December 1, 2008

ಅಳಿಯನ ಕುರುಡು (ಉತ್ತರ ಕನ್ನಡದ ಗಾದೆ – 230)

ಅಳಿಯನ ಕುರುಡು(ತನ) ಬೆಳಗಾದರೆ ಕಾಣುತ್ತದೆ.
ಹಿಂದಿನ ಕಾಲದಲ್ಲಿ ಗೋಧೂಳಿ ಮುಹೂರ್ತದ ಮದುವೆಗಳು ತುಂಬಾ ನಡೆಯುತ್ತಿದ್ದವಂತೆ. ಆ ದೀಪದ ಬೆಳಕಿನಲ್ಲಿ ಅಳಿಯನ ಕುರುಡುತನವನ್ನು (ದೃಷ್ಟಿ ದೋಷವನ್ನು) ಯಾರೂ ಸರಿಯಾಗಿ ಗಮನಿಸದಿದ್ದರೂ ಅದು ಬೆಳಗಾದ ಮೇಲೆ ಎಲ್ಲರಿಗೂ ಕಂಡೇ ಕಾಣುತ್ತದೆ. ಹೊಸ ವಸ್ತುವನ್ನು ಖರೀದಿಸಿ ತಂದಾಗ ಚೆನ್ನಾಗಿ ಕಂಡರೂ ಅದರ ಅವಗುಣಗಳು ಶೀಘ್ರದಲ್ಲಿ ಕಂಡುಬರುತ್ತವೆ ಎನ್ನುವಾಗ ಬಳಸಿ.
ಹಿಂದಿನ ಕಾಲದ ಮದುವೆಗಳು ಐದು ದಿನ ನಡೆಯುತ್ತಿದ್ದವಂತೆ. ಎಲ್ಲರಿಗೂ ಪುರಸೊತ್ತು ಇರುತ್ತಿತ್ತು. ಎಲ್ಲರೂ ಮದುವೆಯನ್ನು ಹಬ್ಬದಂತೆ ಆಚರಿಸಿ, ಮದುಮಕ್ಕಳಿಗೆ ಆಶೀರ್ವಾದ ಮಾಡುತ್ತಿದ್ದರು. ಈಗಿನ ಮದುವೆಗಳು ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದರೆ 12-2 ಘಂಟೆಯ ವರೆಗೆ rush hour ಎನ್ನಬಹುದು. ಎಲ್ಲರೂ ಬಂದು queue ನಲ್ಲಿ ನುಗ್ಗಿ ಊಟ ಮಾಡಿ, ಮದುಮಕ್ಕಳ ಕೈಗೆ ಮುಂದೆ ಏನೂ ಉಪಯೋಗಕ್ಕೆ ಬಾರದ ಗಣಪತಿ ಚಿತ್ರವಿರುವ ಒಂದು ಗೋಡೆ ಗಡಿಯಾರವನ್ನು ತುರುಕಿ ತಮ್ಮ ತಮ್ಮ ವಾಹನಗಳನ್ನು ಹತ್ತಿ ಹೋಗಿಬಿಟ್ಟಿರುತ್ತಾರೆ. ಇನ್ನು ತೀರಾ ಗಡಿಬಿಡಿಯಲ್ಲಿದ್ದರೆ ಮದುಮಕ್ಕಳ ಅಪ್ಪ- ಅಮ್ಮರ ಎದುರು ಹಲ್ಲು ಕಿರಿದು ಹಾಜರಿ ಹಾಕಿ ಮದುಮಕ್ಕಳನ್ನೂ ನೋಡದೇ ಹೋಗಿಬಿಡುತ್ತಾರೆ. ಮತ್ತೆ 3 ಘಂಟೆಗೆ ಕಲ್ಯಾಣ ಮಂಟಪ ಬಣ ಬಣ. ತೀರಾ ಹತ್ತಿರದವರನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಅವರೂ ಕೂಡ ರಾತ್ರಿಯ VRL ಬಸ್ಸಿಗೆ ಬೆಂಗಳೂರಿಗೆ ಹೋಗಲು ತಮ್ಮನ್ನು bus-stand ಗೆ ಯಾರು ಮುಟ್ಟಿಸುತ್ತಾರೆ ಎಂಬ ಚಿಂತೆಯಲ್ಲಿರುತ್ತಾರೆ. ಮನೆಯಲ್ಲಿ ಮದುವೆ ನಡೆದರೂ ಸನ್ನಿವೇಶ ಬೇರೆ ಇರುವುದಿಲ್ಲ ಮತ್ತೆ! ಎಲ್ಲಾ ಕಡೆ ಹೀಗೆಯೇ!! ಜೀವನದಲ್ಲಿ ಯಾರಿಗೂ ಯಾವ ಕೆಲಸಕ್ಕೂ ಪುರಸೊತ್ತಿಲ್ಲ. ನಾವೆಲ್ಲಾ ಯಾವ ದಿಕ್ಕಿಗೆ ಮುಖ ಮಾಡಿ ಓಡುತ್ತಿದ್ದೇವೆ?

9 comments:

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕಾ...
ಇದೊಂಥರಾ ಮಜಾ ಇದ್ದೇ ಈ ಬರಹ. ಭಾರೀ ಮಸ್ತ್ ಬರದ್ದೆ. ಯೋಚಿಸುವಂಥ ವಿಷ್ಯವಾದ್ರೂ ನೆಗಿ ಬರಂಗೆ ಬರದ್ದೆ :-)

sunaath said...

