ನಮ್ಮೂರು ಶಿರಸಿಯಿಂದ ಬೆಂಗಳೂರಿಗೆ ಮಗನ ಮನೆಗೆ
ಅಪ್ಪ ಬಂದಿದ್ದರು. ರಾತ್ರಿ ಅವರ ಕಾಲಿಗೆ ಬಾಳೇಕಾಯಿ ಕಸ ಬಂತು. ‘ಕಸ ಬರುವುದು’ ಎಂದರೆ
ಸ್ನಾಯುಸೆಳೆತ ಉಂಟಾಗುವುದು ಎಂದರ್ಥ. ಅದನ್ನು ‘ಕಸ’ ಎಂದು ಯಾಕೆ ಕರೆಯುತ್ತಾರೆ ಎನ್ನುವುದು ನನಗೂ ಗೊತ್ತಿಲ್ಲ.
ಕೆಲವೊಮ್ಮೆ ದೇಹದ ಯಾವುದಾದರೂ ಭಾಗದಲ್ಲಿ ತೀವ್ರವಾದ ಸ್ನಾಯುಸೆಳೆತ ಉಂಟಾದರೆ ಆ ಭಾಗದ ಸ್ನಾಯುಗಳು
ಒಂದು ಬಾಳೆಕಾಯಿಯಷ್ಟು ದೊಡ್ಡದಾಗಿ ಉಬ್ಬಿಕೊಂಡುಬಿಡುತ್ತವೆ. ನೋಡಲು ಒಂದು ಸಣ್ಣ ಬಾಳೆಕಾಯಿ ಅಂಟಿಕೊಂಡಿರುವಂತೆ
ಕಾಣಿಸುತ್ತದೆ. ಆ ರೀತಿ ಆಗುವುದನ್ನು ‘ಬಾಳೇಕಾಯಿ ಕಸ’ ಬರುವುದು ಎನ್ನುತಾರೆ. ಇನ್ನೂ ಕೆಲವರು ‘ಬಾಳೇಕಾಯಿ ಬಂದಿದೆ’ ಎಂದಷ್ಟೇ ಹೇಳುವುದೂ
ಉಂಟು. ವಯಸ್ಸಾದಮೇಲೆ ಸ್ನಾಯುಗಳು ಬಲಹೀನವಾದಮೇಲೆ ಇದು ಪದೇಪದೇ ಬರುವುದುಂಟು. ಆ ರೀತಿ ಬಾಳೇಕಾಯಿ
ಬಂದಾಗ ಉಂಟಾಗುವ ನೋವು ಅತ್ಯಂತ ತೀವ್ರ ತರದ್ದು; ಸಾಮಾನ್ಯದ ನೋವುನಿವಾರಕಗಳಿಗೆ ಕಡಿಮೆಯಾಗುವುದಿಲ್ಲ.
ಆ ರೀತಿ ಬಾಳೇಕಾಯಿ ಬಂದು ರಾತ್ರಿಯಿಡೀ ಗೋಳಾಡಿಡ
ಅಪ್ಪನನ್ನು ಮರುದಿನ ಮಗ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದ. ಡಾಕ್ಟರು “ಏನಾಯಿತು?” ಎಂದರು. ಮಗ
ಬಾಯಿಬಿಡುವಷ್ಟರಲ್ಲಿ ಅಪ್ಪ, “ಡಾಕ್ಟ್ರೇ, ಯಂತಾ ಮಾಡದು...
ನಿನ್ನೆ ರಾತ್ರೆ ಬಾಳೇಕಾಯಿ ಬಂದು.... ವಂದೇಸಮ ಜಗ್ತಾ... ಶಳ್ತಾ ಅಂದ್ರೇ... ರಾತ್ರಿಡೀ
ನಿದ್ದಿಲ್ಲಾಳಿ, ಗುಳ್ಗೆ ತಗಂಡ್ರೂ ಬಗ್ಲಿಲ್ಲಾ....
