ಈ ಮೊದಲೊಮ್ಮೆ ಮದುವೆಯ ವಿಚಾರವನ್ನು ಬರೆದಿದ್ದೆ. ಆದರೆ ಅದನ್ನು ಪೂರ್ತಿ ಬರೆದ ಸಮಾಧಾನವಿರಲಿಲ್ಲ. ಈಗ ಅದೇ ವಿಚಾರವನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗುತ್ತಿದ್ದೇನೆ... ಹೆಣ್ಣುಮಕ್ಕಳಿಗೆ ಮದುವೆಯಾಗಿ ಹೋದ ತಕ್ಷಣ ಒಂಥರಾ ವಿಚಿತ್ರ ಅನುಭವ. ತವರು ಮನೆಯಿಂದ ಹೊರಗೆ ಕಳುಹಿಸಿಬಿಟ್ಟಿದ್ದಾರೆ. ಅದು ಇನ್ನು ಮುಂದೆ ತನ್ನ ಮನೆಯಲ್ಲ. ಆ ಮನೆಯಲ್ಲಿ ತನ್ನ existence ಗೆ ಅರ್ಥ ಇಲ್ಲ. ಅಥವಾ ಬೇರೆಯದೇ ಆದ ಅರ್ಥವಿದೆ. ಗಂಡನ ಮನೆ, ಅಲ್ಲಿಯ ಆಚಾರ ವಿಚಾರಗಳು ತೀರಾ ಹೊಸದು. ಆ ಮನೆ ತನ್ನದೆಂದು ಅನಿಸುವುದಿಲ್ಲ. ಮನೆಯೇ ಇಲ್ಲದಂತಾದ ಅನುಭವ. ಮದುವೆಯಾದ ಮರುಕ್ಷಣದಿಂದಲೇ ಅವಳ ಊರು, ಮನೆ ಎಲ್ಲವೂ ಬದಲಾಗುತ್ತದೆ. ಇದೆಲ್ಲಾ ಆಗುತ್ತದೆ ಎಂದು ಗೊತ್ತಿದ್ದರೂ ಏನೋ ಒಂದು ತರಹದ ಮನಸ್ಸು ಒಪ್ಪಿಕೊಳ್ಳಲಾರದ ಸ್ಥಿತಿ. ನಿಧಾನಕ್ಕೆ ಮನಸ್ಸಿಗೆ ಬುದ್ಧಿ ಹೇಳುತ್ತಾ ಗಂಡನ ಮನೆಗೆ ಒಗ್ಗಿಕೊಳ್ಳುತ್ತಾಳೆ. ತವರನ್ನು ಮರೆತಳೆಂದು ಅದರ ಅರ್ಥವಲ್ಲ. ಗಂಡನ ಮನೆಯಲ್ಲಿದ್ದರೂ ಅವಳಿಗೆ ತನ್ನ ತವರಿನ ಚಿಂತೆ ಇದ್ದೆ ಇದೆ. ನಾಲ್ಕು ದಿನ ತವರಿಗೆ ಬಂದರೂ ಗಂಡನ ಮನೆಯ ಚಿಂತೆಯನ್ನು ಮಾಡುತ್ತಾಳೆ! ಇದಕ್ಕೆಲ್ಲಾ ಕನ್ನಡದ ಜಾನಪದ ಸಾಹಿತ್ಯದಲ್ಲಿ ಸಾಕಷ್ಟು ಉದಾಹರಣೆಗಳಿವೆ ಬಿಡಿ. ಅವಳಿಗೆ ಗಂಡನ ಮನೆಯ ಮೇಲೆ ಜಾಸ್ತಿ ಪ್ರೀತಿಯೋ ಅಥವಾ ತವರು ಮನೆಯ ಮೇಲೋ? ಗಂಡನ ಮೇಲೆ ಜಾಸ್ತಿ ಪ್ರೀತಿಯೋ ಅಥವಾ ಅಣ್ಣ/ತಮ್ಮನ ಮೇಲೋ? ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ.
