September 26, 2008

ಕದ್ದ ರೊಟ್ಟಿ … (ಉತ್ತರ ಕನ್ನಡದ ಗಾದೆ – 196)

ಕದ್ದ ರೊಟ್ಟಿ ಬೇರೆ, ದೇವರ ಪ್ರಸಾದ ಬೇರೆ.
ಕದ್ದ ರೊಟ್ಟಿ ಮಾತ್ರವಲ್ಲದೇ ದೇವರ ಪ್ರಸಾದವನ್ನೂ ಪಡೆದುಕೊಳ್ಳುತ್ತಾನೆ ಎಂದು ಅರ್ಥ. ಕದ್ದು ರೊಟ್ಟಿಯನ್ನು ತಿಂದಿರುವುದಲ್ಲದೆ, ಏನೂ ತಿಳಿಯದವರಂತೆ ನಟಿಸಿ ದೇವರ ಪ್ರಸಾದವನ್ನು ಎಲ್ಲರೆದುರಿಗೇ ತೆಗೆದುಕೊಂಡು ತಿನ್ನುತಾನೆ.

ಅನ್ಯ ಮಾರ್ಗದಲ್ಲಿ ಲಾಭ ಮಾಡಿಕೊಳ್ಳುವುದರ ಜೊತೆಗೇ ಸಂಭಾವಿತನಂತೆ ನಟಿಸುತ್ತಾ ಸಹಜವಾಗಿ ಬರುವ ಲಾಭವನ್ನೂ ತೆಗೆದುಕೊಳ್ಳುತ್ತಾನೆ. ಇಂದಿನ ಅಧಿಕಾರಿಗಳು, ರಾಜಕಾರಣಿಗಳು ಇವರೆಲ್ಲರನ್ನು ಕುರಿತು ಹಿಂದೆಂದೋ ರೂಪಿಸಿಟ್ಟ ಗಾದೆ!

September 24, 2008

ಕದ್ದು ಹೋಳಿಗೆ ಕೊಟ್ಟರೆ … (ಉತ್ತರ ಕನ್ನಡದ ಗಾದೆ – 195)

ಕದ್ದು ಹೋಳಿಗೆ ಕೊಟ್ಟರೆ ಬೆಲ್ಲ ಸಾಲದು ಎಂದಿದ್ದಳು.
ನಮ್ಮ ಕೈಮೀರಿ ಅಥವಾ ಅನ್ಯ ಮಾರ್ಗದಲ್ಲಿ ಹೋಗಿಯಾದರೂ ಇನ್ನೊಬ್ಬರಿಗೆ ಸಹಾಯ ಮಾಡಿದಾಗ ಅವರು ಉಪಕಾರವನ್ನು ಸ್ಮರಿಸುವ ಬದಲು ಉಪಕಾರ ಮಾಡಿದ್ದು ಸಾಲದು ಎಂದು ಹೇಳಿದರೆ ಅಥವಾ ಇನ್ನೂ ಬೇರೆ ರೀತಿಯಲ್ಲಿ ಉಪಕಾರವನ್ನು ನಿರೀಕ್ಷಿಸಿದರೆ ಬಳಸಬಹುದು.

September 23, 2008

ಅಭ್ಯಾಸ ಇಲ್ಲದ ಭಟ್ಟ … (ಉತ್ತರ ಕನ್ನಡದ ಗಾದೆ – 194)

ಅಭ್ಯಾಸ ಇಲ್ಲದ ಭಟ್ಟ ಅಗ್ನಿಕಾರ್ಯ ಮಾಡಲು ಹೋಗಿ ಗಡ್ಡ ಸುಟ್ಟುಕೊಂಡಿದ್ದನಂತೆ.
ನಮಗೆ ಅಭ್ಯಾಸ ಇಲ್ಲದ ಕೆಲಸವನ್ನು ಮಾಡಲು ಹೋದರೆ ಅನಾಹುತವನ್ನು ಮಾಡುತ್ತೇವೆ ಎಂಬ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಉದಾಹರಣೆಗೆ, ಹೆಂಡತಿ ತವರಿಗೆ ಹೋದ ಸಂದರ್ಭದಲ್ಲಿ ಅಡುಗೆ ಮಾಡು ಹೋಗಿ ಗಂಡ ಏನೇನೋ ಅನಾಹುತವನ್ನು ಮಾಡುತ್ತಿರುತ್ತಾನೆ.... ಕೈ ಸುಟ್ಟುಕೊಳ್ಳುವುದು, ಬಾಟಲಿ ಒಡೆಯುವುದು, ಎಣ್ಣೆಯನ್ನು ಚೆಲ್ಲಿ ಹಾಕುವುದು, ಇತ್ಯಾದಿ...

