July 28, 2009

ಅಪ್ಪ ಮತ್ತು ಇಂಟರ್ನೆಟ್

ನಾನು, ರಘು computer ಕೊಂಡ ಆರಂಭದಲ್ಲಿ ಅಪ್ಪನಿಗೆ computer ಕಲಿಸಿಯೇ ತೀರಬೇಕೆಂದು ನಿರ್ಧರಿಸಿಬಿಟ್ಟಿದ್ದೆವು. ಅವನೂ ಒಪ್ಪಿದ್ದ.... 'ಹಾ, ಈಗಿನ ಕಾಲಕ್ಕೆ ಸ್ವಲ್ಪವನ್ನಾದರೂ ತಿಳಿದಿಟ್ಟುಕೊಳ್ಳಬೇಕು, ಮೊನ್ನೆ ಮೊನ್ನೆ ಹುಟ್ಟಿದ ಮಕ್ಕಳಿಗೂ ಕೂಡ ತಿಳಿದಿರುತ್ತದೆ' ಎಂಬ ಅಭಿಪ್ರಾಯವನ್ನೂ ಹೊರಹಾಕಿದ್ದ. ನಂತರ ಕಲಿಯಲು ಒಂದೆರಡು ದಿನ ಬಂದು ಕೂತ. paint-brush ನಿಂದ ಶುರುಮಾಡಿದ್ದೆವು. ದಿನವಿಡೀ ಗದ್ದೆ-ತೋಟಗಳಲ್ಲಿ ಕೆಲಸ ಮಾಡಿರುತ್ತಿದ್ದ ಅಪ್ಪ ಹತ್ತೇ ನಿಮಿಷಕ್ಕೆ ಆಕಳಿಸುತ್ತಿದ್ದ ಇಲ್ಲವೇ ತೂಕಡಿಸುತ್ತಿದ್ದ. ನಂತರ ಕಲಿಯುವಿಕೆ ಅಲ್ಲಿಗೇ ನಿಂತು ಹೋಯಿತು. ನಾನು, ರಘು ಮನೆಯಿಂದ ಹೊರಬಿದ್ದೆವು; computer ಕೂಡ ಮಾರಿಬಿಟ್ಟೆವು. ಹಾಗಂತ ಅಪ್ಪ ಕಲಿಯಲು ಆಗದಂಥ ದಡ್ಡನಲ್ಲ. ಆಗಿನ ಕಾಲದ B.Sc.(Mathematics). ನಾನು, ರಘು ಮಾತಾಡಿದ English ನಲ್ಲಿ ವ್ಯಾಕರಣ ದೋಷ ಹುಡುಕುವಷ್ಟು ನಿಷ್ಣಾತ. ನೆಂಟರಿಷ್ಟರ ಮನೆಗಳಿಂದ high school, college ಗೆ ಹೋಗುವ ಹುಡುಗರನ್ನೆಲ್ಲ ಒಟ್ಟು ಹಾಕಿಕೊಂಡು Mathematics ಮತ್ತು English ತರಬೇತಿ ಕೊಡುತ್ತಿರುತ್ತಾನೆ.

Engineer ಅಥವಾ doctor ಆಗಬೇಕಾಗಿದ್ದ ಅಪ್ಪ ಯಾವುದೋ ಕಾರಣಕ್ಕೆ ಮನೆಯಲ್ಲಿಯೇ ಉಳಿಯಬೇಕಾಯಿತಂತೆ. ಆ ಬಗ್ಗೆ ಅವನಿಗೆ ಇಂದಿಗೂ ವಿಷಾದವಿದೆ; ನಮಗೂ ಇದೆ. Human physiology, medicine ಗಳ ಬಗ್ಗೆ ಅಪ್ಪನ ಜ್ಞಾನ ನಮಗೆ ಅಚ್ಚರಿ ಮೂಡಿಸುತ್ತದೆ. ನಾನು ಕಲಿತು ಆಗಲೇ ಮರೆತು ಹಾಕಿದ Pythagoras ನ theorem ಅನ್ನು ಮನೆಕಟ್ಟುವಾಗ 'ಐಮೂಲೆ' ತೆಗೆಯಲು, ಮಾಡು ಕಟ್ಟಲು ಹೇಗೆ ಬಳಸಬಹುದು ಎಂದು ಅಪ್ಪ ತೋರಿಸಿದಾಗ ಆತನಿಗೊಂದು engineer ಪಟ್ಟವನ್ನು ನಾನು ಕೊಟ್ಟುಬಿಟ್ಟಿದ್ದೆ! Veterinary doctor ಸಹಾಯ ಇಲ್ಲದೆಯೇ ದನ-ಕರುಗಳಿಗೆ ಔಷಧ, injection ಮಾಡುತ್ತಾನೆ....ಕೃಷಿಯಲ್ಲೂ ಅವನದು ವಿವಿಧ ಪ್ರಯೋಗ. ಒಮ್ಮೊಮ್ಮೆ ಅವನು ಸಂಶೋದನೆಯಲ್ಲಿರಬೇಕಾಗಿತ್ತು ಎನಿಸುತ್ತದೆ.
ಮೊನ್ನೆ ರಘು ಮಣಿಪುರದಿಂದ ಮನೆಗೆ phone ಮಾಡಿದ್ದನಂತೆ.... ಸಂಭಾಷಣೆ ಹೀಗೆ ನಡೆಯಿತು ಎಂದು ರಘು ನಂತರ ನನಗೆ phone ಮಾಡಿ ಹೇಳಿದ.
"ಅಪ್ಪ, ಊರ ಕಡೆ ಸಿಕ್ಕಾಪಟ್ಟೆ ಮಳೆ ಅಲ್ದಾ?"
"ನಿಂಗೆ ಹೆಂಗೆ ಗೊತ್ತಾತು? ವಾರ್ತೆ ಕೇಳಿದ್ಯ?"
"ಇಲ್ಲೆ, ದಿನಾಲೂ ಪ್ರಜಾವಾಣಿ ಓದ್ತಿ".
"ಪ್ರಜಾವಾಣಿ ಮಣಿಪುರದ ವರೆಗೆ ಬರ್ತ?!!!"
"ಇಲ್ಲೆ, online ಓದ್ತಿ". (ರಘು ಈಗ ಸ್ವಲ್ಪ ದಿನಗಳಿಂದ ಮಣಿಪುರದಲ್ಲಿ headquarters ನಲ್ಲಿ ಇರುವುದರಿಂದ internet ಸಿಗುತ್ತಿದೆಯಂತೆ)
"Computer ನಲ್ಲಿ ಓದಕಾದ್ರೆ ಪುಟ ಹೆಂಗೆ ಮಗ್ಚ್ತೆ?!!"
"Click ಮಾಡಿರೆ ಮುಂದಿನ ಪುಟಕ್ಕೆ ಹೋಗ್ತು, ಮುಂದಿನ ಸಲ ಮನೆಗೆ ಬಂದಾಗ ತೋರಿಸ್ತಿ."

