ಅಜ್ಜ ಊರಿದ್ದಕ್ಕೂ ಮೊಮ್ಮಗ ಹಾರಿದ್ದಕ್ಕೂ ಸಮ.
ಅಜ್ಜ ಒಂದು ಹೆಜ್ಜೆ ಊರಿದ್ದನ್ನು ಸರಿಗಟ್ಟಲು ಮೊಮ್ಮಗ ಶಕ್ತಿ ಮೀರಿ ಹಾರಬೇಕಾಗುತ್ತದೆ. ದೊಡ್ಡವರು ಅನುಭವದಿಂದ ಸುಲಭದಲ್ಲಿ ಮಾಡಿ ಮುಗಿಸುವ ಕೆಲಸವನ್ನು ಸಣ್ಣವರು ಕಷ್ಟಪಟ್ಟು ಮಾಡುವ ಸಂದರ್ಭಗಳಿರುತ್ತವೆ. ದೊಡ್ಡವರ ಅನುಭವವನ್ನು ಸಣ್ಣವರ ಜ್ಞಾನ ಸರಿಗಟ್ಟಲಾರದು ಎನ್ನುವಾಗ ಬಳಸಬಹುದು. ಅಜ್ಜನಿಗೆ ಕೆಮ್ಮಲು ಕಲಿಸಲು ಹೋಗಿದ್ದ ಎಂಬ ಗಾದೆಯೂ ಸಹ ಇದೆ; ಅಂದರೆ ಹಿರಿಯರಿಗೆ ಮೊದಲೇ ಗೊತ್ತಿರುವ ಕೆಲಸವನ್ನು ಸಣ್ಣವರು ವಿವರಿಸಲು ಹೋದಾಗ ಹಿರಿಯರಿಂದ ಈ ಮಾತು ಕೇಳಿಸಿಕೊಳ್ಳುತ್ತಾರೆ. ' ಸುಮ್ಮನಿರು, ನಾನು ಉಪ್ಪು ತಿಂದಷ್ಟು ನೀನು ಅನ್ನ ತಿನ್ನಲಿಲ್ಲ' ಎಂದು ಹಿರಿಯರು ಹೇಳುವುದನ್ನಂತೂ ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತಾರೆ.