June 2, 2016

ದ್ವಂದ್ವದಲ್ಲಿರುವ ಜನರೇಶನ್ ನಮ್ಮದು!

ನಾನೀಗ ಮೂವತ್ತರ ದಶಕದ ಕೊನೆಯಲ್ಲಿ... ಇನ್ನೇನು ಒಂದೆರಡು ವರ್ಷಗಳಲ್ಲಿ ಚಾಳೀಸೂ ಮುಖವೆರೀತು! ಆಧುನಿಕ ತಂತ್ರಜ್ಞಾನದಲ್ಲಿ ಇತ್ತೀಚಗೆ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ ಕೆಲವೊಮ್ಮೆ ಆಶ್ಚರ್ಯವೂ, ಖುಷಿಯೂ ಆದರೆ, ಇನ್ನು ಕೆಲವೊಮ್ಮೆ ತಲೆ ತಿರುಗಿದಂತಾ ಅನುಭವ... ಎಷ್ಟೆಲ್ಲಾ ಮುಂದುವರಿದಿದ್ದೇವೆ ನಾವು! ಜಗತ್ತೆಲ್ಲಾ ಬೆರಳ ತುದಿಯಲ್ಲಿ!

ಒಮ್ಮೆ ಹಿಂದಿರುಗಿ ನೋಡಿದೆ... ಅಪ್ಪ, ಅಮ್ಮನ ಕಾಲದಲ್ಲಿ ರೇಡಿಯೋಗೂ licence ಇತ್ತು! ಅಪ್ಪನ ಯಾವುದೋ ಹಳೆಯ file ನಲ್ಲಿ ನಾನು ಅದನ್ನು ಕಂಡಿದ್ದೆ. ನೀಲಿ ಬಣ್ಣದ ಸಣ್ಣ ಪುಸ್ತಕ (Photo ನೋಡಿ). ನನ್ನ ಎರಡು ವರ್ಷದ ಮಗ smart phone ಹೇಗೆ ಉಪಯೋಗಿಸುವುದು ಎಂದು ಆಗಲೇ ಕಲಿಯತೊಡಗಿದ್ದಾನೆ! ನನ್ನ ಅರವತ್ತಾರು ವರ್ಷದ ಅಪ್ಪ ಇವತ್ತಿಗೂ mobile phone ನಲ್ಲಿ ಪ್ರತೀ ಸಲವೂ number dial ಮಾಡಿಯೇ ಮಾತಾಡುತ್ತಾರೆ. Generation gap ನನ್ನ ಕಣ್ಣೆದುರಿಗೆ!

