Showing posts with label Unforgettable. Show all posts
Showing posts with label Unforgettable. Show all posts

June 2, 2016

ದ್ವಂದ್ವದಲ್ಲಿರುವ ಜನರೇಶನ್ ನಮ್ಮದು!

ನಾನೀಗ ಮೂವತ್ತರ ದಶಕದ ಕೊನೆಯಲ್ಲಿ... ಇನ್ನೇನು ಒಂದೆರಡು ವರ್ಷಗಳಲ್ಲಿ ಚಾಳೀಸೂ ಮುಖವೆರೀತು! ಆಧುನಿಕ ತಂತ್ರಜ್ಞಾನದಲ್ಲಿ ಇತ್ತೀಚಗೆ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ ಕೆಲವೊಮ್ಮೆ ಆಶ್ಚರ್ಯವೂ, ಖುಷಿಯೂ ಆದರೆ, ಇನ್ನು ಕೆಲವೊಮ್ಮೆ ತಲೆ ತಿರುಗಿದಂತಾ ಅನುಭವ... ಎಷ್ಟೆಲ್ಲಾ ಮುಂದುವರಿದಿದ್ದೇವೆ ನಾವು! ಜಗತ್ತೆಲ್ಲಾ ಬೆರಳ ತುದಿಯಲ್ಲಿ!

ಒಮ್ಮೆ ಹಿಂದಿರುಗಿ ನೋಡಿದೆ... ಅಪ್ಪ, ಅಮ್ಮನ ಕಾಲದಲ್ಲಿ ರೇಡಿಯೋಗೂ licence ಇತ್ತು! ಅಪ್ಪನ ಯಾವುದೋ ಹಳೆಯ file ನಲ್ಲಿ ನಾನು ಅದನ್ನು ಕಂಡಿದ್ದೆ. ನೀಲಿ ಬಣ್ಣದ ಸಣ್ಣ ಪುಸ್ತಕ (Photo ನೋಡಿ). ನನ್ನ ಎರಡು ವರ್ಷದ ಮಗ smart phone ಹೇಗೆ ಉಪಯೋಗಿಸುವುದು ಎಂದು ಆಗಲೇ ಕಲಿಯತೊಡಗಿದ್ದಾನೆ! ನನ್ನ ಅರವತ್ತಾರು ವರ್ಷದ ಅಪ್ಪ ಇವತ್ತಿಗೂ mobile phone ನಲ್ಲಿ ಪ್ರತೀ ಸಲವೂ number dial ಮಾಡಿಯೇ ಮಾತಾಡುತ್ತಾರೆ. Generation gap ನನ್ನ ಕಣ್ಣೆದುರಿಗೆ!

ನಮ್ಮ ಬಾಲ್ಯದ ಕಾಲದಲ್ಲಿ landline phone ಗಳು ಆಗ ತಾನೇ ಕಾಲು ಹಾಕುತ್ತಿದವು. ಊರಲ್ಲೇ ಇನ್ನೊಬ್ಬರ ಮನೆಗೆ phone ಮಾಡಬೇಕಿದ್ದರೆ ಬರಿದೇ ಎರಡು digit dial ಮಾಡಿದರೆ ಸಿಗುತ್ತಿದ್ದರು. ಆದರೆ ಈಗ ಅವರ ಮನೆಗೆ ಮಾಡಬೇಕಾದರೂ ಆರು digit dial ಮಾಡಬೇಕು! Trunk call ಮಾಡುವ ಮಜವೇ ಬೇರೆ ಇತ್ತು! ನಮ್ಮ ಮನೆಯಿಂದ ಶಿರಸಿ exchange ಗೆ phone ಮಾಡಿ “ನಾನು ಎಕ್ಕಂಬಿ exchange ** ನಿಂದ ಮಾತಾಡುತ್ತಿದ್ದೇನೆ, ನನಗೆ  ಜಾನ್ಮನೆ exchange ನ ** ಕೊಡಿ” ಎನ್ನಬೇಕಾಗಿತ್ತು, ನಂತರ ಅವರ call ಗಾಗಿ ಕಾಯುತ್ತಿರಬೇಕಗಿತ್ತು. ಅವರು connect ಮಾಡಿ ನಮಗೆ ತಿರುಗಿ call ಮಾಡುತ್ತಿದರು. ಮೂರು ನಿಮಿಷಗಳ ಕಾಲ ಸಮಯವಿರುತ್ತಿತ್ತು. ಅಷ್ಟರ ನಂತರ ಅವರು ನಡುವೆ ಬಾಯಿ ಹಾಕಿ "ಮೂರು ನಿಮಿಷ ಆಯ್ತ್ರೀ" ಎನ್ನುತ್ತಿದ್ದರು! ನಮ್ಮ ಮಾತು ಮುಗಿದಿರದಿದ್ದರೆ "ಮತ್ತೆ ಮೂರು ನಿಮಿಷ ಕೊಡ್ರೀ" ಎನ್ನುವುದು. ಹೀಗೆಯೇ ನಡೆಯುತ್ತಿರುವಾಗ ಒಮ್ಮೆ ನಮ್ಮ ಎಕ್ಕಂಬಿ exchange ನ lineman ಅಪ್ಪನ ಬಳಿ "ನಿಮ್ಮ ಜಮೀನು ಮಾರುವ ವಿಚಾರ ಏನಾಯಿತು?" ಎಂದು ಕೇಳಿದನಂತೆ. ಅಪ್ಪನಿಗೆ ಆಶ್ಚರ್ಯ! ಆಮೇಲೆ ಗೊತ್ತಾಯಿತು- ಅಪ್ಪ phone ನಲ್ಲಿ ಮಾತನಾಡುತ್ತಿರುವಾಗ ನಡುವೆ ಅವನೂ ಕೇಳಿಸಿಕೊಂಡಿದ್ದ!

ಅಪ್ಪ, ಅಮ್ಮನ ಕಾಲಕ್ಕೆ ರೇಡಿಯೋ ಬಂತು, ನಮ್ಮ ಬಾಲ್ಯದ ಕಾಲಕ್ಕೆ black and white TV ಬಂದಿತ್ತು. ಮಜವೆಂದರೆ ಆಗಿನ ಕಾಲದ ಕೆಲವು TV ಗಳಿಗಂತೂ ಬಾಗಿಲು ಹಾಕಿ child lock ಮಾಡಲೂ ಸಾಧ್ಯವಿತ್ತು; ಈಗಿನ ಕಾಲದಲ್ಲಿ ದೊಡ್ದವರಿಗಿಂತ ಮಕ್ಕಳೇ ಚೆನ್ನಾಗಿ TV remote control operate ಮಾಡುತ್ತಾರೆ. ಎಂತಹ ಬದಲಾವಣೆ ಕೆಲವೇ ದಶಕಗಳಲ್ಲಿ! ನಾವು ಚಿಕ್ಕವರಿದ್ದಾಗ ನಮ್ಮ ಪಕ್ಕದ ಊರಿನ ಒಬ್ಬರ ಮನೆಯಲ್ಲಿ TV ಇತ್ತು. ಭಾನುವಾರ ಬೆಳಿಗ್ಗೆ ‘ರಾಮಾಯಣ’ ನೋಡಲು ಅವರ ಮನೆಯಲ್ಲಿ ಜಾತ್ರೆಯೇ ನೆರೆದಿರುತ್ತಿತ್ತು! ಈಗಿನ ಕಾಲದಂತೆ ನಾಲ್ಕು ಜನ ಮನೆಗೆ ಬಂದರೆಂದರೆ ಏನೋ inconvenience ಅನ್ನುವ ತರಹ ಇರಲಿಲ್ಲ ಆಗಿನ ಕಾಲ. ಬಂದವರನ್ನೆಲ್ಲಾ ಸ್ವಾಗತಿಸಿ ಚಾಪೆ ಹಾಸಿ ಕೊಡುತ್ತಿದ್ದರು. ನಾವೆಲ್ಲಾ ಮಕ್ಕಳು ಸೇರಿ ಎಷ್ಟೋ ದೂರ ನಡೆದುಕೊಂಡು ಅವರ ಮನೆಗೆ ಹೋಗುತ್ತಿದ್ದೆವು! ಕೆಲವು ವರ್ಷಗಳ ನಂತರ ನಮ್ಮನೆಗೆ black and white  portable TV ಬಂತು. ಧಾರವಾಡ relay station ನಿಂದ signal ತೆಗೆದುಕೊಳ್ಳಲು ಮನೆಯ ಮೇಲೆ antenna. ಯಾವಾಗ ನೋಡಿದರೂ TV ಮೇಲೆ ಸಬ್ಬಕ್ಕಿ ಪಾಯಸದ ತರಹ ಗುಳ್ಳೆ ಗುಳ್ಳೆ. ನನ್ನ ತಮ್ಮ antenna ತಿರುಗಿಸುವವ, ನಾನು ಮನೆಯೊಳಗಿಂದ "ಸಾಕು ಸಾಕು ಸಾಕು... ನಿಲ್ಲಿಸು ನಿಲ್ಲಿಸು ... ಅಯ್ಯೋ ಮತ್ತೆ ಹೋಯ್ತು ... " ಎಂದು ಕಿರಿಚಿಕೊಳ್ಳುವವಳು. ಇದೆಲ್ಲ ಸಂಭ್ರಮದೊಳಗೆ programme ಬಹುಪಾಲು ಮುಗಿದೇ ಹೋಗಿರುತ್ತಿತ್ತು! ದಿನದಲ್ಲಿ TV programmes ಕೆಲವೇ ಗಂಟೆಗಳ ಕಾಲ, ಉಳಿದ ಸಮಯದಲ್ಲಿ TV ಹಚ್ಚಿದರೆ screen ಮೇಲೆ ಪಟ್ಟೆಸೀರೆ ಕಾಣಿಸುತ್ತಿತ್ತು ಜೊತೆಗೆ ಕುನ್ಯ್ಯ್ಯ್ಯ್ ಎನ್ನುವ ಸದ್ದು ಬೇರೆ. Radio ದಲ್ಲಿ ಅಮೀನ್ ಸಯಾನಿಯವರ 'ಸಿಬಾಕಾ ಗೀತ್ ಮಾಲಾ' ಕೇಳಲು ಒಂದು ವಾರ ಕಾಯಬೇಕಾಗಿತ್ತು; ಹಾಗೆಯೇ TV ಯಲ್ಲಿ ಬುಧವಾರದ 'ಚಿತ್ರಹಾರ್' ಮತ್ತು ಭಾನುವಾರದ 'ರಂಗೋಲಿ'ಗೂ ಕೂಡ. ನಂತರ ಕೆಲವು ವರ್ಷಗಳಲ್ಲಿ ಕನ್ನಡದ 'ಚಂದನ ವಾಹಿನಿ' ಪ್ರಾರಂಭ. ಕೆಲ ಗಂಟೆಗಳ ಕಾಲ ಕನ್ನಡವನ್ನೂ ನೋಡಲು ಸಿಗುತ್ತಿತ್ತು ನಂತರ "Over to Delhi" ಎಂಬ message. ಚಂದನ ವಾಹಿನಿಯ ಪ್ರಾರಂಭದ ಮೊದಲು ಭಾನುವಾರ ದೆಹಲಿಯವರು ಕಿವುಡ ಮೂಕರ ವಾರ್ತೆಯ ನಂತರ ಹಾಕುವ ಪ್ರಾದೇಶಿಕ ಭಾಷಾ ಚಲನಚಿತ್ರದ ಕನ್ನಡದ ಪಾಳಿಗೆ ನಾಲ್ಕು ತಿಂಗಳುಗಳೇ ಕಾಯಬೇಕಾಗಿತ್ತು! ಇನ್ನೂ ಮಜದ ಸಂಗತಿಯೆಂದರೆ ಯಾವುದಾದರೂ ಹಳೆಯ ಹಾಡು ಬಂತೆಂದರೆ 'ಪ್ರಸಾರ ಕಪ್ಪು ಬಿಳುಪು' ಎಂಬ ಕೆಳಗಡೆ flash ಆಗುತ್ತಲೇ ಇರುತ್ತಿತ್ತು, ಏಕೆಂದರೆ ಮನೆಯಲ್ಲಿ colour TV ಇದ್ದವರು ಏನೋ ಆಯಿತು ಎಂದು ಗಾಬರಿ ಬಿದ್ದು ತಮ್ಮ TV ಯ  colour adjustment ಗೆ ತೊಡಗಬಾರದೆಂದು! ಏನೇ ಆಗಲಿ ಹಿಂದಿರುಗಿ ನೋಡಿದರೆ ಅಂದಿನ ದಿನಗಳ ನೆನಪೇ ಅಪ್ಯಾಯಮಾನ! ಈಗಿನ generation ನವರಿಗೆ ಇದ್ಯಾವುದೂ ಗೊತ್ತೇ ಇಲ್ಲ! ನಮ್ಮ generation transition ನಲ್ಲಿ ಬರುವ generation. ಏನೂ ಇಲ್ಲದ ಕಾಲದಿಂದ ಇಷ್ಟೆಲ್ಲಾ ಬೆಳವಣಿಗೆಗಳನ್ನು ಕಂಡಿದೆ.

