November 18, 2008

ನೆಗಡಿಯಂತಾ (ಉತ್ತರ ಕನ್ನಡದ ಗಾದೆ – 218)

ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ.
ಎಷ್ಟೊಂದು ರೋಗಗಳಿಗೆ ಔಷಧಗಳಿದ್ದರೂ ನೆಗಡಿಗೆ ಮಾತ್ರ ಸರಿಯಾದ ಔಷಧವಿಲ್ಲ. ನೆಗಡಿ ಔಷಧ ಮಾಡಿದರೆ ಒಂದು ವಾರಕ್ಕೆ ಗುಣವಾಗುತ್ತದೆ, ಔಷಧ ಮಾಡದಿದ್ದರೆ ಏಳು ದಿನಕ್ಕೆ ಗುಣವಾಗುತ್ತದೆ ಎಂಬ ಮಾತಿದೆ. ಎಷ್ಟೊಂದು ಆಭರಣಗಳಿದ್ದರೂ ಅವ್ಯಾವುದೂ ಬುಗುಡಿಗೆ ಸಾಟಿಯಲ್ಲ. ಬುಗುಡಿಗೆ ಅದರದ್ದೇ ಆದ ವಿಶೇಷತೆ ಇದೆ. ಮದುವೆಯಂಥ ಕಾರ್ಯದಲ್ಲಿ ಹೆಂಗಸರು ಹೊಸದಾಗಿ ಕಿವಿ ಚುಚ್ಚಿಕೊಂಡಾದರೂ ಬುಗುಡಿಯನ್ನು ಹಾಕಿಕೊಳ್ಳುವುದನ್ನು ನೋಡುತ್ತೇವೆ. ಇತ್ತೀಚಿಗೆ ಸಣ್ಣ ಬುಗುಡಿಯನ್ನು ಹಾಕಿಕೊಳ್ಳುವುದು fashion ಆಗಿರುವುದನ್ನು ನೀವು ಗಮನಿರಲೂಬಹದು. ನೆಗಡಿಗೆ ಬೇಕಾದಷ್ಟು ಔಷಧ ಮಾಡಿ, ಅದು ಸಾಮಾನ್ಯವಾಗಿ ಕನಿಷ್ಠ ಒಂದು ವಾರದ ತನಕ ಕಾಡಿಯೇ ಕಾಡುತ್ತದೆ. ಬೇಕಾದಷ್ಟು ಆಭರಣಗಳನ್ನು ಹಾಕಿಕೊಳ್ಳಿ, ಬುಗುಡಿ ಹಾಕಿಕೊಂಡಾಗ ಬರುವ ಲಕ್ಷಣವೇ ಬೇರೆ. ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ ಅಲ್ವಾ?

8 comments:

shivu.k said...

ಸೀಮಾ ಹೆಗ್ಡೆಯವರೆ,
ನಿಮ್ಮ ಗಾದೆ ಮಾತು ನಿಜ ಸದ್ಯಕ್ಕೆ ನಾನು ನೆಗಡಿ ಮತ್ತು ಜ್ವರದಿಂದ ಬಳಲುತ್ತಿದ್ದೇನೆ.

Harisha - ಹರೀಶ said...

ಸೀಮಕ್ಕಾ, ನೆಗಡಿ ಆದಾಗ ಐಸ್ ಕ್ರೀಂ ತಿಂದು ಜ್ಯೂಸ್ ಕುಡ್ದ್ರೆ ಒಂದೇ ದಿನಕ್ಕೆ ಹೋಗ್ಬಿಡ್ತು.. ಮುಂದಿನ್ ಸಲ ಮಾಡ್ ನೋಡು..

ಶಿವು, get well soon!

Ittigecement said...

ಗಾದೆ ಚೊಲೊ ಇದ್ದು..
ಅದಕ್ಕಿಂತ "ಹರೀಷ್" ಪ್ರತಿಕ್ರಿಯೆ ಇನ್ನೂ ಚೊಲೊ ಇದ್ದು. ಅವರು ಡಾಕ್ಟ್ರ?
hahaa..hahaa..

krbabu said...

