ಊರನ್ನು ಬಿಟ್ಟು ಬಂದ ಮೇಲೆ ಊರಿನ ನೆನಪು ತುಂಬಾ ಕಾಡತೊಡಗಿದೆ. ಮೊನ್ನೆ ಅಪ್ಪನ ಜೊತೆ ಫೋನಿನಲ್ಲಿ ಮಾತನಾಡುತ್ತಿರುವಾಗ ನಾನೇನೋ ಹೇಳಿದ್ದಕ್ಕೆ ಅಪ್ಪ, 'ನಿನಗೆ ತಿಳುವಳಿಕೆ ಸಾಲದು ಸುಮ್ಮನಿರು, ಕುಂಬಾರಿ' ಎಂದಿದ್ದರು. ಕುಂಬಾರ ಎಂಬ ಪುಲ್ಲಿಂಗ ರೂಪವನ್ನು ಕುಂಬಾರಿ ಎಂದು ಅದ್ಭುತವಾಗಿ ಸ್ತ್ರೀಲಿಂಗ ರೂಪಕ್ಕೆ ಇಳಿಸಿದ್ದರು ಅಪ್ಪ! ನಗು ಬಂದಿತ್ತಾದರೂ ಮರು ಕ್ಷಣವೇ ಮನಸ್ಸು ಊರಿನ ಜನರ ಹೆಸರುಗಳನ್ನೆಲ್ಲಾ ಮೆಲುಕು ಹಾಕಿಬಿಟ್ಟಿತ್ತು.
ಅಂದ್ರೆ, ನಮ್ಮೂರಿನ ಜನ ಗಂಡಸರಿಗೆ ಇಡುವ ಹೆಸರನ್ನೇ ಸ್ತ್ರೀಲಿಂಗ ರೂಪಕ್ಕೆ ತಂದು ಹೆಂಗಸರಿಗೆ ಇಟ್ಟುಬಿಡುತ್ತಾರೆ. ಹೆಂಗಸರಿಗಾಗಿ ವಿಶೇಷ ಹೆಸರೇ ಬೇಕಾಗುವುದಿಲ್ಲ ಅವರಿಗೆ! ಕೆಲವು ಉದಾಹರಣೆ ಇಲ್ಲಿವೆ ನೋಡಿ... ನಾಗ್ಯಾ-ನಾಗಿ...ಇವರಿಬ್ಬರೂ ಅಣ್ಣ-ತಂಗಿ, ಅಕ್ಕ-ತಮ್ಮ, ಗಂಡ-ಹೆಂಡತಿ ಯಾರೂ ಅಲ್ಲ. ಬೇರೆ ಬೇರೆ ಮನೆಯವರು.
ಅಂತೆಯೇ... ಹನುಮ-ಹನುಮಿ... ಗುತ್ಯ-ಗುತ್ತಿ... ಬೊಮ್ಮ-ಬೊಮ್ಮಿ... ಕೆರಿಯ-ಕೆರೆದೇವಿ... ನರಸ-ನರಸಿ...ಮಾರ್ಯ-ಮಾರಿ...
ತಿಮ್ಮ-ತಿಮ್ಮಿ... ತಿಪ್ಪ-ತಿಪ್ಪಿ... ಯಲ್ಲ-ಯಲ್ಲಿ... ಭದ್ರ-ಭದ್ರಿ...
ಚಂದ್ರ-ಚಂದ್ರಿ... ಮೋಟ್ಯ-ಮೋಟಿ... ಬಸವ-ಬಸವಿ… ನಿಂಗ-ನಿಂಗಿ... ಚನ್ನ-ಚನ್ನಿ... ರುದ್ರ-ರುದ್ರಿ... ಗಿಡ್ಡ-ಗಿಡ್ದಿ... ಹುಲಿಯಾ-ಹುಲಿಗೆಮ್ಮ... ಗಣಪ-ಗಣಪಿ... ಬಂಗಾರ್ಯ-ಬಂಗಾರಿ... ಈರ-ಈರಿ (ವೀರಭದ್ರ ಎನ್ನುವುದು ವೀರ ಎಂದು ಮೊಟಕಾಗಿ ಈರ ಎಂದಾಗಿ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ). ನನಗೀಗ ನೆನಪಾಗುತ್ತಿರುವುದು ಇಷ್ಟು. ಇನ್ನೊ ಹಲವಾರು ಇವೆ.
ಈಗೀಗ ಹೊಸ ಹೆಸರುಗಳನ್ನು ಇಡಲು ತೊಡಗಿದ್ದಾರೆ. 'ನೆಹರು' ಎಂಬುದೇ ಒಬ್ಬ ವ್ಯಕ್ತಿಯ ಹೆಸರು ಎಂದರೆ ನಿಮಗೆ ನಂಬಲು ಕಷ್ಟವಾಗಬಹುದು! ಇನ್ನು 'ವಸೇಕಾ' ಎಂದು ಕೂಗುತ್ತಿರುತ್ತಾರೆ. ಅವನ ಹೆಸರು 'ಅಶೋಕ'! 'ಸಬೈಚಂದ್ರಾ' ಎಂದು ಕೂಗುತ್ತಿದ್ದರೆ ಅದು ನಮಗೆ ಕೇಳಿ ಗೊತ್ತಿದ್ದವರಿಗಷ್ಟೇ ಗೊತ್ತಾಗುತ್ತದೆ 'ಸುಭಾಸಚಂದ್ರ'ನನ್ನು ಕರೆಯುತ್ತಿದ್ದಾರೆ ಎಂದು. ನನ್ನ ಅಮ್ಮ ಮದುವೆಯಾಗಿ ಆ ಊರಿಗೆ ಬಂದು ಸೇರಿದ ಕೆಲವು ದಿನಗಳಲ್ಲಿ ಹುಟ್ಟಿದ ಹೆಚ್ಚು ಕಮ್ಮಿ ಎಲ್ಲ ಮಕ್ಕಳಿಗೂ 'ಸಾವಿತ್ರಿ' ಎಂದೇ ಹೆಸರಿಟ್ಟಿದ್ದರಂತೆ! ನನಗಿಂತ ಎರಡು ವರ್ಷ ದೊಡ್ಡವರಾದ ಆ ಸಾವಿತ್ರಿಯರ ಜೊತೆಯಲ್ಲೆಲ್ಲಾ ನಾನು ಆಟ ಆಡಿದ್ದೇನೆ. ನಾಲ್ಕೈದು ಸಾವಿತ್ರಿಯರು ಇರುವುದರಿಂದ ಅವರನ್ನೆಲ್ಲಾ ಕರೆಯುತ್ತಿದ್ದುದು 'ಗಿಡ್ಡ ಸಾವುಂತ್ರಿ'... 'ಅಂಗಡಿ ಸಾವುಂತ್ರಿ'... 'ಬೊಮ್ಮನ ಮನೆ ಸಾವುಂತ್ರಿ'... 'ಕೆಳಗಿನ ಕೇರಿ ಸಾವುಂತ್ರಿ'....ಇತ್ಯಾದಿ. ಅಮ್ಮನನ್ನು ಕರೆಯುತ್ತಿದ್ದುದು 'ಸಾವುಂತ್ರಮ್ಮ' ಎಂದು. ಈಗ ಆ ಊರಲ್ಲಿ 'ಸಾವುಂತ್ರಮ್ಮ' ಒಬ್ಬರೇ. ಉಳಿದೆಲ್ಲಾ ಸಾವಿತ್ರಿಯರು ಮದುವೆಯಾಗಿ ಬೇರೆ ಬೇರೆ ಊರು ಸೇರಿ ನನ್ನಂತೆಯೇ ಸತಿ ಸಾವಿತ್ರಿಯರಾಗಿದ್ದಾರೆ.
ಊರು ಎಂದೊಡನೆ ಅಪ್ಪ, ಅಮ್ಮ, ತಮ್ಮ, ದನ-ಕರು, ಶಾಲೆಯವರೆಗೂ ಕಳುಹಿಸಲು ಬರುತ್ತಿದ್ದ ನಾಯಿ, ಹಾಸಿಗೆಯಲ್ಲಿ ಬೆಚ್ಚಗೆ ಮಲಗುತ್ತಿದ್ದ ಬೆಕ್ಕು, ಓದಿದ ಶಾಲೆ, ಕಲಿಸಿದ ಮಾಸ್ತರು-ಆಕ್ಕೋರು, ಶಾಲೆಗೆ ಇನ್ಸಸ್ಪೆಕ್ಟರ್ ಬರುತ್ತಾರೆಂದು ಕೈಯಾರೇ ಮಾಡಿದ್ದ ಮಣ್ಣಿನ ಆಟಿಗೆಗಳು, ಶಾಲೆಯಲ್ಲಿ ಆಡಿದ ಅಲೆಕ್ಸಾಂಡರ್ ನಾಟಕ, ಮಧ್ಯದಲ್ಲೇ ಮರೆತು ಹೋದ ಸ್ವಾತಂತ್ರ್ಯೋತ್ಸವದ ಭಾಷಣ, ಅಪ್ಪ ಬರೆದುಕೊಟ್ಟ ಭಾಷಣದ ಚೀಟಿ, ಅಪ್ಪ ರೇಡಿಯೋದಲ್ಲಿ ದಿನಲೂ ಕೇಳುತ್ತಿದ್ದ ಪ್ರದೇಶ ಸಮಾಚಾರ, ಇಂದು ಮುನಿಸಿಕೊಂಡರೂ ನಾಳೆ ಕೂಡಿ ಆಡುತ್ತಿದ್ದ ಗೆಳೆಯ-ಗೆಳತಿಯರು, ಕಣ್ಣಮುಚ್ಚಾಲೆ ಆಡುವಾಗ ಅವಿತುಕೊಳ್ಳುತ್ತಿದ್ದ ಮೂಲೆಗಳು, ಭತ್ತದ ಪಣತ, ಸುತ್ತಾಡಿದ ಬೆಟ್ಟ-ಗುಡ್ಡ, ಮೀನು ಹಿಡಿದ ಹೊಳೆ, ಸೂರ್ಯ ಕಿರಣ ಬೀಳದಷ್ಟು ದಟ್ಟವಾಗಿದ್ದ ಕಾಡು, ನಾಲ್ಕಾಳು ಎತ್ತರಕ್ಕೆ ಜೀಕಿದ ಆಲದ ಬೀಳಲಿನ ಜೋಕಾಲಿ, ಆಲೆಮನೆ, ಬೆಂಕಿ ಪೊಟ್ಟಣದಲ್ಲಿಟ್ಟ ಜೀರುಂಡೆ ಹುಳು, ಬಾಲಕ್ಕೆ ದಾರ ಕಟ್ಟಿಸಿಕೊಂಡ ಹೆಲಿಕಾಪ್ಟರ್ ಹುಳು, ಜಿಟಿ-ಜಿಟಿ ಮಳೆ, ಜಡಿ ಮಳೆ, ಅಡುಗೆ ಮನೆಯ ಒಲೆಯಲ್ಲಿ ಅಮ್ಮ ಸುಡುತ್ತಿದ್ದ ಹಪ್ಪಳ, ಬಚ್ಚಲ ಒಲೆಯ ಬೆಂಕಿಯಲ್ಲಿ ನಾವು ಸುಡುತ್ತಿದ್ದ ಹಲಸಿನ ಬೇಳೆ....ಒಂದೇ ಎರಡೇ....ಏನೆಲ್ಲಾ ನೆನಪಾಗುತ್ತದೆ.
ಈಗ ಯಾವುದೋ ಒಂದು ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶದ ಮೂಲೆಯಲ್ಲಿ ಕುಳಿತಿದ್ದರೂ ಕೂಡ ಎಷ್ಟೆಲ್ಲಾ ಸವಿನೆನಪುಗಳನ್ನು ಇತ್ತ ನನ್ನ ಊರನ್ನು ಮರೆತೇನೆಂದರೂ ಮರೆಯಲಿ ಹ್ಯಾಂಗಾ?
7 comments:
ತುಂಬ ಚೆನ್ನಾಗಿದೆ...
ಗಂಡಸರಿಗೆ ಇಡುವ ಹೆಸರನ್ನೇ ಸ್ತ್ರೀಲಿಂಗ ರೂಪಕ್ಕೆ ತಂದು ಹೆಂಗಸರಿಗೆ ಇಡೋ ಕೆಲ್ಸಾನ ನಾನೂ ಅಕ್ಕನೂ ಬಹಳ ಮಾಡಿದ್ದೀವಿ... 2 ಸ್ಯಾಂಪಲ್ ಹೇಳ್ತಿ. ನರಸಿಂಹಜ್ಜ ಅವನ ಹೆಂಡತಿಯನ್ನು ನಾವು ಕರೆಯುವುದು ನರಸಿಂಹಜ್ಜಿ ಃ) ಮತ್ತೆ ರಂಗಜ್ಜ ಅವರ ಹೆಂಡತಿಯನ್ನು ನಾವು ಕರೆಯುವುದು ರಂಗಜ್ಜಿ ಃ)
ಸೀಮಕ್ಕಾ...
ಸಕತ್ ಬರದ್ದೆ...
ಬರಲಿ ಇನ್ನೊಂದಿಷ್ಟು ಇಂತಾದ್ದೆ.