ಅಪ್ಪ computer ವಿಷಯದಲ್ಲಿ zero ಆದರೇನಾಯಿತು, ಅವನಲ್ಲೊಬ್ಬ engineer, doctor, researcher, teacher ಹೀಗೆ ಎಷ್ಟೆಲ್ಲಾ ಜನರು ಅಡಗಿದ್ದಾರೆ. ನಾಡಿದ್ದು ಮೂವತ್ತೊಂದನೆಯ ತಾರೀಖಿಗೆ ಅಪ್ಪನಿಗೆ ಅರವತ್ತು ತುಂಬುತ್ತದೆ. ಅವನಿಗೆ ನೆನಪಿದೆಯಾ ಎಂಬ ಬಗ್ಗೆ ನನಗಿನ್ನೂ ಅನುಮಾನ. ಆದರೆ ಹಿಂದಿನ ವರ್ಷ July 31 ಕ್ಕೆ ನಮ್ಮಿಬ್ಬರ phone call ಗಾಗಿ ಅಪ್ಪ ಕಾದಿದ್ದ ಎಂದು ಅಮ್ಮ ಹೇಳಿದ್ದಳು. ಅವನಿಗೆ phone ಮಾಡಿ greet ಮಾಡುವ ಮೊದಲೇ ಅವನ ಜ್ಞಾನ ಸಾಗರಕ್ಕೊಂದು hats off ಹೇಳುತ್ತಾ birthday wishes advance ಆಗಿ ಹೇಳುತ್ತಿದ್ದೇನೆ - Many Happy returns of the Day ಅಪ್ಪ :-)

ಮ. ಮಾ: ರಘು ಹಿಂದಿನ ವರ್ಷ ಅಪ್ಪ, ಅಮ್ಮನನ್ನು ಮಣಿಪುರಕ್ಕೆ ಕರೆದುಕೊಂಡು ಹೋದಾಗ ಅಪ್ಪನ ಇಚ್ಚೆಗೆ ವಿರುದ್ಧವಾಗಿ ಅಪ್ಪನಿಗೆ ಆ ರೀತಿ dress ಮಾಡಿಸಿದ್ದನಂತೆ.... ಆಗ ತೆಗೆದ photo ಅದು .


July 3, 2009

ಒಪ್ಪೋಲೆ

Google docs ನಲ್ಲಿ share ಮಾಡಿದ್ದು ಸರಿಯಾಗದಿದ್ದರಿಂದ ಹಿಂದಿನ post ನ link open ಆಗ್ತಾ ಇರಲಿಲ್ಲ. ಸರಿಮಾಡುವಷ್ಟು ಸಮಯ ನನಗೆ ಸಿಗಲಿಲ್ಲ.
ಈಗ ಸರಿ ಮಾಡಿದ್ದೇನೆ, ಒಮ್ಮೆ ನೋಡಿಬಿಡಿ. ಈ concept ಅನ್ನು ಈ ಮೊದಲೇ ನೋಡಿದ್ದರೆ ಕ್ಷಮಿಸಿ.
ನಿಮಗಿಷ್ಟವಾದರೆ ನನ್ನ ಶ್ರಮ ಸಾರ್ಥಕ.

June 16, 2009

ಬದಲಾವಣೆ ಬೇಕಾಗಿದೆ

ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೆಂದರೆ ಹರಸಾಹಸವೇ ಸರಿ. ಹೊಗೆ ಕುಡಿಯುತ್ತ, ವಾಹನಗಳ ಕಿರಿಚಾಟವನ್ನು ಸಹಿಸುತ್ತಾ ಮನೆ ತಲುಪುವಷ್ಟರಲ್ಲಿ ಯಾರಾದರೂ ಮಾತನಾಡಿಸಿದರೆ ಗದರುವಷ್ಟು ಸುಸ್ತಾಗಿರುತ್ತದೆ; ಕಿರಿಕಿರಿಯಾಗಿರುತ್ತದೆ.