ವಿವರಣೆ ತುಂಬ ವಿನೋದಮಯವಾಗಿದೆ.

Ittigecement said...

ಹಳೆ ಕಾಲದವರು..ಮೂರು ಪೀಳಿಗೆಯವರೆಗೆ ವಿಚಾರ ಮಡುತ್ತಿದ್ದರು.
ಅವರು ಮಾಡಿದ ಕೆಲಸದ ಫಲ ಅವರ ಮಕ್ಕಳೊ, ಮೊಮ್ಮಕ್ಕಳೊ ಉಣ್ಣುತ್ತಿದ್ದರು.
ಆದರೆ ಈಗ ಹಾಗಲ್ಲ. ಮೂರು ವರ್ಷಕ್ಕೆ ಫಲ ಕೊಡುವ ತೆಂಗಿನ ಮರ ಬಹಳ ಜನಪ್ರೀಯ.

"ನಾವು, ನಮ್ಮದು" ಈಗಿನ ಧ್ಯೇಯ ಮಂತ್ರದಲ್ಲಿ ಬೇರೆಯವರ ಬಗೆಗೆ ವಿಚಾರ ಮಾಡಲು ಪುರುಸೊತ್ತಿಲ್ಲ
ರಾಶಿ ಚೊಲೊ ಬರದ್ದೆ,,!

shivu.k said...

ಸೀಮಾ ಮೇಡಮ್, ಆಳಿಯನ ಕುರುಡುತನ್ ಬೆಳಿಗ್ಗೆ ಗೊತ್ತಾಗುತ್ತದೆ" ವಿವರಣೆ ತುಂಬಾ ಚೆನ್ನಾಗಿದೆ. ಗಾದೆ ವಿವರಿಸುತ್ತಾ ಮದುವೆ ವಿಚಾರಕ್ಕೆ ಬಂದುಬಿಟ್ಟಿರಿ. ಮದುವೆ ಎಂದಾಕ್ಷಣ ಎಲ್ಲರಿಗೂ ಬರುವ ಕಲ್ಪನೆಯನ್ನು ನೀವು ಚೆನ್ನಾಗಿ ವಿವರಿಸಿದ್ದೀರಿ ! ಅದೇ ಮದುವೆಗಳಲ್ಲಿ ನಮಗರಿವಿಗೆ ಬರದ ಕೆಲವು ಸನ್ನಿವೇಶಗಳನ್ನು ಫೋಟೋ ಸಮೇತ ವಿವರಿಸಿದ್ದೇನೆ. ನನ್ನ ಬ್ಲಾಗಿಗೊಮ್ಮೆ ಬಿಡುವು ಮಾಡಿಕೊಂಡು ಬನ್ನಿ.

Seema S. Hegde said...

@ ಶಾಂತಲಾ,
ನೆಗಿ ಆಡಿದ್ದೆ ಹೌದ ಅಲ್ದ... ನಂಗೆ ಅಷ್ಟೆ ಸಾಕು ಬಿಡು :)

@ ಸುನಾಥ್,
ಧನ್ಯವಾದಗಳು :)

@ ಸಿಮೆಂಟು ಮರಳಿನ ಮಧ್ಯೆ,
ನೀವು ಹೇಳಿದ್ದು 1೦೦% ನಿಜ.
ಆಗಿನ ಕಾಲದವರು ಎಲ್ಲರೂ ಗುಲಾಬಿ ಗಿಡಗಳನ್ನೇ ನೆಟ್ಟಿದ್ದರೆ ಇಂದು ನಾವು!!??

@ ಶಿವು,
ಧನ್ಯವಾದಗಳು. ನಿಮ್ಮ blog ಗೆ ನಾನು ಆಗಾಗ ಬರುತ್ತಲೇ ಇರುತ್ತೇನೆ.

Harisha - ಹರೀಶ said...

ಸೀಮಕ್ಕೊ! ಆನೂ ಹಿಂದೊಂದ್ ಸಲ ಇದರ ಬಗ್ಗೆ ಬರ್ದಿದ್ದಿ.. ಆದರೆ ನನಗೆ ಅನ್ಸಿದ ಮಟ್ಟಿಗೆ ಕಲ್ಯಾಣ ಮಂಟಪದ ಮದುವೆಯಲ್ಲಿ ಮಾತ್ರ ಈ ಥರ ಆಗ್ತು.. ಮನೆಲ್ಲಿ ಮಾಡಿರೆ ಸ್ವಲ್ಪ ಹೊತ್ತಾರೂ ಇರ್ತ ಜನ..

Seema S. Hegde said...

@ ಹರೀಶ,
ಹೌದು. ಮನೆಯಲ್ಲಿ ಆದ್ರೆ ಸ್ವಲ್ಪ ಅಡ್ಡಿಯಿಲ್ಲೆ.

Unknown said...

ಇಂತಹ ಗಾದೆ ಮಾತುಗಳು ನಮ್ಮ ಬದುಕನ್ನು ತಿಳಿಸುತ್ತವೆ

Seema S. Hegde said...

@Unknown, Thank you!