ನನ್ನ ಮಗ ಈ ಹೆಸರುಗಳನ್ನು ಹ್ಯಾಂಗೆ ಬದಲು ಮಾಡ್ತ ಅಂದ್ರೆ,
ಹರ್ಷ ಅಂಕಲ್ಸ್ ಆಂಟಿ, ದೀಪಾ ಆಂಟೀಸ್ ಅಂಕಲ್ ಹಿಗೇ ಯಾರ ಪರಿಚಯ ಮೊದಲು ಆಗಿರ್ತ ಅವರ ಹೆಸ್ರು ಮಾತ್ರ ಹೇಳ್ತ. ಅವರ ಹೆಂಡತಿ ಅಥ್ವಾ ಗಂಡಂಗೆ ಅವ್ರ ಹೆಸ್ರು ಹೇಳಿ ಮುಂದೆ ಅಂಕಲ್/ಆಂಟಿ ಸೇರ್ಸಿಬಿಡ್ತ.
ಇನ್ನು ನಾ ಯಾರ್ಯಾರಿಗೆ ಅಣ್ಣ ಹೇಳ್ತ್ನ ಅವ್ರನ್ನೆಲ್ಲ ಹ್ಯಾಂಗೆ ಕರಿತ ಗೊತ್ತಿದ್ದ? ಅಶೋಕಣ್ ಮಾವ, ಪ್ರಕಾಶಣ್ ಮಾವ, ಹರ್ಷಣ್ ಮಾವ...ಹಿಂಗೆ ಬರೀತಾ ಹೋದ್ರೆ ಮುಗಿಯದೇ ಅಲ್ಲಾ ಬಿಡು.
ಚಂದ ಲೇಖನ, ಹೆಸ್ರಿನ ಪಟ್ಟಿ ಓದಿ ಸಿಕ್ಕಾಪಟ್ಟೆ ನಗು ಬಂತು.
ಶ್ಯಾಮಾ ಮತ್ತು ಶಾಂತಲಾ,
ಧನ್ಯವಾದಗಳು.
ನನ್ನ ಅಪ್ಪನ ಹೆಸರು ಸೀತಾರಾಮ.
ನನ್ನ ಅಕ್ಕಂದಿರ ಮಕ್ಕಳು ನನ್ನ ಅಪ್ಪನನ್ನು ಕರೆಯುವುದು 'ಸೀತಣ್ಣಯ್ಯ ಅಜ್ಜ'; ಏಕೆಂದರೆ ಅವರ ಅಮ್ಮಂದಿರು ನನ್ನ ಅಪ್ಪನನ್ನು 'ಸೀತಣ್ಣಯ್ಯ' ಎಂದು ಕರೆಯುತ್ತಾರೆ!
ಹೇಗೇ ಕರೆಯಲಿ, ಅದರಲ್ಲಿರುವ ಪ್ರೀತಿಯೇ ಅನನ್ಯ ಅಲ್ಲವೇ?
ಸೀಮಾ ಅವರೇ ನಿಮ್ಮ ಬ್ಲಾಗಿಗೆ ಮೊದಲ ಭೇಟಿ.
ಚೆನ್ನಾಗಿದೆ.
ಊರಿನ ನೆನಪುಗಳು ಹಲಸಿನ ತೊಳೆಗಳಿದ್ದಂತೆ. ಸಿಹಿ, ಜತೆಗೆ ಅಂಟಿನ ನಂಟು. ಬಿಟ್ಟರೂ ಬಿಡದದು.
ಹಾಗೆಯೇ ಮರೆಯಲಿಕ್ಕಾಗದು, ಮರೆಯಲೂ ಬಾರದು.
ನಿಮ್ಮ ಗಾದೆ ಪ್ರಪಂಚವೂ ಖುಷಿ ಕೊಟ್ಟಿತು.
ನಾವಡ
ನಾವಡ ಅವರೆ,
ನನ್ನ ಬ್ಲಾಗ್ ಗೆ ಸ್ವಾಗತ. ನಿಮ್ಮ ವಿವರಣೆ ಖುಷಿ ಕೊಟ್ಟಿತು. ಪುನಃ ಪುನಃ ಬರುತ್ತಿರಿ.
ಸೀಮಾ ಅವರೆ ನಮಸ್ಕಾರ,
ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲನೆಯ ಪ್ರವೇಶ..ಮರೆತೇನೆಂದರೂ ಮರೆಯಲಿ ಹ್ಯಾಂಗಾ..?ಓದಿ ತುಂಬ ಖುಶಿಯಾಯಿತು..ಮತ್ತೆ ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿತು..ನೀವು ಸಖತ್ ಬರೀತೀರಾ..ಹೀಗೆ ಬರೀತಾಯಿರಿ..
ಇತಿ,
ಗಿರೀಶ ರಾಜನಾಳ.
ಗಿರೀಶ್ ಅವರೇ,
ಸ್ವಾಗತ. ಮತ್ತೆ ಮತ್ತೆ ಬರುತ್ತಿರಿ.
ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ.
Post a Comment