March 10, 2017

ಮುಂಜಾವಿನ ಬಸ್ ಪ್ರಯಾಣವೂ... ದಿನಪತ್ರಿಕೆ ಓದುವವರೂ...

ಈ ಕೆಳಗಿನ ಫೋಟೋ ನೋಡಿದಾಗ ಯಾರಿಗಾದರೂ ಹಳೆಯ ನೆನಪಾಗುತ್ತಿದೆಯಾಇದು ನಾರ್ವೆ ದೇಶದ ರಾಜಧಾನಿ ಓಸ್ಲೋ ದಲ್ಲಿ VG ಎಂಬ ಪತ್ರಿಕೆಯ ಕಚೇರಿಯ ಎದುರು ತೆಗೆದ ಫೋಟೋ. ಅದು ಅಲ್ಲಿಯ ಅತ್ಯಂತ ಜನಪ್ರಿಯ Tabloid ಪತ್ರಿಕೆಯಂತೆ.

ನನ್ನ ಹಳೆಯ ನೆನಪುಗಳನ್ನು ಹೇಳುತ್ತೇನೆ ಕೇಳಿ. ಸುಮಾರು 2000 ನೇ ಇಸವಿಯ ಸಮಯ. ನಾನು ಧಾರವಾಡದಲ್ಲಿ MA ಓದುತ್ತಿದ್ದೆ. ಆಗ ತಾನೇ ವಿಜಯ ಕರ್ನಾಟಕ ದಿನಪತ್ರಿಕೆ ಶುರುವಾಗಿತ್ತು. ಸ್ವಲ್ಪ ಸಮಯದಲ್ಲೇ ಬಹಳ ಜನಪ್ರಿಯತೆಯನ್ನೂ ಗಳಿಸಿತ್ತು. ನಾನು ಪ್ರತಿ ಹದಿನೈದು ದಿನಗಳಿಗೊಮ್ಮೆ ಹಾಸ್ಟೆಲ್ ನಿಂದ ಊರಿಗೆ ಬರುತ್ತಿದ್ದೆ. ಶುಕ್ರವಾರ ಕ್ಲಾಸ್ ಮುಗಿಸಿಕೊಂಡು ಸಂಜೆ ಊರಿಗೆ ಬಂದರೆ ಸೋಮವಾರ ಬೆಳಿಗ್ಗೆ ಮುಂಜಾವಿಗೇ ಹೊರಟು ಕ್ಲಾಸ್ ಶುರುವಾಗುವುದರೊಳಗೆ ಧಾರವಾಡ ಸೇರಿಕೊಳ್ಳುತ್ತಿದ್ದೆ.

ನಮ್ಮ ಬಸ್ ಶಿರಸಿಯಿಂದ ಹೊರಟು ಮುಂಡಗೋಡು ತಲುಪುವಷ್ಟರಲ್ಲಿ ನಿದ್ದೆ ಮಾಡಿದ್ದವರೆಲ್ಲ ಎಚ್ಚರಾಗಿ ದಿನಪತ್ರಿಕೆಗಾಗಿ ಚಡಪಡಿಸುತ್ತಿದ್ದರು. ಮುಂಡಗೋಡಿನಲ್ಲಿ ಬಸ್ ನಿಂತಾಗ ಪೇಪರ್ ಮಾರುವ ಮಕ್ಕಳು ಬಸ್ ಹತ್ತಿ "ವಿಜಯ ಕರ್ನಾಟಕ ಪೇಪರ್ ತಗೊಳ್ಳಿ, ತಾಜಾ ಸುದ್ದಿ, ಬಿಸಿ ಬಿಸಿ ಸುದ್ದಿ" ಎನ್ನುತ್ತಾ ಮಾರಾಟ ಮಾಡುತ್ತಿದ್ದರು. ಆಗ ಪೇಪರ್ ಗೆ ಬಹುಶಃ ಒಂದೋ ಒಂದೂವರೆಯೋ ರೂಪಾಯಿ ಇದ್ದಿರಬೇಕು, ಸರಿಯಾಗಿ ನೆನಪಿಲ್ಲ. ಯಾರೋ ಒಬ್ಬಿಬ್ಬ ಪುಣ್ಯಾತ್ಮರು ಪೇಪರ್ ಖರೀದಿಸುತ್ತಿದ್ದರು. ಬಸ್ ನಲ್ಲಿದ್ದ ಉಳಿದ ಪ್ರಯಾಣಿಕರೆಲ್ಲರೂ "ಆಹಾ! ಬಿಟ್ಟಿ ಪೇಪರ್ ಓದಲು ಸಿಕ್ಕಿತು!" ಎಂದು ನೆಮ್ಮದಿಯ ಉಸಿರು ಬಿಡುತ್ತಿದ್ದರು.