ಇದು ನಾನು ಇಲ್ಲಿಗೆ ಬಂದು ತಲುಪುವ ಮುನ್ನ ಇನ್ನೂ ಧಾರವಾಡದಲ್ಲಿ ಇದ್ದಾಗಲೇ ನಡೆದ ಮಾತುಕತೆ. ನನ್ನ ಬಳಿ computer ಇರದಿದ್ದ ಕಾರಣ ಮತ್ತು ನನ್ನ ಕೆಲಸ ತುಂಬಾ urgent ಇದ್ದ ಕಾರಣ ನನ್ನ junior ರಾಜೇಶನ room ನಲ್ಲಿ ಕುಳಿತು ಅವನ computer ನಲ್ಲಿ ನನ್ನ ಕೆಲಸ ಮಾಡಿಕೊಳ್ಳುತ್ತಿದ್ದೆ. ನನ್ನ ಹತ್ತಿರದವರೆಲ್ಲರಿಗೂ ಗೊತ್ತು ನನ್ನ ಮಾತಿನಲ್ಲಿ ಪದೇ ಪದೇ ಇಣುಕುವವರೆಂದರೆ ರಾಜೀವ ಮತ್ತು ರಘು. ರಾಜೀವ ಗಂಡನಾದರೆ ರಘು ನನ್ನ ತಮ್ಮ. ಅಂತೆಯೇ ರಾಜೇಶನ ಜೊತೆಯಲ್ಲಿ ಮಾತನಾಡುವಾಗಲೂ ನಾನು ಎಂದಿನಂತೆಯೇ ರಾಜೀವ...ರಘು....ಎಂದಿರಬೇಕು... ಒಂದು ದಿನ ಏನೋ ಬರೆಯುತ್ತಾ (type ಮಾಡುತ್ತಾ) ಕುಳಿತಿದ್ದೆ; ರಾತ್ರಿಯಾಗಿಬಿಟ್ಟಿತ್ತು. ರಾಜೇಶ ನನ್ನನ್ನು ನನ್ನ room ನ ವರೆಗೂ ಕಳುಹಿಸಲೆಂದು ಬಂದ. ದಾರಿಯಲ್ಲಿ ನನ್ನನ್ನು ಕೇಳಿದ, "ನಿನಗೆ ಯಾರ ಮೇಲೆ ಹೆಚ್ಚು ಪ್ರೀತಿ? ರಘುನ ಮೇಲೋ ರಾಜೀವನ ಮೇಲೋ?" ನನಗೆ ತಕ್ಷಣದಲ್ಲಿ ನೆನಪಾಗಿದ್ದು ರಘು ಹೇಳಿಕೊಟ್ಟ readymade ಉತ್ತರ. "ಪ್ರೀತಿ ಎನ್ನುವುದು ಹಾಗೆ ಅಳೆಯಲು, ಚೂರು ಮಾಡಿ ಇಬ್ಬರಿಗೂ ಕೊಡಲು ಬಾರದ್ದು. ಅದನ್ನು ಇಡಿಯಾಗಿಯೇ ಇಬ್ಬರಿಗೂ ಕೊಡುತ್ತೇನೆ." (ಇದು Indian Army ಯ officer’s ಪರೀಕ್ಷೆಯ psychological test ನಲ್ಲಿ ಖಾಯಂ ಕೇಳುವ ಪ್ರಶ್ನೆಯಂತೆ; ಅಭ್ಯರ್ಥಿ ಒಂದು ವೇಳೆ select ಆದರೆ ತನ್ನ ಕೆಳಗಿನ ಸೈನಿಕರ ನಡುವೆ ತಾರತಮ್ಯ ತೋರುತ್ತಾನೋ ಇಲ್ಲವೊ ಎಂದು ಅಳೆಯಲು! ಹಾಗೆಯೇ ಅವನಿಗೂ ಕೇಳಿದ್ದರಂತೆ. ಇದೇ ಉತ್ತರವನ್ನೂ ಕೊಟ್ಟಿದ್ದನಂತೆ!).
ರಾಜೇಶನಿಗೆ ಸಮಾಧಾನವಾದಂತೆ ಕಾಣಲಿಲ್ಲ. ಮತ್ತೆ ಕೇಳಿದ, "ಇಲ್ಲ, ನೀನು ಸರಿಯಾದ ಉತ್ತರ ಹೇಳಲೇ ಬೇಕು." ನಾನೆಂದೆ, "ಅರೆ ಇದೆಂತ ಪ್ರಶ್ನೆ? ಇಬ್ಬರ ಮೇಲೂ ಅಷ್ಟೇ ಪ್ರೀತಿ." ಅವನು ಅದೇ ಉತ್ತರಕ್ಕಾಗಿ ಕಾಯುತ್ತಿದ್ದವನಂತೆ ತಕ್ಷಣ ಹೇಳಿದ, "ಎಷ್ಟೋ ವರ್ಷ ಒಟ್ಟಿಗೆ ಬದುಕಿದ ತಮ್ಮನೂ ಮತ್ತು ನಿನ್ನೆ ಮೊನ್ನೆ ಬಂದ ಗಂಡನೂ ಹೇಗೆ ಅಷ್ಟೇ ಪ್ರೀತಿಗೆ ಪಾತ್ರರಾಗುತ್ತಾರೆ? ಇಪ್ಪತೈದು ವರ್ಷ ಒಟ್ಟಿಗಿದ್ದ ತಮ್ಮನಿಗಿಂತ ಎರಡು ವರ್ಷ ನೋಡಿದ ಗಂಡನೇ ಹೆಚ್ಚಾ?" ಅರೆ ಹೌದಲ್ವಾ?!! ನಾನು ಅರೆಕ್ಷಣ ದಿಗಿಲುಗೊಂದೆ. ಅವನು ಹೇಳುತ್ತಿರುವುದು ಒಂದು ಲೆಕ್ಕದಲ್ಲಿ ನಿಜವೆನಿಸಿತು. ಒಂದು ಕ್ಷಣ ಬಿಟ್ಟು ಸುಧಾರಿಸಿಕೊಂಡು ಅವನಿಗೆ ಹೇಳಿದೆ, "ನೋಡು, ಇದರಲ್ಲಿ ಯಾರು ಹೆಚ್ಚೂ ಅಲ್ಲ, ಯಾರು ಕಡಿಮೆಯೂ ಅಲ್ಲ. ರಘುನ ಜೊತೆ ನಾನು ಇಪ್ಪತ್ತೈದು ವರ್ಷಗಳು ಬೆಳೆದಿದ್ದೇನೆ. ಆದರೆ ರಾಜೀವನ ಜೊತೆ ಮುಂದೆ ಇಪ್ಪತ್ತೈದು ವರ್ಷಗಳ ಕಾಲ ಬೆಳೆಯಲಿದ್ದೇನೆ. ರಘು ಕೂಡ ನಾಳೆ ಅವನ ಹೆಂಡತಿ ಬಂದ ಮೇಲೆ ನನ್ನನ್ನು ಪ್ರೀತಿಸಿದಷ್ಟೇ ಅವಳನ್ನೂ ಪ್ರೀತಿಸುತ್ತಾನೆ, ಪ್ರೀತಿಸಬೇಕು. ಇದು ಹೀಗೆಯೇ ನಡೆದರೆ ಮಾತ್ರ ಬದುಕಿಗೊಂದು ಅರ್ಥವಿರುತ್ತದೆ. ನಾನು ಅವನ ಬಗ್ಗೆ possessive ಆಗಲಾರೆ. ನಾನು possessive ಆದಷ್ಟೂ ಅದು ನಮ್ಮಿಬ್ಬರ ಸಂಬಂಧಕ್ಕೂ ಹಾಳು. ಅತಿಯಾದ possessiveness ಯಾವತ್ತಿದ್ದರೂ ಸಂಬಂಧವನ್ನು ಕೆಡಿಸುತ್ತದೆ. ಅವನಿಗೂ ಅವನದೇ ಆದ ಜೀವನವಿರಬೇಕು. ಅದರಲ್ಲಿ ನನಗೊಂದು ಜಾಗ ಇದ್ದರೆ ಸಾಕು. ಅಂತೆಯೇ ನನಗೂ ನನ್ನದೇ ಆದ ಜೀವನವಿದೆ, ಅದರಲ್ಲಿ ಅವನಿಗೆ ಜಾಗ ಎಂದೂ ಇದ್ದೇ ಇದೆ. ಒಬ್ಬರನ್ನೊಬ್ಬರು ಮರೆತುಬಿಡುತ್ತೇವೆ ಎಂದಲ್ಲ, ಬೇರೆ ಬೇರೆ ದಾರಿಯಲ್ಲಿ ನಡೆಯುತ್ತಿರುತ್ತೇವೆ ಅಷ್ಟೇ." ಮುಂದೆ ಅವನೂ ಮಾತನಾಡಲಿಲ್ಲ, ಅಂತೆಯೇ ನಾನೂ ಕೂಡ. ಬಹುಶ ಇಬ್ಬರೂ ಯೋಚಿಸುತ್ತಿದ್ದೆವು... ರಾಜೇಶನ ಪ್ರಶ್ನೆಯ ಬಗ್ಗೆ ನಾನು ಯೋಚಿಸುತ್ತಿದ್ದರೆ ಅವನು ನನ್ನ ಉತ್ತರದ ಬಗ್ಗೆ ಯೋಚಿಸುತ್ತಿದ್ದ.
