June 13, 2013

ಅಪ್ಪನ ಕನ್ನಡಕ (ಭಾಗ- ೨)

ವರ್ಷದಿಂದ ವರ್ಷಕ್ಕೆ ಅಪ್ಪ ಕನ್ನಡಕದೊಂದಿಗೆ ಮಾಡಿಕೊಳ್ಳುವ ಅನಾಹುತ ಒಂದಲ್ಲ ಎರಡಲ್ಲ. ಹಿಂದೊಮ್ಮೆ ಆ ಬಗ್ಗೆ ಬರೆದಿದ್ದೆ (http://seemahegde78.blogspot.nl/2012/01/blog-post.html). ಅದರ ನಂತರ ಮತ್ತೆ ಎಷ್ಟೋ ಅನಾಹುತಗಳು ನಡೆದುಹೋದವು. ಈಗ ಬರೆಯಲೇ ಬೇಕಾಗಿದೆ.

೨೦೧೨ : ಜನೆವರಿ. ನಾನು, ರಾಜೀವ ಮೈಸೂರಿನಲ್ಲಿದ್ದೆವು. ನಮ್ಮ ಮನೆಗೆ ಅಪ್ಪ, ಅಮ್ಮ ಬಂದಿದ್ದರು, ಎರಡು-ಮೂರು ದಿನ ಉಳಿದಿದ್ದರು. ಮೈಸೂರು, ಶ್ರೀರಂಗಪಟ್ಟಣ, ರಂಗನತಿಟ್ಟು ಎಲ್ಲಾ ಅಡ್ಡಾಡಿಸಿ ಮೈಸೂರು-ಶಿರಸಿ ರಾತ್ರಿ ಬಸ್ಸಿಗೆ ಅವರನ್ನು ಹತ್ತಿಸಿ ನಾವು ಮನೆಗೆ ಬಂದೆವು. ಅಪ್ಪ ರಾತ್ರಿ ಬಸ್ಸಿನಲ್ಲಿ ಕನ್ನಡಕವನ್ನು ಜೇಬಿನಲ್ಲಿಟ್ಟುಕೊಂಡು ನಿದ್ದೆ ಮಾಡಿದ. ಅದು ಎಲ್ಲೊ ಬಿದ್ದು ಹೋಗಿರಬೇಕು, ಬಸ್ಸಿನ ಸದ್ದಿನಲ್ಲಿ, ನಿದ್ದೆಯಲ್ಲಿ, ಗೊತ್ತೇ ಆಗಲಿಲ್ಲ. ಶಿರಸಿಯಲ್ಲಿ ಬೆಳಿಗ್ಗೆ ಇಳಿದ ಮೇಲೂ ಗಮನಿಸಲಿಲ್ಲ. ಅಲ್ಲಿಂದ ಬೇರೆ ಬಸ್ಸು ಹಿಡಿದು ಮನೆಗೆ ಹೋದ ಮೇಲೆ ಗಮನಕ್ಕೆ ಬಂತು. ತಕ್ಷಣ ಸಿರಸಿ bus stand ನ control room ಗೆ phone ಮಾಡಿ ವಿಚಾರಿಸಿದ, “ಸಿಗಲಿಲ್ಲ” ಎಂದುಬಿಟ್ಟರು. ಸರಿ, ಬೇರೆ ಕನ್ನಡಕ ಮಾಡಿಸಿಕೊಂಡ. ತೆಳ್ಳನೆಯ frame ನದು ಎಂದು ರಘು ಮತ್ತು ನಾನು ತಾಕೀತು ಮಾಡಿದ್ದರಿಂದ ಆ ತರಹದ್ದೇ ಮಾಡಿಸಿಕೊಂಡ.

ಕೆಲ ದಿನಗಳ ಕಳೆದವು. ೨೦೧೨ ರ ಮಳೆಗಾಲದ ಸಮಯ. ಮನೆಯಿಂದ ದೂರದಲ್ಲಿನ ನಮ್ಮ ಜಾಗದಿಂದ ಹಸಿರು ಹುಲ್ಲು ತರಲೆಂದು ಅಪ್ಪ ಒಂದೆರಡು ಆಳುಗಳನ್ನು ಕರೆದುಕೊಂಡು jeep drive ಮಾಡಿಕೊಂಡು ಹೋಗಿದ್ದ. Drive ಮಾಡುವಾಗ ದೂರ ದೃಷ್ಟಿಯ ಸಲುವಾಗಿ ಅವನಿಗೆ ಕನ್ನಡಕ ಬೇಕೇಬೇಕಾಗುತ್ತದೆ. Driving ನ ನಂತರದಲ್ಲಿ ಅದು ಅವಶ್ಯವಿರುವುದಿಲ್ಲ, ತೆಗೆದು ಜೇಬಿಗೆ ಸೇರಿಸಿಬಿಡುತ್ತಾನೆ. ಕೆಲಸವಾದ ನಂತರ ಹಿಂದಿರುಗಿ ಹೊರಟಾಗ ಜೇಬಿಗೆ ಕೈಹಾಕಿದರೆ ಕನ್ನಡಕ ಇಲ್ಲ! ಸುತ್ತಮುತ್ತಲಿನ ಜಾಗವನ್ನೆಲ್ಲಾ ಒಮ್ಮೆ ಹುಡುಕಿದ, ಸಿಗಲಿಲ್ಲ. ಅಂತೂ ಸ್ವಲ್ಪ ಕಷ್ಟಪಟ್ಟು drive ಮಾಡಿಕೊಂಡು ಮನೆಗೆ ಬಂದ. Jeep ನಿಂದ ಹುಲ್ಲನ್ನು ಇಳಿಸಿ ದನ-ಕರುಗಳಿಗೆ ಹಾಕುವಾಗ ಆಳು ದ್ಯಾಮ್ಯಾನಿಗೆ ಕನ್ನಡಕ ಸಿಕ್ಕಿತು! ಹುಲ್ಲಿನ ಹೊರೆಯನ್ನು jeep ನ ತಲೆಯ ಮೇಲೆ ನಿಂತು ಅಪ್ಪ ಕಟ್ಟುತ್ತಿದ್ದನಂತೆ. ಆಗ ಜೇಬಿನಲ್ಲಿದ್ದ ಕನ್ನಡಕ ಹುಲ್ಲಿನ ನಡುವೆಲ್ಲೋ ಬಿದ್ದುಹೋಗಿರಬೇಕು, ಅವನಿಗದು ಗೊತ್ತಾಗಲೇ ಇಲ್ಲ! ಇದರಿಂದ ಅಪ್ಪ ಪಾಠ ಕಲಿಯಲಿಲ್ಲ. ಆ ಕನ್ನಡಕಕ್ಕೊಂದು ದಾರ ಹಾಕಿಸಿಕೊಳ್ಳಲಿಲ್ಲ. ಇಂತದೇ ಮತ್ತೊಂದು ಘಟನೆ ನಡೆಯಿತು.

