November 28, 2008

ಒಬ್ಬನೇ(ಳೇ) ಇದ್ದರೆ (ಉತ್ತರ ಕನ್ನಡದ ಗಾದೆ – 228 ಮತ್ತು 229 )

ಒಬ್ಬನೇ(ಳೇ) ಇದ್ದರೆ ಹೆದರಿ ಸಾಯುತ್ತಾನೆ(ಳೆ), ಇಬ್ಬರಿದ್ದರೆ ಹೊಡೆದಾಡಿ ಸಾಯುತ್ತಾರೆ.
ಒಟ್ಟಿಗಿಲ್ಲದಿದ್ದಾಗ ಕಸಿವಿಸಿಯಾಗುತ್ತದೆ, ಒಟ್ಟಿಗಿದ್ದರೆ ಯಾವಾಗಲೂ ಜಗಳವೇ ಎನ್ನುವ ಸಂದರ್ಭದಲ್ಲಿ ಇದನ್ನು ಉಪಯೋಗಿಸಬಹುದು. ಇದೇ ರೀತಿಯ ಇನ್ನೊಂದು ಗಾದೆ- ಕಾಣದಿದ್ದರೆ ಬೇಸರಿಕೆ, ಕಂಡರೆ ವಾಕರಿಕೆ.

November 26, 2008

ನಡುಗಿದವನನ್ನು (ಉತ್ತರ ಕನ್ನಡದ ಗಾದೆ – 227)

