October 21, 2007

ಅಜ್ಜ ತಿನ್ನುವ ಕಬ್ಬು … (ಉತ್ತರ ಕನ್ನಡದ ಗಾದೆ – 49 ಮತ್ತು 50)

ಅಜ್ಜ ತಿನ್ನುವ ಕಬ್ಬು ರಸದಾಳಿ.

ಅಜ್ಜ, ಮೊಮ್ಮಗ ಇಬ್ಬರೂ ಕಬ್ಬು ತಿನ್ನುತ್ತಿದ್ದಾಗ ಮೊಮ್ಮಗನಿಗೆ ಅನಿಸುತ್ತದೆ- 'ಬಹುಶಃ ಅಜ್ಜ ತಿನ್ನುತ್ತಿರುವುದು ರಸದಾಳಿ ಕಬ್ಬೇ ಇರಬೇಕು. ಏಕೆಂದರೆ ಅವನು ಸ್ವಲ್ಪವೂ ಕಷ್ಟಪಡದೇ ತಿನ್ನುತ್ತಿದ್ದಾನೆ. ನಾನು ತಿನ್ನುತ್ತಿರುವ ಕಬ್ಬು ಮಾತ್ರ ಗಟ್ಟಿಯಾಗಿದೆ'' ಎಂದು. ಅಜ್ಜನ ಕೈಯ್ಯಲ್ಲಿರುವ ಕಬ್ಬನ್ನು ತೆಗೆದುಕೊಂಡು ಸ್ವಲ್ಪ ತಿಂದು ನೋಡಿದಾಗ ಗೊತ್ತಾಗುತ್ತದೆ, ಅದೂ ಕೂಡ ಗಟ್ಟಿಯಾಗಿದೆ ಎಂದು.

ಬೇರೆಯವರು ಮಾಡುತ್ತಿರುವ ಕೆಲಸ ಸುಲಭವೆಂದು ಕಾಣಿಸುತ್ತದೆ. ಅದೇ ಕೆಲಸವನ್ನು ನಾವು ಮಾಡಿದಾಗ ಅದರಲ್ಲಿರುವ ಕಷ್ಟ ಗೊತ್ತಾಗುತ್ತದೆ.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಎಲ್ಲರಿಗೂ ಗೊತ್ತಿರುವ ಗಾದೆಯ ಬದಲಾಗಿ ಬಳಸಲ್ಪಡುವ ಗಾದೆ ಇದು.

2 comments:

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕ,
ಎಷ್ಟು ಚಂದ ಗಾದೆ ಮಾತು ಇದು ಅಲ್ದ? ನೆನಪಿಸಿದ್ದಕ್ಕೆ ಧನ್ಯವಾದ.
ಈ ಗಾದೆಯ ಅರ್ಥವನ್ನು ಹೀಗೂ ಹೇಳುವುದುಂಟು.
ಅಜ್ಜ ಕಬ್ಬು ತಿನ್ನುವಾಗ, ಬಾಯಲ್ಲಿ ಹಲ್ಲು ಇಲ್ಲದ ಕಾರಣ ರಸ ಬಾಯಿಂದ ಹೊರಗೆ ಬಳಿಯುತ್ತದೆ, ಮೊಮ್ಮಗನಿಗೆ ಅಜ್ಜ ತಿನ್ನುವ ಕಬ್ಬಿನಲ್ಲಿ ಬಾಯಿಂದ ಹೊರಗೆ ಬರುವಷ್ಟು ರಸ ಇದೆಯಲ್ಲಾ , ಅದಕ್ಕೆ ಅದು "ರಸದಾಳೆ" ಎನಿಸುತ್ತದೆ ಎಂಬಂತ ಹೇಳಿಕೆಯನ್ನೂ ಚಿಕ್ಕವಳಿದ್ದಾಗ ಕೇಳಿದ ನೆನಪು.
ಗಾದೆಮಾತು ಚೆನ್ನಾಗಿದೆ.

Seema S. Hegde said...

ಶಾಂತಲಾ,
ನೀನು ಹೇಳಿದ ಅರ್ಥದಲ್ಲಿ ವಿಚಾರ ಮಾಡಿದೆ.
ಮೊದಲು ನಿಜ ಎನಿಸಿದರೂ, ಕೊನೆಯಲ್ಲಿ ಅನಿಸಿತು- ಹಲ್ಲಿಲ್ಲದ ಅಜ್ಜ ಕಬ್ಬು ತಿನ್ನಲು ಸಾಧ್ಯವಾ?