February 21, 2011

ತಾನು ಕೆಟ್ಟು ಇರಬಹುದು (ಉತ್ತರ ಕನ್ನಡದ ಗಾದೆ – 248)

ತಾನು ಕೆಟ್ಟು ಇರಬಹುದು; ತವರು ಕೆಟ್ಟು ಇರಲಾಗದು.
ಹೆಣ್ಣು ಮಕ್ಕಳಿಗೆ ತವರುಮನೆಯ ಬಗ್ಗೆ ಇರುವ ಪ್ರೀತಿಯನ್ನು ಹೇಳುವ ಗಾದೆ ಇದು. ತಮಗೇನಾದರೂ ಕಷ್ಟ ಬಂದರೆ ಸಹಿಸಿಕೊಳ್ಳುತ್ತಾರೆ. ಆದರೆ ತವರು ಮನೆಯಲ್ಲಿ ಕಷ್ಟ ಎಂದು ತಿಳಿದಾಗ ಹೆಣ್ಣುಮಕ್ಕಳು ಅನುಭವಿಸುವ ಚಡಪಡಿಕೆ ಅವರ್ಣನೀಯ. ತವರಿನ ಕಷ್ಟಕ್ಕೆ ಸಹಾಯ ಮಾಡಬೇಕೆಂದೆನಿಸಿದರೂ ಗಂಡನ ಮನೆಯಲ್ಲಿ ಬರುವ ಪ್ರತಿಕ್ರಿಯೆಯನ್ನು ನೆನೆನು ಸುಮ್ಮನಾಗುತ್ತಾರೆ. ಒಂದುವೇಳೆ ಅವರು ಸಹಾಯಕ್ಕೆ ಬಂದರೂ ಸಹಾಯ ತೆಗೆದುಕೊಳ್ಳಲು ತವರುಮನೆಯವರು ಸಮಾಜದಲ್ಲಿ ಜನರು ವಿಧ ವಿಧವಾಗಿ ಮಾತನಾಡುತ್ತಾರೆ ಎಂಬ ಭಯದಿಂದ ಹಿಂಜರಿಯುತ್ತಾರೆ. ಇದು ಹಿಂದಿನಕಾಲಕ್ಕೆ ಅನ್ವಯಿಸುವಂಥ ಮಾತು. ಈಗ ಪರಿಸ್ಥಿತಿ ಬದಲಾಗಿದೆ. ಆದರೆ ಹೆಣ್ಣುಮಕ್ಕಳ ತವರಿನ ಮೇಲಿನ ಪ್ರೀತಿ ಬದಲಾಗಲಿಲ್ಲ. ಇಬ್ಬರೂ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸಹಾಯಮಾಡುವಂಥ ಸೌಹಾರ್ದ ಪರಿಸ್ಥಿತಿ ಇದೆ.

'ತವರುಮನೆ' ಎಂಬ ಶಬ್ದವನ್ನು ಕೇಳಿದಾಕ್ಷಣವೇ ಏನೋ ಒಂಥರಾ ಪುಳಕ. ಮದುವೆಯಾಗಿ ಬಂದ ಎಲ್ಲ ಹೆಣ್ಣುಮಕ್ಕಳೂ ಅನುಭವಿಸುತ್ತಾರೆ. ಮದುವೆಯಾಗಿ ಎಷ್ಟೋ ವರ್ಷಗಳ ನಂತರವೂ ಬಹುಪಾಲು ಹೆಣ್ಣುಮಕ್ಕಳಿಗೆ ತವರುಮನೆಯ ಮೇಲಿನ ಪ್ರೀತಿ ಅಷ್ಟೇ ತೀವ್ರವಾಗಿರುತ್ತದೆ; ಇರಬೇಕು ಕೂಡ. ನಾನೂ ಹಾಗೆ ಸ್ವಲ್ಪ ಭೂತಕಾಲಕ್ಕೆ.....