ನಡುಗಿದವನನ್ನು ನಡುಗಿಸಿತ್ತು, ಮುಡುಗಿದವನನ್ನು ಮುಡುಗಿಸಿತ್ತು, ಎದ್ದೋಡುವವನ ಜೊತೆ ಗುದ್ದಾಡಲಾರೆನೋ ಎಂದಿತ್ತು ಚಳಿ.
ಮುದುರಿಕೊಂಡು ಕುಳಿತಿದ್ದರೆ ಚಳಿ ಇನ್ನೂ ಜಾಸ್ತಿಯಾದಂತೆ ಅನಿಸುತ್ತದೆ. ಎದ್ದು ಕೆಲಸ ಮಾಡಿದರೆ ಅಷ್ಟೊಂದು ಚಳಿ ಎನಿಸುವುದಿಲ್ಲ ಎನ್ನುವಾಗ ಹೇಳುತ್ತಾರೆ. ಹೀಗೇ ಸ್ವಲ್ಪ flash‑back… ಚಿಕ್ಕವರಿದ್ದಾಗ (ಈಗ ಊರಿಗೆ ಹೋದಾಗಲೂ ಸಹ) ಚಳಿಗಾಲದಲ್ಲಿ ನಾನು, ರಘು ಎದ್ದ ಕೂಡಲೇ ಬಚ್ಚಲು ಒಲೆಯ ಮುಂದೆ ಕುಳಿತುಬಿಡುತ್ತಿದ್ದೆವು- ಇನ್ನೊಬ್ಬರು ಮೊದಲು ಸ್ನಾನಕ್ಕೆ ಹೋಗಲಿ ಎಂಬ ಆಶಯದಲ್ಲಿ, ವಾದಾಟದಲ್ಲಿ. ಅಪ್ಪ, ಅಮ್ಮರ ಕಣ್ಣು ತಪ್ಪಿಸಿ ಹಾಸಿಗೆಯಲ್ಲಿ ನಾವು ಮುಚ್ಚಿಟ್ಟು ಮಲಗಿಸಿಕೊಂಡ ಪಾಲಿ, ನಮ್ಮನೆಯ ಬೆಕ್ಕು ನಮಗಿಂತ ಮೊದಲೇ ಎದ್ದು ಹೋಗಿ ಅಮ್ಮನ ಕಾಲು ಸುತ್ತಿ, "ಥೋ ಯನ್ನ ವೈತರಣಿ ನದಿಯಲ್ಲಿ ಬೀಳ್ಸಿ ಹಾಕಡ್ದೇ" ಎಂದು ಬೈಸಿಕೊಂಡು, ಅಮ್ಮನ ಹಿಂದೆ ಮುಂದೆ ಎಡೆಬಿಡದೆ ಸುತ್ತಿ ಹಾಲು ಹಾಕಿಸಿಕೊಂಡು ಕುಡಿದು, ಕೈಕಾಲು, ಮುಖ ಎಲ್ಲ ನೆಕ್ಕಿಕೊಂಡು ಬಚ್ಚಲು ಒಲೆಯ ಮುಂದೆ ಗುರ್ರ್... ಗುರ್ರ್... ಎಂದು ಸದ್ದು ಮಾಡುತ್ತಾ ನಮಗಾಗಿ ಕಾಯುತ್ತಿರುತ್ತಿತ್ತು. ನಾನು, ರಘು ಅದರ ಜೊತೆ ಆಟವಾಡುತ್ತಾ, ಅಲ್ಲಿಗೆ ಬಂದು ನಮ್ಮ ಕಿವಿಗೆ ತಮ್ಮ ತಣ್ಣನೆಯ ಮೂಗನ್ನು ತಾಗಿಸುತ್ತಿದ್ದ ನಾಯಿಗಳು ಜ್ಯೂಲಿ ಮತ್ತು ಮೋಗ್ಲಿಯ ಜೊತೆ ಆಟವಾಡುತ್ತಾ ಕುಳಿತುಬಿಡುತ್ತಿದ್ದೆವು. ಅಜ್ಜ ನಮ್ಮ ಜೊತೆಯೇ ಕುಳಿತಿರುತ್ತಿದ್ದರು. ಅಮ್ಮ ಅಜ್ಜನಿಗೆ ಅಲ್ಲಿಯೇ ಚಹಾ ತಂದು ಕೊಡುತ್ತಿದ್ದಳು. ಅಪ್ಪ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದರೆ ಅಮ್ಮ ಅಡುಗೆ ಮನೆಯಲ್ಲಿ ದೋಸೆಯ ತಯಾರಿಯಲ್ಲಿರುತ್ತಿದ್ದಳು. ನಾವು ಶಾಲೆಗೆ ಹೊತ್ತಾಗುತ್ತದೆ ಎಂಬ ಪರಿವೆಯಿಲ್ಲದೆ ಬೆಕ್ಕು, ನಾಯಿಗಳ ಜೊತೆ ಆಟವಾಡುವುದರಲ್ಲಿ ಕಳೆಯುತ್ತಿದ್ದೆವು. ಯಾರಾದರೂ ಮೊದಲು ಸ್ನಾನಕ್ಕೆ ಹೋಗಿ ಇಲ್ಲವಾದರೆ ಶಾಲೆಗೆ ತಡವಾಗುತ್ತದೆ ಎಂಬ ಮಾತು ಅಮ್ಮನಿಂದ ಬಂದರೆ ನಾವು 'ಚಳಿ' ಎಂಬ ನೆಪ ಒಡ್ಡುತ್ತಿದ್ದೆವು. ಆಗ ಅಜ್ಜ ಈ ಗಾದೆ ಹೇಳುತ್ತಿದ್ದರು. ಈಗ ಅಜ್ಜನೂ ಇಲ್ಲ... ಪಾಲಿ, ಜ್ಯೂಲಿ, ಮೋಗ್ಲಿ ಯಾರೂ ಇಲ್ಲ (ಅವುಗಳ ಜಾಗಕ್ಕೆ ಮುಮ್ಮಡಿ ಪಾಲಿ, ಮುಮ್ಮಡಿ ಜ್ಯೂಲಿ ಮತ್ತು ಇಮ್ಮಡಿ ಮೋಗ್ಲಿ ಬಂದಿದ್ದಾರೆ). ನಾನು, ರಘು ವರ್ಷಕ್ಕೊಮ್ಮೆ ಭೇಟಿಯಾಗುವುದು ಕೂಡ ಕಷ್ಟ.... Good old days... :(