ಸೀಮಾ ಅವರೇ:
ಬುಗುಡಿ ಅಂದರೇನು? ಹೇಗಿರುತ್ತದೆ? ಅದರ picture ಎಲ್ಲಿದೆ?
-
ರಮೇಶ್

Seema S. Hegde said...
This comment has been removed by the author.
Seema S. Hegde said...

@ ಶಿವು,
ನಿಮ್ಮ ನೆಗಡಿ, ಜ್ವರ ಬೇಗ ವಾಸಿಯಾಗಲಿ ಅಂತ ಹಾರೈಸುತ್ತೇನೆ.

@ ಹರೀಶ,
ತಣ್ಣೀರ ಸ್ನಾನ ಮಾತ್ರ ಬ್ಯಾಡ ಅಂಬ್ಯ?
Doctor ಹರೀಶ?!! :D

@ ಸಿಮೆಂಟು ಮರಳಿನ ಮಧ್ಯೆ,
ನಾನು doctor!!! ಹರೀಶ ಅಲ್ಲ... ಅವ engineer. ಅವ ಹೇಳಿದ ಔಷಧ ಮಾಡದೂ ಒಂದೇಯ ಮಣ್ಣು ಕುಡಿಕೆ ನಂಬಿ ಹೊಳೆಗೆ ಹಾರದೂ ಒಂದೇಯ :)
ಹಂಗೆ ಹೇಳಿ ನಾನು ಹೇಳಿದ ಔಷಧ ಮಾಡಿರೂ ಅಷ್ಟೇಯ ಮತ್ತೆ!! ನಾನು ಔಷಧ ಕೊಡೊ doctor ಅಲ್ಲ :)

@ ರಮೇಶ ಬಾಬು,
ಬುಗುಡಿ ಎಂದರೆ ಕಿವಿಯ ಮೇಲ್ಭಾಗದಲ್ಲಿ ಹಾಕಿಕೊಳ್ಳುವ ಒಂದು ಆಭರಣ.ಸಾಮಾನ್ಯವಾಗಿ ಸಣ್ಣ ಮುತ್ತುಗಳನ್ನು ಬಂಗಾರದಲ್ಲಿ ಕಟ್ಟಿರುತ್ತಾರೆ. Conical shape ನಲ್ಲಿ ಇರುತ್ತದೆ. ಕಷ್ಟಪಟ್ಟು ಹುಡುಕಿ ಒಂದು photo ಹಾಕಿದ್ದೇನೆ ನೋಡಿ.

ಡಾ. ಈಶ್ವರ ಶಾಸ್ತ್ರಿ ಮೋಟಿನಸರ said...

ಒಂದೇ ವಸ್ಥುವು ತನ್ನ ಸ್ಥಾನ ಬೇಧದಿಂದ ತನ್ನ ಮೌಲ್ಯವನ್ನು ಬದಲಾಯಿಸಿಕೊಳ್ಳುತ್ತದೆ ಎಂಬುದಕ್ಕೆ ನೆಗಡಿ ಬುಗುಡಿಗಳ ಉದಾಹರಣೆ ಕೊಡಬಹುದು "ನಿಗಡಿಯಂತಾ ರೋಗವಿಲ್ಲ ಬುಗುಡಿಯಂತಾ ಆಭರಣವಿಲ್ಲ" ಎಂದು ಉತ್ತರಕನ್ನಡ ಜಿಲ್ಲೆಯವರು ಹೇಳಿದರೆ ಉತ್ತರ ಕರ್ನಾಟಕದ ಜನರು "ನೆಗಡಿ ರೋಗವಲ್ಲ.ಬುಗುಡಿ ವಸ್ತಾ/ವಸ್ತು ಅಲ್ಲ".ಹೇಳುತ್ತಾರೆ,(ವಸ್ತಾ / ವಸ್ತು ಎಂದರೆ ಆಭರಣ)

Seema S. Hegde said...

@ ಈಶ್ವರ ಶಾಸ್ತ್ರಿ ಮೋಟಿನಸರ,
ಧನ್ಯವಾದಗಳು ಹೊಸ ವಿಚಾರವನ್ನು ಪರಿಚಯಿಸಿದ್ದಕ್ಕೆ :)