June 21, 2012
ಉಣ್ಣಲಿಕ್ಕೆ ಇಲ್ಲದಿದ್ದರೆ (ಉತ್ತರ ಕನ್ನಡದ ಗಾದೆ – 253)
February 6, 2012
ಡಾಕ್ಟರ ಹೆಂಡತಿ (ಉತ್ತರ ಕನ್ನಡದ ಗಾದೆ – 252)
January 25, 2012
ಇವು ನನ್ನನ್ನು ನಗಿಸಿದವು!
January 18, 2012
ಬಡಿ ಗೋವಿಗೇಕೆ (ಉತ್ತರ ಕನ್ನಡದ ಗಾದೆ – 251)
January 4, 2012
ಅಪ್ಪನ ಕನ್ನಡಕ
ಅಷ್ಟರ ನಂತರ ಅವನ ಮತ್ತು ಕನ್ನಡಕದ ನಡುವೆ ಏನೋ ಅಂತರ ಅವಿನಾಭಾವ ಸಂಬಂಧ ಬೆಳೆದುಬಿಟ್ಟಿದೆ. ಇತ್ತೀಚಿಗೆ ವರ್ಷದಿಂದ ವರ್ಷಕ್ಕೆ ವಯಸ್ಸಾಗುತ್ತಿದ್ದಂತೆ ಕನ್ನಡಕವಿಲ್ಲದೆಯೇ ಕಳೆಯುವುದೇ ಸಾಧ್ಯವಿಲ್ಲವಾಗಿದೆ. ಆದರೆ ಅವನು ಕನ್ನಡಕದ ಜೊತೆ ಮಾಡಿಕೊಳ್ಳುತ್ತಿರುವ ಅವಾಂತರಗಳು ಒಂದೆರಡಲ್ಲ. ವರ್ಷಕ್ಕೊಂದರಂತೆ ಅವಾಂತರಗಳು ನಡೆದು ಹೋಗಿವೆ. ಅದನ್ನೆಲ್ಲ ಬರೆಯುವ ಮನಸ್ಸಾಗಿದೆ. ಎಷ್ಟೋ ವರ್ಷಗಳಿಂದ ಅವನ ಜೊತೆಗಿದ್ದ ಆ ದಪ್ಪ frame ನ ಕನ್ನಡಕ ಕೆಲವು ವರ್ಷಗಳ ಹಿಂದೆ ಮುರಿದು ಹೋಗಿ ನಂತರ ಹೊಸದೊಂದನ್ನು ಕೊಂಡಿದ್ದ. ಆದರೆ ಅದೂ ಕೂಡ ನಮಗೆ ಹಿಡಿಸುವಂಥದಾಗಿರಲಿಲ್ಲ. ಮೊದಲಿನದಕ್ಕಿಂತ ಪರವಾಗಿಲ್ಲ ಎಂದು ಸುಮ್ಮನಿದ್ದೆವು.
೨೦೦೮: ಜೇಬಿನಲ್ಲಿ ಕನ್ನಡಕ ಇಟ್ಟುಕೊಂಡಿದ್ದ. ಮನೆಯ ಭಾವಿಯಲ್ಲಿ ಏನೋ ಸದ್ದದಂತಾಯಿತು. ಇಣುಕಿದ. ಕನ್ನಡಕ ಭಾವಿಯಲ್ಲಿ ಬಿತ್ತು. ಅಮ್ಮ ನಮಗೆ phone ಮಾಡಿ ಹೇಳಿದಳು. ನಮಗೆ ಖುಷಿ. ಭಾವಿ ನೀರು ಖಾಲಿ ಮಾಡಲು ಮುಂದಾದ. ಅಮ್ಮ "ಬೇಡ, ಬೇಸಿಗೆಯಲ್ಲಿ ನೀರು ಖಾಲಿ ಮಾಡಿದರೆ ಮತ್ತೆ ನೀರು ಸರಿಯಾಗಿ ತುಂಬಿಕೊಳ್ಳದಿದ್ದರೆ..." ಎಂದಳು. ಅಮ್ಮ ಯಾರದ್ದೋ ಮದುವೆಗೆ ಹೋದಳು. ಅಪ್ಪ water motor ಹಾಕಿ ಭಾವಿಯ ನೀರನ್ನೆಲ್ಲ almost ಖಾಲಿ ಮಾಡಿದ. ಭಾವಿಯಲ್ಲಿ ಇಳಿದುಕೊಂಡು ಅದರೊಳಗಿನ ಮೆತ್ತನೆಯ ಮಣ್ಣನ್ನು ನಿಧಾನವಾಗಿ ಕಾಲಿನಿಂದ ತುಳಿಯುತ್ತ ಕನ್ನಡಕ ಹುಡುಕಿಯೇ ಬಿಟ್ಟ!