ನನಗಂತೂ ಯಾವತ್ತೂ ಏನೋ ಒಂದು ತರದ ದ್ವಂದ್ವ. ಇಷ್ಟೆಲ್ಲಾ technological advancement ಆದ ಮೇಲೆ ಹಳೆಯದನ್ನು miss ಮಾಡಿಕೊಂಡಂತ ಭಾವನೆ. ಪತ್ರ ಬರವಣಿಗೆ ಹೋಗಿ email ಬಂತು, ಈಗಂತೂ ಎಲ್ಲದಕ್ಕೂ WhatsApp. ತುಂಬಾ convenient, ನಿಜ. ಆದರೂ ಏನೋ ಕಳೆದುಕೊಂಡಂತೆ ಬಣ ಬಣ. ಉದಾಹರಣೆಗೆ, ಅಂಗಡಿಗೆ ಹೋಗುವಾಗ ರಾಜೀವ ನನಗೆ "ಅದ್ಯಾಕೆ ಸಾಮಾನು ಚೀಟಿ ಬರೆದುಕೊಳ್ಳುತ್ತೀಯಾ, smart phone ನಲ್ಲಿ ಮಾಡಿಕೊ" ಎನ್ನುತ್ತಾನೆ. Smart phone ನಲ್ಲಿ ಏನೆಲ್ಲಾ options ಇದ್ದರೂ ನನಗೆ ಚೀಟಿ ಬರೆದುಕೊಳ್ಳುವುದೇ ಇಷ್ಟ. ಒಮ್ಮೊಮ್ಮೆ ವಿಚಾರ ಮಾಡಿದರೆ ರಾಜೀವ ಹೇಳುವುದೂ ನಿಜ ಎನಿಸುತ್ತದೆ, ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಆದರೂ ಹಳೆಯ ಪದ್ಧತಿಗಳು ಯಾಕೋ ಮನಸ್ಸಿಗೆ ಹತ್ತಿರ ಎನಿಸುತ್ತವೆ. ಈಗಿನ generation ನವರು technology ಗೆ ಹೊಂದಿಕೊಂಡಿದ್ದಾರೆ ಏಕೆಂದರೆ ಅವರಿಗೆ ಹಳೆಯ ವಿಧಾನಗಳಗಳ ಅನುಭವವಿಲ್ಲ. ಹಳೆಯ ಕಾಲದವರು ಇನ್ನೂ ಹಳೆಯ ವಿಧಾನಗಳನ್ನೇ ನೆಚ್ಚಿಕೊಂಡಿದ್ದಾರೆ ಏಕೆಂದರೆ ಅವರಿಗೆ ಹೊಸದರ ಬಗ್ಗೆ ಅಸಡ್ಡೆ. ನನಗೋ ಹೊಸದರ ಮೇಲೆ ಪ್ರೀತಿ, ಆದರೆ ಹಳೆಯದನ್ನು ಬಿಡಲು ಮನಸ್ಸಿಲ್ಲ. ಹಾಗಾಗಿ ನನ್ನಂತ ಕೆಲವು ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ಇರುವವರ ಬಗ್ಗೆ ವಿಚಾರ ಮಾಡುತ್ತಿದ್ದೇನೆ!

August 27, 2008

ಅಂಟು

ಈಗಂತೂ ಎಷ್ಟೆಲ್ಲಾ ಬಗೆಯ ಅಂಟುಗಳು ಮಾರುಕಟ್ಟೆಗೆ ಬಂದಿವೆ. ಮೊನ್ನೆ ಅಂಟು ತೆಗೆದುಕೊಳ್ಳಲೆಂದು ಇಲ್ಲಿನ ಒಂದು ಮಾರುಕಟ್ಟೆಯಲ್ಲಿ ಹೋಗಿ ನೋಡಿದೆ ಒಮ್ಮೆ ಬೆರಗಾಗಿ ನಿಂತೆ! ಒಂದು ನಿಮಿಷದಲ್ಲಿ ಎರಡು ವಸ್ತುಗಳನ್ನು ಅಂಟಿಸುವ ಫೆವಿಕಾಲ್ ನಂತಹ ಅಂಟಿನಿಂದ ಹಿಡಿದು ಒಂದೇ ಸೆಕೆಂಡಿನಲ್ಲಿ ಅಂಟಿಸುವ ಫೆವಿಕ್ವಿಕ್ ತರದ ಅಂಟಿನ ನಡುವೆ ಅದೆಷ್ಟು ಅಂಟುಗಳು ಬಂದು ನಮ್ಮನ್ನೂ ನಡುವೆ ಸಿಕ್ಕಿಸಿಕೊಂಡು ಆಯ್ಕೆಯನ್ನು ಕಷ್ಟ ಮಾಡಿಬಿಟ್ಟಿವೆ ಎನಿಸಿತು. ನಂತರ ಯಾವುದೋ ಒಂದು ಅಂಟನ್ನು ತೆಗೆದುಕೊಂಡು ಮನೆಯತ್ತ ನಡೆಯತೊಡಗಿದರೆ ದಾರಿಯಲ್ಲಿ ಅಂಟಿನ ಆಲೋಚನೆ ಮಾತ್ರ ತಲೆಗೆ ಅಂಟಿಕೊಂಡೇ ಇತ್ತು.

ನಾನು ಚಿಕ್ಕವಳಿದ್ದಾಗ ಗೊತ್ತಿದ್ದುದು ಒಂದೇ ಅಂಟು. ಬೇಸಿಗೆಯಲ್ಲಿ ಅಪ್ಪ ಗೇರು ಮರಕ್ಕೆ ಕತ್ತಿಯಿಂದ ಕಚ್ಚು ಹಾಕಿ ಗಾಯ ಮಾಡಿ, ಹಲವಾರು ದಿನಗಳವರೆಗೆ ಕಾಯ್ದು, ಆ ಗಾಯದಿಂದ ಸೋರಿದ ಗಟ್ಟಿಯಾದ ಅಂಟನ್ನು ತೆಗೆದು ಬಾಟಲಿಯಲ್ಲಿ ನೀರು ಹಾಕಿ ಆ ನೀರಿನಲ್ಲಿ ಅಂಟನ್ನು ಎರಡು ದಿನ ಮುಳುಗಿಸಿಟ್ಟು ನಂತರ ಅದನ್ನು ಕದಡಿ ಮಾಡಿದ, ಬಾಟಲಿಯ ಮುಚ್ಚಳವನ್ನು ತೆಗೆದರೆ ಕೆಟ್ಟ ವಾಸನೆ ಬೀರುತ್ತಿದ್ದ ಗೇರು ಮರದ ಅಂಟು. ತೆಂಗಿನ ಹಿಡಿಯ ಕಡ್ಡಿಗೆ ಹತ್ತಿಯನ್ನು ಸುತ್ತಿ ಮಾಡಿದ ಜುಂಜು ಅದನ್ನು ಹಚ್ಚುವ ಸಾಧನ. ನನಗೆ ಮತ್ತು ರಘುನಿಗೆ ಕಿತ್ತುಹೋದ ಪುಸ್ತಕದ ಹಾಳೆಗಳನ್ನು ಅಂಟಿಸಲು, ಗಾಳಿಪಟ ಮಾಡಲು ಅಪ್ಪ ಆ ಅಂಟನ್ನು ರೇಶನ್ ತರಹ ಕೊಡುತ್ತಿದ್ದರು - ಎಂದೋ ಒಡೆದು ಹೋದ ಗಾಜಿನ ಬಾಟಲಿಯ ಪ್ಲಾಸ್ಟಿಕ್ ಮುಚ್ಚಳದಲ್ಲಿ! ಅದು ಬೇಸಿಗೆಯಲ್ಲಿ ಕಾಗದವನ್ನು ಸುಮಾರು ಒಂದು ಒಪ್ಪತ್ತಿನಲ್ಲಿ ಅಂಟಿಸಿದರೆ, ಮಳೆಗಾಲದಲ್ಲಿ ಮಾತ್ರ ವಾರಗಟ್ಟಲೆ ತೆಗೆದುಕೊಂಡು ಅಂಟು ಹಚ್ಚಿದ ಜಾಗದಲ್ಲಿ (ಸಾಮಾನ್ಯವಾಗಿ ಪುಸ್ತಕದ ಕಿತ್ತು ಹೋದ ಹಾಳೆಗಳ ನಡುವಿನಲ್ಲಿ) ಬೂಸ್ಟು ಬೆಳೆಯುವಂತೆ ಮಾಡುತ್ತಿತ್ತು.


ನಂತರ ಬಂತು camel ನವರ ಅಂಟು ಕೆಂಪು ಮುಚ್ಚಳದ ಟ್ಯೂಬಿನಲ್ಲಿ. ಅದು ಆಗಿನ ಕಾಲದ ಅದ್ಭುತ ಅಂಟು! ತುಟ್ಟಿ ಬೇರೆ. ಅಪ್ಪ ಅದನ್ನು ನಮಗೆ ಮುಟ್ಟಲೂ ಕೂಡ ಕೊಡುತ್ತಿರಲಿಲ್ಲ. ಪುಸ್ತಕದ ಹಾಳೆಗಳು ಕಿತ್ತು ಹೋಗಿದ್ದರೆ ತಾವೇ ಹಚ್ಚಿಕೊಡುತ್ತಿದ್ದರು. ಗೇರು ಮರಕ್ಕೆ ಕಚ್ಚು ಹಾಕುವುದನ್ನು ಬಿಟ್ಟು ಬಿಟ್ಟಿದ್ದರು. ಗೇರು ಮರಕ್ಕೆ ಗಾಯ ಮಾಡುವುದು ಅಪ್ಪನಿಗೂ ಮನಸ್ಸಿರಲಿಲ್ಲವೆಂದು ಕಾಣಿಸುತ್ತದೆ. ಬಹುಶ ಬೇರೆ ಉಪಾಯ ಕಾಣದೆ ಮಾಡುತ್ತಿದ್ದರು. ಗಾಳಿಪಟಕ್ಕೆ ಗೇರು ಮರದ ಅಂಟು ಸಿಗದ ಕಾರಣ ನಾವು ಅಮ್ಮ ಮಾಡಿ ಕೊಡುವ ಮೈದಾ ಹಿಟ್ಟಿನ ಅಂಟಿಗೆ shift ಆದೆವು. ಶಾಲೆಯ ಪರಪರೆಗೂ ಅದೇ ಅಂಟು. ಅಜ್ಜನ ಮನೆಗೆ ಪತ್ರ ಬರೆದರೆ ಅದನ್ನು ಅಂಟಿಸಲು ಅಪ್ಪ ಬಂದು ಅದನ್ನು camel ಅಂಟಿನಿಂದ ಅಂಟಿಸುವ ತನಕ ಕಾಯುವ ತಾಳ್ಮೆ ಇಲ್ಲದೆಯೇ ಅಮ್ಮನ 'ಮುಸರೇ....' ಎಂಬ ಕೂಗಿನ ನಡುವೆಯೇ ಒಂದೆರಡು ಅನ್ನದ ಅಗುಳುಗಳನ್ನು ಹಾಕಿ ಅಂಟಿಸಿಬಿಡುತ್ತಿದ್ದೆವು!

ನಂತರ ಒಂದೊಂದೇ ಹೊಸ ಹೊಸ ಅಂಟುಗಳು ಬರಲು ಪ್ರಾರಂಭವಾದವು. ಫೆವಿಕಾಲ್ ಅಂಟು ನಮಗೆ ಆಗ ಹೊಸದರಲ್ಲಿ ಅತ್ಯದ್ಭುತವಾಗಿ ಕಂಡಿತ್ತು. ಅಪ್ಪ ತಂದಿಟ್ಟ ಬಾಟಲಿಯನ್ನು ಕದ್ದು ಉಪಯೋಗಿಸಿ ಮುಚ್ಚಳವನ್ನು ಸರಿಯಾಗಿ ಹಾಕದೆ ಓಡಿ ಹೋಗಿ ಫೆವಿಕಾಲ್ ಗಾಳಿಗೆ ಪೂರ್ತಿ ಗಟ್ಟಿಯಾಗಿ ಅಪ್ಪನಿಂದ ಬೈಗುಳ ಪಡೆದದ್ದು ಇನ್ನೂ ನೆನಪಿದೆ.