November 25, 2008

ಸ್ವಾರ್ಥವೂ ಆಗಬೇಕು (ಉತ್ತರ ಕನ್ನಡದ ಗಾದೆ – 225 ಮತ್ತು 226 )

ಸ್ವಾರ್ಥವೂ ಆಗಬೇಕು, ಸ್ವಾಮಿ ಸೇವೆಯೂ ಆಗಬೇಕು.
ಒಡೆಯನ ಸೇವೆ ಮಾಡುವ ನೆಪದಲ್ಲಿ ಸ್ವಕಾರ್ಯ ಸಾಧನೆ ಮಾಡಿಕೊಳ್ಳುವವರನ್ನು ಕುರಿತಾದ ಮಾತು ಇದು.
ಬೇರೆಯವರ ಹೆಳೆ, ತನ್ನ ಬೆಳೆ ಎಂದೂ ಕೂಡ ಹೇಳುತ್ತಾರೆ. ಹೆಳೆ ಎಂದರೆ ನೆಪ. ಬೇರೆಯವರಿಗೆ ಸಹಾಯ ಮಾಡುವ ನೆಪದಲ್ಲಿ ತಾನು ಲಾಭ ಮಾಡಿಕೊಳ್ಳುತ್ತಾನೆ(ಳೆ) ಎಂಬ ಅರ್ಥ.

November 24, 2008

ಸೋರೆಯಿಂದ (ಉತ್ತರ ಕನ್ನಡದ ಗಾದೆ – 224)

ಸೋರೆಯಿಂದ ಏಳ (ಏಳುವುದಿಲ್ಲ), ಗುಂಜಿನಿಂದ ಬಿಡ (ಬಿಡುವುದಿಲ್ಲ).
ಸೋರೆ ಮತ್ತು ಗುಂಜು ಎರಡೂ ಹಲಸಿನ ಹಣ್ಣಿನೊಳಗಿನ ಭಾಗಗಳು.
ಹಲಸಿನ ತೊಳೆಯನ್ನು ಸೋರೆಯಿಂದ ಬಿಡಿಸತೊಡಗಿದರೆ ಗುಂಜಿಗೆ ಅಂಟಿಕೊಳ್ಳುತ್ತದೆ, ಗುಂಜಿನಿಂದ ಬಿಡಿಸತೊಡಗಿದರೆ ಸೋರೆಗೆ ಅಂಟಿಕೊಳ್ಳುತ್ತದೆ. ಯಾವ ಕೆಲಸವನ್ನು ಮಾಡಿದರೆ ಸರಿ ಎಂದು ಬಗೆಹರಿಯದೆ ಎರಡರ ನಡುವೆಯೂ ಹೊಯ್ದಾಡುತ್ತಿದ್ದರೆ ಈ ಮಾತು ಅನ್ವಯಿಸುತ್ತದೆ. ಒಮ್ಮೆ ಒಂದು ಸರಿ ಎನಿಸಿದರೆ ಮತ್ತೊಮ್ಮೆ ಇನ್ನೊಂದು ಸರಿ ಎನಿಸುತ್ತದೆ. ಉತ್ತರ ಕನ್ನಡದ ಹವ್ಯಕರಲ್ಲಿ ಇದಕ್ಕೆ 'ಹಲವರಿಯುವುದು' ಎಂಬ ವಿಶೇಷ ಶಬ್ದ ಇದೆ. ಅಂದರೆ ಹಲವಾರು ವಿಚಾರಗಳು ಸರಿ ಎನಿಸುತ್ತವೆ, ಯಾವುದನ್ನು ಅನುಸರಿಸುವುದು ಎಂದು ಗೊತ್ತಾಗುವುದಿಲ್ಲ.

November 22, 2008

ಸಾಲ ಮಾಡಿ (ಉತ್ತರ ಕನ್ನಡದ ಗಾದೆ – 222 ಮತ್ತು 223 )

ಸಾಲ ಮಾಡಿ ಓಲೆ ಮಾಡಿಸಿ ಸಾಲದ ಬಡ್ಡಿಗೆ ಓಲೆ ಮಾರಿದ.
ಕೈಲಾಗದಿದ್ದರೂ ಸಾಲ ಮಾಡಿ ಓಲೆ ಮಾಡಿಸಿದರೆ ಮುಂದೆ ಆ ಸಾಲಕ್ಕೆ ಬಡ್ಡಿ ಬೆಳೆಯುತ್ತಾ ಹೋದಂತೆ ಓಲೆಯನ್ನು ಮಾರಿ ಬಡ್ಡಿಯನ್ನು ತೀರಿಸಬೇಕಾಗುತ್ತದೆ. ಆದರೆ ಸಾಲದ ಅಸಲು ಹಾಗೆಯೇ ಉಳಿದುಕೊಳ್ಳುತ್ತದೆ. ಅದಕ್ಕಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಇನ್ನೂ ಒಂದು ಮಾತಿದೆ ತಲೆಯಿಂದ ಮೇಲೆ ಸಾಲ ಒಲೆಯಿಂದ ಮೇಲೆ ಬೆಂಕಿ ಆಗಬಾರದು ಎಂದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇರುವ ಮಾತೆಂದರೆ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು.

November 21, 2008

ಶಿದ್ದೆಯಂಥ (ಉತ್ತರ ಕನ್ನಡದ ಗಾದೆ – 221)

ಶಿದ್ದೆಯಂಥ ಮಕ್ಕಳಿದ್ದರೆ ಎದ್ದು ಗೇಯುವುದು ಬೇಡ.
'ಶಿದ್ದೆ' ಎಂದರೆ ಬಿದಿರಿನಿಂದ ಮಾಡಿದ ಅಕ್ಕಿ ಅಳೆಯಲು ಉಪಯೋಗಿಸುವ ಮಾಪು. ಅತ್ಯಂತ ಗಟ್ಟಿಯಾಗಿರುತ್ತದೆ. ತಳತಲಾಂತರಗಳಿಂದಲೂ ಮನೆಯಲ್ಲಿ ಇರುವಂಥದು. 'ಗೇಯುವುದು' ಎಂದರೆ ದುಡಿಮೆ ಮಾಡುವುದು.
ಸಮರ್ಥರಾದ ಮಕ್ಕಳಿದ್ದರೆ ಮುದಿಕಾಲಕ್ಕೆ ಕಷ್ಟಪಡುವ ಅಗತ್ಯವಿಲ್ಲ ಎಂಬ ಮಾತು ಇದು.

November 20, 2008

ಮಂಡೆ ಹಿಡಿದರೂ (ಉತ್ತರ ಕನ್ನಡದ ಗಾದೆ – 220)

ಮಂಡೆ ಹಿಡಿದರೂ ಬೋಳು, ಕುಂಡೆ ಹಿಡಿದರೂ ಬೋಳು.
ಈ ಗಾದೆಯನ್ನು ಸಾಮಾನ್ಯವಾಗಿ ಗಂಡಸರು ಬೇಜವಾಬ್ದಾರಿತನವನ್ನು ತೋರಿಸಿದಾಗ ಹೆಂಗಸರು ಹೇಳುತ್ತಾರೆ. ಗಂಡಸರಿಗೆ ಯಾವುದೇ ನಿಯಮಕ್ಕೂ ಅಂಟಿಕೊಳ್ಳುವ ಅಗತ್ಯ ಇಲ್ಲ, ಹೆಚ್ಚು-ಕಮ್ಮಿ ಹೇಗೆ ಬದುಕಿದರೂ ನಡೆಯುತ್ತದೆ, ಯಾವುದಕ್ಕೂ ಗಂಡಸರು ಜಾಸ್ತಿ ತಲೆಕೆಡಿಸಿಕೊಳ್ಳುವವರಲ್ಲ ಎಂಬ ಅಭಿಪ್ರಾಯವನ್ನು ಗಂಡಸರ ಬಗ್ಗೆ ಹೇಳುವಾಗ ಬಳಸುತ್ತಾರೆ. To be on the safer side.... ಇದು ನನ್ನ ವೈಯ್ಯಕ್ತಿಕ ಅಭಿಪ್ರಾಯವಲ್ಲ, ಈ ರೀತಿಯ ಗಾದೆ ಇದೆ :-)

