February 29, 2008

ಮುನ್ನೋಡಿ ಪಾಯಸ … (ಉತ್ತರ ಕನ್ನಡದ ಗಾದೆ – 177)

ಮುನ್ನೋಡಿ ಪಾಯಸ ಉಣ್ಣೋ ಮೂಳಾ ಎಂದರೆ ಯಾವ ಹೊಲದ ಗಸಗಸೆ ಎಂದು ಕೇಳಿದ.

ಗಸಗಸೆಯ ಪಾಯಸ ಬಡಿಸಿದ್ದೇನೆ ಊಟ ಮಾಡು ಎಂದರೆ, ಪಾಯಸದಲ್ಲಿ ಉಪಯೋಗಿಸಿದ ಗಸಗಸೆ ಯಾವ ಹೊಲದಲ್ಲಿ ಬೆಳೆದಿದ್ದು ಎಂದು ಕೇಳಿದ್ದನಂತೆ. ನಾವು ಗಡಿಬಿಡಿಯಲ್ಲಿದ್ದಾಗ ಬೇರೆಯವರ ಬಳಿ ಏನಾದರೂ ಕೆಲಸ ಮಾಡಲು ಹೇಳಿದರೆ (ಆ ಕೆಲಸದಿಂದ ಅವರಿಗೇ ಲಾಭ ಆಗುವಂತಿದ್ದರೂ ಸಹ) ಅವರು ತಿರುಗಿ ನಮ್ಮ ಬಳಿ ಆ ಕೆಲಸ ಏಕೆ ಹಾಗೆ? ಏನು? ಎತ್ತ? ಎಂದೆಲ್ಲಾ ವಿಚಾರಿಸತೊಡಗಿದರೆ ಈ ಮಾತನ್ನು ಹೇಳಬಹುದು. ಇದಕ್ಕೊಂದು ಅಶ್ಲೀಲ ಗಾದೆ ಇದೆ. ನಾನು ಹೇಳಲ್ಲ. ಬೇಕಿದ್ರೆ ಬೇರೆ ಯಾರನ್ನಾದರೂ ಕೇಳಿ ನೋಡಿ :)

'ಉಂಡೆಲೆ ಎತ್ತೋ ಗುಂಡ ಅಂದ್ರೆ ಉಂಡೋರು ಎಷ್ಟು ಜನ ಅಂತ ಕೇಳಿದ್ನಂತೆ'- ಈ ಗಾದೆ ನನಗೆ ಮರೆತು ಹೋಗಿತ್ತು. ನೆನಪಿಸಿದ್ದಕ್ಕೆ ವಿಕಾಸನಿಗೆ ಧನ್ಯವಾದಗಳು.

9 comments:

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕಾ...
ಮಾಡಕೆಲ್ಸ ಬಿಟ್ಗಂಡು ಅದೆಂತು? ಇದೆಂತು? ಹೇಳಿ ಅಸಂಬದ್ಧ ಪ್ರಶ್ನೆ ಕೇಳ್ದಾಗ ನನ್ನಜ್ಜಿನೂ ಈ ಗಾದೆ ಹೇಳ್ತಿತ್ತು.

ಒಂದ್ಸಲ ಮತ್ತೊಂದು ಗಾದೆ ಕೇಳಿದ್ದಿ ಯಾರದ್ದೋ ಬಾಯಲ್ಲಿ ಯಾರಿಗೋ ಹೇಳ್ತ ಇದ್ದಾಗ. ಯಂಗೆ ಸಿಟ್ಟು ಬಂದ್ಬುಟ್ಟಿತ್ತು ಆ ಗಾದೆ ಕೇಳಿ. ಈಗೆಲ್ಲ ನೆನಪಾದ್ರೆ ನೆಗಿ ಬತ್ತು.

Seema S. Hegde said...

ಶಾಂತಲಾ,
ಆ ಗಾದೆ ಯಾವುದು ಹೇಳಿ ಯಂಗೆ ಅಂದಾಜಾತು. ಯಂಗೂ ನೆಗಿ ಬತ್ತಾ ಇದ್ದು : D

ವಿ.ರಾ.ಹೆ. said...