ಫೆವಿಕಾಲ್ ನ ನಂತರ ಎಷ್ಟೋ ಬಗೆಯ ಅಂಟುಗಳು ನಮ್ಮನೆಗೆ ಪ್ರವೇಶ ಪಡೆದಿವೆ. ಅಮ್ಮ ಕೈ ತಪ್ಪಿ ಒಡೆದುಕೊಂಡ ಉಪ್ಪಿನ ಕಾಯಿಯ ಭರಣಿಯ ಮುಚ್ಚಳವನ್ನು ಅಂಟಿಸುವ Araldite (ಎರಡು ಬೇರೆ ಬೇರೆ ಟ್ಯೂಬುಗಳಲ್ಲಿ ಬರುತ್ತಿತ್ತು. ಒಂದು ಬಿಳಿಯ ಬಣ್ಣದ ಮತ್ತು ಇನ್ನೊಂದು transparent ದ್ರವಗಳನ್ನು ಸೇರಿಸಿ ಚೆನ್ನಾಗಿ ತಿಕ್ಕಿ ಬಳಸುವಂತದು), ಸೋರುತ್ತಿದ್ದ ನಲ್ಲಿಯನ್ನು ಸರಿಪಡಿಸುವ M-seal (ಕೆಟ್ಟ ವಾಸನೆಯ ಎರೆಡು ರಬ್ಬರಿನಂಥ ವಸ್ತುಗಳನ್ನು ಸೇರಿಸಿ ತಿಕ್ಕಿ ಬಳಸುವಂಥದು), ಚಪ್ಪಲಿ ಅಂಟಿಸುವ Fevibond ಇನ್ನೂ ಏನೇನೋ ಸಣ್ಣ ಸಣ್ಣ ವಸ್ತುಗಳನ್ನು ಅಂಟಿಸುವ Feviquick, ಒಂದೇ ಎರಡೇ ಹತ್ತು ಹಲವಾರು ಬಗೆಯ ಅಂಟುಗಳು. ಈ ಎಲ್ಲ ಅಂಟುಗಳು ಮನೆ ಪ್ರವೇಶಿಸುವ ಹೊತ್ತಿಗೆ ನಾವೂ ಬೆಳೆದು ದೊಡ್ದವರಾಗಿದ್ದರಿಂದ ಅಪ್ಪ ಅವನ್ನು ಅಡಗಿಸಿಡುವ ಗೋಜಿಗೆ ಹೋಗುತ್ತಿರಲಿಲ್ಲ. ನಾವೂ ಜಾಗ್ರತೆಯಿಂದ ಬಳಸುವುದನ್ನು ಕಲಿತಿದ್ದೆವು. ಇಂದೂ ಸಹ ಅಪ್ಪನ ಹರಗಣದ ಪೆಟ್ಟಿಗೆಯಲ್ಲಿ ಹುಡುಕಿದರೆ ಇವುಗಳ ಅವಶೇಷಗಳು ಕಾಣ ಸಿಗುತ್ತವೆ. ಆದರೆ ಗೇರು ಮರದ ಅಂಟು ಮಾತ್ರ ಅವಶೇಷವೂ ಇಲ್ಲದಂತೆ ಮಾಯವಾಗಿದೆ. ಅದನ್ನು ಹಾಕಿ ಹಾಕಿ ಕಪ್ಪು ಬಣ್ಣಕ್ಕೆ ತಿರುಗಿದ್ದ ಬಾಟಲಿಯನ್ನೂ ಅಪ್ಪ ಎಂದೋ ಎಸೆದುಬಿಟ್ಟಿದ್ದಾರೆ. ಆದರೆ ಅದರ ವಾಸನೆ ಮಾತ್ರ ಇಂದಿಗೂ ಮೂಗಿನಲ್ಲಿಯೇ ಇದ್ದಂತಿದೆ ಮತ್ತು ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ Aralditeನ ಜಾಹೀರಾತು ಕೂಡ ನೆನಪಿದೆ – “ಒಡೆದ ಹಾಲು ಮತ್ತು ಒಡೆದ ಹೃದಯಗಳನ್ನು ಬಿಟ್ಟು ಉಳಿದೆಲ್ಲವನ್ನೂ ಜೋಡಿಸುತ್ತದೆ!!”


ಯಾವ ಅಂಟು ಇದ್ದರೆಷ್ಟು ಬಿಟ್ಟರೆಷ್ಟು? ಇಂದು ನನಗೆ, ರಘುನಿಗೆ ಗಾಳಿಪಟ ಮಾಡಲೂ ಪುರಸೊತ್ತಿಲ್ಲ, ಪತ್ರ ಬರೆಯಲೂ ಪುರಸೊತ್ತಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡುವುದೇ ವರ್ಷಕ್ಕೊಮ್ಮೆ. ಜೀವನದಲ್ಲಿ ತಾಳ್ಮೆ, ಪುರಸೊತ್ತು ಕಡಿಮೆ ಆಗುತ್ತಾ ಹೋದಂತೆಲ್ಲಾ, ಕ್ಷಣಮಾತ್ರದಲ್ಲಿ ಒಣಗುವ ಅಂಟಿನ ಅಗತ್ಯ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇಷ್ಟೆಲ್ಲಾ ಅಂಟುಗಳು ಇರದಿದ್ದ ಕಾಲದಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಳ್ಳುತ್ತಿದ್ದರು; ಸಂಬಂಧಗಳ ಮೂಲಕ. ದುರದೃಷ್ಟವಶಾತ್ ಇಂದು ಇಷ್ಟೆಲ್ಲಾ ಅಂಟುಗಳ ನಡುವೆಯೂ ನಮ್ಮನ್ನು ಇನ್ನೊಬ್ಬರಿಗೆ ಅಂಟಿಸುವ ಅಂಟು ಮಾತ್ರ ಕಾಣುತ್ತಿಲ್ಲ. ಎಲ್ಲರಿಗೂ ಅಂಟಿಸಿಕೊಳ್ಳದೇ ಇರುವುದೇ ಇಷ್ಟ.

February 8, 2008

ಶಾಂತಲಾಳೊಂದಿಗೆ ಕೆಲವು ಕ್ಷಣಗಳು…

ಮೊನ್ನೆ gmail ನಲ್ಲಿ online ಇದ್ದೆ. ಶಾಂತಲಾ ping ಮಾಡಿದಳು. ನಾವಿಬ್ಬರೂ ಆಗಾಗ ಮಾತನಾಡುತ್ತಲೇ ಇರುತ್ತೇವೆ. ಅವಳು ನನ್ನ ಅತ್ಯಂತ ಆಪ್ತ ಸ್ನೇಹಿತೆಯರಲ್ಲಿ ಒಬ್ಬಳು. ನಾವಿಬ್ಬರು ಮಾತನಾಡತೊಡಗಿದರೆ ಮಾತು ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗುತ್ತದೆ. ಮೊದಲು ಹವಾಮಾನ ಹೇಗಿದೆ? ಚಳಿ ಎಷ್ಟಿದೆ? ಏನು ಅಡಿಗೆ? ಎಂಬೆಲ್ಲಾ ಮುಗಿದ ಮೇಲೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯತೊಡಗುತ್ತೇವೆ.
ಮಾತು ಕತೆ ಹೀಗಿತ್ತು ನೋಡಿ; ಮೊದಲಿನ hi ಕೊನೆಯಲ್ಲಿನ bye ಗಳನ್ನೆಲ್ಲ ಬಿಟ್ಟಿದ್ದೇನೆ.
.....
.....
.....
ನಾನು: ಮೊನ್ನೆ ಇಲ್ಲಿ snowfall ಆತು. ಫೋಟೋ link ಕಳಿಸ್ತಿ ತಡಿ. ಫೋಟೋದಲ್ಲಿ ಯನ್ನ ನೋಡು. ಎಷ್ಟು ದಪ್ಪ ಆಜಿ ಹೇಳಿ. ಯನ್ನ ಜೀವಮಾನದ ಗುರಿ ಆಗಿತ್ತು ಅದು :)
ಶಾಂತಲಾ: ಹೌದೇ, ಚೊಲೋ ದಪ್ಪ ಆಜೆ. ಆನೂ ಈಗ ದಪ್ಪ ಆಜಿ.
ನಾನು: ಒಳ್ಳೇದು ತಗ ಹಂಗಾರೆ ಇಬ್ಬರಿಗೂ. ಧಾರವಾಡದಲ್ಲಿ ಓದಲ್ಲೆ ಇದ್ದಾಗಲಂತೂ ಇಬ್ಬರೂ ಬರಗಾಲದ ಹೆಣಗಳ ತರ ಕಾಣ್ತಿದ್ಯ. ಯಾವಾಗ ನೋಡಿದ್ರೂ ಆರಾಮು ಇರ್ತಿತ್ತಿಲ್ಲೆ.
ಶಾಂತಲಾ: ಊರಿಗೆ ಯಾವಾಗ ಹೋಗ್ತಾ ಇದ್ದೆ?
ನಾನು: March ನಲ್ಲಿ.

(ಇನ್ನು ಶಾಂತಲಾ form ಗೆ ಬಂದಳು ಎಂದು ಕಾಣಿಸುತ್ತದೆ)
ಶಾಂತಲಾ: ಸೀಮಕ್ಕ, ನಿನ್ನ ಹತ್ರ ಜಗಳ ಮಾಡವು ಹೇಳಿ ಮಾಡ್ಕ್ಯಂಜಿ.
ನಾನು: ಯಂತಕ್ಕೆ?
ಶಾಂತಲಾ: ಯಂಗೆ ನಿನ್ನ ಮೇಲೆ ಹೊಟ್ಟೆಕಿಚ್ಚು ಬರ್ತಾ ಇದ್ದು.
ನಾನು: ಅಯ್ಯೋ ಯಂತಕ್ಕೆ?
ಶಾಂತಲಾ: ನೀನು ರಾಜೀವ ಭಾವ ಒಳ್ಳೆಯವ ಹೇಳಿ ಬರಿತೆ ಹಂಗಾಗಿ. ಯನ್ನ ಗಂಡನೂ ಒಳ್ಳೆಯವ ಹೇಳಿ ಬರದ್ದೆ ಇಲ್ಲೇ.
ನಾನು: ಅಷ್ಟೆಯ? ಬರದ್ರೆ ಆತು ಬಿಡು. ರಾಜೇಂದ್ರ ಭಾವ ಒಳ್ಳೆಯವ ಹೇಳಿ ಯಂಗೆ ಗೊತ್ತಿದ್ದು. ಮತ್ತೆ ಹೊಟ್ಟೆಕಿಚ್ಚು ಯಂತಕ್ಕೆ ಬಿಡು.
ಶಾಂತಲಾ: ಹೂಂ... ಸುಖ ಹೆಚ್ಚಾಗಿ, ಕೆಲ್ಸ ಇಲ್ದೆ ಹೋದ್ರೆ ಮತ್ತೆಂತ ಆಗ್ತು ಹೇಳು? ಎಲ್ಲರ ಮೇಲೂ ಹೊಟ್ಟೆಕಿಚ್ಚು ಹುಟ್ತು.
(ಜೀವನದ philosophy ಯನ್ನೇ ಹೇಳಿಬಿಟ್ಟಿದ್ದಳು, ಅವಳಿಗೆ ಗೊತ್ತಿಲ್ಲದೆಯೇ!)

ನಾನು: ಸರಿ ಬಿಡು. ಬರಿತಿ. (ನಿಜವಾಗಿಯೂ ರಾಜೇಂದ್ರ ಒಳ್ಳೆಯ ವ್ಯಕ್ತಿ; ಆ ಬಗ್ಗೆ ಎರಡು ಮಾತಿಲ್ಲ)
ಶಾಂತಲಾ: ಬರದ್ದಿಲ್ಲೇ ಅಂದ್ರೆ ನೋಡು ಮತ್ತೆ. ಕಡಿಗೆ ನೋಡ್ಕ್ಯತ್ತಿ ನಿನ್ನ. ಎಲ್ಲಾರೂ ಒಬ್ನೇ ಸಿಗು.
ನಾನು: ಕೊಡ್ಲ ಮಟ್ಟಿ ಕಾನಲ್ಲಿ ಹೊಡಿತ್ಯ?
ಶಾಂತಲಾ: ನೀನು ದಪ್ಪ ಆಜೆ. ಯನ್ನತ್ರ ನಿನಗೆ ಹೊಡಿಯಲ್ಲೇ ಆಗ್ತಿಲ್ಲೆ. ಜನರನ್ನ ಕರಸ್ತಿ :)
ನಾನು: ದೇವಿಕೆರೆ gang ಕರಸ್ತ್ಯ? :)
ಶಾಂತಲಾ: ಅವು ಸಾಕಾ ನಿನಗೆ?
ನಾನು: ಕೋಟೆ ಕೆರೆ gang ಕೂಡ ಕರಶ್ಗ್ಯ ಬೇಕಾರೆ. ಇನ್ನೂ ಬೇಕಾರೆ ಹೀಪನಳ್ಳಿ gang.
ಶಾಂತಲಾ: ಹೀಪನಳ್ಳಿ gang ನವು ಬಂದ್ರೆ ಯಂಗೆ ಹೊಡಿತ :)
ನಾನು: ಯಂತಕ್ಕೆ?
ಶಾಂತಲಾ: ಯಂಗ್ಳ ಊರಿನ ಮಾಣಿ ಮದುವೆ ಆಜೆ. ಗನಾ ಮಾಣಿ ಆಗಿದ್ದ, ಕೆಟ್ಟು ಹೋದ ಹೇಳಿ :)
…
…
…

ಟಿಪ್ಪಣಿ: ಶಾಂತಲಾ, ನೀನು ಹೊಡಿತೆ, ಹೊಡಸ್ತೆ ಹೇಳಿ ಹೆದ್ರಿಕ್ಯಂದು ಬರದ್ನಿಲ್ಲೇ ಮತ್ತೆ... ಬರೆಯವ್ವು ಅನಿಸ್ತು ಬರದ್ದಿ :)

January 17, 2008

ಮರೆತೇನೆಂದರೂ ಮರೆಯಲಿ ಹ್ಯಾಂಗಾ...?

