October 31, 2007

ಶುಭ ನುಡಿಯೇ … (ಉತ್ತರ ಕನ್ನಡದ ಗಾದೆ – 59 ಮತ್ತು 60)

ಶುಭ ನುಡಿಯೇ ಮದುವಣಗಿತ್ತಿ ಅಂದರೆ ಹಂದರದೊಳಗಿದ್ದವರೆಲ್ಲಾ ಬೋಳೇರಾ ಎಂದಳು

ಮದುವಣಗಿತ್ತಿಯ ಬಳಿ ಏನಾದರೂ ಒಳ್ಳೆಯ ಮಾತನಾಡು ಅಂದರೆ ಮದುವೆಯ ಚಪ್ಪರದೊಳಗಿದ್ದವರೆಲ್ಲಾ ವಿಧವೆಯರಾ ಎಂದು ಹೇಳಿದಳ0ತೆ.

ಏನಾದರೂ ಒಳ್ಳೆಯ ಕೆಲಸವನ್ನು ಮಾಡಲು ಹೊರಟಾಗ ಅದರ ಬಗ್ಗೆ ಒಳ್ಳೆಯ ಮಾತನಾಡುವ ಬದಲು ನಿರಾಶಾವಾದದ ಮಾತನ್ನಡುವವರನ್ನು ಕುರಿತು ಇರುವ ಮಾತು ಇದು.
ಕೆಲಸಕ್ಕೆ ಹೊರಟಾಗ ಅಡ್ಡ ಬಾಯಿ ಹಾಕುವುದು ಎನ್ನುತ್ತಾರೆ ಇದಕ್ಕೆ ನಮ್ಮ ಕಡೆ.

ಇದೇ ಅರ್ಥದಲ್ಲಿ ಉಪಯೋಗಿಸುವ ಇನ್ನೊಂದು ಮಾತು; ಸೋಬಾನೆ ಹಾಡೇ ಸುಬ್ಬಕ್ಕ ಅಂದರೆ ಹಂದರದೊಳಗಿದ್ದವರೆಲ್ಲಾ ರಂಡೆ, ಮು0ಡೇರಾ ಎಂದಳು.

October 30, 2007

ಶಾಲೆ ಮಾಸ್ತರಿಗೆ … (ಉತ್ತರ ಕನ್ನಡದ ಗಾದೆ – 58)

ಶಾಲೆ ಮಾಸ್ತರಿಗೆ ಬುಧ್ಧಿಯಿಲ್ಲ, ಸ್ಟೇಷನ್ ಮಾಸ್ತರಿಗೆ ನಿದ್ದೆಯಿಲ್ಲ.

ಎಲ್ಲಾ ಶಾಲೆ ಮಾಸ್ತರುಗಳ ಕ್ಷಮೆ ಕೋರಿ ಇದನ್ನು ಬರೆಯುತ್ತಿದ್ದೇನೆ.
ನನಗೆ ಕಳಿಸಿದ ಎಲ್ಲ ಮಾಸ್ತರುಗಳಿಗೂ ನಾನು ಎಂದಿಗೂ ಚಿರರುಣಿ.
ಅವರೆಲ್ಲ ನೀಡಿದ ದಾರಿದೀಪಗಳ ಸಹಾಯದಿಂದ ಇಂದು ನಾನು ಈ ಮಟ್ಟವನ್ನು ತಲುಪಿದ್ದೇನೆ ಮತ್ತು ಮುನ್ನಡೆಯುತ್ತಿದ್ದೇನೆ.
ಎಲ್ಲಕ್ಕಿಂತ ಮಿಗಿಲಾಗಿ ನಾನು ಕೂಡ ಸುಮಾರು ಮೂರು ವರ್ಷಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ.

ಇದೆಲ್ಲದಕ್ಕೆ ಅಪವಾದವೆಂಬಂತೆ, ತಮ್ಮ ಕೆಲಸ ಸರಿಯಾಗಿ ಮಾಡದ ಕೆಲವು ಶಾಲೆ ಮಾಸ್ತರುಗಳು ಇರುವುದುಂಟು.
ಅಂಥವರನ್ನು ನೋಡಿ ಈ ಗಾದೆಯನ್ನು ಮಾಡಿರಲಿಕ್ಕೆ ಸಾಕು. ಇದನ್ನು ಇಲ್ಲಿಗೇ ಬಿಡುತ್ತೇನೆ. ವಿವರಣೆಯ ಅಗತ್ಯ ಇಲ್ಲ ಎಂದು ನಂಬಿದ್ದೇನೆ.

October 27, 2007

ಅಕ್ಕಸಾಲಿಗ ಚುಚ್ಚಿದರೆ … (ಉತ್ತರ ಕನ್ನಡದ ಗಾದೆ – 56 ಮತ್ತು 57)

ಅಕ್ಕಸಾಲಿಗ ಚುಚ್ಚಿದರೆ ನಚ್ಚ ನಚ್ಚಗೆ.