ಖರೀದಿಸಿದ ಮನುಷ್ಯ ಪೇಪರ್ ಬಿಡಿಸಿ ಓದಲು ಶುರು ಮಾಡುವುದೊಂದೇ ತಡ, ಅವನ ಎಡಕ್ಕೆ, ಬಲಕ್ಕೆ ಇರುವವರು ಇಣುಕಲು ಶುರು! ಇನ್ನು ಹಿಂದುಗಡೆ ಕುಳಿತವರು "ಸರ್, ನೀವು ಹೇಗೂ ಎದುರಿನ ಪುಟ ಓದುತ್ತಿದ್ದೀರಿ, ಒಳಗಡೆಯ ಪುಟ ನನಗೆ ಕೊಡಿ" ಎಂದರೆ, ಮುಂದುಗಡೆ ಕುಳಿತವರು "ಸರ್, ಕ್ರೀಡಾ ಪುರವಣಿ (ಅಥವಾ ಇನ್ನಾವುದೋ ಪುರವಣಿ) ನನಗೆ ಕೊಡಿ" ಎನ್ನುತ್ತಿದ್ದರು. ಕೆಲವೇ ನಿಮಿಷಗಳಲ್ಲಿ ಎದುರಿನ ಪುಟ ಮಾತ್ರ ಖರೀದಿಸಿದವರ ಕೈಯಲ್ಲಿ. ಒಳಗಡೆಯ ಪುಟಗಳೆಲ್ಲಾ ಪುಡಿ ಪುಡಿಯಾಗಿ ಬಸ್ ನ ತುಂಬಾ ಹಂಚಿ ಹೋಗಿರುತ್ತಿದ್ದವು! ಇನ್ನು ಕೆಲವರಿಗೆ ಒಳಗಡೆಯ ಪುಟಗಳಲ್ಲಿ ಆಸಕ್ತಿ ಕಡಿಮೆ ಅವರು headlines ಗಳಿಗಾಗಿಯೇ ಕಾಯುತ್ತಿರುವವರು. ಖರೀದಿಸಿದವರು ಅದನ್ನು ಓದಿ ಮುಗಿಸಿದ ತಕ್ಷಣ "ಸರ್, ನನಗೆ ಕೊಡುತ್ತೀರಾ?" ಎಂದು ಹಲ್ಲು ಗಿಂಜುತ್ತಿದ್ದರು!  ಪೇಪರ್ ನ ಮಾಲೀಕರು ಹೇಗೂ ತನ್ನದು ಮೊದಲಿನ ಪುಟ ಮುಗಿಯಿತಲ್ಲ, ಇನ್ನು ಒಳಪುಟಗಳನ್ನು ಓದೋಣ, ಇಲ್ಲವೇ ಪುರವಣಿಯನ್ನಾದರೂ ಓದೋಣ ಎಂದುಕೊಂಡರೆ, ಆ ಪುಟಗಳೆಲ್ಲ ಹಾಗೆಯೇ ಮುಂದೆ, ಹಿಂದೆ, ಇನ್ನೊಬ್ಬರ, ಮತ್ತೊಬ್ಬರ, ಕೈ ಸೇರುತ್ತಾ ಬಸ್ ನ ತುದಿ ಮುಟ್ಟಿರುತ್ತಿದ್ದವು!

ಎಲ್ಲೂ ಒಬ್ಬಿಬ್ಬರು ದುಡ್ಡುಕೊಟ್ಟು ಖರೀದಿಸಿದ ಪೇಪರ್ ಅನ್ನು ಬಸ್ ನಲ್ಲಿದ್ದವರೆಲ್ಲಾ ಓದಿರುತ್ತಿದ್ದರು. ನಾನು ನೋಡಿದ್ದೇನೆ, ಕೆಲವೊಮ್ಮೆ ಖರೀದಿಸಿದ ವ್ಯಕ್ತಿ ಬೇಸತ್ತು ತನ್ನ ಪೇಪರ್ ಅನ್ನು ಬಸ್ ನಲ್ಲಿಯೇ ಬಿಟ್ಟು ಹುಬ್ಬಳ್ಳಿಯಲ್ಲಿ ಇಳಿದು ಹೋಗಿದ್ದೂ ಇದೆ. ಆದರೆ ಪೇಪರ್ ಮಾತ್ರ ಧಾರಾವಾಡದವರೆಗೂ ಕಯ್ಯಿಂದ ಕೈ ದಾಟುತ್ತಲೇ ಇರುತ್ತಿತ್ತು. ಮುಂದೂ ದಾಟುತ್ತಿರಬಹುದು, ನಾನು ಧಾರವಾಡದಲ್ಲಿ ಇಳಿಯುತ್ತಿದ್ದೆ.

ಕೆಲವು ದಿನಗಳ ನಂತರ ಬಸ್ ಗಳ ಮೇಲೆ ಜಾಹೀರಾತು ಬರತೊಡಗಿತು- "ವಿಜಯ ಕರ್ನಾಟಕ ಕರ್ನಾಟಕದ ಅತಿ ಹೆಚ್ಚು ಓದುಗರನ್ನು ಹೊಂದಿದ ದಿನಪತ್ರಿಕೆ, *** ಲಕ್ಷ (ಎಷ್ಟೋ ಲಕ್ಷ, ಈಗ ನೆನಪಾಗುತ್ತಿಲ್ಲ) ಓದುಗರನ್ನು ಹೊಂದಿದೆ" ಎಂದು. ಅದನ್ನು ನೋಡಿ ನನ್ನ ಸ್ನೇಹಿತನೊಬ್ಬ ತಮಾಷೆ ಮಾಡಿದ್ದ, "ಬಹುಶಃ ಬಸ್ ನಲ್ಲಿ ಬಿಟ್ಟಿ ಓದುವವರು, ಬಸ್ ಕಾಯುತ್ತಾ ನಿಂತಾಗ ನಾವು ಓದುತ್ತಿರುವ ಪೇಪರ್ ನಲ್ಲಿ ಇಣುಕು ಹಾಕಿ ಓದುವವರು ಎಲ್ಲರನ್ನೂ ಸೇರಿಸಿ ಲೆಕ್ಕ ಹಾಕಿದ್ದಾರೋ ಏನೋ" ಎಂದು.


ಈಗ ಆ ರೀತಿ ಮುಂಜಾನೆಯ ಬಸ್ ನಲ್ಲಿ ಹೋಗದೇ ದಶಕಗಳೇ ಕಳೆದು ಹೋಯಿತು. ನನಗನಿಸುವಂತೆ ಈಗ ಅಂತ ದೃಶ್ಯ ಕಾಣಸಿಗಲಿಕ್ಕಿಲ್ಲ. ಎಲ್ಲರೂ ತಮ್ಮ ತಮ್ಮ ಫೋನ್ ಗಳಲ್ಲೇ ಮಗ್ನರಾಗಿರಬಹುದು. ಆದರೂ, ಆ ಕಾಲದ ನೆನಪೇ ಚೆನ್ನ. ಫೋಟೋದಲ್ಲಿನ ಮೂರ್ತಿಯನ್ನು ನೋಡಿದಾಗ ಒಮ್ಮೆ ಭೂತಕಾಲಕ್ಕೆ ಹೋಗಿ ಬಂದೆ :-)

5 comments:

Harisha said...

ಸೀಮಾ ಅವರೆ, ಓಸ್ಲೋ ಫೋಟೋ ಮತ್ತು ನಿಮ್ಮ ಪುಟ್ಟ ಲೇಖನ ಎರಡೂ ಚೆನ್ನಾಗಿವೆ.

ವಿ.ರಾ.ಹೆ. said...

ಇಲ್ಲ ಇಲ್ಲ. ಈ ದೃಶ್ಯ ಯಾವತ್ತಿಗೂ ಕೊನೆಯಾಗಲು ಸಾಧ್ಯವಿಲ್ಲ. ಇವತ್ತಿಗೂ ಬಸ್, ರೈಲುಗಳಲ್ಲಿ ಕಾಣಬಹುದು :)

Seema S. Hegde said...

@ ಹರೀಶ ಅವರೇ ಧನ್ಯವಾದಗಳು ಕಾಮೆಂಟ್ ಬರೆದಿದ್ದಕ್ಕೆ, ಇಷ್ಟಪಟ್ಟಿದ್ದಕ್ಕೆ :)

@ವಿಕಾಸ, ಒಹ್ ಹೌದಾ! ಒಳ್ಳೆಯದೇ ಆಯಿತು. ಮತ್ತೆ ಯಾವಾಗಲಾದರೂ ಮುಂಜಾವಿನ ಪ್ರಯಾಣದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಬಹುದು :)

Unknown said...

ಒಂದೊಳ್ಳೆ ನೆನಪು.....we are lucky.

Seema S. Hegde said...

Thank you!