November 19, 2008

ಪಾತ್ರೆಯಲ್ಲಿದ್ದರೆ (ಉತ್ತರ ಕನ್ನಡದ ಗಾದೆ – 219)

ಪಾತ್ರೆಯಲ್ಲಿದ್ದರೆ ಸೌಟಿಗೆ ಬರುತ್ತದೆ.
ಯಾರ ಬಳಿಯಾದರೂ ಒಂದು ವಿಷಯವನ್ನು ಕೇಳಿದಾಗ ಅವರಿಗೆ ಗೊತ್ತಿದ್ದರೆ ಮಾತ್ರ ಹೇಳಲು ಬರುತ್ತದೆ. ಅಥವಾ ಹಣ ಕೂಡ ಅವರ ಬಳಿ ಇದ್ದರೆ ಮಾತ್ರ ಕೊಡಲು ಸಾಧ್ಯವಾಗುತ್ತದೆ ಇಲ್ಲವಾದರೆ ಸಾಧ್ಯವಿಲ್ಲ ಎಂಬ ಎರಡು ಸಂದರ್ಭಗಳಲ್ಲಿ ಬಳಸಬಹುದು. ಗೊತ್ತಿಲ್ಲದ ವಿಷಯವನ್ನು ಗೊತ್ತಿದೆ ಎಂದು ಬಡಾಯಿ ಕೊಚ್ಚಿಕೊಂಡ ಮಾತ್ರಕ್ಕೆ ಆ ವಿಷಯವನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಪಾತ್ರೆಯಲ್ಲಿದ್ದರೆ ತಾನೆ ಸೌಟಿಗೆ ಬರುವುದು?

November 18, 2008

ನೆಗಡಿಯಂತಾ (ಉತ್ತರ ಕನ್ನಡದ ಗಾದೆ – 218)

ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ.
ಎಷ್ಟೊಂದು ರೋಗಗಳಿಗೆ ಔಷಧಗಳಿದ್ದರೂ ನೆಗಡಿಗೆ ಮಾತ್ರ ಸರಿಯಾದ ಔಷಧವಿಲ್ಲ. ನೆಗಡಿ ಔಷಧ ಮಾಡಿದರೆ ಒಂದು ವಾರಕ್ಕೆ ಗುಣವಾಗುತ್ತದೆ, ಔಷಧ ಮಾಡದಿದ್ದರೆ ಏಳು ದಿನಕ್ಕೆ ಗುಣವಾಗುತ್ತದೆ ಎಂಬ ಮಾತಿದೆ. ಎಷ್ಟೊಂದು ಆಭರಣಗಳಿದ್ದರೂ ಅವ್ಯಾವುದೂ ಬುಗುಡಿಗೆ ಸಾಟಿಯಲ್ಲ. ಬುಗುಡಿಗೆ ಅದರದ್ದೇ ಆದ ವಿಶೇಷತೆ ಇದೆ. ಮದುವೆಯಂಥ ಕಾರ್ಯದಲ್ಲಿ ಹೆಂಗಸರು ಹೊಸದಾಗಿ ಕಿವಿ ಚುಚ್ಚಿಕೊಂಡಾದರೂ ಬುಗುಡಿಯನ್ನು ಹಾಕಿಕೊಳ್ಳುವುದನ್ನು ನೋಡುತ್ತೇವೆ. ಇತ್ತೀಚಿಗೆ ಸಣ್ಣ ಬುಗುಡಿಯನ್ನು ಹಾಕಿಕೊಳ್ಳುವುದು fashion ಆಗಿರುವುದನ್ನು ನೀವು ಗಮನಿರಲೂಬಹದು. ನೆಗಡಿಗೆ ಬೇಕಾದಷ್ಟು ಔಷಧ ಮಾಡಿ, ಅದು ಸಾಮಾನ್ಯವಾಗಿ ಕನಿಷ್ಠ ಒಂದು ವಾರದ ತನಕ ಕಾಡಿಯೇ ಕಾಡುತ್ತದೆ. ಬೇಕಾದಷ್ಟು ಆಭರಣಗಳನ್ನು ಹಾಕಿಕೊಳ್ಳಿ, ಬುಗುಡಿ ಹಾಕಿಕೊಂಡಾಗ ಬರುವ ಲಕ್ಷಣವೇ ಬೇರೆ. ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ ಅಲ್ವಾ?