September 19, 2008

ಜುಟ್ಟು ಹಣ್ಣಾಗಿದೆ … (ಉತ್ತರ ಕನ್ನಡದ ಗಾದೆ – 193)

ಜುಟ್ಟು ಹಣ್ಣಾಗಿದೆ ಜಾಗಟೆ ಬಾರಿಸಲು ಬರುವುದಿಲ್ಲ ಎಂದಿದ್ದ.
ಜುಟ್ಟು ಹಣ್ಣಾಗುವುದಕ್ಕೂ ಜಾಗಟೆ ಬಾರಿಸಲು ಬಾರದೇ ಇರುವುದಕ್ಕೂ ಯಾವುದೇ ಸಂಬಂಧವಿಲ್ಲ. ಕೆಲಸದಿಂದ ತಪ್ಪಿಸಿಕೊಳ್ಳಲು ಯಾರಾದರೂ ಅಸಂಬದ್ಧ ಕಾರಣ ಕೊಟ್ಟಾಗ ಈ ಗಾದೆಯನ್ನು ಹೇಳಬಹುದು.

September 18, 2008

ಎಂತೆಂಥವರೋ ಮಣ್ಣು ಮುಕ್ಕುತ್ತಿರುವಾಗ … (ಉತ್ತರ ಕನ್ನಡದ ಗಾದೆ – 192)

ಎಂತೆಂಥವರೋ ಮಣ್ಣು ಮುಕ್ಕುತ್ತಿರುವಾಗ ಓತಿಕ್ಯಾತ ತಾನು ಮಾಡುತ್ತೇನೆ ಎನ್ನುತ್ತಿತ್ತು.
ಯಾವುದೊ ಒಂದು ಕೆಲಸ ಮಾಡಲು ಸಮರ್ಥರಾದವರೇ ವಿಫಲರಾಗಿ ಕೈಚೆಲ್ಲಿ ಕುಳಿತಿರುವಾಗ ಅಶಕ್ತರು, ಅನುಭವ ಇಲ್ಲದವರು ತಾನು ಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಂಡರೆ ಹೇಳಬಹುದು.

September 17, 2008

ಮುಳುಗಿಕೊಂಡು … (ಉತ್ತರ ಕನ್ನಡದ ಗಾದೆ – 191)

ಮುಳುಗಿಕೊಂಡು ಹೇತರೂ ತಲೆಯ ಮೇಲೆಯೇ ತೇಲುತ್ತದೆ.
ಅಯ್ಯೋ ಇದೆಂತಾ ಗಾದೆ ಅಸಹ್ಯ ಅನ್ನುತ್ತೀರಾ? ಅಸಹ್ಯ ನಿಜ, ಆದರೆ ಅದರ ಅರ್ಥವನ್ನೊಮ್ಮೆ ನೋಡಿ ಬಿಡಿ.
ಯಾರಿಗೂ ಗೊತ್ತಾಗಬಾರದೆಂದು ಕೆಟ್ಟ ಕೆಲಸವನ್ನು ಕದ್ದು ಮುಚ್ಚಿ ಮಾಡಿದರೂ ಅದು ಹೇಗಾದರೂ ಆಗಿ ಎಲ್ಲರ ಕಣ್ಣಿಗೆ ಬಿದ್ದೇ ಬೀಳುತ್ತದೆ ಮತ್ತು ತಿರುಗಿ ಅನಾನುಕೂಲವನ್ನೇ ಉಂಟು ಮಾಡುತ್ತದೆ ಎಂದು ಹೇಳಬೇಕಾದಾಗ ಬಳಸಿಕೊಳ್ಳಿ.