ನಚ್ಚಗೆ ಆಗುವುದು ಎಂದರೆ ಬೆಚ್ಚಾಗಾಗುವಿಕೆ ಅಥವಾ ಹಿತವಾಗುವಿಕೆ.
ನೋವಿದ್ದಾಗ ಶಾಖ ಮಾಡಿಕೊಂಡರೆ ನಚ್ಚಗಾಗುತ್ತದೆ ಎನ್ನುವುದು ರೂಢಿ.
ಯಾರೋ ಕಿವಿ ಚುಚ್ಚಿದರೆ ನಚ್ಚಗಾಗುವುದಿಲ್ಲ ಆದರೆ ಅಕ್ಕಸಾಲಿಗ ಚುಚ್ಚಿದರೆ ಮಾತ್ರ ನಚ್ಚಗಾಗುತ್ತದೆ.

ನಾವು ಹೇಳಿದರೆ ಆ ಮಾತು ಪಥ್ಯವಾಗುವುದಿಲ್ಲ ಆದರೆ ಬೇರೆ ಯಾರೋ ಒಬ್ಬ ನಿರ್ದಿಷ್ಟ ವ್ಯಕ್ತಿ ಹೇಳಿದರೆ ಮಾತ್ರ ಮನಸ್ಸಿಗೆ ನಾಟುತ್ತದೆ ಎಂಬ ಅರ್ಥವನ್ನು ಕೊಡುತ್ತದೆ.

ಇದೇ ಅರ್ಥದಲ್ಲಿ ಉಪಯೋಗಿಸಲ್ಪಡುವ ಇನ್ನೊಂದು ಗಾದೆ ಎಂದರೆ ಶಂಖದಿಂದ ಬಿದ್ದರೇ ತೀರ್ಥ. ಬೇರೆ ಯಾವುದೋ ಪಾತ್ರೆಯಿಂದ ಬಿದ್ದರೂ, ಅದು ತೀರ್ಥವೇ ಆಗಿದ್ದರೂ ತೀರ್ಥವೆಂದು ಅನಿಸುವುದಿಲ್ಲ. ಆದರೆ ಅದೇ ನೀರು ಶಂಖದಿಂದ ಬಿದ್ದಾಗ ತೀರ್ಥವೆಂದು ಅನಿಸುತ್ತದೆ.

October 26, 2007

ಎಲ್ಲ ಕೆಲಸ ಆದ ಮೇಲೆ … (ಉತ್ತರ ಕನ್ನಡದ ಗಾದೆ – 55)

ಎಲ್ಲ ಕೆಲಸ ಆದ ಮೇಲೆ ಆದ ಮೇಲೆ ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳು.

ಯಾರೋ ಕೆಲಸ ಮಾಡುತ್ತಿದ್ದಾಗ ಸಹಾಯಕ್ಕೆ ಹೋಗದ ಅವಳು ಕೆಲಸ ಮುಗಿದ ಮೇಲೆ ಸಹಾಯ ಮಾಡಲು ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳಂತೆ.

ನೀವು ಮಾಡುತ್ತಿರುವ ಕೆಲಸ ಮುಗಿದ ನಂತರ ಯಾರಾದರೂ ಸಹಾಯ ಮಾಡುತ್ತೇನೆಂದು ಬಂದಾಗ (ಮೊದಲು ಬರದೇ) ಈ ಗಾದೆಯು ನಿಮಗೂ ಕೂಡ ಉಪಯೋಗಕ್ಕೆ ಬರುತ್ತದೆ.

October 24, 2007

ಬಡವ ದೇವರನ್ನು … (ಉತ್ತರ ಕನ್ನಡದ ಗಾದೆ – 53 ಮತ್ತು 54)

ಬಡವ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಹುಬ್ಬು ಹಾರಿಸಿತ್ತು.

ಹುಬ್ಬು ಹಾರಿಸುವುದು ಎಂದರೆ ಮಾತನಾಡದೆಯೇ 'ಏನು' ಎಂದು ಕೇಳುವುದು.
ದೇವರು ಬಡವ ಎಂದು ಗೊತ್ತಾದರೆ ಅವನ ಎದುರಿನಲ್ಲಿ ಇಟ್ಟಿರುವ ಬಿಲ್ವ ಪತ್ರೆಯೂ ಕೂಡ ಸೊಕ್ಕಿನಿಂದ 'ಏನು' ಎಂದು ದೇವರನ್ನು ಪ್ರಶ್ನಿಸುತ್ತದೆ, ಹುಬ್ಬು ಹಾರಿಸುವ ಮೂಲಕ.

ಮೆತ್ತಗಿರುವವರನ್ನು ಕಂಡರೆ ಎಂಥ ಯೋಗ್ಯತೆ ಇಲ್ಲದವರೂ ಕೂಡ ಕೀಳಾಗಿ ನೋಡಲು ಪ್ರಯತ್ನಿಸುತ್ತಾರೆ ಎಂಬ ಅರ್ಥವನ್ನು ಕೊಡುತ್ತದ ಈ ಗಾದೆ.

ಸಾಮಾನ್ಯವಾಗಿ ಇದೇ ಅರ್ಥವನ್ನು ಕೊಡುವ ಇನ್ನೊಂದು ಮಾತೆಂದರೆ ಮೆತ್ತಗಿರುವಲ್ಲೇ ಮತ್ತೊಂದು ಗುದ್ದಲಿ ಅಗೆಯುತ್ತಾರೆ. ಮಣ್ಣನ್ನು ಅಗೆಯಲು ಹೊರಟಾಗ ಎಲ್ಲರೂ ಮೆತ್ತಗಿರುವ ಜಾಗವನ್ನು ಹುಡುಕುತ್ತಾರೆಯೇ ವಿನಹ ಗಟ್ಟಿಯಿರುವ ಜಾಗವನ್ನಲ್ಲ. ಎಲ್ಲಿ ಮಣ್ಣು ಮೆತ್ತಗಿದೆಯೋ ಅಲ್ಲಿಯೇ ಮತ್ತೊಂದು ಗುದ್ದಲಿ ಮಣ್ಣನ್ನು ಹೆಚ್ಚು ತೆಗೆದುಕೊಳ್ಳುತ್ತಾರೆ.
ಅಂತೆಯೇ ಮೆತ್ತಗಿರುವ ಮನುಷ್ಯನಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.

October 23, 2007

ಅಪ್ಪನನ್ನು ದೂಡಿ … (ಉತ್ತರ ಕನ್ನಡದ ಗಾದೆ – 52)

ಅಪ್ಪನನ್ನು ದೂಡಿ ಮಾವಿನ ಹಣ್ಣು ಆರಿಸುವವನು.

ದೂಡುವುದು ಎಂದರೆ ತಳ್ಳುವುದು.
ಅಪ್ಪ, ಮಗ ಇಬ್ಬರೂ ಮಾವಿನ ಹಣ್ಣುಗಳನ್ನು ಆರಿಸುತ್ತಿರುವಾಗ ಮಗನಿಗೆ ಒಂದು ಒಳ್ಳೆಯ ಮಾವಿನ ಹಣ್ಣು ಬಿದ್ದಿರುವುದು ಕಾಣಿಸುತ್ತದೆ.
ಅಪ್ಪ ಅದರ ಹತ್ತಿರ ಹೋಗಿಬಿಟ್ಟಿದ್ದಾನೆ.
ಇನ್ನೇನು ಅಪ್ಪ ಅದನ್ನು ಆರಿಸಿಕೊಳ್ಳುತ್ತಾನೆ ಎನ್ನುವಷ್ಟರಲ್ಲಿ ಮಗ ಬಂದು ಅಪ್ಪನನ್ನು ತಳ್ಳಿ ಚೆನ್ನಾಗಿರುವ ಆ ಮಾವಿನ ಹಣ್ಣನ್ನು ತಾನು ಎತ್ತಿಕೊಳ್ಳುತ್ತಾನೆ.

ಚೆನ್ನಾಗಿರುವ ವಸ್ತುವನ್ನು ಅಪ್ಪನಿಂದ ಮಗ/ ಮಗಳು ಹೇಗಾದರೂ ಮಾಡಿ ಕಿತ್ತುಕೊಂಡಾಗ ಈ ಮಾತನ್ನು ಹೇಳುತ್ತಾರೆ.

October 22, 2007

ಮೊದಲು ಹುಟ್ಟಿದ … (ಉತ್ತರ ಕನ್ನಡದ ಗಾದೆ – 51)

ಮೊದಲು ಹುಟ್ಟಿದ ಕಿವಿಗಿಂತ ನಂತರ ಹುಟ್ಟಿದ ಕೋಡು ಚೂಪು.

ಹಸುಗಳಿಗೆ ಕಿವಿ ಹುಟ್ಟುವಾಗಲೇ ಇದ್ದರೆ, ಕೋಡು ನಂತರದಲ್ಲಿ ಬೆಳೆಯುವಂತದು.
ಮೊದಲೇ ಹುಟ್ಟಿದರೂ ಕೂಡ ಕಿವಿ ಚೂಪಾಗಿಲ್ಲ ಆದರೆ ಕೋಡು ನಂತರ ಹುಟ್ಟಿದರೂ ಚೂಪಗಿರುತ್ತದೆ.

ಹಿರಿಯರಿಗಿಂತಲೂ ಕಿರಿಯರು ಜಾಣ್ಮೆ ತೋರಿದಾಗ ಈ ಮಾತನ್ನು ಹೇಳುವುದು ವಾಡಿಕೆ.