ನಾ ಇಲ್ದೋದ್ರೆ ಊರಲ್ಲೆಲ್ಲಾ ಇದ್ದಾಗ ಈ ಗುಳ್ಗೆ ಗಿಳ್ಗೆ ಯಲ್ಲಾ ತಗಳದಿಲ್ಲಾ ಹೇಳಿ. ನಮ್ದೆಂತಾ
ಇದ್ರೂ ತೈಲ ಹಚ್ಚಿ ತಿಕ್ಕದೇಯಾ. ಇಲ್ ಬಂದ್ಕಂಡು ಯಂತಾರೂ ಪರಾಮಶಿ ಆಗದು ಬ್ಯಾಡಾ ಹೇಳಿ... ಇದೆ
ಇಂವ ಕೊಟ್ಟ ಗುಳ್ಗೆ ತಗಂಡೆ”. ಮುಂದೆ ನಾನು ಹೇಳಬೇಕಾಗಿಲ್ಲ. ಡಾಕ್ಟರು ಕಣ್ಣು ಕಣ್ಣು ಬಿಟ್ಟರು, ಅರ್ಥವಾಗಲಿಲ್ಲ. ಅಪ್ಪ ಮುಂದುವರಿಸಬೇಕೆನ್ನುವಷ್ಟರಲ್ಲಿ ಮಗ ಅವನನ್ನು ತಡೆದು, ಕನ್ನಡವನ್ನು ಕನ್ನಡಕ್ಕೆ “translate” ಮಾಡಿ, ಡಾಕ್ಟರಿಗೆ ಅರ್ಥವಾಗುವ ಕನ್ನಡದಲ್ಲಿ ಹೇಳಿದ, “ನಿನ್ನೆ ರಾತ್ರಿ
ಅವರಿಗೆ muscle catch ಆಗಿ, ತುಂಬಾ pain ಆಯ್ತು. Pain killer
tablet ಮತ್ತೆ spray ನಲ್ಲಿ ಕೂಡ
ಕಡಿಮೆಯಾಗಲಿಲ್ಲ. ಅದಕ್ಕೆ ತಮ್ಮ ಹತ್ತಿರ....”
ಉತ್ತರ ಕನ್ನಡದಲ್ಲಿ, ಅದರಲ್ಲೂ ವಿಶೇಷವಾಗಿ ಹವ್ಯಕರಲ್ಲಿ ಅನೇಕ ರೀತಿಯ ವಿಚಿತ್ರವಾದ ಪದಗಳಿವೆ.
ಇತರರಿಗೆ ಅವುಗಳನ್ನು ಮೊದಲಬಾರಿಗೆ ಕೇಳಿದರೆ ಅರ್ಥವೇ ಆಗುವುದಿಲ್ಲ. ಉದಾಹರಣೆಗೆ, ‘ಪರಾಮಶಿ’ ಎಂದರೆ ಅತಿಸಣ್ಣ ಪ್ರಮಾಣದ ಅನಾಹುತ. ‘ಕಪ್ಪು’ ಎಂದರೆ ಚುಚ್ಚು. ‘ಮುಳ್ಳು ಕಪ್ಪಿತು’ ಎಂದರೆ ಮುಳ್ಳು ಚುಚ್ಚಿತು ಎಂದರ್ಥ. ‘ಹರುಕು ಅಥವಾ ಗಿಬುರು’ ಎಂಬುದರ ಅರ್ಥ ‘ಪರಚು’. ಬೆಕ್ಕು ಪರಚಿತು
ಎನ್ನುವುದನ್ನು ‘ಬೆಕ್ಕು ಹರುಕಿತು
ಅಥವಾ ಬೆಕ್ಕು ಗಿಬುರಿತು’ ಎಂದು ಹೇಳುತ್ತಾರೆ.