೨೦೧೨ ರ ಚಳಿಗಾಲ. ಅಡಿಕೆಕೊಯ್ಲಿನ ಸಮಯ. ತನ್ನ ತೋಟದ ಅಡಿಕೆಯನ್ನು ಕೊಯ್ಸಿಕೊಂಡು ಅದನ್ನು ನಮ್ಮೂರಿನ co-op society ಯ van ನಲ್ಲಿ ಹೇರಿಕೊಂಡು, ಸುಲಿಯಿಸಲೆಂದು ಬೇರೆಯವರ ಮನೆಗೆ ತೆಗೆದುಕೊಂಡು ಹೋಗಿ ಹಾಕಿ ಮನೆಗೆ ಬಂದ. ಯಾಕೋ ಕನ್ನಡಕ ಬೇಕಾಯಿತು, ಆದರೆ ಕಾಣಿಸಲಿಲ್ಲ. ಮನೆಯೆಲ್ಲ ಹುಡುಕಿದ, ಸಿಗಲಿಲ್ಲ. ಅವನಿಗೂ ಆ ಕನ್ನಡಕಕ್ಕೂ ಅದೇನು ನಂಟೋ ಆ ದೇವರಿಗೇ ಗೊತ್ತು! ಎರಡು ದಿನಗಳ ನಂತರ ಅಡಿಕೆ ಸುಲಿಯುವ ಹೆಂಗಸರಲ್ಲಿ ಯಾರಿಗೋ ಅಡಿಕೆ ಕೊನೆಯ ರಾಶಿಯಲ್ಲಿ ಕನ್ನಡಕವೊಂದು ಸಿಕ್ಕಿತ್ತು! ಕೆಲಸಕ್ಕೆ ಬರುವ ದ್ಯಾಮ್ಯಾನ ಜೊತೆ ಬಂದು ಪುನಃ ಅಪ್ಪನ ಕೈಸೇರಿತು.

೨೦೧೩: ಒಂದೆರಡು ತಿಂಗಳುಗಳ ಹಿಂದೆ ಅಪ್ಪ ಒಂದಿಷ್ಟು ಕಟ್ಟಿಗೆಯ ಜಿಗ್ಗು, ಮಣ್ಣು ಎಲ್ಲವನ್ನೂ ಸೇರಿಸಿ ಬೆಂಕಿ ಹಾಕಿ ಸುಟ್ಟ. ಆ ರೀತಿ ತಯಾರಿಸಿದ ಮಣ್ಣಿಗೆ ‘ಸುಡುಧೂಳು’ ಎನ್ನುತ್ತಾರೆ. ಗೊಬ್ಬರದ ರೀತಿ ಅದನ್ನು ಉಪಯೋಗಿಸುತ್ತಾರೆ, ವಿಶೇಷವಾಗಿ ಕಬ್ಬಿನ ಬೆಳೆಗೆ. ಕಟ್ಟಿಗೆಯ ಜಿಗ್ಗನ್ನು ಬಗ್ಗಿ ಒಟ್ಟುಗೂಡಿಸುವಾಗ ಅದಕ್ಕೆ ತನ್ನ ಕನ್ನಡಕವನ್ನೂ ಸೇರಿಸಿಬಿಟ್ಟಿದ್ದ. ಮುಂದಿನ ಸಲ ಊರಿಗೆ phone ಮಾಡಿದಾಗ ಅಮ್ಮ ಅಪ್ಪನ ಕನ್ನಡಕದ ಕಥೆ ಹೇಳಿದಳು. ಅಪ್ಪ phone ತೆಗೆದುಕೊಂಡವನೇ “ಕೂಸೇ, ಕನ್ನಡಕದ ಅಂತ್ಯ ಸಂಸ್ಕಾರವೂ ಆಗಿ ಹೋಯಿತು” ಎಂದ. ನಾನು “ಹುಮ್ಮ್... ಹೋಗ್ಲಿ ಬಿಡು, ಬೇರೆ ಮಾಡಿಸಿಕೋ” ಎಂದೆ. ಆದರೆ ಅಪ್ಪನಿಗೆ ಮತ್ತೆ ಹೊಸ ಕನ್ನಡಕದ ಮೇಲೆ ದುಡ್ಡು ಸುರಿಯುವುದು ಬೇಕಿರಲಿಲ್ಲ ಎಂದು ಕಾಣುತ್ತದೆ. ಯಾವುದೋ ಓಬೀರಾಯನ ಕಾಲದ ದಪ್ಪ frame.. ಅದೆಲ್ಲಿಟ್ಟಿದ್ದನೊ, ಯಾವಾಗ ಇಟ್ಟಿದ್ದನೋ ನಮಗ್ಯಾರಿಗೂ ಗೊತ್ತಿಲ್ಲ; ಅಂತೂ ಹೊರತೆಗೆದ. “80 ರ ದಶಕದ frame ತರ ಇದೆ, ಅದಕ್ಕೇ glass ಹಾಕಿಸಲು ಕೊಟ್ಟು ಬಂದಿದ್ದಾರೆ, ಎಷ್ಟು ಬೇಡವೆಂದರೂ ಕೇಳಲಿಲ್ಲ”- ಅಮ್ಮನ ದೂರು. ನಾನು ಹೇಳಿದೆ, “ತಲೆ ಕೇಡಿಸಿಕೊಳ್ಳಬೇಡ ಬಿಡು, ಅವನು ಕಳೆದುಕೊಳ್ಳುತ್ತಿರುವ rate ನೋಡಿದರೆ ಅದಿನ್ನು ಹೆಚ್ಚಿಗೆ ದಿನ ಬಾಳುವುದಿಲ್ಲ. ನಿನಗಿನ್ನು ತೀರಾ ನೋಡಲು ಹಿಡಿಸದಿದ್ದರೆ ಆ ಕನ್ನಡಕವನ್ನು ಎಲ್ಲಾದರೂ ಅಡಗಿಸಿಟ್ಟುಬಿಡು, ಒಂದೆರಡು ದಿನ ಹುಡುಕಿ ತಾನೇ ಎಲ್ಲೋ ಕಳೆದುಕೊಂಡೆ ಎಂದು ಬೇರೆ ಮಾಡಿಸಿಕೊಳ್ಳುತ್ತಾನೆ” ಎಂಬ ಕುತಂತ್ರದ idea ಕೊಟ್ಟೆ.