ಊರನ್ನು ಬಿಟ್ಟು ಬಂದ ಮೇಲೆ ಊರಿನ ನೆನಪು ತುಂಬಾ ಕಾಡತೊಡಗಿದೆ. ಮೊನ್ನೆ ಅಪ್ಪನ ಜೊತೆ ಫೋನಿನಲ್ಲಿ ಮಾತನಾಡುತ್ತಿರುವಾಗ ನಾನೇನೋ ಹೇಳಿದ್ದಕ್ಕೆ ಅಪ್ಪ, 'ನಿನಗೆ ತಿಳುವಳಿಕೆ ಸಾಲದು ಸುಮ್ಮನಿರು, ಕುಂಬಾರಿ' ಎಂದಿದ್ದರು. ಕುಂಬಾರ ಎಂಬ ಪುಲ್ಲಿಂಗ ರೂಪವನ್ನು ಕುಂಬಾರಿ ಎಂದು ಅದ್ಭುತವಾಗಿ ಸ್ತ್ರೀಲಿಂಗ ರೂಪಕ್ಕೆ ಇಳಿಸಿದ್ದರು ಅಪ್ಪ! ನಗು ಬಂದಿತ್ತಾದರೂ ಮರು ಕ್ಷಣವೇ ಮನಸ್ಸು ಊರಿನ ಜನರ ಹೆಸರುಗಳನ್ನೆಲ್ಲಾ ಮೆಲುಕು ಹಾಕಿಬಿಟ್ಟಿತ್ತು.

ಅಂದ್ರೆ, ನಮ್ಮೂರಿನ ಜನ ಗಂಡಸರಿಗೆ ಇಡುವ ಹೆಸರನ್ನೇ ಸ್ತ್ರೀಲಿಂಗ ರೂಪಕ್ಕೆ ತಂದು ಹೆಂಗಸರಿಗೆ ಇಟ್ಟುಬಿಡುತ್ತಾರೆ. ಹೆಂಗಸರಿಗಾಗಿ ವಿಶೇಷ ಹೆಸರೇ ಬೇಕಾಗುವುದಿಲ್ಲ ಅವರಿಗೆ! ಕೆಲವು ಉದಾಹರಣೆ ಇಲ್ಲಿವೆ ನೋಡಿ... ನಾಗ್ಯಾ-ನಾಗಿ...ಇವರಿಬ್ಬರೂ ಅಣ್ಣ-ತಂಗಿ, ಅಕ್ಕ-ತಮ್ಮ, ಗಂಡ-ಹೆಂಡತಿ ಯಾರೂ ಅಲ್ಲ. ಬೇರೆ ಬೇರೆ ಮನೆಯವರು.

ಅಂತೆಯೇ... ಹನುಮ-ಹನುಮಿ... ಗುತ್ಯ-ಗುತ್ತಿ... ಬೊಮ್ಮ-ಬೊಮ್ಮಿ... ಕೆರಿಯ-ಕೆರೆದೇವಿ... ನರಸ-ನರಸಿ...ಮಾರ್ಯ-ಮಾರಿ...

ತಿಮ್ಮ-ತಿಮ್ಮಿ... ತಿಪ್ಪ-ತಿಪ್ಪಿ... ಯಲ್ಲ-ಯಲ್ಲಿ... ಭದ್ರ-ಭದ್ರಿ...
ಚಂದ್ರ-ಚಂದ್ರಿ... ಮೋಟ್ಯ-ಮೋಟಿ... ಬಸವ-ಬಸವಿ… ನಿಂಗ-ನಿಂಗಿ... ಚನ್ನ-ಚನ್ನಿ... ರುದ್ರ-ರುದ್ರಿ... ಗಿಡ್ಡ-ಗಿಡ್ದಿ... ಹುಲಿಯಾ-ಹುಲಿಗೆಮ್ಮ... ಗಣಪ-ಗಣಪಿ... ಬಂಗಾರ್ಯ-ಬಂಗಾರಿ... ಈರ-ಈರಿ (ವೀರಭದ್ರ ಎನ್ನುವುದು ವೀರ ಎಂದು ಮೊಟಕಾಗಿ ಈರ ಎಂದಾಗಿ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ). ನನಗೀಗ ನೆನಪಾಗುತ್ತಿರುವುದು ಇಷ್ಟು. ಇನ್ನೊ ಹಲವಾರು ಇವೆ.

ಈಗೀಗ ಹೊಸ ಹೆಸರುಗಳನ್ನು ಇಡಲು ತೊಡಗಿದ್ದಾರೆ. 'ನೆಹರು' ಎಂಬುದೇ ಒಬ್ಬ ವ್ಯಕ್ತಿಯ ಹೆಸರು ಎಂದರೆ ನಿಮಗೆ ನಂಬಲು ಕಷ್ಟವಾಗಬಹುದು! ಇನ್ನು 'ವಸೇಕಾ' ಎಂದು ಕೂಗುತ್ತಿರುತ್ತಾರೆ. ಅವನ ಹೆಸರು 'ಅಶೋಕ'! 'ಸಬೈಚಂದ್ರಾ' ಎಂದು ಕೂಗುತ್ತಿದ್ದರೆ ಅದು ನಮಗೆ ಕೇಳಿ ಗೊತ್ತಿದ್ದವರಿಗಷ್ಟೇ ಗೊತ್ತಾಗುತ್ತದೆ 'ಸುಭಾಸಚಂದ್ರ'ನನ್ನು ಕರೆಯುತ್ತಿದ್ದಾರೆ ಎಂದು. ನನ್ನ ಅಮ್ಮ ಮದುವೆಯಾಗಿ ಆ ಊರಿಗೆ ಬಂದು ಸೇರಿದ ಕೆಲವು ದಿನಗಳಲ್ಲಿ ಹುಟ್ಟಿದ ಹೆಚ್ಚು ಕಮ್ಮಿ ಎಲ್ಲ ಮಕ್ಕಳಿಗೂ 'ಸಾವಿತ್ರಿ' ಎಂದೇ ಹೆಸರಿಟ್ಟಿದ್ದರಂತೆ! ನನಗಿಂತ ಎರಡು ವರ್ಷ ದೊಡ್ಡವರಾದ ಆ ಸಾವಿತ್ರಿಯರ ಜೊತೆಯಲ್ಲೆಲ್ಲಾ ನಾನು ಆಟ ಆಡಿದ್ದೇನೆ. ನಾಲ್ಕೈದು ಸಾವಿತ್ರಿಯರು ಇರುವುದರಿಂದ ಅವರನ್ನೆಲ್ಲಾ ಕರೆಯುತ್ತಿದ್ದುದು 'ಗಿಡ್ಡ ಸಾವುಂತ್ರಿ'... 'ಅಂಗಡಿ ಸಾವುಂತ್ರಿ'... 'ಬೊಮ್ಮನ ಮನೆ ಸಾವುಂತ್ರಿ'... 'ಕೆಳಗಿನ ಕೇರಿ ಸಾವುಂತ್ರಿ'....ಇತ್ಯಾದಿ. ಅಮ್ಮನನ್ನು ಕರೆಯುತ್ತಿದ್ದುದು 'ಸಾವುಂತ್ರಮ್ಮ' ಎಂದು. ಈಗ ಆ ಊರಲ್ಲಿ 'ಸಾವುಂತ್ರಮ್ಮ' ಒಬ್ಬರೇ. ಉಳಿದೆಲ್ಲಾ ಸಾವಿತ್ರಿಯರು ಮದುವೆಯಾಗಿ ಬೇರೆ ಬೇರೆ ಊರು ಸೇರಿ ನನ್ನಂತೆಯೇ ಸತಿ ಸಾವಿತ್ರಿಯರಾಗಿದ್ದಾರೆ.

ಊರು ಎಂದೊಡನೆ ಅಪ್ಪ, ಅಮ್ಮ, ತಮ್ಮ, ದನ-ಕರು, ಶಾಲೆಯವರೆಗೂ ಕಳುಹಿಸಲು ಬರುತ್ತಿದ್ದ ನಾಯಿ, ಹಾಸಿಗೆಯಲ್ಲಿ ಬೆಚ್ಚಗೆ ಮಲಗುತ್ತಿದ್ದ ಬೆಕ್ಕು, ಓದಿದ ಶಾಲೆ, ಕಲಿಸಿದ ಮಾಸ್ತರು-ಆಕ್ಕೋರು, ಶಾಲೆಗೆ ಇನ್ಸಸ್ಪೆಕ್ಟರ್ ಬರುತ್ತಾರೆಂದು ಕೈಯಾರೇ ಮಾಡಿದ್ದ ಮಣ್ಣಿನ ಆಟಿಗೆಗಳು, ಶಾಲೆಯಲ್ಲಿ ಆಡಿದ ಅಲೆಕ್ಸಾಂಡರ್ ನಾಟಕ, ಮಧ್ಯದಲ್ಲೇ ಮರೆತು ಹೋದ ಸ್ವಾತಂತ್ರ್ಯೋತ್ಸವದ ಭಾಷಣ, ಅಪ್ಪ ಬರೆದುಕೊಟ್ಟ ಭಾಷಣದ ಚೀಟಿ, ಅಪ್ಪ ರೇಡಿಯೋದಲ್ಲಿ ದಿನಲೂ ಕೇಳುತ್ತಿದ್ದ ಪ್ರದೇಶ ಸಮಾಚಾರ, ಇಂದು ಮುನಿಸಿಕೊಂಡರೂ ನಾಳೆ ಕೂಡಿ ಆಡುತ್ತಿದ್ದ ಗೆಳೆಯ-ಗೆಳತಿಯರು, ಕಣ್ಣಮುಚ್ಚಾಲೆ ಆಡುವಾಗ ಅವಿತುಕೊಳ್ಳುತ್ತಿದ್ದ ಮೂಲೆಗಳು, ಭತ್ತದ ಪಣತ, ಸುತ್ತಾಡಿದ ಬೆಟ್ಟ-ಗುಡ್ಡ, ಮೀನು ಹಿಡಿದ ಹೊಳೆ, ಸೂರ್ಯ ಕಿರಣ ಬೀಳದಷ್ಟು ದಟ್ಟವಾಗಿದ್ದ ಕಾಡು, ನಾಲ್ಕಾಳು ಎತ್ತರಕ್ಕೆ ಜೀಕಿದ ಆಲದ ಬೀಳಲಿನ ಜೋಕಾಲಿ, ಆಲೆಮನೆ, ಬೆಂಕಿ ಪೊಟ್ಟಣದಲ್ಲಿಟ್ಟ ಜೀರುಂಡೆ ಹುಳು, ಬಾಲಕ್ಕೆ ದಾರ ಕಟ್ಟಿಸಿಕೊಂಡ ಹೆಲಿಕಾಪ್ಟರ್ ಹುಳು, ಜಿಟಿ-ಜಿಟಿ ಮಳೆ, ಜಡಿ ಮಳೆ, ಅಡುಗೆ ಮನೆಯ ಒಲೆಯಲ್ಲಿ ಅಮ್ಮ ಸುಡುತ್ತಿದ್ದ ಹಪ್ಪಳ, ಬಚ್ಚಲ ಒಲೆಯ ಬೆಂಕಿಯಲ್ಲಿ ನಾವು ಸುಡುತ್ತಿದ್ದ ಹಲಸಿನ ಬೇಳೆ....ಒಂದೇ ಎರಡೇ....ಏನೆಲ್ಲಾ ನೆನಪಾಗುತ್ತದೆ.

ಈಗ ಯಾವುದೋ ಒಂದು ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶದ ಮೂಲೆಯಲ್ಲಿ ಕುಳಿತಿದ್ದರೂ ಕೂಡ ಎಷ್ಟೆಲ್ಲಾ ಸವಿನೆನಪುಗಳನ್ನು ಇತ್ತ ನನ್ನ ಊರನ್ನು ಮರೆತೇನೆಂದರೂ ಮರೆಯಲಿ ಹ್ಯಾಂಗಾ?

