ಹದಿನೈದು ದಿನಗಳ ಹಿಂದೆ ಊರಿಗೆ ಹೊರಟಿದ್ದೆವು. ಊರಿನ ಮಳೆಗಾಲವನ್ನು ಅನುಭವಿಸದೆ ಎಷ್ಟೋ ವರ್ಷಗಳಾಗಿತ್ತು. ನಾನು ಊರಿನ ಮಳೆಯನ್ನು ಕಣ್ಣಲ್ಲಿ ತುಂಬಿಕೊಳ್ಳುವ ಮೊದಲೇ ಮನಸ್ಸಿನಲ್ಲಿ ತುಂಬಿಕೊಂಡಿದ್ದೆ. ಬೆಳಿಗ್ಗೆ ಆರು ಘಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಡುವ ಜನಶತಾಬ್ದಿ ರೈಲಿನಲ್ಲಿ ಕಾಯ್ದಿರಿಸಿದ್ದ ಸೀಟಿನಲ್ಲಿ ಎಂದಿನಂತೆಯೇ ಕಿಟಕಿಯ ಪಕ್ಕ ನಾನು, ನನ್ನ ಪಕ್ಕ ರಾಜೀವ ಕುಳಿತೆವು. ಹಾವೇರಿಯಲ್ಲಿ ಇಳಿದು ಶಿರಸಿಗೆ ಬಸ್ಸಿನಲ್ಲಿ ಹೋದರೆ ಮಧ್ಯಾನ್ಹದ ಊಟಕ್ಕೆ ಮನೆ ತಲುಪಬಹುದು. ರಾಜೀವನ ಪಕ್ಕದಲ್ಲಿ ಇನ್ಯಾರೋ ಕುಳಿತರು. ಎದುರು-ಬದುರಿಗೆ ಇರುವಂಥ ಸೀಟುಗಳಾಗಿದ್ದರಿಂದ ನಮ್ಮ ಎದುರಿಗೆ ಅಜ್ಜಿ-ಮೊಮ್ಮಗ, ಇನ್ನೊಬ್ಬ ವ್ಯಕ್ತಿ ನಮಗಿಂತ ಮೊದಲೇ ಆಸೀನರಾಗಿದ್ದರು. ನಮಗೆ diagonally opposite ಆಗಿ ಯಾರೋ ಒಬ್ಬರು ಮಧ್ಯ ವಯಸ್ಸಿನ uncle ಕುಳಿತಿದ್ದರು. ರೈಲು ಹೊರಟಿತು. ರಾಜೀವನಿಗೆ ನನಗಿಂತಲೂ ಓದುವ ಹುಚ್ಚು ತುಂಬಾ ಜಾಸ್ತಿ. ಮೂರ್ನಾಲ್ಕು ಪುಸ್ತಕ ತಂದಿದ್ದ.... ಒಂದನ್ನು ಚೀಲದಿಂದ ಎಳೆದು ಶುರು ಹಚ್ಚಿಕೊಂಡ.
ನಾನು ಕಿಟಕಿಯಿಂದ ಹೊರಗಡೆ ನೋಡಿ ರೈಲ್ವೆ ಟ್ರಾಕ್ ನ ಪಕ್ಕದ ಪ್ಲಾಸ್ಟಿಕ್ ನೋಡಿ ದುಃಖಿಸತೊಡಗಿದ್ದೆ . ನನಗಾದ ಕಿರಿಕಿರಿಯನ್ನು ಅವನಿಗೂ ಸ್ವಲ್ಪ ಅಂಟಿಸಿ ಕೃತಾರ್ಥಳಾಗೋಣವೆಂದು "ರಾಜೀವ..." ಎಂದೆ. "ತಡಿಯೇ" ಎಂಬ ಉತ್ತರ ಬಂತು. ಸುಮ್ಮನಾದೆ. ಪುಸ್ತಕದಲ್ಲಿ ಮುಳುಗಿ ಹೋಗಿದ್ದ. ನನಗೆ ಸ್ವಲ್ಪ ನಿದ್ದೆಯ ಜೋಂಪು ಹತ್ತಿ ಎಚ್ಚರವಾಗುವಷ್ಟರಲ್ಲಿ ಒಂದು ಘಂಟೆ ಕಳೆದಿತ್ತು. ರಾಜೀವ ಓದುತ್ತಿದ್ದ ಪುಸ್ತಕ ಮುಗಿಸಿ ಆಗಿತ್ತು. ಏನೋ ವಿಚಾರ ಮಾಡುತ್ತಿದ್ದವನಂತೆ ಕಂಡ. "ಏನು?!!" ಎಂದೆ. "ಈ ಪುಸ್ತಕ ಓದು" ಎಂದು ಕೈಲಿರುವ ಪುಸ್ತಕ ಕೊಟ್ಟ. ನೋಡಿದೆ. ಅಗ್ನಿ ಶ್ರೀಧರ್ ಬರೆದ 'ಎದೆಗಾರಿಕೆ' ಆಗಿತ್ತು. “Underworld ಬಗ್ಗೆಯಾ? ನಂಗೆ ಇಷ್ಟ ಇಲ್ಲ, ಓದಲ್ಲ. ಬೇರೆ ಪುಸ್ತಕ ಕೊಡು" ಎಂದೆ. "ಒಮ್ಮೆ ಓದಿ ನೋಡು, ತುಂಬಾ ಚೆನ್ನಾಗಿದೆ" ಎಂದ. "ಒಬ್ಬರನ್ನೊಬ್ಬರು ಕೊಚ್ಚಿ ಸಾಯಿಸೋದು- ಇನ್ನೆಷ್ಟು ಚೆನ್ನಾಗಿರಲು ಸಾಧ್ಯ?" ಎಂದು ಗೊಣಗಿದೆ. “Different ಆಗಿದೆ, ನೋಡು ಒಮ್ಮೆ" ಎಂದ. ತಾನು ರಜನೀಕಾಂತ್ ಬಗ್ಗೆ ಇನ್ಯಾವುದೋ ಪುಸ್ತಕದಲ್ಲಿ ಮುಳುಗಿದ. ಅವನ ಒತ್ತಾಯಕ್ಕೆ ತೆಗೆದುಕೊಂಡು ಶುರು ಮಾಡಿದೆ. 'ಎದೆಗಾರಿಕೆ' ಹೆಚ್ಚು ಕಡಿಮೆ ಅರವತ್ತು ಪುಟಗಳ ಸಣ್ಣ ಪುಸ್ತಕ. ಒಂದು-ಒಂದೂವರೆ ತಾಸಿನಲ್ಲಿ ಓದಿ ಮುಗಿಸಬಹುದು. ಓದುತ್ತಾ ಹೋದೆ... ಓದುತ್ತಾ ಹೋದೆ...ಓದುತ್ತಾ ಹೋದೆ... ರಾಜೀವ "ಸೀಮಾ.." ಎಂದ... ನಾನು "ಸ್ವಲ್ಪ ತಡಿಯೋ" ಎಂದೆ. ನಂಗೆ ಗೊತ್ತಿತ್ತು ಎನ್ನುವವರ ತರ ನಕ್ಕ.