November 17, 2008

ನನಗೇ ಮದುವೆ ಬೇಡ (ಉತ್ತರ ಕನ್ನಡದ ಗಾದೆ – 217)

ನನಗೇ ಮದುವೆ ಬೇಡ ನಮ್ಮಪ್ಪ ಯಾರಿಗೆ ಹೆಣ್ಣು ಕೇಳುತ್ತಾನೆ?
ಯಾವುದೋ ವಿಷಯಕ್ಕೆ ನಾವೇ ತಯಾರಿಲ್ಲದಿರುವಾಗ ಬೇರೆಯವರು ತಾನೆ ಏನು ಮಾಡಿಯಾರು? ಬೇರೆಯವರು ನಮಗೆ ಸಹಾಯ ಮಾಡಲು ಬಂದರೂ ಅದು ವ್ಯರ್ಥ ಎಂಬ ಸಂದರ್ಭಕ್ಕೆ ಬಳಕೆಯಾಗುವಂಥದು.

November 14, 2008

ಕೊರಕ್ಲಜ್ಜಿಯ (ಉತ್ತರ ಕನ್ನಡದ ಗಾದೆ – 216)

ಕೊರಕ್ಲಜ್ಜಿಯ ಮನೆಯ ಎಮ್ಮೆ ಕರುವನ್ನು ಹುಲಿ ಹಿಡಿದಿತ್ತಂತೆ.
ಇದರ ಹಿಂದೊಂದು ಕಥೆಯೇ ಇದೆ.... ಎಲ್ಲದಕ್ಕೂ ಕಿರಿಕಿರಿ ಮಾಡುವ ಸ್ವಭಾವವುಳ್ಳ ಅಜ್ಜಿಯ ಬಳಿ ಒಂದು ಎಮ್ಮೆ ಕರುವಿತ್ತು. ಅದು ಮೇಯಲು ಹೋದಾಗ ಅದನ್ನು ಹುಲಿ ಹಿಡಿದುಬಿಟ್ಟಿತು... ತಿಂದೂಹಾಕಿತು. ನಂತರ ಹುಲಿ ಅಜ್ಜಿಯ ಮನೆಯ ಹಿಂದೆ ಬಂದು ಅಜ್ಜಿ ಏನು ಮಾಡುತ್ತಾಳೆ ಎಂದು ನೋಡುತ್ತಾ ಕುಳಿತಿತ್ತು (ಯಾಕೆ ಅಂತ ಗೊತ್ತಿಲ್ಲ :-) ಎಮ್ಮೆ ಕರು ಮನೆಗೆ ಬರದಿದ್ದನ್ನು ಕಂಡ ಅಜ್ಜಿ ಕಿರಿಕಿರಿ, ಗೊಣಗಾಟ ಶುರುಮಾಡಿದಳು. ಹುಲಿಗೆ ಆ ಕಿರಿಕಿರಿ ಸಹಿಸಲು ಸಾಧ್ಯವಾಗದೆ ಎಮ್ಮೆ ಕರುವನ್ನು ಅಜ್ಜಿಯ ಮನೆಯ ಹಿಂದೆ ಉಗುಳಿಹಾಕಿ ಓಡಿ ಹೋಯಿತು.


