ರವೃತ್ತಿ ನಿಜವಾಗಲೂ ಕಷ್ಟವೆನಿಸುತ್ತಿದೆ. ಅವರಿಗೆ ಯಾವುದನ್ನೂ ಬಿಸಾಕಿ ಗೊತ್ತಿರಲಿಲ್ಲ- ವಸ್ತುಗಳಿರಲಿ ಅಥವಾ ಸಂಬಂಧಗಳಿರಲಿ. ತೇಪೆ ಹಚ್ಚುತ್ತಿದ್ದರು. ಈಗಿನ ತಲೆಮಾರಿನವರಿಗೆ ತೇಪೆಯ ಕೆಲಸವೇ ಬೇಡ- ವಸ್ತುಗಳಿಗೂ, ಸಂಬಂಧಗಳಿಗೂ.  

No comments: