ನಡುಗಿದವನನ್ನು ನಡುಗಿಸಿತ್ತು, ಮುಡುಗಿದವನನ್ನು ಮುಡುಗಿಸಿತ್ತು, ಎದ್ದೋಡುವವನ ಜೊತೆ ಗುದ್ದಾಡಲಾರೆನೋ ಎಂದಿತ್ತು ಚಳಿ.
ಮುದುರಿಕೊಂಡು ಕುಳಿತಿದ್ದರೆ ಚಳಿ ಇನ್ನೂ ಜಾಸ್ತಿಯಾದಂತೆ ಅನಿಸುತ್ತದೆ. ಎದ್ದು ಕೆಲಸ ಮಾಡಿದರೆ ಅಷ್ಟೊಂದು ಚಳಿ ಎನಿಸುವುದಿಲ್ಲ ಎನ್ನುವಾಗ ಹೇಳುತ್ತಾರೆ. ಹೀಗೇ ಸ್ವಲ್ಪ flash‑back… ಚಿಕ್ಕವರಿದ್ದಾಗ (ಈಗ ಊರಿಗೆ ಹೋದಾಗಲೂ ಸಹ) ಚಳಿಗಾಲದಲ್ಲಿ ನಾನು, ರಘು ಎದ್ದ ಕೂಡಲೇ ಬಚ್ಚಲು ಒಲೆಯ ಮುಂದೆ ಕುಳಿತುಬಿಡುತ್ತಿದ್ದೆವು- ಇನ್ನೊಬ್ಬರು ಮೊದಲು ಸ್ನಾನಕ್ಕೆ ಹೋಗಲಿ ಎಂಬ ಆಶಯದಲ್ಲಿ, ವಾದಾಟದಲ್ಲಿ. ಅಪ್ಪ, ಅಮ್ಮರ ಕಣ್ಣು ತಪ್ಪಿಸಿ ಹಾಸಿಗೆಯಲ್ಲಿ ನಾವು ಮುಚ್ಚಿಟ್ಟು ಮಲಗಿಸಿಕೊಂಡ ಪಾಲಿ, ನಮ್ಮನೆಯ ಬೆಕ್ಕು ನಮಗಿಂತ ಮೊದಲೇ ಎದ್ದು ಹೋಗಿ ಅಮ್ಮನ ಕಾಲು ಸುತ್ತಿ, "ಥೋ ಯನ್ನ ವೈತರಣಿ ನದಿಯಲ್ಲಿ ಬೀಳ್ಸಿ ಹಾಕಡ್ದೇ" ಎಂದು ಬೈಸಿಕೊಂಡು, ಅಮ್ಮನ ಹಿಂದೆ ಮುಂದೆ ಎಡೆಬಿಡದೆ ಸುತ್ತಿ ಹಾಲು ಹಾಕಿಸಿಕೊಂಡು ಕುಡಿದು, ಕೈಕಾಲು, ಮುಖ ಎಲ್ಲ ನೆಕ್ಕಿಕೊಂಡು ಬಚ್ಚಲು ಒಲೆಯ ಮುಂದೆ ಗುರ್ರ್... ಗುರ್ರ್... ಎಂದು ಸದ್ದು ಮಾಡುತ್ತಾ ನಮಗಾಗಿ ಕಾಯುತ್ತಿರುತ್ತಿತ್ತು. ನಾನು, ರಘು ಅದರ ಜೊತೆ ಆಟವಾಡುತ್ತಾ, ಅಲ್ಲಿಗೆ ಬಂದು ನಮ್ಮ ಕಿವಿಗೆ ತಮ್ಮ ತಣ್ಣನೆಯ ಮೂಗನ್ನು ತಾಗಿಸುತ್ತಿದ್ದ ನಾಯಿಗಳು ಜ್ಯೂಲಿ ಮತ್ತು ಮೋಗ್ಲಿಯ ಜೊತೆ ಆಟವಾಡುತ್ತಾ ಕುಳಿತುಬಿಡುತ್ತಿದ್ದೆವು. ಅಜ್ಜ ನಮ್ಮ ಜೊತೆಯೇ ಕುಳಿತಿರುತ್ತಿದ್ದರು. ಅಮ್ಮ ಅಜ್ಜನಿಗೆ ಅಲ್ಲಿಯೇ ಚಹಾ ತಂದು ಕೊಡುತ್ತಿದ್ದಳು. ಅಪ್ಪ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದರೆ ಅಮ್ಮ ಅಡುಗೆ ಮನೆಯಲ್ಲಿ ದೋಸೆಯ ತಯಾರಿಯಲ್ಲಿರುತ್ತಿದ್ದಳು. ನಾವು ಶಾಲೆಗೆ ಹೊತ್ತಾಗುತ್ತದೆ ಎಂಬ ಪರಿವೆಯಿಲ್ಲದೆ ಬೆಕ್ಕು, ನಾಯಿಗಳ ಜೊತೆ ಆಟವಾಡುವುದರಲ್ಲಿ ಕಳೆಯುತ್ತಿದ್ದೆವು. ಯಾರಾದರೂ ಮೊದಲು ಸ್ನಾನಕ್ಕೆ ಹೋಗಿ ಇಲ್ಲವಾದರೆ ಶಾಲೆಗೆ ತಡವಾಗುತ್ತದೆ ಎಂಬ ಮಾತು ಅಮ್ಮನಿಂದ ಬಂದರೆ ನಾವು 'ಚಳಿ' ಎಂಬ ನೆಪ ಒಡ್ಡುತ್ತಿದ್ದೆವು. ಆಗ ಅಜ್ಜ ಈ ಗಾದೆ ಹೇಳುತ್ತಿದ್ದರು. ಈಗ ಅಜ್ಜನೂ ಇಲ್ಲ... ಪಾಲಿ, ಜ್ಯೂಲಿ, ಮೋಗ್ಲಿ ಯಾರೂ ಇಲ್ಲ (ಅವುಗಳ ಜಾಗಕ್ಕೆ ಮುಮ್ಮಡಿ ಪಾಲಿ, ಮುಮ್ಮಡಿ ಜ್ಯೂಲಿ ಮತ್ತು ಇಮ್ಮಡಿ ಮೋಗ್ಲಿ ಬಂದಿದ್ದಾರೆ). ನಾನು, ರಘು ವರ್ಷಕ್ಕೊಮ್ಮೆ ಭೇಟಿಯಾಗುವುದು ಕೂಡ ಕಷ್ಟ.... Good old days... :(
5 comments:
ಹ್ಮ್.. ಚಳಿಗಾಲದಲ್ಲಿ ಬಚ್ಚಲಒಲೆ ಮುಂದೆ ಬೆಂಕಿಕಾಯಿಸದರ ಮಜಾನೇ ಬೇರೆ. ನಾನು ಅಕ್ಕಾನೂ ಬೆಳಿಗ್ಗೆ ಬೆಳಿಗ್ಗೆ ಜಗಳ ಶುರು ಮಾಡ್ಕ್ಯಬಿಡ್ತಿದ್ಯ, ಯಾರು ಒಲೆಮುಂದೆ ಕುತ್ಕಳದು ಹೇಳಿ. ಕಡೀಗೆ ಇಬ್ರೂ ಇದ್ದ ಸಣ್ಣ ಜಾಗದಲ್ಲೆ ಕುತ್ಕಂಡು ಚಳಿ ಕಾಯ್ಸದು.
ಒಳ್ಳೆ ನೆನಪು :-)
ಸೀಮಾರವರೆ
ಬೆಂಗಳೂರಲ್ಲಿ ಈಗ ಸಿಕ್ಕಾಪಟ್ಟೆ ಛಳಿ. ಈ ಗಾದೆ ಸಕಾಲಿಕವಾಗಿ ಹಾಕಿದ್ದೆ. ಬೆಳಿಗ್ಗೆ ಬೇಗ ಏಳು ಹೇಳಿ ಮಗನಿಗೆ ಹೇಳುವಾಗ ಈಗಾದೆ ಹೇಳಿದಿದ್ದಿ..
" ಹೆದರಿದವಂಗೆ ಹಿಡಿದಿತ್ತು ಹೇಡ್ ದೆವ್ವ" ಈಗಾದೆ ಕೇಳಿದ್ಯ?
ನಿಜವಾಗಿಯೂ ಅತ್ಯುತ್ತಮ ಕೆಲಸ ಮಾಡ್ತ ಇದ್ದೆ.. ಅಭಿನಂದನೆಗಳು...
chali chali lekhana chalo iddu... Nice blog
ಸೀಮಾ ಮೇಡಮ್,
ನಿಮ್ಮ ಗಾದೆ ಮಾತು ನಿಜ ನಾನು ದಿನಪತ್ರಿಕೆ ವಿತರಣೆಗೆ ನಾಲ್ಕು ಗಂಟೆ ಏಳಬೇಕಾದ್ದರಿಂದ ಈ ಚಳಿಗಾಲದಲ್ಲೂ ಚಳಿ ನನ್ನನ್ನೂ ನಡುಗಿಸಲು ಸಾಧ್ಯವಿಲ್ಲದಂತೆ ಒಂದೇ ಮನಸ್ಸಿನಿಂದ ಎದ್ದು ಓಡುತ್ತಿರುತ್ತೇನೆ. ಕೆಲವೊಮ್ಮೆ ಇನ್ನೂ ಹತ್ತು ನಿಮಿಷ ಮಲಗೋಣವೆಂದು ಮಲಗಿದರೆ ಅದು ಅರ್ದ ಗಂಟೆ ಧಾಟಿರುತ್ತದೆ. ಮತ್ತೆ ಗಡಿಬಿಡಿಯಿಂದ ಓಡುವುದು ನಡೆದೇ ಇರುತ್ತದೆ.
ಮತ್ತು ನಿಮ್ಮ ಚಿಕ್ಕಂದಿನ ಬೆಂಕಿಕಾಯಿಸಿಕೊಳ್ಳುವ ನೆನೆಪುಗಳ ಬರವಣಿಗೆ ಸೊಗಸಾಗಿದೆ. ಅದು ನನ್ನ ಬಾಲ್ಯದ ನೆನಪುಗಳನ್ನು ನೆನಪಿಸಿಕೊಟ್ಟಿತು.
@ ಮಧುಸೂದನ,
ಬಚ್ಚಲು ಓಲೆ ಮುಂದೆ ಜಾಗಕ್ಕಾಗಿ ಯಾರೂ "ಕುಂಬಳಕಾಯಿ ಬೆಳೆಸಿದ್ರಿಲ್ಯ?"
ಕಥೆ ಗೊತ್ತಿದ್ದ- ಕುಂಬಳಕಾಯಿ ಬೆಳೆಸದು?
@ ಸಿಮೆಂಟು ಮರಳಿನ ಮಧ್ಯೆ,
ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಚಳಿ ಹೇಳ್ತ್ರ? ಹಂಗಾದ್ರೆ ಇಲ್ಲಿಗೆ ಬನ್ನಿ... 8-9 ಡಿಗ್ರಿ C ಇರ್ತಾ ಇದ್ದು.
ನಾನು ಹೆಚ್ಚು ಕಮ್ಮಿ ನಡುಗ್ತಾ ಇದ್ದಿ :)
ಹುಂ, ಆ ಗಾದೆ ಕೇಳಿದ್ದಿ.
@ ದಿನೇಶ,
ತುಂಬಾ ಧನ್ಯವಾದಗಳು :)
@ ಶಿವು,
ಅದು ಹಾಗೇ. ಚಳಿಗಾಲದಲ್ಲಿ ಐದೇ ಐದು ನಿಮಿಷ ಮಲಗೋಣ ಎಂದು ಕಣ್ಣು ಮುಚ್ಚಿದರೆ ಗಡಿಯಾರದ ಮುಳ್ಳು ಐವತ್ತು ನಿಮಿಷ ದಾಟಿರುತ್ತದೆ!!
ನಿಮಗೆಲ್ಲಾ ನಿಮ್ಮ ಬಾಲ್ಯವನ್ನು ನೆನಪಿಸಿದ ಖುಷಿ ನನಗೆ :)
Post a Comment