ಮುಂದುವರಿದ ಬಹುತೇಕ ರಾಷ್ಟ್ರಗಳಲ್ಲಿ bicycle ಗಳನ್ನು ಜನರು ತುಂಬಾ ಉಪಯೋಗಿಸುತ್ತಾರೆಂದು ಕೇಳಿದ್ದೇನೆ. ನಾನು ನೋಡಿದಂತೆ ಟೋಕಿಯೋದಲ್ಲಿ office ಗೆ ಹೋಗುವವರು ಹಲವರು formal dress ಹಾಕಿಕೊಂಡು bicycle ತುಳಿಯುತ್ತಿರುತ್ತಾರೆ. ಅದನ್ನು ಅವಮಾನವೆಂದು ಭಾವಿಸುವುದಿಲ್ಲ. Market ಗೆ ಹೋಗುವುದಂತೂ ಹೆಚ್ಚಾಗಿ bicycle ನಲ್ಲಿಯೇ. ಮಕ್ಕಳು ತುಂಬಾ ಚಿಕ್ಕವರಿದ್ದಾಗಿನಿಂದಲೇ ತಂದೆ-ತಾಯಿ bicycle ಕಲಿಸುತ್ತಿರುತ್ತಾರೆ. ಮುದುಕ ಮುದುಕಿಯರಾಗುವವರೆಗೂ ಅದನ್ನೇ ಅಭ್ಯಾಸವಾಗಿಸಿಕೊಂಡಿರುತ್ತಾರೆ. Shopping mall ಗಳ basement ಗಳಲ್ಲಿ ಅಥವಾ ಪಕ್ಕದಲ್ಲಿ bicycle parking ಗೆ ಜಾಗವನ್ನು ಮೀಸಲಾಗಿಟ್ಟಿರುತ್ತಾರೆ.
Younger generation ನ ಹುಡುಗ-ಹುಡುಗಿಯರೂ ಹೆಚ್ಚಾಗಿ bicycle ಗಳನ್ನೇ ಉಪಯೋಗಿಸುತ್ತಾರೆ. ನಮ್ಮಲ್ಲಿಯಂತೆ ಅದನ್ನು ತನ್ನ ಅಂತಸ್ತಿಗೆ ಧಕ್ಕೆ ತರುವಂಥದು ಎಂದು ತಿಳಿಯುವುದಿಲ್ಲ. ನಮ್ಮಲ್ಲಿ ಹದಿನಾರು ವರ್ಷ ಕಳೆದ ನಂತರ bicycle ತುಳಿಯುವವರು ತೀರ ಅಪರೂಪ. ಮನೆಯ ಹತ್ತಿರದಲ್ಲಿಯೇ ಇರುವ ಅಂಗಡಿಗೆ ಹೋಗಲೂ ಕೂಡ motor bike ಹತ್ತಿಯೇ ಹೋಗುತ್ತಾರೆ; ಹೊಗೆ ಉಗುಳುತ್ತ ಇನ್ನು ಕೆಲವೊಮ್ಮೆ ಹೊಗೆಯ ಜೊತೆ ಗುಟಖಾ ಕೂಡ ಉಗುಳುತ್ತ!
ನಮ್ಮ ಬೆಂಗಳೂರಿನಲ್ಲಿ ವಾಹನಗಳ horn ಶಬ್ದವಂತೂ ಕಿವಿಗಡಚಿಕ್ಕುತ್ತವೆ. ಅನವಶ್ಯಕವಾಗಿ horn ಮಾಡುವವರೇ ಹೆಚ್ಚು. Traffic signal ನಲ್ಲಿ ನಿಂತಾಗಲೂ horn ಮಾಡುವವರಿಗೇನು ಹೇಳಲು ಸಾಧ್ಯ? ಮುಂದೆ ನಿಂತವನು signal ಹಸಿರು ಬಣ್ಣಕ್ಕೆ ತಿರುಗಿದ ನಂತರ ಕದಲಲು ಎರಡು second ಗಳ ಕಾಲ ಜಾಸ್ತಿ ತೆಗೆದುಕೊಂಡರೆ ಅಷ್ಟರಲ್ಲಿ ಹತ್ತು ಜನರು horn ಮಾಡಿಬಿಟ್ಟಿರುತ್ತಾರೆ! ಎರಡು second ಗಳಷ್ಟು ತಾಳ್ಮೆ ಬಹುತೇಕ ಜನಕ್ಕೆ ಇಲ್ಲ. ನಂಬಿದರೆ ನಂಬಿ, ಅತ್ಯಂತ ಜನಸಾಂದ್ರತೆಯುಳ್ಳ ಟೋಕಿಯೋದಲ್ಲಿ ನಾನಿದ್ದ ಒಂದೂವರೆ ವರ್ಷದಲ್ಲಿ ನಾನು ಕೇವಲ ಏಳೆಂಟು ಸಲ horn ಸದ್ದನ್ನು ಕೇಳಿದ್ದೇನೆ. ಆಗೆಲ್ಲಾ ನಾವು ಯಾರೋ ಭಾರತೀಯ ಮನುಷ್ಯ drive ಮಾಡುತ್ತಿರಬಹುದು ಎಂದು ನಗುತ್ತಿದ್ದೆವು! ರಸ್ತೆ ಖಾಲಿ ಇದ್ದರೂ ಕೆಟ್ಟದಾಗಿ horn ಮಾಡಿಕೊಂಡು ಹೋಗುತ್ತಿರುತ್ತಾರೆ ಯಾರೂ ಅಡ್ಡ ಬರದೇ ಇರಲಿ ಎಂದು. ಪ್ರಪಂಚ ಹಾಳಾಗಿ ಹೋದರು ನಾನು ಮೊದಲು ನುಗ್ಗಬೇಕು 'me first' ಎನ್ನುವ attitude ಬದಲಾದ ಹೊರತೂ ಯಾವುದೂ ಬದಲಾಗುವುದಿಲ್ಲ.
ಇಲ್ಲಿನ ನನ್ನಂಥ ಪಾದಚಾರಿಗಳಂತೂ ಎಲ್ಲಿಯೂ ಸಲ್ಲದವರು. ನಿಬಿಡ ರಸ್ತೆಗಳಲ್ಲಿ ಪ್ರದೇಶದಲ್ಲಿಪಾದಚಾರಿಗಳು ದಾಟಲಿ ಎಂದು ಯಾವ ವಾಹನದವರೂ ವೇಗ ತಗ್ಗಿಸುವುದಿಲ್ಲ, signal ಇಲ್ಲದ ಹೊರತು ನಿಲ್ಲಿಸುವುದಂತೂ ಇಲ್ಲವೇ ಇಲ್ಲ. ಬೇಕಿದ್ದರೆ ಇನ್ನೂ ಜೋರಾಗಿ horn ಮಾಡುತ್ತಾರೆ; ನನ್ನ ರಸ್ತೆ, ನೀನೇಕೆ ಅಡ್ಡ ಬರುತ್ತೀಯಾ ಎಂಬಂತೆ. ಎಲ್ಲವೂ ಸಂಸ್ಕಾರದಲ್ಲಿಯೇ ಬರಬೇಕು ಅಷ್ಟೇ. ಇತರ ದೇಶಗಳಲ್ಲಿ ಪಾದಚಾರಿಗಳಿಗೆ ಮೊದಲ ಆದ್ಯತೆ, bicycle ನವರಿಗೆ ಎರಡನೇ ಆದ್ಯತೆ, ಸ್ವಂತ ವಾಹನಗಳ ಚಾಲಕರಿಗೆ ಕೊನೆಯ ಆದ್ಯತೆ ಇದೆ ಎಂಬಂತೆ ನಡೆದುಕೊಳ್ಳುತ್ತಾರೆ. ಇದು ಯಾವ ಕಾನೂನಿನ ಮೂಲಕ ಬಂದಿದ್ದಲ್ಲ. ತಮ್ಮಂತೆ ಇತರರೂ ಮನುಷ್ಯರು ಎಂಬ ಭಾವನೆಯಿಂದ ಬಂದಿದ್ದು ಅಷ್ಟೇ. ಟೋಕಿಯೋದಲ್ಲಿ ಪಾದಚಾರಿಗಳು ರಸ್ತೆ ದಾಟುವಾಗ ಇತರ ವಾಹನದವರು ಹೆಚ್ಚು ಕಡಿಮೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವೊಮ್ಮೆ ನಾವು ನಿಂತು ಅವು ಮೊದಲು ಹೊರಡುವಂಥಾದರೆ ನಮ್ಮ ಕಡೆ ನೋಡಿ ಒಮ್ಮೆ ತಲೆ ಬಗ್ಗಿಸಿ ಧನ್ಯವಾದ ಸೂಚಿಸದೇ ಇರುವುದಿಲ್ಲ. ನಾನು ಅಲ್ಲಿಂದ ಹಿಂದಿರುಗಿ ಬಂದ ಒಂದೆರಡು ದಿನಗಳ ಕಾಲ ರಸ್ತೆ ದಾಟಲು ತಡಬಡಾಯಿಸಿದ್ದೆ. ಈಗ ಮತ್ತೆ expert; ಹುಟ್ಟಾ ಕಲಿತದ್ದು ಎಲ್ಲಿ ಹೋಗ ಬೇಕು ಹೇಳಿ! Bus, train ಗಳಲ್ಲಿ ನಿಲ್ಲುವಾಗ, ಕುಳಿತುಕೊಳ್ಳುವಾಗ ಇತರರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸುತ್ತಾರೆ. ಪಕ್ಕ ಕೂತು ನಿದ್ದೆ ಮಾಡುತ್ತಿದ್ದರೂ ಮೈಮೇಲೆ ಬೀಳುವುದಿಲ್ಲ. ಗಂಡಸರ ಮೇಲೆ ನಾವು safety pin ಪ್ರಯೋಗಿಸುವ ಅಗತ್ಯ ಬೀಳುವುದೇ ಇಲ್ಲ.
workplace ಗಳಲ್ಲೂ ಅಷ್ಟೇ, ಬೇರೆಯವರ ಬಗ್ಗೆ gossip ಮಾಡುವಷ್ಟು ಪುರಸೊತ್ತು ಯಾರಿಗೂ ಇಲ್ಲ. ನಮ್ಮಲ್ಲಿಯ ಕಥೆಯೇ ಬೇರೆ, ಎದುರಿಗೆ ಸಿಕ್ಕಾಗ ನಗಲೂ ಕೂಡ ವಿಚಾರ ಮಾಡುವವರು ನಮ್ಮ ಬೆನ್ನ ಹಿಂದೆ ನಮ್ಮ ಬಗ್ಗೆ ಏನೆಲ್ಲಾ ಹೇಳುತ್ತಿರುತ್ತಾರೆ. ನಾನು ನಮ್ಮ ಸಂಸ್ಕೃತಿ, ಪರಂಪರೆಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುವುದಷ್ಟೇ ಉಳಿದಿದೆಯೇ ವಿನಃ ಹಿರಿಯರು ಉಳಿಸಿದ್ದ ಸಂಸ್ಕಾರಗಳನ್ನೆಲ್ಲ ಗಾಳಿಗೆ ತೂರಿಕೊಂಡು ಸ್ವಾರ್ಥದ ಬೆನ್ನು ಹತ್ತಿದ್ದೇವೆ, hypocrite ಗಳಾಗಿದ್ದೇವೆ, ಮನುಷ್ಯತ್ವವನ್ನೇ ಮರೆತಿದ್ದೇವೆ.
ಇಷ್ಟೆಲ್ಲಾ ಯಾಕೆ ಮಾತಾಡಿದೆ? ಇಂದು ಬೆಳಿಗ್ಗೆ inbox ನಲ್ಲಿ ಒಂದು email ಬಂದು ಕುಳಿತಿತ್ತು. ನಿಮ್ಮೆಲ್ಲರೊಡನೆ ಹಂಚಿಕೊಳ್ಳುವುದರಲ್ಲಿ ಏನೋ ಒಂಥರಾ ಖುಷಿ. ನಿಮಗೂ ಕೂಡ ಇಂಥದೇ email ಸಿಕ್ಕಿರಬಹುದು. ಈ ಕೆಳಗಿನ link ನೋಡಿ.
ಇದರಲ್ಲಿ ಎಷ್ಟನ್ನು ನಾವು ಪಾಲಿಸುತ್ತೇವೆಯೋ ಗೊತ್ತಿಲ್ಲ. ಪ್ರಯತ್ನ ಪಡುವುದರಲ್ಲಿ ತಪ್ಪೇನಿಲ್ಲ ಅಲ್ಲವೇ? ಅಂದು ಗಾಂಧೀಜಿ ಹೇಳಿದ್ದು, ಇಂದು ಒಬಾಮಾ ಹೇಳುತ್ತಿರುವುದು - "Be the change you want to see."