December 20, 2007

ಗಂಡನ ಮೊದಲ ಕರ್ತವ್ಯ

ಇದೂ ಕೂಡ ಮರೆಯಲಾರದ್ದು...
ನನ್ನ ಧರ್ಮಪತಿ (ಹೆಂಡತಿ ಧರ್ಮಪತ್ನಿಯಾದ ಮೇಲೆ ಗಂಡ...) ರಾಜೀವ ಅವರ ಸಹೋದ್ಯೋಗಿಗಳೆಲ್ಲಾ ಹೇಳುವಂತೆ ideal husband. ಆ ಮಾತನ್ನು ನಾನೂ ಒಪ್ಪಲೇ ಬೇಕು. ಅವರಷ್ಟು ಸಹನೆ ಇರುವವರನ್ನು ಇನ್ನೂ ತನಕ ನಾನು ನೋಡಿಲ್ಲ. ನಾನು ಕೆಲವೊಮ್ಮೆ ಜಗಳವಾಡಿ ಅವರಿಗೆ ಹೊಡೆದರೂ, ಉಗುರಿನಿಂದ ಪರಚಿದರೂ ತಾಳ್ಮೆಯಿಂದ ಸಹಿಸಿಕೊಳ್ಳುತ್ತಾರೆ, ನಾನು ಅವರಿಗಿಂತ ಚಿಕ್ಕವಳು ಎಂಬ ಒಂದೇ ಕಾರಣಕ್ಕಾಗಿ. ಸಿಟ್ಟು ಇಳಿದ ಮೇಲೆ ನಾನು, 'ನೀವೇಕೆ ನನ್ನನ್ನು ತಡೆಯಲಿಲ್ಲ' ಎಂದು ಕೇಳಿದರೆ, 'ಹೊಡೆಯುವಾಗ, ಪರಚುವಾಗ ನಿನಗೆ ಸಿಗುವ ಖುಷಿಯನ್ನು ನಾನು ತಡೆದಂತೆ ಆಗುತ್ತದೆ. ಅದಕ್ಕಾಗಿ ತಡೆಯಲಿಲ್ಲ' ಎನ್ನುತ್ತಾರೆ!

ಇದೇನು ಗಂಡನನ್ನು ಇಷ್ಟೊಂದು ಹೊಗಳುತ್ತಿದ್ದಾಳೆ ಎಂದುಕೊಳ್ಳದೇ ಮುಂದೆ ಓದಿ. ನನಗೆ ಇಷ್ಟಕ್ಕೇ ಸಮಾಧಾನವೆಲ್ಲಿ? ಒಮ್ಮೆ ಹೇಳುತ್ತಿದ್ದೆ, 'ನೋಡಿ ಉಳಿದವರೆಲ್ಲಾ ತಮ್ಮ ಹೆಂಡತಿಯರಿಗೆ ಹೊರಗಡೆಗೆ ಹೋಗಿ ಮಾಡಬೇಕಾದಂತ ಕೆಲಸಗಳನ್ನೆಲ್ಲಾ ಮಾಡಿಕೊಡುತ್ತಾರೆ, ನೀನೆ ಹೋಗಿ ನೋಡು, ಕಲಿತುಕೋ, ನೀನೆ try ಮಾಡು, explore ಮಾಡು ಎಂದೆಲ್ಲಾ ಹೇಳುವುದಿಲ್ಲ. ನೀವು ಮಾತ್ರ ನನ್ನನ್ನೇ ದೂಡುತ್ತೀರಿ. so very unkind of you' ಎಂದು.

ಆಗ ಅವರು ಹೇಳಿದ್ದರು,' ಅದು ಹಾಗಲ್ಲ, ಎಲ್ಲವನ್ನೂ ನೀನೆ ನಿಭಾಯಿಸುವಷ್ಟರ ಮಟ್ಟಿಗೆ ನೀನು ಸಶಕ್ತಳಿರಬೇಕು, ಎಲ್ಲವನ್ನೂ ಕಲಿತಿರಬೇಕು....ಹೆಂಡತಿಯನ್ನು ವೈಧವ್ಯಕ್ಕೆ ಸಿದ್ಧವಾಗಿಡುವುದೇ ಗಂಡನ ಪ್ರಪ್ರಥಮ ಕರ್ತವ್ಯ' ಮುಂದೆ ನನಗೆ ಮಾತಾಡಲೂ ಆಗಲಿಲ್ಲ. ಗಂಟಲು ಕಟ್ಟಿತ್ತು... ಮನಸ್ಸಿಗೆ ಹೌದೆನಿಸಿದರೂ ಹೃದಯ ಇನ್ನೊ ಒಪ್ಪಿಕೊಳ್ಳಲು ತಯಾರಿಲ್ಲ. ಈಗ ಯೋಚಿಸಿದರೂ ಅನಿಸುತ್ತದೆ, ಅವರು ಹೇಳುವುದು ನಿಜ. ಆದರೆ ನನ್ನ ಯೋಚನೆಯೇ ಬೇರೆ. ಸಾವು ಬರುವಾಗ ಇಬ್ಬರಿಗೂ ಒಟ್ಟಿಗೆ ಬರಲಿ. ಇಲ್ಲವಾದರೆ ಅವರಿಗೆ ಮೊದಲು ಬರಲಿ. ಅವರಿಲ್ಲದೆ ನಾನು ಹೇಗೋ ಬದುಕಿಬಿಡಬಲ್ಲೆ, ಅವರ ನೆನಪಿನಲ್ಲೇ. ಆದರೆ ನಾನು ಇಲ್ಲವಾದರೆ ಅವರನ್ನು ಗಮನಿಸಲೂ ಯಾರೂ ಇರುವುದಿಲ್ಲ, ಅವರಿಗೆ ಅಂತ ಪರಿಸ್ಥಿತಿ ಬೇಡ.

ರಾಜೀವನಿಗೆ ವಿಶೇಷ ಸೂಚನೆ: ಹೋಗಳಿದ್ದೇನೆ, ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದೇನೆಂದು ಅಳಿದುಳಿದ ಕೆಲಸಗಳಿಗೂ ನನ್ನನ್ನೇ ದೂಡುವಂತಿಲ್ಲ, ನಾನು ಮಾಡುವುದಿಲ್ಲ ಅಷ್ಟೇ! :)

November 19, 2007

ಅವರಿರುವುದೇ ಹೀಗೆ

ಊರಿನಲ್ಲಿದ್ದಾಗ ನಡೆಯುತ್ತಿದ್ದ ಕೆಲ ಘಟನೆಗಳನ್ನು ನೆನಪಿಸಿಕೊಳ್ಳುವುದೇ ಒಂದು ಮಜ.
ನಮ್ಮೂರಿನ ಜನರು….. ಅವರೆಲ್ಲಾ ನಿಜವಾಗಿ ಮುಗ್ಧರು.
ತಾವೇನು ಮಾತನಾಡುತ್ತಿದ್ದೇವೆ ಎಂಬ ಅರಿವಿಲ್ಲದೆಯೇ ಮಾತನಾಡುತ್ತಿರುತ್ತಾರೆ.
ಅವುಗಳಲ್ಲಿ ಕೆಲವನ್ನು ನಿಮ್ಮೆದುರಿಗೆ ಇಡುತ್ತಿದ್ದೇನೆ ಓದಿ...

ಗಣಪ ಹಸ್ಲರ್ ಸುಮಾರು 80 ವರ್ಷಗಳ, ಬೆನ್ನು ಬಾಗಿ ಹೋಗಿರುವ ಮುದುಕ. ಆತ ತನ್ನಮಗಳು ಪಾರ್ವತಿಯನ್ನು register ಮದುವೆ ಮಾಡಿಸಬೇಕೆಂದು ಮನಸ್ಸುಮಾಡಿ ಯಾರ ಹತ್ತಿರವೋ marriage registration form ಕೂಡ ತರಿಸಿಕೊಂಡಿದ್ದ.
ಅದನ್ನು ತುಂಬಿಸಿಕೊಳ್ಳಲು ಬಂದಿದ್ದ. ಅದರಲ್ಲಿ ಹುಡುಗಿಯ ವಯಸ್ಸು ಎಂಬುದನ್ನು ತುಂಬುವಾಗ ಅಮ್ಮ ಕೇಳಿದರು, 'ಗಣಪ, ಪಾರ್ವತಿಗೆ ಎಷ್ಟು ವರ್ಷ ಆಯ್ತಾ’ . ಆಗ ಆತ ಹೇಳಿದ, ‘ಅದ್ಕೇ... ಒಂದ್ ಹತ್ತ್ ವರ್ಸ.'
ಅಮ್ಮ ಗಲಿಬಿಲಿಯಾಗಿ ಕೇಳಿದರು, 'ಹಂಗಾರೆ ನಿಂಗೆ ಎಷ್ಟು ವರ್ಷವಾ?' ಅದಕ್ಕವನು ಹೇಳಿದ್ದು, 'ನಂಗೇ… ಒಂದಿಪ್ಪತ್ ವರ್ಸ'!
ಅಮ್ಮನ ಬಾಯಿ ಸುಮಾರು ನಾಲ್ಕೈದು ಸೆಕೆಂಡುಗಳಷ್ಟು ಕಾಲ ತೆರೆದೇ ಇತ್ತು!

ವಿಟ್ಠಲ ಪೂಜಾರಿ- ಕುಂದಾಪುರದಿಂದ ಬಂದು ನಮ್ಮ ಊರಿನಲ್ಲಿ ಒಂದಷ್ಟು ವರ್ಷಗಳ ಕಾಲ ನೆಲಸಿದ್ದವ. ನಂತರ ಅವನು ತನ್ನ ಊರಿಗೇ ತಿರುಗಿ ಹೋಗಿಬಿಟ್ಟಿದ್ದ. ಇತ್ತೀಚೆಗೆ ತೀರಿಹೋದ ಎಂದೂ ಕೂಡ ತಿಳಿಯಿತು.ಅವನಿಗೆ ವಿಪರೀತ ಕುಡಿಯುವ ಚಟ. ಅಂಗಿಯ ಎರಡು ಗುಂಡಿಗಳು ಯಾವಾಗಲೂ ತೆರೆದುಕೊಂಡೇ ಇರುತ್ತಿದ್ದವು.ಅವನು ಒಮ್ಮೆ ಯಾರದೋ ಬಗ್ಗೆ ದೂರನ್ನು ಹೇಳಲು ಅಪ್ಪನಲ್ಲಿಗೆ ಬಂದಿದ್ದ, ಮತ್ತು ಹೇಳುತ್ತಿದ್ದ,'ಆ ಮನ್ ಷಾ ಉಪ್ಯೋಗಿಲ್ಲ ಹೆಗಡೆರೇ. ನಾ ನಿಮ್ ಹತ್ರೆ ಹೇಳೂದ್ ಎಂತದೂ ಅಂದ್ರೆ… ಅವ ಬಿಸ್ಲ್ ಕೊಪ್ಪದ ಕತ್ರಿಲೆಲ್ಲಾ ಅಂಗಿ ಗುಬ್ಬಿ (ಗುಂಡಿ) ತೆಗ್ದು ಬಚ್ಚಿಕಂಡು ತಿರಗ್ತಾ.'
ಅಪ್ಪ ತಕ್ಷಣ ಕೇಳಿದ್ದರು,'ಮತ್ತೆ ನೀ ಮಾಡದು ಯಂತದಾ?' ಅವ ಅದಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದ,'ನಾನಾರೆ ಎರಡೇ ಗುಬ್ಬಿ ತೆಕ್ಕತ್ತೆ, ಅವ ಅಷ್ಟೂ ಗುಬ್ಬಿ ತೆಕ್ಕತ್ನಲೆ.' ಎಂದು!

ಶಂಕರ ಹಸ್ಲರ ಒಮ್ಮೆ ಯಾವುದೋ ಕಾರಣಕ್ಕೆ ನಮ್ಮ ಮನೆಗೆ ಬಂದಿದ್ದ. ಅವನನ್ನು ಎಲ್ಲರೂ ಕರೆಯುವುದು ಗಿಡ್ಡ ಶಂಕರ ಎಂದು, ಏಕೆಂದರೆ ಅವನು ಸ್ವಲ್ಪ ಕುಳ್ಳಗಿದ್ದಾನೆ. ಆಗಿನ್ನೂ ಕೇಬಲ್ ಟಿವಿ ಗಳೆಲ್ಲಾ ಇರದಿದ್ದ ಕಾಲ. ನಾವೆಲ್ಲ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಏನೋ ಒಂದು ಕಾರ್ಯಕ್ರಮ ನೋಡುತ್ತಿದ್ದೆವು. ಏನು ಎಂಬುದು ಸರಿಯಾಗಿ ನೆನಪಿಲ್ಲ. ಅಂತೂ ಬೇರೆ ಬೇರೆ ರೀತಿಯ ಪ್ರಾಣಿಗಳನ್ನೆಲ್ಲಾ ತೋರಿಸುತ್ತಿದ್ದರು. ಗಿಡ್ಡ ಶಂಕರನೂ ಕುಳಿತು ಪೂರ್ತಿ ಕಾರ್ಯಕ್ರಮ ಮುಗಿಯುವವರೆಗೂ ಕುಳಿತು ನೋಡಿದ.
ನಂತರ ಹೊರಡುವಾಗ ಹೇಳುತ್ತಾ ಹೋದ, 'ಪರ್ ಪಂಚಾದಾಗೇ (ಪ್ರಪಂಚದಲ್ಲಿ) ಯಾವ್ ಯಾವ್ ನಮ್ನೀ ಪಕ್ಸಿ (ಪಕ್ಷಿ) ಎಲ್ಲಾ ಐದಾವೋ ಏನೋ' ಎಂದು. ಅದರಲ್ಲೇನು ಮಜ ಅಂತೀರಾ? ಆ ಕಾರ್ಯಕ್ರಮದಲ್ಲಿ ಪ್ರಾಣಿಗಳ ಹೊರತಾಗಿ ಒಂದೇ ಒಂದು ಪಕ್ಷಿಯನ್ನೂ ತೋರಿಸಿರಲಿಲ್ಲ!

