February 6, 2008

ಕತ್ತಿಯ ಮೇಲೆ … (ಉತ್ತರ ಕನ್ನಡದ ಗಾದೆ – 151 ಮತ್ತು 152)

ಕತ್ತಿಯ ಮೇಲೆ ಕುಂಬಳ ಕಾಯಿ ಬಿದ್ದರೂ ಒಂದೇ ಕುಂಬಳ ಕಾಯಿಯ ಮೇಲೆ ಕತ್ತಿ ಬಿದ್ದರೂ ಒಂದೇ.

ಇವೆರಡರಲ್ಲಿ ಯಾವುದೇ ಆದರೂ ಪರಿಣಾಮ ಮಾತ್ರ ಒಂದೇ- ಕುಂಬಳ ಕಾಯಿ ಚೂರಾಗುತ್ತದೆ. ಸನ್ನಿವೇಶ ಯಾವುದೇ ಇರಲಿ, ತೊಂದರೆಯಾಗುವುದು ಮಾತ್ರ ಮೆತ್ತಗಿರುವವರಿಗೇ ಎಂಬ ಅರ್ಥವನ್ನು ಕೊಡುತ್ತದೆ. ಇಂಥದೇ ಇನ್ನೊಂದು ಗಾದೆ- ಯಾವ ಕಾಲು ಜಾರಿದರೂ ಸೊಂಟಕ್ಕೇ ಮೃತ್ಯು. ಎಡಗಾಲು ಜಾರಿದರೂ ಅಷ್ಟೇ ಬಲಗಾಲು ಜಾರಿದರೂ ಅಷ್ಟೇ, ಪೆಟ್ಟಾಗುವುದು ಮಾತ್ರ ಸೊಂಟಕ್ಕೇ ತಾನೇ.


ಶಾಂತಲಾ ಮತ್ತು ಅರುಣ್ ಬರೆದ ನನಗೆ ಗೊತ್ತಿರದೇ ಇದ್ದ ಇನ್ನೂ ಮೂರು ಗಾದೆಗಳು. ಇಬ್ಬರಿಗೂ ಧನ್ಯವಾದಗಳು.
ಬಂಡೆ ಮೇಲೆ ಗಡಿಗೆ ಬಿದ್ರೂ ಒಂದೆ-ಗಡಿಗೆ ಮೇಲೆ ಬಂಡೆ ಬಿದ್ರೂ ಒಂದೆ.
ಗಾಜು ಕಲ್ಲಿನ ಮೇಲೆ ಬಿದ್ರೂ ಒಂದೆ-ಕಲ್ಲು ಗಾಜಿನ ಮೇಲೆ ಬಿದ್ರೂ ಒಂದೆ.
ಬಟ್ಟೆ ಮೇಲೆ ಮುಳ್ಳು ಬಿದ್ರೂ ಮುಳ್ಳಿನ ಮೇಲೆ ಬಟ್ಟೆ ಬಿದ್ರೂ ಒಂದೆ.

ನನ್ನ ಕಂದ ಅವರು ಹೇಳಿದ್ದು- ಹೂವಿನ ಮೇಲೆ ಮುಳ್ಳು ಬಿದ್ದರೂ, ಮುಳ್ಳಿನ ಮೇಲೆ ಹೂವು ಬಿದ್ದರೂ ನೋವಾಗುವುದು ಹೂವಿಗೆ.

8 comments:

ಶಾಂತಲಾ ಭಂಡಿ (ಸನ್ನಿಧಿ) said...
This comment has been removed by the author.
ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕ...
ಚೆನ್ನಾಗಿದೆ ಈ ಗಾದೆ. ಇದೇ ಅರ್ಥ ಕೊಡುವ ಇನ್ನೊಂದು ಗಾದೆ ಕೇಳಿದ್ದೇನೆ. "ಬಂಡೆ ಮೇಲೆ ಗಡಿಗೆ ಬಿದ್ರೂ ಒಂದೆ-ಗಡಿಗೆ ಮೇಲೆ ಬಂಡೆ ಬಿದ್ರೂ ಒಂದೆ"
ಇದನ್ನು ಹೀಗೂ ಹೇಳುವುದುಂಟು " ಗಾಜು ಕಲ್ಲಿನ ಮೇಲೆ ಬಿದ್ರೂ ಒಂದೆ-ಕಲ್ಲು ಗಾಜಿನ ಮೇಲೆ ಬಿದ್ರೂ ಒಂದೆ"
ಈ ಗಾದೆಗಳು ಹೆಣ್ಣು-ಗಂಡುಗಳು ತಪ್ಪು ಮಾಡಿದಾಗ್ಲೂ ಬಳಸಬಹುದಂತೆ. ತಪ್ಪು ಯಾರದಿದ್ರೂ ಪರಿಣಾಮ ಹೆಣ್ಣಿನ ಮೇಲಾಗಬಹುದೆಂಬ ವಿಚಾರಕ್ಕಿರಬಹುದು.
ಗಾದೆ ಮಾಡಿಟ್ಟ ಹಿರಿಜನರ ಜಾಣ್ಮೆಗೆ ಮೆಚ್ಚಬೇಕಲ್ವಾ ಸೀಮಕ್ಕಾ?

ARUN MANIPAL said...

ಇನ್ನೊಂದು ಹೀಗು ಉಂಟು ಸೀಮಕ್ಕ,
"ಬಟ್ಟೆ ಮೇಲೆ ಮುಳ್ಳು ಬಿದ್ರೂ ಮುಳ್ಳಿನ ಮೇಲೆ ಬಟ್ಟೆ ಬಿದ್ರೂ ಒಂದೆ" ಅಂತ..;-)
ಅಂತೆಯೆ ನಿಮ್ಮ ಬ್ಲಾಗಿಗೆ ನಾನು ಲಿಂಕ್ ಕೊಟ್ಟಿದ್ದೇನೆ.ಪ್ರೀತಿ ಇರಲಿ...;)

Seema S. Hegde said...

ಶಾಂತಲಾ ಮತ್ತು ಅರುಣ್,
ಎಷ್ಟೊಂದು ಗಾದೆಗಳನ್ನು ನನಗೂ ಮತ್ತು ಓದುಗರಿಗೂ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

Jagali bhaagavata said...

ಸ್ತಂಭ-ಕುಂಭ ನ್ಯಾಯ ಅಂತ ಕೇಳಿದೀರಾ? ಅದೂ ಇದೇ ಅರ್ಥದಲ್ಲಿ. ಕೊನೆಯಲ್ಲಿ ಒಡೆಯುವುದು ಕುಂಭವೇ ಹೊರತು, ಸ್ತಂಭವಲ್ಲ

Seema S. Hegde said...

ಜಗಲಿ ಭಾಗವತರೇ,
ಇದನ್ನೂ ಕೇಳಿರಲಿಲ್ಲ. ಧನ್ಯವಾದಗಳು.

new said...

ನಾನೊಂದ್ ಹೇಳ್ತಿ , ನಿಮ್ಮ ಬ್ಲಾಗ್ ಒಳಗೆ ಅಪ್ಡೇಟ್ ಮಾಡ್ತಿ?

ಹೂವಿನ ಮೇಲೆ ಮುಳ್ಳು ಬಿದ್ದರು ,ಮುಳ್ಳಿನ ಮೇಲೆ ಹೂವು ಬಿದ್ದರು ;ನೋವಾಗುವುದು ಹೂವಿಗೆ

Seema S. Hegde said...

@ Nannakanda,
Thanks:)