ನಾನು ಅಥವಾ ರಘು ಏನಾದರೂ ವಿಷಯಕ್ಕೆ ಕಿರಿಕಿರಿ ಮಾಡಿ ಮಾಡಿ ಅಪ್ಪ ಅಥವಾ ಅಮ್ಮನಿಗೆ ನಮ್ಮ ಕಿರಿಕಿರಿಯನ್ನು ತಡೆಯಲಾರದೆ ನಮ್ಮ ಹಟಕ್ಕೆ ಮಣಿಯುವಂತೆ ಆದಾಗ ಈ ಮಾತನ್ನು ನಾವು ಕೇಳಿಸಿಕೊಳ್ಳುತ್ತಿದ್ದೆವು - "ತಗ ನೆಡಿ ಅತ್ಲಾಗೆ, ಕೊರಕ್ಲಜ್ಜಿಯ ಮನೆ ಎಮ್ಮೆ ಕರುವನ್ನು ಹುಲಿ ಹಿಡಿದಿತ್ತಡ" ಎಂದು :)
ಇದು ನಿಜವಾಗಿ ಗಾದೆಯಲ್ಲದಿದ್ದರೂ ಗಾದೆಯಂತೆ ಬಳಸಲ್ಪಡುತ್ತದೆ.

November 13, 2008

‘ಸು’ ಅಂದರೆ … (ಉತ್ತರ ಕನ್ನಡದ ಗಾದೆ – 215)

‘ಸು’ ಅಂದರೆ ಸುಕನುಂಡೆ ಅಂದಿದ್ದ.
ಸ್ವಲ್ಪವೇ ಸುಳಿವು ಸಿಕ್ಕರೂ ಪೂರ್ತಿ ಸನ್ನಿವೇಶವನ್ನೇ ಊಹಿಸಿಬಿಡುವವರ ಬಗೆಗಿನ ಮಾತು.

November 12, 2008

ಸಲಿಗೆ ಕೊಟ್ಟರೆ … (ಉತ್ತರ ಕನ್ನಡದ ಗಾದೆ – 212, 213 ಮತ್ತು 214)

ಸಲಿಗೆ ಕೊಟ್ಟರೆ ನಾಯಿ ಸೊಟ್ಟಗ ನೆಕ್ಕಿತ್ತು.
ಅತಿಯಾದ ಸಲಿಗೆ ಕೊಟ್ಟರೆ ನಾಯಿ ಅಡಿಗೆಯನ್ನು ಬಡಿಸುವ ಸೌಟನ್ನೇ (ಸೊಟ್ಟಗ) ನೆಕ್ಕಲು ಮುಂದಾಗುತ್ತದೆ. ಅಂತೆಯೇ ಯಾರಿಗಾದರೂ ಸ್ವಲ್ಪ ಸಲಿಗೆ ಕೊಟ್ಟರೂ ನಮ್ಮ ವೈಯಕ್ತಿಕ ವಿಷಯಗಳವರೆಗೆ ಮುಂದುವರಿದರೆ ಈ ಗಾದೆಯನ್ನು ಹೇಳುತ್ತಾರೆ. ಸಲಿಗೆ ಕೊಟ್ಟರೆ ನಾಯಿ ನೊಸಲು (ಹಣೆ) ನೆಕ್ಕಿತ್ತು ಎಂದೂ ಕೂಡ ಹೇಳುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುತ್ತಾರೆ ಎಂದೂ ಅಥವಾ ಮುಂಗೈ ಕೊಟ್ಟರೆ ಅಂಗೈಯನ್ನೇ ಹಿಡಿಯುತ್ತಾರೆ ಎಂದೂ ಬಳಸುವುದುಂಟು.