ರಾಜೀವ ಹೇಳಿದಂತೆ ತುಂಬಾ different ಆಗಿತ್ತು ಕಥೆ. ಹೇಳುವಂಥ ದೊಡ್ಡ ಕಥೆಯೇನೂ ಇಲ್ಲ. ಆದರೆ ನಿರೂಪಿಸಿರುವ ರೀತಿ ಮಾತ್ರ ಅಮೋಘ! ಸಾರಾಂಶ ಇಷ್ಟೇ- ಮುಂಬೈನ underworld ನ ರೌಡಿಯಾಗಿದ್ದವನ ಪೈಕಿ ಒಬ್ಬನನ್ನು (ಕಥಾನಾಯಕ) ಮುಗಿಸಲು ಬೆಂಗಳೂರಿನ ಏಳೆಂಟು ಜನ ರೌಡಿಗಳು ತುಮಕೂರಿನ ಹತ್ತಿರ ಒಳಗೆಲ್ಲೋ farmhouse ಗೆ ಕರೆದುಕೊಂಡು ಹೋಗುತ್ತಾರೆ. ಅವನಿಗೆ ತನ್ನನ್ನು ಸಾಯಿಸಲು ಹೊರಟಿದ್ದಾರೆ ಎಂಬುದರ ಅರಿವಾಗಿರುತ್ತದೆ. ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು ಎಂಬ ಅವರ ಊಹೆ ಸುಳ್ಳಾಗುತ್ತದೆ. ದಾರಿಯಲ್ಲಿ ಒಂದೆರಡು ಸಣ್ಣ-ಪುಟ್ಟ ಅವಕಾಶಗಳು ಸಿಕ್ಕಿದರೂ ಅವನು ಅವುಗಳನ್ನು ಬಳಸಿಕೊಳ್ಳುವುದಿಲ್ಲ. ಅವನು ವರ್ತನೆ ಎಷ್ಟು ಸಹಜವಾಗಿರುತ್ತದೆಯೆಂದರೆ ಅವನಿಗೆ ತಾನು ಸಾಯಲಿರುವುದು ಗೊತ್ತೇ ಆಗಿಲ್ಲವೇನೋ ಎಂಬ ಗುಮಾನಿ ಆ ರೌಡಿಗಳಿಗೆ ಬರತೊಡಗುತ್ತದೆ.
ನಡುವೆ ಬೆಕ್ಕುಗಳ ಒಂದು ಕಥೆ ಬರುತ್ತದೆ- ಸಾಯಿಸಲು ತೆಗೆದುಕೊಂಡು ಹೋಗುತ್ತಿರುವ ಎರಡು ಬೆಕ್ಕುಗಳ ಪೈಕಿ ಒಂದು ಸ್ಥಿತಪ್ರಜ್ನನಾಗಿ ಕುಳಿತು ಸಾವಿಗೆ ಮಾನಸಿಕ ತಯಾರಿ ನಡೆಸುತ್ತಿದ್ದಂತೆ ಕಂಡರೆ ಇನ್ನೊಂದು ಬೋನಿನಿಂದ ಜಿಗಿದು ಓಡಿ ಹೋಗಿ ತಪ್ಪಿಸಿಕೊಳ್ಳಲು ನೋಡಿ ಹಿಂದಿನಿಂದ ಬರುತ್ತಿರುವ ಕಾರಿನ ಚಕ್ರದಡಿ ಸಿಕ್ಕಿ ಸಾಯುತ್ತದೆ. ಇವೆರಡರಲ್ಲಿ ಯಾವ ಬೆಕ್ಕು ನಿಜವಾಗಿ ಹೀರೋ? ಸಾವನ್ನು ಎದುರಿಸಲು ಸಿದ್ಧವಾಗಿರುವ ಬೆಕ್ಕೋ ಅಥವಾ ಧೈರ್ಯ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಬೆಕ್ಕೋ?!
ಆ ರೌಡಿಗಳ ಪೈಕಿ ಒಬ್ಬರಲ್ಲಿ ನಾಯಕ ಮನಸ್ಸನ್ನು ತೆರೆದುಕೊಳ್ಳುತ್ತಾನೆ. ಆ ರೌಡಿಗೆ ತಮ್ಮನ್ನು ನಾಯಕ emotional blackmail ಮಾಡುತ್ತಿದ್ದಾನಾ ಎಂದು ಗುಮಾನಿ ಶುರುವಾಗುತ್ತದೆ. ನಾಯಕ ಒಮ್ಮೆ "ನನ್ನನ್ನು ಹೇಗೆ ಮತ್ತು ಯಾವಾಗ ಸಾಯಿಸಬೇಕೆಂದು ಪ್ಲಾನ್ ಮಾಡಿದ್ದೀರಿ?" ಎಂದೂ ಕೂಡ ಕೇಳುತ್ತಾನೆ. ತಾನು ಸಾಯಲಿರುವುದು ಅವನಿಗೆ ಗೊತ್ತಿದ್ದರೂ ಅವನ ಸಹಜ ವರ್ತನೆಯನ್ನು ಕಂಡು ರೌಡಿಗಳು ಹೌಹಾರುತ್ತಾರೆ! ಮುಂಬೈ ನಲ್ಲಿ ಅವನಿಗಾದ ಅನುಭವಗಳ ಪೈಕಿ ಎರಡು ಅನುಭವಗಳು ಅತ್ಯಂತ ನೋವುಂಟುಮಾಡಿದವು ಎಂದೆನ್ನುತ್ತಾ ಆ ಅನುಭವಗಳನ್ನು ಬಿಡಿಸಿಡುತ್ತಾನೆ. ಇಸ್ಪೀಟು ಆಡುವಾಗ ಇತರರು ಬೇಕೆಂತಲೇ ಅವನನ್ನು ಗೆಲ್ಲಿಸುತ್ತಾರೆ. ಅವನಿಗೂ ಗೊತ್ತು, ಹಾಗೆಂದು ಕೇಳಿಯೇ ಬಿಡುತ್ತಾನೆ.