8 comments:
"ಅತಿಯಾದ possessiveness ಯಾವತ್ತಿದ್ದರೂ ಸಂಬಂಧವನ್ನು ಕೆಡಿಸುತ್ತದೆ. ಅವನಿಗೂ ಅವನದೇ ಆದ ಜೀವನವಿರಬೇಕು. ಅದರಲ್ಲಿ ನನಗೊಂದು ಜಾಗ ಇದ್ದರೆ ಸಾಕು. ಅಂತೆಯೇ ನನಗೂ ನನ್ನದೇ ಆದ ಜೀವನವಿದೆ, ಅದರಲ್ಲಿ ಅವನಿಗೆ ಜಾಗ ಎಂದೂ ಇದ್ದೇ ಇದೆ"
ಆದರೆ ಕೆಲ ಸಂಬಂಧಗಳಲ್ಲಿ possessive ಆಗದೇ ಇರೋದು ತುಂಬಾ ಕಷ್ಟ ಕಣ್ರಿ. ಎಷ್ಟು ಪ್ರಯತ್ನಿಸಿದರೂ ಮನಸ್ಸು ಹಕ್ಕು ಸ್ಥಾಪಿಸಲು ಹೋರಟೇ ಬಿಡುತ್ತದೆ. ಚಿಕ್ಕ ಜಾಗದಿಂದ ಮಾತ್ರ ತೃಪ್ತಿ ಹೊಂದಲಂತೂ ಸಾದ್ಯವಿಲ್ಲಾ ಬಿಡಿ,Atleast In my case.
ರಘುನ ಜೊತೆ ನಾನು ಇಪ್ಪತ್ತೈದು ವರ್ಷಗಳು ಬೆಳೆದಿದ್ದೇನೆ. ಆದರೆ ರಾಜೀವನ ಜೊತೆ ಮುಂದೆ ಇಪ್ಪತ್ತೈದು ವರ್ಷಗಳ ಕಾಲ ಬೆಳೆಯಲಿದ್ದೇನೆ.
GOLDEN WORDS.
Seemakka, very nice. heege baritha iru... thank you.
ಸೀಮಕ್ಕ...
"ರಘುನ ಜೊತೆ ನಾನು ಇಪ್ಪತ್ತೈದು ವರ್ಷಗಳು ಬೆಳೆದಿದ್ದೇನೆ. ಆದರೆ ರಾಜೀವನ ಜೊತೆ ಮುಂದೆ ಇಪ್ಪತ್ತೈದು ವರ್ಷಗಳ ಕಾಲ ಬೆಳೆಯಲಿದ್ದೇನೆ."
ಎಂಥ ಸಾಲಿದು. ಅಲ್ಲೇ ಹಿಡಿದು ಕಟ್ಟಿಹಾಕಿಬಿಡುವ ಸಾಲು.
ಹೌದಲ್ದಾ? ಮದುವೆಯಾದ ಆ ಮೊದಲ ದಿನಗಳು ಎಷ್ಟು ಸಂಧಿಗ್ದತೆಯ ದಿನಗಳು! ಅಳು ಬರ್ತು ಈಗ ನೆನೆಸ್ಗ್ಯಂಡ್ರೂ...
ಚಂದ ಲೇಖನ ಸೀಮಕ್ಕಾ.
ಸೀಮಾಜಿ,
ನರಸಿಂಹಸ್ವಾಮಿಯವರ ಕವನ ನೆನಪಾಗುತ್ತಿದೆ:
"ನಮ್ಮೂರು ಚಂದವೊ, ನಿಮ್ಮೂರು ಚಂದವೊ
ಎಂದೆನ್ನ ಕೇಳಬೇಡಿ!"
ಎರಡು ಕಣ್ಣುಗಳಲ್ಲಿ ಯಾವುದರ ಮೇಲೆ ಪ್ರೀತಿ ಜಾಸ್ತಿ ಎಂದು ಕೇಳಿದಂತೆ ಇದು.
@ ಸಂತೋಷ ಕುಮಾರ,
ಆದರೆ ಅತಿಯಾದ possessiveness ನಿಜಕ್ಕೂ ಒಳ್ಳೆಯದಲ್ಲ. ವಿಚಾರ ಮಾಡಿ ನೋಡಿ :)
@ ವಿಕಾಸ,
ಅಷ್ಟೆಲ್ಲಾ ಇಷ್ಟ ಆಗೋತಾ? ಮೆಚ್ಚಿದ್ದಕ್ಕೆ thanks ಕಣೋ.