ಶಂಕರ ಗೌಡ, ಮಲಕ್ಯಾ ಗೌಡ ಅಣ್ಣ-ತಮ್ಮಂದಿರು.
ಯಾವಾಗ ನೋಡಿದರೂ ಇಬ್ಬರ ಜಗಳ ಇದ್ದದ್ದೇ. ಒಮ್ಮೆ ಇಬ್ಬರೂ ಜಗಳವಾಡಿಕೊಂಡು ಅಪ್ಪನ ಹತ್ತಿರ ದೂರು ತಂದಿದ್ದರು.
ಮಾತಿಗೆ ಮಾತು ಬೆಳೆದು ಅಲ್ಲಿಯೇ ಪುನಃ ಜಗಳಕ್ಕಿಳಿದರು.
ಮಲಕ್ಯಾನಿಗೆ ಸಿಟ್ಟು ನೆತ್ತಿಗೇರಿ ಕೂಗಿದ, '@#$!^ ಮಗನೇ, ನಿನ್ನ ಕಾಲ್ದಾಗೇ ಮನೆ ಹಾಳಾಗಿದ್ದು.'
ಶಂಕರನಿಗೆ ತಡೆಯಲಾಗಲಿಲ್ಲ. ಕೇಳಿಯೇ ಬಿಟ್ಟ,'ಹೆಗಡೆರ ಮನೆ ಅಂಗಳದಾಗೇ
@#$!@ ಮಗನೆ ಅಂತೀಯಾ &%#$@ ಮಗನೆ'.
ಅಪ್ಪ ಕೇಳಿದ್ದರು, 'ಮತ್ತೆ ಈಗ ನೀ ಹೇಳ್ತಾ ಇರದು ಯಂತದಾ ಶಂಕ್ರಾ?'
ಶಂಕರ ಗೌಡ ಮುಸಿ ಮುಸಿ ನಗುತ್ತಾ ತಲೆ ಕೆರೆದುಕೊಂಡ ಚಿತ್ರ ಇನ್ನೂ ಕಣ್ಣೆದುರಿಗಿದೆ.

November 16, 2007

ಮಾತನಾಡುವ ಪರಿ- 4

ನಮ್ಮೂರಿನ ಇನ್ನೂ ಕೆಲವರ English ಓದಿ ನೋಡಿ...
ಅವರ ಮುಗ್ಧತೆಯ ಹಿಂದಿರುವ funny part ಮಾತ್ರ ನೋಡುವ ಪ್ರಯತ್ನ ಮಾಡುತ್ತಿದ್ದೇನೆಯೇ ವಿನಹ ಅವರನ್ನು ಗೇಲಿ ಮಾಡುವ ಉದ್ದೇಶ ನನ್ನದಲ್ಲ.

ಪಿ. ಬಿ. ಗೌಡ ನಮ್ಮೂರಿನ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಲ್ಲಿ ಒಬ್ಬ.
ಆಗಷ್ಟೇ ಬಿಜೆಪಿ ಪಕ್ಷದಿಂದ ಶ್ರೀ ಅನಂತಕುಮಾರ ಹೆಗಡೆ ಲೋಕಸಭೆಗೆ ಚುನಾವಣಾ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
ಅಪ್ಪನ ಜೊತೆ ನಾನು ಬರುತ್ತಿರುವಾಗ ದಾರಿಯಲ್ಲಿ ಸಿಕ್ಕಿದ ಮತ್ತು ಹೇಳಿದ, 'ನಮ್ಮ ಪಕ್ಷದ candidate (ಸರಿಯಾಗೇ ಬಳಸಿದ್ದಾನೆ ನೋಡಿ) ಸರಿ ಇಲ್ರಾ ಈ ಸಲ. ಅವ ಆರಿಸಿ ಬರದು ಖಾತ್ರಿ ಇಲ್ಲ ಬಿಡಿ. ಅವನ ಮೇಲೆ 13 tribunal ಕೇಸು ಐತಿ ಅಂತ ಹೇಳ್ತಾರೇ...'
Tribunal ನ ಅರ್ಥ criminal!

ನಮ್ಮೂರಿನ ಕೊನೆಗೌಡ ಸಣ್ಣತಮ್ಮ. ಅವನು ಸಣ್ಣವನೂ ಅಲ್ಲ, ತಮ್ಮನೂ ಅಲ್ಲ. ಅವನ ಹೆಸರೇ ಸಣ್ಣತಮ್ಮ. ನಮ್ಮನೆಗೆ ತೆಂಗಿನಕಾಯಿ ಕೊಯ್ಯಲು ಬಂದಾಗ ಒಮ್ಮೆ ಹೇಳುತ್ತಿದ್ದ,
'ಆ ಮರ ನಾ ಹತ್ತದಿಲ್ರಾ ಹೆಗಡೆರೇ... ಅದರಾಗೇ ರಿಕ್ಸ್ ಅದೇ...'
ಅಪ್ಪ ಹೇಳಿದ್ರು...'ಇಲ್ಲಾ ಅದರಲ್ಲಿ ಸವ್ಳಿ*, ಗಿವ್ಳಿ ಇಲ್ಲ'.
ಅವ ಮತ್ತೆ ಹೇಳಿದ, 'ಇಲ್ರಾ... ಸವ್ಳಿ ಇದ್ರೆ ಅಡ್ಡಿಲ್ಲಾಗಿತ್ತು, ಮರ ಎತ್ರಕ್ಕೆ ಹೋಗಿದ್ದಕ್ಕೆ ರಿಕ್ಸು, ಸುಮ್ನೇ ಬ್ಯಾಡಾ ಹೇಳಿ.'
ಆಗ ಗೊತ್ತಾಯಿತು. ರಿಕ್ಸು ಅಂದರೆ Risk ಎಂದು!

*ಸವ್ಳಿ ಎಂದರೆ ದೊಡ್ಡ ಜಾತಿಯ ಕೆಂಪು ಇರುವೆ, ಕಚ್ಚಿದರೆ ಉರಿಯಾಗುವಂತದು.

November 13, 2007

ಮಾತನಾಡುವ ಪರಿ- 3

ನಮ್ಮ ಊರಿನ ಜನ ಅಪ್ಪನ ಹತ್ತಿರ ಮಾತನಾಡಲು ಬಂದರೆ ಏನಾದರೂ ಒಂದು ನಗು ತರಿಸುವಂಥ ಮಾತನ್ನು ಆಡಿಯೇ ತೀರುತ್ತಾರೆ.
ಕೆಲವರಂತೂ ತಮ್ಮನ್ನು ತಾವೇ ರಾಜಕೀಯ ಪುಢಾರಿಗಳು ಎಂದು ತಿಳಿದುಕೊಂಡವರಿದ್ದಾರೆ.
ಅವರಿಗಂತೂ English ಶಬ್ದಗಳನ್ನು ಬಳಸಿ ಮಾತನಾಡುವುದೆಂದರೆ ಎಲ್ಲಿಲ್ಲದ ಪ್ರೀತಿ.
ಅಂತಹ ಕೆಲವು ಸಂದರ್ಭಗಳನ್ನು ಇಲ್ಲಿ ಹೇಳುತ್ತಿದ್ದೇನೆ.

ಶಂಕರ ಗೌಡ - ಊರಿನ ಮುಖಂಡ, ಅಂದು ಅಪ್ಪನ ಹತ್ತಿರ ಹೇಳುತ್ತಿದ್ದ, 'ಹೆಗಡೆರೇ ಆ ದಾಕ್ತಾರ ತವ ಹೋಗಿದ್ದೆ. ಔಷಧಿ ಕೊಟ್ಯಾರು. ಆದ್ರೂ ಯಾಕೋ ಜರ Continuous ಆಗಾಕೆ ವಲ್ದು.'
ಅದರ ಅರ್ಥ Doctor ಬಳಿ ಹೋಗಿದ್ದೆ, ಔಷಧಿ ಕೊಟ್ಟಿದ್ದಾರೆ. ಆದರೂ ಏಕೋ ಜ್ವರ ಕಡಿಮೆ ಆಗ್ತಾನೇ ಇಲ್ಲ. Continuous ಎನ್ನುವ ಶಬ್ದವನ್ನು ಕಡಿಮೆ ಎನ್ನುವ ಅರ್ಥದಲ್ಲಿ ಬಳಸಿಬಿಟ್ಟಿದ್ದಾನೆ ಶಂಕರ ಗೌಡ!

ಗಣಪತಿ- ಅದೇ ಊರಿನ ಒಕ್ಕಲಿಗ. ಅವನಿಗೆ ಆಗಾಗ ಮತಿಭ್ರಮಣೆಯಾಗುತ್ತಿತ್ತು. ಹಾಗಾದಾಗಲೆಲ್ಲ ಅವನು ಹೆಂಡತಿ, ಮಕ್ಕಳಿಗೆಲ್ಲ ಹೊಡೆದು ರಾದ್ಧಾಂತ ಮಾಡುತ್ತಿದ್ದ. ಆಗ ಅವನನ್ನು ಅಪ್ಪನ ಹತ್ತಿರ ಪಂಚಾಯಾತಿಗೆಂದು ಕರೆದುಕೊಂಡು ಬರುತ್ತಿದ್ದರು, ಏಕೆಂದರೆ ಅಪ್ಪ ಹೇಳಿದ ಮಾತನ್ನು ಅವನು ಎಂದೂ ಮೀರುತ್ತಿರಲಿಲ್ಲ. ಒಮ್ಮೆ ಹಾಗೆಯೇ ಅವನನ್ನು ಕರೆದುಕೊಂಡು ಬಂದಿದ್ದಾಗ, ಆ ಊರಿನ ಈಗಿನ ಗೌಡ (ಶಂಕರ ಗೌಡ ತೀರಿಕೊಂಡ ಬಳಿಕ) ಬಂಗಾರ್ಯ ಗೌಡ ಗಣಪತಿಗೆ ಬುದ್ಧಿ ಹೇಳಿದ್ದು, 'ನೀ ಹಿಂಗೆಲ್ಲ ಗದ್ಲಾ ಮಾಡ್ಕೀನಾದು ಚೊಲೊ ಅಲ್ಲ ನೋಡು ಗಣಪತಿ. ಇನ್ನೊಂದು ನಾಕ್ ವರ್ಷ ಆದ್ರೆ ನಿನ್ನ ಮಕ್ಕಳು ಕೈಗೆ ಬರ್ತಾವು. ಕೆಲ್ಸಾ ಅವೇ ಮಾಡ್ಕಿ0ದು ಹೋಕಾವು. ನೀ ಅಷ್ಟ್ರಾಗ ಹಿಂಗೆಲ್ಲಾ temporary ಮಾಡ್ಕಿ0ತಿ.
Temporary ಅನ್ನುವ ಶಬ್ದವನ್ನು ಅನಾಹುತ ಎನ್ನುವ ಅರ್ಥದಲ್ಲಿ ಬಳಸಲಾಗಿದೆ!

ಕೃಷ್ಣ ಪೂಜಾರಿ- ಕುಂದಾಪುರದಿಂದ ಕೆಲಸಕ್ಕೆಂದು ಬಂದು ನಮ್ಮೊರಿನಲ್ಲೇ settle ಆಗಿ ತುಂಬಾ ವರ್ಷಗಳೇ ಕಳೆದಿವೆ.
ಆತ ಒಮ್ಮೆ ನನ್ನನ್ನು ಕೇಳಿದ್ದು, 'ಅಲ್ರಾ… ಅಮ್ಮಾ ನಿಮ್ಮ ಆಸ್ಟ್ರೇಲಿಯಾದಾಗೆಲ್ಲಾ ಮೀನಾ ಗೀನಾ ಬೇಯ್ಸಾದಿಲ್ಲೇನ್ರಾ?'
ನನಗೆ ಅರ್ಥವೇ ಆಗಲಿಲ್ಲ. ಎಲ್ಲಿಯ ಆಸ್ಟ್ರೇಲಿಯಾ, ಎಲ್ಲಿಯ ಮೀನು ಎಂದು. ಕಣ್ಣು ಕಣ್ಣು ಬಿಡುತ್ತಾ ನಾನು ನಿಂತಿದ್ದನ್ನು ನೋಡಿ ಮತ್ತೆ ಹೇಳಿದ, 'ಅದೇ ಧಾರವಾಡದಾಗೇ, ನಿಮ್ಮ ಆಸ್ಟ್ರೇಲಿಯಾದಾಗೇ.....'
ನನಗೆ ಆಗ ಅರ್ಥ ಆಯಿತು. ಆತ ಕೇಳುತ್ತಿದ್ದುದು ಧಾರವಾಡದ ನನ್ನhostel ಬಗ್ಗೆ ಎಂದು!