‘ಅರಚು ಅಥವಾ ಅರ್ಚು’- ಯಾವುದಾದರೂ ಎರಡು ವಸ್ತುಗಳ ನಡುವೆ ಸಿಕ್ಕುಬಿದ್ದು ಪೆಟ್ಟಾಗುವುದು
ಉದಾ: “ಬಾಗಿಲಿಗೆ ಸಿಕ್ಕಿ ಕೈಬೆರಳು ಅರ್ಚಿ ಹೋಯಿತು”.
ಅದೆಲ್ಲಾ ಹೊಗಲಿ, ‘ನೋವಾಗುತ್ತಿದೆ’ ಎನ್ನುವುದನ್ನು ಉತ್ತರ ಕನ್ನಡದ ಜನರು ಎಷ್ಟೆಲ್ಲಾ ಶಬ್ದಗಳನ್ನು ಬಳಸಿ
ಹೇಳುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನೋಯ್ತು, ಶಳಿತು, ವಡಿತು, ಜಗಿತು, ಘಮಿತು, ಭುಗುಭುಗು ಗುಡ್ತು
ಹೀಗೇ ಇನ್ನೂ ಹಲವಾರು. But each term corresponds to a
different type of pain or sensation or sometimes to a pain in
different parts of the body. ವಿವರಿಸುವುದು
ಅತ್ಯಂತ ಕಷ್ಟ. ಅದು ಅಲ್ಲೇ
ಹುಟ್ಟಿ ಬೆಳೆದವರಿಗೆ ಮಾತ್ರ ಗೊತ್ತಾಗಬಹುದೇನೊ! ಉದಾಹರಣೆಗೆ,
ನೋವು: ಸಾಮಾನ್ಯವಾಗಿ
ಎಲ್ಲರೂ ಹೇಳುವಂಥದು. ದೇಹದ ಯಾವುದೇ ಭಾಗಕ್ಕೆ ಗಾಯವಾಗದೇ ಪೆಟ್ಟಾದಾಗ ಆಗುವಂಥದು. ಆದರೆ
ಪೆಟ್ಟಾಗದೇ ಬಂದಂಥ ನೋವೂ ಕೂಡ ಇರಬಹುದು. ಉದಾ: ತಲೆ, ಬೆನ್ನು, ಸೊಂಟ, ಕಾಲು, ಕೈ ನೋವು.
ಸೆಳೆತ (ಶಳ್ತ): ಒಂದು
ಭಾಗವನ್ನು ಎಲ್ಲಾ ಕಡೆಯಿಂದ ಎಳೆದಂತಾಗುವ ನೋವು. ಊತುಕೊಂಡು ನೋವಾಗುವುದು, ಜಜ್ಜಿದಂತಾಗಿ ನೋವಾಗುವುದು ಕೂಡ ಸೆಳೆತದಲ್ಲಿ ಸೇರಿಕೊಳ್ಳುತ್ತವೆ. ಉದಾ: ಬಾಗಿಲಿಗೆ ಸಿಕ್ಕಿ ಅರ್ಚಿಹೋದ ಕೈಬೆರಳು ಸೆಳೆಯುತ್ತದೆ (ಶಳಿಯುತ್ತದೆ).
ವಡೆತ (ವಡ್ತ): ಖುರುವಿನಂತ ಹುಣ್ಣಾದಾಗ ನೋಯುವ ಪರಿ. ಈ
ಶಳ್ತ-ವಡ್ತಗಳನ್ನು ಬಹಳಷ್ಟು ಸಲ ಜೊತೆಯಾಗಿ ಉಪಯೋಗಿಸುತ್ತಾರೆ; ಶಳ್ತಾs-ವಡ್ತಾs ಎಂದು. ತಲೆ ಒಂದೇ ಸಮ
ಹೊಡೆದುಕೊಳ್ಳುತ್ತಿದೆ ಎನ್ನುವುದಕ್ಕೂ ಕೂಡ ಉಪಯೋಗಿಸುತ್ತಾರೆ, ‘ತಲೆವಡ್ತ’ ಎಂದು! ಎಷ್ಟೋ ಸಲ ಸೆಳೆತ ಮತ್ತು
ವಡೆತಗಳನ್ನು ಬದಲಿಯಾಗಿ ಉಪಯೋಗಿಸುತ್ತಾರೆ. ಆದರೆ ‘ತಲೆವಡ್ತ’ದ ಬದಲು ‘ತಲೆಶಳ್ತ’ ಎಂದರೆ ನಗೆಪಾಟಲಿಗೆ
ಗುರಿಯಾಗುತ್ತೀರಿ. ಏಕೆಂದರೆ ಅದು ಬಳಕೆಯಲ್ಲಿಲ್ಲ!