ರೌಡಿಗಳ ಗ್ಯಾಂಗ್ ನ ಮುಖ್ಯಸ್ಥನೂ ಈತನನ್ನು ಪ್ರೀತಿಸತೊಡಗುತ್ತಾನೆ. ಗ್ಯಾಂಗ್ ನ ಇತರರಂತೂ ಅವನು ಹೇಗಾದರೂ ತಪ್ಪಿಸಿಕೊಂಡು ಓಡಿ ಹೋಗಲಿ ಎಂದು ಬಯಸತೊಡಗುತ್ತಾರೆ. ಆದರೆ ಕೊಲ್ಲದೆ ವಿಧಿಯಿಲ್ಲ- ಮುಂಬೈ ನಿಂದ ಆರ್ಡರ್ ಆಗಿದೆ. ಗ್ಯಾಂಗ್ ನ ಮುಖ್ಯಸ್ಥ “ಅವನನ್ನು ಆದಷ್ಟು ಮಟ್ಟಿಗೆ ನೋವಾಗದಂತೆ ಸಾಯಿಸಿ. ಸಾಯಿಸುವಾಗ ಹೆಚ್ಚು ಸಮಯ ಹಿಡಿಯದಂತೆ ನೋಡಿಕೊಳ್ಳಿ" ಎಂದು ಆಜ್ಞೆ ನೀಡುತ್ತಾನೆ. ಅವನಿಂದ ಇಷ್ಟೇ ಸಾಧ್ಯ. ಸಾಯಿಸುವ ಹಿಂದಿನ ದಿನ ರಾತ್ರಿ ಜಾಗವನ್ನು ನೋಡಿಕೊಂಡು ಬರಲು ಗ್ಯಾಂಗ್ ನವರು ಹೋಗುತ್ತಾರೆ. ನಾಯಕನೂ ಜೊತೆಯಲ್ಲಿ ಹೋಗುತ್ತಾನೆ. ಗ್ಯಾಂಗ್ ನಲ್ಲಿ ಯಾರಿಗೆ ಇವನು ಹತ್ತಿರವಾಗಿದ್ದಾನೋ ಅವನು ಜಾರಿ ಬೀಳುತ್ತಾನೆ; ಅವನ ಪ್ಯಾಂಟ್ ಪೂರ್ತಿ ಕೆಸರಾಗುತ್ತದೆ. ಮನೆಗೆ ಬಂದ ನಂತರ ನಾಯಕನು ಅವನಿಗೆ ತನ್ನದೇ ಪ್ಯಾಂಟನ್ನು ಕೊಡುತ್ತಾನೆ, ಹೇಳಿಮಾಡಿಸಿದಂತೆ ಹೊಂದಿಕೆಯಾಗುತ್ತದೆ. ನಾಳೆ ಸಾಯಲಿರುವ ವ್ಯಕ್ತಿಯ ಪ್ಯಾಂಟನ್ನು ಹಾಕಿಕೊಳ್ಳಲು ಭಯವಾದರೂ ಒತ್ತಾಯಕ್ಕೆ ಮಣಿದು ಹಾಕಿಕೊಳ್ಳುತ್ತಾನೆ. ನಾಯಕನ ಪ್ಯಾಂಟ್ ನಲ್ಲಿರುವ ಈತ ನಾಯಕನ ಮನಸ್ಥಿತಿಯನ್ನು ತಾನೂ ಅನುಭವಿಸತೊಡಗುತ್ತಾನೆ.
ನಾಯಕನಿಗೆ ಗೊತ್ತು, ಇವತ್ತು ಓಡಿ ಹೋದರೂ ನಾಳೆ ಸಾವು ತಪ್ಪಿದ್ದಲ್ಲ ಎಂದು. ಸಾವನ್ನು ಎದುರುಗೊಳ್ಳುತ್ತಾನೆ; ಎದೆಗಾರಿಕೆ ತೋರಿಸುತ್ತಾನೆ. ನಾಯಕನ ಹೆಸರು ಎಲ್ಲಿಯೂ ಇಲ್ಲ. ಇತರ ಯಾರ ಹೆಸರೂ ಇಲ್ಲ. ಕೇವಲ ಕಥಾನಾಯಕಿಯ ಹೆಸರು ಮಾತ್ರ ಸಿಗುತ್ತದೆ; ರಶ್ಮಿ ಎಂದು. ಸಾವಿನ ಬಗ್ಗೆ ಅವನು ಹೇಳುವ ಕೆಲವು ಮಾತುಗಳಂತೂ ಮನ ಮುಟ್ಟುತ್ತವೆ. ಮನದಲ್ಲಿಯೇ ಉಳಿಯುತ್ತವೆ. ಹಿಂದಿನ ದಿನ ರಾತ್ರಿ ರಶ್ಮಿ ತನ್ನ ಕನಸಿನಲ್ಲಿ ಬಂದಿದ್ದಳು ಎಂದು ಹೇಳಿಕೊಳ್ಳುತ್ತಾನೆ.
ಮರುದಿನ ರಾತ್ರಿ ಅವನನ್ನು ಸಾಯಿಸುವ ಪ್ಲಾನ್…. ಅವನು ಓಡಿ ಹೋಗಬಾರದಾ ಎಂದು ಎಲ್ಲರೂ ಹಾತೊರೆಯುತ್ತಾರೆ, ಓದುಗನೂ ಹಾತೊರೆಯುತ್ತಾನೆ.... ಆದರೆ ಹಾಗಾಗುವುದೇ ಇಲ್ಲ. ಇಷ್ಟವಿಲ್ಲದಿದ್ದರೂ ಕುತ್ತಿಗೆಗೆ ಹಗ್ಗ ಬಿಗಿಯಲೇ ಬೇಕು, ಎಲ್ಲವೂ ಸರಾಗವಾಗಿ ನಡೆದುಹೋಗುತ್ತದೆ, ಯಾವುದೇ ಪ್ರತಿರೋಧವನ್ನೊಡ್ಡದೆಯೇ ಸಾವನ್ನಪ್ಪುತ್ತಾನೆ; ಕೆಲವೇ ಕೆಲವು ಸೆಕೆಂಡುಗಳಲ್ಲಿ ಪ್ರಾಣ ತ್ಯಜಿಸುತ್ತಾನೆ. ಇವರಿಗೆಲ್ಲ ಅವನ ಸಾವಿಗೆ ತಾವು ಕೇವಲ ನೆಪ ಮಾತ್ರವಾಗಿದ್ದೆವಾ ಎಂದೆನಿಸಿಬಿಡುತ್ತದೆ. ಅವನು ಯಾವಾಗಲೋ ಸಮಾಧಿ ಸ್ಥಿತಿ ತಲುಪಿಬಿಟ್ಟಿದ್ದ! "ದೇಹದಿಂದ ಬಟ್ಟೆಯನ್ನು ಕಳಚಿದ ಹಾಗೆ" ಎಂದು ಶ್ರೀಧರ್ ಬರೆಯುತ್ತಾರೆ. ಅವನಿಷ್ಟದಂತೆಯೇ ನಾಯಕಿಗೆ ‘ಅವನು ಅಪಘಾತದಲ್ಲಿ ತೀರಿಹೋದ’ ಎಂದು ತಿಳಿಸಲು ಫೋನ್ ಮಾಡಲಾಗುತ್ತದೆ. ಮುಂದಿನ ಎಂಟು-ಹತ್ತು ಸಾಲುಗಳಲ್ಲಿ ಪುಸ್ತಕ ಮುಗಿದೇ ಹೋಗುತ್ತದೆ. ಅವುಗಳೇನೆಂದು ಇಲ್ಲಿ ಬರೆಯುವುದಿಲ್ಲ. ಓದಿ ಅನುಭವಿಸಿ.