"ಉಂಡೆಲೆ ಎತ್ತೋ ಗುಂಡ ಅಂದ್ರೆ ಉಂಡೋರು ಎಷ್ಟು ಜನ ಅಂತ ಕೇಳಿದ್ನಂತೆ"- ಈ ಗಾದೆನೂ ಅದೇ ಅರ್ಥ ಬತ್ತು ಅಲ್ದಾ ಸೀಮಕ್ಕಾ??

ಅದಿರ್ಲಿ ಆ ’ಇನ್ನೊಂದು’ ಗಾದೆ ಎಂತದು ಹೇಳಿ, ಇಲ್ಲಾಂದ್ರೆ ಸೀಮಕ್ಕ, ಶಾಂತಲಕ್ಕ ಇಬ್ರ ಮೇಲೂ ಸಿಟ್ ಬತ್ತು :X

Seema S. Hegde said...

ವಿಕಾಸ,
ಈ ಗಾದೆ ಮರೆತೇ ಹೋಗಿತ್ತು ನೋಡು. ನೆನಪು ಮಾಡ್ಜೆ. ಒಳ್ಳೆದಾತು. Thanks.
ಸಿಟ್ಟು ಬರ್ತು ಅಂದ್ರೆ ನಮ್ಮ ಕಡೆ ಒಂದು ಮಾತು ಹೇಳ್ತಾ ಗೊತ್ತಿಲ್ಯ ನಿಂಗೆ? ಇಲ್ಲಿ ಬರಿತ್ನಿಲ್ಲೇ ನಿಂಗೆ ಬೇಜಾರು ಆಗ್ತು. ನೀನು ಸಿಕ್ದಾಗ ಹೇಳ್ತಿ.

jomon varghese said...

ನಮಸ್ತೆ,

ಗಾದೆ ಓದಿ ತುಂಬಾ ನಗು ಬಂತು. ಏನು ಮಾತನಾಡಿದರೂ ಹೀಗೆಯೇ ಗಾದೆಯಲ್ಲಿಯೇ ಉತ್ತರಿಸುತ್ತಿದ್ದ ಧಾರವಾಡದ ನನ್ನ ಗೆಳೆಯನೊಬ್ಬನ ನೆನಪು ಆಯಿತು.

ಧನ್ಯವಾದಗಳು.
ಜೋಮನ್.

Anonymous said...
This comment has been removed by a blog administrator.
Seema S. Hegde said...

ಜೋಮನ್ ಅವರೇ,
ಧನ್ಯವಾದಗಳು.
ಧಾರವಾಡ ಎಂದ ಕೂಡಲೇ ನನಗೆ ಏನೋ ಒಂಥರಾ ಖುಷಿ! ಹಳೆಯ ನೆನಪುಗಳೆಲ್ಲಾ ಮರುಕಳಿಸಿದವು. ನಾನು ಓದುವಾಗ ನಾಲ್ಕು ವರ್ಷಗಳ ಕಾಲ ಧಾರವಾಡದಲ್ಲಿ ಇದ್ದೆ. ಧಾರವಾಡ ನನಗೆ ತುಂಬಾ ಪ್ರಿಯವಾದ ಊರು. ಅಲ್ಲಿಯ ಜನರು ತುಂಬಾ ಹೃದಯವಂತರು. ಅದು ನನಗೆ ಒಳ್ಳೆಯ ಸ್ನೇಹಿಟರನ್ನು ಕೊಟ್ಟಂತಹ ಊರು. ನಾನೂ ಕೂಡ ಅಲ್ಲಿಯ ಜನರು ಮಾತಿನ ಮಧ್ಯೆ ಗಾದೆಗಳನ್ನು ತುಂಬಾ ಬಳಸುವುದನ್ನು ಕೇಳಿದ್ದೇನೆ.

ಮುತ್ತುಮಣಿ said...

ಸೀಮಾ ಅವರೆ ನಿಮ್ಮ ಬ್ಲಾಗ್ ಟೈಟಲ್ ಭಾರಿ ಖುಷಿಕೊಡ್ತು. :)

Seema S. Hegde said...

Auto Rani,
Thank you very much :)