೨೦೦೯: ಮಳೆಗಾಲ ಮುಗಿಯುತ್ತಾ ಬಂದಿತ್ತು. ರಸ್ತೆಗಳಲ್ಲೆಲ್ಲಾ ಎಲ್ಲಿ ನೋಡಿದರೂ ಹೊಂಡಗಳು. ಅಪ್ಪ ನನ್ನ ದೊಡ್ಡಮ್ಮನ ಮನೆಗೆ (ಸುಗಾವಿ ಊರು) ಶ್ರಾದ್ಧಕ್ಕೆಂದು ಹೋದವ ತಿರುಗಿ ಬರುತ್ತಿದ್ದ. ಕಂಡ್ರಾಜಿ ಎಂಬ ಊರಿನ ಒಂದು ಕಡೆ ತಿರುವಿನಲ್ಲಿ ಅವನ motorbike skid ಆಯಿತು. ನೆಲಕ್ಕೆ ಕೈ ಊರಿಕೊಂಡು ಬೀಳುವುದನ್ನು ಹೇಗೋ ತಪ್ಪಿಸಿಕೊಂಡ. Motorbike ಬಿತ್ತು. ಗಡಿಬಿಡಿಯಿಂದ ಅದನ್ನುಎತ್ತಿದ. ಬಟ್ಟೆ ಸ್ವಲ್ಪ ಕೆಸರಾಗಿತ್ತು. ಪಕ್ಕದ ಹೊಂಡದಲ್ಲಿ ಅವನ ನೀಲಿ cap ನ ಬಿಳಿಯ Reynolds pen ತೇಲುತ್ತಿತ್ತು. ಅದನ್ನು ಎತ್ತಿಕೊಂಡ. ಮನೆಗೆ ಬಂದ. ಬಂದ ನಂತರ ನೋಡಿದರೆ ಕನ್ನಡಕ ಕಾಣುತ್ತಿಲ್ಲ. Guess ಮಾಡಿದ- ‘ದಾರಿಯಲ್ಲಿ ಬೀಳುವಂತಾದಾಗ pen ಜೊತೆ ಜೇಬಿನಲ್ಲಿದ್ದ ಕನ್ನಡಕವೂ ಬಿದ್ದಿದೆ…. Pen ತೇಲುತ್ತಿದ್ದರೆ, ಕನ್ನಡ ಮುಳುಗಿತ್ತು…..’ ಕಂಡ್ರಾಜಿ ಊರಿನ ಅವನ ಪರಿಚಯದವರೊಬ್ಬರಿಗೆ phone ಮಾಡಿದ. “…….ಆ ತಿರುವಿನ ಇಂಥ ಹೊಂಡದಲ್ಲಿ ನನ್ನ ಕನ್ನಡಕ ಬಿದ್ದಿರಬೇಕು, ಸ್ವಲ್ಪ ನೋಡುತ್ತೀರಾ? ಸಿಕ್ಕಿದರೆ ದಯವಿಟ್ಟು ಬಿಸಲಕೊಪ್ಪದ ಅಂಗಡಿಗೆ ತಲುಪಿಸಿಡುತ್ತೀರಾ?” ಆ ಮಹಾನುಭಾವ ಹೋಗಿ ರಸ್ತೆಯ ಹೊಂಡದಲ್ಲಿ ಕೋಲು ಹಾಕಿ ಹುಡುಕಿದ, ನಂತರ phone ಮಾಡಿದ “ನಿಮ್ಮ ಕನ್ನಡಕ ಸಿಕ್ಕಿದೆ, ನಾಳೆ ಬಿಸಲಕೊಪ್ಪದ ಕಡೆ ಬರುವವನಿದ್ದೇನೆ, ಅಂಗಡಿಯಲ್ಲಿ ಕೊಟ್ಟಿರುತ್ತೇನೆ ಎಂದು.” ಅಪ್ಪ ಖುಷಿಯ ನಗೆ ನಕ್ಕ.
೨೦೧೦: ನಾನು ಯಾವಾಗಲೂ ಹೇಳುತ್ತಿದ್ದೆ, "ಕನ್ನಡಕಕ್ಕೆ ದಾರ ಹಾಕಿ ಕುತ್ತಿಗೆಗೆ ಹಾಕಿಕೋ" ಎಂದು. ಓದುವಾಗಷ್ಟೇ ಉಪಯೋಗಿಸುವ ಕನ್ನಡಕವನ್ನು ಉಳಿದ ಸಮಯದಲ್ಲಿ ಮನೆಯಲ್ಲಿರುವಾಗ ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿದ್ದ. ಬೇರೆ ಯಾಕಾದರೂ ಬೇಕಾಗಬಹುದು ಎಂಬ ವಿಚಾರ ಅವನದು. ಅದೇ ರೀತಿ ಜೇಬಿನಲ್ಲಿಟ್ಟುಕೊಂಡು motorbike drive ಮಾಡುತ್ತಿರಬೇಕಾದರೆ ರಸ್ತೆಯಲ್ಲಿ bus ಬಂತೆಂದು ಪಕ್ಕಕ್ಕೆ ಸರಿದ. ರಸ್ತೆಯ ಪಕ್ಕದಲ್ಲಿದ್ದ ಬಿದಿರಿನ ಪೊದೆಯಿಂದ (ಪೊದೆಗಳಿಗೆ ನಮ್ಮೂರ ಕಡೆ 'ಮಟ್ಟಿ' ಎನ್ನುತ್ತಾರೆ) ತೆಳ್ಳನೆಯ ಬಿದಿರಿನ ಎಳೆಯೊಂದು ದಾರಿಯವರೆಗೆ ಹೊರಬಂದಿತ್ತು. ಅದು ಅಪ್ಪನ ಜೇಬಿನಿಂದ ಆ ಕನ್ನಡಕವನ್ನು ಕಿತ್ತು ಎಲ್ಲೋ ಎಸೆದುಬಿಟ್ಟಿತು! ತಕ್ಷಣ motorbike ನಿಲ್ಲಿಸಿ ಸುತ್ತಮುತ್ತ ಹುಡುಕಿದ; ಎಲ್ಲೂ ಸಿಗಲಿಲ್ಲ. ಮನೆಗೆ ಬಂದು ಕಥೆ ಹೇಳಿದ. ಅಮ್ಮ "ಸಾಕು ಬಿಡಿ, ಆ ಕನ್ನಡಕ ನೋಡಿ ನೋಡಿ ಬಿದಿರು ಮಟ್ಟಿಗೂ ಬೇಜಾರಾಗಿತ್ತು" ಎಂದಳಂತೆ. ನಾನು, ರಘು ಇಂದಿಗೂ ಕೂಡ "ಬಿದಿರು ಮಟ್ಟಿಗೆ ಅಪ್ಪ ಕನ್ನಡಕ ಕೊಟ್ಟಿದ್ದಾನೆ, ಬಿದಿರು ಮಟ್ಟಿ ಚಾಳೀಸು ಹಾಕಿಕೊಂಡು ನಿಂತಿದೆ" ಎಂದೆಲ್ಲಾ ಅವನನ್ನು ಕಾಡುತ್ತೇವೆ.