ಇವತ್ತು ಅಮ್ಮ- “ನಿನಗೊಂದು ಸುದ್ದಿ ಹೇಳುವುದಿತ್ತು” ಅಂದಳು. “ಅಪ್ಪನ ಕನ್ನಡವಾ?” ಎಂದೆ. ಅಮ್ಮನಿಗೆ ನಗು ತಡೆಯಲು ಆಗಲಿಲ್ಲ- “ಹಾ... car ನ ಗಾಲಿಯ ಕೆಳಗಡೆ ಸಿಕ್ಕು ಪಡ್ಚ” ಎನ್ನುತ್ತಾ ಮತ್ತೆ ನಗತೊಡಗಿದಳು. “ಅಬ್ಬಾ ಅಂತೂ ಹೋಯಿತಾ ಆ ಕನ್ನಡಕ.. ಅಪ್ಪನನ್ನು ಕರೆ” ಎಂದೆ. “ಈ ಬಾರಿ ಏನು special?” ಎಂದೆ. ಅಪ್ಪ ಮುಸಿ ಮುಸಿ ನಗುತ್ತಾ “ನಾನು car ನ ಗಾಲಿಗೆ ಗಾಳಿ ಹಾಕುವಾಗ ಬಿದ್ದು ಹೋಯಿತೋ ಏನೋ, ಆಮೇಲೆ car reverse ನಲ್ಲಿ ತಂದೆ. ಆಗೆಲ್ಲೋ......”  ನಾನು “ನೀನು ತಕ್ಷಣ ಹೋಗಿ ಮಾಡಿಸಲು ಕೊಡಬೇಡ, ಎಂತೆಂಥದೋ frame ನ ಕನ್ನಡಕವನ್ನು ಆರಿಸುತ್ತೀಯ, ಒಂದು ವಾರ ಹೇಗೋ ದೂಡು. ಇನ್ನೊಂದು ವಾರದಲ್ಲಿ ಹೇಗೂ ಶ್ವೇತಾ (ಅವನ ಸೊಸೆ) ಬರುವವಳಿದ್ದಾಳೆ. ಅವಳನ್ನು ಕರೆದುಕೊಂಡು ಹೋಗು. ಚೆನ್ನಾಗಿರುವುದನ್ನು ಆರಿಸಿ ಕೊಡುತ್ತಾಳೆ. ಈ ಸಲ ಮಾತ್ರ ಕನ್ನಡಕಕ್ಕೆ ದಾರ ಹಾಕಿಸಿಕೊಂಡೇ ಬಾ" ಎಂದೆ. ಅಷ್ಟರಲ್ಲಿ ಅಮ್ಮ ಕಸಿದುಕೊಂಡು "ಮೊನ್ನೆ ನಾನು ನನ್ನ ಕನ್ನಡಕವನ್ನು ಅಕಸ್ಮಾತ್  ಆಚೆ ಬಿಟ್ಟುಬಿಟ್ಟಿದ್ದೆ, ದ್ಯಾಮ್ಯಾ ‘ಅಮ್ಮಾ ಹೆಗಡೇರು ಮತ್ತೆ ಕನ್ನಡಕ ಅಲ್ಲಿ ಬಿಟ್ಟಿದ್ದರು’ ಎಂದು ತಂದು ಕೊಟ್ಟ" ಎಂದಳು. ನನಗಾಶ್ಚರ್ಯ! ಅಮ್ಮ ಸಾಮಾನ್ಯವಾಗಿ ಕನ್ನಡಕವನ್ನು ಅಲ್ಲಿ-ಇಲ್ಲಿ ಇಡುವುದೇ ಇಲ್ಲ. "ನಿನಗೂ ಶುರುವಾಯಿತಾ? ಅದೇನು ಸೋಂಕು ರೋಗವಾ?" ಕೇಳಿದೆ.  ಅಮ್ಮ ಮತ್ತೆ ನಗತೊಡಗಿದಳು.

ಅಂತೂ ಅಪ್ಪನ ಕನ್ನಡಕವೆಂದರೆ ನಮಗೊಂದು ಹಾಸ್ಯಾಸ್ಪದ ವಸ್ತು ನಿಜ, ಆದರೆ ಅಮ್ಮನೂ ಶುರುಮಾಡಿಕೊಂಡಳಾ?! ಇನ್ನೇನು ಕೆಲ ದಿನಗಳಲ್ಲಿ ಅಪ್ಪನ ಹೊಸ ಕನ್ನಡಕ ಬರಲಿದೆ. ಇನ್ನೂ ಏನೇನು ಅವಾಂತರಗಳಾಗಬೇಕಿದೆಯೋ ಕಾಡು ನೋಡಬೇಕು! 

August 7, 2012

ನೊಣ ತಿಂದು (ಉತ್ತರ ಕನ್ನಡದ ಗಾದೆ – 255 ಮತ್ತು 256)


