January 18, 2012

ಬಡಿ ಗೋವಿಗೇಕೆ (ಉತ್ತರ ಕನ್ನಡದ ಗಾದೆ – 251)


ಬಡಿ ಗೋವಿಗೇಕೆ ಧರೆಯಂಚಿನ ಹುಲ್ಲು?
'ಬಡಿ' ಎಂಬ ಪದ 'ಬಡವ' ಎಂಬ ಅರ್ಥವನ್ನು ಕೊಡುತ್ತದೆ. ಆರ್ಥಿಕವಾಗಿ ಬಡವ ಎಂದಲ್ಲ, ಆದರೆ 'ಅಯ್ಯೋ ಪಾಪ' ಎಂಬ ಅರ್ಥ. 'ಬಡವ' ಎಂಬುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂದರ್ಭಿಕವಾಗಿ ಬಳಸಲ್ಪಡುತ್ತದೆ. ಕೆಲವೊಮ್ಮೆ ಆರ್ಥಿಕವಾಗಿ ಬಡವ ಎಂಬುದನ್ನು ಸೂಚಿಸಿದರೆ, ಮತ್ತೊಮ್ಮೆ ಬಡಪಾಯಿ, ಪಾಪದವ ಎಂಬುದನ್ನು ಸೂಚಿಸುತ್ತದೆ. 'ಬಡಿ' ಎಂಬ ಶಬ್ದ ಇನ್ನೂ ಕೆಲವೊಮ್ಮೆ ಕೃಷ ಶರೀರವನ್ನು ಸೂಚಿಸುತ್ತದೆ. ಎಲ್ಲವೂ ಸಂದರ್ಭಕ್ಕೆ ತಕ್ಕಂತೆ ಬಳಸಲ್ಪಡುತ್ತವೆ.

ಧರೆ ಎಂದರೇನು ಎಂಬುದನ್ನು ವಿವರಿಸುವುದು ಕಷ್ಟ. ಭೂಮಿಯ ಕಡಿದಾದ ಭಾಗ ಎನ್ನಬಹುದು. ಒಂದು ಕಡೆ ಕಡಿದಾಗಿದ್ದರೆ ಇನ್ನೊಂದು ಕಡೆಯಿಂದ ಅದರ ತುದಿಯವರೆಗೆ ಹೋಗಬಹುದಾಗಿರುತ್ತದೆ. ಈ ಕೆಳಗಿನ photos ನೋಡಿ. 
ಈ ಗಾದೆಯಲ್ಲಿ ಬಡಿ ಗೋವು ಎಂದರೆ, ಪಾಪದ ಗೋವು ಅಥವಾ ಮೈಯಲ್ಲಿ ಹೆಚ್ಚು ಶಕ್ತಿ ಇಲ್ಲದ ಗೋವು ಎಂದರ್ಥ. ಅಂಥ ಗೋವು ಧರೆಯಂಚಿನ ಹುಲ್ಲಿಗೆ ಆಸೆಪಟ್ಟು ಅಲ್ಲಿಗೆ ಹೋದರೆ ಬಿದ್ದು ಹೋಗುವ ಸಂಭವ ಜಾಸ್ತಿ. ಬಡಪಾಯಿಯಾದ ವ್ಯಕ್ತಿಯು ತನ್ನ ಶಕ್ತಿಗೂ ಮೀರಿದಂಥ ಕೆಲಸಕ್ಕೆ ಕೈಹಾಕಿ ತನ್ನನ್ನು ತಾನು ಕಷ್ಟದಲ್ಲಿ ಸಿಕ್ಕಿಸಿಕೊಳ್ಳುವಂಥ ಸಂದರ್ಭದಲ್ಲಿ ಈ ಗಾದೆಯನ್ನು ಹೇಳಬಹುದು.

ನಮ್ಮ ಮನೆಯ ಎರಡು ನಾಯಿಗಳಲ್ಲಿ ಮೋಗ್ಲಿ ಭಯಂಕರ ಗಾತ್ರದ Doberman ನಾಯಿ; ಇನ್ನೊಂದು ದೇಸಿ ತಳಿಯ ಸಣ್ಣ ನಾಯಿ ಚೋಟು. ಆ ಚೋಟು ಒಮ್ಮೆ ಮೋಗ್ಲಿ ಆಚೆ ಎಲ್ಲೋ ಇರುವಾಗ ಅವನ ಅನ್ನದ ಪಾತ್ರೆಗೆ ಬಾಯಿ ಹಾಕಲು ಹೊರಟಿದ್ದನ್ನು ನೋಡಿದ ಅಮ್ಮ ಹೇಳಿದ್ದರು- "ಸುಮ್ಮನಿರು ಚೋಟು, ಬಡಿ ಗೋವಿಗೇಕೆ ಧರೆಯಂಚಿನ ಹುಲ್ಲು? ಮೋಗ್ಲಿ ಈಗ ನೋಡಿದರೆ ನಿನ್ನನ್ನು ಕಚ್ಚಿ ಸಾಯಿಸುತ್ತಾನೆ ನೋಡು" ಆಗಲೇ ನಾನು ಈ ಗಾದೆಯನ್ನು ಮೊದಲ ಬಾರಿಗೆ ಕೇಳಿದ್ದು. 

4 comments:

Jagadeesh Balehadda said...

ಹಿರಿಯರ ಅನುಭವದ ಮೂಟೆಯಿಂದ ಹೊರಬಂದ ಗಾದೆಗಳು ನಿಜಕ್ಕೂ ನಮಗೆಲ್ಲ ದಾರಿದೀಪವೇ ಸರಿ. ಗಾದೆಗಳ ಬಗ್ಗೆ ಬರೆಯುತ್ತಿರಿ.ಧನ್ಯವಾದಗಳು.

ವಿ.ರಾ.ಹೆ. said...

good gaade.

ಈಶ್ವರ said...

ಕೇಳಿದ್ದೆ ಗಾದೆ.. ಇಷ್ಟೊಂದು ಸೊಗಸಾಗಿ ವರ್ಣನೆ. ಅದಕ್ಕಾಗೇ ತೆಗೆದ ಫೋಟೋಸ್.. ಸೂಪರ್ ಸೀಮಕ್ಕ :))

Seema S. Hegde said...

@ All
Thank you so much!