೨೦೧೧: ಹೋದವರ್ಷ ಊರಿಗೆ ಹೋದಾಗ ಅಪ್ಪನ ಹೊಸ ಕನ್ನಡ ಆರಿಸಲು ನಾನೇ ಜೊತೆಗೆ ಹೋಗಿದ್ದೆ. Glass ನ ಬದಲು fibre ಹಾಕಿಸು ಹಗುರವಿರುತ್ತದೆ ಎಂದೆಲ್ಲಾ ಹೇಳಿ ಒಪ್ಪಿಸಿದೆ. ಅಂಗಡಿಯವನು scratch proof ಎಂದು ಹೇಳಿ ಅಪ್ಪನ ಕೈಯಿಂದ ಇನ್ನೊಂದಿಷ್ಟು ದುಡ್ಡು ಕೈಬಿಡಿಸಿದ. ಕನ್ನಡಕವೇನೋ ಚೆನ್ನಾಗಿತ್ತು, ಅಪ್ಪನಿಗೆ ಇಷ್ಟವೂ ಆಯಿತು. ಹಿಂದಿನ ವಾರ ನಾನು ಊರಿನಲ್ಲಿದ್ದೆ. ಕೆಲಸದ ನಿಮಿತ್ತ ಬೆಳಗಾವಿಗೆ ಹೋಗಬೇಕಿತ್ತು. ಬೆಳಿಗ್ಗೆ 5:30 ಗಂಟೆಗೆ ಬಿಸಲಕೊಪ್ಪದ bus stop ನ road ಪಕ್ಕದಲ್ಲಿ ಅಪ್ಪ, ನಾನು ನಿಂತಿದ್ದೆವು. ಅಪ್ಪ ನನ್ನನ್ನು bus ಹತ್ತಿಸಿ ಹಿಂದಿರುಗಿದ. ಸಂಜೆ ನಾನು ಹಿಂದಿರುಗಿ ಬಂದಾಗ ಸುದ್ದಿಯೊಂದು ಕಾದಿತ್ತು. ಅಪ್ಪನಿಗೆ ಬೆಳಿಗ್ಗೆ bus ನ board ಯಾಕೋ ಸರಿಯಾಗಿ ಕಂಡಿರಲಿಲ್ಲವಂತೆ, ಮಸುಕಾಗಿ ಕಂಡಿತ್ತಂತೆ. ಮನೆಗೆ ಬಂದು ನೋಡಿದರೆ ಕನ್ನಡಕ ಒಂದು glass ಎಲ್ಲೋ ಬಿದ್ದು ಹೋಗಿದೆ. ಮನೆಯೆಲ್ಲ ಹುಡುಕಿದ. ಎಷ್ಟೋ ಹೊತ್ತಿನ ಮೇಲೆ ನೆನಪಾಯಿತು ರಸ್ತೆಯಮೇಲೆ ಬಿದ್ದಿರಬೇಕು ಎಂದು. ಹೋಗಿ ನೋಡಿದರೆ glass ಅಲ್ಲಿಯೇ ಇತ್ತು! ಗಲೀಜಾಗಿತ್ತು, ಅದರ ಮೇಲೆ ಅಂಟಿನಂತಹ ಪದಾರ್ಥಗಳೂ ಇದ್ದವು. ಅದನ್ನು ಮನೆಗೆ ತಂದವನೇ ಅಪ್ಪ ಅದಕ್ಕೆ ಅಮ್ಮನ ಅಡಿಗೆ ಮನೆಯ scrub pad ಹಾಕಿ ಉಜ್ಜಿ ತೊಳೆದು ನೋಡಿದರೆ ಅದರ ತುಂಬೆಲ್ಲಾ scratch ಆಗಿಬಿಟ್ಟಿತು. ನಾನು "ಅದನ್ನೇಕೆ scrub pad ಹಾಕಿ ಉಜ್ಜಿದೆ ನೀನು? ಅಷ್ಟು ತಿಳಿಯಬೇಡವಾ ನಿನಗೆ?” ಅಂದೆ. ಆಗ ಅಪ್ಪ- "ಹೌದೆ, ಆವತ್ತು ನೀನೇ ಜೊತೆಯಲ್ಲಿದ್ದೆ ನೋಡು, ನೆನಪಿಲ್ಲವಾ, ಕನ್ನಡಕದ ಅಂಗಡಿಯವನು ಹೇಳಿದ್ದ ಇದು scratch proof glass ಅಂತ!" ನನಗನಿಸಿತು ಸುಮ್ಮನೆ ಅಪ್ಪನನ್ನು ಬೈಯ್ಯುವುದು. ಮುಗ್ಧ ಅವನು, ಹೇಳಿದ್ದನ್ನೆಲ್ಲ ನಂಬುತ್ತಾನೆ. ಈ ಜನರ marketing strategy ಎಲ್ಲ ಅವನಿಗೆಲ್ಲಿ ಅರ್ಥವಾಗಬೇಕು? ಅಂಗಡಿಯವನು ಹೇಳಿದ; ಅಪ್ಪ ನಂಬಿದ.
ಅಪ್ಪನ ೨೦೧೨ ರ ಕನ್ನಡಕದ ಅವಾಂತರವನ್ನು ಎದುರುನೋಡುತ್ತಿದ್ದೇವೆ!
August 30, 2011
ಅರಿಶಿಣದ ಅನ್ನಕ್ಕೆ ಹೋಗಿ (ಉತ್ತರ ಕನ್ನಡದ ಗಾದೆ – 250)
ಅರಿಶಿಣದ ಅನ್ನಕ್ಕೆ ಹೋಗಿ ವರುಷನ ಅನ್ನ ಕಳೆದುಕೊಂಡಿದ್ದ.
ಅರಿಶಿಣ ಇದರ correct form ‘ಅನ್ನಕ್ಕೆ ಹೋಗಿ ವರುಷದ ಅನ್ನ ಕಳೆದುಕೊಂಡಿದ್ದ’ ಎಂಬುದು. ಪ್ರಾಸಕ್ಕೆ ಸರಿ ಹೊಂದುವಂತೆ‘ವರುಷನ’ ಎಂದು ಹೇಳುತ್ತಾರೆ. ಅರಿಶಿಣದ ಅನ್ನ ಅಂದರೆ ಚಿತ್ರಾನ್ನ. ಪೇಟೆಯ ಜನರಿಗೆ ಇಂದಿನ ಅನ್ನ ಉಳಿದರೆ ಅದನ್ನು ಹಾಳುಮಾಡದೆ ಬಳಸಬೇಕೆಂದರೆ ಇರುವ ಪ್ರಮುಖ ದಾರಿ- ನಾಳೆ ಚಿತ್ರಾನ್ನ! ಹಳ್ಳಿಗಳಲ್ಲಿ ಇಂದು ಅನ್ನ ಉಳಿದರೆ ಅದನ್ನು ನಾಳೆಯವರೆಗೆ ಇಡುವ ಪ್ರಮೇಯವಿರುವುದಿಲ್ಲ. ಇಂದೇ ದನ-ಕರುಗಳಿಗೆ ಕೊಟ್ಟು ಖಾಲಿಮಾಡಿಬಿಡುತ್ತಾರೆ. ಹಳ್ಳಿಗಳಲ್ಲಿ ಚಿತ್ರಾನ್ನ ಮಾಡುವುದು ಕೇವಲ ವಿಶೇಷದ ದಿನಗಳಲ್ಲಿ ಮಾತ್ರ. ಅಂದರೆ ಹಬ್ಬ ಹರಿದಿನಗಳು ಅಥವಾ ಶ್ರಾದ್ಧದ ದಿನಗಳು. ಯಾರೋ ಒಬ್ಬ ಹಬ್ಬದೂಟದ ಆಸೆಗೆ (ಅರಿಶಿಣದ ಅನ್ನಕ್ಕೆ) ಪ್ರತಿದಿನ ಬೇರೆಯವರ ಮನೆಗೆ ಹೋಗುತ್ತಿದ್ದನಂತೆ. ಇಂದಿನ ದಿನ ಕಳೆದರಾಯಿತೆಂಬಭಾವನೆ ಅವನಿಗೆ. ಪ್ರತಿದಿನ ಮನೆಯಲ್ಲಿರದ ಅವನಿಗೆ ತನ್ನ ಗದ್ದೆ-ತೋಟಗಳ ಕಡೆ ಗಮನವೇ ಇರಲಿಲ್ಲ. ಅವು ಹಾಳುಬಿದ್ದು ಆ ವರ್ಷ ಅವನಿಗೆ ಬೆಳೆಯೇ ಸಿಗಲಿಲ್ಲ. ಅರಿಶಿಣದ ಅನ್ನದ ಆಸೆಯಲ್ಲಿ ವರ್ಷಾವಧಿಯ ಅನ್ನವನ್ನು ಕಳೆದುಕೊಂಡುಬಿಟ್ಟಿದ್ದ. ಮುಂದಿನ ದಿನಗಳ ಬಗ್ಗೆ ಆಲೋಚನೆ ಮಾಡದೆ ಇಂದು ಸಿಗುವ ಸಣ್ಣ ಸುಖದ ಬೆನ್ನುಹತ್ತಿ ಹೋಗುವವರನ್ನು ಕುರಿತುಹೇಳಬಹುದಾದಂತ ಗಾದೆ ಇದು.
August 4, 2011
ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ'

ಹದಿನೈದು ದಿನಗಳ ಹಿಂದೆ ಊರಿಗೆ ಹೊರಟಿದ್ದೆವು. ಊರಿನ ಮಳೆಗಾಲವನ್ನು ಅನುಭವಿಸದೆ ಎಷ್ಟೋ ವರ್ಷಗಳಾಗಿತ್ತು. ನಾನು ಊರಿನ ಮಳೆಯನ್ನು ಕಣ್ಣಲ್ಲಿ ತುಂಬಿಕೊಳ್ಳುವ ಮೊದಲೇ ಮನಸ್ಸಿನಲ್ಲಿ ತುಂಬಿಕೊಂಡಿದ್ದೆ. ಬೆಳಿಗ್ಗೆ ಆರು ಘಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಡುವ ಜನಶತಾಬ್ದಿ ರೈಲಿನಲ್ಲಿ ಕಾಯ್ದಿರಿಸಿದ್ದ ಸೀಟಿನಲ್ಲಿ ಎಂದಿನಂತೆಯೇ ಕಿಟಕಿಯ ಪಕ್ಕ ನಾನು, ನನ್ನ ಪಕ್ಕ ರಾಜೀವ ಕುಳಿತೆವು. ಹಾವೇರಿಯಲ್ಲಿ ಇಳಿದು ಶಿರಸಿಗೆ ಬಸ್ಸಿನಲ್ಲಿ ಹೋದರೆ ಮಧ್ಯಾನ್ಹದ ಊಟಕ್ಕೆ ಮನೆ ತಲುಪಬಹುದು. ರಾಜೀವನ ಪಕ್ಕದಲ್ಲಿ ಇನ್ಯಾರೋ ಕುಳಿತರು. ಎದುರು-ಬದುರಿಗೆ ಇರುವಂಥ ಸೀಟುಗಳಾಗಿದ್ದರಿಂದ ನಮ್ಮ ಎದುರಿಗೆ ಅಜ್ಜಿ-ಮೊಮ್ಮಗ, ಇನ್ನೊಬ್ಬ ವ್ಯಕ್ತಿ ನಮಗಿಂತ ಮೊದಲೇ ಆಸೀನರಾಗಿದ್ದರು. ನಮಗೆ diagonally opposite ಆಗಿ ಯಾರೋ ಒಬ್ಬರು ಮಧ್ಯ ವಯಸ್ಸಿನ uncle ಕುಳಿತಿದ್ದರು. ರೈಲು ಹೊರಟಿತು. ರಾಜೀವನಿಗೆ ನನಗಿಂತಲೂ ಓದುವ ಹುಚ್ಚು ತುಂಬಾ ಜಾಸ್ತಿ. ಮೂರ್ನಾಲ್ಕು ಪುಸ್ತಕ ತಂದಿದ್ದ.... ಒಂದನ್ನು ಚೀಲದಿಂದ ಎಳೆದು ಶುರು ಹಚ್ಚಿಕೊಂಡ.
ನಾನು ಕಿಟಕಿಯಿಂದ ಹೊರಗಡೆ ನೋಡಿ ರೈಲ್ವೆ ಟ್ರಾಕ್ ನ ಪಕ್ಕದ ಪ್ಲಾಸ್ಟಿಕ್ ನೋಡಿ ದುಃಖಿಸತೊಡಗಿದ್ದೆ . ನನಗಾದ ಕಿರಿಕಿರಿಯನ್ನು ಅವನಿಗೂ ಸ್ವಲ್ಪ ಅಂಟಿಸಿ ಕೃತಾರ್ಥಳಾಗೋಣವೆಂದು "ರಾಜೀವ..." ಎಂದೆ. "ತಡಿಯೇ" ಎಂಬ ಉತ್ತರ ಬಂತು. ಸುಮ್ಮನಾದೆ. ಪುಸ್ತಕದಲ್ಲಿ ಮುಳುಗಿ ಹೋಗಿದ್ದ. ನನಗೆ ಸ್ವಲ್ಪ ನಿದ್ದೆಯ ಜೋಂಪು ಹತ್ತಿ ಎಚ್ಚರವಾಗುವಷ್ಟರಲ್ಲಿ ಒಂದು ಘಂಟೆ ಕಳೆದಿತ್ತು. ರಾಜೀವ ಓದುತ್ತಿದ್ದ ಪುಸ್ತಕ ಮುಗಿಸಿ ಆಗಿತ್ತು. ಏನೋ ವಿಚಾರ ಮಾಡುತ್ತಿದ್ದವನಂತೆ ಕಂಡ. "ಏನು?!!" ಎಂದೆ. "ಈ ಪುಸ್ತಕ ಓದು" ಎಂದು ಕೈಲಿರುವ ಪುಸ್ತಕ ಕೊಟ್ಟ. ನೋಡಿದೆ. ಅಗ್ನಿ ಶ್ರೀಧರ್ ಬರೆದ 'ಎದೆಗಾರಿಕೆ' ಆಗಿತ್ತು. “Underworld ಬಗ್ಗೆಯಾ? ನಂಗೆ ಇಷ್ಟ ಇಲ್ಲ, ಓದಲ್ಲ. ಬೇರೆ ಪುಸ್ತಕ ಕೊಡು" ಎಂದೆ. "ಒಮ್ಮೆ ಓದಿ ನೋಡು, ತುಂಬಾ ಚೆನ್ನಾಗಿದೆ" ಎಂದ. "ಒಬ್ಬರನ್ನೊಬ್ಬರು ಕೊಚ್ಚಿ ಸಾಯಿಸೋದು- ಇನ್ನೆಷ್ಟು ಚೆನ್ನಾಗಿರಲು ಸಾಧ್ಯ?" ಎಂದು ಗೊಣಗಿದೆ. “Different ಆಗಿದೆ, ನೋಡು ಒಮ್ಮೆ" ಎಂದ. ತಾನು ರಜನೀಕಾಂತ್ ಬಗ್ಗೆ ಇನ್ಯಾವುದೋ ಪುಸ್ತಕದಲ್ಲಿ ಮುಳುಗಿದ. ಅವನ ಒತ್ತಾಯಕ್ಕೆ ತೆಗೆದುಕೊಂಡು ಶುರು ಮಾಡಿದೆ. 'ಎದೆಗಾರಿಕೆ' ಹೆಚ್ಚು ಕಡಿಮೆ ಅರವತ್ತು ಪುಟಗಳ ಸಣ್ಣ ಪುಸ್ತಕ. ಒಂದು-ಒಂದೂವರೆ ತಾಸಿನಲ್ಲಿ ಓದಿ ಮುಗಿಸಬಹುದು. ಓದುತ್ತಾ ಹೋದೆ... ಓದುತ್ತಾ ಹೋದೆ...ಓದುತ್ತಾ ಹೋದೆ... ರಾಜೀವ "ಸೀಮಾ.." ಎಂದ... ನಾನು "ಸ್ವಲ್ಪ ತಡಿಯೋ" ಎಂದೆ. ನಂಗೆ ಗೊತ್ತಿತ್ತು ಎನ್ನುವವರ ತರ ನಕ್ಕ.