ಇನ್ನೂ ಉಮೇಶನಂತೂ SSLC ವರೆಗೆ ಓದಿದ್ದಾನೆ. ಅವನ English ಅಂತೂ ಇನ್ನೊ ಮಜಾವಾಗಿರುತ್ತದೆ.
ಒಮ್ಮೆ ಏನೋ ಒಂದು ವಿಷಯ ಕೇಳಲು ಅಪ್ಪನ ಹತ್ತಿರ ಬಂದಿದ್ದಾನೆ. ಆಗ ಹೇಳುತ್ತಿದ್ದ, 'ನಮಗೆ ಗೊತ್ತಾಗದಿಲ್ಲ ಹೆಗಡೆರೇ ನೀವೇ ಹೇಳ್ರಿ. ನಾವೆಲ್ಲಾ ನೋಸೆಂಟು.'
ನೋಸೆಂಟು ಅಂದರೆ Innocent! ಅದರ ನಂತರ ನಾವು ಅವನನ್ನು ಕರೆಯುತ್ತಿದ್ದುದೇ ನೋಸೆಂಟು ಎಂದು!
ಇಬ್ಬನಿ ಬಿದ್ದಾಗ ಅವನು ಅದಕ್ಕೆ ಇಬ್ಬನಿ ಎಂದು ಅವನು ಎಂದೂ ಹೇಳುವುದಿಲ್ಲ. ಮಿಷ್ಟು (Mist) ಎಂದೇ ಹೇಳುತ್ತಾನೆ.

November 8, 2007

ಗುತ್ಯಾ ಮತ್ತು ಅವನ ಕಿರೀಟ

ಇದು ನಾನು ನೋಡಿದ ಘಟನೆಯಲ್ಲ. ಅಮ್ಮನಿಂದ ಕೇಳಿದ್ದು, ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಯಸಿದ್ದು. ಅಮ್ಮ ಸುಮಾರು 22 ಅಥವಾ 23 ವರ್ಷದವಳಿದ್ದಾಗಿನ ಕಥೆ. ಅವಳ ಊರು ಅಂದರೆ ನನ್ನ ಅಜ್ಜನ ಮನೆ ಶಿರಸಿ ತಾಲೂಕಿನ ದೊಡ್ನಳ್ಳಿಯಲ್ಲಿ ಆಗಿನ ಕಾಲದಲ್ಲಿ ನಾಟಕಗಳ ಗೀಳು ಎಲ್ಲರಿಗೂ ಸ್ವಲ್ಪ ಜಾಸ್ತಿಯೇ ಇತ್ತು ಎಂದು ಕೇಳಿದ್ದೇನೆ.

ಒಂದು ನಾಟಕವನ್ನು ತಯಾರಿ ಮಾಡಿಕೊಂಡಿದ್ದರು. ಅದರ ಕಥೆಯ ಸಾರಾಂಶವೆಂದರೆ ಒಬ್ಬ ಅರಸನಿದ್ದವನು ಏನೋ ಕಾರಣದಿಂದ ಬಡವನಾಗಿ ಭಿಕ್ಷೆ ಬೇಡುವ ಪರಿಸ್ಥಿತಿಯನ್ನು ತಲುಪುತ್ತಾನೆ. ತೀರಾ unrealistic ಅಂತೀರಾ? ಅದು ನನಗೂ ಗೊತ್ತು, ಅಮ್ಮನಿಗೂ ಗೊತ್ತು. ಆದರೆ ಅದು ನಾಟಕ ತಾನೇ, ಏನು ಬೇಕಾದರೂ ಆಗಬಹುದು. ಅದೇ ಊರಿನ ಎಮ್ಮೆ ಕಾಯುವ ಗುತ್ಯಾ ತನಗೆ ಅರಸನ ಪಾತ್ರವೇ ಬೇಕು ಎಂದು ಹಟಮಾಡಿ ಕೊನೆಗೂ ಆ ಪಾತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ. ಸಾಕಷ್ಟು ಮೊದಲಿನಿಂದಲೇ ತಾಲೀಮು ನಡೆಸಿದ್ದರು. ಎಲ್ಲವೂ ಸರಿಯಾಗಿಯೇ ನಡೆದಿತ್ತು.

ನಾಟಕ ಪ್ರದರ್ಶಿಸುವ ರಾತ್ರಿ ಬಂತು. ಎಲ್ಲರೂ ತಮ್ಮ ತಮ್ಮ ಉಡುಗೆಗಳೊಂದಿಗೆ ರಂಗಮಂಚಕ್ಕೆ ಬರಲು ಸಿದ್ಧರಾದರು. ಗುತ್ಯಾನಿಗೆ ಅರಸನ ವೇಷ ಕಟ್ಟಿದರು. ಬಣ್ಣ ಬಣ್ಣದ ಅಂಗಿ, ಬಂಗಾರ ಮತ್ತು ಮುತ್ತಿನ ಸರಗಳು, ಕೈಯ್ಯಲ್ಲಿ ಹೊಳೆಯುವ ಖಡ್ಗ, ತಲೆಯಮೇಲೆ ರತ್ನಖಚಿತ ಕಿರೀಟ...
ಗುತ್ಯಾನಿಂಗಂತೂ ಖುಷಿಯೋ ಖುಷಿ. ಹೆಚ್ಚು ಕಡಿಮೆ ಅವನು ನೆಲದ ಮೇಲೆಯೇ ಇಲ್ಲ ಆ ರಾತ್ರಿ. ನಾಟಕ ನಡೆಯುತ್ತಿರುವಾಗ ಗುತ್ಯಾನ ಪ್ರವೇಶದ ದೃಶ್ಯ ಬಂತು. ರಾಜ ಗಂಭೀಯದಿಂದಲೇ ಹೋಗಿ ತಾನು ಹೇಳಬೇಕಾಗಿದ್ದನ್ನೆಲ್ಲಾ, ಮಾಡಬೆಕ್ಕಾಗಿದ್ದನ್ನೆಲ್ಲಾ ಸರಿಯಾಗಿಯೇ ಮುಗಿಸಿ ಒಳಗೆ ಬಂದ. ನಿರ್ದೇಶಕರು ಒಮ್ಮೆ ನಿಟ್ಟುಸಿರು ಬಿಟ್ಟರು.

ಕಥೆ ಮುಂದುವರಿಯಿತು. ಅರಸ ದಿವಾಳಿಯಾಗುವ ದೃಶ್ಯ ಹತ್ತಿರ ಬಂತು. ಒಳಗಡೆ ಗುತ್ಯಾನಿಗೆ ಹರುಕು ಅಂಗಿ ತೋಡಿಸಿದರು, ತಲೆಕೊದಲನ್ನು ಕೆದರಿದರು, ಕೈಯ್ಯಲ್ಲಿ ಮುರುಕು ಪಾತ್ರೆಯನ್ನು ಹಿಡಿಸಿದರು. ಗುತ್ಯಾನಿಗೆ ಈ ವೇಷ ಏನು ಮಾಡಿದರೂ ಮನಸ್ಸಿಗೆ ಬರಲೊಲ್ಲದು. ನೋಡಲು ಕುಳಿತಿರುವ ನೂರಾರು ಜನರ ಮುಂದೆ ಹೀಗೆ ಹೋಗಬೇಕಾಯಿತಲ್ಲಾ ಎಂಬ ಕೊರಗು. ಏಕೆಂದರೆ ತಾಲೀಮಿನ ಸಮಯದಲ್ಲಿ ಅವನಿಗೆ ಇದ್ಯಾವುದರ ಕಲ್ಪನೆಯೂ ಇರಲಿಲ್ಲ.
ಗುತ್ಯಾನಿಗೆ ಭಿಕ್ಷುಕನ ವೇಷ ತೊಡಿಸಿದ ನಂತರ ವೇಷವನ್ನು ತೊಡಿಸುವವನು ಇನ್ನೊಬ್ಬನಿಗೆ ವೇಷ ತೊಡಿಸುವುದರಲ್ಲಿ ಮಗ್ನನಾಗಿದ್ದ. ಕೆಲ ಕ್ಷಣಗಳ ಬಳಿಕ ತಿರುಗಿ ನೋಡಿದರೆ ಗುತ್ಯಾ ಮತ್ತೆ ಕಿರೀಟ ತೊಟ್ಟು ಕುಳಿತಿದ್ದಾನೆ! ಗುತ್ಯಾನಿಗೆ ಕಿರೀಟವನ್ನಂತೂ ತೆಗೆಯುವುದು ಸುತಾರಾಂ ಇಷ್ಟವಿರಲಿಲ್ಲ. ಅರಸನ ಅಂಗಿಯಂತೂ ಇಲ್ಲ, ಕಿರೀಟವಾದರೂ ಇರಲಿ ಎಂಬ ಆಸೆ ಅವನಿಗೆ. ಅಂತೂ ಇಂತೂ ಅವನಿಗೆ ಬುದ್ಧಿ ಹೇಳಿ, 'ನೋಡು ಈಗ ನೀನು ರಾಜನಲ್ಲ, ಭಿಕ್ಷುಕ' ಎಂದು ಮನವರಿಕೆ ಮಾಡಿಕೊಟ್ಟರು. ಅವನು ಗೊತ್ತಾಯಿತು ಎನ್ನುವಂತೆ ತಲೆಯಾಡಿಸಿದ. ಸರಿ, ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾದರು.

ಗುತ್ಯಾ ಭಿಕ್ಷೆ ಬೇಡುವ ದೃಶ್ಯ ಬಂತು. ತಕ್ಷಣ ಗುತ್ಯಾ stage ಮೇಲೆ ಬಂದ. ನೋಡಿದರೆ ಕಿರೀಟ ತಲೆಯ ಮೇಲೇ ಇದೆ! ಇನ್ನೇನು ಬರಬೇಕು ಎನ್ನುವಾಗ ಒಳಗಡೆ ಇದ್ದವರ ಕಣ್ಣು ತಪ್ಪಿಸಿ ಕಿರೀಟವನ್ನು ಹಾಕಿಕೊಂಡು ಬಂದುಬಿಟ್ಟಿದ್ದ!! ಹರುಕು ಅಂಗಿ, ತಲೆಯ ಮೇಲೆ ಕಿರೀಟವನ್ನು ಹಾಕಿಕೊಂಡ ಗುತ್ಯಾ ಭಿಕ್ಷುಕ ಕೈಯ್ಯಲ್ಲಿ ಮುರುಕು ಪಾತ್ರೆ ಹಿಡಿದುಕೊಂಡು 'ಹಸಿವಾಗಿ ಪ್ರಾಣವ ಬಿಡುತಿಹೆನಾ, ತಾಯೇ ಕೊಡವ್ವಾ ನಂಗೆ ನೀರವನ (ನೀರನ್ನು-ಗುತ್ಯಾನ ಬಾಯಲ್ಲಿ ಅದು ನೀರವನ ಆಗಿತ್ತು) ಎಂದು ಪ್ರಾಸಬದ್ಧವಾಗಿ ಹಾಡುತ್ತಿದ್ದರೆ, ಪ್ರೇಕ್ಷಕರು ಹೊಟ್ಟೆ ಹಿಡಿದುಕೊಂಡು ಬಿದ್ದು ಬಿದ್ದು ನಗುತ್ತಿದ್ದರಂತೆ!