ನಮ್ಮ ಬಾಲ್ಯದ ಕಾಲದಲ್ಲಿ landline phone ಗಳು ಆಗ ತಾನೇ ಕಾಲು ಹಾಕುತ್ತಿದವು. ಊರಲ್ಲೇ ಇನ್ನೊಬ್ಬರ ಮನೆಗೆ phone ಮಾಡಬೇಕಿದ್ದರೆ ಬರಿದೇ ಎರಡು digit dial ಮಾಡಿದರೆ ಸಿಗುತ್ತಿದ್ದರು. ಆದರೆ ಈಗ ಅವರ ಮನೆಗೆ ಮಾಡಬೇಕಾದರೂ ಆರು digit dial ಮಾಡಬೇಕು! Trunk call ಮಾಡುವ ಮಜವೇ ಬೇರೆ ಇತ್ತು! ನಮ್ಮ ಮನೆಯಿಂದ ಶಿರಸಿ exchange ಗೆ phone ಮಾಡಿನಾನು ಎಕ್ಕಂಬಿ exchange ** ನಿಂದ ಮಾತಾಡುತ್ತಿದ್ದೇನೆ, ನನಗೆ  ಜಾನ್ಮನೆ exchange ** ಕೊಡಿ ಎನ್ನಬೇಕಾಗಿತ್ತು, ನಂತರ ಅವರ call ಗಾಗಿ ಕಾಯುತ್ತಿರಬೇಕಗಿತ್ತು. ಅವರು connect ಮಾಡಿ ನಮಗೆ ತಿರುಗಿ call ಮಾಡುತ್ತಿದರು. ಮೂರು ನಿಮಿಷಗಳ ಕಾಲ ಸಮಯವಿರುತ್ತಿತ್ತು. ಅಷ್ಟರ ನಂತರ ಅವರು ನಡುವೆ ಬಾಯಿ ಹಾಕಿ "ಮೂರು ನಿಮಿಷ ಆಯ್ತ್ರೀ" ಎನ್ನುತ್ತಿದ್ದರು! ನಮ್ಮ ಮಾತು ಮುಗಿದಿರದಿದ್ದರೆ "ಮತ್ತೆ ಮೂರು ನಿಮಿಷ ಕೊಡ್ರೀ" ಎನ್ನುವುದು. ಹೀಗೆಯೇ ನಡೆಯುತ್ತಿರುವಾಗ ಒಮ್ಮೆ ನಮ್ಮ ಎಕ್ಕಂಬಿ exchange lineman ಅಪ್ಪನ ಬಳಿ "ನಿಮ್ಮ ಜಮೀನು ಮಾರುವ ವಿಚಾರ ಏನಾಯಿತು?" ಎಂದು ಕೇಳಿದನಂತೆ. ಅಪ್ಪನಿಗೆ ಆಶ್ಚರ್ಯ! ಆಮೇಲೆ ಗೊತ್ತಾಯಿತು- ಅಪ್ಪ phone ನಲ್ಲಿ ಮಾತನಾಡುತ್ತಿರುವಾಗ ನಡುವೆ ಅವನೂ ಕೇಳಿಸಿಕೊಂಡಿದ್ದ!