ನನ್ನ ಮದುವೆಯಾದ ಹೊಸದರಲ್ಲಿ ನಾವು ಶಿರಸಿಯಲ್ಲಿ ವಾಸವಾಗಿದ್ದೆವು. ನಮ್ಮ ಮನೆ main road ಗೆ ತುಂಬಾ ಹತ್ತಿರವಿದ್ದುದರಿಂದ ಊರ ಕಡೆಯಿಂದ ಬರುವ ಬಸ್ಸುಗಳನ್ನೆಲ್ಲ ನಾನು excited ಆಗಿ ನೋಡುತ್ತಿದ್ದೆ ಮತ್ತು "ನಮ್ಮನೆಗೆ ಹೋಗುವ ಬಸ್ಸು" ಎಂದು ಹೇಳುತ್ತಿದ್ದೆ! ಆಗ ರಾಜೀವ ತಮಾಷೆ ಮಾಡುತ್ತಿದ್ದುದು ಇನ್ನೂ ನೆನಪಿದೆ- "ನೋಡು, ನೋಡು ಆ ಬಸ್ಸಿನ ಮೇಲೆ ನಿನ್ನ ಅಮ್ಮ ತನ್ನ ಕೈ ಅಚ್ಚು ಹೊಡೆದು ಕಳಿಸಿದ್ದಾಳೆ.... ಸರಿಯಾಗಿ ನೋಡು...ಅಯ್ಯೋ ಬಸ್ಸು ಹೋಯಿತು ಬಿಡು...ನಂಗೆ ಕಾಣಿಸಿತು... ಮುಂದಿನ ಬಸ್ಸಿಗೂ ಇರುತ್ತದೆ...ಆಗ ನೋಡಬಹುದು." ನಗುತ್ತಿದ್ದೆ; ಆದರೆ ಕಣ್ಣಲ್ಲಿ ನೀರು ಬರುತ್ತಿದ್ದುದು ನಿಜ. ಈಗಿನ ನನ್ನ ಮನೆ 'ನನ್ನ ಮನೆ' ಎಂದು ಅನಿಸಲು ಎಷ್ಟೋ ದಿನಗಳು ಬೇಕಾದವು. ಎಷ್ಟೋ ಸಲ ರಾಜೀವನ ಬಳಿ "ನಿನ್ನ ಮನೆಯಲ್ಲಿ....." ಎನ್ನುತ್ತಾ ಮಾತಿಗಾರಂಭಿಸುತ್ತಿದ್ದೆ. ಮತ್ತೆ ನಗುವ ಸರದಿ ಅವನದು- "ಈ ಮನೆ ನಿಂದೂ ಕೂಡಾ" ಎನ್ನುತ್ತಿದ್ದ. ಅವನಿಗೂ ಗೊತ್ತು, ನನ್ನ ಒಳಗೆ ಏನು ನಡೆಯುತ್ತಿದೆಯೆಂದು. ಅವನು ಕೆಲವೊಮ್ಮೆ ಹೀಗೆ ಹೇಳಿದ್ದೂ ಇದೆ- "ನೋಡು, ನಿನಗಾದರೆ ಈಗ ಎರಡು ಮನೆ; ನನಗೆ ಒಂದೇ ಮನೆ". ಒಂದು ಕ್ಷಣ ಸಮಾಧಾನವಾದರೂ ಮರುಕ್ಷಣ ಮತ್ತದೇ ಬೇಜಾರು.

ನಂತರ ಕೆಲಸಗಳಲ್ಲಿ busy ಆಗುತ್ತಿತ್ತದ್ದಂತೆ ಈ ಬೇಜಾರು ಸ್ವಲ್ಪ ಸ್ವಲ್ಪ ಕಡಿಮೆಯಾಗುತ್ತಾ ಹೋಯಿತು. ಅಷ್ಟರಲ್ಲಿ ಮನಸ್ಸು ಕೂಡ ಪರಿಸ್ಥಿತಿಯನ್ನು ಒಪ್ಪಿಕೊಳ್ಳತೊಡಗಿತು. ಆದರೆ ಈಗ ಕೂಡ ಕೆಲವೊಮ್ಮೆ ಅಷ್ಟೇ ತೀವ್ರವಾಗಿ 'ನನ್ನ ಮನೆಯ' ನೆನಪು ಕಾಡುತ್ತದೆ. ಒಮ್ಮೆ ಹೋಗಿಯಾದರೂ ಬರೋಣ ಎನಿಸುತ್ತದೆ. ಇಲ್ಲಿರುವ ಕೆಲಸಗಳು ಕಟ್ಟಿಹಾಕುತ್ತವೆ; ಸುಮ್ಮನಾಗುತ್ತೇನೆ; ಮನಸ್ಸಿಗೆ ಬುದ್ಧಿ ಹೇಳುತ್ತೇನೆ.