May 28, 2009

ಕ್ರೀಮ್ ಬಿಸ್ಕೆಟ್

ಕ್ರೀಮ್ ಬಿಸ್ಕೆಟ್ ಹೇಗೆ ತಿಂತೀರಾ?.... ಇದೆಂಥ ಪ್ರಶ್ನೆ ಅಲ್ಲವಾ? ನಿಜ. ಮಕ್ಕಳು ಕ್ರೀಮ್ ಬಿಸ್ಕೆಟ್ ತಿನ್ನುವುದನ್ನು ಗಮನಿಸಿದ್ದೀರಾ? ಬಿಸ್ಕೆಟ್ಟನ್ನು ಬೇರೆಯಾಗಿಸಿ, ಅದರ ನಡುವೆ ಇರುವ ಕ್ರೀಮನ್ನು ನಾಲಿಗೆಯಿಂದ ಘಂಟೆಗಟ್ಟಲೆ ಸವಿದು, ನಂತರ ಉಳಿದಿರುವ ಎರಡೂ ಬಿಸ್ಕೆಟ್ಟನ್ನು ತಿನ್ನುತ್ತಾರೆ. ಎಂದಾದರೂ ಹಾಗೆ ತಿಂದಿದ್ದೀರಾ? ನಾನಂತೂ ನಾನೂ ಚಿಕ್ಕವಳಿದ್ದಾಗ ಹಾಗೆಯೇ ತಿನ್ನುತ್ತಿದ್ದೆ. ಆದರೆ ಇಂದು ಏಕೋ ಹಾಗೆ ತಿನ್ನಲು ಮನಸ್ಸಾಗುವುದಿಲ್ಲ. ಈಗ ಹಾಗೆ ತಿನ್ನಲು ನಾಚಿಕೆ ಒಂದು ಕಾರಣವಾದರೆ ಇನ್ನೊದು ಕಾರಣ ಅದರಲ್ಲಿ ಯಾವ ಮಜವೂ ಕಾಣುತ್ತಿಲ್ಲ. ಒಟ್ಟಿನಲ್ಲಿ ಬಿಸ್ಕೆಟ್ಟನ್ನು ಬಾಯಿಗೆ ತುರುಕಿ ನುಂಗಿದರೆ ಮುಗಿದು ಹೋಯಿತು. ಅದನ್ನು enjoy ಮಾಡಿ ತಿನ್ನುವಷ್ಟು ಪುರುಸೊತ್ತು, ತಾಳ್ಮೆ ಎರಡೂ ಇಲ್ಲ. ಚಿಕ್ಕ ಜಗತ್ತಿನಲ್ಲಿ ಸಣ್ಣ ಪುಟ್ಟ ವಿಷಯಗಳೇ ಅದ್ಭುತ ಆನಂದವನ್ನು ತಂದುಕೊಡುತ್ತಿದ್ದವು. ಬಿಸ್ಕೆಟ್ ಎಂದರೆ ಪ್ರಾಣಕ್ಕಿಂತ ಪ್ರಿಯವಾಗಿದ್ದ ನನಗೆ ಈಗ ಕೆಲವೊಮ್ಮೆ ಅದನ್ನು ನೋಡಿದರೇ ಮೂಗು ಮುರಿಯಬೇಕೆನಿಸುತ್ತದೆ. ಮಕ್ಕಳಿದ್ದಾಗ ಖುಷಿ ಕೊಡುತ್ತಿದ್ದ ಕೆಲವೇ ಕೆಲವು ವಿಷಯಗಳು ಇಂದೂ ಕೂಡ ಖುಷಿ ಕೊಡುತ್ತವೆ; ನೀರಾಟ ಆಡುವುದು, ಕಾಡು ಅಲೆಯುವುದು, ಬೆಕ್ಕು-ನಾಯಿಗಳ ಜೊತೆ ಆಟ ಆಡುವುದು, ಹೊಸ ಬಟ್ಟೆ ಹಾಕಿಕೊಳ್ಳುವುದು ಹೀಗೆ ಇನ್ನೊಂದೆರಡು ಅಷ್ಟೇ. ಅಪ್ಪ, ಅಮ್ಮನಿಗೆ ಇಷ್ಟು ವಯಸ್ಸಿನಲ್ಲಿಯೂ ಇರುವಷ್ಟು ಉತ್ಸಾಹ ನಮಗೆ ಈಗಲೇ ಇಲ್ಲವಾಗಿದೆ. ದೊಡ್ಡದೇನೋ ಒಂದರ ಬೆನ್ನು ಹತ್ತಿ ಚಿಕ್ಕ ಚಿಕ್ಕ ವಿಷಯಗಳನ್ನೇ ಮರೆತುಬಿಟ್ಟಿದ್ದೇವೆ. ಮಕ್ಕಳಿದ್ದಾಗ ಆನಂದಿಸಿದ ವಿಷಯಗಳು ಈಗ ಅಷ್ಟೊಂದು ಮಹತ್ವದ್ದಾಗಿ ಅನಿಸುವುದೇ ಇಲ್ಲ. ಹಾಗಿದ್ದರೆ ನಾನು ಅಷ್ಟೊಂದು ಬೆಳೆದುಬಿಟ್ಟಿದ್ದೆನೆಯೆ?- ತಿರುಗಿ ನೋಡಲಾರದಷ್ಟು. ನನ್ನಲ್ಲಿರುವ ಅಪ್ಪ, ಅಮ್ಮನ ಪ್ರೀತಿಯ ಮಗಳು ಎಲ್ಲಿಯೋ ಕಳೆದು ಹೋಗುತ್ತಿದ್ದಾಳೆಯೆ? “Backward, turn backward, Oh Time! in your flight Make me a child again just for tonight!!” -Elizabeth Akers Allen