ಅಪ್ಪ, ಅಮ್ಮನ ಕಾಲಕ್ಕೆ ರೇಡಿಯೋ ಬಂತು, ನಮ್ಮ ಬಾಲ್ಯದ ಕಾಲಕ್ಕೆ black and white TV ಬಂದಿತ್ತು. ಮಜವೆಂದರೆ ಆಗಿನ ಕಾಲದ ಕೆಲವು TV ಗಳಿಗಂತೂ ಬಾಗಿಲು ಹಾಕಿ child lock ಮಾಡಲೂ ಸಾಧ್ಯವಿತ್ತುಈಗಿನ ಕಾಲದಲ್ಲಿ ದೊಡ್ದವರಿಗಿಂತ ಮಕ್ಕಳೇ ಚೆನ್ನಾಗಿ TV remote control operate ಮಾಡುತ್ತಾರೆ. ಎಂತಹ ಬದಲಾವಣೆ ಕೆಲವೇ ದಶಕಗಳಲ್ಲಿ! ನಾವು ಚಿಕ್ಕವರಿದ್ದಾಗ ನಮ್ಮ ಪಕ್ಕದ ಊರಿನ ಒಬ್ಬರ ಮನೆಯಲ್ಲಿ TV ಇತ್ತು. ಭಾನುವಾರ ಬೆಳಿಗ್ಗೆ ರಾಮಾಯಣ ನೋಡಲು ಅವರ ಮನೆಯಲ್ಲಿ ಜಾತ್ರೆಯೇ ನೆರೆದಿರುತ್ತಿತ್ತು! ಈಗಿನ ಕಾಲದಂತೆ ನಾಲ್ಕು ಜನ ಮನೆಗೆ ಬಂದರೆಂದರೆ ಏನೋ inconvenience ಅನ್ನುವ ತರಹ ಇರಲಿಲ್ಲ ಆಗಿನ ಕಾಲ. ಬಂದವರನ್ನೆಲ್ಲಾ ಸ್ವಾಗತಿಸಿ ಚಾಪೆ ಹಾಸಿ ಕೊಡುತ್ತಿದ್ದರು. ನಾವೆಲ್ಲಾ ಮಕ್ಕಳು ಸೇರಿ ಎಷ್ಟೋ ದೂರ ನಡೆದುಕೊಂಡು ಅವರ ಮನೆಗೆ ಹೋಗುತ್ತಿದ್ದೆವು! ಕೆಲವು ವರ್ಷಗಳ ನಂತರ ನಮ್ಮನೆಗೆ black and white  portable TV ಬಂತು. ಧಾರವಾಡ relay station ನಿಂದ signal ತೆಗೆದುಕೊಳ್ಳಲು ಮನೆಯ ಮೇಲೆ antenna. ಯಾವಾಗ ನೋಡಿದರೂ TV ಮೇಲೆ ಸಬ್ಬಕ್ಕಿ ಪಾಯಸದ ತರಹ ಗುಳ್ಳೆ ಗುಳ್ಳೆ. ನನ್ನ ತಮ್ಮ antenna ತಿರುಗಿಸುವವ, ನಾನು ಮನೆಯೊಳಗಿಂದ "ಸಾಕು ಸಾಕು ಸಾಕು... ನಿಲ್ಲಿಸು ನಿಲ್ಲಿಸು ... ಅಯ್ಯೋ ಮತ್ತೆ ಹೋಯ್ತು ... " ಎಂದು ಕಿರಿಚಿಕೊಳ್ಳುವವಳು. ಇದೆಲ್ಲ ಸಂಭ್ರಮದೊಳಗೆ programme ಬಹುಪಾಲು ಮುಗಿದೇ ಹೋಗಿರುತ್ತಿತ್ತು! ದಿನದಲ್ಲಿ TV programmes ಕೆಲವೇ ಗಂಟೆಗಳ ಕಾಲ, ಉಳಿದ ಸಮಯದಲ್ಲಿ TV ಹಚ್ಚಿದರೆ screen ಮೇಲೆ ಪಟ್ಟೆಸೀರೆ ಕಾಣಿಸುತ್ತಿತ್ತು ಜೊತೆಗೆ ಕುನ್ಯ್ಯ್ಯ್ಯ್ ಎನ್ನುವ ಸದ್ದು ಬೇರೆ. Radio ದಲ್ಲಿ ಅಮೀನ್ ಸಯಾನಿಯವರ 'ಸಿಬಾಕಾ ಗೀತ್ ಮಾಲಾ' ಕೇಳಲು ಒಂದು ವಾರ ಕಾಯಬೇಕಾಗಿತ್ತು; ಹಾಗೆಯೇ TV ಯಲ್ಲಿ ಬುಧವಾರದ 'ಚಿತ್ರಹಾರ್' ಮತ್ತು ಭಾನುವಾರದ 'ರಂಗೋಲಿ'ಗೂ ಕೂಡ. ನಂತರ ಕೆಲವು ವರ್ಷಗಳಲ್ಲಿ ಕನ್ನಡದ 'ಚಂದನ ವಾಹಿನಿ' ಪ್ರಾರಂಭ. ಕೆಲ ಗಂಟೆಗಳ ಕಾಲ ಕನ್ನಡವನ್ನೂ ನೋಡಲು ಸಿಗುತ್ತಿತ್ತು ನಂತರ "Over to Delhi" ಎಂಬ message. ಚಂದನ ವಾಹಿನಿಯ ಪ್ರಾರಂಭದ ಮೊದಲು ಭಾನುವಾರ ದೆಹಲಿಯವರು ಕಿವುಡ ಮೂಕರ ವಾರ್ತೆಯ ನಂತರ ಹಾಕುವ ಪ್ರಾದೇಶಿಕ ಭಾಷಾ ಚಲನಚಿತ್ರದ ಕನ್ನಡದ ಪಾಳಿಗೆ ನಾಲ್ಕು ತಿಂಗಳುಗಳೇ ಕಾಯಬೇಕಾಗಿತ್ತು! ಇನ್ನೂ ಮಜದ ಸಂಗತಿಯೆಂದರೆ ಯಾವುದಾದರೂ ಹಳೆಯ ಹಾಡು ಬಂತೆಂದರೆ 'ಪ್ರಸಾರ ಕಪ್ಪು ಬಿಳುಪು' ಎಂಬ ಕೆಳಗಡೆ flash ಆಗುತ್ತಲೇ ಇರುತ್ತಿತ್ತು, ಏಕೆಂದರೆ ಮನೆಯಲ್ಲಿ colour TV ಇದ್ದವರು ಏನೋ ಆಯಿತು ಎಂದು ಗಾಬರಿ ಬಿದ್ದು ತಮ್ಮ TV ಯ  colour adjustment ಗೆ ತೊಡಗಬಾರದೆಂದು! ಏನೇ ಆಗಲಿ ಹಿಂದಿರುಗಿ ನೋಡಿದರೆ ಅಂದಿನ ದಿನಗಳ ನೆನಪೇ ಅಪ್ಯಾಯಮಾನ! ಈಗಿನ generation ನವರಿಗೆ ಇದ್ಯಾವುದೂ ಗೊತ್ತೇ ಇಲ್ಲ! ನಮ್ಮ generation transition ನಲ್ಲಿ ಬರುವ generation. ಏನೂ ಇಲ್ಲದ ಕಾಲದಿಂದ ಇಷ್ಟೆಲ್ಲಾ ಬೆಳವಣಿಗೆಗಳನ್ನು ಕಂಡಿದೆ.