September 15, 2008

ಮೂರು ಲೋಕವೂ … (ಉತ್ತರ ಕನ್ನಡದ ಗಾದೆ – 189 ಮತ್ತು 190)

ಮೂರು ಲೋಕವೂ ಕಾಣುತ್ತಿದೆ ಏನು ಹೇಳುತ್ತಿದ್ದಾಗ, ನಮ್ಮ ಮನೆಯ ಎಮ್ಮೆ ಕರು ಕಾಣುತ್ತಿದೆಯೇ ಎಂದು ಕೇಳಿದ್ದ.
ಯಾರೋ ಒಬ್ಬ ನನಗೆ ಮೂರು ಲೋಕವೂ ಕಾಣುತ್ತಿದೆ ಅಂದರೆ ಇನ್ನೊಬ್ಬ ಕಳೆದು ಹೋದ ಎಮ್ಮೆ ಕರು ಕಾಣುತ್ತಿದೆಯೇ ಎಂದು ಕೇಳಿದ್ದನಂತೆ. ಎಲ್ಲ ಸುಖವೂ ಇದೆ ಎಂದು ಖುಷಿಪಡುವ ಸಮಯದಲ್ಲಿ ಅಥವಾ ನೋಡಿ ಸಂತೋಷ ಪಡಲು ಎಷ್ಟೆಲ್ಲಾ ವಿಷಯಗಳು ಇದ್ದಾಗ ಕ್ಷುಲ್ಲಕ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುವವರನ್ನು ನೋಡಿ ಮಾಡಿದ ಮಾತು ಇದು.
ಇದನ್ನು ನಾನು ಕೇಳಿದ್ದು ತ್ಯಾಗಲಿಯ ನಾಗಪತಿ ಭಾವನಿಂದ. ಮಾಲತಿ ಅಕ್ಕನನ್ನು ಬೆಂಗಳೂರಿನಿಂದ ಮೈಸೂರಿಗೆ ವೋಲ್ವೋ ಬಸ್ಸಿನಲ್ಲಿ ಕರೆದುಕೊಂಡು ಹೊರಟಾಗ- "ನೋಡೇ ಮಾಲತಿ, AC ಬಸ್ಸು, ಸೀಟು-ಗೀಟು ಎಲ್ಲ ಎಷ್ಟು ಚೆನ್ನಾಗಿದೆ" ಎಂದು ಭಾವ ಹೇಳುತ್ತಿದ್ದರೆ "ಕಿಟಕಿ ತೆಗೆಯಲು ಬರುವುದಿಲ್ಲ, ವಾಂತಿ ಬಂದರೆ ಮಾಡುವ ಬಗೆ ಹೇಗೆ?" ಎಂದು ಕೇಳಿದ್ದಳಂತೆ. ಭಾವ ಊರಿಗೆ ಬಂದ ಮೇಲೆ ಆ ಪ್ರಸಂಗವನ್ನು ವಿವರಿಸಿದ ಬಗೆ ಇದು; ಈ ಗಾದೆಯ ಜೊತೆಯಲ್ಲಿ.
ಅಜ್ಜಿಗೆ ಅರಿವೆ ಚಿಂತೆ ಆದರೆ ಮೊಮ್ಮಗಳಿಗೆ ಮದುವೆ ಚಿಂತೆ ಅನ್ನುವ ಗಾದೆ ಕೂಡ ಇದೆ ಅನ್ನುತ್ತೀರಾ? ಅದೂ ಇದೆ. ಆದರೆ ಸ್ವಲ್ಪ ಬೇರೆ ಸಂದರ್ಭಕ್ಕೆ; ಇಬ್ಬರೂ ಒಂದಲ್ಲಾ ಒಂದು ಚಿಂತೆಯಲ್ಲಿ ಇದ್ದಾಗ ಬಳಸುವಂಥದು.