February 11, 2008

ಹುತ್ತವನ್ನು ನೋಡಿ … (ಉತ್ತರ ಕನ್ನಡದ ಗಾದೆ – 156 ಮತ್ತು 157)

ಹುತ್ತವನ್ನು ನೋಡಿ ಹಾವನ್ನು ಅಳೆಯಬಾರದು.

ಹಾವಿನ ಗಾತ್ರ ಅಥವಾ ವಿಷ ಹುತ್ತದ ಗಾತ್ರವನ್ನು ಅವಲಂಬಿಸಿ ಇರುವುದಿಲ್ಲ. ಹುತ್ತ ಸಣ್ಣದಿದ್ದರೂ ಅದರೊಳಗಿರುವ ಹಾವು ದೊಡ್ಡದಿರಬಹುದು ಅಥವಾ ಹುತ್ತ ನೋಡಲು ದೊಡ್ಡದಾಗಿ ಕಂಡರೂ ಹಾವು ಸಣ್ಣದಿರಬಹುದು. ಒಬ್ಬ ಮನುಷ್ಯನ ಗಾತ್ರವನ್ನು ನೋಡಿ ಅವನ ಸಾಮರ್ಥ್ಯ, ಬುದ್ಧಿಶಕ್ತಿಯನ್ನು ಅಳೆಯಬಾರದು
ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಇನ್ನೊ ಸರಿಯಾಗಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿಯ ಬಾಹ್ಯ ಇರುವಿಕೆಯನ್ನು ನೋಡಿ ಅವನನ್ನು ಅಳೆಯಬಾರದು, ಆಂತರ್ಯದಲ್ಲಿ ಅವನು ಬೇರೆಯೇ ಆಗಿರಬಹುದು. ಚೆನ್ನಾಗಿ ಮಾತನಾಡುವವರೆಲ್ಲಾ ಒಳ್ಳೆಯವರು ಎನ್ನಲು ಬರುವುದಿಲ್ಲ ಅಲ್ಲವೇ? ಸಾಮಾನ್ಯವಾಗಿ ಎಲ್ಲರೂ ಬಳಸುವುದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಆದರೆ ಮೇಲೆ ಹೇಳಿದ ಗಾದೆ ಅದಕ್ಕಿಂತ ವಿಭಿನ್ನವಾದುದು. ಭಿನ್ನತೆ ಎಲ್ಲಿ ಎಂದರೆ, ಮೂರ್ತಿ ಚಿಕ್ಕದಾದರೂ.... ಗಾದೆಯನ್ನು ಒಳ್ಳೆಯ ಗುಣಗಳನ್ನು ಹೇಳುವಾಗ ಉಪಯೋಗಿಸಿದರೆ, ಹುತ್ತವನ್ನು.... ಗಾದೆಯನ್ನು ಕೆಟ್ಟ ವ್ಯಕ್ತಿಯಿಂದ ಮೋಸ ಹೋಗದಿರು ಎನ್ನುವಾಗ, ಅಥವಾ ಅನಿಶ್ಚಿತವಾದುದನ್ನು ಹೇಳುವಾಗ ಉಪಯೋಗಿಸುತ್ತಾರೆ.

2 comments:

Nadi Basavaraju said...

'ಮುಖ ನೋಡಿ ಮಣೆ ಹಾಕಬಾರದು' ಎಂಬ ಗಾದೆ ಕೂಡ ಮೇಲಿನದಕ್ಕೆ ಸಮನಾರ್ಥಕವಾಗಿದೆ. ನಿಮ್ಮ ಗಾದೆಯ ಲೇಖನ ಚೆನ್ನಾಗಿದೆ. ನನಗೂ ಗಾದೆಗಳೆಂದರೆ ಆಸಕ್ತಿ ಹೆಚ್ಚು. ಹೊಸ ಹೊಸ ಗಾದೆಗಳು ನಿಮ್ಮ ಬ್ಲಾಗ್‌ನಿಂದ ಪರಿಚಯವಾಗಲಿ. ನನಗೆ ಸರಿಯಯಾಗಿ ಅರ್ಥವಾಗದ ಗಾದೆಯಿದು "ಭಿನ್ನಾಣಗಿತ್ತಿ ಹಬ್ಬ ಮಾಡವಳೆ ಇಣಿಕಿನೋಡೊ ದಾಸಯ್ಯ". ಇದು ಹಳೆ ಮೈಸೂರಿನ ಕಡೆ ಬಳಕೆಯಲ್ಲಿದೆ. ನಿಮಗೆ ಅರ್ಥ ಗೊತ್ತಿದ್ದರೆ ತಿಳಿಸಿ.

Seema S. Hegde said...

ಬಸವರಾಜು ಅವರೇ,
ಹೊಸ ವಿಷಯಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗ್ ನೋಡಿದ್ದೇನೆ. ಚೆನ್ನಾಗಿದೆ ನಿಮ್ಮ ಬರವಣಿಗೆ.
'ಮುಖ ನೋಡಿ ಮಣೆ ಹಾಕಬಾರದು' ಎಂಬ ಗಾದೆ ಸ್ವಲ್ಪ ಭಿನ್ನವಾಗಿದೆ ಎಂದು ನನ್ನ ಕಲ್ಪನೆ. ಅಂದರೆ ಶ್ರೀಮಂತರ ಮತ್ತು ಬಡವರ ನಡುವೆ ಭೇದವನ್ನು ತೋರಿಸುವವರ ಬಗ್ಗೆ ಹೇಳುವ ಮಾತು. ಶ್ರೀಮಂತರಿಗೆ ಒಳ್ಳೆಯ ಆದರ, ಬಡವರನ್ನು ಕಂಡೆ ತಿರಸ್ಕಾರ ಮಾಡುವವರ ಬಗ್ಗೆ ಹೇಳುತ್ತಾರೆ. ಇನ್ನು 'ಭಿನ್ನಾಣಗಿತ್ತಿ ಹಬ್ಬ ಮಾಡವಳೆ ಇಣಿಕಿನೋಡೊ ದಾಸಯ್ಯ' ಇದನ್ನು ನಾನು ಕೇಳಿರಲಿಲ್ಲ. ಯಾವ ಸಂದರ್ಭದಲ್ಲಿ ಬಳಸುತ್ತಾರೆ ಅನ್ನೋದೂ ಕೂಡ ಗೊತ್ತಾಗ್ತಾ ಇಲ್ಲ. ಯಾರದ್ರೂ ಮೈಸೂರ ಕಡೆಯವರು ಸಿಕ್ಕರೆ ತಿಳಿದುಕೊಳ್ಳುವ ಆಸಕ್ತಿ ನನಗೂ ಇದೆ.