ನಾನು ಒಂದೇ ಉಸಿರಿಗೆ ಪುಸ್ತಕ ಮುಗಿಸಿದೆ. ತಡೆಯಲಾಗಲಿಲ್ಲ; ಪಟಪಟನೆ ಕೆಲ ಹನಿ ಕಣ್ಣೀರು ಉದುರಿದವು. ಒರೆಸಿಕೊಳ್ಳುವಷ್ಟರಲ್ಲಿ diagonally opposite ಕೂತಿದ್ದ uncle ನೋಡಿಯೇ ಬಿಟ್ಟರು! ರಾಜೀವನ ಪಕ್ಕದಲ್ಲಿದ್ದ ವ್ಯಕ್ತಿ ಎದ್ದು ಹೋಗಿದ್ದ. ಕೆಲ ನಿಮಿಷಗಳ ನಂತರ ಆ uncle ಬಂದು ರಾಜೀವನ ಪಕ್ಕದಲ್ಲಿ ಕುಳಿತರು; ಕುತೂಹಲವಿರಬೇಕು, ಏನು ಓದುತ್ತಿದ್ದಾರೆ ಎಂದು. ಪುಸ್ತಕ ಕೇಳಿ ಪಡೆದುಕೊಂಡರು. ರಾಜೀವ ಎರಡೂ ಪುಸ್ತಕ ಕೊಟ್ಟ. ಪುಸ್ತಕಗಳ ಮುಖಪುಟವನ್ನೊಮ್ಮೆ, ಹಿಂಭಾಗವನ್ನೊಮ್ಮೆ ಎರೆಡೆರೆಡು ಬಾರಿ ನೋಡಿದರು, ರಜನೀಕಾಂತ್ ಬಗೆಗಿನ ಪುಸ್ತಕದ ಒಂದು ಪುಟವನ್ನು ಓದಿ ಪುಸ್ತಕಗಳನ್ನು ಹಿಂದಿರುಗಿಸಿ ತಮ್ಮ ಸೀಟಿಗೆ ಮರಳಿದರು! ನಾನು ಕಿಟಕಿಯ ಕಡೆ ಮುಖ ಮಾಡಿಕೊಂಡು ಅಳುವನ್ನು ತಡೆಹಿಡಿಯುವ ಸಾಹಸ ನಡೆಸಿದ್ದೆ!
ಶ್ರೀಧರ್ ಹೊರಹಾಕಿರುವ ಎಲ್ಲಾ ಭಾವನೆಗಳನ್ನು ಇಲ್ಲಿ ಬರೆಯಲು ಏಕೋ ಸಾಧ್ಯವಾಗುತ್ತಿಲ್ಲ. ಕಥೆಯನ್ನು ಓದುವಾಗ ಮತ್ತು ಆ ನಂತರ ಅನುಭವಿಸಿದ ಕೆಲವೇ ಕೆಲವು ಭಾವನೆಗಳನ್ನು ಇಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಎಷ್ಟೋ ಹೊತ್ತು ಮಾತಾಡಲಿಲ್ಲ; ಯೋಚಿಸುತ್ತಿದ್ದೆ. ಕಣ್ಣಿನಲ್ಲಿ, ಮನಸ್ಸಿನಲ್ಲಿ ಮಳೆ! ಊರು ತಲುಪಿದರೂ ಕಥೆಯಿಂದ ಹೊರಬಂದಿರಲಿಲ್ಲ. ಈಗಲೂ ಕೂಡ ಮನಸ್ಸಿನ ಮೂಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಕೊರೆಯುತ್ತಲೇ ಇದೆ. Hats off to ಅಗ್ನಿ ಶ್ರೀಧರ್!
18 comments:
ಇಂಟರೆಸ್ಟಿಂಗ್ :) ನಿಮ್ಮ ಲೇಖನ ಓದಿ ಆ ಪುಸ್ತಕವನ್ನು ಓದಬೇಕೆನ್ನಿಸುತ್ತಿದೆ.
hey, very nice seema ji..
tumba chennag baredidira..!!
ಹ್ಮ್ .. ಸುಮಾರು ದಿನ ಆದ್ಮೇಲೆ ಬರದ್ದೆ :-)
ನೀ ಪೂರ್ತಿ ಕಥೆ ಹೇಳಕ್ಕಾಗಿತ್ತಿಲ್ಲೆ.. ಅವ ಸಾಯ್ತ ಹೇಳಿ ಎಂತಕ್ಕೆ ಹೇಳ್ದೆ .. ಗುರ್ರ್ :-(
ಮೊದಲನೆಯದಾಗಿ ಈ ಪುಸ್ತಕದ ಪರಿಚಯ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ನಿಮ್ಮ ಬರಹದ (ಕಣ್ಣೀರಿನ:)) ಮೇಲೆ ನಂಬಿಕೆ ಇಟ್ಟು ಈ ಪುಸ್ತಕ ಕೊಂಡು ಓದಿದೆ. ನಿಜವಾಗಿಯೂ ಚೆನ್ನಾಗನಿಸಿತು. ಬಹಳ ಸಣ್ಣ ಪುಸ್ತಕ ಮತ್ತು ಸಣ್ಣ plot ಅನಿಸಿದರೂ ಕೂಡ ವಿಭಿನ್ನವಾಗಿ ಕುತೂಹಲಕಾರಿಯಾಗಿದೆ. Narration ಚೆನ್ನಾಗಿದೆ. ಮಧ್ಯ ಮಧ್ಯ ಅವರಿಬ್ಬರ ನಡುವೆ ನಡೆಯುವ ಮಾತುಗಳು , ಆ ಮಾತುಗಳಲ್ಲಿನ ವಿಷಯಗಳು ಮನಸ್ಸಿಗೆ ತಾಗುವಂತಿವೆ. ಒಂದು ಸಾಮಾನ್ಯ ಭೂಗತ ಜಗತ್ತಿನ ಕೊಲೆಯ ಕತೆಯನ್ನಿಟ್ಟುಕೊಂಡು ಅದನ್ನು ಹೇಳಿರುವ ರೀತಿ ಈ ಪುಸ್ತಕದ ಹೈಲೈಟ್ ಅನ್ನಿಸಿತು. ಚೆನ್ನಾಗಿ ಮಾಡಿದರೆ ಒಂದು ಒಳ್ಳೆಯ ಸಿನೆಮಾ ಆಗಲು ಎಲ್ಲಾ ಅರ್ಹತೆಗಳುಳ್ಳ ಕತೆ. (ಈಗಾಗಲೇ ಆಗುತ್ತಿದೆಯಂತೆ!)
ತೀರಾ ಕಣ್ಣೀರೇನೂ ಬರಲಿಲ್ಲ ನಂಗೆ :)
@ Suma, odi chennagide.
@ Raghav, Thanks.
@ Harish, Ava saayta helade bareyadu sadhyave ittille! Neenu kathe poorti odi nodu, koneyalli berene anubhava aagtu!
@ Vikasa, Nanna kanneerina mele nambike ittiddakke thanks! Neenu heliddu nija.
hi Seema.. Seema Karatagi here.. my name is also seema.. before redng ur article i red YDEGARIKE book.. rly its a vry good as well as intrestng book..nw its my 1 of de best book. there is loot of things to learn from det book.. asper me its a good guide to one who is going to write a novel book also movie script..
@ Seema,
Thank you. You are very much right :-)
aa pustike naanu odiddene...sridhar ge abhinandane tilisabekendu alochisidde. adyavudo ottadagalalli siluki hogidde. haagagi enubareyalaagalilla .nanna manasina bhaavanegalannu niivu barediddiri...agni regular aagi oduttene..sridhar baraha namma edege manasige naatuvante iruttade....nimma baraha manamuttuvantide...
@Ravivarma,
Bolg ಗೆ ಭೇಟಿಯಿತ್ತಿದ್ದಕ್ಕೆ ಮತ್ತು comment ಬರೆದಿದ್ದಕ್ಕೆ ತುಂಬಾ ಧನ್ಯವಾದಗಳು. ನೀವು ಹೇಳಿದ್ದು ನಿಜ. ಅಗ್ನಿ ಶ್ರೀಧರ್ ರ ಬರವಣಿಗೆ ಅದ್ಭುತ. ನನಗೂ ತುಂಭಾ ಇಷ್ಟ.