August 28, 2007

ಮಾತನಾಡುವ ಪರಿ- 2

ಅರಿವಿಲ್ಲದೇ ಮಾತನಾಡಿ ಉಳಿದವರು ನಗುವಂತಾದ ಮತ್ತೊಂದು ಘಟನೆಯಿದು.
'ನಾಗ್ಯಾ' ನಮ್ಮ ಗದ್ದೆಯನ್ನು ಊಳಲು ಖಾಯಂ ಬರುತ್ತಿದ್ದವ. ನಮ್ಮ ಮನೆಯ ಎತ್ತುಗಳಿಗೂ ಮತ್ತು ಅವನಿಗೂ ಅವಿನಾಭಾವ ಸಂಭಂಧ. ಗದ್ದೆ ಊಳುವಾಗ ಎತ್ತುಗಳು ಸ್ವಲ್ಪ ಆಕಡೆ ಈಕಡೆ ಎಳೆದರೂ ಅವನು ಅವುಗಳನ್ನು ಬಯ್ಯುತ್ತಿದ್ದುದು
"ಹೂ... ಇದರ ಮನೆ ಹಾಳಾಗಾ..." !!! ಒಮ್ಮೆ ಅಮ್ಮ ಕೊಟ್ಟಿಗೆಯಲ್ಲಿ ಸಂಜೆ ಹೊತ್ತು ಹಾಲು ಕರೆಯುತ್ತಿದ್ದಾಗ
ನಾಗ್ಯಾ ಗದ್ದೆ ಯಿಂದ ಎತ್ತುಗಳನ್ನು ಹೊಡೆದುಕೊಂಡು ಕೊಟ್ಟಿಗೆಗೆ ಬಂದ. ಅವುಗಳನ್ನು ಜಾಗದಲ್ಲಿ ಕಟ್ಟಿ ಹಾಕುತ್ತಿರುವಾಗ ಪಕ್ಕದಲ್ಲಿ ಕಟ್ಟಿದ್ದ ಆಕಳು ಕುಣಿದಾಡಿತು. ಕೊಟ್ಟಿಗೆಯಲ್ಲಿ ಕೆಲವೊಮ್ಮೆ ಎತ್ತು ಅಥವಾ ಆಕಳುಗಳನ್ನು ಕಟ್ಟಿ ಹಾಕುವಾಗ ಅಕ್ಕ ಪಕ್ಕದಲ್ಲಿರುವ ಆಕಳುಗಳು ಕುಣಿದಾಡುವದುಂಟು. ಅದು ಕುಣಿದಾಡುವುದನ್ನು ನೋಡಿದ ನಾಗ್ಯಾ ಹೇಳಿದ್ದು- "ತಡಿ...ತಡಿ...ಯಾಕ್ ಹಾಂಗ್ ಕುಣೀತೀ... ನಾವೂ ನಿಮ್ಮಂಗಲೇ ಮನಾಷಾರೇ..." ನಾಗ್ಯಾ ಎತ್ತುಗಳನ್ನು ಕಟ್ಟಿ ಹಾಕಿ ಹೋದ. ಅಮ್ಮ ಕೊಟ್ಟಿಗೆಯಲ್ಲಿ ಒಬ್ಬರೇ ನಗುತ್ತಿದ್ದರು!

August 22, 2007

ಮಾತನಾಡುವ ಪರಿ- 1

ಮಾತನಾಡುವುದು ಕತ್ತಿಯ ಅಲುಗಿನ ಮೇಲೆ ನಡೆದಂತೆ. ಸ್ವಲ್ಪ ಲಕ್ಷ್ಯ ಕಡಿಮೆಯಾದರೂ ಮಾತು ಅಪಾರ್ತಕ್ಕೆ ಗುರಿಯಾಗುತ್ತದೆ. ಅಂತಹ ಒಂದು ಘಟನೆಯನ್ನು ಬರೆದಿದ್ದೇನೆ ಓದಿ... ಉತ್ತರ ಕನ್ನಡದ ಹಳ್ಳಿಗಳಲ್ಲಿ ಇಂತಹ ಸನ್ನಿವೇಶಗಳು ಅಪರೂಪವೇನಲ್ಲ.
ನಮ್ಮ ಮನೆ ಶಿರಸಿಯ ಸಮೀಪದ ಒಂದು ಹಳ್ಳಿ. ಅಲ್ಲಿ ನಮ್ಮದು ಕಾಡಿನಿಂದ ಸುತ್ತುವರಿದ ಒಂಟಿ ಮನೆ. ಅದಕ್ಕಾಗಿ ನಮ್ಮ ಮನೆಯಲ್ಲಿ ದೈತ್ಯಾಕಾರದ ಎರಡು ನಾಯಿಗಳನ್ನು ಸಾಕುವುದು ಎಂದಿನಿಂದಲೂ ಬಂದ ರೂಢಿ.
ನೋಡಿದರೆ ಭಯ ಬರುವಂತಹ ನಾಯಿಗಳು ಯಾರಾದರೂ ಬಂದರೆ ಕಟ್ಟಿ ಹಾಕಿದ ಸರಪಳಿಯನ್ನು ಹರಿದುಕೊಂಡು ಬಂದು ಕಚ್ಚಿ ಸಾಯಿಸಿ ಹಾಕುತ್ತವೇನೋ ಅನ್ನುವಷ್ಟರ ಮಟ್ಟಿಗೆ ಬೊಗಳುತ್ತವೆ. ಬಿಟ್ಟು ಹಾಕಿದರೆ ಎಂಥ ಕಳ್ಳರ ಜೊತೆಗೂ ಆಟ ಆಡಿಬಿಡುತ್ತವೆ! (ಈ ವಿಷಯ ನಿಮ್ಮಲ್ಲೇ ಇರಲಿ).
ಸಾಮಾನ್ಯವಾಗಿ ಊರಿನವರೆಲ್ಲಾ ಆ ನಾಯಿಗಳಿಗೆ ಹೆದರುವುದು ವಾಡಿಕೆ. ನಾಯಿಗಳು ಅವುಗಳನ್ನು ಕಟ್ಟುವ ಜಾಗದಲ್ಲಿ ಕಾಣದಿದ್ದಾಗ "ಹೆಗಡೆ ರೇ...... ನಾಯಿೇ......" ಅಥವಾ "ಅಮ್ಮಾ...... ನಾಯಿೇ......" ಎಂದು ಒಂದು ಗಾವುದ ದೂರದಿಂದಲೇ ಕೂಗುತ್ತಾರೆ.
ಯಾರಾದರೂ ಬಂದು ನಾಯಿಗಳನ್ನು ಕಟ್ಟಿದ ಮೇಲೆಯೇ ಅವರು ಮುಂದ ಹೆಜ್ಜೆ ಇಡುವುದು.

ಅದೇ ಊರಿನವನಾದ 'ಧರ್ಮ ' ಅಪ್ಪನ ಹತ್ತಿರ ಹಣಕಾಸಿಗಾಗಿ ಆಗಾಗ ಬರುತ್ತಿದ್ದವ. ಒಮ್ಮೆ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಸಮಯ. ಅಮ್ಮ ಗಿಡಗಳಿಗೆ ನೀರು ಹಾಕುವಾಗ ಎಂದಿನಂತೆಯೇ ನಾಯಿಗಳನ್ನು ಬಿಟ್ಟು ಹಾಕಿದ್ದರು.
ಅವು ಇಡೀ ಅಂಗಳದ ತುಂಬಾ ಕುಣಿದು, ದಣಿದು ಕಟ್ಟೆಯ ಮೇಲೆ ಮಲಗಿ ನಿದ್ದೆ ಹೊಡೆಯುತ್ತಿದ್ದವು.
ನೀರು ಹಾಕುತ್ತಿದ್ದ ಅಮ್ಮ ಏನೋ ಸದ್ದು ಕೇಳಿದಂತಾಗಿ ತಿರುಗಿ ನೋಡಿದರೆ ಧರ್ಮ ಮರ ಹತ್ತಿ ಕುಳಿತಿದ್ದಾನೆ!ಅಮ್ಮ ಅಲ್ಲಿಂದಲೇ ಹೇಳಿದರು, "ಏ ಧರ್ಮ ಮರ ಇಳಿಯೋ..." ಅವ ಅಮ್ಮನಿಗಿಂತ ಜೋರಾಗಿ ಕೂಗಿದ,
"ಅಮ್ಮಾ, ಮೊದ್ಲು ನೀವು ನಾಯಿ ಕಟ್ಟಾಕ್ರೀ ಮಾರಯ್ರಾ...ಅಂಕಾ ಮಟಾ ನಾ ಇಲ್ಲೇ ಕುಂದ್ರತೆನಿ".
ಅಮ್ಮ ನಾಯಿ ಕಟ್ಟಿ ಹಾಕಿದ್ದೆ ತಡ, ಸರಸರನೆ ಮಂಗನಂತೆ ಮರ ಇಳಿದು ಬಂದ ಧರ್ಮ.
ಅಮ್ಮ ಹೇಳಿದರು, "ಹೆಗಡೆರು ಇಲ್ಲಲ ಧರ್ಮ, ಈಗಷ್ಟೇ ಸಿರ್ಸಿಗೆ ಹೊದ್ರೂ... ನೀ ಬೆಳಿಗ್ಗೆ ಬೇಗ ಬರಬೇಕಾಗಿತ್ತು..."
ನಾಯಿಗಳಿಗೆ ತುಂಬಾ ಹೆದರುತ್ತಿದ್ದ ಧರ್ಮ ತನಗೆ ಅರಿವಿಲ್ಲದಂತೆ ಹೇಳಿದ, "ಹೆಗಡೆರು ಸಾಯ್ಲ್ ರಿ ಮಾರಯ್ರಾ... ನಿಮ್ಮ ನಾಯಿ ನನ್ನ ತೆಗದೆ ಬಿಡ್ತಿದ್ವು...ಹೆಗಡೆರು ಹೋಗೆ ಬಿಟ್ರೆನ್ರಿ?" !!!! ನಗು ಬರುತ್ತಿದ್ದರೂ ತಡೆದುಕೊಂಡು ಅಮ್ಮ ಮತ್ತೊಮ್ಮೆ ಕೇಳಿದರು, "ಹೆಗಡೆರಿಗೆ ಯಾಕೆ ಹಾಗಂತೀಯೋ ಧರ್ಮ... " ನಾಯಿಗಳ ಭಯದಿಂದ ಇನ್ನೊ ಹೊರ ಬಂದಿರದ ಧರ್ಮ ಅದನ್ನೇ ಪುನರುಚ್ಚರಿಸಿದ, "ಹೆಗಡೆರು ಸಾಯ್ಲ್ ರಿ... ನಾಯಿೇ..." ಎಂದವನೆ ತಲೆ ಕೆರೆದುಕೊಳ್ಳುತ್ತಾ, "ನಮ್ಮ ಎತ್ತಿಗೊಂದು ಉಸಾರಿಲ್ಲಾಗಿತ್ತು.... ಹೆಗಡೆರ ತವ ರೊಕ್ಕ...." ಎಂದು ಗೊಣಗುತ್ತಾ ಹೊರಟೆ ಹೋದ.

ಧರ್ಮನೇನೋ ಏನೂ ಆಗದವನಂತೆ ಹೋದ. ಉಕ್ಕಿ ಬರುತ್ತಿದ್ದ ನಗುವನ್ನು ತಡೆಯುವ ಬಗೆ ನಮಗೆ ತಿಳಿಯಲಿಲ್ಲ!

August 14, 2007

Post Office Incident

Yesterday was a very hot sunny day here in Tokyo. I left for Post Office at 12:00 hrs to pay the water bill. By the time I reached there, I was almost tired because of heat. Those automated doors welcomed me… I went inside and saw many people seated. They looked to be waiting. I did not know what to do.
I went to a counter and asked a person working there-"Excuse me; I need to pay the bills…what should I do".
He told me something in Japanese which I did not understand. By looking at my blank face he repeated it once again but I think I must have maintained the blankness on my face as it is, he went aside and brought a slip with a number. Then I realized I am in a queue! I sat waiting just like all others. The office was very cool because of AC. I sat relaxing.

A lady appeared before me with a form. She gave me the form but everything was written in Japanese language. By looking at the big question mark on my face, she explained me that I should fill my name and 'terehone' number (most of the Japanese people pronounce ‘telephone’ as ‘terehone’ and ‘thank you’ as ‘sank you’). As directed I filled name, address and ‘terehone’ number. As my turn came, I paid the bill without hassle.

Then I faced the real problem of conversation. I needed air mail stamps to write to my brother who is in India. I asked the lady who took my bill to give me air mail stamp. I could make out that she did not understand what I said and she directed me to the other counter. I went there. A man aged about 45 years was sitting. He smiled at me and I could see his silver filled teeth greeting me pleasantly. I asked him about the air mail stamps. He requested me to repeat as he too could not make out what I was telling. I repeated thrice but he could not understand. Then he gave me a piece of paper and pen to write it down. I wrote – ‘I need to write letters to India. So I need air mail stamps’. He took the paper inside. I thought he might have taken it to the person who knows English and I had all hopes to get the stamps. To all my surprise, he came out with a notebook in his hand. He wrote a ‘terehone’ number on the piece of paper on which I had given him the written thing and gave it to me explaining something in Japanese. He repeated twice but I could not understand what I should do with that number. By looking at my face…he stared telling ‘Sorry’. I was in trouble and even he was. I was sweating even in that cool place. I decided to leave without stamps and said ‘Thank you’. Again he pleasantly smiled at me but I felt the silver in his teeth is mocking at me! That piece of paper with the ‘terehone’ number he gave me is sleeping nicely in my bag hardly bothering about me!