November 7, 2008

ಹಾಡು ಹೇಳಿದವರಿಗೂ … (ಉತ್ತರ ಕನ್ನಡದ ಗಾದೆ – 211)

ಹಾಡು ಹೇಳಿದವರಿಗೂ ಮೂರು ಸುಕನುಂಡೆ, ಹಾಡು ಹೇಳದಿದ್ದವರಿಗೂ ಮೂರು ಸುಕನುಂಡೆ.
ಸುಕನುಂಡೆ ಅಂದರೆ ಒಂದು ಬಗೆಯ ಸಿಹಿ ತಿಂಡಿ. ಕೆಲಸ ಮಾಡಿದವರಿಗೂ, ಮಾಡದಿದ್ದವರಿಗೂ ಒಂದೇ ತರಹದ ಅತಿಥ್ಯ, recognition ಸಿಕ್ಕಾಗ ಹೇಳುವಂಥ ಮಾತು.

November 5, 2008

ಹುಚ್ಚು ಬಿಟ್ಟ ಹೊರತೂ … (ಗಾದೆ)

ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ, ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.
ಎರಡು ಕೆಲಸಗಳು ಒಂದಕ್ಕೊಂದು ಸಂಬಂಧಪಟ್ಟಿದ್ದು ಒಂದು ಕೆಲಸವಾದಂತೂ ಇನ್ನೊಂದು ಆಗುವುದಿಲ್ಲ ಎಂಬ ಸಂದರ್ಭಕ್ಕೆ ಅನ್ವಯಿಸುತ್ತದೆ. ಉದಾಹರಣೆಗೆ, ನಮ್ಮ ಸಮಾಜ ಮತ್ತು ಸಿನಿಮಾಗಳು- ಸಮಾಜವನ್ನು ನಾವು ಪ್ರತಿಬಿಂಬಿಸುತ್ತೇವೆ ಎಂದು ಸಿನಿಮಾದವರು ಹೇಳಿದರೆ, ಇಂದಿನ ಸಿಮಿಮಾಗಳನ್ನು ನೋಡಿ ಸಮಾಜ ಹಾಳಾಗುತ್ತದೆ ಎಂದು ಜನರು ಹೇಳುತ್ತಾರೆ. ಕೋಳಿ ಮೊದಲೋ? ಮೊಟ್ಟೆ ಮೊದಲೋ? :)

November 3, 2008

ಸಡಗರದಲ್ಲಿ … (ಉತ್ತರ ಕನ್ನಡದ ಗಾದೆ – 209 ಮತ್ತು 210)

ಸಡಗರದಲ್ಲಿ ಸರಸಕ್ಕ ಮೈನೆರೆದಿದ್ದಳು.
ಎಲ್ಲವೂ ಸರಿಯಾದಿದೆ ಎಂದುಕೊಂಡಾಗ ಏನೋ ಒಂದು ಕಿರಿಕಿರಿ ಆಗುವಂಥ ಸನ್ನಿವೇಶ ಎದುರಾದರೆ ಬಳಸಬಹುದು. ಉದಾಹರಣೆಗೆ ಎಲ್ಲ ಕೆಲಸ ಮುಗಿಸಿ ಗಡಿಬಿಡಿಯಲ್ಲಿ ಹೊರಡಲನುವಾದಾಗ ನೋಡಿದರೆ ಚಪ್ಪಲಿ ಕಿತ್ತು ಹೋಗಿರುತ್ತದೆ! ಇಂಥದೇ ಇನ್ನೊಂದು ಗಾದೆ- ಹೊತ್ತಲ್ಲದ ಹೊತ್ತಿನಲ್ಲಿ ತೊತ್ತು ಮೈನೆರೆದಿದ್ದಳು.