ನನ್ನನ್ನು ಬಲ್ಲವರು, ನನ್ನ ಸುತ್ಲಿನವರು, ಬೆಚ್ಚುವಷ್ಟು ದೂರ,ಬಹುದೂರ ಸಾಗಿದ್ದೆ.
ಕಲ್ಲು-ಮುಳ್ಳುಗಳ, ಹಾವು- ಚಿರತೆ-ಚೇಳುಗಳಿಂದ ಕೂಡಿದ ದುರ್ಗಮ ದಾರಿ.
ಹಿಂದಿರುಗಲು ದಾರಿ ಕಾಣದಾಗಿತ್ತು.ಅತ್ಯಂತ ಪ್ರಯಾಸದಿಂದ ದಾರಿಯನ್ನು ಕಂಡುಹಿಡಿದುಕೊಳ್ಳಬೇಕಿತ್ತು.ಇನ್ನೇನು ದಾರಿ ಕಾಣಿಸಿಬಿಟ್ಟಿತು ಎನ್ನುವಷ್ಟರಲ್ಲಿ ನಾನು ಇನಿನೆಲ್ಲಿಗೋ ಹೋಗಿ ತಲುಪಿರುತ್ತಿದ್ದೆ.
ನನ್ನನ್ನು ಸಂದಿಸುತ್ತಿದ್ದವರು ಮನುಷ್ಯರಮತೆ ನಟಿಸುತ್ತ,
ದಾರಿ ತೋರಿಸುವುದಾಗಿ ನಂಬಿಸಿ,
ಯಾವುದೋ ಪ್ರಪಾತಕ್ಕೆ ತಳ್ಳಿಬಿಡುತ್ತಿದ್ದ ವಿಚಿತ್ರ ಜೀವಿಗಳಾಗಿರುತ್ತಿದ್ದರು.
ಆ ಜೀವಿಗಳಿಗೂ ನನಗೂ ಸಾಕಷ್ಟು ಸೆಣಸಾಟವಾಗಿ, ಹಟಹಿಡಿದು, ಕೊನೆಗೂ ದಾರಿಯನ್ನು ಕಂಡುಹಿಡಿದುಕೊಂಡೆ; ನಿಮ್ಮನ್ನು ತಲುಪಿದೆ, ನಿಮ್ಮ ಮುಂದೆ ನಿಂತೆ......
ನೀವು ನನ್ನನ್ನು ನೋಡಿದಿರಿ.
ನಿಮ್ಮ ಸಾಂತ್ವನದ ನೋಟ ನನ್ನ ಹುಡುಕಾಟದ ದಣಿವನ್ನು ಆರಿಸಿಬಿಟ್ಟಿತು.....
>
ಅಗ್ನಿ ಶ್ರೀಧರ್
(ದಾದಾಗಿರಿಯ ದಿನಗಳು ೩ ರ ಕೃತಿಯಿಂದ)
ಎಲ್ಲಕ್ಕಿಂತಲೂ ಹೆಚ್ಚು ನಮ್ಮನ್ನು ಕಾಡುತ್ತಿದ್ದುದೆಂದರೆ, ಕೆಂಪಯ್ಯನವರು ಮಾಡುತ್ತಿದ್ದ 'ವರ್ಕ್'. ಸಾಮಾನ್ಯವಾಗಿ ಸ್ಟೇಷನ್ನಿಗೆ ಎಳೆದುಕೊಂಡು ಹೋಗುವ ಆರೋಪಿಗಳಿಗೆ ಹಿಂಸೆ ಕೊಡುವವರು ಕ್ರೈಂ ಪೇದೆಗಳು. ಕುಖ್ಯಾತರಾದ ಆರೋಪಿಗಳಿಗೆ ಸಬ್ಇನ್ಸ್ಪೆಕ್ಟರ್ ಮತ್ತು ಇನ್ಸ್ಪೆಕ್ಟರ್ಗಳು 'ವರ್ಕ್' ಮಾಡುತ್ತಾರೆ, ಎಲ್ಲೊ ಒಮ್ಮೊಮ್ಮೆ ಎಸಿಪಿ ದರ್ಜೆಯ ಅಧಿಕಾರಿ ಇರುತ್ತಾರೆ. ಡಿಸಿಪಿಯವರು ಎದುರಿಗೆ ನಿಂತು ವರ್ಕ್ ಮಾಡಿಸಿದ್ದನ್ನು ನಾವು ಕೇಳಿರಲೇ ಇಲ್ಲ.
ಕೆಂಪಯ್ಯನವರು ಎದುರಿಗೆ ನಿಲ್ಲುವುದಿರಲಿ, ತಾವೆ ರಾಡ್ಗಳನ್ನು ತೆಗೆದುಕೊಂಡು ಹೊಡೆಯು ತ್ತಿದ್ದರು! ಅವರ ಕೈಲಿ ಹೊಡೆತ ತಿಂದವರು ಸುಧಾರಿಸಿಕೊಳ್ಳಲು ಹಲವು ತಿಂಗಳುಗಳೆ ಹಿಡಿಯುತ್ತಿತ್ತು! ಅದೂ ಅವರು ವರ್ಕ್ ಮಾಡುವ ಶೈಲಿಯಲ್ಲೆ ವಿಚಿತ್ರ ಗಮ್ಮತ್ತಿತ್ತು. ಸಾಮಾನ್ಯವಾಗಿ ಮಧ್ಯರಾತ್ರಿ ಕಳೆದ ಮೇಲೆ ಠಾಣೆಗೆ ಬರುತ್ತಿದ್ದರು ಕೆಂಪಯ್ಯ. ಅತ್ಯಂತ ಸಾಮಾನ್ಯರ ಗುಣಗಳನ್ನು ರೂಢಿಸಿಕೊಂಡಿದ್ದ ಅವರು ಕುದುರೆ ಮೇಲೆ ಸ್ಟೇಷನ್ನಿಗೆ ಬರುತ್ತಾರೆನ್ನುವ ಪ್ರತೀತಿ ಇತ್ತು! ಕೈಯಲ್ಲಿ ರಾಡ್ (ಸಾಮಾನ್ಯವಾಗಿ ಲಾಠಿ ಮುಟ್ಟುತ್ತಿರಲಿಲ್ಲ!) ಹಿಡಿದು 'ಅಂಬರೀಷ್ ಫಿಲ್ಮ್ ನೋಡಿ ದ್ದಿಯೇನೊ?!' ಎಂದು ಕೇಳುತ್ತಾ ಬೀಸಲು ಶುರು ಮಾಡುತ್ತಿದ್ದರು. ಯಾರಾದರೂ ಸಾಮಾನ್ಯ ದರ್ಜೆಯ ಅಧಿಕಾರಿಗಳು ವರ್ಕ್ ಮಾಡಿದರೆ ಉನ್ನತ ಅಧಿಕಾರಿಗಳಿಗೆ ನಿವೇದಿಸಿಕೊಳ್ಳಬಹುದಿತ್ತು ಅಥವಾ ದೂರು ಕೊಡಬಹುದಿತ್ತು. ಆದರೆ ಕೆಂಪಯ್ಯನವರಂತಹ ಡಿಸಿಪಿಯವರೆ ವರ್ಕ್ ಮಾಡಿದಾಗ? ಹಾಗೆಂದು ಸಿಕ್ಕಸಿಕ್ಕವರಿಗೆಲ್ಲಾ ವರ್ಕ್ ಮಾಡಲು ಕೆಂಪಯ್ಯನವರು ಹೋಗುತ್ತಿರಲಿಲ್ಲ, ಸಣ್ಣ ಪುಟ್ಟ ಕಳ್ಳರನ್ನು ಮುಟ್ಟುತ್ತಿರಲಿಲ್ಲ. ಆದರೆ ರೌಡಿಗಳನ್ನು, ಅದರಲ್ಲೂ ನಟೋರಿಯಸ್ ಹೆಸರಿರುವವರನ್ನು, ಕಟುವಾಗಿ ಹಿಂಸಿಸುತ್ತಿದ್ದರು. ಇದೆಲ್ಲದರ ಜೊತೆಗೆ ಅವರು ರಾತ್ರಿಯ ಹೊತ್ತು ನಿದ್ದೆ ಮಾಡುವುದಿಲ್ಲವೆಂಬ ಸುದ್ದಿಯೂ ಹರಡಿತ್ತು! ಮಧ್ಯರಾತ್ರಿಯ ನಂತರ ಸ್ಟೇಷನ್ಗಳು, ಮುಂಜಾನೆ ನಾಲ್ಕು ಗಂಟೆಯ ಹೊತ್ತಿಗೆ ಸ್ವಿಮ್ಮಿಂಗ್ ಫೂಲ್! ಅವರು ಕುಡಿಯಬಹುದಾದ ಬ್ರಾಂಡ್ಗಳಿಂದ ಹಿಡಿದು, ಅವರು ಧರಿಸುವ ಉಡುಪು ಮತ್ತು ಅವರ ಗೆಳೆಯರವರೆಗೆ ಮಾಹಿತಿಗಳನ್ನು ಕಲೆಹಾಕಿದ್ದೆವು. ನಮ್ಮಲ್ಲಿ ಯಾರೂ ಅವರ ವರ್ಕ್ಗೆ ಸಿಕ್ಕಿರಲಿಲ್ಲ. ಸಿಕ್ಕಿದ್ದ ನತದೃಷ್ಟರೆಂದರೆ, ಕಾಲಾಪತ್ಥರ್ ಮತ್ತು ತನ್ವೀರ್. ಕಾಲಾಪತ್ಥರ್ ಜಾಗದಲ್ಲಿ ಬೇರೆ ಯಾರೇ ಇದ್ದರೂ ಜೀವನದಲ್ಲಿ ರೌಡಿಸಂ ಸಹವಾಸ ಬೇಡವೆಂದು ತೀರ್ಮಾನಿಸುವಷ್ಟರ ಮಟ್ಟಿಗೆ ವರ್ಕ್ ಮಾಡಿದ್ದರು! ಅವನ ಅಡ್ಡ ಹೆಸರಿಗೆ ತಕ್ಕಂತೆ ಅವನು ಕಲ್ಲುಬಂಡೆಯಾಗಿದ್ದುದರಿಂದ ತಡೆದುಕೊಂಡ! ಹಾಗೆಯೆ ನಮ್ಮ ಗುಂಪಿನಲ್ಲಿದ್ದ ಕೃಷ್ಣಮೂರ್ತಿ ಅವರಿಂದ ವರ್ಕ್ ಮಾಡಿಸಿಕೊಂಡಿದ್ದ. ನಂತರ ಅವರಿರುವವರೆಗೂ ಶಿವಮೊಗ್ಗದ ಕಡೆ ತಲೆ ಹಾಕದೆ ಬೆಂಗಳೂರಿನಲ್ಲೇ ಉಳಿದುಬಿಟ್ಟಿದ್ದ!
ಆದರೆ ಕೃಷ್ಣಮೂರ್ತಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದ. ದಾದಾಗಿರಿಯನ್ನು ತ್ಯಜಿಸು ತ್ತೇವೆನ್ನುವವರಿಗೆ ಅವರು ಸಂಪೂರ್ಣ ಸಹಕಾರ ಕೊಡುತ್ತಾರೆಂದಿದ್ದ. ಮತ್ತು ಕೆಳದರ್ಜೆಯವರಿಂದ ತೊಂದರೆಯಾದಾಗ ನೇರವಾಗಿ ಹೋಗಿ ಅವರನ್ನು ಕಂಡರೆ ಸರಿಪಡಿಸುತ್ತಾರೆಂದಿದ್ದ. ಒಂದು ರಾತ್ರಿ ಡ್ರಿಂಕ್ಸ್ ನಡುವೆ ಕೆಂಪಯ್ಯನವರು ಮಾಡುವ ವರ್ಕ್ ಬಗ್ಗೆ ಕೃಷ್ಣಮೂರ್ತಿಯನ್ನು ಕೇಳಿದೆವು. ಹೆಚ್ಚು ಮಾತನಾಡದ ಕೃಷ್ಣಮೂರ್ತಿ ಒಂದೆರಡು ನಿಮಿಷ ನೆಲ ನೋಡುತ್ತ ಹೇಗೆ ವಿವರಿಸುವುದೆಂದು ಆಲೋಚಿಸತೊಡಗಿದ. ನಂತರ ತಲೆ ಎತ್ತಿ, "ತುಂಬಾ ಸಿಟ್ಟು ಬಂದಾಗ ಅವರು ವರ್ಕ್ ಮಾಡೋದಿಲ್ಲಾ ಅಣ್ಣಾ...." ಎಂದು ಹೇಳಿ, ಸ್ವಲ್ಪ ಹೊತ್ತು ನನ್ನನ್ನೇ ದಿಟ್ಟಿಸಿ, ".....ಸಾಯಿಸಿಬಿಡ್ತಾರೆ!" ಎಂದು ತಣ್ಣಗೆ ಮಾತು ಮುಗಿಸಿದ.