ರಾಜೀವ ಹೇಳಿದಂತೆ ತುಂಬಾ different ಆಗಿತ್ತು ಕಥೆ. ಹೇಳುವಂಥ ದೊಡ್ಡ ಕಥೆಯೇನೂ ಇಲ್ಲ. ಆದರೆ ನಿರೂಪಿಸಿರುವ ರೀತಿ ಮಾತ್ರ ಅಮೋಘ! ಸಾರಾಂಶ ಇಷ್ಟೇ- ಮುಂಬೈನ underworld ನ ರೌಡಿಯಾಗಿದ್ದವನ ಪೈಕಿ ಒಬ್ಬನನ್ನು (ಕಥಾನಾಯಕ) ಮುಗಿಸಲು ಬೆಂಗಳೂರಿನ ಏಳೆಂಟು ಜನ ರೌಡಿಗಳು ತುಮಕೂರಿನ ಹತ್ತಿರ ಒಳಗೆಲ್ಲೋ farmhouse ಗೆ ಕರೆದುಕೊಂಡು ಹೋಗುತ್ತಾರೆ. ಅವನಿಗೆ ತನ್ನನ್ನು ಸಾಯಿಸಲು ಹೊರಟಿದ್ದಾರೆ ಎಂಬುದರ ಅರಿವಾಗಿರುತ್ತದೆ. ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು ಎಂಬ ಅವರ ಊಹೆ ಸುಳ್ಳಾಗುತ್ತದೆ. ದಾರಿಯಲ್ಲಿ ಒಂದೆರಡು ಸಣ್ಣ-ಪುಟ್ಟ ಅವಕಾಶಗಳು ಸಿಕ್ಕಿದರೂ ಅವನು ಅವುಗಳನ್ನು ಬಳಸಿಕೊಳ್ಳುವುದಿಲ್ಲ. ಅವನು ವರ್ತನೆ ಎಷ್ಟು ಸಹಜವಾಗಿರುತ್ತದೆಯೆಂದರೆ ಅವನಿಗೆ ತಾನು ಸಾಯಲಿರುವುದು ಗೊತ್ತೇ ಆಗಿಲ್ಲವೇನೋ ಎಂಬ ಗುಮಾನಿ ಆ ರೌಡಿಗಳಿಗೆ ಬರತೊಡಗುತ್ತದೆ.
ನಡುವೆ ಬೆಕ್ಕುಗಳ ಒಂದು ಕಥೆ ಬರುತ್ತದೆ- ಸಾಯಿಸಲು ತೆಗೆದುಕೊಂಡು ಹೋಗುತ್ತಿರುವ ಎರಡು ಬೆಕ್ಕುಗಳ ಪೈಕಿ ಒಂದು ಸ್ಥಿತಪ್ರಜ್ನನಾಗಿ ಕುಳಿತು ಸಾವಿಗೆ ಮಾನಸಿಕ ತಯಾರಿ ನಡೆಸುತ್ತಿದ್ದಂತೆ ಕಂಡರೆ ಇನ್ನೊಂದು ಬೋನಿನಿಂದ ಜಿಗಿದು ಓಡಿ ಹೋಗಿ ತಪ್ಪಿಸಿಕೊಳ್ಳಲು ನೋಡಿ ಹಿಂದಿನಿಂದ ಬರುತ್ತಿರುವ ಕಾರಿನ ಚಕ್ರದಡಿ ಸಿಕ್ಕಿ ಸಾಯುತ್ತದೆ. ಇವೆರಡರಲ್ಲಿ ಯಾವ ಬೆಕ್ಕು ನಿಜವಾಗಿ ಹೀರೋ? ಸಾವನ್ನು ಎದುರಿಸಲು ಸಿದ್ಧವಾಗಿರುವ ಬೆಕ್ಕೋ ಅಥವಾ ಧೈರ್ಯ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಬೆಕ್ಕೋ?!
ಆ ರೌಡಿಗಳ ಪೈಕಿ ಒಬ್ಬರಲ್ಲಿ ನಾಯಕ ಮನಸ್ಸನ್ನು ತೆರೆದುಕೊಳ್ಳುತ್ತಾನೆ. ಆ ರೌಡಿಗೆ ತಮ್ಮನ್ನು ನಾಯಕ emotional blackmail ಮಾಡುತ್ತಿದ್ದಾನಾ ಎಂದು ಗುಮಾನಿ ಶುರುವಾಗುತ್ತದೆ. ನಾಯಕ ಒಮ್ಮೆ "ನನ್ನನ್ನು ಹೇಗೆ ಮತ್ತು ಯಾವಾಗ ಸಾಯಿಸಬೇಕೆಂದು ಪ್ಲಾನ್ ಮಾಡಿದ್ದೀರಿ?" ಎಂದೂ ಕೂಡ ಕೇಳುತ್ತಾನೆ. ತಾನು ಸಾಯಲಿರುವುದು ಅವನಿಗೆ ಗೊತ್ತಿದ್ದರೂ ಅವನ ಸಹಜ ವರ್ತನೆಯನ್ನು ಕಂಡು ರೌಡಿಗಳು ಹೌಹಾರುತ್ತಾರೆ! ಮುಂಬೈ ನಲ್ಲಿ ಅವನಿಗಾದ ಅನುಭವಗಳ ಪೈಕಿ ಎರಡು ಅನುಭವಗಳು ಅತ್ಯಂತ ನೋವುಂಟುಮಾಡಿದವು ಎಂದೆನ್ನುತ್ತಾ ಆ ಅನುಭವಗಳನ್ನು ಬಿಡಿಸಿಡುತ್ತಾನೆ. ಇಸ್ಪೀಟು ಆಡುವಾಗ ಇತರರು ಬೇಕೆಂತಲೇ ಅವನನ್ನು ಗೆಲ್ಲಿಸುತ್ತಾರೆ. ಅವನಿಗೂ ಗೊತ್ತು, ಹಾಗೆಂದು ಕೇಳಿಯೇ ಬಿಡುತ್ತಾನೆ.