December 17, 2008

ಹಾಡಿ ಹರಸಿ (ಉತ್ತರ ಕನ್ನಡದ ಗಾದೆ – 234 ಮತ್ತು 235 )

ಹಾಡಿ ಹರಸಿ ಮಗಳೇ ನಿನ್ನ ಪುಣ್ಯ ಎಂದಿದ್ದರು.
ಮಗಳಿಗೆ ಸಹಾಯ ಮಾಡುವಷ್ಟು ಮಾಡಬಹುದು ನಂತರ ಕೈಮೀರಿದಾಗ ಹಣೆಬರಹದಲ್ಲಿದ್ದಂತೆ ಆಗುತ್ತದೆ ಎಂದು ಸುಮ್ಮನಿರಬೇಕಾಗುತ್ತದೆ. ಬುದ್ಧಿ ಮಾತನ್ನು ಹೇಳುವಷ್ಟು ಹೇಳುವುದು ಒಂದು ವೇಳೆ ಅವರು ಕೇಳದಿದ್ದರೆ ನಂತರ ಅದೃಷ್ಟವಿದ್ದಂತೆ ಆಗುತ್ತದೆ ಎಂದು ಕೈಚೆಲ್ಲುವುದು. ಹೆಚ್ಚು-ಕಮ್ಮಿ ಇದೇ ಅರ್ಥದ ಇನ್ನೂ ಒಂದು ಮಾತಿದೆ- ಮರ ಹತ್ತುವವನನ್ನು ಕೈಗೆಟುಕುವವರೆಗೆ ಮಾತ್ರ ನೂಕಬಹುದು. ಮೊನ್ನೆ ಅಪ್ಪನ ಜೊತೆ phone ನಲ್ಲಿ ಮಾತನಾಡುವಾಗ ಅಪ್ಪ ಯಾರೋ ಒಬ್ಬರ ಬಗ್ಗೆ ಹೇಳುತ್ತಿದ್ದರು. ನಾನು ಆಗ ಹೇಳಿದೆ, "ಹೋಗ್ಲಿ ಬಿಡು ಅಪ್ಪ, ನೀನು ಎಷ್ಟು ಎಂದು ಸಹಾಯ ಮಾಡಲು ಸಾಧ್ಯ? ಮರ ಹತ್ತುವವನನ್ನು ಎಲ್ಲಿಯ ತನಕ ನೂಕಲು ಸಾಧ್ಯ?". ಆಗ ಅಪ್ಪ ಹೇಳಿದ್ದು- "ಈಗಿನ ಕಾಲಕ್ಕೆ ಮರ ಹತ್ತುವವನನ್ನು ಸ್ವಲ್ಪವೂ ನೂಕಲು ಸಾದ್ಯವಿಲ್ಲ, ಎಲ್ಲರೂ ಅವರವರೆ ಹತ್ತಬೇಕು. ನೋಡು ಅಲ್ಲೊಂದು ಮರ ಇದೆ, ಬೇಕಾದರೆ ಹತ್ತು ಎಂದು ತೋರಿಸಬಹುದು ಅಷ್ಟೇ!!"