ನೊಣ ತಿಂದು ಜಾತಿ ಕೆಟ್ಟಂತೆ.
ಯಾವುದೇ ಮಾಂಸವನ್ನು ತಿಂದರೂ ಜಾತಿ ಕೆಡುತ್ತದೆ. ನೊಣದಂಥ ಕೀಟವನ್ನು ತಿಂದರೂ ಅದು ಮಾಂಸವೇ ಆಗಿರುವುದರಿಂದ ಜಾತಿ ಕೆಟ್ಟೇ ಕೆಡುತ್ತದೆ. ಎಷ್ಟೋ ವರ್ಷಗಳ ಕಾಲ ಜಾತಿಗೆ ಬದ್ಧನಾಗಿ ನಡೆದುಕೊಂಡು ಒಮ್ಮೆ ಅರಿವಿಲ್ಲದೆಯೇ ನೊಣವನ್ನು ತಿಂದು ಜಾತಿ ಕೆಟ್ಟುಹೋಗುತ್ತದೆ. ಅಂದರೆ, ಎಷ್ಟೋ ವರ್ಷ ಸರಿಯಾಗಿ ನಡೆದುಕೊಂಡು ಎಂದಾದರೊಮ್ಮೆ ಅತಿ ಚಿಕ್ಕ ತಪ್ಪಿನಿಂದಾಗಿ reputation ಕೆಡುವಂತಾದರೆ ಈ ಗಾದೆಯನ್ನು ಬಳಸುತ್ತಾರೆ- "ಅಯ್ಯೋ, ನೊಣತಿಂದು ಜಾತಿ ಕೆಟ್ಟಂತಾಯಿತು" ಎಂದು. ಇನ್ನೂ ಕೆಲವೊಮ್ಮೆ, “ಸಣ್ಣ-ಪುಟ್ಟ ತಪ್ಪುಗಳಾಗುವ ಬಗ್ಗೆ ಹುಷಾರಾಗಿರೋಣ; ನೊಣ ತಿಂದು ಜಾತಿ ಕೆಡುವುದು ಬೇಡ" ಎಂದೂ ಕೂಡ ಹೇಳುತ್ತಾರೆ.

ಇದೇ ರೀತಿಯಲ್ಲಿ ಬಳಸುವ ಇನ್ನೊಂದು ಗಾದೆ- ಮಾಳಶೆಟ್ಟಿ ಸಾಯುವ ಕಾಲಕ್ಕೆ ಮೀನು ತಿಂದಿದ್ದ. ಶೆಟ್ಟಿಯಾದರೂ ಅವನು ಎಂದೂ ಮೀನು ತಿಂದಿರಲಿಲ್ಲ, ಆದರೆ ಅದೇನಾಯಿತೋ ಗೊತ್ತಿಲ್ಲ- ಸಾಯುವ ಕಡೇ ಕಾಲದಲ್ಲಿ ಮೀನು ತಿಂದುಬಿಟ್ಟಿದ್ದ!

July 9, 2012

ಬಾಳೇಕಾಯಿ ಕಸ


ನಮ್ಮೂರು ಶಿರಸಿಯಿಂದ ಬೆಂಗಳೂರಿಗೆ ಮಗನ ಮನೆಗೆ ಅಪ್ಪ ಬಂದಿದ್ದರು. ರಾತ್ರಿ ಅವರ ಕಾಲಿಗೆ ಬಾಳೇಕಾಯಿ ಕಸ ಬಂತು. ‘ಕಸ ಬರುವುದು’ ಎಂದರೆ ಸ್ನಾಯುಸೆಳೆತ ಉಂಟಾಗುವುದು ಎಂದರ್ಥ. ಅದನ್ನು ‘ಕಸ’ ಎಂದು ಯಾಕೆ ಕರೆಯುತ್ತಾರೆ ಎನ್ನುವುದು ನನಗೂ ಗೊತ್ತಿಲ್ಲ. ಕೆಲವೊಮ್ಮೆ ದೇಹದ ಯಾವುದಾದರೂ ಭಾಗದಲ್ಲಿ ತೀವ್ರವಾದ ಸ್ನಾಯುಸೆಳೆತ ಉಂಟಾದರೆ ಆ ಭಾಗದ ಸ್ನಾಯುಗಳು ಒಂದು ಬಾಳೆಕಾಯಿಯಷ್ಟು ದೊಡ್ಡದಾಗಿ ಉಬ್ಬಿಕೊಂಡುಬಿಡುತ್ತವೆ. ನೋಡಲು ಒಂದು ಸಣ್ಣ ಬಾಳೆಕಾಯಿ ಅಂಟಿಕೊಂಡಿರುವಂತೆ ಕಾಣಿಸುತ್ತದೆ. ಆ ರೀತಿ ಆಗುವುದನ್ನು ‘ಬಾಳೇಕಾಯಿ ಕಸ’ ಬರುವುದು ಎನ್ನುತಾರೆ. ಇನ್ನೂ ಕೆಲವರು ‘ಬಾಳೇಕಾಯಿ ಬಂದಿದೆ’ ಎಂದಷ್ಟೇ ಹೇಳುವುದೂ ಉಂಟು. ವಯಸ್ಸಾದಮೇಲೆ ಸ್ನಾಯುಗಳು ಬಲಹೀನವಾದಮೇಲೆ ಇದು ಪದೇಪದೇ ಬರುವುದುಂಟು. ಆ ರೀತಿ ಬಾಳೇಕಾಯಿ ಬಂದಾಗ ಉಂಟಾಗುವ ನೋವು ಅತ್ಯಂತ ತೀವ್ರ ತರದ್ದು; ಸಾಮಾನ್ಯದ ನೋವುನಿವಾರಕಗಳಿಗೆ ಕಡಿಮೆಯಾಗುವುದಿಲ್ಲ.