ರೌಡಿಗಳ ಗ್ಯಾಂಗ್ ನ ಮುಖ್ಯಸ್ಥನೂ ಈತನನ್ನು ಪ್ರೀತಿಸತೊಡಗುತ್ತಾನೆ. ಗ್ಯಾಂಗ್ ನ ಇತರರಂತೂ ಅವನು ಹೇಗಾದರೂ ತಪ್ಪಿಸಿಕೊಂಡು ಓಡಿ ಹೋಗಲಿ ಎಂದು ಬಯಸತೊಡಗುತ್ತಾರೆ. ಆದರೆ ಕೊಲ್ಲದೆ ವಿಧಿಯಿಲ್ಲ- ಮುಂಬೈ ನಿಂದ ಆರ್ಡರ್ ಆಗಿದೆ. ಗ್ಯಾಂಗ್ ನ ಮುಖ್ಯಸ್ಥ “ಅವನನ್ನು ಆದಷ್ಟು ಮಟ್ಟಿಗೆ ನೋವಾಗದಂತೆ ಸಾಯಿಸಿ. ಸಾಯಿಸುವಾಗ ಹೆಚ್ಚು ಸಮಯ ಹಿಡಿಯದಂತೆ ನೋಡಿಕೊಳ್ಳಿ" ಎಂದು ಆಜ್ಞೆ ನೀಡುತ್ತಾನೆ. ಅವನಿಂದ ಇಷ್ಟೇ ಸಾಧ್ಯ. ಸಾಯಿಸುವ ಹಿಂದಿನ ದಿನ ರಾತ್ರಿ ಜಾಗವನ್ನು ನೋಡಿಕೊಂಡು ಬರಲು ಗ್ಯಾಂಗ್ ನವರು ಹೋಗುತ್ತಾರೆ. ನಾಯಕನೂ ಜೊತೆಯಲ್ಲಿ ಹೋಗುತ್ತಾನೆ. ಗ್ಯಾಂಗ್ ನಲ್ಲಿ ಯಾರಿಗೆ ಇವನು ಹತ್ತಿರವಾಗಿದ್ದಾನೋ ಅವನು ಜಾರಿ ಬೀಳುತ್ತಾನೆ; ಅವನ ಪ್ಯಾಂಟ್ ಪೂರ್ತಿ ಕೆಸರಾಗುತ್ತದೆ. ಮನೆಗೆ ಬಂದ ನಂತರ ನಾಯಕನು ಅವನಿಗೆ ತನ್ನದೇ ಪ್ಯಾಂಟನ್ನು ಕೊಡುತ್ತಾನೆ, ಹೇಳಿಮಾಡಿಸಿದಂತೆ ಹೊಂದಿಕೆಯಾಗುತ್ತದೆ. ನಾಳೆ ಸಾಯಲಿರುವ ವ್ಯಕ್ತಿಯ ಪ್ಯಾಂಟನ್ನು ಹಾಕಿಕೊಳ್ಳಲು ಭಯವಾದರೂ ಒತ್ತಾಯಕ್ಕೆ ಮಣಿದು ಹಾಕಿಕೊಳ್ಳುತ್ತಾನೆ. ನಾಯಕನ ಪ್ಯಾಂಟ್ ನಲ್ಲಿರುವ ಈತ ನಾಯಕನ ಮನಸ್ಥಿತಿಯನ್ನು ತಾನೂ ಅನುಭವಿಸತೊಡಗುತ್ತಾನೆ.
ನಾಯಕನಿಗೆ ಗೊತ್ತು, ಇವತ್ತು ಓಡಿ ಹೋದರೂ ನಾಳೆ ಸಾವು ತಪ್ಪಿದ್ದಲ್ಲ ಎಂದು. ಸಾವನ್ನು ಎದುರುಗೊಳ್ಳುತ್ತಾನೆ; ಎದೆಗಾರಿಕೆ ತೋರಿಸುತ್ತಾನೆ. ನಾಯಕನ ಹೆಸರು ಎಲ್ಲಿಯೂ ಇಲ್ಲ. ಇತರ ಯಾರ ಹೆಸರೂ ಇಲ್ಲ. ಕೇವಲ ಕಥಾನಾಯಕಿಯ ಹೆಸರು ಮಾತ್ರ ಸಿಗುತ್ತದೆ; ರಶ್ಮಿ ಎಂದು. ಸಾವಿನ ಬಗ್ಗೆ ಅವನು ಹೇಳುವ ಕೆಲವು ಮಾತುಗಳಂತೂ ಮನ ಮುಟ್ಟುತ್ತವೆ. ಮನದಲ್ಲಿಯೇ ಉಳಿಯುತ್ತವೆ. ಹಿಂದಿನ ದಿನ ರಾತ್ರಿ ರಶ್ಮಿ ತನ್ನ ಕನಸಿನಲ್ಲಿ ಬಂದಿದ್ದಳು ಎಂದು ಹೇಳಿಕೊಳ್ಳುತ್ತಾನೆ.