~ಅಗ್ನಿ ಶ್ರೀಧರ್
(ದಾದಾಗಿರಿಯ ದಿನಗಳು- 3)
ಈ ಪುಸ್ತಕವನ್ನು ಕನ್ನಡೀಕರಿಸುವಾಗ ಒಂದು ಕೊರತೆ ಕಾಡತೊಡಗುತ್ತಿದೆ. ಟಿಬೇಟಿಯನ್ ಭಾಷೆ ಇಂಗ್ಲಿಷಿಗೆ ಭಾಷಾಂತರವಾಗುವಾಗಲೆ ಸಾಕಷ್ಟು ತೆಳುವಾಗಿ, ನಮ್ಮ ಭಾಷೆಯಲ್ಲಿ ಇನ್ನೂ ಹೆಚ್ಚು ಸತ್ವ ಕಳೆದುಕೊಳ್ಳಬಹುದಾದ ಸಾಧ್ಯತೆಗಳಿವೆ. ಆದರೂ ನನ್ನನ್ನು ತೀವ್ರವಾಗಿ ಆವರಿಸಿರುವ ಈ ಪುಸ್ತಕವನ್ನು ನಾನು ನನ್ನವರ ಜೊತೆ ನನ್ನ ಭಾಷೆಯಲ್ಲಿ ಹಂಚಿಕೊಳ್ಳಲೇಬೇಕಿದೆ. ಇಂದು ಇಂಗ್ಲಿಷಿನಲ್ಲಿ ಇದರ ಹಲವಾರು ಭಾಷಾಂತರಗಳಿವೆ. ಪ್ರತೀ ಐದು ವರ್ಷಗಳಿ ಗೊಮ್ಮೆ ಒಬ್ಬರಲ್ಲಾ ಒಬ್ಬ ಆಸಕ್ತರು ಇದನ್ನು ತಮಗೆ ಸಮರ್ಪಕವಾದ ರೀತಿಯಲ್ಲಿ ತರ್ಜುಮೆ ಮಾಡುತ್ತಿದ್ದಾರೆ. ಮತ್ತು ಅದಕ್ಕಿಂತಲೂ ಮುಖ್ಯವಾಗಿ ಇದನ್ನು ಹೊಸ ಆಲೋಚನೆಗಳ, ಸಂಶೋಧನೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸತೊಡಗಿದ್ದಾರೆ. 'ಸಮಾನಾಂತರ ಜಗತ್ತ'ನ್ನು ಪ್ರತಿಪಾದಿಸು ತ್ತಿರುವ ಶಾಸ್ತ್ರಜ್ಞರಂತೂ ಇದರಲ್ಲಿ ಚಿತ್ರಿತವಾಗಿರುವ ಪ್ರತಿಮೆಗಳಿಗೆ, ರೂಪಕಗಳಿಗೆ ಮಾರು ಹೋಗಿದ್ದಾರೆ.
ನಾನು ಈವಾನ್ಸ್-ವೆಂಟ್ಜ್ ಮತ್ತು ಜೋಗ್ಸಮ್ ತೃಂಪಾರವರ ಭಾಷಾಂತರಗಳನ್ನು ಬಳಸಿಕೊಂಡಿದ್ದೇನೆ. ಎಲ್ಲ ಕಾಲಘಟ್ಟಗಳಲ್ಲೂ ಮನುಷ್ಯನನ್ನು ತೀವ್ರವಾಗಿ ಕಾಡುವ ಸಂಗತಿ ಯೆಂದರೆ ಸಾವು. ಬಹುಶಃ ಸಾವೇ ಇಲ್ಲದಿದ್ದರೆ ಏನಾಗುತ್ತಿತ್ತೆಂದು ಯೋಚಿಸಿ ನೋಡಿ : ಸವಾಲುಗಳೆ ಇರುತ್ತಿರಲಿಲ್ಲ! ನಾವು ಗಳಿಸುವ ವಿದ್ಯೆ, ಸಂಪತ್ತು, ಯಶಸ್ಸು ಮತ್ತು ರೂಢಿಸಿಕೊಳ್ಳುವ ಸಂಬಂಧಗಳು ನಿಂತಿರುವುದೇ ಸಾವಿನ ಅಡಿಪಾಯದ ಮೇಲೆ.
ಚಿಕ್ಕಂದಿನಲ್ಲಿ ದೈಹಿಕವಾಗಿ ತೀರ ಅಶಕ್ತನಾಗಿದ್ದ ನನಗೆ ಬುದ್ಧಿ ತಿಳಿದಂದಿ ನಿಂದಲೂ ಸಾವಿನ ಬಗ್ಗೆ ಇತರರಿಗಿಂತ ಹೆಚ್ಚು ಭೀತಿಯಿತ್ತು. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಅದು ನನ್ನನ್ನು ಆಹುತಿ ತೆಗೆದುಕೊಂಡುಬಿಡಬಹುದೇನೊ ಎನ್ನುವ ಆತಂಕ ಉಂಟಾಗುತ್ತಿತ್ತು. ಆದರೆ ಇಪ್ಪತ್ತನೆಯ ವಯಸ್ಸಿನ ಹೊತ್ತಿಗೆ ಸಾಕಷ್ಟು ದೈಹಿಕ ಕಸರತ್ತುಗಳಲ್ಲಿ ತೊಡಗಿ, ದೇಹವನ್ನು ಅಗತ್ಯಕ್ಕಿಂತಲೂ ಹೆಚ್ಚು ಸದೃಢಗೊಳಿಸಿಕೊಂಡು ಸಾವಿನ ಭೀತಿಯಿಂದ ಹೊರಬಂದೆ.
ಆದರೆ ಮೂವತ್ತು ದಾಟಿದ ನಂತರ ಭೂಗತ ಜಗತ್ತಿಗೆ ಸೇರ್ಪಡೆ ಯಾದಾಗ ಮತ್ತೆ ಸಾವು ನನ್ನ ಬದುಕಿನ ಕೇಂದ್ರ ಭಾಗವನ್ನು ಪ್ರವೇಶಿಸಿತು. ನನ್ನ ಪ್ರಜ್ಞೆಯ ಬಹುಭಾಗವನ್ನು ಆವರಿಸತೊಡಗಿತು. ಈ ಬಾರಿ ನನ್ನನ್ನು ಭೀತಿಗಿಂತಲೂ ಹೆಚ್ಚು ಆತಂಕ ಆವರಿಸತೊಡಗಿತ್ತು. ನಿತ್ಯ ಬೆಳಿಗ್ಗೆ ಎದ್ದಾಗ ಸಾವಿನ ಸುಳಿವನ್ನು ಕಲ್ಪಿಸಿಕೊಂಡು ಹಲವು ನಿಮಿಷ ಅದರೊಡನೆ ಸಂಭಾಷಿಸಿ ನನ್ನ ದಿನದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದೆ. ಹಾಗೆಯೇ ರಾತ್ರಿ ಮಲಗು ವಾಗ, ಅಂದು ನನ್ನನ್ನು ಉಳಿಸಿದ್ದಕ್ಕಾಗಿ ಸಾವಿಗೆ ಧನ್ಯವಾದ ಅರ್ಪಿಸಿ ಕಣ್ಣು ಮುಚ್ಚುತ್ತಿದ್ದೆ!
ಆಗ ನಾನು ಆಳವಾಗಿ ಅಧ್ಯಯನ ಎಸಗಿದ ಪುಸ್ತಕ :The Tibetan Book of the Dead. ಈ ದಿನದವರೆಗೂ ನಿತ್ಯ ನನ್ನೊಡನಿರುವ ಪುಸ್ತಕ. ಇದು ಸಾವನ್ನು ಕುರಿತ ಪುಸ್ತಕವಾದರೂ ಈ ಕ್ಷಣದ ಬದುಕನ್ನು ಕುರಿತು ಸಾಕಷ್ಟು ಒಳನೋಟಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಕನ್ನಡ ಓದುಗರೊಡನೆ ಇದನ್ನು ಹಂಚಿಕೊಳ್ಳಲು ನಾನು ಅನುವಾದಿಸಿದ್ದೇನೆ.