ಜಗಿತ (ಜಗ್ತ): ಇಕ್ಕಳವನ್ನು ಹಾಕಿ
ಒತ್ತಿ-ಬಿಟ್ಟು ಮಾಡಿದರೆ ಆಗುವಂಥ ನೋವು. ಬಹುತೇಕ ಕಾಲು, ಕೈಗಳ ನೋವನ್ನು ಹೇಳುವಾಗ ಉಪಯೋಗಿಸುತ್ತಾರೆ- “ಕಾಲು ಜಗಿಯುತ್ತಿದೆ” ಎಂದು. ನೆನಪಿರಲಿ, ತಲೆ ಜಗಿಯುತ್ತಿದೆ
ಎಂದು ಮಾತ್ರ ಯಾರೂ ಹೇಳುವುದಿಲ್ಲ!
ಘಮಿತ: ಖಾರದ ಪದಾರ್ಥ ತಾಕಿದಾಗ ಆಗುವ ಅನುಭವ.
ಉದಾ: “ಮೆಣಸಿನ ಪುಡಿ ಮುಟ್ಟಿದ್ದರಿಂದ ಕೈ ಘಮಿಯುತ್ತಿದೆ”.
ಭುಗುಭುಗು ಗುಡು: ಸಾಮಾನ್ಯವಾಗಿ ಅಂಗಾಲಿನಲ್ಲಿ
ಉಂಟಾಗುವ ಅನುಭವಕ್ಕೆ ಬಳಸುವಂಥದ್ದು. ಬೆಂಕಿಯ ಉರಿ ತಾಕಿದಾಗ ಆಗುವಂಥ ಅನುಭವ. ಉದಾ: “ಬಿಸಿಲಿನಲ್ಲಿ ತುಂಬಾ ನಡೆದಿದ್ದರಿಂದ ಅಂಗಾಲು ಭುಗುಭುಗು ಗುಡುತ್ತಿದೆ”. ಬಿಸಿ ತಾಕಿ ಸುಟ್ಟ ಉರಿಯನ್ನೂ ಕೂಡ ಹೀಗೆ ಹೇಳಬಹುದು.
ಇಷ್ಟೆಲ್ಲಾ ವಿವರಿಸಿದ ಮೇಲೆಯೂ ಎಲ್ಲವನ್ನೂ
ಹೇಳಿದ್ದೇನೆ ಎನ್ನುವ ಭರವಸೆಯಿಲ್ಲ. ಇನ್ನೂ ಹಲವಾರು ನೋವಿಗೆ ಸಂಭಂದಿಸಿದ ಶಬ್ದಗಳು
ಉಳಿದುಹೋಗಿರಬಹುದು. ನೋವನ್ನು ಇಷ್ಟೆಲ್ಲಾ ಬಗೆಯಲ್ಲಿ ಬಣ್ಣಿಸಬಹುದು, ಮತ್ತು ನೋವಿನಲ್ಲಿರುವ ಆ ಸಣ್ಣ-ಪುಟ್ಟ ವ್ಯತ್ಯಾಸಗಳನ್ನೂ ಕೂಡ differentiate
ಮಾಡಬಹುದು ಎಂಬುದನ್ನು ವಿಚಾರ ಮಾಡಿದರೆ ಆಶ್ಚರ್ಯವಾಗುತ್ತದೆ!