ಆ ರೀತಿ ಬಾಳೇಕಾಯಿ ಬಂದು ರಾತ್ರಿಯಿಡೀ ಗೋಳಾಡಿಡ ಅಪ್ಪನನ್ನು ಮರುದಿನ ಮಗ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದ. ಡಾಕ್ಟರು “ಏನಾಯಿತು?” ಎಂದರು. ಮಗ ಬಾಯಿಬಿಡುವಷ್ಟರಲ್ಲಿ ಅಪ್ಪ, “ಡಾಕ್ಟ್ರೇ, ಯಂತಾ ಮಾಡದು... ನಿನ್ನೆ ರಾತ್ರೆ ಬಾಳೇಕಾಯಿ ಬಂದು.... ವಂದೇಸಮ ಜಗ್ತಾ... ಶಳ್ತಾ ಅಂದ್ರೇ... ರಾತ್ರಿಡೀ ನಿದ್ದಿಲ್ಲಾಳಿ, ಗುಳ್ಗೆ ತಗಂಡ್ರೂ ಬಗ್ಲಿಲ್ಲಾ.... ನಾ ಇಲ್ದೋದ್ರೆ ಊರಲ್ಲೆಲ್ಲಾ ಇದ್ದಾಗ ಈ ಗುಳ್ಗೆ ಗಿಳ್ಗೆ ಯಲ್ಲಾ ತಗಳದಿಲ್ಲಾ ಹೇಳಿ. ನಮ್ದೆಂತಾ ಇದ್ರೂ ತೈಲ ಹಚ್ಚಿ ತಿಕ್ಕದೇಯಾ. ಇಲ್ ಬಂದ್ಕಂಡು ಯಂತಾರೂ ಪರಾಮಶಿ ಆಗದು ಬ್ಯಾಡಾ ಹೇಳಿ... ಇದೆ ಇಂವ ಕೊಟ್ಟ ಗುಳ್ಗೆ ತಗಂಡೆ”.  ಮುಂದೆ ನಾನು ಹೇಳಬೇಕಾಗಿಲ್ಲ. ಡಾಕ್ಟರು ಕಣ್ಣು ಕಣ್ಣು ಬಿಟ್ಟರು, ಅರ್ಥವಾಗಲಿಲ್ಲ. ಅಪ್ಪ ಮುಂದುವರಿಸಬೇಕೆನ್ನುವಷ್ಟರಲ್ಲಿ ಮಗ ಅವನನ್ನು ತಡೆದು, ಕನ್ನಡವನ್ನು ಕನ್ನಡಕ್ಕೆ “translate” ಮಾಡಿ, ಡಾಕ್ಟರಿಗೆ ಅರ್ಥವಾಗುವ ಕನ್ನಡದಲ್ಲಿ ಹೇಳಿದ, “ನಿನ್ನೆ ರಾತ್ರಿ ಅವರಿಗೆ muscle catch ಆಗಿ, ತುಂಬಾ pain ಆಯ್ತು. Pain killer tablet ಮತ್ತೆ spray ನಲ್ಲಿ ಕೂಡ ಕಡಿಮೆಯಾಗಲಿಲ್ಲ. ಅದಕ್ಕೆ ತಮ್ಮ ಹತ್ತಿರ....”

ಉತ್ತರ ಕನ್ನಡದಲ್ಲಿ, ಅದರಲ್ಲೂ ವಿಶೇಷವಾಗಿ ಹವ್ಯಕರಲ್ಲಿ ಅನೇಕ ರೀತಿಯ ವಿಚಿತ್ರವಾದ ಪದಗಳಿವೆ. ಇತರರಿಗೆ ಅವುಗಳನ್ನು ಮೊದಲಬಾರಿಗೆ ಕೇಳಿದರೆ ಅರ್ಥವೇ ಆಗುವುದಿಲ್ಲ. ಉದಾಹರಣೆಗೆ, ‘ಪರಾಮಶಿ’ ಎಂದರೆ ಅತಿಸಣ್ಣ ಪ್ರಮಾಣದ ಅನಾಹುತ. ‘ಕಪ್ಪು’ ಎಂದರೆ ಚುಚ್ಚು. ‘ಮುಳ್ಳು ಕಪ್ಪಿತು’ ಎಂದರೆ ಮುಳ್ಳು ಚುಚ್ಚಿತು ಎಂದರ್ಥ. ‘ಹರುಕು ಅಥವಾ ಗಿಬುರು’ ಎಂಬುದರ ಅರ್ಥ ‘ಪರಚು’. ಬೆಕ್ಕು ಪರಚಿತು ಎನ್ನುವುದನ್ನು ‘ಬೆಕ್ಕು ಹರುಕಿತು ಅಥವಾ ಬೆಕ್ಕು ಗಿಬುರಿತು’ ಎಂದು ಹೇಳುತ್ತಾರೆ. ‘ಅರಚು ಅಥವಾ ಅರ್ಚು’- ಯಾವುದಾದರೂ ಎರಡು ವಸ್ತುಗಳ ನಡುವೆ ಸಿಕ್ಕುಬಿದ್ದು ಪೆಟ್ಟಾಗುವುದು ಉದಾ: “ಬಾಗಿಲಿಗೆ ಸಿಕ್ಕಿ ಕೈಬೆರಳು ಅರ್ಚಿ ಹೋಯಿತು”.    

ಅದೆಲ್ಲಾ ಹೊಗಲಿ, ‘ನೋವಾಗುತ್ತಿದೆ’ ಎನ್ನುವುದನ್ನು ಉತ್ತರ ಕನ್ನಡದ ಜನರು ಎಷ್ಟೆಲ್ಲಾ ಶಬ್ದಗಳನ್ನು ಬಳಸಿ ಹೇಳುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನೋಯ್ತು, ಶಳಿತು, ವಡಿತು, ಜಗಿತು, ಘಮಿತು, ಭುಗುಭುಗು ಗುಡ್ತು ಹೀಗೇ ಇನ್ನೂ ಹಲವಾರು. But each term corresponds to a different type of pain or sensation or sometimes to a pain in different parts of the body. ವಿವರಿಸುವುದು ಅತ್ಯಂತ ಕಷ್ಟ. ಅದು ಅಲ್ಲೇ ಹುಟ್ಟಿ ಬೆಳೆದವರಿಗೆ ಮಾತ್ರ ಗೊತ್ತಾಗಬಹುದೇನೊ! ಉದಾಹರಣೆಗೆ,

ನೋವು: ಸಾಮಾನ್ಯವಾಗಿ ಎಲ್ಲರೂ ಹೇಳುವಂಥದು. ದೇಹದ ಯಾವುದೇ ಭಾಗಕ್ಕೆ ಗಾಯವಾಗದೇ ಪೆಟ್ಟಾದಾಗ ಆಗುವಂಥದು. ಆದರೆ ಪೆಟ್ಟಾಗದೇ ಬಂದಂಥ ನೋವೂ ಕೂಡ ಇರಬಹುದು. ಉದಾ: ತಲೆ, ಬೆನ್ನು, ಸೊಂಟ, ಕಾಲು, ಕೈ ನೋವು.

ಸೆಳೆತ (ಶಳ್ತ): ಒಂದು ಭಾಗವನ್ನು ಎಲ್ಲಾ ಕಡೆಯಿಂದ ಎಳೆದಂತಾಗುವ ನೋವು. ಊತುಕೊಂಡು ನೋವಾಗುವುದು, ಜಜ್ಜಿದಂತಾಗಿ ನೋವಾಗುವುದು ಕೂಡ ಸೆಳೆತದಲ್ಲಿ ಸೇರಿಕೊಳ್ಳುತ್ತವೆ. ಉದಾ: ಬಾಗಿಲಿಗೆ ಸಿಕ್ಕಿ ಅರ್ಚಿಹೋದ ಕೈಬೆರಳು ಸೆಳೆಯುತ್ತದೆ (ಶಳಿಯುತ್ತದೆ).