....ಅಗ್ನಿ ಶ್ರೀಧರ್
(ಟಿಬೆಟಿಯನ್ನರ ಸತ್ತವರ ಪುಸ್ತಕ ಕೃತಿಯಿಂದ)
ದಾದಾಗಿರಿಯೊಳಗೆ ತೊಡಗಿರುವ, ಹಣ ಗಳಿಕೆಯ ದಾಹಕ್ಕೆ ಬಿದ್ದಿರುವ ಲೋಕವೊಂದರಲ್ಲಿ ಮಾನವೀಯ ಮೌಲ್ಯಗಳಾದ ಪ್ರೇಮ-ಅಂತರ್ಜಾತೀಯ ಪ್ರೇಮದಂತಹ ವಿಷಯಕ್ಕೆ ಬದ್ಧತೆಯನ್ನು ವ್ಯಕ್ತಪಡಿಸಿ, ಅಂತಹ ಒಂದು ಸನ್ನಿವೇಶದಲ್ಲಿ ತಂತ್ರಗಾರಿಕೆಯಿಂದ ಯುವ ಪ್ರೇಮಿಗಳನ್ನು ಮುತ್ತಪ್ಪ ರೈ ಅಗಲಿಸಿದಾಗ ಆ ಕಾರಣಕ್ಕಾಗಿಯೇ ಆತನ ಬಗ್ಗೆ ಇದ್ದ ಅಪಾರ ಮೆಚ್ಚುಗೆ ಮತ್ತು ನಿಷ್ಠೆಯನ್ನು ಸಡಿಲಿಸಿ ಕೊಳ್ಳುವ ಶ್ರೀಧರ್ ಸ್ವಲ್ಪ ಭಾವುಕರಂತೆ ಕಂಡುಬಂದರೆ, ಆಶ್ಚರ್ಯವಿಲ್ಲ. ಆ ಯುವ ಪ್ರೇಮಿಗಳನ್ನು ಒಂದಾಗಿಸಲು ಶ್ರೀಧರ್ ನಡೆಸಿದ ಪ್ರಯತ್ನಗಳು ರೈ ಕುತಂತ್ರದಿಂದಾಗಿ ತಪ್ಪಿಹೋದದ್ದರ ಬಗ್ಗೆ ಅವರ ಮನಸ್ಸಿನಲ್ಲಿ ಉಳಿದುಕೊಂಡೇ ಬಂದಿರುವ ಕಹಿ ಅವರ ವಿಚಾರವಾದಿ ಪ್ರಜ್ಞೆಯನ್ನು ದಾಟಿ ಒಂದು ನೈತಿಕ ವಿಧಿವಾದಿ ನಿಲುವನ್ನು ತಳೆಯುತ್ತದೆ. 'ಇಂದು ಅವರು ಆಪ್ತರಿಂದ ದೂರವಾದಾಗ ಉಂಟಾಗುವ ಬೇಸರ, ನೋವು, ಹತಾಶೆ, ಯಾತನೆಗಳನ್ನು ಅನುಭವಿಸುತ್ತಿರಲು ಕಾರಣ ಅಂದು ಅವನು ಆ ಯುವ ಜೋಡಿಯನ್ನು ದೂರ ಮಾಡಿದ್ದಕ್ಕೆ ಅನುಭವಿಸುತ್ತಿರುವ ಶಿಕ್ಷೆಯೆಂದೇ ನನ್ನ ನಂಬಿಕೆ' ಎಂದು ಬರೆಯುವ ಶ್ರೀಧರ್ ಆ ಘಟನೆಯನ್ನು ಹಚ್ಚಿಕೊಂಡಿರುವ ರೀತಿಯನ್ನು ತೋರಿಸುತ್ತಿದೆ.
ಯುವಪ್ರೇಮಿಗಳನ್ನು ಕುತಂತ್ರದಿಂದ ದೂರಮಾಡಿದ ಎಂಬುದರಿಂದ ಶುರುವಾದ ಅಸಮಾಧಾನ, ಬಲರಾಂ ಎಂಬ ಮಿತ್ರನ ಮೇಲೆ ಹಲ್ಲೆ ಮಾಡಿಸಲು ಜೊತೆಗಿರುವ ಗುಂಪಿನೊಳಗೇ ಮರೆಮೋಸದ ಪ್ರಯತ್ನ ಮಾಡಿದ ಎಂಬ ಕಾರಣಕ್ಕಾಗಿ ಮುತ್ತಪ್ಪ ರೈ ಗುಂಪಿನಿಂದ ದೂರವಾಗಲು ತೀರ್ಮಾನಿಸುವ ಶ್ರೀಧರ್ ಇಲ್ಲಿ ಸಮಾಜದೊಳಗೆ ಸದಾ ಜೀವಂತವಾಗಿರುವ ಪ್ರೀತಿ ಮತ್ತು ಸ್ನೇಹ ಎಂಬ ಮಾನವೀಯ ಮೌಲ್ಯಗಳನ್ನೇ ಮುಖ್ಯ ಆಶಯಗಳನ್ನಾಗಿ ಪರಿಗಣಿಸಿದ ರೀತಿ ನಮ್ಮನ್ನು ಸತ್ಯದ ಆ ಮುಖದ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ.
-ಬಂಜಗೆರೆ ಜಯಪ್ರಕಾಶ
(ದಾದಾಗಿರಿಯ ದಿನಗಳು- 3 ಕೃತಿge ಬರೆದ ಮುನ್ನುಡಿ)
‘ಮನುಷ್ಯ ಮೈ ಮುಚ್ಚಿಕೊಳ್ಳದ ಕಾಲವನ್ನು ಕಣ್ಣ ಮುಂದೆ ತಂದುಕೊಳ್ಳಿ; ಪ್ರಾಯಕ್ಕೆ ಬಂದ ಹುಡುಗ ಹುಡುಗಿಯರು ಏನನ್ನು ತಾನೇ ಮುಚ್ಚಿಕೊಳ್ಳಲು ಸಾಧ್ಯವಿತ್ತು?? ಅವರ ದೇಹದಲ್ಲಿ ಆಗುತ್ತಿದ್ದ ಬದಲಾವಣೆಗಳು ಅತ್ಯಂತ ಸಹಜ್ವಾಗಿದ್ದುದರಿಂದ ಅವರು ಪ್ರಾಯಕ್ಕೆ ಬಂದ ತಕ್ಷಣವೇ ಮೈಥುನದಲ್ಲಿ ತೊಡಗುತ್ತಿದ್ದರು... ಯಾರ ಅಡ್ಡಿಯೂ ಇರತ್ತಿರಲಿಲ್ಲ...
‘ಮನುಷ್ಯ ಎಂದು ತನ್ನ ದೇಹವನ್ನು ಮುಚ್ಚಿಕೊಳ್ಳುವುದನ್ನು ಕಲಿಯತೊಡಗಿದನೋ ಅಂದಿನಿಂದ ಪ್ರಾಣಿಗಳ ಹಂತವನ್ನು ಮೀರಿ ಬೆಳೆಯತೊಡಗಿದ...
(ಅಗ್ನಿ ಶ್ರೀಧರ್ ರವರ ಆಧುನಿಕ ಮಾಂತ್ರಿಕರ ಜಾಡಿನಲ್ಲಿ ಪುಸ್ತಕದಿಂದ ಆಯ್ದ ಭಾಗ)
@Riyaz Kachgal,
Eshtondu excerpts hakiddeeri!
Thanks!
Post a Comment