ಮರುದಿನ ರಾತ್ರಿ ಅವನನ್ನು ಸಾಯಿಸುವ ಪ್ಲಾನ್…. ಅವನು ಓಡಿ ಹೋಗಬಾರದಾ ಎಂದು ಎಲ್ಲರೂ ಹಾತೊರೆಯುತ್ತಾರೆ, ಓದುಗನೂ ಹಾತೊರೆಯುತ್ತಾನೆ.... ಆದರೆ ಹಾಗಾಗುವುದೇ ಇಲ್ಲ. ಇಷ್ಟವಿಲ್ಲದಿದ್ದರೂ ಕುತ್ತಿಗೆಗೆ ಹಗ್ಗ ಬಿಗಿಯಲೇ ಬೇಕು, ಎಲ್ಲವೂ ಸರಾಗವಾಗಿ ನಡೆದುಹೋಗುತ್ತದೆ, ಯಾವುದೇ ಪ್ರತಿರೋಧವನ್ನೊಡ್ಡದೆಯೇ ಸಾವನ್ನಪ್ಪುತ್ತಾನೆ; ಕೆಲವೇ ಕೆಲವು ಸೆಕೆಂಡುಗಳಲ್ಲಿ ಪ್ರಾಣ ತ್ಯಜಿಸುತ್ತಾನೆ. ಇವರಿಗೆಲ್ಲ ಅವನ ಸಾವಿಗೆ ತಾವು ಕೇವಲ ನೆಪ ಮಾತ್ರವಾಗಿದ್ದೆವಾ ಎಂದೆನಿಸಿಬಿಡುತ್ತದೆ. ಅವನು ಯಾವಾಗಲೋ ಸಮಾಧಿ ಸ್ಥಿತಿ ತಲುಪಿಬಿಟ್ಟಿದ್ದ! "ದೇಹದಿಂದ ಬಟ್ಟೆಯನ್ನು ಕಳಚಿದ ಹಾಗೆ" ಎಂದು ಶ್ರೀಧರ್ ಬರೆಯುತ್ತಾರೆ. ಅವನಿಷ್ಟದಂತೆಯೇ ನಾಯಕಿಗೆ ‘ಅವನು ಅಪಘಾತದಲ್ಲಿ ತೀರಿಹೋದ’ ಎಂದು ತಿಳಿಸಲು ಫೋನ್ ಮಾಡಲಾಗುತ್ತದೆ. ಮುಂದಿನ ಎಂಟು-ಹತ್ತು ಸಾಲುಗಳಲ್ಲಿ ಪುಸ್ತಕ ಮುಗಿದೇ ಹೋಗುತ್ತದೆ. ಅವುಗಳೇನೆಂದು ಇಲ್ಲಿ ಬರೆಯುವುದಿಲ್ಲ. ಓದಿ ಅನುಭವಿಸಿ.
ನಾನು ಒಂದೇ ಉಸಿರಿಗೆ ಪುಸ್ತಕ ಮುಗಿಸಿದೆ. ತಡೆಯಲಾಗಲಿಲ್ಲ; ಪಟಪಟನೆ ಕೆಲ ಹನಿ ಕಣ್ಣೀರು ಉದುರಿದವು. ಒರೆಸಿಕೊಳ್ಳುವಷ್ಟರಲ್ಲಿ diagonally opposite ಕೂತಿದ್ದ uncle ನೋಡಿಯೇ ಬಿಟ್ಟರು! ರಾಜೀವನ ಪಕ್ಕದಲ್ಲಿದ್ದ ವ್ಯಕ್ತಿ ಎದ್ದು ಹೋಗಿದ್ದ. ಕೆಲ ನಿಮಿಷಗಳ ನಂತರ ಆ uncle ಬಂದು ರಾಜೀವನ ಪಕ್ಕದಲ್ಲಿ ಕುಳಿತರು; ಕುತೂಹಲವಿರಬೇಕು, ಏನು ಓದುತ್ತಿದ್ದಾರೆ ಎಂದು. ಪುಸ್ತಕ ಕೇಳಿ ಪಡೆದುಕೊಂಡರು. ರಾಜೀವ ಎರಡೂ ಪುಸ್ತಕ ಕೊಟ್ಟ. ಪುಸ್ತಕಗಳ ಮುಖಪುಟವನ್ನೊಮ್ಮೆ, ಹಿಂಭಾಗವನ್ನೊಮ್ಮೆ ಎರೆಡೆರೆಡು ಬಾರಿ ನೋಡಿದರು, ರಜನೀಕಾಂತ್ ಬಗೆಗಿನ ಪುಸ್ತಕದ ಒಂದು ಪುಟವನ್ನು ಓದಿ ಪುಸ್ತಕಗಳನ್ನು ಹಿಂದಿರುಗಿಸಿ ತಮ್ಮ ಸೀಟಿಗೆ ಮರಳಿದರು! ನಾನು ಕಿಟಕಿಯ ಕಡೆ ಮುಖ ಮಾಡಿಕೊಂಡು ಅಳುವನ್ನು ತಡೆಹಿಡಿಯುವ ಸಾಹಸ ನಡೆಸಿದ್ದೆ!
ಶ್ರೀಧರ್ ಹೊರಹಾಕಿರುವ ಎಲ್ಲಾ ಭಾವನೆಗಳನ್ನು ಇಲ್ಲಿ ಬರೆಯಲು ಏಕೋ ಸಾಧ್ಯವಾಗುತ್ತಿಲ್ಲ. ಕಥೆಯನ್ನು ಓದುವಾಗ ಮತ್ತು ಆ ನಂತರ ಅನುಭವಿಸಿದ ಕೆಲವೇ ಕೆಲವು ಭಾವನೆಗಳನ್ನು ಇಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಎಷ್ಟೋ ಹೊತ್ತು ಮಾತಾಡಲಿಲ್ಲ; ಯೋಚಿಸುತ್ತಿದ್ದೆ. ಕಣ್ಣಿನಲ್ಲಿ, ಮನಸ್ಸಿನಲ್ಲಿ ಮಳೆ! ಊರು ತಲುಪಿದರೂ ಕಥೆಯಿಂದ ಹೊರಬಂದಿರಲಿಲ್ಲ. ಈಗಲೂ ಕೂಡ ಮನಸ್ಸಿನ ಮೂಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಕೊರೆಯುತ್ತಲೇ ಇದೆ. Hats off to ಅಗ್ನಿ ಶ್ರೀಧರ್!