ವಡೆತ (ವಡ್ತ): ಖುರುವಿನಂತ ಹುಣ್ಣಾದಾಗ ನೋಯುವ ಪರಿ. ಈ ಶಳ್ತ-ವಡ್ತಗಳನ್ನು ಬಹಳಷ್ಟು ಸಲ ಜೊತೆಯಾಗಿ ಉಪಯೋಗಿಸುತ್ತಾರೆ; ಶಳ್ತಾs-ವಡ್ತಾs ಎಂದು. ತಲೆ ಒಂದೇ ಸಮ ಹೊಡೆದುಕೊಳ್ಳುತ್ತಿದೆ ಎನ್ನುವುದಕ್ಕೂ ಕೂಡ ಉಪಯೋಗಿಸುತ್ತಾರೆ, ‘ತಲೆವಡ್ತ’ ಎಂದು! ಎಷ್ಟೋ ಸಲ ಸೆಳೆತ ಮತ್ತು ವಡೆತಗಳನ್ನು ಬದಲಿಯಾಗಿ ಉಪಯೋಗಿಸುತ್ತಾರೆ. ಆದರೆ ‘ತಲೆವಡ್ತ’ದ ಬದಲು ‘ತಲೆಶಳ್ತ’ ಎಂದರೆ ನಗೆಪಾಟಲಿಗೆ ಗುರಿಯಾಗುತ್ತೀರಿ. ಏಕೆಂದರೆ ಅದು ಬಳಕೆಯಲ್ಲಿಲ್ಲ! 

ಜಗಿತ (ಜಗ್ತ): ಇಕ್ಕಳವನ್ನು ಹಾಕಿ ಒತ್ತಿ-ಬಿಟ್ಟು ಮಾಡಿದರೆ ಆಗುವಂಥ ನೋವು. ಬಹುತೇಕ ಕಾಲು, ಕೈಗಳ ನೋವನ್ನು ಹೇಳುವಾಗ ಉಪಯೋಗಿಸುತ್ತಾರೆ- “ಕಾಲು ಜಗಿಯುತ್ತಿದೆ” ಎಂದು. ನೆನಪಿರಲಿ, ತಲೆ ಜಗಿಯುತ್ತಿದೆ ಎಂದು ಮಾತ್ರ ಯಾರೂ ಹೇಳುವುದಿಲ್ಲ!

ಘಮಿತ: ಖಾರದ ಪದಾರ್ಥ ತಾಕಿದಾಗ ಆಗುವ ಅನುಭವ. ಉದಾ: “ಮೆಣಸಿನ ಪುಡಿ ಮುಟ್ಟಿದ್ದರಿಂದ ಕೈ ಘಮಿಯುತ್ತಿದೆ”.

ಭುಗುಭುಗು ಗುಡು: ಸಾಮಾನ್ಯವಾಗಿ ಅಂಗಾಲಿನಲ್ಲಿ ಉಂಟಾಗುವ ಅನುಭವಕ್ಕೆ ಬಳಸುವಂಥದ್ದು. ಬೆಂಕಿಯ ಉರಿ ತಾಕಿದಾಗ ಆಗುವಂಥ ಅನುಭವ. ಉದಾ: “ಬಿಸಿಲಿನಲ್ಲಿ ತುಂಬಾ ನಡೆದಿದ್ದರಿಂದ ಅಂಗಾಲು ಭುಗುಭುಗು ಗುಡುತ್ತಿದೆ”. ಬಿಸಿ ತಾಕಿ ಸುಟ್ಟ ಉರಿಯನ್ನೂ ಕೂಡ ಹೀಗೆ ಹೇಳಬಹುದು.

ಇಷ್ಟೆಲ್ಲಾ ವಿವರಿಸಿದ ಮೇಲೆಯೂ ಎಲ್ಲವನ್ನೂ ಹೇಳಿದ್ದೇನೆ ಎನ್ನುವ ಭರವಸೆಯಿಲ್ಲ. ಇನ್ನೂ ಹಲವಾರು ನೋವಿಗೆ ಸಂಭಂದಿಸಿದ ಶಬ್ದಗಳು ಉಳಿದುಹೋಗಿರಬಹುದು. ನೋವನ್ನು ಇಷ್ಟೆಲ್ಲಾ ಬಗೆಯಲ್ಲಿ ಬಣ್ಣಿಸಬಹುದು, ಮತ್ತು ನೋವಿನಲ್ಲಿರುವ ಆ ಸಣ್ಣ-ಪುಟ್ಟ ವ್ಯತ್ಯಾಸಗಳನ್ನೂ ಕೂಡ differentiate ಮಾಡಬಹುದು ಎಂಬುದನ್ನು ವಿಚಾರ ಮಾಡಿದರೆ ಆಶ್ಚರ್ಯವಾಗುತ್ತದೆ!  

June 26, 2012

ಕಣ್ಣು ಹೆದರಿಸಿತ್ತು (ಉತ್ತರ ಕನ್ನಡದ ಗಾದೆ – 254)

ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು.
ಇದೆಂಥ ಸುಂದರ ಗಾದೆ ಗೊತ್ತಾ? ನನ್ನ ಅತ್ಯಂತ ಪ್ರೀತಿಯ ಗಾದೆಗಳಲ್ಲೊಂದು. ಈ ಗಾದೆಯನ್ನು ನಾನು ಮೊಟ್ಟಮೊದಲ ಬಾರಿ ಕೇಳಿದ್ದು ಚಿಕ್ಕವಳಿದ್ದಾಗ ಗದ್ದೆನಾಟಿಯ ಸಮಯದಲ್ಲಿ. ಗದ್ದೆನಾಟಿ ಮಾಡುವಾಗ ಭತ್ತದ ಸಸಿಯನ್ನು ನೆಡುತ್ತಾ ಹಿಮ್ಮುಖವಾಗಿ ಹೋಗುತ್ತಿರುತ್ತಾರೆ. ಒಂದು ಗದ್ದೆಯನ್ನು ಪ್ರಾರಂಭಿಸಿದಾಗ ಹಿಂದಿರುಗಿ ನೋಡಿದರೆ ಅದು ಮುಗಿಯುವುದೇ ಇಲ್ಲ ಎನ್ನುವಷ್ಟು ದೂರವಾಗಿ ಕಾಣಿಸುತ್ತದೆ. ಆಗ ನಾಟಿ ಮಾಡುತ್ತಿರುವವರಿಗೆ Negative feelings ಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ ನಾಟಿಯ ಸಮಯದಲ್ಲಿ ಅಲ್ಲಿರುವ ಹಿರಿಯರು ಕಿರಿಯರಿಗೆ ಹಿಂದಿರುಗಿ ನೋಡಲು ಬಿಡುವುದಿಲ್ಲ. ಒಂದು ಸಲ ಯಾರೋ ಹಿಂದಿರುಗಿ ನೋಡಿ “ಇದೇನು ಮುಗಿಯುವ ರೀತಿಯೇ ಕಾಣಿಸುತ್ತಿಲ್ಲವಲ್ಲ?” ಎಂದಾಗ ಅಲ್ಲಿರುವ ಹಿರಿಯರು ಯಾರೋ ಹೀಗೆ ಹೇಳಿದ್ದರು, “ಸುಮ್ಮನಿರು, ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು”. ನಿಜ, ಕಣ್ಣಳತೆ ಯಾವತ್ತೂ ಬೆಚ್ಚಿಬೀಳಿಸುತ್ತದೆ. “ಅಯ್ಯೋ ಇಷ್ಟೆಲ್ಲಾ ಕೆಲಸವನ್ನು ಮುಗಿಸುವುದು ಹೇಗಪ್ಪಾ?” ಎನ್ನುವ ಭಾವನೆಯನ್ನು ಹುಟ್ಟಿಸುತ್ತದೆ. ಆದರೆ ಕೆಲಸವನ್ನು ಪ್ರಾರಂಬಿಸಿದರೆ ಅದು ತಾನಾಗಿಯೇ ಮುಗಿಯುತ್ತಾ ಬರುತ್ತದೆ. A journey of thousand miles begins with a single step! ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಬರೆಯಲಿಕ್ಕಿರುವ ಪುಟಗಳ ಸಂಖ್ಯೆಯನ್ನು ನೋಡಿ ಭಯಬಿದ್ದು ನನಗೇ ನಾನು ಹೇಳಿಕೊಳ್ಳುತ್ತಿದ್ದೆ- “ಇಲ್ಲ.. ಇಲ್ಲ, ಬರೆಯುತ್ತಾ ಹೋದಂತೆ ಗೊತ್ತೇ ಆಗದಂತೆ ಮುಗಿದುಹೋಗುತ್ತದೆ; ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು” ಎಂದು. ಇಂದೂ ಕೂಡ ಎಷ್ಟೊಂದು ಬಾರಿ ನನಗೇ ನಾನು ಈ ಮಾತನ್ನು ಹೇಳಿಕೊಳ್ಳುತ್ತೇನೆ; ಕೆಲಸ ಮಾಡುವ ಉತ್ಸಾಹ ಬರುತ್ತದೆ. 

June 21, 2012

ಉಣ್ಣಲಿಕ್ಕೆ ಇಲ್ಲದಿದ್ದರೆ (ಉತ್ತರ ಕನ್ನಡದ ಗಾದೆ – 253)

ಉಣ್ಣಲಿಕ್ಕೆ ಇಲ್ಲದಿದ್ದರೆ ಸಣ್ಣಕ್ಕಿ ಅನ್ನ, ಉಡಲಿಕ್ಕೆ ಇಲ್ಲದಿದ್ದರೆ ಪಟ್ಟೆ ಸೀರೆ.
ನಿಜವಾಗಿ ಈ ಗಾದೆ "ಉಣ್ಣಲಿಕ್ಕೆ ಇಲ್ಲದಿದ್ದರೂ ಸಣ್ಣಕ್ಕಿ  ಅನ್ನ, ಉಡಲಿಕ್ಕೆ ಇಲ್ಲದಿದ್ದರೂ ಪಟ್ಟೆ ಸೀರೆ" ಎಂದಾಗಬೇಕು. ಆದರೆ ಆಡು ಭಾಷೆಯಲ್ಲಿ “ ಇಲ್ಲದಿದ್ದರೂ” ಎನ್ನುವುದು “ಇಲ್ಲದಿದ್ದರೆ” ಎಂದು ಮಾರ್ಪಾಟಾಗಿದೆ. ತಮ್ಮ ಹಣಕಾಸಿನ ಮಿತಿಯನ್ನು ಅರಿತುಕೊಳ್ಳದೇ ಖರ್ಚು ಮಾಡುವವರನ್ನು ನೋಡಿದಾಗ ಹೇಳುವ ಮಾತು ಇದು. ಮನೆಯಲ್ಲಿ ಅಕ್ಕಿಗೆ ಗತಿಯಿಲ್ಲದಿದ್ದರೂ ಹೇಗಾದರೂ ಸಣ್ಣಕ್ಕಿ ತಂದು ಊಟಮಾಡುತ್ತಾರೆ, ಬಟ್ಟೆಗೆ ಗತಿಯಿಲ್ಲದಿದ್ದರೂ ರೇಷ್ಮೆಸೀರೆಯನ್ನೇ ಉಡುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ  ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಇನ್ನೊಂದು ಗಾದೆ ಇದೇ ರೀತಿಯ ಅರ್ಥವನ್ನು ಕೊಡುತ್ತದೆ. ನೋಡಿ- http://seemahegde78.blogspot.nl/2008/02/163-164.html

February 6, 2012

ಡಾಕ್ಟರ ಹೆಂಡತಿ (ಉತ್ತರ ಕನ್ನಡದ ಗಾದೆ – 252)

ಡಾಕ್ಟರ ಹೆಂಡತಿ ಹುಳಿಸಿಕೊಂಡು ಸಾಯುತ್ತಾಳೆ.
'ಹುಳಿಸಿಕೊಂಡು' ಎಂದರೆ 'ಹುಳುವಾಗಿಸಿಕೊಂಡು' ಅಂದರೆ... 'ಹುಳುವನ್ನು ದೇಹದಲ್ಲಿ ಹೊಂದಿರು' ಎಂದರ್ಥ. ದನ-ಕರುಗಳಿಗೆ ಗಾಯಗಳಾಗಿ ಕೆಲವೊಮ್ಮೆ ಅದರಲ್ಲಿ ಹುಳುಗಳಾಗುತ್ತವೆ. ಆಗ ಹೇಳುವುದುಂಟು- "ದನ ಹುಳಿಸಿಕೊಂಡಿದೆ" ಎಂದು.