ನನಗಂತೂ ಯಾವತ್ತೂ ಏನೋ ಒಂದು ತರದ ದ್ವಂದ್ವ. ಇಷ್ಟೆಲ್ಲಾ technological advancement ಆದ ಮೇಲೆ ಹಳೆಯದನ್ನು miss ಮಾಡಿಕೊಂಡಂತ ಭಾವನೆ. ಪತ್ರ ಬರವಣಿಗೆ ಹೋಗಿ email ಬಂತು, ಈಗಂತೂ ಎಲ್ಲದಕ್ಕೂ WhatsApp. ತುಂಬಾ convenient, ನಿಜ. ಆದರೂ ಏನೋ ಕಳೆದುಕೊಂಡಂತೆ ಬಣ ಬಣ. ಉದಾಹರಣೆಗೆ, ಅಂಗಡಿಗೆ ಹೋಗುವಾಗ ರಾಜೀವ ನನಗೆ "ಅದ್ಯಾಕೆ ಸಾಮಾನು ಚೀಟಿ ಬರೆದುಕೊಳ್ಳುತ್ತೀಯಾ, smart phone ನಲ್ಲಿ ಮಾಡಿಕೊ" ಎನ್ನುತ್ತಾನೆ. Smart phone ನಲ್ಲಿ ಏನೆಲ್ಲಾ options ಇದ್ದರೂ ನನಗೆ ಚೀಟಿ ಬರೆದುಕೊಳ್ಳುವುದೇ ಇಷ್ಟ. ಒಮ್ಮೊಮ್ಮೆ ವಿಚಾರ ಮಾಡಿದರೆ ರಾಜೀವ ಹೇಳುವುದೂ ನಿಜ ಎನಿಸುತ್ತದೆ, ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಆದರೂ ಹಳೆಯ ಪದ್ಧತಿಗಳು ಯಾಕೋ ಮನಸ್ಸಿಗೆ ಹತ್ತಿರ ಎನಿಸುತ್ತವೆ. ಈಗಿನ generation ನವರು technology ಗೆ ಹೊಂದಿಕೊಂಡಿದ್ದಾರೆ ಏಕೆಂದರೆ ಅವರಿಗೆ ಹಳೆಯ ವಿಧಾನಗಳಗಳ ಅನುಭವವಿಲ್ಲ. ಹಳೆಯ ಕಾಲದವರು ಇನ್ನೂ ಹಳೆಯ ವಿಧಾನಗಳನ್ನೇ ನೆಚ್ಚಿಕೊಂಡಿದ್ದಾರೆ ಏಕೆಂದರೆ ಅವರಿಗೆ ಹೊಸದರ ಬಗ್ಗೆ ಅಸಡ್ಡೆ. ನನಗೋ ಹೊಸದರ ಮೇಲೆ ಪ್ರೀತಿ, ಆದರೆ ಹಳೆಯದನ್ನು ಬಿಡಲು ಮನಸ್ಸಿಲ್ಲ. ಹಾಗಾಗಿ ನನ್ನಂತ ಕೆಲವು ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ಇರುವವರ ಬಗ್ಗೆ ವಿಚಾರ ಮಾಡುತ್ತಿದ್ದೇನೆ!

5 comments:

ವಿ.ರಾ.ಹೆ. said...

ಟ್ರಂಕಾಲು, ಪತ್ರಗಳು, ಕಪ್ಪುಬಿಳುಪು ಟೀವಿ, ರಾಮಾಯಣ, ಹೀಮ್ಯಾನು, ಆಂಟೆನಾ, ಬೂಸ್ಟರ್........ಹ್ಹ ಹ್ಹ.. ಸವಿನೆನಪುಗಳು..

ದೊಡ್ಡ ಮಟ್ಟದ ಸ್ಥಿತ್ಯಂತರಗಳನ್ನು ಕಾಣುತ್ತಾ ಅದರೊಳಗೇ ಬೆಳೆದ ನಮ್ಮ ಜನರೇಶನ್ನುಗಳು ಹೀಗೆಯೆ.. ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ಹೊಸದನ್ನು ಬಳಸುತ್ತಾ, ಹಳಿಯುತ್ತಾ ಹಳೆಯದನ್ನು ಬಿಡಲಾಗದೇ ಮರೆಯಲಾಗದೇ ಉಳಿಸಿಕೊಳ್ಳುತ್ತಾ ಇರುವುದು.

ಅಂದಹಾಗೆ...ಸಾಮಾನು ಚೀಟಿ, ಚೆಕ್ ಲಿಸ್ಟು ಇನ್ನೂ ಕಾಗದದಲ್ಲೇ ಬರೆಯುವ ಅಭ್ಯಾಸ ನನ್ನದೂ ಕೂಡ :)

Rohit KG said...

Loved the writing Seema. Pure nostalgia

Seema S. Hegde said...

@Vikas and Rohit,
Ishtella dinagala nantara barediddaroo odi protsahisiddakke chira runi :)

G B Patil said...


ಅನುಪಮ ಸರಳ ಸುಂದರ ಬರವಣಿಗೆ ನಿಮ್ಮದು,
ಸುಮಾರು ೧೯೮೦ ರ ದಶಕ ಅಥವಾ ಅದಕ್ಕಿಂತ ಪೂರ್ವದಲ್ಲಿ ಜನಿಸಿ , ೧೯೯೦ ರ ದಶಕ ಅಥವಾ ಅದಕ್ಕಿಂತ ಪೂರ್ವದಲ್ಲಿ ಬಾಲ್ಯವನ್ನು ಸವಿದವರು ಮಹಾ ಸುದೈವಿಗಳು. ಏಕೆಂದರೆ ನಾವು ಯಾವುದೇ ಆಧುನಿಕ ಪರಿಕರಗಳಿಲ್ಲದ ಜಂಜಾಟರಹಿತ , ಒತ್ತಡವಿಲ್ಲದ ನಿರಾಳ ಜೀವನವನ್ನೂ ಕಂಡಿದ್ದೇವೆ, ಅದರೊಂದಿಗೆ ಈಗಿನೆ ಅತ್ಯಾಧುನಿಕ ಯಾಂತ್ರಿಕ ಬಾಳನ್ನೂ ಕಾಣುತ್ತಿದ್ದೇವೆ. ನಮ್ಮ ಜೀವಿತಾವಧಿಯಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಜೀವನ ಇವೆರಡಕ್ಕೂ ಸಾಕ್ಷಿಯಾದವರು ನಾವು. ೧೯೯೦ ರ ದಶಕದ ನಂತರ ಜನಿಸಿದವರು ಈ ಸುಖದಿಂದ ವಂಚಿತರು .
ಆಗ ಹಳ್ಳಿ ಮತ್ತು ಪಟ್ಟಣಗಳಿಗೆ ಬಹಳ ವ್ಯತ್ಯಾಸವೇನೂ ಇರಲಿಲ್ಲ. ರಜೆಯಲ್ಲಿ ಹಳ್ಳಿಗೆ ಹೋದಾಗ ಸಂಜೆ ಸಮಯದಲ್ಲಿ ಚಿಮಣಿ ದೀಪ ,
ಕಂದೀಲು ದೀಪದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಮಾಲಿಕೆಯ ಅಂಗೈ ಅಗಲದ ಮಹಾವ್ಯಕ್ತಿಗಳ ಜೀವನ ಚರಿತ್ರೆಯ ಪುಸ್ತಕಗಳು ,
ಚಂದಮಾಮಾ, ಬಾಲಮಿತ್ರ, ಬೊಂಬೆಮನೆ ಓದುತ್ತಿದ್ದ ನಾವು, ಪಟ್ಟಣಕ್ಕೆ ಮರಳಿದಾಗ ವಿದ್ಯುತ್ ದೀಪದಲ್ಲಿ ಅಭ್ಯಾಸ ಮಾಡುತ್ತಿದ್ದೆವು.
ಆಗ ಕಾಗೆ ಮುಖದ ರೀತಿಯ ಸ್ವಿಚ್ ಇರುತ್ತಿದ್ದವು. ವಿದ್ಯುತ್ ಕೈ ಕೊಟ್ಟರೆ ಮತ್ತೆ ಚಿಮಣಿ, ಕಂದೀಲು ಇದ್ದದ್ದೇ.
ಅದೊಂದು ರಮ್ಯ ಕಾಲ. ಕೆರೆ-ಹಳ್ಳಗಳಲ್ಲಿ ಈಜಾಟ, ಕಾಡಿನಲ್ಲಿ ತಿರುಗಾಟ, ಜೋಳದ ಬೆಂಡಿನಿಂದ ಆಟಿಗೆ ತಯಾರಿಕೆ , ಆಕಾಶವಾಣಿ ಆಲಿಸುವಿಕೆ, ಒತ್ತಡರಹಿತ ಶಾಲಾ ಜೀವನದ ನೆಮ್ಮದಿಯ ದಿನಗಳು ಅವು. ನಮಗೆ ಆತ್ಮಬಂಧುಗಳಂತಿದ್ದ ಗುರುಗಳು - ಗುರುಮಾತೆಯರು ಈಗಿನಂತೆ ಅನಗತ್ಯ ಕೆಲಸಗಳ ಹೊರೆಯಿಲ್ಲದೆ ನಿರಾಳ ಮನಸ್ಸಿನಿಂದ ತಮ್ಮ ಸಮಯವನ್ನೆಲ್ಲ ವಿದ್ಯಾರ್ಥಿಗಳ ಬಾಳನ್ನು ರೂಪಿಸುವದಕ್ಕೆ ಮೀಸಲಾಗಿರಿಸಿ ತಮ್ಮ ಮನೆಯ ಮಕ್ಕಳಂತೆ ಕಾಣುತ್ತಿದ್ದರು. ಶಾಲಾಪಾಠಕ್ಕೆ ಮಾತ್ರ ಸೀಮಿತರಾಗದೆ, ನೈತಿಕ ಮೌಲ್ಯ - ಸಂಸ್ಕೃತಿಗಳನ್ನೂ ಸಹ ಕಲಿಸಿ , ಉತ್ತಮ ಪ್ರಜೆಗಳನ್ನಾಗಿ ಮಾಡುತ್ತಿದ್ದರು. ಈಗ ಅದೆಲ್ಲ ಕನಸಿನ ಮಾತು.
ಧನ್ಯವಾದಗಳೊಂದಿಗೆ

Seema S. Hegde said...

ಜಿ ಬಿ ಪಾಟೀಲ ಅವರೇ,
ನಮಸ್ಕಾರ ಕಾಮೆಂಟ್ ಗೆ. ನನ್ನ ಬ್ಲಾಗ್ ಗೆ ನಾನೇ ಬರದೇ ಎಷ್ಟೋ ದಿನಗಳಾದವು! ಅಂಥದರಲ್ಲಿ ತಾವು ಬಂದು ಓದಿ, ಇಷ್ಟಪಟ್ಟು ಕಾಮೆಂಟ್ ಬರೆದಿದ್ದನ್ನು ನೋಡಿ ತುಂಬಾ ಖುಷಿ ಆಯಿತು. ಧನ್ಯವಾದಗಳು.