December 13, 2008

ಗೆಣಸಿನ ಬಳ್ಳಿ

ಹಿಂದೊಮ್ಮೆ ಗೆಣಸಿನ ಗಡ್ಡೆಗಳನ್ನು ಕೊಂಡಿದ್ದೆ. ಅವುಗಳಲ್ಲಿ ಮೂರೋ ಅಥವಾ ನಾಲ್ಕೋ ಗಡ್ಡೆಗಳನ್ನು ಉಪಯೋಗಿಸಿ ಉಳಿದ ಒಂದೆರಡನ್ನು ಹಾಗೆಯೇ ಇಟ್ಟಿದ್ದೆ. ಎಷ್ಟೋ ದಿನಗಳ ನಂತರ ನೋಡಿದರೆ ಅದರಲ್ಲಿ ಒಂದು ಗಡ್ಡೆಗೆ ಬೇರುಬರಲು ಶುರುವಾಗಿತ್ತು. ಅದನ್ನು ಒಂದು pot ನಲ್ಲಿ ನೆಟ್ಟೆ. ಬಳ್ಳಿ ದಿನದಿಂದ ದಿನಕ್ಕೆ ಚಿಗುರಿ ಬೆಳೆಯತೊಡಗಿತ್ತು. ಒಂದು ತಿಂಗಳ ನಂತರ ಅದಕ್ಕೆ ಆ pot ಚಿಕ್ಕದಾಯಿತು ಎಂದೆನಿಸಲು ಶುರುವಾಯಿತು. ಒಂದು ದೊಡ್ಡ pot ಕೊಂಡು ತಂದು ಅಳುಕು ಮನಸ್ಸಿನಿಂದಲೇ ಚಿಕ್ಕ pot ನಿಂದ ದೊಡ್ಡ pot ಗೆ transfer ಮಾಡಿದೆ. ಬಳ್ಳಿ ಬಾಡತೊಡಗಿದಾಗ ಇನ್ನೆಲ್ಲಿ ಸತ್ತೇ ಹೋಗುತ್ತದೆಯೇನೋ ಎಂದು ಕೊರಗಿದ್ದೆ. ಒಂದೆರಡು ದಿನದಲ್ಲಿ ಮತ್ತೆ ಹಸಿರಾಗಿ ಬೆಳೆಯತೊಡಗಿತು. Balcony ಯ grills ಗೆ ಹಬ್ಬತೊಡಗಿತು. ಆದರೆ ನಾನು ಇಲ್ಲಿ ಮನೆ ಖಾಲಿ ಮಾಡಿ ಭಾರತಕ್ಕೆ ಮರಳುತ್ತಿರುವುದರಿಂದ ಆ ಬಳ್ಳಿಯನ್ನು ಏನು ಮಾಡಬೇಕು ಎನ್ನುವ ಸಮಸ್ಯೆ ಶುರುವಾಯಿತು. ನನ್ನ ಇನ್ನಿತರ ಕೆಲವು ಸಣ್ಣ-ಪುಟ್ಟ pot ಗಳನ್ನು ಇಲ್ಲಿಯ ಕೆಲವು ಸ್ನೇಹಿತರಿಗೆ ಕೊಟ್ಟೆ. ಕೆಲವೊಂದಷ್ಟು ಗಿಡಗಳು ಚಳಿ ತಡೆಯಲಾರದೇ ಆಗಲೇ ಒಣಗಿಹೋಗಿದ್ದವು. ಅವುಗಳ ಅವಷೇಶವನ್ನೂ, ಮಣ್ಣನ್ನೂ dispose ಮಾಡಬೇಕಾಗಿತ್ತು. ಗೆಣಸಿನ ಬಳ್ಳಿಯ pot ದೊಡ್ಡದಿರುವುದರಿಂದ ಅದನ್ನು ಸ್ನೇಹಿತರ ಮನೆಗೆ train ನಲ್ಲಿ ಸಾಗಿಸುವುದೂ ಕೂಡ ಕಷ್ಟ. ಈ ಬಳ್ಳಿಯೂ ಕೂಡ ಚಳಿಗೆ ತನ್ನ ಎಲೆ ಉದುರಿಸಲು ಶುರುಮಾಡಿತ್ತು. ಆದರೆ ಅದು ಸಾಯುವುದಿಲ್ಲ ಎಂಬುದು ಖಂಡಿತ. ಇಲ್ಲಿನ ಗಿಡಗಳು ಚಳಿಗೆ ಒಂದೂ ಎಲೆ ಇಲ್ಲದಂತೆ ಎಲ್ಲವನ್ನೂ ಉದುರಿಸಿ ನಂತರ April ತಿಂಗಳಿನಲ್ಲಿ ಮತ್ತೆ ಚಿಗುರುತ್ತವೆ; ಹೂವಿನ ಗಿಡಗಳೂ ಕೂಡ. ಇನ್ನು ಕೆಲವು ಚಳಿಗಾಲದಲ್ಲಿಯೇ ಹೂವು ಬಿಡುವ ಜಾತಿಯ ಗಿಡಗಳು ಬೇರೆ. ಹಿಂದಿನ ಚಳಿಗಾಲದಲ್ಲಿ ಎಲ್ಲ ಗಿಡಗಳೂ ಸತ್ತೇ ಹೋದವೆಂದು ನಾನು ತಿಳಿದುಕೊಂಡು ಊರಿಗೆ ಬಂದಿದ್ದೆ. ಏನಾದರೂ ಆಗಲೀ ನೀರು ಮಾತ್ರ ಹಾಕುವುದನ್ನು ಬಿಡಬೇಡ ಎಂದು ರಾಜೀವನಿಗೆ ಹೇಳಿದ್ದೆ. ಮತ್ತೆ spring ನಲ್ಲಿ ನಾನು ಊರಿಂದ ಇಲ್ಲಿನ ಮನೆಗೆ ಬಂದು ಮೊದಲು ಮಾಡಿದ ಕೆಲಸವೇ balcony ಗೆ ಹೋಗಿ ಗಿಡಗಳು ಏನಾಗಿವೆ ಎಂದು ನೋಡಿದ್ದು. ಎಲ್ಲ ಗಿಡಗಳೂ ರಾಜೀವ ಹಾಕಿದ ನೀರು ಉಂಡು ಮತ್ತೆ ಚಿಗುರಿ ನಗುತ್ತಿದ್ದವು! ಈ ವರ್ಷದ spring ನಲ್ಲಿಯೂ ಅವೆಲ್ಲಾ ಮತ್ತೆ ಚಿಗುರುತ್ತವೆ ಎಂಬುದು ಗೊತ್ತಿತ್ತು. ಆದರೆ ಈಗ dispose ಮಾಡದೆ ಬೇರೆ ವಿಧಿಯಿಲ್ಲ. ಒಲ್ಲದ ಮನಸ್ಸಿನಿಂದ ಎಲ್ಲವನ್ನೂ dispose ಮಾಡುವ ನಿರ್ಧಾರಕ್ಕೆ ಬಂದೆ. ಸತ್ತಂತಿರುವ ಇತರ ಗಿಡಗಳನ್ನೂ, ಅವುಗಳ ಮಣ್ಣನ್ನೂ plastic bag ನಲ್ಲಿ ಸುರುವಿಕೊಂಡೆ. ಗೆಣಸಿನ ಬಳ್ಳಿಯನ್ನು ಆಗಲೇ pot ನಿಂದ ಆಗಲೇ ಖಾಲಿ ಮಾಡಲು ಮನಸ್ಸಾಗಲಿಲ್ಲ. ಏಕೆಂದರೆ ಅದಿನ್ನೂ ಹಸಿರಾಗಿ ಕಾಣುತ್ತಿತ್ತು. ಅದನ್ನು pot ಸಮೇತ bicycle ಮೇಲೆ ಹೇರಿಕೊಂಡು disposal ಜಾಗಕ್ಕೆ ಹೊರಟೆ. ನದಿಯ ಅಂಚಿಗೆ ಮಣ್ಣನ್ನು dispose ಮಾಡಲು ಜಾಗ ಇದೆ. ಅಲ್ಲಿ ತಲುಪಿ plastic bag ನಲ್ಲಿದ್ದ ಎಲ್ಲಾ ಮಣ್ಣನ್ನೂ ಸುರುವಿದೆ. ಗೆಣಸಿನ ಬಳ್ಳಿಯ pot ಕೂಡ ಖಾಲಿ ಮಾಡಲೇ ಬೇಕಾಗಿತ್ತು. ಅದನ್ನು ಸುರುವಿ ನೋಡಿದರೆ ನಾನು ನೆಟ್ಟ ದೊಡ್ಡ ಗೆಣಸಿನ ಗಡ್ಡೆ ಮೂರು ನಾಲ್ಕು ಚಿಕ್ಕ ಚಿಕ್ಕ ಗಡ್ದೆಗಳಾಗಿ ಮರಿಯೊಡೆದಿತ್ತು. ನಾನೆಷ್ಟು ಕಟುಕಿ ಎಂದೆನಿಸಿ ಅಳುವೇ ಬಂತು. ಆ ಗಡ್ಡೆಗಳನ್ನೂ, ಬಳ್ಳಿಯನ್ನೂ ಅದೇ ಮಣ್ಣಿನಲ್ಲಿ ಊರಿದಂತೆ ಮಾಡಿ, ತಿರುಗಿ ನೋಡದೆ bicycle ಹತ್ತಿ ಹೊರಟೆ. ಅಯ್ಯೋ ದೇವರೇ ಒಂದು ಮಳೆಯಾದರೂ ಬಂದರೆ ನನ್ನ ಬಳ್ಳಿ ಅಲ್ಲಿಯೇ ಜೀವ ಹಿಡಿದುಕೊಂಡು ಪುನಃ ಹಬ್ಬಬಹುದೇನೋ. ಮನೆಗೆ ಬಂದವಳೇ weather forecast ನೋಡಿದೆ, ಭಾನುವಾರ ಮಳೆ ಎನ್ನುತ್ತಿತ್ತು. ಭಾರತಕ್ಕೆ ಹೊರಡುವ ಮೊದಲು ಮಾಡಿ ಮುಗಿಸಬೇಕಾಗಿರುವ ಕೆಲಸಗಳ list ನಲ್ಲಿ ‘dispose off plants and soil' ಎಂಬುದರ ಮೇಲೆ ಅಡ್ಡ ಗೆರೆ ಎಳೆದೆ ಆದರೆ ಆದರೆ ಮಗನ ಶ್ರಾದ್ಧ ಮಾಡಿ ಮುಗಿಸಿದ ತಂದೆಯೊಬ್ಬನ ಮನಸ್ಸಿನಂತಾಗಿತ್ತು ಮನಸ್ಸು.

December 8, 2008

ವಾಜೆ ಕಲಿಯೇ (ಉತ್ತರ ಕನ್ನಡದ ಗಾದೆ – 233)

ವಾಜೆ ಕಲಿಯೇ ಮಗಳೇ ಎಂದರೆ ಓಲೆ ಮುಂದೆ ಉಚ್ಚೆ ಹೊಯ್ದಿದ್ದಳು.
'ವಾಜೆ' ಎಂದರೆ ಕೆಲಸ, ಒಳ್ಳೆಯ ನಡತೆ ಎಂದು ಹೇಳಬಹುದು. ಒಳ್ಳೆಯ ಕೆಲಸವನ್ನು ಕಲಿ ಎಂದರೆ ಒಲೆಯ ಮುಂದೆ ಉಚ್ಚೆ ಹೊಯ್ದಿದ್ದಳಂತೆ. ಯಾರಿಗಾದರೂ ಏನಾದರೂ ಒಳ್ಳೆಯದನ್ನು ಕಲಿ ಎಂದರೆ ಅವರು ಏನೋ ಅನಾಹುತಕಾರಿ ಕೆಲಸವನ್ನು ಮಾಡಿದರೆ ಈ ಮಾತನ್ನು ಹೇಳಬಹುದು.