January 28, 2011

ಪೇಸ್-ಭೂಪತಿ ಕ್ವಾರ್ಟರ್ ಫೈನಲ್ ಗೆ


ಇದೇನಿದು? ಅವರು ಆಗಲೇ ಸೆಮಿ ಫೈನಲ್ ಗೆ ಹೋಗಿದ್ದಾಯ್ತಲ್ಲ ಎಂದುಕೊಳ್ಳುತ್ತಿದ್ದೀರಾ? ಹೌದು, ನಾನು ಬರೆಯುವುದನ್ನು ತಡ ಮಾಡಿದೆ. ಮೊನ್ನೆ ಜನವರಿ 25, ಮಂಗಳವಾರ, ಕನ್ನಡ ಪ್ರಭದ ಕೊನೆಯ ಪುಟದಲ್ಲಿ ಕ್ರೀಡಾ ಸುದ್ದಿಯಲ್ಲಿ ಹೀಗಿತ್ತು (ಫೋಟೋ ನೋಡಿ). ಒಂದು ಪಕ್ಕದಲ್ಲ್ಲಿ 'ತಾರುಣ್ಯದ ಪರಿಚಯ' ಇದ್ದಿದ್ದರಿಂದ ಬಿಳಿಯ ಹಾಳೆಯನ್ನು ಇಟ್ಟಿದ್ದೇನೆ! ಪೇಪರ್ ನೋಡಿದ ತಕ್ಷಣ ರಾಜೀವ ಬಂದು ನನ್ನ ಮುಖಕ್ಕೆ ಹಿಡಿದು ಇದನ್ನು ಓದು ಎಂದ. ನಾನು ಓದಿದೆ. ಅರೆ! ಇದೇನು ಬರೆದಿದ್ದಾರೆ ಎಂದು ಯೋಚನೆ ಮಾಡುವಷ್ಟರಲ್ಲಿ ರಾಜೀವ ನಕ್ಕು- "ನೀನೂ ಕೂಡ ಹಾಗೆ ಓದಿದ್ಯ" ಎಂದ.












ಮುಂದಿನ ಎರಡು ದಿನಗಳಲ್ಲಿ ಹದಿನಾಲ್ಕು ಜನರ ಕೈಗೆ ಕೊಟ್ಟು ಓದಲು ಹೇಳಿದೆ- ನೀವಂದುಕೊಂಡಿದ್ದು ಸರಿ. ಅವರೂ ಹಾಗೆಯೇ ಓದಿದರು- "ಮಾನ ಕಳೆದ ಪೇಸ್-ಭೂಪತಿ ಕ್ವಾರ್ಟರ್ ಫೈನಲ್ ಗೆ" ಎಂದು! ಕನ್ನಡ ಪ್ರಭದಲ್ಲಿ ಬರೆಯುವವರಿಗೆ ಭಾಷೆಯಲ್ಲಂತೂ ಪ್ರೌಢಿಮೆಯಿದ್ದಂತೆ ಕಾಣುವುದಿಲ್ಲ. ಅಷ್ಟೇ ಅಲ್ಲದೆ ಪ್ರತಿ ದಿನದ ಪೇಪರ್ ನಲ್ಲಿ ಎಷ್ಟೊಂದು ತಪ್ಪುಗಳೂ ಕೂಡ ಮೇಲ್ನೋಟಕ್ಕೇ ಕಾಣ ಸಿಗುತ್ತವೆ. ಈ ಕ್ರೀಡಾ ಸುದ್ದಿಯಲ್ಲಿ font size ಸ್ವಲ್ಪ ಬೇರೆ ಇದೆ ನಿಜ. ಆದರೆ ನಮ್ಮಕಣ್ಣು ಮೊದಲು ಗ್ರಹಿಸುವುದು ಚಿತ್ರ ಮತ್ತು ಬಣ್ಣವನ್ನು ಅಲ್ಲವಾ? ಒಂದು ವೇಳೆ 'ಮಾನ ಕಳೆದ' ವನ್ನು ಕೆಂಪು ಬಣ್ಣದಲ್ಲಿ ಮುದ್ರಿಸಿದ್ದರೆ ಎಲ್ಲರೂ 'ಮಾನ ಕಳೆದ ಕಲ್ಮಾಡಿ ಮನೆಗೆ' ಎಂದು ಓದುತ್ತಿದ್ದರು ಅನಿಸುತ್ತದೆ.


ಪೇಪರ್ ನವರು ಮಾಡುವ ಅನಾಹುತ ಒಂದೆರಡಲ್ಲ. ಕೆಲವು ವರ್ಷಗಳ ಹಿಂದೆ ಶಿರಸಿಯ local ಪೇಪರ್ 'ಲೋಕ ಧ್ವನಿ' (ಜನರು ಅದನ್ನು 'ಲೋಕಲ್ ಧ್ವನಿ' ಎಂದೇ ಕರೆಯುತ್ತಾರೆ) ಯಲ್ಲಿ 'ತಟ್ಟಿಕೈ ರಾಮ ಭಟ್ಟರಿಗೆ ಪತ್ನಿ ಯೋಗ' ಎಂದು ಬರೆದಿತ್ತು. ತಟ್ಟಿಕೈ ಊರಿನ ರಾಮ ಭಟ್ಟರು ನನ್ನ ಅಜ್ಜನ cousin. ಅವರ ಪತ್ನಿ ತೀರಿಹೋಗಿ ಎರಡು ದಿನ ಆಗಿತ್ತು. ಲೋಕ ಧ್ವನಿ ರಾಮ ಭಟ್ಟರಿಗೆ 'ಪತ್ನಿ ವಿಯೋಗ' ದ ಬದಲು 'ಪತ್ನಿ ಯೋಗ' ವನ್ನೊದಗಿಸಿತ್ತು!

ಇನ್ನೂ ಒಂದು ಘಟನೆ- ಒಂದೆರಡು ವರ್ಷಗಳ ಹಿಂದೆ ನಮ್ಮ ನೆಂಟರಲ್ಲಿ ಒಬ್ಬನ ಮದುವೆ ಅವನ ಅಜ್ಜ ತೀರಿಹೊಗಿದ್ದರಿಂದ ಮುಂದೂಡಲ್ಪಟ್ಟಿತು. ಹೇಳಲು ಸಾಧ್ಯವಿದ್ದಲ್ಲೆಲ್ಲ ಅವರು phone ಮಾಡಿ ತಿಳಿಸಿ ನಂತರ ವಿಷಯವನ್ನು ಲೋಕ ಧ್ವನಿಗೆ ಕೊಟ್ಟರು. ಮರುದಿನದ ಲೋಕಧ್ವನಿಯಲ್ಲಿ- 'ಎಮ್ಮೆ ಹೊಂಡಕ್ಕೆ ಬಿದ್ದು ಸಾವು ಮದುವೆ ಮುಂದೂಡಿಕೆ' ಎಂದು ಬಂತು. 'ಎಮ್ಮೆ ಹೊಂಡಕ್ಕೆ ಬಿದ್ದು ಸಾವು' ಮತ್ತು 'ಮದುವೆ ಮುಂದೂಡಿಕೆ' ಗಳ ನಡುವೆ ಅಂತರ ತೀರಾ ಸ್ವಲ್ಪ ಇತ್ತು. ನನ್ನ ಅಜ್ಜಿ (ಆಗ 90 ವರ್ಷ ವಯಸ್ಸು ಅವರಿಗೆ) ಪೇಪರ್ ಓದಿದ ನಂತರ ಸ್ವಲ್ಪ ಸಿಟ್ಟು ಮಾಡಿಕೊಂಡು ಹೇಳಿದ್ದರು- "ವಯಸ್ಸಾದವರು ಎಂದರೆ ಈಗಿನ ಕಾಲದ ಜನರಿಗೆ ಸ್ವಲ್ಪವೂ ಗೌರವ ಇಲ್ಲ. ಅಜ್ಜ ತೀರಿಹೊಗಿದ್ದಾನೆ ಎಂದು ಕೊಡದೆ ಎಮ್ಮೆ ಸತ್ತು ಹೋಗಿದ್ದರಿಂದ ಮದುವೆ ಮುಂದೆ ಹೋಗಿದೆ ಎಂದು ಕೊಟ್ಟಿದ್ದಾರೆ ಪೇಪರ್ ಗೆ" ಎಂದು. ಅವರೇನೋ 'ಅನಿವಾರ್ಯ ಕಾರಣಗಳಿಂದ' ಎಂದು ಕೊಟ್ಟಿದ್ದರು. ಆದರೆ ಅಜ್ಜಿಗೆ ಇದನ್ನು ಅರ್ಥಮಾಡಿಸುವಷ್ಟರಲ್ಲಿ ಸಾಕು ಸಾಕಾಗಿತ್ತು!

January 7, 2011

ಕೋಡ ಕೋಡ ಹೆಣ್ಣುಮಕ್ಕಳಿಗೆ (ಉತ್ತರ ಕನ್ನಡದ ಗಾದೆ – 247)

ಕೋಡ ಕೋಡ ಹೆಣ್ಣುಮಕ್ಕಳಿಗೆ ಕೋಡುಬಳೆಯೇ ಕಜ್ಜಾಯ.
ಕೋಡ= ಕೊಡಗ= ಮಂಗ. ಕೋಡುಬಳೆಯನ್ನು ಯಾರೂ ಸಾಮಾನ್ಯವಾಗಿ ಕಜ್ಜಾಯ ಎಂದು ಪರಿಗಣಿಸುವುದಿಲ್ಲ.
ಮಂಗಗಳಂತೆ ನಡುವಳಿಕೆಯುಳ್ಳ ಹೆಣ್ಣುಮಕ್ಕಳಿಗೆ ಕೋಡುಬಳೆಯನ್ನೇ ಕಜ್ಜಾಯವೆಂದು ನೀಡುತ್ತಾರೆ; ಅವರ ಯೋಗ್ಯತೆಗೆ ಅದೇ ಸಾಕು ಎಂದು. ಹಗುರವಾದ ವ್ಯಕ್ತಿತ್ವವುಳ್ಳವರನ್ನು ಇತರರು ಯಾವುದೋ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಅಂಥವರಿಗೆ ಕೊಡುವ ಬೆಲೆ ಕಡಿಮೆ ಎಂಬರ್ಥದ ಗಾದೆ.