ಡಾಕ್ಟರಿಗೆ ಬೇರೆ ರೋಗಿಗಳನ್ನು ನೋಡಿ ಮುಗಿಸುವಷ್ಟರಲ್ಲೇ ಸಾಕು ಸಾಕಾಗಿರುತ್ತದೆ. ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೂ ನೋಡಲು ಪುರಸೊತ್ತಿಲ್ಲ. ಹೆಂಡತಿಗೆ ಚಿಕ್ಕ ಗಾಯವಾದರೆ, "ಚಿಕ್ಕ ಗಾಯ ಬಿಡು, ಹೋಗುತ್ತದೆ" ಎಂದು ಉಪೇಕ್ಷಿಸುತ್ತಾನೆ. ಅದೇ ಗಾಯ ದೊಡ್ಡದಾಗುತ್ತದೆ, ಅದರಲ್ಲಿ ಹುಳುಗಳಾಗುತ್ತವೆ, ಆದರೂ ನೋಡಲು ಡಾಕ್ಟರಿಗೆ ಬಿಡುವಿಲ್ಲ. ಹುಳುಗಳನ್ನು ಹೊಂದಿದ ಗಾಯ ಹೆಂಡತಿಯ ಸಾವಿಗೂ ಕಾರಣವಾಗಬಹುದು. ಊರಿಗೆಲ್ಲ ಮದ್ದು ನೀಡುವ ಡಾಕ್ಟರು ಮನೆಯ ಜನರ ಆರೋಗ್ಯವನ್ನು ಉಪೇಕ್ಷಿಸಿದಾಗ ಬೇಸರದಿಂದ ಹೇಳುವ ಮಾತು ಇದು. ಇಂಥದೇ ಒಂದು ಗಾದೆಯನ್ನು ಈ ಹಿಂದೆ ಹಾಕಿದ್ದೇನೆ ನೋಡಿ- http://seemahegde78.blogspot.in/2008/10/199.html

ಕುಂಬಾರನ ಮನೆಯ ಮಡಿಕೆ ತೂತು ಮತ್ತು ನೇಕಾರನ ಹೆಂಡತಿಗೆ ಹರುಕಲು ಸೀರೆ ಎನ್ನುವ ಗಾದೆಗಳಂತೆಯೇ ಡಾಕ್ಟರ ಹೆಂಡತಿಯ ಗಾದೆಯೂ ಕೂಡ.   

January 25, 2012

ಇವು ನನ್ನನ್ನು ನಗಿಸಿದವು!


ಕೆಲವು ಬರಹಗಳು ಎಷ್ಟು funny ಆಗಿರುತ್ತವೆಂದರೆ ನಗದಿರಲು ಸಾಧ್ಯವೇ ಇಲ್ಲ. Stressful ಜೀವನದಲ್ಲಿ ಇವು ಮನಸ್ಸಿಗೆ ಮುದ ಕೊಡುವುದಂತೂ ನಿಜ. 





ನಾಗವಾರದ ಬಳಿ ring road ನ ಪಕ್ಕದಲ್ಲಿ ಕಂಡಿದ್ದು. ಈ photo ಚಲಿಸುತ್ತಿದ್ದ bus ನಲ್ಲಿ ಕುಳಿತಿದ್ದ ನಾನು cell phone ನಿಂದ ತೆಗೆದಿದ್ದರಿಂದ ಅಷ್ಟೊಂದು clear ಇಲ್ಲ. ಅಲ್ಲಿ ಬರೆದಿರುವುದು 'ಓಲ್ಡ್ ಬಿಲಿಂಡ್ಗ್ ಡೆಮಲೀಶನ್ ಕಂಟ್ರೆಕರ್ಸ್'. ಕೆಳಗಡೆ ಇಂಗ್ಲಿಷ್ ನಲ್ಲಿ ಬರೆದಿತ್ತು- ‘Old Building Demolition Contractors’. ಇದನ್ನು ನೋಡಿದ ಒಂದೆರಡು ತಿಂಗಳುಗಳ ನಂತರ ಮತ್ತೊಮ್ಮೆ ಅಲ್ಲಿ ಹೋದಾಗ ಈ board ಕಾಣಿಸಲಿಲ್ಲ, ಮುರಿದು ಬಿದ್ದಿತ್ತು. ಆ board ಇದ್ದ building demolish ಆಗಿ ಹೋಗಿದೆ! 



ರಸ್ತೆ ಕಿರಿದಿದೆಯೋ? ಕಿರಿದಾಗಿದೆಯೋ?- ಶಿರಸಿಯಿಂದ ಕುಮಟಾಕ್ಕೆ ಹೋಗುವಾಗ ದೇವಿಮನೆ ಘಟ್ಟ ಮುಗಿದ ನಂತರ ಕಂಡಿದ್ದು.  


ಇದು ಬೆಂಗಳೂರಿನಲ್ಲಿ ಎಲ್ಲಿ ಬೇಕಾದಲ್ಲಿ ಕಾಣಸಿಗುತ್ತದೆ. ಇದನ್ನು ಬರೆದವರು 'ಮಧ್ಯ'ಪಾನ (ಮದ್ಯಪಾನ) ಮಾಡಿಕೊಂಡೇ ಬರೆದಿರಬಹುದೇ?


ಮೈಸೂರಿನಲ್ಲಿ 'Nirmala Convent (Nirmalacon) ನಿಂದ L&T' ವರೆಗೆ ಎಂಬುದು ಕನ್ನಡದಲ್ಲಿ 'ಕಹಜಕ ದಿಂದ ಹಜಕಲಜಹ'ದ ವರೆಗೆ ಎಂದಾಗುತ್ತದೆಯೆ?


Pregnancy test ಮಾಡಿಸಿದ ನಂತರ silent ಆಗಿರಬೇಕೇ? ಗಂಗಾನಗರದ 5th main ನಲ್ಲಿ ನಡು ರಸ್ತೆಯಲ್ಲಿ ಇದು ನನ್ನನ್ನು ನಗಿಸಿತ್ತು!