@ ಶಾಂತಲಾ,
ಇಷ್ಟ ಪಟ್ಟಿದ್ದಕ್ಕೆ thanks. ಮದುವೆ ಆದ ಮೊದಲಿಗೆ ಆನಂತೂ ಗಳ ಗಳ ಅಳ್ತಿದ್ದಿ. ರಾಜೀವಂಗೆ ಯಂತ ಮಾಡವು ಹೇಳಿ ಗೊತ್ತೆ ಅಗ್ತಿತ್ತಿಲ್ಯಡ. ಮನೆಯಿಂದ ಹೊರಡಕರೆ ಶುರು ಮಾಡಿದ್ದಿ... ಹೆಣ್ಣು ಒಪ್ಸಕರೆ ಆ ಭಟ್ರು ಲಕ್ಷ್ಮಿ-ನಾರಾಯಣರ ಕಥೆ ಬೇರೆ ಹೇಳ್ಬುಟ್ರು, ಯನ್ನ ಭಾವ 'ಯಂಗ ಇಷ್ಟು ದಿನ ಚೊಲೋ ನೋಡ್ಕ್ಯಂಜ್ಯ, ಮುಂದೆ ನೀನೂ ಹಂಗೆ ನೋಡ್ಕ್ಯಳವು' ಅಂದ ರಾಜೀವಂಗೆ... ಯಂಗೆ ತಗ ಎಲ್ಲಿತ್ತನ ಅಳು!! ಎಲ್ಲಾ photo ದಲ್ಲೂ ಕೆಂಪೀ ಮೂಗು!! ಈಗ ರಾಜೀವ ಆ photos ತೋರ್ಶ್ಗ್ಯಂಡು ನೆಗ್ಯಾಡ್ತಾ.
@ ಸುನಾಥ್,
ನೀವು ಹೇಳಿದ್ದು ನಿಜ. ಯಾವ ಕಣ್ಣ ಮೇಲೆ ಪ್ರೀತಿ ಜಾಸ್ತಿ ಅಂತ ಹೇಳೋಕೆ ಆಗಲ್ಲ ಅಲ್ವಾ?
ಒಳ್ಳೆಯ ಉದಾಹರಣೆ. Thanks.
ಎಲ್ಲ ಹೆಣ್ಣುಮಕ್ಕಳೂ ಎದುರಿಸುವ ಪ್ರಶ್ನೆಗೆ ಒಳ್ಳೆಯ ಲಾಜಿಕಲ್ ಉತ್ತರ ಕೊಟ್ಟಿದ್ದೀರಿ. ಪೊಸೆಸ್ಸಿವ್'ನೆಸ್ ಬಗ್ಗೆ ಬರ್ದಿದ್ದು ನೂರಕ್ಕೆ ನೂರು ನಿಜ. ಆ ಸತ್ಯದ ಜೊತೆಗೆ ಈಗೋ ಮತ್ತು ಎಕ್ಸ್'ಪೆಕ್ಟೇಶನ್ ಪ್ರಶ್ನೆಯನ್ನೂ ಸೇರಿಸಬಹುದು.
ಈಗೋ ಕಡಿಮೆಯಿದ್ದಷ್ಟೂ ಹೊಂದಾಣಿಕೆ ಸುಲಭ, ಜೀವನ ಸಹ್ಯ. ಹಾಗೇನೇ ಇನ್ನೊಬ್ಬರಿಂದ ನಾವು ಏನನ್ನು ಅಪೇಕ್ಷಿಸದೆ ಇದ್ದರೂ ಸರಳ ಜೀವನ ಸಾಧ್ಯ. ಅಲ್ಲವೆ?
ಸುಪ್ತದೀಪ್ತಿ ಅವರೇ,
ನೀವು ಹೇಳಿದ್ದಕ್ಕೆ ನನ್ನ ಸಂಪೂರ್ಣ ಸಹಮತವಿದೆ. ನಿಜ ಬೇರೆಯವರಿಂದ expectation ಇಲ್ಲದೇ ಇದ್ದರೆ ಯಾವುದಕ್ಕೂ ಬೇಜಾರಾಗುವ ಪ್ರಶ್ನೆಯೇ ಇಲ್ಲ. 'logical ಉತ್ತರ' ಅಂತ ಕರೆದಿದ್ದು ತುಂಬಾ ಇಷ್ಟವಾಯಿತು. ಧನ್ಯವಾದಗಳು.
Post a Comment