ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು.
ಇದೆಂಥ ಸುಂದರ ಗಾದೆ ಗೊತ್ತಾ? ನನ್ನ ಅತ್ಯಂತ ಪ್ರೀತಿಯ
ಗಾದೆಗಳಲ್ಲೊಂದು. ಈ ಗಾದೆಯನ್ನು ನಾನು ಮೊಟ್ಟಮೊದಲ ಬಾರಿ ಕೇಳಿದ್ದು ಚಿಕ್ಕವಳಿದ್ದಾಗ ಗದ್ದೆನಾಟಿಯ
ಸಮಯದಲ್ಲಿ. ಗದ್ದೆನಾಟಿ ಮಾಡುವಾಗ ಭತ್ತದ ಸಸಿಯನ್ನು ನೆಡುತ್ತಾ ಹಿಮ್ಮುಖವಾಗಿ
ಹೋಗುತ್ತಿರುತ್ತಾರೆ. ಒಂದು ಗದ್ದೆಯನ್ನು ಪ್ರಾರಂಭಿಸಿದಾಗ ಹಿಂದಿರುಗಿ ನೋಡಿದರೆ ಅದು
ಮುಗಿಯುವುದೇ ಇಲ್ಲ ಎನ್ನುವಷ್ಟು ದೂರವಾಗಿ ಕಾಣಿಸುತ್ತದೆ. ಆಗ ನಾಟಿ ಮಾಡುತ್ತಿರುವವರಿಗೆ Negative
feelings ಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ ನಾಟಿಯ ಸಮಯದಲ್ಲಿ ಅಲ್ಲಿರುವ ಹಿರಿಯರು ಕಿರಿಯರಿಗೆ ಹಿಂದಿರುಗಿ ನೋಡಲು
ಬಿಡುವುದಿಲ್ಲ. ಒಂದು ಸಲ ಯಾರೋ ಹಿಂದಿರುಗಿ ನೋಡಿ “ಇದೇನು ಮುಗಿಯುವ ರೀತಿಯೇ ಕಾಣಿಸುತ್ತಿಲ್ಲವಲ್ಲ?” ಎಂದಾಗ ಅಲ್ಲಿರುವ
ಹಿರಿಯರು ಯಾರೋ ಹೀಗೆ ಹೇಳಿದ್ದರು, “ಸುಮ್ಮನಿರು, ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು”. ನಿಜ, ಕಣ್ಣಳತೆ ಯಾವತ್ತೂ
ಬೆಚ್ಚಿಬೀಳಿಸುತ್ತದೆ. “ಅಯ್ಯೋ ಇಷ್ಟೆಲ್ಲಾ ಕೆಲಸವನ್ನು ಮುಗಿಸುವುದು ಹೇಗಪ್ಪಾ?” ಎನ್ನುವ ಭಾವನೆಯನ್ನು
ಹುಟ್ಟಿಸುತ್ತದೆ. ಆದರೆ ಕೆಲಸವನ್ನು ಪ್ರಾರಂಬಿಸಿದರೆ ಅದು ತಾನಾಗಿಯೇ ಮುಗಿಯುತ್ತಾ ಬರುತ್ತದೆ. A journey
of thousand miles begins with a single step! ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ
ಬರೆಯಲಿಕ್ಕಿರುವ ಪುಟಗಳ ಸಂಖ್ಯೆಯನ್ನು ನೋಡಿ ಭಯಬಿದ್ದು ನನಗೇ ನಾನು ಹೇಳಿಕೊಳ್ಳುತ್ತಿದ್ದೆ- “ಇಲ್ಲ.. ಇಲ್ಲ, ಬರೆಯುತ್ತಾ ಹೋದಂತೆ ಗೊತ್ತೇ ಆಗದಂತೆ
ಮುಗಿದುಹೋಗುತ್ತದೆ; ಕಣ್ಣು ಹೆದರಿಸಿತ್ತು, ಕೈ ಗೆಲ್ಲಿಸಿತ್ತು” ಎಂದು. ಇಂದೂ ಕೂಡ ಎಷ್ಟೊಂದು
ಬಾರಿ ನನಗೇ ನಾನು ಈ ಮಾತನ್ನು ಹೇಳಿಕೊಳ್ಳುತ್ತೇನೆ; ಕೆಲಸ ಮಾಡುವ ಉತ್ಸಾಹ ಬರುತ್ತದೆ.