ಚಿಕ್ಕಂದಿನಲ್ಲಿ ಅಜ್ಜ ಹೇಳಿದ ಕತೆ.
ಆಗ ಅದರಲ್ಲಿ ವಿಶೇಷವೇನೂ ಕಂಡಿರಲಿಲ್ಲ.
ವರುಷಗಳು ಉರುಳಿದಂತೆ ಅದರ ವಿಶೇಷತೆ ಮನವರಿಕೆಯಾಗುತ್ತಿದೆ...
ಅಜ್ಜ ಆ ಕತೆಯನ್ನು ಯಾಕೆ ಹೇಳಿದ್ದ ಎಂಬುದೂ ತಿಳಿಯುತ್ತಿದೆ...
ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಅವನು ಒಂದು ದಿನ ಕಟ್ಟಿಗೆ ತರಲು ಕಾಡಿಗೆ ಹೋದಾಗ ತನ್ನ ಬಡತನವನ್ನು ನೆನೆದು ದುಃಖಿಸತೊಡಗಿದ.
ಆಗ ಅವನ ಎದುರು ಒಂದು ದೇವತೆ ಪ್ರತ್ಯಕ್ಷವಾಗಿ ಹೇಳಿತು- "ಅಯ್ಯಾ, ನಿನ್ನ ಬಡತನಕ್ಕಾಗಿ ದುಃಖಿಸಬೇಡ. ನಾನು ನಿನಗೆ ಏಳೂವರೆ ಗಡಿಗೆ ಹೊನ್ನನ್ನು ಕೊಡುತ್ತೇನೆ. ಅದರಿಂದ ನೀನು ಜೀವನಪೂರ್ತಿ ಸುಖವಾಗಿರಬಹುದು."
ಆತ ಒಪ್ಪಿ ಏಳೂವರೆ ಗಡಿಗೆ ಹೊನ್ನನ್ನು ತೆಗೆದುಕೊಂಡು ಮನೆಗೆ ಬಂದ. ಜೀವಮಾನದಲ್ಲೇ ಅಷ್ಟು ಹೊನ್ನನ್ನು ಕಂಡಿರದ ಆತ ಒಂದು ಕ್ಷಣ ಗಡಿಗೆಗಳನ್ನೇ ನೋಡುತ್ತಾ ನಿಂತ.
ತಕ್ಷಣ ಅವನ ಮನಸ್ಸಿಗೆ ಒಂದು ಆಲೋಚನೆ ಬಂತು- "ಈ ಗಡಿಗೆಗಳಲ್ಲಿ ಒಂದು ಗಡಿಗೆ ಮಾತ್ರ ಅರ್ಧ ತುಂಬಿದೆ. ಅದನ್ನೊಂದು ತುಂಬಿಸಿಬಿಟ್ಟರೆ ಮುಂದೆ ಇಡೀ ಜೀವನ ಸುಖವಾಗಿ ಕಳೆಯಬಹುದು."
ನಂತರ ಆತ ಗಡಿಗೆಯನ್ನು ತುಂಬಿಸಲು ಹಗಲು ಇರುಳು ದುಡಿಯ ತೊಡಗಿದ.
ದಿನಾಲೂ ಸಂಜೆ ದಿನದ ಗಳಿಕೆಯ ಹೊನ್ನನ್ನು ತಂದು ಗಡಿಗೆಗೆ ಹಾಕುತ್ತಿದ್ದ.
ಎಷ್ಟೋ ದಿನಗಳ ವರೆಗೆ ಹೀಗೆಯೇ ನಡೆಯಿತು...
ಗಡಿಗೆ ಮಾತ್ರ ಅರ್ಧದಷ್ಟೇ ಇತ್ತು. ತುಂಬುವ ಲಕ್ಷಣವೇ ಕಾಣಿಸಲಿಲ್ಲ.
ಆತ ಮಾತ್ರ ತನ್ನ ಆರೋಗ್ಯವನ್ನು ಕಳೆದುಕೊಂಡ. ಮನಃಶಾಂತಿಯನ್ನು ಕಳೆದುಕೊಂಡ. ಗಡಿಗೆಯನ್ನು ತುಂಬಿಸುವ ಹಟದಲ್ಲಿ ಕೃಶವಾಗಿ ಹೋದ. ನಿದ್ದೆಯನ್ನು ಕಳೆದುಕೊಂಡು ಹುಚ್ಚನಾಂತಾದ.
ದಿನಗಳು ಉರುಳಿದಂತೆ ಅವನಿಗೆ ಒಂದು ದಿನ ಅರಿವಾಯಿತು, ತಾನು ಎಡವಿದ್ದೇನೆಂದು. ಪುನಃ ಕಾಡಿಗೆ ಹೋಗಿ ದೇವತೆಯನ್ನು ಕರೆದ. ದೇವತೆ ಪ್ರತ್ಯಕ್ಷವಾಯಿತು.
ಆತ ಹೇಳಿದ- "ದಯವಿಟ್ಟು ನನ್ನ ಬಳಿಯಿರುವ ಗಡಿಗೆಗಳನ್ನು ಹಿಂದೆಗೆದುಕೊ. ಇರುವುದರಲ್ಲಿಯೇ ನಾನು ಸುಖವಾಗಿರಬಲ್ಲೆ ಎಂಬುದು ನನಗೆ ಗೊತ್ತಾಗಿದೆ."
ದೇವತೆ ಗಡಿಗೆಗಳನ್ನು ತೆಗೆದುಕೊಂಡು ಮಾಯವಾಯಿತು. ಆತ ಮನೆಗೆ ಬಂದು ಎಷ್ಟೋ ದಿನಗಳ ನಂತರ ಸುಖವಾಗಿ ನಿದ್ದೆ ಮಾಡಿದ.
ಇಂದು ನಾವೂ ಕೂಡ ನಮ್ಮ ಬಳಿಯಿರುವ ಏಳು ಗಡಿಗೆ ಹೊನ್ನನ್ನು ಲಕ್ಷಿಸದೆಯೇ ಇನ್ನುಳಿದ ಅರ್ಧ ಗಡಿಗೆಯನ್ನು ತುಂಬಿಸುವ ಯತ್ನದಲ್ಲಿ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆಯೇ?
No comments:
Post a Comment